ಮೀಸಲಾತಿಯನ್ನು ಸಂವಿಧಾನ ನೀಡಿದ ಹಕ್ಕು ಎಂದು ಒಪ್ಪಿಕೊಳ್ಳಲು ಹಿಂದೇಟು ಹಾಕುವವರು ಪರಿಶಿಷ್ಟ ಜಾತಿಯ ನಾಯಕರಿಗೆ ಮಾತ್ರ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸವಾಲು ಹಾಕುತ್ತಿರುವುದು ಯಾವ ರೀತಿಯ ಪ್ರಜಾಪ್ರಭುತ್ವದ ಮನೋಭಾವ? ಭಾರತದ ರಾಜಕೀಯದಲ್ಲಿ ಪರಿಶಿಷ್ಟ ಜಾತಿಯ ನಾಯಕರು ಚುನಾವಣೆಯಲ್ಲಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಾಗಲೆಲ್ಲ ಅವರ ರಾಜಕೀಯ ಸಾಮರ್ಥ್ಯವನ್ನು ಪ್ರಶ್ನಿಸುವ ಒಂದು ವಿಚಿತ್ರ ರಾಜಕೀಯ ಪ್ರವೃತ್ತಿ ನಮ್ಮ ಕರ್ನಾಟಕದಲ್ಲಿಯೂ ಬೆಳೆಯುತ್ತಿದೆ. ಇದಕ್ಕೆ ಪ್ರಮುಖ ಕಾರಣಗಳಲ್ಲಿ ಸಂವಿಧಾನಾತ್ಮಕ ಅರಿವಿನ ಕೊರತೆ, ರಾಜಕೀಯ ಶಿಕ್ಷಣದ ಅಭಾವ ಮತ್ತು ರಾಜಕಾರಣದಲ್ಲಿ ತಮ್ಮನ್ನು ಗುರುತಿಸಿಕೊಳ್ಳಬೇಕೆಂಬ ಹಪಾಹಪಿತನ ಪ್ರಮುಖವಾಗಿವೆ. ವಿಶೇಷವಾಗಿ ಪ್ರಿಯಾಂಕ್ ಖರ್ಗೆರವರಂತಹ ಧೀರ ರಾಜಕೀಯ ನಾಯಕರನ್ನು ಉದ್ದೇಶಿಸಿ, “ಮೀಸಲು ಕ್ಷೇತ್ರ ಬಿಟ್ಟು ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ತೋರಿಸಿ” ಎಂದು ವಿರೋಧ ಪಕ್ಷದ ನಾಯಕರು ಪದೇಪದೇ ಸವಾಲು ಹಾಕುತ್ತಿರುವುದರ ಹಿಂದೆ ಒಂದು ನಿರ್ದಿಷ್ಟ ರಾಜಕೀಯ ಮನಸ್ಥಿತಿ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಪ್ರಿಯಾಂಕ್ ಖರ್ಗೆಯವರು ಸೈದ್ಧಾಂತಿಕವಾಗಿ ಗಟ್ಟಿಯಾಗಿದ್ದು, ತಮ್ಮ ರಾಜಕೀಯ ಹೋರಾಟದ ಮೂಲಕ ಸಂವಿಧಾನ ವಿರೋಧಿಗಳನ್ನು ಅದರ ಚೌಕಟ್ಟಿಗೆ ತರುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳಲಾಗದ ಸಂಕುಚಿತ ಮನೋಭಾವವದವರು, ಅವರನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದ ಸಂದರ್ಭದಲ್ಲಿ, ಅವರ ರಾಜಕೀಯ ಸಾಧನೆ ಮತ್ತು ನಾಯಕತ್ವವನ್ನು ಮೀಸಲಾತಿಯ ಚೌಕಟ್ಟಿನೊಳಗೆ ಸೀಮಿತಗೊಳಿಸಿ ಪ್ರಶ್ನಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಒಬ್ಬ ಪರಿಶಿಷ್ಟ ಜಾತಿಯ ವ್ಯಕ್ತಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೂ ಅವಕಾಶವಿದೆ; ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೂ ಸಂವಿಧಾನಬದ್ಧ ಹಕ್ಕಿದೆ. ಇವೆರಡರಲ್ಲಿ ಯಾವುದೂ ತಪ್ಪಲ್ಲ. ಏಕೆಂದರೆ, ಮೀಸಲಾತಿ ಯಾರೂ ನೀಡಿದ ರಾಜಕೀಯ ಭಿಕ್ಷೆಯಲ್ಲ; ಅದು ಭಾರತದ ಸಂವಿಧಾನ ಕಲ್ಪಿಸಿರುವ ರಾಜಕೀಯ ಪ್ರಾತಿನಿಧ್ಯದ ಹಕ್ಕು. ಸಂವಿಧಾನವೇ ಒದಗಿಸಿರುವ ಅವಕಾಶವನ್ನು ಬಳಸಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ರಾಜಕೀಯ ದೌರ್ಬಲ್ಯವೆಂದು ಬಿಂಬಿಸುವ ಮೂರ್ಖತನ ಈ ರಾಜಕಾರಣಿಗಳಿಗೆ ಗೌರವ ತಂದು ಕೊಡುವುದಿಲ್ಲ.
ಮೀಸಲಾತಿಯ ಪ್ರಯೋಜನ ಪಡೆಯುವ ಇತರ ಸಮುದಾಯಗಳ ನಾಯಕರಿಗೆ ಇಂತಹ ಸವಾಲುಗಳನ್ನು ಹಾಕದೆ, ಪರಿಶಿಷ್ಟ ಜಾತಿಗೆ ಸೇರಿದ ಪ್ರಿಯಾಂಕ್ ಖರ್ಗೆಯವರನ್ನೇ ಗುರಿಯಾಗಿಸಿಕೊಂಡು ಮೀಸಲು ಕ್ಷೇತ್ರ ಬಿಟ್ಟು ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುವಂತೆ ಪದೇಪದೇ ಸವಾಲು ಹಾಕುತ್ತಿರುವುದು ಈ ಚರ್ಚೆಯಲ್ಲಿನ ತಾರತಮ್ಯದ ಮನೋಭಾವ ಹಾಗೂ ಉದ್ದೇಶವನ್ನು ಸ್ಪಷ್ಟವಾಗಿ ಬಯಲಿಗೆಳೆಯುತ್ತದೆ. ಇಂತಹ ಸವಾಲುಗಳ ಹಿಂದಿರುವ ಸಂವಿಧಾನಾತ್ಮಕ ಅರಿವಿನ ಕೊರತೆ ಮತ್ತು ಮೀಸಲಾತಿಯ ಆಶಯದ ಬಗೆಗಿನ ತಪ್ಪು ತಿಳಿವಳಿಕೆಯನ್ನು ಪ್ರಶ್ನಿಸುವುದು ಇಂದಿನ ಅಗತ್ಯವಾಗಿದೆ.
ನಮ್ಮ ಭಾರತದ ಸಂವಿಧಾನದ 330ನೇ ವಿಧಿಯು ಲೋಕಸಭೆಯಲ್ಲಿ ಹಾಗೂ 332ನೇ ವಿಧಿಯು ರಾಜ್ಯಗಳ ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸ್ಥಾನಗಳನ್ನು ಮೀಸಲಿಡುವ ವ್ಯವಸ್ಥೆಯನ್ನು ಕಲ್ಪಿಸಿವೆ. ಸಂವಿಧಾನವೇ ಖಾತರಿಪಡಿಸಿರುವ ಈ ರಾಜಕೀಯ ಪ್ರಾತಿನಿಧ್ಯದ ಹಕ್ಕನ್ನು ಬಳಸಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನೇ ರಾಜಕೀಯ ದೌರ್ಬಲ್ಯವೆಂಬಂತೆ ಬಿಂಬಿಸುವವರ ಮನಸ್ಥಿತಿಯನ್ನು ನಾವು ಬಹಿರಂಗವಾಗಿ ಪ್ರಶ್ನಿಸಬೇಕಿದೆ.
ಏಕೆಂದರೆ, ಇಲ್ಲಿ ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕಾದ ಮತ್ತೊಂದು ಮಹತ್ವದ ಸಂಗತಿಯಿದೆ. ಅದೇನೆಂದರೆ, ಮೀಸಲು ಕ್ಷೇತ್ರವೆಂದ ಮಾತ್ರಕ್ಕೆ ಅಲ್ಲಿ ಪರಿಶಿಷ್ಟ ಜಾತಿಯ ಮತದಾರರು ಮಾತ್ರ ಮತ ಚಲಾಯಿಸುತ್ತಾರೆ ಎಂದರ್ಥವಲ್ಲ. ಮೀಸಲು ಕ್ಷೇತ್ರಗಳಲ್ಲಿಯೂ ಎಲ್ಲ ಜಾತಿ, ಧರ್ಮ ಹಾಗೂ ವರ್ಗಗಳಿಗೆ ಸೇರಿದ ಮತದಾರರಿರುತ್ತಾರೆ. ಅನೇಕ ಮೀಸಲು ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಯ ಮತದಾರರಿಗಿಂತ ಇತರ ಸಮುದಾಯಗಳ ಮತದಾರರ ಸಂಖ್ಯೆಯೇ ಹೆಚ್ಚಿರುತ್ತದೆ. ಇಂತಹ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಾದರೆ ಪರಿಶಿಷ್ಟ ಜಾತಿಯ ಅಭ್ಯರ್ಥಿಯು ಕೇವಲ ತನ್ನ ಸಮುದಾಯದ ಮತಗಳನ್ನು ಅವಲಂಬಿಸಿದರೆ ಸಾಲದು; ಬದಲಾಗಿ ಎಲ್ಲ ಸಮುದಾಯಗಳ ಮತದಾರರ ಬೆಂಬಲವನ್ನೂ, ವಿಶ್ವಾಸವನ್ನೂ ತನ್ನತ್ತ ಸೆಳೆಯುವ ರಾಜಕೀಯ ಸಾಮರ್ಥ್ಯ, ಜನಪ್ರಿಯತೆ ಮತ್ತು ನಾಯಕತ್ವದ ಗುಣವೂ ಅತ್ಯಗತ್ಯವಾಗಿರುತ್ತದೆ. ಹೀಗಿರುವಾಗ, ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವುದನ್ನು ರಾಜಕೀಯ ದೌರ್ಬಲ್ಯವೆಂದು ಕರೆಯುವುದು ಸಂವಿಧಾನಬದ್ಧ ರಾಜಕೀಯ ಪ್ರಾತಿನಿಧ್ಯದ ಆಶಯವನ್ನೇ ಅರ್ಥಮಾಡಿಕೊಳ್ಳದ ಅಜ್ಞಾನವಲ್ಲದೆ ಮತ್ತೇನೂ ಅಲ್ಲ..
ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಅಭ್ಯರ್ಥಿಯೂ ಇಡೀ ಕ್ಷೇತ್ರದ ಜನರ ಪ್ರತಿನಿಧಿಯೇ ಎಂಬ ಕನಿಷ್ಠ ಪ್ರಜಾಪ್ರಭುತ್ವದ ಸತ್ಯವನ್ನೇ ಒಪ್ಪಿಕೊಳ್ಳಲು ಸಾಧ್ಯವಾಗದ ಮನಸ್ಥಿತಿಗೆ ಸಂವಿಧಾನದ ಆಶಯ ಮತ್ತು ರಾಜಕೀಯ ಪ್ರಾತಿನಿಧ್ಯದ ಮಹತ್ವ ಅರ್ಥವಾಗುವುದಾದರೂ ಹೇಗೆ? ಇನ್ನೂ ವಿಪರ್ಯಾಸದ ಸಂಗತಿಯೆಂದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಕ್ಕುಗಳಿಗಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿಕೊಳ್ಳುವ ಕೆಲವು ಹೋರಾಟಗಾರರೂ ಸಹ ಪರಿಶಿಷ್ಟ ಜಾತಿಯ ನಾಯಕರಿಗೆ ಮೀಸಲು ಕ್ಷೇತ್ರ ಬಿಟ್ಟು ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಎಂದು ಒತ್ತಾಯಿಸುವುದು. ಮೀಸಲಾತಿಗಾಗಿ ಹೋರಾಡುವವರೇ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವುದನ್ನು ಅವಮಾನವೆಂಬಂತೆ ಬಿಂಬಿಸುವುದು ಆತ್ಮವಿರೋಧವಲ್ಲವೇ? ಮೀಸಲಾತಿ ಹಕ್ಕುಗಳಿಗಾಗಿ ಹೋರಾಡುವುದು ಒಂದು ಕಡೆ, ಅದೇ ಮೀಸಲಾತಿಯ ಆಧಾರದ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸುವ ನಾಯಕರನ್ನು ಟೀಕಿಸುವುದು ಮತ್ತೊಂದು ಕಡೆ. ಈ ಎರಡು ನಿಲುವುಗಳ ನಡುವಿನ ವೈರುಧ್ಯವನ್ನು ಸಮಾಜದ ಪ್ರಜ್ಞಾವಂತರು ಪ್ರಶ್ನಿಸಲೇಬೇಕು.
ಪ್ರಿಯಾಂಕ್ ಖರ್ಗೆಯವರ ರಾಜಕೀಯ ಜೀವನ, ಅವರ ಚುನಾವಣಾ ಸಾಧನೆ, ಆಡಳಿತಾತ್ಮಕ ಅನುಭವ ಮತ್ತು ಸಾರ್ವಜನಿಕ ಸೇವೆಯನ್ನು ಚರ್ಚಿಸಲು ಯಾರಿಗೂ ಅಭ್ಯಂತರವಿಲ್ಲ. ಅವರ ರಾಜಕೀಯ ನಿರ್ಧಾರಗಳನ್ನು ಟೀಕಿಸುವುದೂ ಪ್ರಜಾಪ್ರಭುತ್ವ ನೀಡಿರುವ ಹಕ್ಕು. ಆದರೆ ಅವರನ್ನು ಸೈದ್ಧಾಂತಿಕವಾಗಿ ಎದುರಿಸಲು ಸಾಧ್ಯವಾಗದ ಕಾರಣಕ್ಕೆ ಮೀಸಲಾತಿಯ ಉದ್ದೇಶವನ್ನೇ ಪ್ರಶ್ನಿಸುವುದು, ಸಂವಿಧಾನ ಕಲ್ಪಿಸಿರುವ ರಾಜಕೀಯ ಪ್ರಾತಿನಿಧ್ಯದ ವ್ಯವಸ್ಥೆಯನ್ನು ಅವಮಾನಿಸುವುದು ಮತ್ತು ಮೀಸಲು ಕ್ಷೇತ್ರದಿಂದ ಆಯ್ಕೆಯಾಗುವುದನ್ನೇ ರಾಜಕೀಯ ಅಸಾಮರ್ಥ್ಯದ ಮಾನದಂಡವೆಂದು ಬಿಂಬಿಸುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದ ಧೋರಣೆಯಾಗಿದೆ. ಪರಿಶಿಷ್ಟ ಜಾತಿಯ ನಾಯಕರು ಸಾಮಾನ್ಯ ಕ್ಷೇತ್ರದಿಂದಲೇ ಸ್ಪರ್ಧಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕೆಂಬ ನಿಮ್ಮ ವಾದವನ್ನು ನೀವೇ ಒಪ್ಪಿಕೊಂಡರೆ, ಸಂವಿಧಾನದಲ್ಲಿ ಮೀಸಲು ಕ್ಷೇತ್ರಗಳನ್ನು ಕಲ್ಪಿಸಿರುವ ಉದ್ದೇಶವನ್ನೇ ನೀವು ಪ್ರಶ್ನಿಸಿದಂತಾಗುವುದಿಲ್ಲವೇ? ಹಾಗೆ ಪ್ರಶ್ನಿಸುವುದೇ ಸಂವಿಧಾನ ವಿರೋಧಿಗಳ ಮನಸ್ಥಿತಿ ಅಲ್ಲವೇ?
ಕೊನೆಯದಾಗಿ, ಒಂದು ಮಾತು ಸ್ಪಷ್ಟವಾಗಿರಲಿ. ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸುವುದು ಪರಿಶಿಷ್ಟ ಜಾತಿಯ ನಾಯಕನಿಗೆ ವೈಯಕ್ತಿಕ ಆಯ್ಕೆ; ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವುದು ಸಂವಿಧಾನಬದ್ಧ ಹಕ್ಕು. ಈ ಎರಡರಲ್ಲಿ ಯಾವುದನ್ನೂ ಮತ್ತೊಂದಕ್ಕಿಂತ ಕೀಳಾಗಿ ಕಾಣುವ ಹಕ್ಕು ಯಾರಿಗೂ ಇಲ್ಲ.


