Homeಮುಖಪುಟಆರು ವರ್ಷಗಳ ಜೈಲು ವಾಸದ ಬಳಿಕ ಇಬ್ಬರು ಮುಸ್ಲಿಂ ಯುವಕರು ಖುಲಾಸೆ: ಯುಎಪಿಎ ಪ್ರಕರಣದಲ್ಲಿನ ಲೋಪದೋಷಗಳನ್ನು...

ಆರು ವರ್ಷಗಳ ಜೈಲು ವಾಸದ ಬಳಿಕ ಇಬ್ಬರು ಮುಸ್ಲಿಂ ಯುವಕರು ಖುಲಾಸೆ: ಯುಎಪಿಎ ಪ್ರಕರಣದಲ್ಲಿನ ಲೋಪದೋಷಗಳನ್ನು ಎತ್ತಿ ತೋರಿಸಿದ ಕೋರ್ಟ್

- Advertisement -
- Advertisement -

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿ ಬಂಧಿತರಾಗಿ ಆರು ವರ್ಷಗಳಿಂದ ಜೈಲಿನಲ್ಲಿ ನರಳುತ್ತಿದ್ದ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಇಬ್ಬರು ಯುವಕರನ್ನು ವಿಶೇಷ ನ್ಯಾಯಾಲಯ 2026ರ ನವೆಂಬರ್ 5ರಂದು ದೋಷಮುಕ್ತಗೊಳಿಸಿದೆ ಎಂದು ವರದಿಯಾಗಿದೆ.

ಪ್ರಾಸಿಕ್ಯೂಷನ್ ಮಂಡಿಸಿದ ವಾದದಲ್ಲಿನ ಪ್ರಮುಖ ವೈರುಧ್ಯಗಳ ಆಧಾರದ ಮೇಲೆ, 2020ರ ನವೆಂಬರ್‌ನಲ್ಲಿ ಬಂಧಿತರಾಗಿದ್ದ ಸೊಪೋರ್‌ನ ಚೂರಾದ ನಿವಾಸಿ ಹುಝೈಫ್ ಫಿರ್ದೌಸ್ ಭಟ್ ಮತ್ತು ಬಾರಾಮುಲ್ಲಾದ ಕ್ರೀರಿಯ ನಿವಾಸಿ ಅಜಾಝ್ ಅಹ್ಮದ್ ಭಟ್ ಅವರನ್ನು ಯುಎಪಿಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಫೆರೋಝ್ ಅಹ್ಮದ್ ಖಾನ್ ಅವರು ದೋಷಮುಕ್ತಗೊಳಿಸಿದ್ದಾರೆ.

ಬಂಧಿತರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾದ ಆರೋಪವು ಯಾವುದೇ ಸ್ವತಂತ್ರ ಸಾಕ್ಷಿಗಳ ಮೂಲಕ ಸಾಬೀತಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಬಾರಾಮುಲ್ಲಾದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕಾನಿಸ್ಪೋರಾ ಬಳಿ ತಪಾಸಣೆ ನಡೆಸುತ್ತಿದ್ದಾಗ, ವಾಹನದಿಂದ ಎರಡು ಹ್ಯಾಂಡ್ ಗ್ರೆನೇಡ್‌ಗಳು, 100 ರೌಂಡ್ ಮದ್ದುಗುಂಡುಗಳು ಮತ್ತು ಪಾಕಿಸ್ತಾನ ಮೂಲದ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾಗೆ ಸೇರಿದ ಎರಡು ಪೋಸ್ಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿಕೊಂಡ ನಂತರ, ಸೆ. 16, 2020 ರಂದು ಇಬ್ಬರು ಯುವಕರನ್ನು ಬಂಧಿಸಲಾಗಿತ್ತು.

ಬಂಧನದ ನಂತರ, ಯುಎಪಿಎ ಕಾಯ್ದೆಯ ಸೆಕ್ಷನ್ 18, 23 ಮತ್ತು 39 ಹಾಗೂ ಶಸ್ತಾಸ್ತ್ರ ಕಾಯ್ದೆಯ ಸೆಕ್ಷನ್ 7/25ರ ಅಡಿಯಲ್ಲಿ ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ, ಆರೋಪಿಗಳು ಪೊಲೀಸರ ಬಂಧನದ ವಾದವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ತಾವು ಕಾನಿಸ್ಪೋರಾದಲ್ಲಿ ವಾಹನ ತಪಾಸಣೆಯ ವೇಳೆ ಸಿಕ್ಕಿಬಿದ್ದಿಲ್ಲ, ಬದಲಿಗೆ ರಾತ್ರಿಯ ಸಮಯದಲ್ಲಿ ನಮ್ಮ ನಮ್ಮ ಮನೆಗಳಿಂದಲೇ ಪೊಲೀಸರು ನಮ್ಮನ್ನು ಕರೆದೊಯ್ದಿದ್ದರು ಎಂದು ಅವರು ಆರೋಪಿಸಿದ್ದರು.

ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಆರೋಪಿಗಳ ವಶದಿಂದಲೇ ಜಪ್ತಿಯಾಗಿವೆ ಎಂಬುದನ್ನು ಯಾವುದೇ ಸಂಶಯಕ್ಕೆ ಆಸ್ಪದವಿಲ್ಲದಂತೆ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ತಿಳಿಸಿದೆ.

“ನ್ಯಾಯಾಲಯದ ಮುಂದೆ ಹಾಜರುಪಡಿಸಲಾದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಆರೋಪಿಗಳ ಸಕ್ರಿಯ ವಶದಿಂದಲೇ, ಪೊಲೀಸರು ಹೇಳಿರುವ ರೀತಿಯಲ್ಲಿಯೇ ವಶಪಡಿಸಿಕೊಳ್ಳಲಾಗಿದೆ ಎಂಬುದನ್ನು ಪ್ರಾಸಿಕ್ಯೂಷನ್ ಬಲವಾದ ಮತ್ತು ನಂಬಲರ್ಹವಾದ ಸಾಕ್ಷ್ಯಾಧಾರಗಳ ಮೂಲಕ ಸಾಬೀತುಪಡಿಸಿಲ್ಲ… ಒಮ್ಮೆ ಪೊಲೀಸರು ಹೇಳಿಕೊಂಡ ಜಪ್ತಿಯೇ ಸಂಶಯಾಸ್ಪದವಾದರೆ, ಯುಎಪಿಎ ಕಾಯ್ದೆಯ ಸೆಕ್ಷನ್ 18 ಮತ್ತು 23 ಹಾಗೂ ಶಸ್ತಾಸ್ತ್ರ ಕಾಯ್ದೆಯ ಸೆಕ್ಷನ್ 7/25 ರ ಅಡಿಯ ಅಪರಾಧಗಳ ಅಡಿಪಾಯವೇ ಗಣನೀಯವಾಗಿ ದುರ್ಬಲಗೊಳ್ಳುತ್ತದೆ” ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ಪ್ರಕರಣದ ಒಟ್ಟಾರೆ ಮೌಲ್ಯಮಾಪನವನ್ನು ಮಾಡಿದ ನ್ಯಾಯಾಲಯ, “ಪ್ರಾಸಿಕ್ಯೂಷನ್ ಮಂಡಿಸಿರುವ ಸಾಕ್ಷ್ಯಾಧಾರಗಳು ಭಾರಿ ವೈರುಧ್ಯಗಳು ಹಾಗೂ ದೋಷಗಳಿಂದ ಕೂಡಿವೆ. ಇಂತಹ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳಿಗೆ ಶಿಕ್ಷೆ ವಿಧಿಸುವುದು ಅಸುರಕ್ಷಿತ ಮತ್ತು ನ್ಯಾಯಸಮ್ಮತವಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಸೇನೆಯ 52 ರಾಷ್ಟ್ರೀಯ ರೈಫಲ್ಸ್ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್‌) 53ನೇ ಬೆಟಾಲಿಯನ್ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯ ನಂತರ ಈ ಬಂಧನಗಳು ನಡೆದಿದ್ದವು ಎಂದು ವರದಿಯಾಗಿದೆ. ಈ ಪ್ರಕರಣದಲ್ಲಿ ಹೆಚ್ಚುವರಿ ಸರ್ಕಾರಿ ಅಭಿಯೋಜಕರು (ಪಬ್ಲಿಕ್ ಪ್ರಾಸಿಕ್ಯೂಟರ್) ಪ್ರಾಸಿಕ್ಯೂಷನ್ ಪರವಾಗಿ ವಾದ ಮಂಡಿಸಿದರೆ, ಆರೋಪಿಗಳ ಪರವಾಗಿ ವಕೀಲರಾದ ಅಝೀಮ್ ಪಂಡಿತ್ ಮತ್ತು ತಜಮುಲ್ ಹುಸೇನ್ ಹಾಜರಾಗಿದ್ದರು.

ಪೊಲೀಸರು ಹೇಳಿಕೊಂಡ ಜಪ್ತಿಗೆ ಯಾವುದೇ ಸ್ವತಂತ್ರ ಸಾಕ್ಷಿಗಳು ಇರಲಿಲ್ಲ ಮತ್ತು ವಿಚಾರಣೆ ಹಾಗೂ ಪಾಟೀಸವಾಲಿನ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ನೀಡಿದ ಹೇಳಿಕೆಗಳಲ್ಲಿ ಗಣನೀಯ ವೈರುಧ್ಯಗಳಿದ್ದವು ಎಂದೂ ಸಹ ನ್ಯಾಯಾಲಯ ಹೇಳಿದೆ.

ಪ್ರಾಸಿಕ್ಯೂಷನ್ ಸಾಕ್ಷಿಗಳು ತಪಾಸಣಾ ಕಾರ್ಯಾಚರಣೆ ನಡೆದಿದ್ದನ್ನು ಮತ್ತು ಆ ವೇಳೆ ಪತ್ತೆಯಾದ ವಸ್ತುಗಳನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಪೊಲೀಸರು ಹಾಜರುಪಡಿಸಿದ ಸಾಕ್ಷಿಗಳು ತಪಾಸಣೆ ನಡೆಸಿದ ಜವಾಬ್ದಾರಿಯನ್ನು ಇತರರ ಮೇಲೆ ತಳ್ಳಿದರಲ್ಲದೆ, ಇಬ್ಬರು ಸಾಕ್ಷಿಗಳು ತಮಗೆ ತಿಳಿದಿರುವಂತೆ ಇಂತಹ ಯಾವುದೇ ಜಪ್ತಿಗಳು ತಮ್ಮ ಸಮ್ಮುಖದಲ್ಲಿ ನಡೆದಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.

“ಹೀಗಾಗಿ, ಪೊಲೀಸರು ಹೇಳಿಕೊಂಡ ಜಪ್ತಿಯ ಹಲವಾರು ಮೂಲಭೂತ ಅಂಶಗಳ ಕುರಿತು ಪ್ರಾಸಿಕ್ಯೂಷನ್ ಒಂದೇ ರೀತಿಯ ವಿವರಣೆಯನ್ನು ನೀಡಿಲ್ಲ. ಒಬ್ಬ ಸಾಕ್ಷಿಯು PW-1 ತಪಾಸಣೆ ನಡೆಸಿದ್ದಾರೆ ಎಂದು ಹೇಳಿದರೆ, ಮತ್ತೊಬ್ಬರು ಆ ತಪಾಸಣೆಯ ಜವಾಬ್ದಾರಿಯನ್ನು ಜೈಪಾಲ್ ಅವರಿಗೆ ವಹಿಸುತ್ತಾರೆ. ಇನ್ನೊಬ್ಬ ಸಾಕ್ಷಿಯು PW-4 ತಪಾಸಣೆ ನಡೆಸಿದ್ದಾರೆ ಎಂದು ಹೇಳುತ್ತಾರೆ, ಆದರೆ PW-3 ಮತ್ತು PW-4 ತಮ್ಮ ಸಮ್ಮುಖದಲ್ಲಿ ಯಾವುದೇ ಜಪ್ತಿ ನಡೆದಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತಾರೆ” ಎಂದು ನ್ಯಾಯಾಲಯ ತಿಳಿಸಿದೆ.

ಪೊಲೀಸರು ವಶಪಡಿಸಿಕೊಂಡ ವಸ್ತುಗಳ ಪ್ರಮಾಣ ಮತ್ತು ಗುರುತಿನ ವಿಷಯದಲ್ಲೂ ಸಹ ಈ ವೈರುಧ್ಯಗಳು ಕಂಡು ಬಂದಿವೆ. ಒಬ್ಬ ಪೊಲೀಸ್ ಸಾಕ್ಷಿಯು 100 ರೌಂಡ್ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಾಕ್ಷ್ಯ ನೀಡಿದರೆ, ಮತ್ತೊಬ್ಬರು ಆ ಸಂಖ್ಯೆಯನ್ನು ಕೇವಲ 40 ಎಂದು ತಿಳಿಸಿದ್ದಾರೆ. ಅದೇ ರೀತಿ, ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾದ ಪೋಸ್ಟರ್‌ಗಳು ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದ್ದೇ ಅಥವಾ ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ್ದೇ ಎಂಬ ವಿಷಯದಲ್ಲೂ ಸಾಕ್ಷಿಗಳು ಭಿನ್ನವಾದ ಹೇಳಿಕೆಗಳನ್ನು ನೀಡಿದ್ದಾರೆ.

“ಹೇಳಲಾದ ಲಷ್ಕರ್-ಎ-ತೊಯ್ಬಾಗೆ ಸೇರಿದ ವಸ್ತುಗಳ ಸ್ವರೂಪ ಮತ್ತು ವಶಪಡಿಸಿಕೊಳ್ಳಲಾದ ಮದ್ದುಗುಂಡುಗಳ ಸಂಖ್ಯೆಯ ವಿಚಾರದಲ್ಲೂ ಸಾಕ್ಷಿಗಳು ಭಿನ್ನವಾದ ಹೇಳಿಕೆಗಳನ್ನು ನೀಡಿದ್ದಾರೆ. ಜಪ್ತಿ ಮಾಡಲಾದ ವಸ್ತುಗಳ ಗುರುತಿಸುವಿಕೆ ಮತ್ತು ಅವುಗಳ ಸಂರಕ್ಷಣೆಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳೊಂದಿಗೆ ಒಟ್ಟಾಗಿ ಪರಿಶೀಲಿಸಿದಾಗ, ಈ ವೈರುಧ್ಯಗಳು ಮತ್ತಷ್ಟು ಗಂಭೀರವಾಗಿ ಕಂಡುಬರುತ್ತವೆ” ಎಂದು ತೀರ್ಪಿನಲ್ಲಿ ಹೇಳಲಾಗಿದೆ.

“ಸಮಯ ಕಳೆಯುವಿಕೆ ಅಥವಾ ಅಸ್ಪಷ್ಟ ನೆನಪಿನಿಂದಾಗಿ ಉಂಟಾಗುವ ಸಣ್ಣಪುಟ್ಟ ವೈರುಧ್ಯಗಳನ್ನು ಸಾಮಾನ್ಯವಾಗಿ ನಿರ್ಲಕ್ಷಿಸಬಹುದು ಎಂಬುದು ನಿಜ. ಆದರೆ ಪ್ರಾಸಿಕ್ಯೂಷನ್ ಕಥೆಯ ಮೂಲಕ್ಕೇ ಧಕ್ಕೆ ತರುವಂತಹ ಹಾಗೂ ಘಟನೆ, ಜಪ್ತಿ ಅಥವಾ ವಶಪಡಿಸಿಕೊಂಡ ವಸ್ತುಗಳ ಗುರುತು ಅಥವಾ ಆರೋಪಿಗಳೊಂದಿಗೆ ಆ ವಸ್ತುಗಳಿಗಿರುವ ಸಂಪರ್ಕದ ಬಗ್ಗೆಯೇ ಅನುಮಾನ ಮೂಡಿಸುವಂತಹ ಗಂಭೀರ ವೈರುಧ್ಯಗಳನ್ನು ಅಪ್ರಸ್ತುತ ಎಂದು ತಳ್ಳಿಹಾಕಲು ಸಾಧ್ಯವಿಲ್ಲ,” ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ಆರೋಪಿಗಳಿಗೂ ಮತ್ತು ಗುರುತಿಸಲಾದ ಯಾವುದೇ ಭಯೋತ್ಪಾದಕ, ಭಯೋತ್ಪಾದಕ ಸಂಘಟನೆ ಅಥವಾ ಭಯೋತ್ಪಾದಕ ಚಟುವಟಿಕೆಗಳಿಗೂ ಯಾವುದೇ ರೀತಿಯ ಲಿಂಕ್ ಅಥವಾ ಸಂಪರ್ಕ ಇರುವುದನ್ನು ಸಾಬೀತುಪಡಿಸಲು ತನಿಖೆಯು ವಿಫಲವಾಗಿದೆ ಎಂಬುದನ್ನು ಸಹ ನ್ಯಾಯಾಲಯವು ಪತ್ತೆಹಚ್ಚಿದೆ.

“ಆರೋಪಿಗಳಿಗೂ ಮತ್ತು ಗುರುತಿಸಲಾದ ಯಾವುದೇ ಭಯೋತ್ಪಾದಕ, ಭಯೋತ್ಪಾದಕ ಕೃತ್ಯ, ಭಯೋತ್ಪಾದಕ ಸಂಘಟನೆಯ ಚಟುವಟಿಕೆ ಅಥವಾ ಉದ್ದೇಶಪೂರ್ವಕವಾಗಿ ನೆರವು ನೀಡಿದ ಯಾವುದೇ ನಿರ್ದಿಷ್ಟ ಕೃತ್ಯಕ್ಕೂ ಸಂಬಂಧ ಕಲ್ಪಿಸುವ ಯಾವುದೇ ಸಾಕ್ಷ್ಯಾಧಾರಗಳನ್ನು ಪ್ರಾಸಿಕ್ಯೂಷನ್ ಹಾಜರುಪಡಿಸಿಲ್ಲ. ಆರೋಪಿಗಳು ಯಾರೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆಯೋ, ಅಂತಹ ಯಾವುದೇ ಭಯೋತ್ಪಾದಕನ ಹೆಸರು ತನಿಖೆಯ ಅವಧಿಯಲ್ಲಿ ಹೊರಬಂದಿಲ್ಲ ಎಂಬುದನ್ನು ತನಿಖಾಧಿಕಾರಿಯೇ ಒಪ್ಪಿಕೊಂಡಿದ್ದಾರೆ” ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಆರೋಪಿಗಳಿಬ್ಬರಲ್ಲಿ ಯಾರೇ ಆಗಲಿ ಉದ್ದೇಶಪೂರ್ವಕವಾಗಿ ಯಾವುದೇ ಭಯೋತ್ಪಾದಕ ಕೃತ್ಯ ಅಥವಾ ಚಟುವಟಿಕೆಗೆ ನೆರವು ನೀಡಿದ್ದಾರೆ ಅಥವಾ ಅದಕ್ಕೆ ದಾರಿ ಮಾಡಿಕೊಟ್ಟಿದ್ದಾರೆ ಎಂಬುದನ್ನು ನಿರೂಪಿಸುವ ಸಾಕ್ಷ್ಯಾಧಾರಗಳನ್ನು ಒದಗಿಸಲು ಸಹ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯವು ತಿಳಿಸಿದೆ.

ಬಾರಾಮುಲ್ಲಾದ ಇಬ್ಬರು ಯುವಕರು ದೋಷಮುಕ್ತರಾಗುವ ಮುನ್ನ ಆರು ವರ್ಷಗಳ ಕಾಲ ಜೈಲಿನಲ್ಲಿ ಕಳೆಯಬೇಕಾಗಿ ಬಂದಿರುವ ಸಂಗತಿಯ ಬಗ್ಗೆ ಹುರಿಯತ್ ಅಧ್ಯಕ್ಷ ಹಾಗೂ ಕಾಶ್ಮೀರದ ಮುಖ್ಯ ಧರ್ಮಗುರು ಮಿರ್ವೈಜ್ ಉಮರ್ ಫಾರೂಕ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

Courtesy :thewire.in

















































ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ ದೇಶಕ್ಕೆ ಮರಳಿದರೆ ಗಲ್ಲಿಗೇರಿಸುವುದು ಖಚಿತ: ಪ್ರಾಸಿಕ್ಯೂಟರ್ ಎಚ್ಚರಿಕೆ; ಮೇಲ್ಮನವಿಗೂ ಅವಕಾಶ ಮುಕ್ತಾಯ

ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ದೇಶಕ್ಕೆ ಮರಳಿದರೆ ಮರಣದಂಡನೆ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಭಾರತದಲ್ಲಿ ಸ್ವಯಂ ದೇಶಭ್ರಷ್ಟರಾಗಿ ನೆಲೆಸಿರುವ ಹಸೀನಾ ಅವರಿಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸುವ...

ವಯನಾಡ್‌: ಹಿಂದೂ ವೃದ್ದೆಯ ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಂ ಸಹೋದರರು

ಧಾರ್ಮಿಕ ಗಡಿಗಳನ್ನು ಮೀರಿ, ಕೇರಳದ ಬೆಟ್ಟ ಪ್ರದೇಶದಲ್ಲಿ ಇಬ್ಬರು ಮುಸ್ಲಿಂ ಸಹೋದರರು, ತಾವು ಸುಮಾರು ಐದು ದಶಕಗಳ ಕಾಲ ತಾಯಿಯಂತೆ ಪ್ರೀತಿಸಿ ಆರೈಕೆ ಮಾಡಿದ್ದ 85 ವರ್ಷದ ಹಿಂದೂ ಮಹಿಳೆಯೊಬ್ಬರ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ. ಮುಪ್ಪೈನಾದ್...

ಉತ್ತರ ಪ್ರದೇಶದ ಜೈಲುಗಳಲ್ಲಿ ಮಿತಿಮೀರಿದ ಜನಸಂದಣಿ: ಡಿಜಿ ಪ್ರಿಸನ್ಸ್‌ಗೆ ವಿವರವಾದ ಅಫಿಡವಿಟ್ ಸಲ್ಲಿಸಲು ಅಲಹಾಬಾದ್ ಹೈಕೋರ್ಟ್‌ ಆದೇಶ!

ಉತ್ತರ ಪ್ರದೇಶದಾದ್ಯಂತ ಇರುವ ಜೈಲುಗಳಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ ಮಿತಿಮೀರಿ ಕೈದಿಗಳನ್ನು ಬಂದೀಖಾನೆಯಲ್ಲಿಡಲಾಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ರಾಜ್ಯದ ಜೈಲುಗಳ ಅತಿಯಾದ ಜನಸಂದಣಿ ಮತ್ತು ನೈಜ ಸ್ಥಿತಿಗತಿ...

ಕರ್ನಾಟಕ ಸರ್ಕಾರದ ಇ30 ಆರೋಪಕ್ಕೆ ಅಂಕಿ-ಅಂಶಗಳ ಮೂಲಕ ಭಾರತ್ ಪೆಟ್ರೋಲಿಯಂ ತಿರುಗೇಟು; ಬಳಿಕ ಟ್ವೀಟ್ ಅಳಿಸಿದ ಕಂಪನಿ!

ಕರ್ನಾಟಕ ಸರ್ಕಾರದ ಇ20 ಪೆಟ್ರೋಲ್ ಕುರಿತ ಗಂಭೀರ ಆರೋಪಗಳಿಗೆ ತಿರುಗೇಟು ನೀಡಲು ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್‌) ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ‘MythVsFact’ (ಮಿಥ್ಯೆ ಮತ್ತು ವಾಸ್ತವ) ಅಭಿಯಾನ ನಡೆಸುತ್ತಿದೆ. ಆದರೆ, ಈ ಅಭಿಯಾನದ...

ಖಾಸಗಿ ಶಾಲೆಗಳ ಅನುಮೋದನೆಗೆ ಹಣ ವಸೂಲಿ ಹಗರಣ: ಡಿಎಂಕೆ ಮಾಜಿ ಸಚಿವ ಅನ್ಬಿಲ್ ಮಹೇಶ್‌ಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

ಚೆನ್ನೈ: ತಮಿಳುನಾಡಿನಲ್ಲಿ ಖಾಸಗಿ ಶಾಲೆಗಳಿಗೆ ಅನುಮೋದನೆ ನೀಡುವ ಪ್ರಕ್ರಿಯೆಯಲ್ಲಿ ಹಣ ವಸೂಲಿ ಮತ್ತು ಅಕ್ರಮ ಹಣ ವರ್ಗಾವಣೆ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಡಿಎಂಕೆ ಮಾಜಿ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೋಳಿ ಅವರಿಗೆ...

ಸಾಮಾಜಿಕ ಜಾಲತಾಣದಲ್ಲಿ ದಲಿತ ವಿರೋಧಿ ಪೋಸ್ಟ್: ಐಐಟಿ ಪಾಟ್ನಾ ರಿಜಿಸ್ಟ್ರಾರ್ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಎಫ್‌ಐಆರ್

ದಲಿತ ಸಮುದಾಯದ ಕುರಿತು ಅವಹೇಳನಕಾರಿ ಸಾಮಾಜಿಕ ಜಾಲತಾಣ ಪೋಸ್ಟ್ ಹಂಚಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಐಐಟಿ ಪಟ್ನಾದ ರಿಜಿಸ್ಟ್ರಾರ್ ಅವಲೇಂದರ್ ಕುಮಾರ್ ಠಾಕೂರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಸಂಬಂಧ ಕೆಲವು ವಾರಗಳ...

ಸಿಖ್ ಪ್ರತ್ಯೇಕತಾವಾದಿ ಪನ್ನುನ್ ಕೇಸ್: ಅಜಿತ್ ದೋವಲ್, ಸಾಮಂತ್ ಗೋಯೆಲ್‌ಗೆ ಸಮನ್ಸ್ ನೀಡಲು ಅಮೆರಿಕ ಕೋರ್ಟ್ ಅನುಮತಿ

ಅಮೆರಿಕದಲ್ಲಿ ಸಿಖ್ ಪ್ರತ್ಯೇಕತಾವಾದಿ ಗುರ್ಪತ್‌ವಂತ್ ಸಿಂಗ್ ಪನ್ನುನ್ ಹೂಡಿರುವ ಖಾಸಗಿ ಸಿವಿಲ್ ಮೊಕದ್ದಮೆಗೆ ಸಂಬಂಧಿಸಿದಂತೆ ಅಮೆರಿಕದ ಫೆಡರಲ್ ನ್ಯಾಯಾಲಯವು ಪ್ರಮುಖ ಆದೇಶ ನೀಡಿದೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು...

ಗೌರಿ, ಕಲ್ಬುರ್ಗಿ ಹತ್ಯೆ ಪ್ರಕರಣ | ತೇಜಸ್ವಿ ಸೂರ್ಯ ಸವಾಲಿಗೆ ಪ್ರಿಯಾಂಕ್ ಖರ್ಗೆ ಪ್ರತಿಸವಾಲು : ‘RSS ನೋಂದಾಯಿಸಿ ಫೀಸ್ ನಾನೇ ಕೊಡ್ತೇನೆ’ ಎಂದ ಗೃಹ ಸಚಿವರು

ಪತ್ರಕರ್ತೆ ಗೌರಿ ಲಂಕೇಶ್ ಮತ್ತು ವಿಚಾರವಾದಿ ಎಂ.ಎಂ. ಕಲ್ಬುರ್ಗಿ ಹತ್ಯೆ ಪ್ರಕರಣಗಳ ವಿಚಾರಣೆಯನ್ನು ಮುಂಬರುವ ಆರು ತಿಂಗಳೊಳಗೆ ಪೂರ್ಣಗೊಳಿಸಿ, ಅಪರಾಧಿಗಳನ್ನು ಜೈಲಿಗೆ ಕಳುಹಿಸುವುದಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದ್ದರು. ಕೇರಳದ ಕೊಚ್ಚಿಯ...

ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲು ಅವರ ಪ್ರಶ್ನಾತೀತ ಪ್ರಾಮಾಣಿಕತೆಯೇ ಕಾರಣ: ಸೋನಿಯಾ ಗಾಂಧಿ

2004ರಲ್ಲಿ ದೇಶದ ಪ್ರಧಾನಿಯಾಗಿ ಮನಮೋಹನ್ ಸಿಂಗ್ ಅವರನ್ನು ಆಯ್ಕೆ ಮಾಡಲು ಅವರ ‘ಪ್ರಶ್ನಾತೀತ ಪ್ರಾಮಾಣಿಕತೆ’ ಮತ್ತು ಆಡಳಿತದ ಕುರಿತಾದ ಆಳವಾದ ತಿಳುವಳಿಕೆಯೇ ಪ್ರಮುಖ ಕಾರಣವಾಗಿತ್ತು ಎಂದು ಅಂದಿನ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ...

ಕರ್ನಾಟಕದ ಎಥನಾಲ್ ವಿವಾದದ ಬೆನ್ನಲ್ಲೇ ಎಚ್ಚೆತ್ತ ಕೇರಳ: 4 ಜಿಲ್ಲೆಗಳ 9 ಬಂಕ್‌ಗಳಿಂದ ಸ್ಯಾಂಪಲ್ ಸಂಗ್ರಹ, ಲ್ಯಾಬ್‌ಗೆ ರವಾನೆ!

ಕರ್ನಾಟಕದ ಪೆಟ್ರೋಲ್ ಬಂಕ್‌ಗಳಲ್ಲಿ ನಿಗದಿತ ಶೇ. 20ರ ಮಿತಿಗಿಂತಲೂ ಅಧಿಕ (ಶೇ. 31.2 ರಷ್ಟು) ಎಥನಾಲ್ ಬೆರೆಸಲಾಗುತ್ತಿದೆ ಎನ್ನುವ ಸಚಿವ ರಿಜ್ವಾನ್ ಆರ್ಷದ್ ಅವರ ಆರೋಪಗಳ ಬೆನ್ನಲ್ಲೇ, ನೆರೆಯ ಕೇರಳ ಸರ್ಕಾರವೂ ಪೆಟ್ರೋಲ್...