ಆರಂಭದಲ್ಲಿ ಅನುಮತಿ ನೀಡಿದ ನೀಡಿದ್ದರೂ, ಕಾಂಗ್ರೆಸ್ ಪಕ್ಷದ ‘ಭಾರತ್ ಸಮ್ಮಿಟ್’ನಲ್ಲಿ ಭಾಗವಹಿಸಬೇಕಿದ್ದ ಮೂರನೇ ಒಂದಕ್ಕಿಂತ ಹೆಚ್ಚು ವಿದೇಶಿ ಭಾಷಣಕಾರರ ಭಾರತ ಪ್ರವೇಶಿಸಕ್ಕೆ ತಡೆಯೊಡ್ಡಲಾಗಿದೆ. ಈ ಕುರಿತು ತನ್ನ ಮೊದಲ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯ (ಎಂಇಎ), ವೀಸಾ ವಿಚಾರ ಒಂದು ರಾಷ್ಟ್ರದ ‘ಸಾರ್ವಭೌಮ ಕಾರ್ಯ’ ಎಂದು ಕೇವಲ ಒಂದೇ ಮಾತಿನಲ್ಲಿ ಸಮರ್ಥಿಸಿಕೊಂಡಿದೆ.
ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ಹಾಗೂ ಕಾಂಗ್ರೆಸ್ ಲೋಕಸಭಾ ಸಂಸದ ಶಶಿ ತರೂರ್ ಅವರು ಶುಕ್ರವಾರ (ನ.13) ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದು, ವಿದೇಶಾಂಗ ಸಚಿವಾಲಯ ಅನುಮತಿ ನೀಡಿದ್ದ 315 ಭಾಷಣಕಾರರ ಪೈಕಿ ಸುಮಾರು 115 ಮಂದಿಗೆ ಪ್ರವೇಶ ನಿರಾಕರಿಸಲಾಗಿದೆ ಅಥವಾ ಅವರ ವೀಸಾಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಗೃಹ ಸಚಿವಾಲಯದ (ಎಂಹೆಚ್ಎ) ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂಬುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಅವರು ಹೇಳಿದ್ದಾರೆ.
ವೀಸಾ ರದ್ದತಿ ಕುರಿತ ಪ್ರಶ್ನೆಗೆ ಮಾಧ್ಯಮಗೋಷ್ಠಿಯಲ್ಲಿ ಉತ್ತರಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ವೀಸಾ ವಿಚಾರಗಳು ಯಾವುದೇ ದೇಶ ಅಥವಾ ಸರ್ಕಾರದ ಸಾರ್ವಭೌಮ ಕಾರ್ಯಗಳಾಗಿವೆ ಎಂಬುದನ್ನು ನಾನು ಹೇಳಲು ಬಯಸುತ್ತೇನೆ ಮತ್ತು ಇದು ನಿಮ್ಮೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಸದ್ಯಕ್ಕೆ ನಾನು ಹೇಳಬೇಕಿರುವುದು ಇಷ್ಟೇ” ಎಂದು ಪ್ರತಿಕ್ರಿಯಿಸಿದ್ದಾರೆ.
ವಿದೇಶಿ ಪ್ರತಿನಿಧಿಗಳ ಪಟ್ಟಿಗೆ ಆರಂಭದಲ್ಲಿ ವಿದೇಶಾಂಗ ಸಚಿವಾಲಯ ಅನುಮತಿ ನೀಡಿ ವೀಸಾಗಳನ್ನು ಮಂಜೂರು ಮಾಡಿದ ನಂತರ, ಗೃಹ ಸಚಿವಾಲಯ ಅವುಗಳಲ್ಲಿ ಕೆಲವು ಅನುಮತಿಗಳನ್ನು ಏಕೆ ಹಿಂಪಡೆಯಿತು ಎಂಬ ಬಗ್ಗೆ ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ.
ಭಾರತ್ ಸಮ್ಮಿಟ್ನಲ್ಲಿ ಭಾಗವಹಿಸಲು ಆಗಮಿಸಬೇಕಿದ್ದ ಹೆಚ್ಚಿನ ಸಂಖ್ಯೆಯ ವಿದೇಶಿ ಆಹ್ವಾನಿತರಿಗೆ ಭಾರತ ಪ್ರವೇಶವನ್ನು ನಿರಾಕರಿಸಲಾಗಿದೆ ಎಂಬ ಸುದ್ದಿ ಮೊದಲು ಹೊರಬಿದ್ದ ಒಂದು ದಿನದ ನಂತರ ವಿದೇಶಾಂಗ ಸಚಿವಾಲಯದ ಈ ಪ್ರತಿಕ್ರಿಯೆ ಬಂದಿದೆ.
ಪ್ರವೇಶ ನಿರಾಕರಿಸಲ್ಪಟ್ಟವರಲ್ಲಿ ನಾರ್ವೆಯ ಪತ್ರಕರ್ತೆ ಹೆಲ್ಲೆ ಲಿಂಗ್ ಕೂಡ ಸೇರಿದ್ದಾರೆ. ಕಳೆದ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಓಸ್ಲೋಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, “ವಿಶ್ವದ ಅತ್ಯಂತ ಮುಕ್ತ ಪತ್ರಿಕೋದ್ಯಮದ ಪ್ರಶ್ನೆಗಳಿಗೆ ನೀವು ಉತ್ತರಿಸುತ್ತೀರಾ?” ಎಂದು ಮೋದಿಯವರನ್ನು ಕೇಳುವ ಮೂಲಕ ಲಿಂಗ್ ಜಗತ್ತಿನಾದ್ಯಂತ ಸುದ್ದಿಯಾಗಿದ್ದರು.
‘ದಿ ವೈರ್’ ವರದಿ ಮಾಡಿರುವಂತೆ, ಲಿಂಗ್ ಸೇರಿದಂತೆ ವಿದೇಶಿ ಪ್ರಜೆಗಳ ಪಟ್ಟಿಗೆ ವಿದೇಶಾಂಗ ಸಚಿವಾಲಯ ಅನುಮತಿ ನೀಡಿತ್ತು ಮತ್ತು ಅವರಿಗೆ ವೀಸಾಗಳನ್ನೂ ನೀಡಲಾಗಿತ್ತು. ಆದರೆ, ಅವರು ಭಾರತಕ್ಕೆ ಪ್ರಯಾಣಿಸಲು ಹೊರಡುವ ವೇಳೆಗೆ ಅವರ ವೀಸಾವನ್ನು ಹಿಂಪಡೆಯಲಾಗಿದೆ ಎಂದು ತಿಳಿಸಲಾಗಿದೆ.
ಇಂತಹ ಕಾರ್ಯಕ್ರಮಗಳಿಗಾಗಿ ಸರ್ಕಾರ ಸಿದ್ಧಪಡಿಸಿರುವ ‘ಪದೇ ಪದೇ ಕೇಳಲಾಗುವ ಪ್ರಶ್ನೆಗಳ’ (FAQs) ಮಾರ್ಗಸೂಚಿಯ ಪ್ರಕಾರ, ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಭಾರತೀಯ ರಾಯಭಾರ ಕಚೇರಿಗಳು ವೀಸಾ ಅರ್ಜಿಗಳನ್ನು ವಿದೇಶಾಂಗ ಸಚಿವಾಲಯ ಅಥವಾ ಗೃಹ ಸಚಿವಾಲಯಕ್ಕೆ ಕಳುಹಿಸಬೇಕಾಗುತ್ತದೆ ಎಂದು ಮೂಲಗಳು ಗುರುವಾರ (ನ.12) ಹೇಳಿರುವುದಾಗಿ ‘ದಿ ವೈರ್’ಗೆ ವರದಿ ಮಾಡಿದೆ.
ತಮ್ಮ ಪೋಸ್ಟ್ನಲ್ಲಿ, “ಹೈದರಾಬಾದ್ಗೆ ತಲುಪಿದಾಗ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಕಾರ್ಯಕ್ರಮಕ್ಕಾಗಿ ಅನುಮೋದನೆ ನೀಡಿದ್ದ 315 ಭಾಷಣಕಾರರ ಪೈಕಿ 115 ಮಂದಿಗೆ ಭಾರತ ಪ್ರವೇಶವನ್ನು ನಿರಾಕರಿಸಲಾಗಿದೆ ಅಥವಾ ಅವರ ವೀಸಾಗಳನ್ನು ರದ್ದುಗೊಳಿಸಲಾಗಿದೆ – ಬಹುಶಃ ಗೃಹ ಸಚಿವಾಲಯದ ಸೂಚನೆಯ ಮೇರೆಗೆ” ಎಂಬ ವಿಷಯ ತಿಳಿಯುವುದು ‘ನಿರಾಶಾದಾಯಕ ಸಂಗತಿಯಾಗಿತ್ತು’ ಎಂದು ಶಶಿ ತರೂರ್ ತಿಳಿಸಿದ್ದಾರೆ.
“ಸರ್ಕಾರ ಯಾವ ಕಾನೂನಿನ ಅಡಿಯಲ್ಲಿ ಈ ಕ್ರಮ ಕೈಗೊಂಡಿದೆ ಎಂಬುದು ‘ಸಂಪೂರ್ಣವಾಗಿ ಅಸ್ಪಷ್ಟವಾಗಿದೆ’. ಅಲ್ಲದೆ, ಈ ಕ್ರಮವನ್ನು ಅತ್ಯಂತ ಕಡಿಮೆ ಅವಧಿಯ ಮುನ್ಸೂಚನೆಯೊಂದಿಗೆ ತೆಗೆದುಕೊಳ್ಳಲಾಗಿದ್ದು, ಶನಿವಾರ ಸಮ್ಮೇಳನ ಮುಕ್ತಾಯಗೊಳ್ಳುವ ಮೊದಲು ಯಾವುದೇ ಬದಲಾವಣೆಗಳನ್ನು ಮಾಡಲು ಅವಕಾಶವೇ ಇಲ್ಲದಂತಾಗಿದೆ” ಎಂದು ಹೇಳಿದ್ದಾರೆ.
“ಒಂದು ಹೆಮ್ಮೆಯ ಪ್ರಜಾಪ್ರಭುತ್ವವು ಎಷ್ಟು ಅಸುರಕ್ಷಿತವಾಗಿದೆ ಎಂದರೆ, ತನಗೆ ಟೀಕೆ ಎದುರಾಗಬಹುದು ಎಂದು ಭಯಪಡುವ ಯಾವುದೇ ಧ್ವನಿಯನ್ನು ಅದು ಹತ್ತಿಕ್ಕಲೇಬೇಕಾದ ಸ್ಥಿತಿಗೆ ತಲುಪಿದೆ; ಇದು ಎಂತಹ ನಾಚಿಕೆಗೇಡಿನ ಸಂಗತಿ!” ಎಂದು ತರೂರ್ ಬರೆದುಕೊಂಡಿದ್ದಾರೆ.
ಏನಿದು ಭಾರತ್ ಸಮ್ಮಿಟ್?
ಭಾರತ್ ಸಮ್ಮಿಟ್ (Bharat Summit) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್ಸಿ) ಮತ್ತು ತೆಲಂಗಾಣದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಜಂಟಿಯಾಗಿ ಆಯೋಜಿಸಿರುವ ಒಂದು ಅಂತಾರಾಷ್ಟ್ರೀಯ ಸಮ್ಮೇಳನವಾಗಿದೆ.
ಜಾಗತಿಕ ರಾಜಕೀಯ, ಪ್ರಜಾಪ್ರಭುತ್ವ, ಆರ್ಥಿಕ ನ್ಯಾಯ ಮತ್ತು ಹೊಸ ವಿಶ್ವ ಕ್ರಮದ (New World Order) ಬಗ್ಗೆ ಚರ್ಚಿಸಲು ಪ್ರಪಂಚದಾದ್ಯಂತದ ಪ್ರಗತಿಪರ (Progressive) ರಾಜಕೀಯ ನಾಯಕರು, ನೀತಿ ನಿರೂಪಕರು ಮತ್ತು ಚಿಂತಕರನ್ನು ಒಂದೇ ವೇದಿಕೆಗೆ ತರುವುದು ಇದರ ಮುಖ್ಯ ಉದ್ದೇಶವಾಗಿದೆ.
ಅಲಿಪ್ತ ಚಳವಳಿಗೆ (Non-Aligned Movement) ಅಡಿಪಾಯ ಹಾಕಿದ ಐತಿಹಾಸಿಕ ‘ಬಂಡುಂಗ್ ಸಮ್ಮೇಳನ’ದ 70ನೇ ವಾರ್ಷಿಕೋತ್ಸವದ ಸ್ಮರಣಾರ್ಥ 2025ರ ಏಪ್ರಿಲ್ನಲ್ಲಿ ಹೈದರಾಬಾದ್ನಲ್ಲಿ ಮೊದಲ ಭಾರತ್ ಸಮ್ಮಿಟ್ ನಡೆದಿತ್ತು.
ಭಾರತದ ಸ್ವಾತಂತ್ರ್ಯದ 80ನೇ ವರ್ಷ ಮತ್ತು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ 137ನೇ ಜನ್ಮದಿನದ ಅಂಗವಾಗಿ 2026ರ ನವೆಂಬರ್ 13 ಮತ್ತು 14 ರಂದು ಹೈದರಾಬಾದ್ನಲ್ಲಿ ಎರಡನೇ ಆವೃತ್ತಿಯನ್ನು ಆಯೋಜಿಸಲಾಗಿದೆ. ಇದರಲ್ಲಿ 70ಕ್ಕೂ ಹೆಚ್ಚು ದೇಶಗಳ ಸುಮಾರು 1,000 ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.


