Homeಮುಖಪುಟಜಾತಿಗಣತಿ: ಕೊನೆಗೂ ಮಣಿದ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ

ಜಾತಿಗಣತಿ: ಕೊನೆಗೂ ಮಣಿದ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ

- Advertisement -
- Advertisement -

ಮುಂದಿನ ಜನಗಣತಿಯಲ್ಲಿ ಜನಸಂಖ್ಯೆಯನ್ನು ಜಾತಿವಾರು ಲೆಕ್ಕಹಾಕಲಾಗುತ್ತದೆ ಎಂದು ಕೇಂದ್ರ ಸರಕಾರ ಘೋಷಿಸಿದೆ. ಇದೊಂದು ಚಾರಿತ್ರಿಕ ಬೆಳವಣಿಗೆ. ಏಕೆಂದರೆ, ಸ್ವಾತಂತ್ರ್ಯಾನಂತರ ಜಾತಿವಾರು ಜನಗಣತಿಯನ್ನು ರದ್ದುಗೊಳಿಸಲಾಗಿತ್ತು. ಬ್ರಿಟಿಷ್ ಆಳ್ವಿಕೆಯಲ್ಲಿ ಕೊನೆಯ ಜನಗಣತಿ 1931ರಲ್ಲಿ ನಡೆದಿತ್ತು ಮತ್ತು ಅದರಲ್ಲಿ ಜನಸಂಖ್ಯೆಯನ್ನು ಜಾತಿವಾರು ಲೆಕ್ಕಹಾಕಲಾಗಿತ್ತು. ಮುಂದೆ 1941ರಲ್ಲಿ ಯುದ್ಧದ ಕಾರಣಕ್ಕೆ ಜನಗಣತಿ ಪೂರ್ಣವಾಗಲಿಲ್ಲ. ಸ್ವಾತಂತ್ರ್ಯಾನಂತರ ಮೊದಲ ಜನಗಣತಿ 1951ರಲ್ಲಿ ನಡೆದಾಗ ಅದನ್ನು ಜಾತಿವಾರು ನಡೆಸಬೇಕೇ ಅಥವಾ ಜಾತಿಯನ್ನು ಪರಿಗಣಿಸದೆ ನಡೆಸಬೇಕೇ ಎಂಬ ಚರ್ಚೆ ನಡೆಯಿತು. ಭಾರತವನ್ನು ಆಧುನಿಕವಾಗಿ ಕಟ್ಟಬೇಕು ಎಂದು ಹೊರಟಿದ್ದ ಮೊದಲ ಪ್ರಧಾನ ಮಂತ್ರಿ ಜವಾಹರ್ ಲಾಲ್ ನೆಹರು ಅವರಿಗೆ ಜಾತಿವಾರು ಜನಗಣತಿ ನಡೆಸುವ ಕುರಿತು ಒಲವಿರಲಿಲ್ಲ. ಹೇಗೂ ಸಂವಿಧಾನದಲ್ಲಿ ಜಾತಿ ರಹಿತ ಸಮಾಜವನ್ನು ಕಟ್ಟುವ ಆಶಯವಿದೆ. ಆದಕಾರಣ ಜಾತಿ ಗುರುತನ್ನು ಸಮಾಜದಲ್ಲಿ ದೃಢಪಡಿಸುವ ಜಾತಿವಾರು ಜನಗಣತಿ ಯಾಕೆ ಎಂಬ ನಿಲುವು ನೆಹರು ಅವರದ್ದಾಗಿತ್ತು. ಹಾಗಾಗಿ, ಸ್ವತಂತ್ರ ಭಾರತದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳನ್ನುಳಿದು ಇತರ ವರ್ಗಗಳ ಜನಸಂಖ್ಯೆಯನ್ನು ಜಾತಿವಾರು ನಡೆಸದಿರಲು ತೀರ್ಮಾನಿಸಲಾಯಿತು.

ಈ ‘ಸಮತೋಲನ’ವನ್ನು ಕದಡಿಸಿದ್ದು 1992ರಲ್ಲಿ ಸುಪ್ರೀಂಕೋರ್ಟ್ ಮಂಡಲ್ ಆಯೋಗ ಪ್ರಕರಣದಲ್ಲಿ ನೀಡಿದ ತೀರ್ಪು. ಈ ತೀರ್ಪಿನಲ್ಲಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಅಂಕಿಅಂಶಗಳನ್ನು ಸಂಗ್ರಹಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿತು. ಇದರ ಅರ್ಥ ಪರ್ಯಾಯವಾಗಿ ಜಾತಿಗಣತಿ ನಡೆಸಬೇಕೆಂದೇ; ಆ ದಿನಗಳಲ್ಲಿ ಜಾತಿಜನಗಣತಿಯ ಕುರಿತು ಬೇಡಿಕೆಗಳು ಬರಲಾರಂಭಿಸಿದವು. ಮಂಡಲ್ ತೀರ್ಪಿನ ನಂತರ 2001ರ ಜನಗಣತಿಯ ವೇಳೆಗೆ ಜಾತಿವಾರು ಜನಗಣತಿ ನಡೆಸಬೇಕು ಎಂದು ಅಂದಿನ ಸರಕಾರದ ಸಮಾಜ ಕಲ್ಯಾಣ ಮಂತ್ರಾಲಯ ವಾಜಪೇಯಿ ಸರಕಾರವನ್ನು ಕೋರಿತ್ತು. ಆದರೆ, ವಾಜಪೇಯಿ ಸರಕಾರ ಅದಕ್ಕೆ ಮನಸ್ಸು ಮಾಡಲಿಲ್ಲ. ನಂತರ 2011ರಲ್ಲಿ ಜನಗಣತಿ ನಡೆದಾಗ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಇತ್ತು. ಜಾತಿಗಣತಿ ನಡೆಸಬೇಕೆಂಬ ಬೇಡಿಕೆ ಮತ್ತೆ ಮುನ್ನಲೆಗೆ ಬಂತು. ಆಗ ವಿರೋಧ ಪಕ್ಷದಲ್ಲಿದ್ದ ಬಿಜೆಪಿಯ ಕೆಲವು ನಾಯಕರು ಕೂಡಾ ಜಾತಿಜನಗಣತಿ ಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೂ ಯುಪಿಎ ಸರಕಾರ ಕೂಡಾ 2011ರ ಜನಗಣತಿಯನ್ನು ಜಾತಿವಾರು ನಡೆಸುವುದಕ್ಕೆ ಮುಂದಾಗಲಿಲ್ಲ; ಬದಲಿಗೆ 2012ರಲ್ಲಿ ದೇಶವ್ಯಾಪಿ ಸಾಮಾಜಿಕ-ಆರ್ಥಿಕ ಜಾತಿಗಣತಿ ನಡೆಸಿತು. ಆದರೆ ಆ ವರದಿಯನ್ನು ಬಹಿರಂಗಗೊಳಿಸಲಿಲ್ಲ. ಬಿಜೆಪಿಯ ಕೆಲವು ನಾಯಕರು 2011ರಲ್ಲಿ ಜಾತಿಜನಗಣತಿ ಆಗಬೇಕು ಎಂದು ಬಯಸಿದ್ದರೂ, 2014ರಲ್ಲಿ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದನಂತರ ಅದು ಜಾತಿಜನಗಣತಿಯನ್ನು ವಿರೋಧಿಸಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಬಿಜೆಪಿ ನಾಯಕರು ಜಾತಿಜನಗಣತಿಯ ವಿರುದ್ಧ ಕೆಟ್ಟ ಟೀಕೆಗಳನ್ನು ಮಾಡುತ್ತಲೇ ಬಂದಿದ್ದರು.

ಕರ್ನಾಟಕದಲ್ಲಿ ಹತ್ತು ವರ್ಷಗಳ ಹಿಂದೆ ನಡೆದ ಜಾತಿ ಜನಗಣತಿಯ ವಿವರಗಳನ್ನು ಸರಕಾರ ಅಧಿಕೃತವಾಗಿ ಒಪ್ಪಿಕೊಳ್ಳಬೇಕೋ ಬೇಡವೋ ಎನ್ನುವ ಚರ್ಚೆ ಇತ್ತೀಚಿಗೆ ಮುನ್ನಲೆಗೆ ಬಂದಮೇಲೆ ಇದ್ದಕ್ಕಿದ್ದ ಹಾಗೆ ಕೇಂದ್ರ ಸರಕಾರವು ಕೂಡಾ ಮುಂದಿನ ಜನಗಣತಿಯಲ್ಲಿ ಜನಸಂಖ್ಯೆಯನ್ನು ಜಾತಿವಾರು ಲೆಕ್ಕ ಹಾಕಲಾಗುವುದು ಎಂದು ಘೋಷಿಸಿತು. ಜಾತಿ ಜನಗಣತಿಯನ್ನು ನಖಶಿಖಾಂತವಾಗಿ ವಿರೋಧಿಸುತ್ತಾ ಬಂದಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಅನಿರೀಕ್ಷಿತ ಎಂಬಂತೆ ತನ್ನ ನಿಲುವು ಬದಲಿಸಿದ್ಯಾಕೆ, ನಿಜಕ್ಕೂ ಜಾತಿಜನಗಣತಿ ನಡೆಯುತ್ತದೆಯೇ, ನಡೆದರೂ ವಿವರಗಳನ್ನು ಬಿಡುಗಡೆ ಮಾಡಲಾಗುತ್ತದೆಯೇ, ಬಿಡುಗಡೆ ಮಾಡಿದರೂ ಆ ಅಂಕಿ-ಸಂಖ್ಯೆಗಳನ್ನು ವಿಶ್ವಾಸಾರ್ಹವೆಂದು ಸ್ವೀಕರಿಸಬಹುದೇ ಇತ್ಯಾದಿ ಹತ್ತಾರು ಪ್ರಶ್ನೆಗಳು ಈಗ ಎದ್ದಿವೆ. ಏನೇ ಇರಲಿ, ಒಂದವೇಳೆ ಘೋಷಿಸಿದಂತೆ ಜಾತಿಜನಗಣತಿ ಏನಾದರೂ ನಡೆದೇಹೋಗಿ ಫಲಿತಾಂಶ ಬಹಿರಂಗವಾದರೆ ಅದು ಚಾರಿತ್ರಿಕ ಎನ್ನಿಸಲಿದೆ. ಸ್ವಾತಂತ್ರ್ಯಾನಂತರದ ಎಂಟು ದಶಕಗಳಲ್ಲಿ ಜಾತಿ ಉಳಿದದ್ದು ಮಾತ್ರವಲ್ಲ, ಸ್ವತಂತ್ರ ಭಾರತ ಸಾಧಿಸಿದ ಅಭಿವೃದ್ಧಿಯ ರಥವೂ ಜಾತಿಯ ಪಥದಲ್ಲೇ ಸಾಗುತ್ತಿರುವ ವಾಸ್ತವ ದೇಶದ ಕಣ್ಣ ಮುಂದಿರುವುದರಿಂದ, ಇನ್ನು ಜನಸಂಖ್ಯೆಯನ್ನು ಜಾತಿವಾರು ಲೆಕ್ಕ ಹಾಕದೆ ಇರಲಾರದು ಎಂಬ ಒಂದು ಸರ್ವಾನುಮತದ ನಿರ್ಣಯಕ್ಕೆ, ಇಷ್ಟವಿದ್ದೋ ಇಲ್ಲದೆಯೋ, ಇಡೀ ದೇಶವೇ ಬಂದಿರುವ ಹಾಗಿದೆ.

****

ಕರ್ನಾಟಕಕ್ಕೆ ಸಂಬಂಧಿಸಿದಂತೆ ಈಗ ಎದ್ದಿರುವ ಹೊಸ ಪ್ರಶ್ನೆ ಎಂದರೆ ಈಗ ಹೇಗೂ ಜಾತಿವಾರು ಜನಸಂಖ್ಯೆಯನ್ನು ಮುಂದಿನ ಜನಗಣತಿಯೇ ಕರಾರುವಾಕ್ಕಾಗಿ ನೀಡಲಿರುವುದರಿಂದ ಹತ್ತು ವರ್ಷಗಳಷ್ಟು ಹಳೆಯದಾಗಿರುವ ಕರ್ನಾಟಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅರ್ಥಾತ್ ಜಾತಿಜನಗಣತಿಯನ್ನು ಅಧಿಕೃತವಾಗಿ ಸ್ವೀಕರಿಸುವ ಅಗತ್ಯವಾದರೂ ಏನಿದೆ ಎನ್ನುವುದು. ಜನಗಣತಿಯಲ್ಲೂ ಕರ್ನಾಟಕದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮಾಡಿದ ಹಾಗೆ ಹಲವಾರು ಸಾಮಾಜಿಕ ಮತ್ತು ಶೈಕ್ಷಣಿಕ ಅಂಶಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತದೆ. ಆದಕಾರಣ ಜಾತಿವಾರು ಜನಸಂಖ್ಯೆಯನ್ನು ಅರಿಯಲು ಮತ್ತು ಜಾತಿವಾರು ಸಾಧಿಸಿದ ಅಭಿವೃದ್ಧಿ ಏನು ಅಂತ ತಿಳಿದುಕೊಳ್ಳುವುದಕ್ಕೆ ಕೂಡಾ ಜನಗಣತಿಯಲ್ಲಿ ದೊರೆಯಲಿರುವ ಮಾಹಿತಿ ಸಾಕಾಗುತ್ತದೆ. ಹಾಗಾಗಿ ಈಗ ಕರ್ನಾಟಕದ ವಿವಾದಿತ ಜಾತಿಗಣತಿಯ ಮಾಹಿತಿಯನ್ನು ಕರ್ನಾಟಕ ಸರ್ಕಾರ ಅಧಿಕೃತವಾಗಿ ಒಪ್ಪಿಕೊಳ್ಳಬೇಕೋ ಬೇಡವೋ ಎನ್ನುವ ಪ್ರಶ್ನೆ ಅನಾಯಾಸವಾಗಿ ಅಪ್ರಸ್ತುತಗೊಂಡಿತೇ? ರಾಜ್ಯ ಸರಕಾರದ ನಿಲುವು ಏನು ಎನ್ನುವುದು ಇನ್ನೂ ಅಧಿಕೃತವಾಗಿ ತಿಳಿದಿಲ್ಲ.

ಕರ್ನಾಟಕದಲ್ಲಿ ನಡೆದಿರುವ ಜಾತಿಗಣತಿಯ ವಿವರಗಳು ಹಳೆಯದಾಗಿರಬಹುದು. ಜನಗಣತಿಯ ಮೂಲಕ ಹೆಚ್ಚು ವಿಶ್ವಾಸಾರ್ಹವಾದ ಜಾತಿವಾರು ಜನಸಂಖ್ಯೆ ಮುಂದಿನ ಜನಗಣತಿಯಲ್ಲೇ ಲಭಿಸಬಹುದು. ಇವೆರಡೂ ಒಪ್ಪಿಕೊಳ್ಳತಕ್ಕ ವಿಚಾರಗಳಾದರೂ, ಈ ಕಾರಣಗಳಿಂದಾಗಿ ಕರ್ನಾಟಕದ ಜಾತಿಜನಗಣತಿಯ ವಿವರಗಳನ್ನು ಶಾಶ್ವತವಾಗಿ ಕಡೆಗಣಿಸಬೇಕೆಂಬ ಬೇಡಿಕೆ ರಾಜಕೀಯವಾಗಿ ಸೂಕ್ತವೆನಿಸುವುದಿಲ್ಲ. ಯಾಕೆಂದರೆ, ಒಂದು ವೇಳೆ 2026ರಲ್ಲಿ ದೇಶಾದ್ಯಂತ ಜನಗಣತಿ ನಡೆದರೂ ಅಧಿಕೃತವಾಗಿ ಮಾಹಿತಿ ಹೊರಬರುವ ವೇಳೆಗೆ ವರ್ಷ ಮುಗಿದು 2027 ಆಗಬಹುದು. ಮುಂದಿನ ಚುನಾವಣೆ ಕರ್ನಾಟಕದಲ್ಲಿ 2028ರ ಆರಂಭದಲ್ಲೇ ಇರುವ ಕಾರಣ 2027ನೇ ಇಸವಿ ಚುನಾವಣೆಗೆ ತೀರಾ ಹತ್ತಿರ ಎನ್ನಬಹುದಾದ ಸಮಯ. ಜನಗಣತಿಯ ಮೂಲಕ ಸಂಗ್ರಹವಾಗಲಿರುವ ಜಾತಿ ಆಧಾರಿತ ಅಭಿವೃದ್ಧಿ ಕುರಿತ ಮಾಹಿತಿ ಹೊರಬರಲು ಇನ್ನಷ್ಟೂ ಸಮಯ ಬೇಕಾಗಬಹುದು. ಕೇಂದ್ರ ಸರಕಾರ ಕೂಡಾ ತನ್ನ ರಾಜಕೀಯಕ್ಕೆ ಸೂಕ್ತವಾಗುವ ರೀತಿಯಲ್ಲಿ ಈ ಅಂಕಿಅಂಶಗಳ ಬಿಡುಗಡೆಯ ಕಾಲಾನುಕ್ರಮಣಿಕೆಯನ್ನು ನಿರ್ಣಯಿಸಬಹುದು. ಅಂದರೆ, ಮುಂದಿನ ಜನಗಣತಿಯಲ್ಲಿ ಎಲ್ಲಾ ರೀತಿಯ ಜಾತಿವಾರು ಮಾಹಿತಿ ಲಭಿಸಿದರೂ ಅದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಈಗಿನ ಕಾಂಗ್ರೆಸ್ ಸರಕಾರಕ್ಕೆ ಸಾಕಷ್ಟು ಸಮಯ ಸಿಗದೇ ಹೋಗಬಹುದು. ಹಾಗಾಗಿ ಕರ್ನಾಟಕದ ಜಾತಿಗಣತಿಯ ಮಾಹಿತಿ ಕೇಂದ್ರದ ನಿರ್ಧಾರದಿಂದಾಗಿ ಅಪ್ರಸ್ತುತವಾಗಿದೆ ಎನ್ನುವುದಕ್ಕಿಂತ ಹೆಚ್ಚಾಗಿ ಹೊಸ ರೀತಿಯ ಪ್ರಸ್ತುತತೆಯನ್ನು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಜಾತಿಗಣತಿಯ ಸುತ್ತ ಎದ್ದಿರುವ ಅಷ್ಟೂ ಪ್ರಶ್ನೆಗಳೂ ಇನ್ನೂ ಜೇವಂತ ಇವೆ ಮತ್ತು ಅವುಗಳ ಕುರಿತ ಚರ್ಚೆ ಮುಂದುವರಿಯಬೇಕಿದೆ.

ಎಲ್.ಜಿ. ಹಾವನೂರು

ಜಾತಿವಾರು ಸಂಖ್ಯೆಯ ವಿಚಾರವಾಗಿ ಪ್ರಬಲ ಜಾತಿಗಳಿಂದ ಎದುರಾದ ಪ್ರತಿರೋಧಕ್ಕೆ ಸರಕಾರ ಯಾವ ಪರಿಹಾರ ಕಂಡುಕೊಳ್ಳುತ್ತದೆ ಅಥವಾ ಮೀಸಲಾತಿ ಹೆಚ್ಚಿಸುವ ಪ್ರಸ್ತಾಪ ಸುಪ್ರೀಕೋರ್ಟ್‌ನಲ್ಲಿ ಯಾವ ರೀತಿಯ ಅಡೆತಡೆಗಳನ್ನು ಎದುರಿಸಲಿದೆ ಎನ್ನುವ ಪ್ರಶ್ನೆಗಳಾಚೆಗೆ, ಕರ್ನಾಟಕದ ಜಾತಿಗಣತಿಯ ಸುತ್ತ ಎದ್ದಿರುವ ವಿವಾದದಿಂದ ರಾಜಕೀಯ ಪಾಠ ಕಲಿಯಬೇಕಿರುವುದು ಈ ರಾಜ್ಯದ ಹಿಂದುಳಿದ ವರ್ಗಗಳು. ಹೇಳಿಕೇಳಿ ಈ ಇಡೀ ಯೋಜನೆಯನ್ನು ಕರ್ನಾಟಕ ಸರಕಾರ ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ಮಾಡಿಸಿದ್ದೇ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುವುದಕ್ಕೋಸ್ಕರ.

ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಅಥವಾ ಹೆಚ್ಚಿಸುವ ವಿಚಾರ ಬಂದಾಗಲೆಲ್ಲಾ ವಿವಾದ ಎದ್ದಿರುವುದು ಚಾರಿತ್ರಿಕ ಸತ್ಯ. ಸ್ವಾತಂತ್ರ್ಯಪೂರ್ವದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಿಲ್ಲರ್ ಆಯೋಗ ರಚಿಸಿ ಅದರ ವರದಿಯ ಪ್ರಕಾರ ಬ್ರಾಹ್ಮಣೇತರ ವರ್ಗಗಳಿಗೆ ಮೀಸಲಾತಿ ನೀಡಲು ಮುಂದಾದಾಗ ಅದು ವಿವಾದವಾಯಿತು. ಆಗ ಜನತಂತ್ರ ವ್ಯವಸ್ಥೆ ಇಲ್ಲದಿದ್ದ ಕಾರಣಕ್ಕೆ ನಾಲ್ವಡಿಯವರು ವಿರೋಧಕ್ಕೆ ಸೊಪ್ಪುಹಾಕಲಿಲ್ಲ. ಸ್ವಾತಂತ್ರ್ಯನಂತರ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಎಲ್.ಜಿ. ಹಾವನೂರು ನೇತೃತ್ವದಲ್ಲಿ ಮೊದಲ ಹಿಂದುಳಿದ ವರ್ಗಗಳ ಆಯೋಗ ರಚಿಸಿ ಮೀಸಲಾತಿ ನೀತಿಯ ಪರಿಷ್ಕರಣೆಗೆ ಮುಂದಾದಾಗಲೂ ಮತ್ತೆ ವಿರೋಧ ಮತ್ತು ವಿವಾದ ಎದ್ದಿತು. ದೇವರಾಜ ಅರಸು ಅವರು ವಿರೋಧ ವ್ಯಕ್ತಪಡಿಸಿದ ಪ್ರಬಲ ಜಾತಿಗಳನ್ನು ಯಾವುದೋ ರೀತಿಯಲ್ಲಿ ಮೀಸಲಾತಿ ಸೌಲಭ್ಯದಡಿ ತಂದ ನಂತರವೇ ವರದಿಯ ಜಾರಿ ಸಾಧ್ಯವಾಯಿತು. ಜನತಾ ಪಕ್ಷದ ಸರಕಾರ ನೇಮಿಸಿದ ಎರಡನೆಯ ಹಿಂದುಳಿದ ಆಯೋಗ ಅಥವಾ ವೆಂಕಟಸ್ವಾಮಿ ಆಯೋಗದ ವರದಿಗೆ ಎದುರಾದ ವಿರೋಧಕ್ಕೆ ಮಣಿದು ಅಂದಿನ ರಾಮಕೃಷ್ಣ ಹೆಗ್ಡೆ ಸರಕಾರ ಅದನ್ನು ತಿರಸ್ಕರಿಸಬೇಕಾಯಿತು. ಅದೇ ಸರಕಾರ ನೇಮಿಸಿದ ಓ. ಚಿನ್ನಪ್ಪ ರೆಡ್ಡಿ ಆಯೋಗದ ವರದಿಯನ್ನು ಮುಂದೆ 1994ರಲ್ಲಿ ಮುಂಖ್ಯಮಂತ್ರಿಯಾಗಿದ್ದ ಕಾಂಗ್ರೆಸ್‌ನ ವೀರಪ್ಪ ಮೊಯಿಲಿ ಅವರು ಜಾರಿಗೆ ತರಲು ಮುಂದಾದಾಗ ಮತ್ತೆ ವಿರೋಧ; ಮತ್ತೆ ವಿವಾದ. ಕೊನೆಗೆ ಹಲವು ರೀತಿಯ ಹೊಂದಾಣಿಕೆಗಳನ್ನು ಮಾಡಿಕೊಂಡ ನಂತರವೇ ವರದಿಯ ಜಾರಿ ಸಾಧ್ಯವಾದದ್ದು.

ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಸಂವಿಧಾನಾತ್ಮಕವಾಗಿಯೇ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ವ್ಯವಸ್ಥೆ ಇದೆ. ಸ್ವಾತಂತ್ರ್ಯಪೂರ್ವದಲ್ಲೇ ಇದು ಜಾರಿಗೆ ಬಂದಿತ್ತು. ಆದರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ವಿಚಾರ ಬಂದಾಗಲೆಲ್ಲಾ ಎಲ್ಲಾ ಜಾತಿಯವರೂ ಮುಂದೆ ಬಂದು ನಮಗೂ ಮೀಸಲಾತಿ ಬೇಕು ಎಂದು ಕೇಳುವ ಪರಿಪಾಠವೊಂದು ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದ ಎಲ್ಲೆಡೆ ಕೂಡಾ ಇದೆ. ಇದಕ್ಕೆ ಒಂದು ಕಾರಣ ಹಿಂದುಳಿದ ವರ್ಗಗಳಿಗೆ ಸೇರಿದ ವಿವಿಧ ಜಾತಿಗಳು ಎಷ್ಟು ಹಿಂದುಳಿದಿವೆ ಎನ್ನುವ ವಿಚಾರದಲ್ಲಿ ಕರಾರುವಾಕ್ಕಾದ ಅಧಿಕೃತ ಮಾಹಿತಿ ಇಲ್ಲದೇ ಇರುವುದು. ಕರ್ನಾಟಕದಲ್ಲಿ ಹಿಂದಿನ ಸಿದ್ದರಾಮಯ್ಯ ಸರಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದ್ದು ಈ ಸಮಸ್ಯೆಯನ್ನು ನೀಗಿಸುವ ಉದ್ದೇಶದಿಂದ. ಮುಖ್ಯವಾಗಿ ಸರಕಾರೀ ಹುದ್ದೆಗಳಲ್ಲಿ, ಶಿಕ್ಷಣದಲ್ಲಿ ಮತ್ತು ಸಂಪತ್ತಿನಲ್ಲಿ ಯಾರ ಪಾಲು ಎಷ್ಟಿದೆ ಎನ್ನುವುದು ಬಹಿರಂಗವಾಗಿ ಹಿಂದುಳಿದ ವರ್ಗಗಳು ನಿಜಕ್ಕೂ ಹಿಂದುಳಿದಿದ್ದು ಕಂಡು ಬಂದರೆ ಅವರಿಗೆ ಈಗಾಗಲೇ ನೀಡಲಾಗುವ ಮೀಸಲಾತಿಗೆ ಸಮರ್ಥನೆ ಒದಗುತ್ತದೆ. ಅವರಿಗೆ ಮೀಸಲಾತಿ ಹೆಚ್ಚಿಸಬೇಕಾದ ಅಗತ್ಯವಿದ್ದರೆ ಅದೂ ತಿಳಿಯುತ್ತದೆ. ಹಿಂದುಳಿದ ಜಾತಿಗಳ ಪೈಕಿ ಯಾರಾದರೂ ಪ್ರಬಲ ಜಾತಿಗಳಷ್ಟೇ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರಿದಿದ್ದರೆ ಅವರನ್ನು ಮೀಸಲಾತಿಯ ಪಟ್ಟಿಯಿಂದ ಕೈಬಿಡುವ ಸಾಧ್ಯತೆಯೂ ಹುಟ್ಟಿಕೊಳ್ಳುತ್ತದೆ. ಈ ಕಾರಣದಿಂದ ಮುಖ್ಯವಾಗಿ ಹಿಂದುಳಿದ ಜಾತಿಗಳು ಮುಂದೆ ಬಂದು ಕರ್ನಾಟಕದ ಜಾತಿಗಣತಿ ವರದಿಯನ್ನು ಸ್ವೀಕರಿಸಲು ಸರಕಾರದ ಮೇಲೆ ಒತ್ತಡ ತರಬೇಕಿತ್ತು. ಅದರಲ್ಲಿ ಇರಬಹುದಾದ ಕುಂದುಕೊರತೆಗಳನ್ನು ಮುಕ್ತಮನಸ್ಸಿನಿಂದ ಸರಿಪಡಿಸುವ ವಿಧಾನಗಳನ್ನು ಪ್ರತಿಪಾದಿಸಿ ಇತರ ಜಾತಿಗಳೊಡನೆ ಸಂಘರ್ಷಕ್ಕಿಳಿಯದೆ ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಅಹವಾಲನ್ನು ವೃತ್ತಿಪರವಾಗಿ ಮಂಡಿಸಬೇಕಿತ್ತು. ಆದರೆ, ಕರ್ನಾಟಕದ ಹಿಂದುಳಿದ ವರ್ಗಗಳು ಇದನ್ನು ಮಾಡುತ್ತಿಲ್ಲ. ವರದಿಯ ಜಾರಿಗಾಗಿ ಹಿಂದುಳಿದ ವರ್ಗಗಳ ನಡುವಿನಿಂದ ಅಲ್ಲೊಂದು ಇಲ್ಲೊಂದು ಧ್ವನಿ ಕೇಳಿಸಿದೆ. ಆದರೆ ವರದಿಯನ್ನು ವಿರೋಧಿಸಲೆಂದು ಎದ್ದಿರುವ ಆರ್ಭಟದ ಎದುರು ಆ ಧ್ವನಿಗಳು ಕ್ಷೀಣವಾಗಿಯೇ ಉಳಿದಿವೆ. ಗಣತಿಯಲ್ಲಿ ತಮ್ಮ ಜಾತಿಯ ಜನರ ಸಂಖ್ಯೆ ನಿರೀಕ್ಷೆಗಿಂತ ಕಡಿಮೆ ಕಂಡುಬಂದಿದೆ ಎಂಬ ಒಂದೇ ಕಾರಣಕ್ಕೆ ಪ್ರಬಲ ಜಾತಿಗಳು ಸರಕಾರದ ಮೇಲೆ ಮುಗಿಬಿದ್ದಾಗಲೂ ಕರ್ನಾಟಕದ ಹಿಂದುಳಿದ ವರ್ಗಗಳಿಂದ ಬಂದ ಪ್ರತಿಕ್ರಿಯೆ ಅಷ್ಟಕ್ಕಷ್ಟೇ. ಪ್ರಬಲ ಜಾತಿಗಳ ಸಂಖ್ಯೆಯಲ್ಲಿ ಆಗಿರಬಹುದಾದ ವ್ಯತ್ಯಯಕ್ಕೆ ಕಾರಣಗಳನ್ನು ನೀಡಲಾಯಿತು. ಅಷ್ಟೆಅಲ್ಲ, ಸರಿಯಾದ ದಾಖಲಾತಿ ನಡೆದಿದೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಲು ಸಂಬಂಧಪಟ್ಟ ಎಲ್ಲರಿಗೂ ಅವಕಾಶ ನೀಡುವ ಸಾಧ್ಯತೆಯನ್ನು ಸರಕಾರ ಪರಿಶೀಲಿಸುತ್ತಿದೆ ಎಂದೂ ಮನವರಿಕೆ ಮಾಡುವ ಪ್ರಯತ್ನ ನಡೆಯಿತು. ಆದರೂ, ವರದಿಯನ್ನು ಕಸದಬುಟ್ಟಿಗೆ ಎಸೆಯಬೇಕು, ಸುಡಬೇಕು ಎಂಬಿತ್ಯಾದಿ ಉಗ್ರ ಘೋಷಣೆಗಳನ್ನು ಪ್ರಬಲ ಜಾತಿಗಳಿಗೆ ಸೇರಿದ ಕೆಲವರು ಮಾಡಿದರು. ಸರಕಾರವನ್ನೇ ಉರುಳಿಸಿಬಿಡುತ್ತೇವೆ ಅಂತ ಇನ್ನು ಕೆಲವರು ಬೆದರಿಕೆ ಹಾಕಿದರು. ಇಂತಹ ಯಾವುದೇ ಬೆಳವಣಿಗೆಗಳು ಕೂಡಾ ಹಿಂದುಳಿದ ವರ್ಗದವರನ್ನು ತಟ್ಟಬೇಕಾದಷ್ಟು ತಟ್ಟಲಿಲ್ಲ. ಅಲ್ಲೊಬ್ಬ ಇಲ್ಲೊಬ್ಬ ನಾಯಕ ಹೇಳಿಕೆ ನೀಡಿದ್ದು ಬಿಟ್ಟರೆ, ಒಂದೆರಡು ಸಂಘಟನೆಗಳು ತಣ್ಣನೆ ವರದಿಯನ್ನು ಸಮರ್ಥಿಸಿದ್ದು ಬಿಟ್ಟರೆ ತಮ್ಮ ಸ್ಥಿತಿಗತಿಗೆ ಕನ್ನಡಿ ಹಿಡಿಯುವ ಅಧಿಕೃತ ವರದಿಯೊಂದನ್ನು ‘ಕಸ’ ಎಂದು ಹೀಗೆಳೆಯುವಾಗಲೂ ಹಿಂದುಳಿದ ಜಾತಿಗಳ ಕಡೆಯಿಂದ ಗಟ್ಟಿಯಾದ ಪ್ರತಿಧ್ವನಿ ಕೇಳಿಸಲಿಲ್ಲ ಎನ್ನುವುದು ಕರ್ನಾಟಕದಲ್ಲಿ ಈ ಜಾತಿಗಳಲ್ಲಿ ಇರುವ ಪ್ರಜ್ಞೆಯ ಕೊರತೆಯನ್ನೂ ಒಗ್ಗಟ್ಟಿನ ಕೊರತೆಯನ್ನೂ ಏಕಕಾಲಕ್ಕೆ ಎತ್ತಿತೋರಿಸುತ್ತದೆ. ಇದರರ್ಥ ಹಿಂದುಳಿದ ಜಾತಿಗಳು ಜಾತಿಜನಗಣತಿಯ ವರದಿಯನ್ನು ವಿರೋಧಿಸುತ್ತಿರುವ ಪ್ರಬಲ ಜಾತಿಗಳ ಮೇಲೆ ಮುಗಿಬೀಳಬೇಕೆಂದೇನೂ ಅಲ್ಲ. ಬದಲಿಗೆ ಸಂಖ್ಯೆಯ ಕುರಿತಾದ ಪ್ರಬಲ ಜಾತಿಗಳ ಸಂದೇಹವನ್ನು ಪರಿಹರಿಸುವ ಜವಾಬ್ದಾರಿಯನ್ನು ಸರಕಾರಕ್ಕೆ ಬಿಟ್ಟು, ವರದಿಯಲ್ಲಿ ದಾಖಲಾಗಿರುವ ಸಂಪತ್ತಿನ ಹಂಚಿಕೆಯ ವಿಚಾರವನ್ನು ಬಹಿರಂಗಗೊಳಿಸುವಂತೆ ಹಿಂದುಳಿದ ಜಾತಿಗಳು ಸರಕಾರವನ್ನು ಒತ್ತಾಯಿಸಬಹುದಿತ್ತು. ಕರ್ನಾಟಕದ ಅಭಿವೃದ್ಧಿಯಲ್ಲಿ ಯಾರಿಗೆ ಎಷ್ಟು ಪಾಲು ಲಭಿಸಿದೆ ಎನ್ನುವ ಅಂಕಿಅಂಶಗಳನ್ನು ಮುಂದಿಟ್ಟುಕೊಂಡು ಪ್ರಬಲ ಜಾತಿಗಳೊಂದಿಗೆ ಒಂದು ಆರೋಗ್ಯಕರ ಚರ್ಚೆಗೆ ಮುಂದಾಗಬಹುದಿತ್ತು. ಅದೇ ರೀತಿ ಈ ಹಂಚಿಕೆಯ ವಿಚಾರವನ್ನೇ ಬಳಸಿಕೊಂಡು ಹಿಂದುಳಿದ ಜಾತಿಗಳ ನಡುವೆ ಸವಲತ್ತು ಪಡೆಯುವಲ್ಲಿ ಇರುವ ಆಂತರಿಕ ಪೈಪೋಟಿಯ ಸಮಸ್ಯೆಗೂ ಒಂದು ಪರಿಹಾರ ಕಂಡುಕೊಳ್ಳಬಹುದಿತ್ತು. ಕಾಂಗ್ರೆಸ್ ಸರಕಾರದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಮೂರು ಮಂದಿ ಮಂತ್ರಿಗಳಿದ್ದಾರೆ. ಅವರಲ್ಲಿ ಒಬ್ಬರೂ ಮುಂದೆ ನಿಂತು ತನ್ನ ಸಮುದಾಯದ ಹಿತಾಸಕ್ತಿ ರಕ್ಷಿಸುವ ನಿಟ್ಟಿನಲ್ಲಿ ಒಂದೇ ಒಂದು ಮಾತು ಆಡಿದ್ದಿಲ್ಲ. ಒಟ್ಟಿನಲ್ಲಿ ಜಾತಿಜನಗಣತಿಯ ಸುತ್ತ ನಡೆಯುತ್ತಿರುವ ಬೆಳವಣಿಗೆಗಳು ಹಿಂದುಳಿದ ವರ್ಗಗಳ ಸಾಮಾಜಿಕ ಹಿಂದುಳಿದಿರುವಿಕೆಯ ಬೇರೆ ಬೇರೆ ಮುಖಗಳನ್ನು ಹೀಗೆ ಅನಾವರಣಗೊಳಿಸುತ್ತಿವೆ.

(ಇದು ನ್ಯಾಯಪಥ ಪತ್ರಿಕೆಯ ಮೇ ತಿಂಗಳ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಬರಹ)


ಇದನ್ನೂ ಓದಿ: ಕೇಂದ್ರದ ಜಾತಿಗಣತಿ ನಿರ್ಧಾರ ಸ್ವಾಗತಾರ್ಹ ಹೆಜ್ಜೆ: ವಿಪಕ್ಷ ನಾಯಕ ರಾಹುಲ್ ಗಾಂಧಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...