Homeಅಂತರಾಷ್ಟ್ರೀಯಗಾಜಾದಲ್ಲಿ ಇಸ್ರೇಲ್ ನರಮೇಧ ನಡೆಸಿದೆ; ವ್ಯವಸ್ಥಿತ ಹತ್ಯೆ, ವಿನಾಶವನ್ನು ಪುನರುಚ್ಚರಿಸಿದ ನೊಬೆಲ್ ಪುರಸ್ಕೃತೆ ನವಿ ಪಿಳ್ಳೈ 

ಗಾಜಾದಲ್ಲಿ ಇಸ್ರೇಲ್ ನರಮೇಧ ನಡೆಸಿದೆ; ವ್ಯವಸ್ಥಿತ ಹತ್ಯೆ, ವಿನಾಶವನ್ನು ಪುನರುಚ್ಚರಿಸಿದ ನೊಬೆಲ್ ಪುರಸ್ಕೃತೆ ನವಿ ಪಿಳ್ಳೈ 

- Advertisement -
- Advertisement -

ಗಾಜಾ/ಡರ್ಬನ್: ಪ್ಯಾಲೆಸ್ಟೀನಿಯನ್ನರ ವಿರುದ್ಧ ಇಸ್ರೇಲ್ ನಡೆಸಿರುವುದು ಕೇವಲ ಯುದ್ಧದ ಭಾಗವಾಗಿ ನಡೆದ ದಾಳಿಗಳಲ್ಲ, ಬದಲಿಗೆ ಒಂದು ಜನಸಮುದಾಯವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ನಾಶಪಡಿಸುವ ಉದ್ದೇಶದಿಂದ ನಡೆಸಿದ ವ್ಯವಸ್ಥಿತ ನರಮೇಧ ಎಂಬ ತಮ್ಮ ಹಿಂದಿನ ತೀರ್ಮಾನಕ್ಕೆ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಹಾಗೂ ವಿಶ್ವಸಂಸ್ಥೆಯ ಮಾಜಿ ಮಾನವ ಹಕ್ಕುಗಳ ಹೈಕಮಿಷನರ್ ನವಿ ಪಿಳ್ಳೈ ಮತ್ತೊಮ್ಮೆ ಬದ್ಧತೆ ವ್ಯಕ್ತಪಡಿಸಿದ್ದಾರೆ. ಗಾಜಾದಲ್ಲಿ ನಡೆದಿರುವ ಸಾಮೂಹಿಕ ಹತ್ಯೆಗಳು, ಮನೆಗಳು ಮತ್ತು ಮೂಲಸೌಕರ್ಯಗಳ ವ್ಯಾಪಕ ನಾಶ, ಆಸ್ಪತ್ರೆಗಳು, ಶಾಲೆಗಳು, ಕೃಷಿಭೂಮಿ ಸೇರಿದಂತೆ ಜನರ ಬದುಕಿಗೆ ಅಗತ್ಯವಾದ ವ್ಯವಸ್ಥೆಗಳನ್ನೇ ಧ್ವಂಸಗೊಳಿಸಿರುವುದು ಇಸ್ರೇಲ್‌ನ ನರಮೇಧದ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ ಎಂದು ಅವರು ಹೇಳಿದ್ದಾರೆ. 

ಈ ಕುರಿತು ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿರುವ ತಮ್ಮ ನಿವಾಸದಲ್ಲಿ ‘ಹಾರೆಟ್ಜ್’ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ವಿಶ್ವಸಂಸ್ಥೆಯ ಸ್ವತಂತ್ರ ತನಿಖಾ ಆಯೋಗ ಮಂಡಿಸಿರುವ ವರದಿಯಲ್ಲಿನ ತೀರ್ಮಾನಗಳ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ವಿಶ್ವಸಂಸ್ಥೆಯ ಸ್ವತಂತ್ರ ಅಂತರರಾಷ್ಟ್ರೀಯ ತನಿಖಾ ಆಯೋಗದ ಅಧ್ಯಕ್ಷತೆ ವಹಿಸಿದ್ದ ನವಿ ಪಿಳ್ಳೈ, 2025ರ ಸೆಪ್ಟೆಂಬರ್‌ನಲ್ಲಿ ಪ್ರಕಟವಾದ ಆಯೋಗದ ವರದಿಯಲ್ಲಿ ಇಸ್ರೇಲ್ ಗಾಜಾದಲ್ಲಿ ನರಮೇಧ ನಡೆಸಿರುವುದಕ್ಕೆ ಸಾಕ್ಷ್ಯಗಳಿವೆ ಎಂಬ ತೀರ್ಮಾನಕ್ಕೆ ಬಂದಿದ್ದರು. ಇದೀಗ ಆ ತೀರ್ಮಾನವನ್ನು ಸಮರ್ಥಿಸಿಕೊಂಡಿರುವ ಅವರು, ಆಯೋಗದ ವರದಿಯು ಕೇವಲ ರಾಜಕೀಯ ಅಭಿಪ್ರಾಯ ಅಥವಾ ಆರೋಪಗಳ ಆಧಾರದ ಮೇಲೆ ರೂಪುಗೊಂಡಿಲ್ಲ. ಬದಲಿಗೆ, ಗಾಜಾದಲ್ಲಿ ಇಸ್ರೇಲ್ ನಡೆಸಿದ ದಾಳಿಗಳ ನಿರಂತರ ಮಾದರಿ, ಪ್ಯಾಲೆಸ್ಟೀನಿಯನ್ನರ ಮೇಲೆ ಉಂಟಾದ ಪರಿಣಾಮಗಳು, ನಾಗರಿಕರ ಬದುಕುಳಿಯುವ ಪರಿಸ್ಥಿತಿಗಳ ನಾಶ ಮತ್ತು ಇಸ್ರೇಲ್‌ನ ಉನ್ನತ ನಾಯಕರು ನೀಡಿರುವ ಹೇಳಿಕೆಗಳನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ವಿವರಿಸಿದ್ದಾರೆ.

85 ವರ್ಷದ ನವಿ ಪಿಳ್ಳೈ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ (ಐಸಿಸಿ) ಮಾಜಿ ನ್ಯಾಯಾಧೀಶರಾಗಿದ್ದು, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ರುವಾಂಡಾದ ನರಮೇಧ ಪ್ರಕರಣಗಳ ವಿಚಾರಣೆಯಲ್ಲಿಯೂ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿರುವ ಅನುಭವ ಅವರಿಗಿದೆ. ಮ್ಯಾನ್ಮಾರ್ ವಿರುದ್ಧ ಗ್ಯಾಂಬಿಯಾ ಸಲ್ಲಿಸಿರುವ ರೋಹಿಂಗ್ಯಾ ನರಮೇಧ ಪ್ರಕರಣದಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ತಾತ್ಕಾಲಿಕ ನ್ಯಾಯಾಧೀಶರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಅಂತರರಾಷ್ಟ್ರೀಯ ಕಾನೂನು ಮತ್ತು ಮಾನವ ಹಕ್ಕುಗಳ ರಕ್ಷಣೆಗೆ ನೀಡಿರುವ ಕೊಡುಗೆಗಳಿಗಾಗಿ 2026ರ ನೊಬೆಲ್ ಶಾಂತಿ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ.

ನವಿ ಪಿಳ್ಳೈ ಅಧ್ಯಕ್ಷತೆಯ ಆಯೋಗದ ವರದಿಯ ಪ್ರಕಾರ, ಗಾಜಾದಲ್ಲಿ ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಸುಮಾರು 75,000 ಪ್ಯಾಲೆಸ್ಟೀನಿಯನ್ನರು ಹತ್ಯೆಯಾಗಿದ್ದಾರೆ. ಬಹುತೇಕ ಎಲ್ಲ ಮನೆಗಳು ಮತ್ತು ನಿರ್ಣಾಯಕ ಮೂಲಸೌಕರ್ಯಗಳು ನಾಶವಾಗಿದ್ದು, ಆಸ್ಪತ್ರೆಗಳು, ಶಾಲೆಗಳು, ಕೃಷಿಭೂಮಿ, ಮೀನುಗಾರಿಕಾ ಸೌಲಭ್ಯಗಳು ಸೇರಿದಂತೆ ಜನರ ಬದುಕುಳಿಯಲು ಅಗತ್ಯವಾದ ವ್ಯವಸ್ಥೆಗಳನ್ನು ವ್ಯವಸ್ಥಿತವಾಗಿ ಧ್ವಂಸಗೊಳಿಸಲಾಗಿದೆ. ಈ ವಿನಾಶದ ಪ್ರಮಾಣವನ್ನು ಇಸ್ರೇಲ್ ಘೋಷಿಸಿರುವ ಮಿಲಿಟರಿ ಉದ್ದೇಶಗಳೊಂದಿಗೆ ಹೋಲಿಸಿದಾಗ, ದಾಳಿಗಳು ಕೇವಲ ಹಮಾಸ್ ವಿರುದ್ಧದ ಕಾರ್ಯಾಚರಣೆಗೆ ಸೀಮಿತವಾಗಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ನರಮೇಧದ ಉದ್ದೇಶವನ್ನು ನಿರ್ಧರಿಸುವಾಗ ಇಸ್ರೇಲ್‌ನ ರಾಜಕೀಯ ಮತ್ತು ಮಿಲಿಟರಿ ನಾಯಕರ ಹೇಳಿಕೆಗಳನ್ನೂ ಆಯೋಗ ಪರಿಶೀಲಿಸಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು, ಆಗಿನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಮತ್ತು ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರ ಹೇಳಿಕೆಗಳನ್ನು ಗಾಜಾದಲ್ಲಿನ ದಾಳಿಗಳ ಒಟ್ಟಾರೆ ಸ್ವರೂಪದೊಂದಿಗೆ ವಿಶ್ಲೇಷಿಸಲಾಗಿದೆ. ಈ ಮೂವರು ನಾಯಕರ ವಿರುದ್ಧ ನರಮೇಧಕ್ಕೆ ಪ್ರಚೋದನೆ ನೀಡಿದ ಆರೋಪದ ಕುರಿತು ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಯೋಗ ಶಿಫಾರಸು ಮಾಡಿತ್ತು. ನಾಯಕರ ಹೇಳಿಕೆಗಳು ಮತ್ತು ನೆಲಮಟ್ಟದಲ್ಲಿ ನಡೆದಿರುವ ಕೃತ್ಯಗಳನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಅವುಗಳನ್ನು ಒಟ್ಟಾಗಿ ಪರಿಶೀಲಿಸಿದಾಗ ಪ್ಯಾಲೆಸ್ಟೀನಿಯನ್ನರನ್ನು ಒಂದು ಸಮುದಾಯವಾಗಿ ನಾಶಪಡಿಸುವ ಉದ್ದೇಶದ ಪುರಾವೆಗಳು ಸಿಗುತ್ತವೆ ಎಂದು ಪಿಳ್ಳೈ ಹೇಳಿದ್ದಾರೆ.

ನರಮೇಧವನ್ನು ಸಾಬೀತುಪಡಿಸಲು ಒಂದು ನಿರ್ದಿಷ್ಟ ಸಂಖ್ಯೆಯ ಜನರು ಹತ್ಯೆಯಾಗಿರಬೇಕು ಎಂಬ ಪೂರ್ವಾಪೇಕ್ಷಿತವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನರಮೇಧದ ಉದ್ದೇಶವನ್ನು ಸಾಬೀತುಪಡಿಸಲು ಸಾಧ್ಯವಾದರೆ, ಒಬ್ಬ ವ್ಯಕ್ತಿಯ ಹತ್ಯೆಯೂ ನರಮೇಧದ ಕೃತ್ಯವಾಗಬಹುದು ಎಂಬುದು ಅವರ ವಾದ. ನರಮೇಧ ಸಮಾವೇಶವು ಒಂದು ಸಂರಕ್ಷಿತ ಜನಸಮುದಾಯವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ನಾಶಪಡಿಸುವುದನ್ನು ಅಪರಾಧವೆಂದು ಪರಿಗಣಿಸುತ್ತದೆ. ಹೀಗಾಗಿ, ಒಂದು ಸಮುದಾಯದ ಎಲ್ಲ ಸದಸ್ಯರನ್ನು ಹತ್ಯೆ ಮಾಡಿಲ್ಲ ಎಂಬ ಕಾರಣಕ್ಕೆ ನರಮೇಧದ ಆರೋಪದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

“ನಾನು ಎಲ್ಲರನ್ನೂ ಕೊಲ್ಲಲಿಲ್ಲ ಎಂದು ಹೇಳುವುದು ನರಮೇಧಕ್ಕೆ ಸಮರ್ಥನೆಯಾಗುವುದಿಲ್ಲ. ಇದು ಸಂಪೂರ್ಣವಾಗಿ ತಪ್ಪಾದ ಚಿಂತನೆ. ಯಾವುದೇ ನ್ಯಾಯಾಲಯ ಇದನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ನನಗೆ ಅನಿಸುವುದಿಲ್ಲ” ಎಂಬ ಅರ್ಥದಲ್ಲಿ ಪಿಳ್ಳೈ ತಮ್ಮ ಸಂದರ್ಶನದಲ್ಲಿ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ನರಮೇಧವನ್ನು ತಡೆಯುವಲ್ಲಿ ವಿಫಲವಾಗುವುದೂ ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಗಂಭೀರ ಹೊಣೆಗಾರಿಕೆಗೆ ಕಾರಣವಾಗುತ್ತದೆ ಎಂದು ಅವರು ಒತ್ತಿಹೇಳಿದ್ದಾರೆ.

ನಾಗರಿಕರ ಸಾವಿಗೆ ಕಾರಣವಾಗುವ ಶಸ್ತ್ರಾಸ್ತ್ರಗಳ ಬಳಕೆ ಮುಂದುವರಿಕೆ

ಗಾಜಾದಲ್ಲಿ ಇಸ್ರೇಲ್ ನಡೆಸಿದ ಮಿಲಿಟರಿ ಕಾರ್ಯಾಚರಣೆಗಳ ಸ್ವರೂಪವನ್ನು ವಿವರಿಸಿರುವ ಪಿಳ್ಳೈ, ನಾಗರಿಕರ ಜೀವಹಾನಿ ಕೇವಲ ಆಕಸ್ಮಿಕವಾಗಿ ಸಂಭವಿಸಿದ ಪರಿಣಾಮವಲ್ಲ ಎಂಬ ಆಯೋಗದ ವಾದವನ್ನು ಮುಂದಿಟ್ಟಿದ್ದಾರೆ. ವಿಶೇಷವಾಗಿ ವೈಮಾನಿಕ ಬಾಂಬ್ ದಾಳಿಗಳ ಮೂಲಕ ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿರುವುದನ್ನು ಅವರು ಪ್ರಶ್ನಿಸಿದ್ದಾರೆ. ಇಂತಹ ದಾಳಿಗಳಲ್ಲಿ ಮಕ್ಕಳು, ಮಹಿಳೆಯರು ಮತ್ತು ಇತರ ನಾಗರಿಕರು ಸಾವನ್ನಪ್ಪುವ ಸಾಧ್ಯತೆ ಬಹಳ ಹೆಚ್ಚಿದ್ದರೂ ಇಸ್ರೇಲ್ ತನ್ನ ದಾಳಿಗಳನ್ನು ಮುಂದುವರಿಸಿದೆ ಎಂದು ಹೇಳಿದ್ದಾರೆ.

“ನೀವು ವೈಮಾನಿಕ ಬಾಂಬ್ ದಾಳಿಗಳನ್ನು ಬಳಸಿದಾಗ ಅದು ವಿವೇಚನಾರಹಿತ ಹತ್ಯೆಯಾಗುತ್ತದೆ. ಅಲ್ಲಿ ಮಕ್ಕಳು ಇದ್ದಾರೆಯೇ, ಮಹಿಳೆಯರು ಇದ್ದಾರೆಯೇ ಎಂಬುದನ್ನು ಪರಿಗಣಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ. ಹೆಚ್ಚಿನ ಸಂಖ್ಯೆಯ ಜನರನ್ನು ಕೊಲ್ಲುವ ಸಾಮರ್ಥ್ಯ ಹೊಂದಿರುವ ಶಸ್ತ್ರಾಸ್ತ್ರಗಳನ್ನು ಇಸ್ರೇಲ್ ಬಳಸಿರುವುದನ್ನು ಆಯೋಗ ತನ್ನ ವರದಿಯಲ್ಲಿ ವಿವರಿಸಿದೆ ಎಂದೂ ತಿಳಿಸಿದ್ದಾರೆ.

ಇಸ್ರೇಲ್‌ನ ಮಿಲಿಟರಿ ಅಧಿಕಾರಿಗಳಿಗೆ ತಮ್ಮ ಕಾರ್ಯಾಚರಣೆಗಳಿಂದ ದೊಡ್ಡ ಪ್ರಮಾಣದಲ್ಲಿ ನಾಗರಿಕರು ಹತ್ಯೆಯಾಗಲಿದ್ದಾರೆ ಎಂಬ ಅರಿವಿತ್ತು. ಆದರೂ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದ್ದರೂ ಅದೇ ರೀತಿಯ ಶಸ್ತ್ರಾಸ್ತ್ರ ಮತ್ತು ದಾಳಿಯ ವಿಧಾನಗಳನ್ನು ಮುಂದುವರಿಸಲಾಗಿದೆ ಎಂಬುದು ಆಯೋಗದ ಕಾನೂನು ತಂಡದ ವಾದವಾಗಿದೆ. ಗಾಜಾದ ಜನರಿಗೆ ಯುದ್ಧಪೀಡಿತ ಪ್ರದೇಶದಿಂದ ಹೊರಬರಲು ಪರಿಣಾಮಕಾರಿ ಮಾರ್ಗಗಳೇ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಿರಂತರ ಬಾಂಬ್ ದಾಳಿಗಳನ್ನು ನಡೆಸಿರುವುದು ನಾಗರಿಕರ ಜೀವವನ್ನು ಸಂಪೂರ್ಣವಾಗಿ ಕಡೆಗಣಿಸಿದ ಕ್ರಮವಾಗಿದೆ ಎಂದು ಪಿಳ್ಳೈ ಅಭಿಪ್ರಾಯಪಟ್ಟಿದ್ದಾರೆ.

ಗಾಜಾದಲ್ಲಿ ಅಗತ್ಯ ಔಷಧಗಳ ಪೂರೈಕೆಯನ್ನು ನಿರ್ಬಂಧಿಸಿರುವುದು, ಆಂಬ್ಯುಲೆನ್ಸ್ ಸಿಬ್ಬಂದಿ, ಪತ್ರಕರ್ತರು ಸೇರಿದಂತೆ ನಾಗರಿಕ ಸೇವೆಗಳಲ್ಲಿ ತೊಡಗಿರುವವರ ಮೇಲಿನ ದಾಳಿಗಳ ಬಗ್ಗೆಯೂ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತುರ್ತು ವೈದ್ಯಕೀಯ ನೆರವು ಸಿಗದೆ ಜನರು ಸಾವನ್ನಪ್ಪುವ ಪರಿಸ್ಥಿತಿಯನ್ನು ಹೇಗೆ ಸಮರ್ಥಿಸಿಕೊಳ್ಳಲು ಸಾಧ್ಯ? ಆಂಬ್ಯುಲೆನ್ಸ್ ಸಿಬ್ಬಂದಿ ಮತ್ತು ಪತ್ರಕರ್ತರನ್ನು ಗುರಿಯಾಗಿಸುವುದಕ್ಕೆ ಯಾವ ಕಾರಣ ನೀಡಲು ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ. ಯುದ್ಧದ ಸಂದರ್ಭದಲ್ಲಿ ಗಾಯಾಳುಗಳನ್ನು ರಕ್ಷಿಸುವ ಮತ್ತು ಜನರಿಗೆ ಅಗತ್ಯ ಮಾಹಿತಿ ಒದಗಿಸುವ ಕೆಲಸದಲ್ಲಿ ತೊಡಗಿರುವವರ ಮೇಲಿನ ದಾಳಿಗಳು ಮಾನವೀಯತೆಯ ಮೂಲತತ್ವಗಳನ್ನೇ ಉಲ್ಲಂಘಿಸುತ್ತವೆ ಎಂಬುದು ಅವರ ಮಾತುಗಳ ಸಾರವಾಗಿದೆ.

ಪ್ಯಾಲೆಸ್ಟೀನಿಯನ್ ಬಂಧಿತರ ಮೇಲೆ ಚಿತ್ರಹಿಂಸೆ ಮತ್ತು ಅಮಾನವೀಯ ಹಿಂಸೆ ನಡೆಸಲಾಗಿದೆ ಎಂಬ ಆರೋಪಗಳನ್ನೂ ಪಿಳ್ಳೈ ಪ್ರಸ್ತಾಪಿಸಿದ್ದಾರೆ. ಇಸ್ರೇಲಿ ಸೈನಿಕರು ಬಿಡುಗಡೆ ಮಾಡಿರುವ ಕೆಲವು ವಿಡಿಯೊ ದೃಶ್ಯಗಳನ್ನು ತಾವು ವೀಕ್ಷಿಸಿರುವುದಾಗಿ ತಿಳಿಸಿರುವ ಅವರು, ಬಂಧಿತರ ಮೇಲೆ ಸೈನಿಕರು ಅಥವಾ ಅವರ ಬೆಂಬಲಿಗರು ಮೂತ್ರ ವಿಸರ್ಜನೆ ಮಾಡುವಂತಹ ಅವಮಾನಕರ ಕೃತ್ಯಗಳೂ ದೃಶ್ಯಗಳಲ್ಲಿ ಕಾಣಿಸಿಕೊಂಡಿವೆ ಎಂದು ಹೇಳಿದ್ದಾರೆ. ಬಂಧಿತರ ಮೇಲಿನ ಇಂತಹ ವರ್ತನೆಗಳು ಕೇವಲ ದೈಹಿಕ ಹಿಂಸೆಯಲ್ಲ, ಅವರ ಮಾನವ ಘನತೆಯನ್ನೇ ನಾಶಪಡಿಸುವ ಕ್ರೌರ್ಯವಾಗಿದೆ ಎಂಬ ಗಂಭೀರ ಪ್ರಶ್ನೆಯನ್ನು ಅವರು ಎತ್ತಿದ್ದಾರೆ.

ಫಲವತ್ತತೆ ಚಿಕಿತ್ಸಾಲಯದ ನಾಶವೂ ನರಮೇಧದ ಭಾಗ ಎಂಬ ಆರೋಪ

ಗಾಜಾದಲ್ಲಿನ ಏಕೈಕ ಫಲವತ್ತತೆ ಚಿಕಿತ್ಸಾಲಯದ ನಾಶವನ್ನು ಆಯೋಗ ತನ್ನ ವರದಿಯಲ್ಲಿ ಅತ್ಯಂತ ಗಂಭೀರವಾಗಿ ಪರಿಶೀಲಿಸಿದೆ. ಈ ಚಿಕಿತ್ಸಾಲಯದಲ್ಲಿ ಸುಮಾರು 5,000 ಭ್ರೂಣಗಳು ಮತ್ತು ಇತರ ಸಂತಾನೋತ್ಪತ್ತಿ ಸಂಬಂಧಿತ ವಸ್ತುಗಳನ್ನು ಸಂಗ್ರಹಿಸಲಾಗಿತ್ತು. ಚಿಕಿತ್ಸಾಲಯದ ನಾಶದಿಂದ ಪ್ಯಾಲೆಸ್ಟೀನಿಯನ್ ಕುಟುಂಬಗಳ ಸಂತಾನೋತ್ಪತ್ತಿ ಸಾಮರ್ಥ್ಯಕ್ಕೆ ಮತ್ತು ಮುಂದಿನ ಪೀಳಿಗೆಯ ಅಸ್ತಿತ್ವಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ಈ ಘಟನೆಯನ್ನು ಕೇವಲ ಮಿಲಿಟರಿ ಕಾರ್ಯಾಚರಣೆಯ ಭಾಗವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪಿಳ್ಳೈ ಹೇಳಿದ್ದಾರೆ. ಹಮಾಸ್ ಹೋರಾಟಗಾರರನ್ನು ಪತ್ತೆಹಚ್ಚುವ ಉದ್ದೇಶದಿಂದ ಅಥವಾ ಮಿಲಿಟರಿ ಅಗತ್ಯಕ್ಕಾಗಿ ಈ ಚಿಕಿತ್ಸಾಲಯವನ್ನು ನಾಶಪಡಿಸಲಾಗಿದೆ ಎಂಬ ಇಸ್ರೇಲ್‌ನ ಸಮರ್ಥನೆಗಳನ್ನು ಅವರು ಪ್ರಶ್ನಿಸಿದ್ದಾರೆ. ಸಂತಾನೋತ್ಪತ್ತಿಗೆ ಸಂಬಂಧಿಸಿದ ವಸ್ತುಗಳನ್ನೇ ಗುರಿಯಾಗಿಸಿಕೊಂಡು ನಾಶಪಡಿಸುವುದನ್ನು ಯಾವ ಮಿಲಿಟರಿ ಅಗತ್ಯದ ಹೆಸರಿನಲ್ಲಿ ಸಮರ್ಥಿಸಿಕೊಳ್ಳಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ. ಪ್ಯಾಲೆಸ್ಟೀನಿಯನ್ನರಲ್ಲಿ ಜನನಗಳನ್ನು ತಡೆಯುವ ಉದ್ದೇಶದ ಕೃತ್ಯವಾಗಿ ಆಯೋಗ ಈ ಘಟನೆಯನ್ನು ಪರಿಗಣಿಸಿದೆ.

ಒಂದು ಜನಸಮುದಾಯದ ಅಸ್ತಿತ್ವವನ್ನು ನಾಶಪಡಿಸುವುದು ಎಂದರೆ ಕೇವಲ ಆ ಸಮುದಾಯದ ಸದಸ್ಯರನ್ನು ಹತ್ಯೆ ಮಾಡುವುದಷ್ಟೇ ಅಲ್ಲ. ಅವರ ಕುಟುಂಬ ವ್ಯವಸ್ಥೆ, ಮುಂದಿನ ಪೀಳಿಗೆಯ ಬೆಳವಣಿಗೆ ಮತ್ತು ಬದುಕು ಮುಂದುವರಿಯಲು ಅಗತ್ಯವಾದ ಪರಿಸ್ಥಿತಿಗಳನ್ನು ನಾಶಪಡಿಸುವುದೂ ಅದರ ಭಾಗವಾಗಬಹುದು ಎಂಬ ಅಂತರರಾಷ್ಟ್ರೀಯ ನರಮೇಧ ಕಾನೂನಿನ ವ್ಯಾಖ್ಯಾನವನ್ನು ಈ ಪ್ರಕರಣ ಮುನ್ನೆಲೆಗೆ ತಂದಿದೆ.

ತನಿಖೆಗೆ ಗಾಜಾ ಪ್ರವೇಶ ನಿರಾಕರಣೆ; ಅಂತರರಾಷ್ಟ್ರೀಯ ಮಾಧ್ಯಮಗಳಿಗೆ ಅವಕಾಶ ನೀಡಲು ಆಗ್ರಹ

ವಿಶ್ವಸಂಸ್ಥೆಯ ತನಿಖಾ ಆಯೋಗಕ್ಕೆ ಗಾಜಾವನ್ನು ಪ್ರವೇಶಿಸಿ ನೇರವಾಗಿ ತನಿಖೆ ನಡೆಸಲು ಇಸ್ರೇಲ್ ಅವಕಾಶ ನೀಡಲಿಲ್ಲ ಎಂದು ನವಿ ಪಿಳ್ಳೈ ಆರೋಪಿಸಿದ್ದಾರೆ. ಸ್ವತಂತ್ರ ಅಂತರರಾಷ್ಟ್ರೀಯ ತನಿಖೆಗೆ ಸಹಕರಿಸುವ ಬದಲು, ಇಸ್ರೇಲ್ ಸರ್ಕಾರ ಪರಿಶೀಲನೆಯನ್ನೇ ನಿರ್ಬಂಧಿಸಿರುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ. ಆಯೋಗವು ತನ್ನ ವರದಿಯನ್ನು ಸಿದ್ಧಪಡಿಸಲು ಸುಮಾರು ಎರಡು ವರ್ಷಗಳ ಕಾಲ ಲಭ್ಯವಿರುವ ಸಾಕ್ಷ್ಯಗಳು, ಹೇಳಿಕೆಗಳು ಮತ್ತು ಇತರ ದಾಖಲೆಗಳನ್ನು ಪರಿಶೀಲಿಸಿದೆ ಎಂದು ತಿಳಿಸಿದ್ದಾರೆ.

ಗಾಜಾದಲ್ಲಿನ ವಾಸ್ತವ ಪರಿಸ್ಥಿತಿಯನ್ನು ಜಗತ್ತಿನ ಮುಂದೆ ತರುವುದಕ್ಕೆ ಅಂತರರಾಷ್ಟ್ರೀಯ ಮಾಧ್ಯಮಗಳಿಗೂ ಮುಕ್ತ ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. “ಅವರು ಅಂತರರಾಷ್ಟ್ರೀಯ ಮಾಧ್ಯಮಗಳನ್ನು ಒಳಗೆ ಬಿಡಬೇಕು. ಸರ್ಕಾರ ಅಂತರರಾಷ್ಟ್ರೀಯ ಪರಿಶೀಲನೆಯನ್ನು ಏಕೆ ನಿರ್ಬಂಧಿಸಬೇಕು? ನಮ್ಮನ್ನು ತನಿಖೆ ನಡೆಸದಂತೆ ತಡೆಯಲು ಕಾರಣವೇನು?” ಎಂದು ಅವರು ಪ್ರಶ್ನಿಸಿದ್ದಾರೆ.

ಗಾಜಾದಲ್ಲಿ ನಡೆದಿರುವ ದಾಳಿಗಳು ಮತ್ತು ಮಾನವೀಯ ಬಿಕ್ಕಟ್ಟಿನ ಕುರಿತು ಸ್ವತಂತ್ರವಾಗಿ ಪರಿಶೀಲಿಸುವ ಅವಕಾಶವೇ ಇಲ್ಲದಂತೆ ಮಾಡುವುದು ಗಂಭೀರ ಅನುಮಾನಗಳಿಗೆ ಕಾರಣವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ. ವಿಶ್ವಸಂಸ್ಥೆಯ ಆಯೋಗವು ತನ್ನ ವರದಿಯಲ್ಲಿ ಸೇರಿಸಿರುವ ಪ್ರತಿಯೊಂದು ಪ್ರಮುಖ ಅಂಶವನ್ನೂ ಪರಿಶೀಲನೆ ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ದಾಖಲಿಸಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲೂ ಇಸ್ರೇಲ್‌ನ ಕಾನೂನುಬಾಹಿರ ಕ್ರಮಗಳು

ಗಾಜಾದಲ್ಲಿನ ದಾಳಿಗಳಷ್ಟೇ ಅಲ್ಲದೆ, ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲ್ ನಡೆಸುತ್ತಿರುವ ಕ್ರಮಗಳನ್ನೂ ವಿಶ್ವಸಂಸ್ಥೆಯ ಆಯೋಗ ಪರಿಶೀಲಿಸಿದೆ. 2022ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ, ಪ್ಯಾಲೆಸ್ಟೀನಿಯನ್ ಪ್ರದೇಶಗಳ ಮೇಲಿನ ಇಸ್ರೇಲ್‌ನ ಆಕ್ರಮಣದ ಕಾನೂನುಬದ್ಧತೆಯ ಕುರಿತು ಅಂತರರಾಷ್ಟ್ರೀಯ ನ್ಯಾಯಾಲಯದಿಂದ ಸಲಹಾ ಅಭಿಪ್ರಾಯ ಪಡೆಯಲು ಶಿಫಾರಸು ಮಾಡಿತ್ತು. ಅದರಂತೆ 2024ರಲ್ಲಿ ನೀಡಿದ ಅಭಿಪ್ರಾಯದಲ್ಲಿ, ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲ್‌ನ ನಿರಂತರ ಉಪಸ್ಥಿತಿ ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಕಾನೂನುಬಾಹಿರವಾಗಿದೆ ಎಂದು ಅಂತರರಾಷ್ಟ್ರೀಯ ನ್ಯಾಯಾಲಯ ಸ್ಪಷ್ಟಪಡಿಸಿತ್ತು. ಅಲ್ಲದೆ, ಇಸ್ರೇಲ್‌ನ ನೀತಿಗಳು ಮತ್ತು ಕಾರ್ಯವೈಖರಿಗಳು ಪ್ಯಾಲೆಸ್ಟೀನಿಯನ್ನರ ಹಕ್ಕುಗಳನ್ನು ಉಲ್ಲಂಘಿಸುತ್ತಿವೆ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ಇದಕ್ಕೂ ಮೊದಲು 2021ರ ಗಾಜಾ ಸಂಘರ್ಷದ ಕುರಿತು ಆಯೋಗ 2023ರಲ್ಲಿ ಪ್ರಕಟಿಸಿದ್ದ ವರದಿಯಲ್ಲಿಯೂ ಇಸ್ರೇಲಿ ಸೇನೆ ಮತ್ತು ಪೊಲೀಸರ ಕ್ರಮಗಳನ್ನು ಟೀಕಿಸಿತ್ತು. ವಿಶೇಷವಾಗಿ ಪ್ಯಾಲೆಸ್ಟೀನಿಯನ್ ಪ್ರತಿಭಟನಾಕಾರರ ವಿರುದ್ಧ ಬಲಪ್ರಯೋಗ ಮಾಡಿರುವುದನ್ನು ಪ್ರಶ್ನಿಸಿತ್ತು. ಆದರೆ, 2025ರ ಸೆಪ್ಟೆಂಬರ್‌ನಲ್ಲಿ ಪ್ರಕಟಿಸಿದ ನರಮೇಧದ ಕುರಿತ ವರದಿಯ ತೀರ್ಮಾನವನ್ನು ಆಕ್ರಮಿತ ಪಶ್ಚಿಮ ದಂಡೆಗೂ ವಿಸ್ತರಿಸಿರಲಿಲ್ಲ. ಗಾಜಾದಲ್ಲಿನ ಪರಿಸ್ಥಿತಿಯ ಕುರಿತು ಮಾತ್ರ ನರಮೇಧದ ತೀರ್ಮಾನವನ್ನು ಮಂಡಿಸಿತ್ತು. ಹೀಗಾಗಿ, ಪಶ್ಚಿಮ ದಂಡೆಯಲ್ಲಿನ ಇಸ್ರೇಲ್‌ನ ಕ್ರಮಗಳ ಕುರಿತು ಪ್ರತ್ಯೇಕ ಕಾನೂನು ಪರಿಶೀಲನೆಯ ಅಗತ್ಯ ಇನ್ನೂ ಉಳಿದಿದೆ.

ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಹೊರಡಿಸಿರುವ ಬಂಧನ ವಾರಂಟ್‌ಗಳ ವಿಚಾರದಲ್ಲಿಯೂ ನವಿ ಪಿಳ್ಳೈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ನ್ಯಾಯ ವ್ಯವಸ್ಥೆಯ ಮೂಲಕ ಅಪರಾಧಗಳಿಗೆ ಹೊಣೆಗಾರರನ್ನು ಗುರುತಿಸಿ ಶಿಕ್ಷಿಸುವ ಪ್ರಕ್ರಿಯೆ ದೀರ್ಘವಾಗಬಹುದು. ಆದರೆ, ಅದಕ್ಕಾಗಿ ನ್ಯಾಯದ ಬೇಡಿಕೆಯನ್ನು ಕೈಬಿಡಲು ಸಾಧ್ಯವಿಲ್ಲ. ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಹೊರಡಿಸಿರುವ ಬಂಧನ ವಾರಂಟ್‌ಗಳ ಆಧಾರದ ಮೇಲೆ ಸಂಬಂಧಪಟ್ಟ ರಾಷ್ಟ್ರಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

“ನ್ಯಾಯ ಎನ್ನುವುದು ನಿಧಾನವಾಗಿ ಸಾಗುವ ಪ್ರಕ್ರಿಯೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ” ಎಂದು ಹೇಳಿರುವ ಅವರು, ನ್ಯಾಯ ವಿಳಂಬವಾಗುತ್ತಿದೆ ಎಂಬ ಕಾರಣಕ್ಕೆ ಗಂಭೀರ ಅಪರಾಧಗಳ ವಿರುದ್ಧದ ಕ್ರಮಗಳನ್ನು ಕೈಬಿಡಬಾರದು ಎಂದು ಪ್ರತಿಪಾದಿಸಿದ್ದಾರೆ.

ಇಸ್ರೇಲ್ ವಿರುದ್ಧ ದಕ್ಷಿಣ ಆಫ್ರಿಕಾ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ದಾಖಲಿಸಿರುವ ನರಮೇಧ ಪ್ರಕರಣದ ಅಂತಿಮ ತೀರ್ಪಿಗೂ ಇನ್ನೂ ಹಲವು ವರ್ಷಗಳು ಬೇಕಾಗಬಹುದು. ಅದೇ ರೀತಿ ರೋಹಿಂಗ್ಯಾ ಮುಸ್ಲಿಮರ ನರಮೇಧದ ಆರೋಪಕ್ಕೆ ಸಂಬಂಧಿಸಿದಂತೆ ಗ್ಯಾಂಬಿಯಾ ಮ್ಯಾನ್ಮಾರ್ ವಿರುದ್ಧ ದಾಖಲಿಸಿರುವ ಪ್ರಕರಣದಲ್ಲಿಯೂ ಅಂತರರಾಷ್ಟ್ರೀಯ ನ್ಯಾಯಾಲಯದ ತೀರ್ಪಿನ ನಿರೀಕ್ಷೆಯಿದೆ. ನವೆಂಬರ್ 19ರಂದು ಈ ಪ್ರಕರಣದಲ್ಲಿ ತೀರ್ಪು ಹೊರಬೀಳುವ ನಿರೀಕ್ಷೆಯಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣದಲ್ಲಿ ನರಮೇಧದ ಕುರಿತು ನ್ಯಾಯಾಲಯ ನೀಡುವ ತೀರ್ಮಾನವು ಇಸ್ರೇಲ್‌ಗೆ ಸಂಬಂಧಿಸಿದಂತೆ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳ ಮೇಲೂ ಪರಿಣಾಮ ಬೀರಬಹುದು ಎಂದು ಅಂತರರಾಷ್ಟ್ರೀಯ ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ನವಿ ಪಿಳ್ಳೈ ನೇತೃತ್ವದ ವಿಶ್ವಸಂಸ್ಥೆಯ ತನಿಖಾ ಆಯೋಗದ ವರದಿಯು ನ್ಯಾಯಾಲಯದ ಅಂತಿಮ ತೀರ್ಪಲ್ಲ ಎಂಬುದನ್ನು ಗಮನಿಸಬೇಕಿದೆ. ಅದು ಸಾಕ್ಷ್ಯಗಳು ಮತ್ತು ಕಾನೂನು ವಿಶ್ಲೇಷಣೆಯ ಆಧಾರದ ಮೇಲೆ ಆಯೋಗ ಮಂಡಿಸಿರುವ ತೀರ್ಮಾನವಾಗಿದೆ. ಇಸ್ರೇಲ್ ಈ ಆರೋಪಗಳನ್ನು ತಿರಸ್ಕರಿಸಿದೆ. ನರಮೇಧದ ಆರೋಪದ ಕುರಿತು ಅಂತಿಮ ನ್ಯಾಯಾಂಗ ನಿರ್ಧಾರವನ್ನು ಅಂತರರಾಷ್ಟ್ರೀಯ ನ್ಯಾಯಾಲಯದಂತಹ ಸಮರ್ಥ ನ್ಯಾಯಾಂಗ ಸಂಸ್ಥೆಗಳೇ ನೀಡಬೇಕಿದೆ.

ಕದನ ವಿರಾಮದ ನಡುವೆಯೂ ಮುಂದುವರಿದ ದಾಳಿಗಳು; 74 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರ ಸಾವು

ಇಷ್ಟೆಲ್ಲ ಅಂತರರಾಷ್ಟ್ರೀಯ ಚರ್ಚೆಗಳು, ತನಿಖೆಗಳು ಮತ್ತು ಕಾನೂನು ಪ್ರಕ್ರಿಯೆಗಳು ನಡೆಯುತ್ತಿದ್ದರೂ ಗಾಜಾದಲ್ಲಿ ಪ್ಯಾಲೆಸ್ಟೀನಿಯನ್ನರ ಸಂಕಷ್ಟ ಕೊನೆಗೊಂಡಿಲ್ಲ. ಕದನ ವಿರಾಮ ಜಾರಿಯಲ್ಲಿದ್ದರೂ ಇಸ್ರೇಲಿ ಪಡೆಗಳು ದಾಳಿಗಳನ್ನು ಮುಂದುವರಿಸಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇತ್ತೀಚಿನ ಘಟನೆಯೊಂದರಲ್ಲಿ ಖಾನ್ ಯೂನಿಸ್‌ನಲ್ಲಿರುವ ನಾಸರ್ ಆಸ್ಪತ್ರೆಯ ತೀವ್ರ ನಿಗಾ ಘಟಕದ ಮೇಲೆ ಇಸ್ರೇಲಿ ದಾಳಿ ನಡೆದಿದ್ದು, ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ. ವೈದ್ಯಕೀಯ ಸಿಬ್ಬಂದಿ ಸೇರಿದಂತೆ 20 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದ ನಾಗರಿಕ ರಕ್ಷಣಾ ಇಲಾಖೆ ತಿಳಿಸಿದೆ. ಆಸ್ಪತ್ರೆಗಳೇ ದಾಳಿಗೆ ಒಳಗಾಗುತ್ತಿರುವುದು ಗಾಜಾದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನೂ ಅಪಾಯಕ್ಕೆ ಸಿಲುಕಿಸಿದೆ.

ಪ್ಯಾಲೆಸ್ಟೀನಿಯನ್ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2023ರ ಅಕ್ಟೋಬರ್ 7ರಿಂದ ಆರಂಭವಾದ ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಯಲ್ಲಿ ಕನಿಷ್ಠ 74,645 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದು, 1,75,978 ಮಂದಿ ಗಾಯಗೊಂಡಿದ್ದಾರೆ. ಈ ಅಂಕಿಅಂಶಗಳು ಗಾಜಾದಲ್ಲಿ ಸಂಭವಿಸಿರುವ ಮಾನವೀಯ ದುರಂತದ ಭೀಕರತೆಯನ್ನು ತೋರಿಸುತ್ತವೆ. ಸಾವಿನ ಸಂಖ್ಯೆ ಮಾತ್ರವಲ್ಲದೆ, ಮನೆಮಠ ಕಳೆದುಕೊಂಡ ಲಕ್ಷಾಂತರ ಜನರು ಆಹಾರ, ಕುಡಿಯುವ ನೀರು, ಔಷಧ, ಆರೋಗ್ಯ ಸೇವೆ ಮತ್ತು ಸುರಕ್ಷಿತ ಆಶ್ರಯಕ್ಕಾಗಿ ಪರದಾಡುವಂತಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಅಂತರರಾಷ್ಟ್ರೀಯ ಸಮುದಾಯದ ಮೌನ ಮತ್ತು ನಿಷ್ಕ್ರಿಯತೆಯೂ ಪ್ರಶ್ನಾರ್ಹವಾಗಿದೆ ಎಂಬ ಸಂದೇಶವನ್ನು ನವಿ ಪಿಳ್ಳೈ ಅವರ ಮಾತುಗಳು ಹೊರಹಾಕಿವೆ. ನರಮೇಧದಂತಹ ಗಂಭೀರ ಅಪರಾಧಗಳು ಸಂಭವಿಸುತ್ತಿರುವಾಗ ಅಂತಿಮ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಾ ಕುಳಿತುಕೊಳ್ಳುವುದಷ್ಟೇ ಸಾಕಾಗುವುದಿಲ್ಲ. ಇಂತಹ ಅಪರಾಧಗಳನ್ನು ತಡೆಯುವುದು ಪ್ರತಿಯೊಂದು ರಾಷ್ಟ್ರದ ಕಾನೂನುಬದ್ಧ ಹೊಣೆಗಾರಿಕೆಯಾಗಿದೆ ಎಂಬುದು ಅವರ ನಿಲುವು.

ಗಾಜಾದಲ್ಲಿ ನಡೆದಿರುವ ಹತ್ಯೆಗಳು, ನಾಗರಿಕ ಮೂಲಸೌಕರ್ಯಗಳ ನಾಶ, ವೈದ್ಯಕೀಯ ವ್ಯವಸ್ಥೆಯ ಧ್ವಂಸ, ಬಂಧಿತರ ಮೇಲಿನ ದೌರ್ಜನ್ಯ ಮತ್ತು ಪ್ಯಾಲೆಸ್ಟೀನಿಯನ್ನರ ಮುಂದಿನ ಪೀಳಿಗೆಯ ಅಸ್ತಿತ್ವಕ್ಕೂ ಧಕ್ಕೆ ತರುವ ಕೃತ್ಯಗಳ ಕುರಿತು ಆಯೋಗ ಸಂಗ್ರಹಿಸಿರುವ ಸಾಕ್ಷ್ಯಗಳು ಗಂಭೀರವಾಗಿವೆ ಎಂದು ಪಿಳ್ಳೈ ಪುನರುಚ್ಚರಿಸಿದ್ದಾರೆ. ತಮ್ಮ ನೇತೃತ್ವದ ಆಯೋಗದ ತೀರ್ಮಾನವನ್ನು ರಾಜಕೀಯ ಆರೋಪವೆಂದು ತಳ್ಳಿಹಾಕಲು ಸಾಧ್ಯವಿಲ್ಲ. ಅಂತರರಾಷ್ಟ್ರೀಯ ಕಾನೂನಿನ ಮಾನದಂಡಗಳ ಆಧಾರದಲ್ಲಿಯೇ ಈ ತೀರ್ಮಾನಕ್ಕೆ ಬರಲಾಗಿದೆ ಎಂಬುದು ಅವರ ಸ್ಪಷ್ಟನೆ.

ಒಟ್ಟಿನಲ್ಲಿ, ಗಾಜಾದಲ್ಲಿ ಇಸ್ರೇಲ್ ನಡೆಸಿರುವ ದಾಳಿಗಳನ್ನು ನರಮೇಧವೆಂದು ಪರಿಗಣಿಸಿರುವ ತಮ್ಮ ಹಿಂದಿನ ತೀರ್ಮಾನದಿಂದ ಹಿಂದೆ ಸರಿಯುವುದಿಲ್ಲ ಎಂದು ನವಿ ಪಿಳ್ಳೈ ಮತ್ತೊಮ್ಮೆ ಸಾರಿದ್ದಾರೆ. ಪ್ಯಾಲೆಸ್ಟೀನಿಯನ್ನರ ಜೀವಹಾನಿ ಮತ್ತು ಅವರ ಬದುಕಿನ ಅಸ್ತಿತ್ವವನ್ನೇ ನಾಶಪಡಿಸಿರುವ ಕ್ರಮಗಳಿಗೆ ಹೊಣೆಗಾರರನ್ನು ಗುರುತಿಸಿ ಕಾನೂನಿನ ಮುಂದೆ ನಿಲ್ಲಿಸಬೇಕು ಎಂಬ ಅವರ ಆಗ್ರಹವು ಗಾಜಾದ ಬಿಕ್ಕಟ್ಟಿನಲ್ಲಿ ಅಂತರರಾಷ್ಟ್ರೀಯ ನ್ಯಾಯ ಮತ್ತು ಮಾನವ ಹಕ್ಕುಗಳ ಹೊಣೆಗಾರಿಕೆಯ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನನ್ನ ಜೊತೆ ನೇರ ಚರ್ಚೆ ನಡೆಸಿದ ನಂತರ ಮೋದಿ ಪ್ರಧಾನಿಯಾಗಿ ಉಳಿಯುವುದಿಲ್ಲ’: ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನೇರವಾಗಿ ಮುಖಾಮುಖಿ ಚರ್ಚೆ ನಡೆಸಲು ಮತ್ತೊಮ್ಮೆ ಸವಾಲು ಹಾಕಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ತಮ್ಮೊಂದಿಗೆ ನಡೆಯುವ ನೇರ ಚರ್ಚೆಯ ಬಳಿಕ ನರೇಂದ್ರ...

ನಾರ್ವೆ ಪತ್ರಕರ್ತೆಯ ಭಾರತ ಭೇಟಿಗೆ ತಡೆ : ಕಾರಣ ತಿಳಿಸುವಂತೆ ಒತ್ತಾಯಿಸಿದ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ

ನಾರ್ವೆ ಪತ್ರಕರ್ತೆ ಹೆಲ್ಲೆ ಲಿಂಗ್ ಅವರ ಭಾರತ ಭೇಟಿಗೆ ಕೊನೆ ಕ್ಷಣದಲ್ಲಿ ತಡೆಯೊಡ್ಡಿರುವುದಕ್ಕೆ ಕಾರಣ ತಿಳಿಸುವಂತೆ ಪತ್ರಕರ್ತರ ಸಂಘ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (ಇಜಿಐ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಗುರುವಾರ (ನ.12)...

ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕಲು ಕ್ರಿಮಿನಲ್ ಪ್ರಕರಣಗಳ ಬಳಕೆ ಪ್ರಜಾಪ್ರಭುತ್ವಕ್ಕೆ ಕರಾಳ ದಿನ: ಬಾಂಬೆ ಹೈಕೋರ್ಟ್

ಮುಂಬೈ: ಜನರ ಮೂಲಭೂತ ಹಕ್ಕಾಗಿರುವ ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕಲು ಕ್ರಿಮಿನಲ್ ಪ್ರಕರಣಗಳನ್ನು ಅಸ್ತ್ರವಾಗಿ ಬಳಸಿದರೆ ಅದು ಪ್ರಜಾಪ್ರಭುತ್ವಕ್ಕೆ ದುಃಖದ ದಿನವಾಗಲಿದೆ ಎಂದು ಬಾಂಬೆ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಸಾರ್ವಜನಿಕ ಸಮಸ್ಯೆಗಳ ವಿರುದ್ಧ...

ಕುರ್ಚಿ ಹಾಕುವ ದಿನಗಳಿಂದಲೂ ಮಾಧ್ಯಮಗಳೊಂದಿಗೆ ದೀರ್ಘಕಾಲದ ಒಡನಾಟವಿದೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ

ಪತ್ರಕರ್ತರ ಕಾರ್ಯಕ್ರಮಗಳಲ್ಲಿ ಅವರಿಗೆ ಕುರ್ಚಿ ಹಾಕುವ ಜವಾಬ್ದಾರಿ ನಿರ್ವಹಿಸುತ್ತಿದ್ದ ದಿನಗಳಿಂದಲೂ ಮಾಧ್ಯಮಗಳೊಂದಿಗೆ ತಮಗೆ ದೀರ್ಘಕಾಲದ ಸಂಬಂಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ (ನ.12) ಹೇಳಿದ್ದಾರೆ. ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪತ್ರಕರ್ತರಿಗಾಗಿ ಆಯೋಜಿಸಿದ್ದ...

ಕಾಂಗ್ರೆಸ್ ಸರ್ಕಾರದ ನೀತಿಗಳ ವಿರುದ್ಧವೂ ಜನರು ಪ್ರತಿಭಟನೆ ನಡೆಸಬಹುದು: ಪ್ರಿಯಾಂಕಾ ಗಾಂಧಿ

ಪ್ರತಿಭಟನೆ ನಡೆಸುವ ಹಕ್ಕು ಸಂವಿಧಾನ ನೀಡಿರುವ ಮೂಲಭೂತ ಹಕ್ಕಾಗಿದ್ದು, ಶಾಂತಿಯುತವಾಗಿ ಪ್ರತಿಭಟನೆ ನಡೆಸುವವರೆಗೆ ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ನೀತಿಗಳ ವಿರುದ್ಧವೂ ಜನರು ಹೋರಾಟ ನಡೆಸಲು ಸ್ವತಂತ್ರರು ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ...

ಎನ್‌ವಿಡಿಯಾ ಸಿಇಒ ವೈಯಕ್ತಿಕ ಸಂಬಂಧ ವಿವಾದ: ‘ಗೂಢಚಾರಿಕೆ ನಿರೂಪಣೆಗಳನ್ನು ಸೃಷ್ಟಿಸಿ ತಾಂತ್ರಿಕ ದಿಗ್ಬಂಧನ ಹೇರಬೇಡಿ’: ಅಮೆರಿಕಕ್ಕೆ ಚೀನಾ ಎಚ್ಚರಿಕೆ

ಅಮೆರಿಕವು ಚೀನಾದ ತಾಂತ್ರಿಕ ಪ್ರಗತಿಗೆ ಕಡಿವಾಣ ಹಾಕಲು ಗೂಢಚಾರಿಕೆಯ ಆರೋಪಗಳನ್ನು ನೆಪವಾಗಿ ಬಳಸುತ್ತಿದೆ ಎಂದು ಆರೋಪಿಸಿರುವ ಚೀನಾ, ಇಂತಹ ನಿರೂಪಣೆಗಳನ್ನು ಸೃಷ್ಟಿಸುವುದನ್ನು ನಿಲ್ಲಿಸುವಂತೆ ಅಮೆರಿಕವನ್ನು ಒತ್ತಾಯಿಸಿದೆ. ಎನ್‌ವಿಡಿಯಾ (Nvidia) ಸಿಇಒ ಜೆನ್ಸನ್ ಹುವಾಂಗ್...

ಯುಪಿ ವಿಧಾನಸಭೆ ಚುನಾವಣೆಗೆ ಓವೈಸಿ-ಆಝಾದ್ ಮೈತ್ರಿ : ಸಿಎಂ ಅಭ್ಯರ್ಥಿ ಘೋಷಣೆ

ವಿಧಾನಸಭೆ ಚುನಾವಣೆಗೆ ಮುನ್ನ ಉತ್ತರ ಪ್ರದೇಶದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮತ್ತು ಚಂದ್ರಶೇಖರ್ ಆಝಾದ್ ಅವರ ಆಝಾದ್ ಸಮಾಜ ಪಕ್ಷ...

ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ್ದ ನಾರ್ವೆ ಪತ್ರಕರ್ತೆಯ ಭಾರತ ಭೇಟಿಗೆ ತಡೆ : ಕೊನೆ ಕ್ಷಣದಲ್ಲಿ ವೀಸಾ ರದ್ದು

ಕಳೆದ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನಾರ್ವೆಗೆ ಭೇಟಿ ನೀಡಿದ್ದಾಗ, ಅವರಿಗೆ ಪ್ರಶ್ನೆ ಕೇಳಿ ಸುದ್ದಿಯಾಗಿದ್ದ ಅಲ್ಲಿನ ಪತ್ರಕರ್ತೆ ಹೆಲ್ಲೆ ಲಿಂಗ್ ಅವರ ಭಾರತ ಭೇಟಿಗೆ ಕೊನೆ ಕ್ಷಣದಲ್ಲಿ ತಡೆಯೊಡ್ಡಲಾಗಿದೆ ಎಂದು...

ಸ್ಥಳೀಯರ ಹೋರಾಟಕ್ಕೆ ಸಂದ ಜಯ: ‘ನಮ್ಮ ಮೆಟ್ರೋ’ ಪಿಂಕ್ ಲೈನ್‌ನ 3 ನಿಲ್ದಾಣಗಳ ಹೆಸರು ಬದಲಾವಣೆಗೆ ಕೇಂದ್ರದಿಂದ ಅನುಮೋದನೆ!

ಬೆಂಗಳೂರು: 'ನಮ್ಮ ಮೆಟ್ರೋ' ಗುಲಾಬಿ ಮಾರ್ಗದ (Pink Line) ಎಲಿವೇಟೆಡ್‌ ಕಾರಿಡಾರ್‌ನ ಮೂರು ಪ್ರಮುಖ ನಿಲ್ದಾಣಗಳ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ...

ಗಾಝಾದ ನಾಸರ್ ಆಸ್ಪತ್ರೆಯ ಮೇಲೆ ಇಸ್ರೇಲ್‌ನಿಂದ ವೈಮಾನಿಕ ದಾಳಿ : ಕನಿಷ್ಠ 6 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ

ದಕ್ಷಿಣ ಗಾಝಾದ ನಾಸರ್ ಆಸ್ಪತ್ರೆಯ ಕಟ್ಟಡವೊಂದರ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಖಾನ್ ಯೂನಿಸ್‌ನಲ್ಲಿರುವ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಮೇಲೆ ದಾಳಿ...