Homeಮುಖಪುಟ2024ರ ಚುನಾವಣೆಗಳು : 51 ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳೊಂದಿಗೆ ಹೊಂದಾಣಿಕೆಯಾಗದ ಎಣಿಕೆ ಮತಗಳ ಸಂಖ್ಯೆ- ವರದಿ

2024ರ ಚುನಾವಣೆಗಳು : 51 ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳೊಂದಿಗೆ ಹೊಂದಾಣಿಕೆಯಾಗದ ಎಣಿಕೆ ಮತಗಳ ಸಂಖ್ಯೆ- ವರದಿ

ಸುಮೇಧಾ ಮಿತ್ತಲ್, ವೆಂಕಟೇಶ್ ನಾಯಕ್ - reporters-collective. in ವರದಿ

- Advertisement -
- Advertisement -

2024ರ ಚುನಾವಣೆಗಳ ಸಂದರ್ಭದಲ್ಲಿ ಮಹಾರಾಷ್ಟ್ರ, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದ 51 ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳ ಸಂಖ್ಯೆ ಹಾಗೂ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ (ಇವಿಎಂ) ಎಣಿಕೆಯಾದ ಮತಗಳ ಸಂಖ್ಯೆಯ ನಡುವೆ ವ್ಯತ್ಯಾಸಗಳಿರುವುದನ್ನು ಚುನಾವಣಾ ಆಯೋಗದ ಆಂತರಿಕ ದಾಖಲೆಗಳು ತೋರಿಸುತ್ತವೆ ಎಂದು ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ತನಿಖಾ ವರದಿ ಹೇಳಿದೆ.

‘ಎಲೆಕ್ಷನ್ ಆಡಿಟ್’ ಸರಣಿಯ ಭಾಗವಾಗಿ ಪ್ರಕಟಿಸಿದ ಈ ತನಿಖಾ ವರದಿಯು, ಮೂರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಒಟ್ಟು 530 ವಿಧಾನಸಭಾ ಹಾಗೂ ಸಂಸದೀಯ ಕ್ಷೇತ್ರಗಳ ದಾಖಲೆಗಳನ್ನು ಪರಿಶೀಲಿಸಿದೆ. ಇದರಲ್ಲಿ ಒಟ್ಟು 32 ಚುನಾವಣಾ ಸ್ಪರ್ಧೆಗಳಲ್ಲಿ ಚಲಾವಣೆಯಾದ ಮತಗಳ ಸಂಖ್ಯೆಗೂ ಮತ್ತು ಇವಿಎಂಗಳಲ್ಲಿ ಎಣಿಕೆಯಾದ ಮತಗಳ ಸಂಖ್ಯೆಗೂ ತಾಳೆಯಾಗುತ್ತಿಲ್ಲ ಎಂಬುದು ಪತ್ತೆಯಾಗಿದೆ.

ವರದಿಯ ಪ್ರಕಾರ, 51 ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳಲ್ಲಿ ಮತದಾನದ ಕೇಂದ್ರಗಳಿಗೆ ಭೇಟಿ ನೀಡಿದ ಮತದಾರರ ಸಂಖ್ಯೆಯ ಕಾಲಂನಲ್ಲಿ ಚುನಾವಣಾ ಅಧಿಕಾರಿಗಳು ‘ಶೂನ್ಯ’ (zero) ಅಥವಾ ‘ನಿಲ್’ (nil) ಎಂದು ದಾಖಲಿಸಿದ್ದರು. ಈ ಪೈಕಿ ಹತ್ತು ಸ್ಥಾನಗಳು ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿದ್ದು, ಅವುಗಳಲ್ಲಿ ಏಳು ಸ್ಥಾನಗಳನ್ನು ಬಿಜೆಪಿ ಅಥವಾ ಅದರ ಮಿತ್ರಪಕ್ಷಗಳು ಗೆದ್ದುಕೊಂಡಿವೆ. ಈ ವ್ಯತ್ಯಾಸಗಳು ಅತ್ಯಂತ ದೊಡ್ಡ ಪ್ರಮಾಣದಲ್ಲಿದ್ದ ಹಲವು ಕ್ಷೇತ್ರಗಳನ್ನು ವರದಿಯು ವಿಶೇಷವಾಗಿ ಎತ್ತಿ ತೋರಿಸಿದೆ.

ಹರಿಯಾಣದ ಬದ್ಖಲ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಆಯೋಗದ ಆಂತರಿಕ ದಾಖಲೆಗಳು 3.32 ಲಕ್ಷ ಮತಗಳು ಚಲಾವಣೆಯಾಗಿವೆ ಎಂದು ತೋರಿಸಿವೆ, ಆದರೆ ಇವಿಎಂಗಳ ಮೂಲಕ ಪ್ರಕಟಿಸಲಾದ ಅಧಿಕೃತ ಮತಗಳ ಸಂಖ್ಯೆ 1.60 ಲಕ್ಷವಾಗಿತ್ತು. ಈ ಕ್ಷೇತ್ರದಲ್ಲಿ ಬಿಜೆಪಿಯ ಧನೇಶ್ ಅಡ್ಲಾಖಾ ವಿರುದ್ಧ 6,181 ಮತಗಳ ಅಂತರದಿಂದ ಸೋತ ಕಾಂಗ್ರೆಸ್ ಅಭ್ಯರ್ಥಿ ವಿಜಯ್ ಪ್ರತಾಪ್ ಸಿಂಗ್, ಮತ ಕಳ್ಳತನವಾಗಿದೆ ಎಂದು ಆರೋಪಿಸಿ ಹಾಗೂ ಚುನಾವಣಾ ದಾಖಲೆಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಕೋರಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದೇ ರೀತಿಯ ವ್ಯತ್ಯಾಸವು ಕೇಂದ್ರ ಸಚಿವ ಪಿಯೂಷ್ ಗೋಯಲ್ ಲೋಕಸಭಾ ಸ್ಥಾನವನ್ನು ಗೆದ್ದ ಮುಂಬೈ ನಾರ್ತ್ (ಉತ್ತರ) ಕ್ಷೇತ್ರದಲ್ಲೂ ಕಂಡುಬಂದಿದೆ. ವರದಿಯ ಪ್ರಕಾರ, ಆಂತರಿಕ ದಾಖಲೆಗಳು 18.11 ಲಕ್ಷ ಮತಗಳು ಚಲಾವಣೆಯಾಗಿವೆ ಎಂದು ತೋರಿಸಿದ್ದರೆ, ಚುನಾವಣಾ ಆಯೋಗ ಪ್ರಕಟಿಸಿದ ಅಧಿಕೃತ ಸಂಖ್ಯೆ 10.33 ಲಕ್ಷವಾಗಿತ್ತು. ಇದು ಬರೋಬ್ಬರಿ 7.78 ಲಕ್ಷ ಮತಗಳ ವ್ಯತ್ಯಾಸವಾಗಿದೆ.

ಹರಿಯಾಣದ ಕೈಥಾಲ್ ವಿಧಾನಸಭಾ ಕ್ಷೇತ್ರದಲ್ಲಿ, ಇವಿಎಂಗಳಲ್ಲಿ ಒಟ್ಟು 1,67,285 ಮತಗಳು ಎಣಿಕೆಯಾಗಿದ್ದರೂ, ಕೇವಲ 215 ಮತದಾರರು ಮಾತ್ರ ತಮ್ಮ ಮತ ಚಲಾಯಿಸಿದ್ದಾರೆ ಎಂದು ದಾಖಲೆಗಳು ತೋರಿಸಿವೆ. ಇನ್ನು ಶ್ರೀನಗರ ಸಂಸದೀಯ ಕ್ಷೇತ್ರದಲ್ಲಿ, ಚಲಾವಣೆಯಾದ ಮತಗಳ ಸಂಖ್ಯೆಗಿಂತ ಎಣಿಕೆಯಾದ ಮತಗಳ ಸಂಖ್ಯೆಯು 6,896ರಷ್ಟು ಹೆಚ್ಚಾಗಿತ್ತು.

ಎರಡೂ ಅಂಕಿ-ಅಂಶಗಳು ತಾಳೆಯಾಗದ 32 ಕ್ಷೇತ್ರಗಳ ಪೈಕಿ, 12 ಸ್ಥಾನಗಳಲ್ಲಿ ಚಲಾವಣೆಯಾದ ಮತಗಳ ಸಂಖ್ಯೆಗಿಂತ ಇವಿಎಂಗಳಲ್ಲಿ ಎಣಿಕೆಯಾದ ಮತಗಳ ಸಂಖ್ಯೆ ಕಡಿಮೆಯಿತ್ತು. ಉಳಿದ 20 ಕ್ಷೇತ್ರಗಳಲ್ಲಿ ಇವಿಎಂ ಮತಗಳ ಎಣಿಕೆ ಸಂಖ್ಯೆ ಹೆಚ್ಚಾಗಿತ್ತು. ಮತದಾರರೊಬ್ಬರು ಮತಗಟ್ಟೆಗೆ ಪ್ರವೇಶಿಸಿ ನಂತರ ಮತ ಚಲಾಯಿಸದ ಸಂದರ್ಭಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಉಂಟಾಗಬಹುದಾದರೂ, ಈ ರೀತಿಯ ದೊಡ್ಡ ವ್ಯತ್ಯಾಸಗಳು ನಕಲಿ ಮತದಾನ ಅಥವಾ ಮತದಾರರ ದಮನದ ಸಾಧ್ಯತೆಗಳನ್ನು ಸೂಚಿಸುತ್ತವೆ ಎಂದು ವರದಿಯು ಹೇಳಿದೆ.

ಚುನಾವಣಾ ಅಧಿಕಾರಿಗಳು ಸಲ್ಲಿಸಿದ 4,212 ಭೌತಿಕ ದಾಖಲೆಗಳನ್ನು ಡಿಜಿಟಲೀಕರಿಸಿ ಮತ್ತು ಮರುಪರಿಶೀಲಿಸಿರುವುದಾಗಿ ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ತಿಳಿಸಿದೆ. ಆದರೆ, ಜಮ್ಮು ಮತ್ತು ಕಾಶ್ಮೀರದ ದೇವ್‌ಸರ್ ಕ್ಷೇತ್ರಕ್ಕೆ ಸಂಬಂಧಿಸಿದ ವರದಿಯನ್ನು ಪಡೆಯಲು ಅದಕ್ಕೆ ಸಾಧ್ಯವಾಗಿಲ್ಲ ಎಂದು ಹೇಳಿದೆ.

2019ರ ಸಾರ್ವತ್ರಿಕ ಚುನಾವಣೆಗಳ ನಂತರ ಬೂತ್ ಮಟ್ಟದ ಮತದಾನದ ಡೇಟಾವನ್ನು ಸಾರ್ವಜನಿಕವಾಗಿ ಪ್ರಕಟಿಸುವುದನ್ನು ನಿಲ್ಲಿಸಲು ಚುನಾವಣಾ ಆಯೋಗ (ಇಸಿಐ) ತೆಗೆದುಕೊಂಡ ನಿರ್ಧಾರದ ಬಗ್ಗೆಯೂ ವರದಿ ಕಳವಳ ವ್ಯಕ್ತಪಡಿಸಿದೆ. ಇಂತಹ ದಾಖಲೆಗಳು ಲಭ್ಯವಿದ್ದಾಗ ಮಾತ್ರ, ಮತ ಚಲಾಯಿಸಿದ ಜನರ ಸಂಖ್ಯೆ ಮತ್ತು ದಾಖಲಾದ ಮತಗಳ ಸಂಖ್ಯೆ ಪರಸ್ಪರ ತಾಳೆಯಾಗುತ್ತದೆಯೇ ಎಂಬುದನ್ನು ಮತದಾರರು ಮತ್ತು ರಾಜಕೀಯ ಪಕ್ಷಗಳು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗುತ್ತದೆ ಎಂದಿದೆ.

ಚುನಾವಣಾ ಆಯೋಗಕ್ಕೆ ವಿವರವಾದ ಪ್ರಶ್ನೆಗಳನ್ನು ಕಳುಹಿಸಿರುವುದಾಗಿ ವರದಿ ತಿಳಿಸಿದೆ. ಆದಾಗ್ಯೂ, ಆಯೋಗವು ಈ ಪ್ರಶ್ನೆಗಳನ್ನು ಅಹವಾಲು ಎಂದು ಪರಿಗಣಿಸಿದ್ದು, ತಾನು ಪಡೆದುಕೊಂಡಿರುವ ಡೇಟಾವನ್ನು ಸಲ್ಲಿಸುವಂತೆ ಸಂಸ್ಥೆಗೆ ಸೂಚಿಸಿದೆ ಮತ್ತು ಈ ಮಾಹಿತಿಯನ್ನು ರಹಸ್ಯವಾಗಿಡಲಾಗುವುದು ಎಂದು ಭರವಸೆ ನೀಡಿದೆ ಎಂದು ವಿವರಿಸಿದೆ.

2024ರ ಚುನಾವಣೆಗಳಲ್ಲಿ ಅಕ್ರಮಗಳು ನಡೆದಿವೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿರುವ ಬೆನ್ನಲ್ಲೇ ಈ ತನಿಖಾ ವರದಿಯ ಮುಖ್ಯಾಂಶಗಳು ಹೊರಬಿದ್ದಿವೆ. ಆದರೆ, ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಮತದಾನದ ಅಕ್ರಮಗಳು ನಡೆದಿವೆ ಎಂಬ ವಾದಗಳನ್ನು ತಳ್ಳಿಹಾಕಿರುವ ಚುನಾವಣಾ ಆಯೋಗವು, ಚುನಾವಣಾ ಪ್ರಕ್ರಿಯೆಯನ್ನು ಸರಿಯಾದ ಕ್ರಮದಲ್ಲೇ ನಡೆಸಲಾಗಿದೆ ಎಂದು ಪ್ರತಿಪಾದಿಸಿದೆ. ತನ್ನ ತನಿಖೆಯ ಅಂತಿಮ ಭಾಗದಲ್ಲಿ ಮೂಲ ಡೇಟಾ ಮತ್ತು ಮೂಲ ಚುನಾವಣಾ ದಾಖಲೆಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವುದಾಗಿ ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ತಿಳಿಸಿದೆ.

ವರದಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

ರಿಪೋರ್ಟರ್ಸ್ ಕಲೆಕ್ಟಿವ್‌ನ ತನಿಖಾ ವರದಿಯ ಮುಖ್ಯಾಂಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿವೆ. ಹಲವು ಬಳಕೆದಾರರು ಈ ವ್ಯತ್ಯಾಸಗಳನ್ನು ಪ್ರಶ್ನಿಸುತ್ತಿದ್ದು, ಚುನಾವಣಾ ಆಯೋಗದಿಂದ ಹೆಚ್ಚಿನ ಪಾರದರ್ಶಕತೆಯನ್ನು ಒತ್ತಾಯಿಸುತ್ತಿದ್ದಾರೆ.

ಭರತ್ ಜೋಶಿ ಎಂಬ ಎಕ್ಸ್ ಬಳಕೆದಾರ ಪ್ರತಿಕ್ರಿಯಿಸಿ, “ನಿಮ್ಮಲ್ಲಿರುವ ಡೇಟಾವನ್ನು ಹಿಡಿದುಕೊಂಡು ಸುಪ್ರೀಂ ಕೋರ್ಟ್‌ಗೆ ಏಕೆ ಹೋಗಬಾರದು? ಮತ ಎಣಿಕೆ ಪ್ರಕ್ರಿಯೆಯ ಸಮಯದಲ್ಲಿ ರಾಜಕೀಯ ಪಕ್ಷಗಳು ಮತ್ತು ಅವರ ಪೋಲಿಂಗ್ ಏಜೆಂಟರು ಏನು ಮಾಡುತ್ತಿದ್ದರು? ಅವರು ಫಾರಂ-17C ಗೆ ಸಹಿ ಹಾಕಲು ನಿರಾಕರಿಸಬೇಕಿತ್ತು. ಸೋತ ಅಭ್ಯರ್ಥಿಯೇ ಈ ಬಗ್ಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕಿತ್ತು. ಪತ್ರಿಕೆಗಳು ಈ ಬಗ್ಗೆ ವರದಿ ಮಾಡುವವರೆಗೆ ಏಕೆ ಕಾಯಬೇಕು?” ಎಂದು ಪ್ರಶ್ನಿಸಿದ್ದಾರೆ.

ಈ ವ್ಯತ್ಯಾಸಗಳು ಚುನಾವಣೆಗಳಲ್ಲಿನ ವ್ಯಾಪಕ ಅಕ್ರಮಗಳನ್ನು ಸೂಚಿಸುತ್ತವೆಯೇ ಎಂದು ಇತರ ಬಳಕೆದಾರರು ಪ್ರಶ್ನಿಸಿದ್ದು, ಮೂಲ ದತ್ತಾಂಶವನ್ನು (underlying data) ಬಹಿರಂಗಪಡಿಸುವಂತೆ ಆಗ್ರಹಿಸಿದ್ದಾರೆ.

“ಈ ಆರೋಪಗಳನ್ನು ನಿಜವಾದ ಅಪರಾಧ ಎಂದು ಸಾಬೀತುಪಡಿಸಲು ಇರುವ ಅತ್ಯಂತ ಪ್ರಬಲವಾದ ಪುರಾವೆಯೆಂದರೆ ಡೇಟಾವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡದಿರುವುದು. ಅವರು ಎಷ್ಟು ಹೆಚ್ಚು ಮರೆಮಾಡುತ್ತಾರೋ, ಅಷ್ಟು ಹೆಚ್ಚು ಇದು ನಿಜವೆಂದು ದೃಢಪಡುತ್ತದೆ” ಎಂದು ಎಕ್ಸ್‌ ಬಳಕೆದಾರರೊಬ್ಬರು ಬರೆದಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ 2024ರ ಚುನಾವಣೆಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಪ್ರತಿಪಾದಿಸಲಾಗಿದ್ದರೆ, ಇನ್ನೊಬ್ಬರು 2019ರಿಂದ ನಡೆದ ಚುನಾವಣೆಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿದ್ದಾರೆ.

“ಸ್ಪಷ್ಟವಾದ ಅಕ್ರಮವನ್ನು ‘ಮುಕ್ತ ಮತ್ತು ನ್ಯಾಯಯುತ ಚುನಾವಣೆ’ ಎಂಬುವುದಾಗಿ ಕರೆಯಲಾಗುತ್ತದೆ!” ಎಂದು ಮತ್ತೊಬ್ಬ ಬಳಕೆದಾರ ಟೀಕಿಸಿದ್ದಾರೆ.

ಕೆಲವು ಬಳಕೆದಾರರು ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಈ ತನಿಖಾ ವರದಿಯು ಪ್ರಸ್ತುತ ಸರ್ಕಾರದ ನ್ಯಾಯಸಮ್ಮತತೆಯ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಎಂದು ಹೇಳಿದ್ದಾರೆ. ಒಬ್ಬ ಬಳಕೆದಾರರು ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಅಕ್ರಮ ಪ್ರಧಾನಿ’ ಎಂದು ಎಂದಿದ್ದರು, ಅವರ ಸರ್ಕಾರವನ್ನೇ ಅಕ್ರಮ ಸರ್ಕಾರ ಎಂದು ಬಣ್ಣಿಸಿದ್ದಾರೆ.

ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ವರದಿ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದು, “ಮತ ಚಲಾಯಿಸಿದ ಜನರ ಸಂಖ್ಯೆ ಮತ್ತು ಇವಿಎಂ ಯಂತ್ರಗಳಲ್ಲಿ ಎಣಿಕೆ ಮಾಡಲಾದ ಮತಗಳ ಸಂಖ್ಯೆ ಒಂದೇ ಆಗಿರಬೇಕು. ಇದು ಚುನಾವಣಾ ಪಾರದರ್ಶಕತೆಯ ಅತ್ಯಂತ ಮೂಲಭೂತ ಪರೀಕ್ಷೆಯಾಗಿದೆ” ಎಂದು ಹೇಳಿದ್ದಾರೆ.

“ಆದಾಗ್ಯೂ, ಮಹಾರಾಷ್ಟ್ರ, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದ 51 ಕ್ಷೇತ್ರಗಳಲ್ಲಿನ ವ್ಯತ್ಯಾಸಗಳನ್ನು ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ಬಹಿರಂಗಪಡಿಸಿದೆ. ಇದರಲ್ಲಿ 32 ಸ್ಥಾನಗಳಲ್ಲಿ ಅಂಕಿ-ಅಂಶಗಳು ತಾಳೆಯಾಗುತ್ತಿಲ್ಲ, ಇನ್ನು 19 ಸ್ಥಾನಗಳಲ್ಲಿ ಮತ ಚಲಾಯಿಸಿದ ಮತದಾರರ ಸಂಖ್ಯೆಯ ಕಾಲಂನಲ್ಲಿ ಅಧಿಕಾರಿಗಳು ‘೦’ ಅಥವಾ ‘ನಿಲ್’ (nil) ಎಂದು ದಾಖಲಿಸಿದ್ದಾರೆ” ಎಂದು ತಿಳಿಸಿದ್ದಾರೆ.

“ಚುನಾವಣಾ ಪರಿಶೀಲನೆಯಲ್ಲಿನ ಇಂತಹ ಮೂಲಭೂತ ಲೋಪಗಳನ್ನು ಭಾರತೀಯ ಚುನಾವಣಾ ಆಯೋಗವು ಇಷ್ಟು ನಿರ್ಲಕ್ಷ್ಯದಿಂದ ಪರಿಗಣಿಸಲು ಹೇಗೆ ಸಾಧ್ಯ? ಇದು ಚುನಾವಣಾ ಸುರಕ್ಷತಾ ಕ್ರಮಗಳ ಸಂಪೂರ್ಣ ಅಪಹಾಸ್ಯವಾಗಿದ್ದು, ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸುವ ಜವಾಬ್ದಾರಿ ಹೊತ್ತಿರುವ ಈ ಸಂಸ್ಥೆಯ ವಿಶ್ವಾಸಾರ್ಹತೆಗೆ ಬಲವಾದ ಪೆಟ್ಟು ನೀಡಿದೆ” ಎಂದು ಬರೆದುಕೊಂಡಿದ್ದಾರೆ.

Courtesy : reporters-collective. in and deccanchronicle.com







 









































ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಾಯುಮಾಲಿನ್ಯದಿಂದ ಜನರ ಜೀವಕ್ಕೆ ಕುತ್ತು: ‘ಭಾರತೀಯರು ಅನಾಥರಾಗಿ ಗ್ಯಾಸ್ ಚೇಂಬರ್‌ನಲ್ಲಿ ಸಿಲುಕಿದ್ದಾರೆ’; ಸ್ವಯಂ ಪ್ರೇರಿತ ದೂರು ದಾಖಲಿಸುವಂತೆ ಎನ್‌ಜಿಟಿಗೆ ಮನವಿ

ನವದೆಹಲಿ: ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಹಲವು ನಗರಗಳಲ್ಲಿ ವಾಯುಮಾಲಿನ್ಯ ಅಪಾಯಕಾರಿ ಮಟ್ಟವನ್ನು ತಲುಪಿದ್ದು, ಜನರು ಉಸಿರಾಡುವುದೇ ಜೀವಕ್ಕೆ ಅಪಾಯಕಾರಿಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿಷಕಾರಿ ಗಾಳಿಯ ನಡುವೆ ಬದುಕುತ್ತಿರುವ ಜನರ ಆರೋಗ್ಯ ಮತ್ತು...

“ರೈತರು 3 ತಿಂಗಳು ದುಡಿದು, 9 ತಿಂಗಳು ಮದ್ಯ ಕುಡಿದು-ಜೂಜಾಟದಲ್ಲಿ ಮುಳುಗಿರುತ್ತಾರೆ”: ಮಧ್ಯಪ್ರದೇಶದ ಬಿಜೆಪಿ ಸಂಸದ ಜನಾರ್ಧನ್ ಮಿಶ್ರಾ ವಿವಾದಿತ ಹೇಳಿಕೆ!

ತಮ್ಮ ಅಸಂಸದೀಯ ಹಾಗೂ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಪದೇಪದೇ ಸುದ್ದಿಯಾಗುವ ಮಧ್ಯಪ್ರದೇಶದ ರೇವಾ ಕ್ಷೇತ್ರದ ಬಿಜೆಪಿ ಸಂಸದ ಜನಾರ್ಧನ್ ಮಿಶ್ರಾ, ದೇಶದ ಅನ್ನದಾತರ ವಿರುದ್ಧ ನಾಲಿಗೆ ಹರಿಬಿಟ್ಟು ಮತ್ತೆ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ....

ತಪ್ಪದ ದೋಷಾರೋಪ ಭೀತಿ : ಎರಡು ಯುದ್ಧಗಳ ದಾಳ ಉರುಳಿಸಿದರೂ ಹೆಗ್ಸೆತ್‌ ರಕ್ಷಿಸಲು ಟ್ರಂಪ್‌ ವಿಫಲ

'ಎರಡು ಯುದ್ಧಗಳನ್ನು ಗೆದ್ದಿದ್ದಾರೆ' ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಾದವು, ಯುಎಸ್ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ವಿರುದ್ಧ ತೀವ್ರಗೊಳ್ಳುತ್ತಿರುವ ದೋಷಾರೋಪ ಪ್ರಕ್ರಿಯೆಯ ಒತ್ತಡವನ್ನು ಕಡಿಮೆ ಮಾಡುವಲ್ಲಿ ವಿಫಲವಾಗಿದೆ ಎಂದು ವರದಿಯಾಗಿದೆ....

ಶಿವಮೊಗ್ಗ: ರೈಲು ಶೌಚಾಲಯದಲ್ಲಿ ನೀರಿಲ್ಲದೆ ಪರದಾಡಿದ್ದ ಕುಟುಂಬ, ಇಬ್ಬರು ಸ್ಟೇಷನ್ ಮಾಸ್ಟರ್‌ಗಳಿಗೆ ದಂಡ ವಿಧಿಸಿದ ಗ್ರಾಹಕರ ಆಯೋಗ!

ರೈಲಿನ ಶೌಚಾಲಯಗಳಲ್ಲಿ ನೀರಿನ ಸೌಲಭ್ಯವಿಲ್ಲದೆ ಪ್ರಯಾಣಿಕರು ಅರ್ಧದಲ್ಲೇ ಪ್ರಯಾಣ ಮೊಟಕುಗೊಳಿಸಿದ ಘಟನೆಯನ್ನು 'ಸೇವೆಯಲ್ಲಾದ ನ್ಯೂನತೆ' ಎಂದು ಪರಿಗಣಿಸಿರುವ ಶಿವಮೊಗ್ಗ ಜಿಲ್ಲಾ ಗ್ರಾಹಕರ ಆಯೋಗವು ರೈಲ್ವೆ ಇಲಾಖೆಗೆ ದಂಡ ವಿಧಿಸಿದೆ. ಯಶವಂತಪುರ ಮತ್ತು ತುಮಕೂರು...

ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ ದೇಶಕ್ಕೆ ಮರಳಿದರೆ ಗಲ್ಲಿಗೇರಿಸುವುದು ಖಚಿತ: ಪ್ರಾಸಿಕ್ಯೂಟರ್ ಎಚ್ಚರಿಕೆ; ಮೇಲ್ಮನವಿಗೂ ಅವಕಾಶ ಮುಕ್ತಾಯ

ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ದೇಶಕ್ಕೆ ಮರಳಿದರೆ ಮರಣದಂಡನೆ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಭಾರತದಲ್ಲಿ ಸ್ವಯಂ ದೇಶಭ್ರಷ್ಟರಾಗಿ ನೆಲೆಸಿರುವ ಹಸೀನಾ ಅವರಿಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸುವ...

ವಯನಾಡ್‌: ಹಿಂದೂ ವೃದ್ದೆಯ ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಂ ಸಹೋದರರು

ಧಾರ್ಮಿಕ ಗಡಿಗಳನ್ನು ಮೀರಿ, ಕೇರಳದ ಬೆಟ್ಟ ಪ್ರದೇಶದಲ್ಲಿ ಇಬ್ಬರು ಮುಸ್ಲಿಂ ಸಹೋದರರು, ತಾವು ಸುಮಾರು ಐದು ದಶಕಗಳ ಕಾಲ ತಾಯಿಯಂತೆ ಪ್ರೀತಿಸಿ ಆರೈಕೆ ಮಾಡಿದ್ದ 85 ವರ್ಷದ ಹಿಂದೂ ಮಹಿಳೆಯೊಬ್ಬರ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ. ಮುಪ್ಪೈನಾದ್...

ಆರು ವರ್ಷಗಳ ಜೈಲು ವಾಸದ ಬಳಿಕ ಇಬ್ಬರು ಮುಸ್ಲಿಂ ಯುವಕರು ಖುಲಾಸೆ: ಯುಎಪಿಎ ಪ್ರಕರಣದಲ್ಲಿನ ಲೋಪದೋಷಗಳನ್ನು ಎತ್ತಿ ತೋರಿಸಿದ ಕೋರ್ಟ್

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿ ಬಂಧಿತರಾಗಿ ಆರು ವರ್ಷಗಳಿಂದ ಜೈಲಿನಲ್ಲಿ ನರಳುತ್ತಿದ್ದ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಇಬ್ಬರು ಯುವಕರನ್ನು ವಿಶೇಷ ನ್ಯಾಯಾಲಯ 2026ರ ನವೆಂಬರ್ 5ರಂದು ದೋಷಮುಕ್ತಗೊಳಿಸಿದೆ ಎಂದು...

ಉತ್ತರ ಪ್ರದೇಶದ ಜೈಲುಗಳಲ್ಲಿ ಮಿತಿಮೀರಿದ ಜನಸಂದಣಿ: ಡಿಜಿ ಪ್ರಿಸನ್ಸ್‌ಗೆ ವಿವರವಾದ ಅಫಿಡವಿಟ್ ಸಲ್ಲಿಸಲು ಅಲಹಾಬಾದ್ ಹೈಕೋರ್ಟ್‌ ಆದೇಶ!

ಉತ್ತರ ಪ್ರದೇಶದಾದ್ಯಂತ ಇರುವ ಜೈಲುಗಳಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ ಮಿತಿಮೀರಿ ಕೈದಿಗಳನ್ನು ಬಂದೀಖಾನೆಯಲ್ಲಿಡಲಾಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ರಾಜ್ಯದ ಜೈಲುಗಳ ಅತಿಯಾದ ಜನಸಂದಣಿ ಮತ್ತು ನೈಜ ಸ್ಥಿತಿಗತಿ...

ಕರ್ನಾಟಕ ಸರ್ಕಾರದ ಇ30 ಆರೋಪಕ್ಕೆ ಅಂಕಿ-ಅಂಶಗಳ ಮೂಲಕ ಭಾರತ್ ಪೆಟ್ರೋಲಿಯಂ ತಿರುಗೇಟು; ಬಳಿಕ ಟ್ವೀಟ್ ಅಳಿಸಿದ ಕಂಪನಿ!

ಕರ್ನಾಟಕ ಸರ್ಕಾರದ ಇ20 ಪೆಟ್ರೋಲ್ ಕುರಿತ ಗಂಭೀರ ಆರೋಪಗಳಿಗೆ ತಿರುಗೇಟು ನೀಡಲು ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್‌) ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ‘MythVsFact’ (ಮಿಥ್ಯೆ ಮತ್ತು ವಾಸ್ತವ) ಅಭಿಯಾನ ನಡೆಸುತ್ತಿದೆ. ಆದರೆ, ಈ ಅಭಿಯಾನದ...

ಖಾಸಗಿ ಶಾಲೆಗಳ ಅನುಮೋದನೆಗೆ ಹಣ ವಸೂಲಿ ಹಗರಣ: ಡಿಎಂಕೆ ಮಾಜಿ ಸಚಿವ ಅನ್ಬಿಲ್ ಮಹೇಶ್‌ಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

ಚೆನ್ನೈ: ತಮಿಳುನಾಡಿನಲ್ಲಿ ಖಾಸಗಿ ಶಾಲೆಗಳಿಗೆ ಅನುಮೋದನೆ ನೀಡುವ ಪ್ರಕ್ರಿಯೆಯಲ್ಲಿ ಹಣ ವಸೂಲಿ ಮತ್ತು ಅಕ್ರಮ ಹಣ ವರ್ಗಾವಣೆ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಡಿಎಂಕೆ ಮಾಜಿ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೋಳಿ ಅವರಿಗೆ...