ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಚರ್ಚೆಗೆ ಆಹ್ವಾನ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ಸಾಕ್ಷ್ಯಗಳು ತಮ್ಮ ಫೋನ್‌ನಲ್ಲಿವೆ. ಅದನ್ನು ಪ್ರಧಾನಿ ಟ್ಯಾಪ್ ಮಾಡುತ್ತಿದ್ದಾರೆ ಎಂದು ಶುಕ್ರವಾರ (ನ.13) ಆರೋಪಿಸಿದ್ದಾರೆ.
ಈ ಬಗ್ಗೆ ವಿಡಿಯೋ ಬಿಡುಗಡೆ ಮಾಡಿರುವ ಅವರು, “ಸಾಕ್ಷ್ಯ ಇಲ್ಲಿದೆ. ಈ ಫೋನ್‌ನಲ್ಲಿದೆ. ಪ್ರಧಾನಿಗೆ ಇದು ಗೊತ್ತಿದೆ. ಏಕೆಂದರೆ ಅವರು ನನ್ನ ಫೋನ್ ಟ್ಯಾಪ್ ಮಾಡುತ್ತಿದ್ದಾರೆ. ಅವರು ನನ್ನೊಂದಿಗೆ ಮುಖಾಮುಖಿ ಚರ್ಚೆಗೆ ಬಂದ ಕ್ಷಣ, ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿರುವವರು ಯಾರು, ದೇಶದ್ರೋಹಿ ಯಾರು, ಯಾವಾಗಿನಿಂದ ದೇಶದ್ರೋಹಿಯಾಗಿದ್ದಾರೆ ಮತ್ತು ನನಗೆ ತಿಳಿದಿರುವ ಇನ್ನೂ ಹಲವು ವಿಚಾರಗಳು ಬಹಿರಂಗವಾಗಲಿವೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಜೆಪಿ ನಾಯಕರು ಸಂಸತ್ತಿನಲ್ಲೇ ಚರ್ಚೆ ನಡೆಸಬಹುದು ಎಂದು ಹೇಳುತ್ತಿರುವಾಗ, ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆಗೆ ಏಕೆ ಒತ್ತಾಯಿಸುತ್ತಿದ್ದೀರಿ ಎಂಬ ಇನ್‌ಸ್ಟಾಗ್ರಾಮ್‌ನ ‘ಆಸ್ಕ್ ಮೀ’ ಸೆಷನ್‌ನಲ್ಲಿನ ಪ್ರಶ್ನೆಗೆ ಉತ್ತರಿಸಿದ ಅವರು, ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಮತ್ತು ತಮ್ಮ ಮೈಕ್ರೊಫೋನ್ ಅನ್ನು ಪದೇಪದೆ ಸ್ಥಗಿತಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು.
“ಕೃಷಿ ಮಸೂದೆಗಳು, ವೋಟ್ ಚೋರಿ, ಎಸ್‌ಐಆರ್, ಚೀನಾ, ಜನರಲ್ ನರವಣೆ ಅವರ ಪುಸ್ತಕ ಮತ್ತು ಎಪ್ಸ್ಟೀನ್ ವಿಚಾರಗಳ ಕುರಿತು ಮಾತನಾಡಲು ನೀವು ನನಗೆ ಅವಕಾಶ ನೀಡಲಿಲ್ಲ. ನನಗೆ ಒಬ್ಬರಿಗೊಬ್ಬರು ಮುಖಾಮುಖಿಯಾಗಿ ಚರ್ಚೆ ನಡೆಸಬೇಕು. ದೀರ್ಘ ಭಾಷಣಗಳಿರುವ ಚರ್ಚೆ ನನಗೆ ಬೇಡ” ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹೇಳಿದರು.
“ನರೇಂದ್ರ ಮೋದಿ ಅವರು ನನ್ನ ವಿರುದ್ಧ ಆರೋಪ ಮಾಡಲಿ, ನಾನೂ ಅವರ ವಿರುದ್ಧ ಆರೋಪ ಮಾಡುತ್ತೇನೆ. ಅವರು ಬರಲಿ. ಅಲ್ಲಿ ಒಂದು ಮೇಜಿರುತ್ತದೆ. ಒಂದು ಬದಿಯಲ್ಲಿ ನರೇಂದ್ರ ಮೋದಿ ಜಿ, ಇನ್ನೊಂದು ಬದಿಯಲ್ಲಿ ನಾನು ಕುಳಿತುಕೊಳ್ಳುತ್ತೇನೆ” ಎಂದು ರಾಹುಲ್ ಗಾಂಧಿ ಹೇಳಿದರು.
ಚರ್ಚೆಗೆ ನ್ಯಾಯಾಧೀಶರಾಗಿ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅಥವಾ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ನೇಮಿಸಿದರೂ ತಮ್ಮ ಅಭ್ಯಂತರವಿಲ್ಲ ಎಂದು ಅವರು ಹೇಳಿದರು.
“ನನ್ನೊಂದಿಗೆ ಮುಖಾಮುಖಿ ಚರ್ಚೆ ನಡೆಸಿದ ಬಳಿಕ ಪ್ರಧಾನಿ ತಮ್ಮ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂಬ ಭರವಸೆ ನನಗಿದೆ” ಎಂದು ರಾಹುಲ್ ಗಾಂಧಿ ಹೇಳಿದರು.
ಸೆಷನ್‌ನಲ್ಲಿ ಕೇಳಲಾದ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮ ಎಲ್ಲ ಆರೋಪಗಳಿಗೆ ಸಂಬಂಧಿಸಿದ ಸಾಕ್ಷ್ಯಗಳು ಪ್ರಧಾನಿಯಿಂದ ಟ್ಯಾಪ್ ಆಗುತ್ತಿರುವ ತಮ್ಮ ಫೋನ್‌ನಲ್ಲಿವೆ ಎಂದು ಪುನರುಚ್ಚರಿಸಿದರು.
ಮುಖಾಮುಖಿ ಚರ್ಚೆ ನಡೆದರೆ ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿರುವವರು ಯಾರು ಮತ್ತು ದೇಶದ್ರೋಹಿ ಯಾರು ಎಂಬುದು ಸಾಬೀತಾಗಲಿದೆ. ಈ ಎಲ್ಲ ವಿಚಾರಗಳಿಗೆ ಸಂಬಂಧಿಸಿದ ವಿವರಗಳು ತಮ್ಮ ಫೋನ್‌ನಲ್ಲಿವೆ ಎಂದು ಅವರು ಆರೋಪಿಸಿದರು.
ಎಕ್ಸ್‌ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, “ಪ್ರಧಾನಿ ನನ್ನೊಂದಿಗೆ ಬಂದು ಚರ್ಚೆ ನಡೆಸಿದರೆ ಅವರ ರಾಜಕೀಯ ಜೀವನವೇ ಮುಗಿಯಲಿದೆ. ಇದು ಅವರಿಗೆ ಗೊತ್ತಿದೆ, ನನಗೂ ಗೊತ್ತಿದೆ” ಎಂದು ಹೇಳಿದ್ದಾರೆ.
“ಅವರು ನನ್ನನ್ನು ಪದೇಪದೆ ದೇಶದ್ರೋಹಿ ಎಂದು ಕರೆಯುತ್ತಾರೆ. ನಿಜವಾದ ದೇಶದ್ರೋಹಿ ಯಾರು, ಯಾರು ಯಾರ ನಿಯಂತ್ರಣದಲ್ಲಿದ್ದಾರೆ ಮತ್ತು ಯಾವಾಗಿನಿಂದ ಇದ್ದಾರೆ ಎಂಬುದನ್ನು ದೇಶಕ್ಕೆ ನಿಖರವಾಗಿ ತೋರಿಸಲು ನಾನು ಬಯಸುತ್ತೇನೆ. ಇದರ ಸತ್ಯ ಪ್ರಧಾನಿಗೂ ಗೊತ್ತಿದೆ” ಎಂದು ಅವರು ಹೇಳಿದ್ದಾರೆ.
‘ಭಯದಿಂದಲೇ ಮೋದಿ ಈಗ ನನ್ನ ವಿರುದ್ಧ ಮಾತನಾಡುತ್ತಿಲ್ಲ’
ಪ್ರಧಾನಿ ಮೋದಿ ತಮ್ಮ ವಿರುದ್ಧ ಟೀಕೆ ಮಾಡುವುದನ್ನು ನಿಲ್ಲಿಸಿದ್ದಾರೆ. ಇದಕ್ಕೆ ಅವರು ಒತ್ತಡಕ್ಕೆ ಒಳಗಾಗಿರುವುದೇ ಕಾರಣ ಎಂದು ರಾಹುಲ್ ಗಾಂಧಿ ಮತ್ತೊಂದು ಆರೋಪ ಮಾಡಿದ್ದಾರೆ.
“ಒಂದು ವಿಚಾರವನ್ನು ಗಮನಿಸಿ. ಮೋದಿ ಅವರ ಮನಸ್ಸಿನಲ್ಲಿ ಸ್ವಲ್ಪ ಭಯವಿದೆ. ಈಗ ಅವರು ನನ್ನ ಬಗ್ಗೆ ಮಾತನಾಡುತ್ತಿಲ್ಲ, ನನ್ನ ಮೇಲೆ ದಾಳಿ ಮಾಡುತ್ತಿಲ್ಲ. ಬಹಳ ಎಚ್ಚರಿಕೆಯಿಂದ ವರ್ತಿಸುತ್ತಿದ್ದಾರೆ. ಇದಕ್ಕೆ ಒಂದು ಕಾರಣವಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಎಕ್ಸ್‌ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿರುವ ಅವರು, “ಮೋದಿ ಜಿ, ನಿಮ್ಮದೇ ಗೋದಿ ಮಾಧ್ಯಮದ ದೀಪಾವಳಿ ಸಮಾರಂಭದಲ್ಲೂ ಟೆಲಿಪ್ರಾಂಪ್ಟರ್ ಬಳಸಿದಿರಾ? ಜನರು ನಿಮ್ಮವರು, ವೇದಿಕೆ ನಿಮ್ಮದು, ಇಡೀ ವಾತಾವರಣ ನಿಮ್ಮ ಪರವಾಗಿತ್ತು. ಆದರೂ ನಿಮಗೆ ಸ್ಕ್ರಿಪ್ಟ್ ಬೇಕಾಯಿತು. ಒತ್ತಡ ನಿಮ್ಮ ಮೇಲೂ ಪರಿಣಾಮ ಬೀರಿದಂತಿದೆ” ಎಂದು ವ್ಯಂಗ್ಯವಾಡಿದ್ದಾರೆ.
“ಪರವಾಗಿಲ್ಲ, ಚಿಂತಿಸಬೇಡಿ. ನನ್ನೊಂದಿಗಿನ ಚರ್ಚೆಗೂ ಟೆಲಿಪ್ರಾಂಪ್ಟರ್ ತೆಗೆದುಕೊಂಡು ಬನ್ನಿ. ನಿಮಗೆ ಇಷ್ಟವಾದವರನ್ನೇ ನ್ಯಾಯಾಧೀಶರನ್ನಾಗಿ ಕೂರಿಸಿಕೊಳ್ಳಿ. ಆದರೆ ಚರ್ಚೆಗೆ ಬನ್ನಿ, ಅಷ್ಟೇ. ನಿಜವಾದ ದೇಶದ್ರೋಹಿ ಯಾರು ಎಂಬುದನ್ನು ದೇಶ ತಿಳಿದುಕೊಳ್ಳಲು ಬಯಸುತ್ತಿದೆ” ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಹಲವು ಬಾರಿ ಪ್ರಧಾನಿ ಮೋದಿಯವರಿಗೆ ಬಹಿರಂಗ ಚರ್ಚೆಯ ಸವಾಲು ಹಾಕಿರುವ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿಯೇ ದೇಶದ್ರೋಹಿ ಎಂಬುದನ್ನು ಸಾಬೀತುಪಡಿಸಲು ತನಗೆ ಕೇವಲ ಐದು ನಿಮಿಷ ಸಾಕು ಎಂದು ಹೇಳಿದ್ದರು.
ರಾಹುಲ್ ಗಾಂಧಿಯವರ ಈ ಸವಾಲನ್ನು ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ. ಸಂಸತ್ತಿನಲ್ಲಿ ಚರ್ಚೆ ನಡೆಸುವುದರಿಂದ ರಾಹುಲ್ ಗಾಂಧಿಯವರೇ ಹಿಂದೆ ಸರಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಚರ್ಚೆಗೆ ಸ್ಥಳವನ್ನು ಪ್ರಧಾನಿ ಆಯ್ಕೆ ಮಾಡಲಿ ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ. ಆದರೆ, ಚರ್ಚೆ ನಡೆಸಲು ಸಂಸತ್ತು ಈಗಾಗಲೇ ಸೂಕ್ತ ವೇದಿಕೆಯಾಗಿದೆ ಎಂದು ಹೇಳಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿ “ಸ್ವಲ್ಪ ಗಂಭೀರತೆ ಮತ್ತು ಜವಾಬ್ದಾರಿಯನ್ನು ತೋರಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.


