ಕಳೆದ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನಾರ್ವೆಗೆ ಭೇಟಿ ನೀಡಿದ್ದಾಗ, ಅವರಿಗೆ ಪ್ರಶ್ನೆ ಕೇಳಿ ಸುದ್ದಿಯಾಗಿದ್ದ ಅಲ್ಲಿನ ಪತ್ರಕರ್ತೆ ಹೆಲ್ಲೆ ಲಿಂಗ್ ಅವರ ಭಾರತ ಭೇಟಿಗೆ ಕೊನೆ ಕ್ಷಣದಲ್ಲಿ ತಡೆಯೊಡ್ಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಗುರುವಾರ (ನ.11) ವಿಡಿಯೋ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹೆಲ್ಲೆ ಲಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ.
“ಹೈದರಾಬಾದ್ನಲ್ಲಿ ಆಯೋಜಿಸಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ನಾನು ಮಾತನಾಡಬೇಕಿತ್ತು. ನನ್ನ ಭಾರತ ಭೇಟಿಗೆ ವೀಸಾ ಕೂಡ ದೊರೆತಿತ್ತು. ಆದರೆ, ಕೊನೆ ಕ್ಷಣದಲ್ಲಿ ನಾರ್ವೆಯ ಭಾರತೀಯ ರಾಯಭಾರ ಕಚೇರಿ ನನಗೆ ಕರೆ ಮಾಡಿ ಭಾರತಕ್ಕೆ ತೆರಳದಂತೆ ಸೂಚಿಸಿದೆ” ಎಂದು ಲಿಂಗ್ ಅವರು ತಿಳಿಸಿದ್ದಾರೆ.
“ಬಹುಷ ನಾನು ಈ ಹಿಂದೆ ಪ್ರಧಾನಿ ಮೋದಿಯವರಿಗೆ ಪ್ರಶ್ನೆ ಕೇಳಿದ್ದಕ್ಕೆ ಅಥವಾ ಅವರ ಗೆಳೆಯರು ಎನ್ನಲಾದ ಅದಾನಿ ಮತ್ತು ಅಂಬಾನಿಯ ಬಗ್ಗೆ ಪ್ರಶ್ನಿಸಿದ್ದಕ್ಕೆ ನನ್ನ ಭಾರತ ಭೇಟಿಯನ್ನು ತಡೆದಿರಬಹುದು” ಎಂದಿದ್ದಾರೆ.
ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಉದ್ದೇಶಿಸಿ ಲಿಂಗ್ ವಿಡಿಯೋದಲ್ಲಿ ಮಾತನಾಡಿದ್ದಾರೆ.
thewire.in ವರದಿಯ ಪ್ರಕಾರ, ತೆಲಂಗಾಣ ಸರ್ಕಾರ ನವೆಂಬರ್ 12 ರಿಂದ 14 ರವರೆಗೆ ಆಯೋಜಿಸಿರುವ ‘ಭಾರತ್ ಸಮ್ಮಿಟ್’ ಎಂಬ ಕಾರ್ಯಕ್ರಮದಲ್ಲಿ ‘ಮಾಧ್ಯಮದ ಭವಿಷ್ಯ’ (The Future of Media) ಕುರಿತಾದ ಚರ್ಚಾ ಗೋಷ್ಠಿಯಲ್ಲಿ ಲಿಂಗ್ ಮಾತನಾಡಬೇಕಿತ್ತು.
ಲಿಂಗ್ ಅವರು ಭಾರತಕ್ಕೆ ವಿಮಾನ ಹತ್ತಲು ವಿಮಾನ ನಿಲ್ದಾಣಕ್ಕೆ ಹೊರಟಿದ್ದರು. ದಾರಿ ಮಧ್ಯೆ ಅವರಿಗೆ ಕರೆ ಮಾಡಿದ ನಾರ್ವೆಯ ಭಾರತೀಯ ರಾಯಭಾರ ಕಚೇರಿ ವೀಸಾ ರದ್ದುಗೊಳಿಸಿರುವ ಬಗ್ಗೆ ತಿಳಿಸಿದೆ. ಅಲ್ಲದೆ, ವೀಸಾವನ್ನು ಅಧಿಕೃತವಾಗಿ ರದ್ದುಗೊಳಿಸುವ ಪ್ರಕ್ರಿಯೆಗಾಗಿ ಖುದ್ದಾಗಿ ರಾಯಭಾರ ಕಚೇರಿಗೆ ಭೇಟಿ ನೀಡುವಂತೆಯೂ ಅವರಿಗೆ ಸೂಚಿಸಿದೆ ಎಂದು thewire.in ವಿವರಿಸಿದೆ.
“ಇದು ಆಘಾತಕಾರಿ ಮತ್ತು ಹುಚ್ಚುತನವಾಗಿದೆ. ನನಗೆ ರಾಜಕೀಯ ಅನುಮತಿ (ಪೊಲಿಟಿಕಲ್ ಕ್ಲಿಯರೆನ್ಸ್) ಇದೆ ಮತ್ತು ಅದರ ಆಧಾರದ ಮೇಲೆ ವೀಸಾ ಕೂಡ ಸಿಕ್ಕಿದೆ, ಆದರೆ ಗೃಹ ವ್ಯವಹಾರಗಳ ಇಲಾಖೆ [ಗೃಹ ಸಚಿವಾಲಯ] ನನಗೆ ಪ್ರವೇಶಿಸಲು ಅನುಮತಿ ಇಲ್ಲ ಎಂದು ನಿರ್ಧರಿಸಿದಂತೆ ತೋರುತ್ತಿದೆ. ನನ್ನ ಪ್ರಕರಣದಲ್ಲಿ ಗೃಹ ವ್ಯವಹಾರಗಳ ಇಲಾಖೆ ಹೇಗೆ ಸಂಬಂಧಪಟ್ಟಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನನಗೆ ಕಷ್ಟವಾಗುತ್ತಿದೆ. ಈ ವಾರಾಂತ್ಯದಲ್ಲಿ ಕೆಲವು ದಿನಗಳ ಕಾಲ ನಡೆಯುವ ಸಮ್ಮೇಳನವೊಂದಕ್ಕೆ ನಾನು ಹೋಗಬೇಕಾಗಿತ್ತು ಎಂದು ಲಿಂಗ್ ಗುರುವಾರ ತಿಳಿಸಿದ್ದಾಗಿ thewire.in ವರದಿ ಹೇಳಿದೆ.
‘ಭಾರತ್ ಸಮ್ಮಿಟ್’ನ ಸಂಘಟಕರಲ್ಲೊಬ್ಬರಾದ ಪುಷ್ಪರಾಜ್ ದೇಶಪಾಂಡೆ ಅವರು ಎಕ್ಸ್ ಜಾಲತಾಣದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ್ದು, “ಹೆಲ್ಲೆ ಲಿಂಗ್ ಸ್ವೆಂಡ್ಸ್ ಅವರು ಭಾರತ್ ಸಮ್ಮಿಟ್ನಲ್ಲಿ ನಮ್ಮೊಂದಿಗೆ ಸೇರಲು ಸಾಧ್ಯವಾಗದಿರುವುದು ಅತ್ಯಂತ ದುರದೃಷ್ಟಕರ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಶಾ ಅವರ ಆಳ್ವಿಕೆಯಲ್ಲಿ ‘ಪ್ರಜಾಪ್ರಭುತ್ವದ ತಾಯಿ’ (mother of democracy) ಹೀಗಿರುತ್ತಾಳೆ!” ಎಂದು ಬರೆದುಕೊಂಡಿದ್ದಾರೆ.
ಕಳೆದ ಮೇ ತಿಂಗಳಲ್ಲಿ ನಾರ್ವೆಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ರಾಜಧಾನಿ ಓಸ್ಲೋದಲ್ಲಿ ಅಲ್ಲಿನ ಪ್ರಧಾನಿ ಜೋನಾಸ್ ಗಹರ್ ಸ್ಟೋರ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಯ ಬಳಿಕ ಜಂಟಿ ಪತ್ರಿಕಾ ಹೇಳಿಕೆಯನ್ನು ನೀಡಿದ್ದರು. ಈ ವೇಳೆ ನೆರೆದಿದ್ದ ಪತ್ರಕರ್ತರಿಗೆ ಯಾವುದೇ ಪ್ರಶ್ನೆಗಳನ್ನು ಕೇಳಲು ಅವಕಾಶ ಇರಲಿಲ್ಲ.
ಹೇಳಿಕೆ ಓದಿದ ನಂತರ ಉಭಯ ನಾಯಕರು ವೇದಿಕೆಯಿಂದ ನಿರ್ಗಮಿಸುತ್ತಿದ್ದಾಗ, ನಾರ್ವೆಯ ಪ್ರಮುಖ ಪತ್ರಿಕೆಯಾದ ‘ಡಾಗ್ಸಾವಿಸೆನ್’ನ (Dagsavisen) ಪತ್ರಕರ್ತೆ ಹೆಲ್ಲೆ ಲಿಂಗ್ ಸ್ವೆಂಡ್ಸೆನ್ ಅವರು ಮೋದಿಯವರನ್ನು ಉದ್ದೇಶಿಸಿ, “ಪ್ರಧಾನಿ ಮೋದಿ, ವಿಶ್ವದ ಅತ್ಯಂತ ಸ್ವತಂತ್ರ ಪತ್ರಿಕಾ ಮಾಧ್ಯಮಗಳ ಕೆಲವು ಪ್ರಶ್ನೆಗಳಿಗೆ ನೀವೇಕೆ ಉತ್ತರಿಸಬಾರದು?” ಎಂದು ಜೋರಾಗಿ ಪ್ರಶ್ನಿಸಿದ್ದರು. ಆದರೆ, ಪ್ರಧಾನಿ ಮೋದಿ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಅಲ್ಲಿಂದ ನಿರ್ಗಮಿಸಿದ್ದರು. ಲಿಂಗ್ ಅವರು ಮೋದಿಯವರನ್ನು ಹಿಂಬಾಲಿಸಿ ಮತ್ತೊಂದು ಪ್ರಶ್ನೆ ಕೇಳಲು ಪ್ರಯತ್ನಿಸಿದರಾದರೂ ಭದ್ರತಾ ಸಿಬ್ಬಂದಿ ಅವರನ್ನು ತಡೆದಿದ್ದರು.
ಪ್ರಧಾನಿ ಮೋದಿ ಪತ್ರಕರ್ತೆಯ ಪ್ರಶ್ನೆಗೆ ಉತ್ತರಿಸದೆ ತೆರಳಿದ ವಿಡಿಯೋ ಜಗತ್ತಿನಾದ್ಯಂತ ವೈರಲ್ ಆಗಿ, ಭಾರೀ ಚರ್ಚೆಗೆ ಒಳಗಾಗಿತ್ತು. ಭಾರತದ ಬಲಪಂಥೀಯಯರು ಮೋದಿಯವರನ್ನು ಸಮರ್ಥಿಸಿಕೊಂಡು ಪ್ರಶ್ನೆ ಕೇಳಿದ ಪತ್ರಕರ್ತೆ ಲಿಂಗ್ ಅವರನ್ನೇ ಟೀಕಿಸಿದ್ದರು.


