ದಿನಸಿ ಅಂಗಡಿಯ ಹೊರಗೆ ಇಟ್ಟಿದ್ದ ಮಡಕೆಯಿಂದ ನೀರು ಕುಡಿದಿದ್ದಕ್ಕಾಗಿ ದಲಿತ ಯುವಕನ ಮೇಲೆ ದೌರ್ಜನ್ಯ ನಡೆಸಿ ಥಳಿಸಿರುವ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಖಿನ್ವ್ಸರ್ ಉಪವಿಭಾಗದ ಕಾಂತಿಯಾ ಗ್ರಾಮದಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ರಾಜಸ್ಥಾನ | ಮಡಕೆಯಿಂದ
ಸಂತ್ರಸ್ತ ಯುವಕನನ್ನು ಓಂಪ್ರಕಾಶ್ ಮೇಘವಾಲ್ ಎಂದು ಗುರುತಿಸಲಾಗಿದ್ದು, ಅವರು ಸಂಬಂಧಿಕರ ಕಾರ್ಯಕ್ರಮಕ್ಕೆ ಹೋಗುವಾಗ ಸ್ನೇಹಿತನೊಂದಿಗೆ ಅಂಗಡಿಯ ಬಳಿ ನಿಂತಿದ್ದರು. ಈ ವೇಳೆ ಅಂಗಡಿಯ ಹೊರಗೆ ಇಟ್ಟಿದ್ದ ಮಡಕೆಯಿಂದ ನೀರು ಕುಡಿಯಲು ಲೋಹದ ಟಂಬ್ಲರ್ (ಲೋಟಾ) ಬಳಸಿದ್ದರು.
ಸ್ವಲ್ಪ ಸಮಯದ ನಂತರ, ಅಂಗಡಿ ಮಾಲೀಕ ಕಲುರಾಮ್ ಜಾಟ್, ನರಸಿರಾಮ್ ಮತ್ತು ಓಂಪ್ರಕಾಶ್ ಎಂಬ ಇನ್ನೊಬ್ಬ ವ್ಯಕ್ತಿ ಅವರ ಹೆಸರು ಮತ್ತು ಜಾತಿಯನ್ನು ಕೇಳಿದ್ದರು. ಅವರು ಪರಿಶಿಷ್ಟ ಜಾತಿಗೆ ಸೇರಿದವರು ಎಂದು ತಿಳಿದಾಗ, ಅವರು ಜಾತಿ ನಿಂದನೆ ಮಾಡಿ, ಅವರನ್ನು ಥಳಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವೇಳೆ ಅವರನ್ನು ಸಮಾಧಾನ ಪಡೆಸಲು ಓಂಪ್ರಕಾಶ್ ಅವರು ಮಡಕೆಯನ್ನು ಮರಳಿನಿಂದ ಸ್ವಚ್ಛಗೊಳಿಸಲು ಪ್ರಯತ್ನಿಸಿದರು ಎಂದು ಹೇಳಿದ್ದಾರೆ. ಅದಾಗ್ಯೂ, ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ಮತ್ತು ಅವಮಾನವನ್ನು ಮುಂದುವರೆಸಿದ್ದರು. ಇದರಿಂದಾಗಿ ಅವರು ಭಯಭೀತರಾಗಿ ಓಡಿಹೋಗಿ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
ಅಂದು ರಾತ್ರಿ ಸುಮಾರು 11:30 ರ ಸುಮಾರಿಗೆ, ಆರೋಪಿಗಳು ಕ್ಯಾಂಪರ್ ವಾಹನದಲ್ಲಿ ಪ್ರದೇಶವನ್ನು ಹಲವು ಬಾರಿ ಸುತ್ತುವರೆದು, ನಿವಾಸಿಗಳನ್ನು ಬೆದರಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕೃತ್ಯವು ಪ್ರದೇಶದ ಬಡ ದಲಿತ ಕುಟುಂಬಗಳಲ್ಲಿ ಭೀತಿಯನ್ನುಂಟುಮಾಡಿದೆ ಎಂದು ವರದಿಯಾಗಿದೆ.
ಓಂಪ್ರಕಾಶ್ ಮರುದಿನ ಪೊಲೀಸ್ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಉಪ ಪೊಲೀಸ್ ವರಿಷ್ಠಾಧಿಕಾರಿ ರಾಮಪ್ರತಾಪ್ ವಿಷ್ಣೋಯ್ ನೇತೃತ್ವದ ತಂಡ ಗ್ರಾಮಕ್ಕೆ ಭೇಟಿ ನೀಡಿದ್ದು, ಆದರೆ ಆರೋಪಿಗಳು ಈಗಾಗಲೇ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಶೋಧದ ನಂತರ, ಪೊಲೀಸರು ಮೂವರನ್ನೂ ಬಂಧಿಸಿದ್ದು, ಅವರ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಇತರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ನಾಗೌರ್ ಎಸ್‌ಪಿ ನಾರಾಯಣ್ ಟೋಗಾಸ್ ಹೇಳಿದ್ದಾರೆ. ವಿವರವಾದ ತನಿಖೆ ನಡೆಯುತ್ತಿದೆ.
ಆರಂಭದಲ್ಲಿ ಪೊಲೀಸರು ಪ್ರಕರಣವನ್ನು ನಿರ್ಲಕ್ಷಿಸಲು ಪ್ರಯತ್ನಿಸಿದರು ಎಂದು ಸಂತ್ರಸ್ತ ಯುವಕನ ಕುಟುಂಬ ಹೇಳಿಕೊಂಡಿದೆ. ಘಟನೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದರೂ ಪೊಲೀಸ್ ಅಧಿಕಾರಿಗಳು ಮೌನವಾಗಿದ್ದರು. ಮಂಗಳವಾರವೂ ಸಹ, ಸ್ಥಳೀಯ ಪೊಲೀಸರು ವರದಿಗಾರರ ಪ್ರಶ್ನೆಗೆ ಸ್ಪಷ್ಟ ಉತ್ತರಗಳನ್ನು ನೀಡಿರಲಿಲ್ಲ ಎಂದು ವರದಿಯಾಗಿದೆ. ಸಾರ್ವಜನಿಕ ಒತ್ತಡ ಹೆಚ್ಚಿ ವೀಡಿಯೊ ವೈರಲ್ ಆದ ನಂತರವೇ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಆಜಾದ್ ಸಮಾಜ ಪಕ್ಷದ ಮುಖ್ಯಸ್ಥ ಮತ್ತು ನಗೀನಾ ಸಂಸದ ಚಂದ್ರಶೇಖರ್ ಆಜಾದ್ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದು ಭಾರತದಲ್ಲಿ ಬೇರೂರಿರುವ ಜಾತಿ ತಾರತಮ್ಯದ ಕರಾಳ ಜ್ಞಾಪನೆ ಎಂದು ಕರೆದಿದ್ದಾರೆ.
“ಕಾಂಟಿಯಾ ಗ್ರಾಮದಲ್ಲಿ, ದಲಿತ ಯುವಕರನ್ನು ನಿಂದಿಸಲಾಯಿತು, ಅವಮಾನಿಸಲಾಯಿತು ಮತ್ತು ಕುಡಿಯುವ ನೀರಿಗಾಗಿ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಒತ್ತಾಯಿಸಲಾಯಿತು. ಇದು ಕೇವಲ ವಿವಾದವಲ್ಲ – ಇದು ವ್ಯವಸ್ಥಿತ, ಶತಮಾನಗಳಷ್ಟು ಹಳೆಯ ದ್ವೇಷದ ಪ್ರತಿಬಿಂಬವಾಗಿದೆ” ಎಂದು ಅವರು ಹೇಳಿದ್ದು, “ದಲಿತನಿಗೆ ಇನ್ನೂ ನೀರು ಕುಡಿಯುವ ಹಕ್ಕಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಈ ಘಟನೆಯು 2022 ರಲ್ಲಿ ಜಾಲೋರ್‌ನಲ್ಲಿ ನಡೆದ ಪ್ರಕರಣಕ್ಕೆ ಹೋಲುತ್ತದೆ. ಈ ಘಟನೆಯಲ್ಲಿ ಸವರ್ಣೀಯರಿಗೆ ಮೀಸಲಾದ ಮಡಕೆಯಿಂದ ನೀರು ಕುಡಿದಿದ್ದಕ್ಕಾಗಿ ಶಾಲಾ ಶಿಕ್ಷಕರಿಂದ ದಲಿತ ವಿದ್ಯಾರ್ಥಿಯನ್ನು ಹೊಡೆದು ಕೊಲ್ಲಲಾಗಿತ್ತು. ರಾಜಸ್ಥಾನ | ಮಡಕೆಯಿಂದ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಕಣ್ತಪ್ಪಿನಿಂದ ಭಾರತೀಯ ಮಹಿಳೆಯನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಿದ ಅಸ್ಸಾಂ ಬಿಜೆಪಿ ಸರ್ಕಾರ!
ಕಣ್ತಪ್ಪಿನಿಂದ ಭಾರತೀಯ ಮಹಿಳೆಯನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಿದ ಅಸ್ಸಾಂ ಬಿಜೆಪಿ ಸರ್ಕಾರ!

