ಮಹಾರಾಷ್ಟ್ರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಸಂದರ್ಭದಲ್ಲಿ ನೋಟಿಸ್ ಜಾರಿಗೊಳಿಸಲಾಗಿದ್ದ 1.2 ಕೋಟಿ ಮತದಾರರ ಪೈಕಿ ಶೇಕಡಾ 99ಕ್ಕಿಂತ ಹೆಚ್ಚು ಮಂದಿಯನ್ನು ಮತ್ತೆ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಶನಿವಾರ (ನ.14) ವರದಿ ಮಾಡಿದೆ.
ನೋಟಿಸ್ ಜಾರಿಗೊಳಿಸಲಾಗಿದ್ದ ಉಳಿದ 72,601 ಮತದಾರರು ತಮ್ಮ ಗುರುತನ್ನು ಪರಿಶೀಲಿಸಲು ದಾಖಲೆಗಳನ್ನು ಸಲ್ಲಿಸಬೇಕಾಗಿದೆ, ಅಥವಾ ಅವರ ವಿವರಗಳ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ ಎಂದು ವರದಿ ಹೇಳಿದೆ.
ಒಟ್ಟು ಮತದಾರರಲ್ಲಿ 62.5 ಲಕ್ಷ ಮಂದಿಗೆ ‘ತಾರ್ಕಿಕ ವ್ಯತ್ಯಾಸಗಳಿಗಾಗಿ’ (logical discrepancies) ಮತ್ತು 59.7 ಲಕ್ಷ ಮಂದಿಗೆ ‘ಅನ್ ಮ್ಯಾಪಿಂಗ್’ ಕಾರಣಕ್ಕಾಗಿ ನೋಟಿಸ್ ನೀಡಲಾಗಿತ್ತು.
ಆಗಸ್ಟ್ 31ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ಎರಡು ಕೋಟಿಗೂ ಹೆಚ್ಚು ವ್ಯಕ್ತಿಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಕರಡು ಪಟ್ಟಿಯಿಂದ ಹೊರಗುಳಿದ ಮತದಾರರು ಪರಿಷ್ಕರಣೆ ಪ್ರಕ್ರಿಯೆ ಪ್ರಾರಂಭವಾಗುವ ಮೊದಲು ರಾಜ್ಯದಲ್ಲಿದ್ದ ಒಟ್ಟು ಮತದಾರರ ಶೇಕಡಾ 21.1 ರಷ್ಟಿದ್ದಾರೆ.
ಅಂತಿಮ ಮತದಾರರ ಪಟ್ಟಿಯನ್ನು ನವೆಂಬರ್ 30 ರಂದು ಪ್ರಕಟಿಸಲಾಗುತ್ತದೆ.
ನೋಟಿಸ್ ಜಾರಿಗೊಳಿಸಲಾಗಿದ್ದ ಮತದಾರರನ್ನು ಪಟ್ಟಿಗೆ ಮರುಸೇರ್ಪಡೆ ಮಾಡಲಾಗಿದ್ದು, ಈ ಹಿಂದೆ ಕೈಬಿಡಲಾಗಿದ್ದ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ಗಳನ್ನು ಸ್ವೀಕೃತ ದಾಖಲೆಗಳ ಪಟ್ಟಿಗೆ ಚುನಾವಣಾ ಆಯೋಗವು ಸೇರ್ಪಡೆಗೊಳಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಉಲ್ಲೇಖಿಸಿದೆ. ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ (ಬಿಎಲ್‌ಒ) ಕಡ್ಡಾಯವಾಗಿದ್ದ ಖುದ್ದು ವಿಚಾರಣೆಯನ್ನು ಚುನಾವಣಾ ಆಯೋಗವು ರದ್ದುಗೊಳಿಸಿದ್ದು, ಮತದಾರರು ವಾಟ್ಸಾಪ್ ಮೂಲಕ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡಿದೆ.
15 ಲಕ್ಷ ‘ಫಾರಂ- 6’ ಅರ್ಜಿಗಳು
ಆಗಸ್ಟ್ 31 ಮತ್ತು ನವೆಂಬರ್ 12 ರ ನಡುವೆ ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರಿಸಲು, ತೆಗೆದುಹಾಕಲು ಮತ್ತು ಮತದಾರರ ವಿವರಗಳನ್ನು ತಿದ್ದುಪಡಿ ಮಾಡಲು ಚುನಾವಣಾ ಆಯೋಗವು 23.6 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದೆ ಎಂದು ವರದಿ ತಿಳಿಸಿದೆ.
ಒಟ್ಟು ಅರ್ಜಿಗಳಲ್ಲಿ 15.1 ಲಕ್ಷ ಮತದಾರರಾಗಿ ಸೇರ್ಪಡೆಗೊಳ್ಳಲು ಕೋರಿ ಸಲ್ಲಿಸಲಾದ ಫಾರಂ- 6 ಅರ್ಜಿಗಳಾಗಿವೆ, 1.2 ಲಕ್ಷ ಹೆಸರು ತೆಗೆದುಹಾಕಲು ಸಲ್ಲಿಸಲಾದ ಫಾರಂ- 7 ಮತ್ತು 7.1 ಲಕ್ಷ ಮತದಾರರ ವಿವರಗಳ ತಿದ್ದುಪಡಿ ಅಥವಾ ಬದಲಾವಣೆಗಳಿಗಾಗಿ ಸಲ್ಲಿಸಲಾದ ಫಾರಂ- 8 ಅರ್ಜಿಗಳಾಗಿವೆ.
ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿಯು ಶುಕ್ರವಾರ ಕೊನೆಗೊಂಡಿದ್ದು, ಇವುಗಳನ್ನು ಇತ್ಯರ್ಥಪಡಿಸುವ ಪ್ರಕ್ರಿಯೆಯು ನ.25 ರಂದು ಮುಕ್ತಾಯಗೊಳ್ಳಲಿದೆ.


