ತಪ್ಪಾಗಿ ಬೇರೆ ಬಸ್ ಹತ್ತಿ ಇಳಿದ ಇಬ್ಬರು ಪ್ರಯಾಣಿಕರ ವಿರುದ್ಧ ಕೋಮುವಾದಿ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾದ ವೈರಲ್ ವಿಡಿಯೋ ಆಧರಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್ಆರ್ಟಿಸಿ) ಬಸ್ ಕಂಡಕ್ಟರ್ ಒಬ್ಬರನ್ನು ಅಮಾನತುಗೊಳಿಸಿದೆ.
ವರದಿಗಳ ಪ್ರಕಾರ, ಈ ಘಟನೆಯು ಶಿವಮೊಗ್ಗ ಕಡೆಗೆ ಚಲಿಸುತ್ತಿದ್ದ ಕೆಎಎಚ್-42-ಎಫ್-2253 ನೋಂದಣಿ ಸಂಖ್ಯೆಯ ಕೆಎಸ್ಆರ್ಟಿಸಿ ಬಸ್ನಲ್ಲಿ ನಡೆದಿದೆ. ವರದಿಗಳಲ್ಲಿ ಮೌಲಾನಾ ಸಾಹೇಬ್ ಮತ್ತು ಅವರ ಪತ್ನಿ ಎಂದು ಗುರುತಿಸಲಾದ ಇಬ್ಬರು ಪ್ರಯಾಣಿಕರು ಕೆಆರ್ ಪೇಟೆಗೆ ಪ್ರಯಾಣಿಸಲು ಉದ್ದೇಶಿಸಿದ್ದರೆನ್ನಲಾಗಿದೆ, ಆದರೆ ತಪ್ಪಾಗಿ ಈ ಬಸ್ ಹತ್ತಿದ್ದರು.
ಪ್ರಯಾಣಿಕರು ಮಾಡಿದ ತಪ್ಪನ್ನು ಕಂಡಕ್ಟರ್ ಗಮನಿಸಿದಾಗ, ಬಸ್ನಲ್ಲಿ ಬೋರ್ಡ್ ಪರಿಶೀಲಿಸದಿದ್ದಕ್ಕಾಗಿ ಅವರನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಈ ಮಾತುಕತೆಯ ಸಂದರ್ಭದಲ್ಲಿ, “ಇದು ಅಫ್ಘಾನಿಸ್ತಾನವೇ? ಪಾಕಿಸ್ತಾನವೇ?” ಎಂದು ಕಂಡಕ್ಟರ್ ಕೋಮುವಾದಿ ಹೇಳಿಕೆಗಳನ್ನು ನೀಡಿದ್ದಾರೆ.
ಸೋಮವಾರ (ನವೆಂಬರ್ 9) ಈ ವಾಗ್ವಾದದ ವಿಡಿಯೋ ಇನ್ಸ್ಟಾಗ್ರಾಮ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ವ್ಯಾಪಕವಾಗಿ ಹರಿದಾಡಲು ಪ್ರಾರಂಭಿಸಿತು, ಇದು ಸಾರ್ವಜನಿಕರ ಟೀಕೆಗೆ ಕಾರಣವಾಗಿದ್ದು, ಉದ್ಯೋಗಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಅಮಾನತು ಸೇರಿದಂತೆ ತನಿಖೆ ಮತ್ತು ಶಿಸ್ತು ಕ್ರಮಕ್ಕೆ ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಆಗ್ರಹಿಸಿದರು. ಇದರ ಬೆನ್ನಲ್ಲೇ ಕೆಎಸ್ಆರ್ಟಿಸಿ ಅಧಿಕಾರಿಗಳು ಕಂಡಕ್ಟರ್ ಅವರನ್ನು ಅಮಾನತುಗೊಳಿಸಿದ್ದಾರೆ.
ಈ ಘಟನೆಯು ಸಾರ್ವಜನಿಕ ಸಾರಿಗೆ ಉದ್ಯೋಗಿಗಳ ನಡೆವಳಿಕೆ ಮತ್ತು ಧಾರ್ಮಿಕ ಗುರುತನ್ನು ಲೆಕ್ಕಿಸದೆ ಪ್ರಯಾಣಿಕರನ್ನು ಗೌರವದಿಂದ ನಡೆಸಿಕೊಳ್ಳುವ ಅಗತ್ಯತೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಇಲಾಖಾ ತನಿಖೆಗೆ ಸಂಬಂಧಿಸಿದ ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.


