ದೇಶಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಏಕಪಕ್ಷೀಯ ನಿರ್ಧಾರಗಳು ಮತ್ತು ಬೃಹತ್ ಪ್ರಮಾಣದ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಿರುವ ಆರೋಪಗಳಿಗೆ ಸಂಬಂಧಿಸಿದಂತೆ, ಭಾರತೀಯ ಚುನಾವಣಾ ಆಯೋಗಕ್ಕೆ 48 ಔಪಚಾರಿಕ ಲಿಖಿತ ಪ್ರಶ್ನೆಗಳನ್ನು ಕೇಳಲು ಅನುಮತಿ ನೀಡುವಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಇತರ ವಿಪಕ್ಷ ನಾಯಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ಕಾನೂನು ಸುದ್ದಿ ಸಂಸ್ಥೆ ‘ಬಾರ್ ಅಂಡ್ ಬೆಂಚ್’ ವರದಿ ಮಾಡಿದೆ.
ಈ ಅರ್ಜಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಇಬ್ಬರು ಚುನಾವಣಾ ಆಯುಕ್ತರಾದ ಡಾ. ಸುಖ್ಬೀರ್ ಸಿಂಗ್ ಸಂಧು ಮತ್ತು ಡಾ. ವಿವೇಕ್ ಜೋಶಿ ಅವರಿಂದ ಪ್ರಮಾಣಪತ್ರ ಸಲ್ಲಿಸಲು ನಿರ್ದೇಶಿಸುವಂತೆ ಕೋರಲಾಗಿದೆ. ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿನ ಅಕ್ರಮಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಮೂಲ ಅರ್ಜಿಗೆ ಚುನಾವಣಾ ಆಯೋಗವು ಅಕ್ಟೋಬರ್ 26 ಮತ್ತು ನವೆಂಬರ್ 14ರಂದು ಸಲ್ಲಿಸಿರುವ ಪ್ರಮಾಣಪತ್ರಗಳಲ್ಲಿ ಕೇವಲ ಮೇಲ್ನೋಟದ ಸಮರ್ಥನೆಗಳನ್ನು ನೀಡಲಾಗಿದ್ದು, ಪ್ರಮುಖ ಅಧಿಕೃತ ಕಡತಗಳು ಮತ್ತು ದಾಖಲೆಗಳನ್ನು ಮರೆಮಾಚಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಚುನಾವಣಾ ಆಯೋಗವು ತನ್ನ ಪ್ರಮಾಣಪತ್ರದಲ್ಲಿ ಮೂವರು ಸದಸ್ಯರ ಆಯೋಗದ ಸರ್ವಾನುಮತದ ನಿರ್ಧಾರದ ಮೇರೆಗೆ SIR ಆದೇಶಗಳನ್ನು ಹೊರಡಿಸಲಾಗಿದೆ ಎಂದು ತಿಳಿಸಿದೆ. ಆದರೆ, ಈ ನಿರ್ಧಾರಕ್ಕೆ ಪೂರಕವಾಗಿ ಯಾವುದೇ ಕಡತದ ಸಂಖ್ಯೆಗಳು, ದಿನಾಂಕಗಳು ಅಥವಾ ಸಭೆಯ ನಡಾವಳಿಗಳನ್ನು ಬಹಿರಂಗಪಡಿಸಲು ಆಯೋಗ ವಿಫಲವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಅಲ್ಲದೆ, ರಾಷ್ಟ್ರವ್ಯಾಪಿ SIR ಆರಂಭಿಸಲು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು 2025ರ ಆಗಸ್ಟ್ನಲ್ಲಿ ಆಯೋಗವೇ ನೀಡಿದ್ದ ಆರ್ಟಿಐ ಉತ್ತರವನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಮುಖ್ಯ ಚುನಾವಣಾ ಆಯುಕ್ತರು ಇತರ ಇಬ್ಬರು ಆಯುಕ್ತರ ಗಮನಕ್ಕೆ ತರದೆ ಅಥವಾ ಅವರ ಒಪ್ಪಿಗೆಯಿಲ್ಲದೆ ಆಯೋಗದ ಸಾಮೂಹಿಕ ಅಧಿಕಾರವನ್ನು ಏಕಪಕ್ಷೀಯವಾಗಿ ಬಳಸಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಈ ಪ್ರಶ್ನೆಗಳು ಅತ್ಯಗತ್ಯ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.
ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷವು ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ, ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ‘ಮತ ಕಳ್ಳತನ’ದ ಕುರಿತು ಪದೇ ಪದೇ ಎತ್ತಲಾಗುತ್ತಿರುವ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಉತ್ತರಿಸಿಲ್ಲ ಎಂದು ಆರೋಪಿಸಿದೆ. SIR ಪ್ರಕ್ರಿಯೆಯಲ್ಲಿನ ಗಂಭೀರ ಲೋಪಗಳು ಮತ ಕಳ್ಳತನಕ್ಕೆ ದಾರಿ ಮಾಡಿಕೊಟ್ಟಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರು, ಇತರ ಇಬ್ಬರು ಆಯುಕ್ತರು ಮತ್ತು ಐಟಿ ವಿಭಾಗದ ಮಹಾನಿರ್ದೇಶಕರನ್ನು ಪ್ರಶ್ನಿಸಲು ಇಂಡಿಯಾ (INDIA) ಮೈತ್ರಿಕೂಟ ಸುಪ್ರೀಂ ಕೋರ್ಟ್ ಅನುಮತಿ ಕೋರಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾದ 48 ಪ್ರಶ್ನೆಗಳ ಪಟ್ಟಿಯಲ್ಲಿ ಹಲವು ಗಂಭೀರ ಸಂಗತಿಗಳನ್ನು ಪ್ರಸ್ತಾಪಿಸಲಾಗಿದೆ. 2025ರ ಫೆಬ್ರವರಿ ಮತ್ತು 2026ರ ಅಕ್ಟೋಬರ್ ನಡುವೆ SIR, ಇಸಿಐನೆಟ್ (ECINET), ಫಾರ್ಮ್-6 ಅಥವಾ ನ್ಯಾಯಾಲಯದ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ಇತರ ಇಬ್ಬರು ಚುನಾವಣಾ ಆಯುಕ್ತರು ಮುಖ್ಯ ಚುನಾವಣಾ ಆಯುಕ್ತರ ಅಭಿಪ್ರಾಯಕ್ಕೆ ಎಷ್ಟು ಬಾರಿ ಲಿಖಿತ ಆಕ್ಷೇಪಣೆ ಅಥವಾ ಭಿನ್ನಮತ ದಾಖಲಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸುವಂತೆ ಕೋರಲಾಗಿದೆ. ದೇಶಾದ್ಯಂತ SIR ನಡೆಸಲು, ಆನ್ಲೈನ್ ‘ಫಾರ್ಮ್-6’ನಲ್ಲಿ ಹೊಸ ಘೋಷಣೆಯನ್ನು ಸೇರಿಸಲು ಹಾಗೂ ಇಆರ್ಒನೆಟ್ (ERONET) ಮತ್ತು ಇಸಿಐನೆಟ್ ಅನ್ನು ಕೇಂದ್ರೀಕರಿಸಿ ಮತದಾರರ ಪಟ್ಟಿಯನ್ನು ಕೇಂದ್ರದ ನಿಯಂತ್ರಣದಲ್ಲಿಡಲು ನಿರ್ಧರಿಸಿದವರು ಯಾರು ಎಂಬ ಪ್ರಶ್ನೆಗಳನ್ನು ಕೇಳಲಾಗಿದೆ.
ಇದರ ಜೊತೆಗೆ, ಮತದಾರರ ಪಟ್ಟಿಯ ದತ್ತಾಂಶಕ್ಕೆ (Database) ಖಾಸಗಿ ಗುತ್ತಿಗೆದಾರರು ಅಥವಾ ಮಾರಾಟಗಾರರಿಗೆ ತಿದ್ದುಪಡಿ ಮಾಡುವ ಅಧಿಕಾರ ನೀಡಲಾಗಿತ್ತೇ, ಮತದಾರರ ನೋಂದಣಿ ಅಧಿಕಾರಿಗಳ (ERO) ಆದೇಶವಿಲ್ಲದೆ ಸಾಮೂಹಿಕವಾಗಿ ಹೆಸರುಗಳನ್ನು ಅಳಿಸಲಾಗಿದೆಯೇ ಮತ್ತು ಡಾ. ವಿವೇಕ್ ಜೋಶಿ ಅವರು ಪ್ರಸ್ತಾಪಿಸಿದ್ದ ಆಕ್ಸೆಸ್ ಆಡಿಟ್ (Access audit) ಕುರಿತು ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಐಟಿ ವಿಭಾಗದ ಮಹಾನಿರ್ದೇಶಕರು ಸ್ಪಷ್ಟಪಡಿಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. ಕರಡು ಮತ್ತು ಅಂತಿಮ ಮತದಾರರ ಪಟ್ಟಿಯಿಂದ ಕೈಬಿಡಲಾದ ಮತದಾರರ ರಾಜ್ಯವಾರು ಅಂಕಿಅಂಶಗಳು ಹಾಗೂ ತುರ್ತು ಅನುಮೋದನೆಗಳನ್ನು ವಾಟ್ಸಾಪ್ ಅಥವಾ ವೈಯಕ್ತಿಕ ಇಮೇಲ್ ಮೂಲಕ ಪಡೆಯಲಾಗಿದೆಯೇ ಎಂಬ ಕುರಿತು ವಿವರಣೆ ಕೇಳಲಾಗಿದೆ. ಒಂದು ವೇಳೆ ಚುನಾವಣಾ ಆಯೋಗವು ಯಾವುದೇ ಅಧಿಕೃತ ದಾಖಲೆಗಳ ಗೌಪ್ಯತೆಯ ಹಕ್ಕನ್ನು (Privilege) ಪ್ರತಿಪಾದಿಸಿದರೆ, ಪ್ರತಿ ದಾಖಲೆಗೂ ನಿರ್ದಿಷ್ಟ ಕಾರಣಗಳನ್ನು ನ್ಯಾಯಾಲಯದ ಪರಿಶೀಲನೆಗೆ ಸಲ್ಲಿಸುವಂತೆ ನಿರ್ದೇಶಿಸಬೇಕೆಂದು ಅರ್ಜಿದಾರರು ಮನವಿ ಮಾಡಿದ್ದಾರೆ.


