ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಜಗ್ಗಿ ವಾಸುದೇವ್ ಅವರ ಈಶಾ ಯೋಗ ಕೇಂದ್ರದ ಸ್ವಯಂಸೇವಕರೊಬ್ಬರು ನಾಪತ್ತೆಯಾಗಿರುವ ಪ್ರಕರಣದ ತನಿಖೆಯಲ್ಲಿ ಸ್ಥಳೀಯ ಪೊಲೀಸರು ತೋರಿರುವ ದೀರ್ಘಕಾಲದ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಮದ್ರಾಸ್ ಹೈಕೋರ್ಟ್, ತನಿಖೆಯನ್ನು ಸಿಬಿ-ಸಿಐಡಿಗೆ (CB-CID) ವರ್ಗಾಯಿಸಿ ಮಹತ್ವದ ಆದೇಶ ಹೊರಡಿಸಿದೆ. ಕಾನೂನು ಸುದ್ದಿ ಜಾಲತಾಣ ‘ಬಾರ್ ಅಂಡ್ ಬೆಂಚ್’ ಈ ಕುರಿತು ವರದಿ ಪ್ರಕಟಿಸಿದೆ.
ಹೈಕೋರ್ಟ್ ಈ ಹಿಂದೆ ನೀಡಿದ್ದ ನಿರ್ದೇಶನ ಹಾಗೂ ಮೂರು ತಿಂಗಳೊಳಗೆ ಅಂತಿಮ ವರದಿ ಸಲ್ಲಿಸುವುದಾಗಿ ಪೊಲೀಸರೇ ನೀಡಿದ್ದ ಭರವಸೆಯ ಹೊರತಾಗಿಯೂ ತನಿಖೆ ಪೂರ್ಣಗೊಳಿಸಲು ವಿಫಲವಾಗಿರುವುದನ್ನು ಗಮನಿಸಿದ ನ್ಯಾಯಮೂರ್ತಿ ಜಿ.ಕೆ. ಇಳಂತಿರೈಯನ್ ಅವರ ಪೀಠವು ಅಕ್ಟೋಬರ್ 27ರಂದು ಈ ಆದೇಶ ನೀಡಿದೆ. 2023ರ ಅಪರಾಧ ಸಂಖ್ಯೆ 26ರ ಪ್ರಕರಣದಲ್ಲಿ ಪೊಲೀಸರು ಇಂದಿಗೂ ತನಿಖೆಯನ್ನು ಮುಂದುವರಿಸಿಲ್ಲ ಮತ್ತು ತನಿಖೆ ಪೂರ್ಣಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಾಲಯವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಕೊಯಮತ್ತೂರಿನ ಈಶಾ ಯೋಗ ಕೇಂದ್ರದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದ 46 ವರ್ಷದ ಗಣೇಶನ್ ಎಂಬುವವರು 2023ರ ಮಾರ್ಚ್ ತಿಂಗಳಿನಿಂದ ನಾಪತ್ತೆಯಾಗಿದ್ದರು. ಹಲವು ದಿನಗಳ ಕಾಲ ಅವರನ್ನು ಸಂಪರ್ಕಿಸಲು ಸಾಧ್ಯವಾಗದ ಕಾರಣ ಸಹೋದರ ತಿರುಮಲೈ ಅವರು ಕೇಂದ್ರಕ್ಕೆ ಭೇಟಿ ನೀಡಿ ವಿಚಾರಿಸಿದ್ದರು. ಈ ವೇಳೆ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಗಣೇಶನ್ ಎರಡು ದಿನಗಳಿಂದ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ಕೇಂದ್ರದವರು ತಿಳಿಸಿದ್ದರು. ಬಳಿಕ ಕೊಯಮತ್ತೂರಿನ ಆಲಂದುರೈ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಲಾಗಿತ್ತು.
ತಮ್ಮ ಸಹೋದರನನ್ನು ಪತ್ತೆಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿ ತಿರುಮಲೈ ಅವರು ಹೈಕೋರ್ಟ್ನಲ್ಲಿ “ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಕೋರುವ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು”. 2024ರ ಮಾರ್ಚ್ನಲ್ಲಿ ನಡೆದ ವಿಚಾರಣೆಯ ವೇಳೆ, 2016ರಿಂದ ಈಶಾ ಫೌಂಡೇಶನ್ನಿಂದ ಒಟ್ಟು ಆರು ಮಂದಿ ನಾಪತ್ತೆಯಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಮಿಳುನಾಡು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ನಂತರ 2024ರ ಏಪ್ರಿಲ್ನಲ್ಲಿ ನ್ಯಾಯಮೂರ್ತಿ ಎಂ.ಎಸ್. ರಮೇಶ್ ಮತ್ತು ನ್ಯಾಯಮೂರ್ತಿ ಸುಂದರ್ ಮೋಹನ್ ಅವರನ್ನೊಳಗೊಂಡ ವಿಭಾಗೀಯ ಪೀಠಕ್ಕೆ ಮಾಹಿತಿ ನೀಡಿದ್ದ ಪೊಲೀಸರು, ಕೇಂದ್ರದ ಉದ್ಯೋಗಿಗಳು ಮತ್ತು ಸ್ವಯಂಸೇವಕರು ಸೇರಿದಂತೆ 36 ಮಂದಿಯನ್ನು ವಿಚಾರಣೆ ನಡೆಸಿರುವುದಾಗಿ ತಿಳಿಸಿ ವರದಿ ಸಲ್ಲಿಸಲು ಹೆಚ್ಚುವರಿ ಕಾಲಾವಕಾಶ ಕೋರಿದ್ದರು.
ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣದ ಹಿನ್ನೆಲೆಯಲ್ಲಿ, ಪ್ರಕರಣವನ್ನು ಸಿಬಿ-ಸಿಐಡಿಗೆ ವರ್ಗಾಯಿಸುವಂತೆ ಕೋರಿ ತಿರುಮಲೈ ಅವರು ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ವಿಚಾರಣೆಯ ಸಂದರ್ಭದಲ್ಲಿ ಇದೇ ವರ್ಷದ ಜೂನ್ 9ರಂದು ಸ್ಥಿತಿಗತಿ ವರದಿ ಸಲ್ಲಿಸಿದ್ದ ಪೊಲೀಸರು, ಮೂರು ತಿಂಗಳೊಳಗೆ ತನಿಖೆ ಮುಗಿಸಿ ಅಂತಿಮ ವರದಿ ಸಲ್ಲಿಸುವುದಾಗಿ ನ್ಯಾಯಾಲಯಕ್ಕೆ ಮುಚ್ಚಳಿಕೆ ನೀಡಿದ್ದರು. ಆದರೆ ಪೊಲೀಸರು ತಮ್ಮ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ನ್ಯಾಯಮೂರ್ತಿ ಇಳಂತಿರೈಯನ್ ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ತನಿಖೆಯನ್ನು ಆಲಂದುರೈ ಪೊಲೀಸ್ ಠಾಣೆಯಿಂದ ಹಿಂಪಡೆದು ಕೊಯಮತ್ತೂರು ಸಿಬಿ-ಸಿಐಡಿಗೆ ಹಸ್ತಾಂತರಿಸಿರುವ ಹೈಕೋರ್ಟ್, ಪ್ರಕರಣದ ಸಂಪೂರ್ಣ ಡೈರಿ (Case Diary) ಕೈಸೇರಿದ 12 ವಾರಗಳೊಳಗೆ ಸೂಕ್ತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸುವಂತೆ ಸಿಬಿ-ಸಿಐಡಿಗೆ ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿದೆ. ಪ್ರಕರಣದಲ್ಲಿ ಅರ್ಜಿದಾರರ ಪರವಾಗಿ ವಕೀಲ ಎಸ್.ಕೆ.ಡಿ. ರಾಜಶೇಖರ್ ಹಾಗೂ ಪೊಲೀಸ್ ಇಲಾಖೆಯ ಪರವಾಗಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಎ. ಅಮರನಾಥ್ ವಾದ ಮಂಡಿಸಿದ್ದರು.


