Homeಕರ್ನಾಟಕಅರಸು ಸರ್ಕಾರದಲ್ಲಿ ಸಾಮಾಜಿಕ ನ್ಯಾಯದ ಆಡಳಿತಾತ್ಮಕ ಮುಖಗಳು; ಭಾಗ-3

ಅರಸು ಸರ್ಕಾರದಲ್ಲಿ ಸಾಮಾಜಿಕ ನ್ಯಾಯದ ಆಡಳಿತಾತ್ಮಕ ಮುಖಗಳು; ಭಾಗ-3

- Advertisement -
- Advertisement -

ಅರಸು ಕಾಲದಲ್ಲಿ ಆರ್ಥಿಕ ಆಡಳಿತ ನೀತಿಯು ಬೆಳವಣಿಗೆ (growth) ಯಿಂದಾಚೆಗೆ ಜನಕಲ್ಯಾಣ (welfare)ದ ಗುರಿಯತ್ತ ಮಗ್ಗುಲು ಬದಲಾಯಿಸಿದ್ದರಿಂದ ಉಂಟಾದ ಅನಪೇಕ್ಷಿತ ಪರಿಣಾಮಗಳನ್ನು ಸಂಪೂರ್ಣವಾಗಿ ಕಡೆಗಣಿಸುವಂತಿಲ್ಲ. ಮುಖ್ಯವಾಗಿ ನರೇಂದರ್ ಪಾಣಿಯವರು ಎರಡು ಕೊರತೆಗಳನ್ನು ಗುರುತಿಸುತ್ತಾರೆ. (1) ಮೊದಲನೆಯದ್ದು ಅರಸು ಆಡಳಿತಕ್ಕೆ ಸಂಪತ್ತಿನ ಮರುವಿತರಣೆಯಲ್ಲಿ ಎಷ್ಟು ನಂಬಿಕೆ ಇತ್ತು ಎಂದರೆ ಮರುವಿತರಣೆಗೆ ಸಹಕಾರಿಯಾಗುವ ಯಾವುದೇ ಕಾರ್ಯಯೋಜನೆ ಇರಲಿ ಅದಕ್ಕೆ ಅಪಾರವಾದ ಬೆಂಬಲ ದೊರೆಯುತಿತ್ತು. ಈ ರೀತಿ ಪುನರ್‌ವಿತರಣೆಗೆ ಸಂಬಂಧಿಸಿದ ಯೋಜನೆಗಳನ್ನು ಅಗಾಧವಾಗಿ ಬೆಳೆಸುತ್ತಿದ್ದಾಗ ಗಾತ್ರಕ್ಕೆ ದೊರೆತ ಪ್ರಾಧಾನ್ಯತೆ ಗುಣಮಟ್ಟಕ್ಕೆ ದೊರೆಯಲಿಲ್ಲ ಎನ್ನುವುದು ಪಾಣಿಯವರ ಒಂದು ವಾದ. ಇದಕ್ಕೆ ಪೂರಕವಾಗಿ ಅವರು ರೇಷ್ಮೆ ಬೆಳೆಯ ಉದಾಹರಣೆಯನ್ನು ನೀಡುತ್ತಾರೆ. ರೇಷ್ಮೆ ರೈತರಿಗೆ ಹೆಚ್ಚು ವರಮಾನ ತಂದುಕೊಡುತ್ತದೆ ಎನ್ನುವ ಕಾರಣಕ್ಕಾಗಿ ಅದಕ್ಕೆ ಅಪಾರವಾದ ಸರಕಾರಿ ಬೆಂಬಲವನ್ನು ನೀಡಲಾಯಿತು. ಪರಿಣಾಮವಾಗಿ ರೇಷ್ಮೆ ಕೃಷಿ ವ್ಯಾಪಕವಾಯಿತು ಆದರೆ ರೇಷ್ಮೆಯ ಉತ್ಪಾದಕತೆ (productivity) ಮತ್ತು ಉತ್ಪಾದನೆಯ ಗುಣಮಟ್ಟದ ವಿಚಾರದಲ್ಲಿ ಯಾರೂ ಆಗ ಚಿಂತಿಸಲಿಲ್ಲ ಎನ್ನುತ್ತಾರೆ ಪಾಣಿ. ಇದರಿಂದಾಗಿ ಮುಂದಿನ ದಿನಗಳಲ್ಲಿ ಕಡಿಮೆ ಬೆಲೆಯ ಮತ್ತು ಹೆಚ್ಚಿನ ಗುಣಮಟ್ಟದ ಚೈನೀಸ್ ಸಿಲ್ಕ್ ಕರ್ನಾಟಕದ ರೇಷ್ಮೆ ಮಾರುಕಟ್ಟೆಯನ್ನು ಬಾಧಿಸಲಾರಂಭಿಸಿತು ಎಂದು ಅವರು ವಿಶ್ಲೇಷಿಸುತ್ತಾರೆ.

ಎರಡನೆಯದಾಗಿ ಪಾಣಿಯವರ ಪ್ರಕಾರ ಅರಸು ಅವರು ಅಭಿವೃದ್ಧಿಯಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ ಒತ್ತು ನೀಡಿದ ಕಾರಣ, ಉತ್ಪಾದನೆಗಿಂತ ಹೆಚ್ಚಾಗಿ ವಿತರಣೆಗೆ ಪ್ರಾಶಸ್ತ್ಯ ದೊರೆತು ಮೂಲಭೂತ ಸೌಕರ್ಯಗಳ ಬೆಳವಣಿಗೆ ಕುಂಠಿತವಾಯಿತು. ಮುಖ್ಯವಾಗಿ ಎಲ್ಲಾ ಹಳ್ಳಿಗಳನ್ನು ವಿದ್ಯುದೀಕರಿಸಬೇಕು ಎಂಬ ಸರಕಾರದ ಯೋಜನೆ, ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡಿದ್ದು ಮತ್ತು ಸಣ್ಣ ಕೈಗಾರಿಕೆಗಳಿಗೆ ನೀಡಿದ ಹೆಚ್ಚಿನ ಉತ್ತೇಜನ ಇತ್ಯಾದಿಗಳೆಲ್ಲವೂ ಅರಸು ಅವರ ಅವಧಿಯಲ್ಲಿ ವಿದ್ಯುತ್ ಬೇಡಿಕೆಯನ್ನು ತೀವ್ರವಾಗಿ ಹೆಚ್ಚಿಸಿತು. ಆದರೂ ವರ್ತಮಾನ ಮತ್ತು ಭವಿಷ್ಯದ ವಿದ್ಯುತ್ ಅಗತ್ಯತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿದ್ಯುತ್‌ಶಕ್ತಿಯ ಉತ್ಪಾದನೆಗೆ ಒತ್ತು ನೀಡದ ಕಾರಣದಿಂದಾಗಿ ಮುಂದಿನ ದಶಕಗಳಲ್ಲಿ ಕರ್ನಾಟಕ ವಿದ್ಯುತ್ ಕೊರತೆಯ ರಾಜ್ಯವಾಯಿತು ಎನ್ನುತ್ತಾರೆ. ಬಡವರಿಗೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸಬೇಕು ಎಂಬ ಉದ್ದೇಶ ಆರಂಭದಲ್ಲಿ ಕೈಗೂಡಿದರೂ ಸೂಕ್ತವಾದ ಮುಂದಾಲೋಚನೆಯಿಂದ ಕೂಡಿರದ ಒಂದು ಕಲ್ಯಾಣ ರಾಜ್ಯದ ಮಾದರಿಯನ್ನು ಅನುಸರಿಸಿದ ಕಾರಣ ದೀರ್ಘಾವಧಿಯಲ್ಲಿ ಬಡವರಿಗೆ ಕೆಲ ರೀತಿಯಲ್ಲಿ ಅನಾನುಕೂಲಗಳೇ ಆದವು ಎನ್ನುವುದು ಪಾಣಿಯವರ ವಾದ.

ಇಂತಹ ಕೆಲವು ವಸ್ತುನಿಷ್ಠವಾದ ಟೀಕೆಗಳನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ ಮತ್ತು ಇವುಗಳು ವಿತರಣಾ ನ್ಯಾಯದ ಪಕ್ಷಪಾತಿಯಾಗಿರುವ ಎಲ್ಲಾ ಆಡಳಿತ ಮಾದರಿಯ ಕುರಿತಾಗಿಯೂ ಇರುವ ಸಾಮಾನ್ಯವಾದ ಟೀಕೆಗಳು. ಯಾವುದೇ ರೀತಿಯ ಹೊಸ ಮಾದರಿಯನ್ನು ಸ್ವೀಕರಿಸುವಾಗ ಅಲ್ಲಿ ಕೆಲವೊಂದು ಅನುಕೂಲ, ಅನಾನುಕೂಲ ಇದ್ದೇ ಇರುತ್ತವೆ. ಇವೆಲ್ಲ ಭವಿಷ್ಯದಲ್ಲಿ ಸರಿಪಡಿಸಿಕೊಳ್ಳಬಹುದಾದ ಆರಂಭಿಕ ಹಿನ್ನಡೆಗಳಾಗಿದ್ದವು. ವಿದ್ಯುತ್ತಿನ ವಿಚಾರದಲ್ಲಿ ಹೇಳುವುದಾದರೆ ಅರಸು ನಂತರದ 35 ವರ್ಷಗಳಲ್ಲಿ ಬಂದ 16 ಮುಖ್ಯಮಂತ್ರಿಗಳ ಕಾಲದಲ್ಲಿ ಈ ಸಮಸ್ಯೆ ಮುಂದುವರಿದಿದೆ ಎನ್ನುವ ವಾಸ್ತವಾಂಶ ನಮ್ಮ ಮುಂದಿರುವುದರಿಂದ ಈ ಸಮಸ್ಯೆಗೆ ಅರಸು ಮಾದರಿಯನ್ನು ಮಾತ್ರ ಹೊಣೆಯಾಗಿಸುವುದು ತರವಲ್ಲ ಎಂದೆನಿಸುತ್ತದೆ.

ಅರಸು ಅವರ ಸಂಪತ್ತಿನ ಮರುವಿತರಣಾ ಆಡಳಿತ ಮಾದರಿಯ ಕುರಿತು ಎರಡು ಪ್ರಶ್ನೆಗಳು ಬರುತ್ತವೆ. ಮೊದಲನೆಯದಾಗಿ, ಇಂದಿರಾಗಾಂಧಿಯವರ ’ಗರೀಬಿ ಹಟಾವೋ’ ಘೋಷಣೆಯ ತರುವಾಯ ಐದನೆಯ ಪಂಚವಾರ್ಷಿಕ ಯೋಜನೆಯಲ್ಲಿ ಬಡತನ ನಿರ್ಮೂಲನಕ್ಕಾಗಿ ವ್ಯಾಪಕವಾದ ಕ್ರಮಗಳನ್ನು ಕೈಗೊಂಡಿದ್ದು ರಾಷ್ಟ್ರೀಯ ಮಟ್ಟದಲ್ಲಿ ನಡೆದುಹೋದ ವಿದ್ಯಮಾನ. ಜತೆಗೆ ಇಂದಿರಾ ಗಾಂಧಿಯವರು 1975ರ ಜುಲೈನಲ್ಲಿ ಪ್ರಕಟಿಸಿದ 20 ಅಂಶಗಳ ಕಾರ್ಯಕ್ರಮವನ್ನು ಕರ್ನಾಟಕದಲ್ಲಿ ಕೂಡಾ ಅನುಷ್ಠಾನಗೊಳಿಸುವ ಅನಿವಾರ್ಯತೆ ಅರಸು ಅವರಿಗೆ ಇತ್ತು. ಆದುದರಿಂದ ಅರಸು ಅವರ ಯೋಜನೆಗಳನ್ನು ರಾಷ್ಟ್ರಮಟ್ಟದಲ್ಲಿ ಕಂಡುಬಂದ ರಾಜಕೀಯ ಮತ್ತು ನೀತಿ ನಿರೂಪಣೆಯಲ್ಲಾದ ಬದಲಾವಣೆಯ ಭಾಗವಾಗಿಯೇ ಕಾಣದೆ ಭಿನ್ನವಾಗಿ ಕಾಣುವುದು ಹೇಗೆ ಎನ್ನುವುದು ಮೊದಲ ಪ್ರಶ್ನೆ. ಹಾಗೆಯೇ, ಹೇಗೂ ಅರಸು ಅವರು ಬಡವರೇ ತಮ್ಮ ಓಟ್ ಬ್ಯಾಂಕ್ ಎಂಬಂತೆ ಇಡೀ ರಾಜಕೀಯವನ್ನು ರೂಪಿಸಿರುವಾಗ ಬಡವರಿಗಾಗಿ ಅವರು ವಿಶೇಷ ಕ್ರಮಗಳನ್ನು ಕೈಗೊಳ್ಳುವುದು ರಾಜಕೀಯ ತಂತ್ರ; ಅದರಲ್ಲಿ ಬಡತನ ನಿರ್ಮೂಲನದ ಬದ್ಧತೆಯ ಪ್ರಶ್ನೆ ಎಲ್ಲಿ ಬಂತು ಎನ್ನುವುದು ಎರಡನೆಯ ಪ್ರಶ್ನೆ.

ಇದನ್ನೂ ಓದಿ: ಆಗಸ್ಟ್ 20: ದೇವರಾಜ ಅರಸು ಜನ್ಮದಿನ; ಅರಸು ಸರ್ಕಾರದಲ್ಲಿ ಸಾಮಾಜಿಕ ನ್ಯಾಯದ ಆಡಳಿತಾತ್ಮಕ ಮುಖಗಳು

ಪಾಣಿ (2) ಈ ಪ್ರಶ್ನೆಯ ಹಿಂದಿನ ವಾದವನ್ನು ಇನ್ನೊಂದು ರೀತಿಯಲ್ಲಿ ಅರ್ಥೈಸುತ್ತಾರೆ. ಅವರ ಪ್ರಕಾರ “ಕರ್ನಾಟಕ ರಾಜಕೀಯದಲ್ಲಿ ಅರಸು ಅವರು ರೂಪಿಸಿದ ಹೊಸ ಸಾಮಾಜಿಕ ಒಕ್ಕೂಟದಲ್ಲಿ (Social coalition) ಹಿಂದುಳಿದ ಜಾತಿಗಳು, ದಲಿತರು, ಮುಸ್ಲಿಮರು ಹೇಗೂ ಸೇರಿಕೊಂಡಿದ್ದರು. ಇದರ ಜೊತೆಗೆ ಅವರು ಬಹಳ ಚಾಕಚಕ್ಯತೆಯಿಂದ ಅಷ್ಟೊಂದು ಮುಂದುವರಿಯದ ದಕ್ಷಿಣ ಕರ್ನಾಟಕದ ಒಕ್ಕಲಿಗ ಸಮುದಾಯದ ಒಲವನ್ನೂ ಗಳಿಸಿದ್ದರು. ಹಾಗಾಗಿ ಅರಸು ಅವರ ರಾಜಕೀಯದ ತೆಕ್ಕೆಯಿಂದ ಹೊರಗುಳಿದವರು ಎಂದರೆ ಉತ್ತರ ಕರ್ನಾಟಕದ ಲಿಂಗಾಯತರು ಮತ್ತು ಲಿಂಗಾಯತ ಭೂಮಾಲೀಕರನ್ನು ಆಶ್ರಯಿಸಿದ್ದ ಆ ಭಾಗದ ಇತರ ಜಾತಿಗಳು. ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಇಲ್ಲಿ ಬಡತನ ಹೆಚ್ಚು ವ್ಯಾಪಕವಾಗಿತ್ತು. ರಾಜಕೀಯವಾಗಿ ಇಲ್ಲಿನ ಲಿಂಗಾಯಿತರ ಪ್ರಾಬಲ್ಯವನ್ನು ಮುರಿದು ಇತರ ಜಾತಿಗಳನ್ನು ರಾಜಕೀಯ ಅಧಿಕಾರದಾಸೆಯಿಂದ ಒಲಿಸಿಕೊಳ್ಳುವುದು ಕಷ್ಟ ಎಂದು ಅರಿತ ಅರಸು ಬಡತನ ನಿರ್ಮೂಲನ ಅಸ್ತ್ರ ಪ್ರಯೋಗಿಸಿದರು. ಅವರು ಜಾರಿಗೆ ತಂದ ನೇರವಾಗಿ ಬಡವರನ್ನು ತಲುಪುವ ವಿವಿಧ ಯೋಜನೆಗಳು ಉತ್ತರ ಕರ್ನಾಟಕದ ಬಡವರನ್ನು ಅರಸು ಅವರತ್ತ ಸೆಳೆದವು” ಎಂಬ ರೀತಿಯಲ್ಲಿ ಪಾಣಿಯವರ ವಿಶ್ಲೇಷಣೆ ಸಾಗುತ್ತದೆ. ಇದೇ ಹಾದಿಯಲ್ಲಿ ಸಾಗುವ ವಾದಗಳನ್ನು ಬೇರೆ ಬೇರೆ ರೀತಿಯಲ್ಲಿ ಜೇಮ್ಸ್ ಮೇನರ್ (3) ಮತ್ತು ಎಂ.ಎನ್. ಶ್ರೀನಿವಾಸ್ (4) ಕೂಡಾ ಮುಂದಿಡುತ್ತಾರೆ.

ಈ ಎರಡೂ ಪ್ರಶ್ನೆಗಳಿಗೆ ಉತ್ತರವಾಗಿ, ಆ ಕಾಲದ ರಾಷ್ಟ್ರವ್ಯಾಪೀ ಆರ್ಥಿಕ ಚಿಂತನೆಯನ್ನು ಮೀರಿದ ಮತ್ತು ಕೇವಲ ರಾಜಕೀಯ ಲೆಕ್ಕಾಚಾರಗಳಿಗೆ ಮಾತ್ರ ಸೀಮಿತವಾಗಿರದ ಒಂದು ಯೋಚನೆ, ಕಳಕಳಿ ಮತ್ತು ಬದ್ಧತೆ ಅರಸು ಅವರಿಗೆ ಬಡತನ ನಿರ್ಮೂಲನದ ವಿಚಾರದಲ್ಲಿ ಇತ್ತು ಮತ್ತು ಅದುವೇ ಅವರ ಆಡಳಿತ ಮಾದರಿಯನ್ನು ವಿಭಿನ್ನವಾಗಿಸಿದ್ದು ಎನ್ನುವುದಕ್ಕೆ ನಮಗೆ ಹಲವು ಪುರಾವೆಗಳು ಸಿಗುತ್ತವೆ. ಒಂದು ಮಹತ್ವದ ಉದಾಹರಣೆ ಅರಸು ಸರಕಾರ ಮಲ ಹೊರುವ ಪದ್ಧತಿಯನ್ನು ನಿಷೇಧಿಸಿದ್ದು. 20 ಅಂಶಗಳ ಕಾರ್ಯಕ್ರಮ ಇದನ್ನು ಹೇಳಿರಲಿಲ್ಲ. ಇದರ ಕುರಿತು ವಡ್ಡರ್ಸೆ ರಘುರಾಮ ಶೆಟ್ಟರ ಮನಮುಟ್ಟುವ ವಿವರಣೆ ನೋಡಿ: (5)

ಬಸವಲಿಂಗಪ್ಪ

“..ಜಗತ್ತಿನ ಯಾವ ನಾಗರಿಕ ಸಮಾಜದಲ್ಲಿಯೂ ಆಚರಣೆಯಲ್ಲಿಲ್ಲದ ಮಲಹೊರುವ ಪದ್ಧತಿಗೆ ಧಾರ್ಮಿಕ ಆಚರಣೆಯ ಕವಚವನ್ನು ಹೊದಿಸಲಾಗಿತ್ತು. ಇದು ನಿಷೇಧಿಸಲೇಬೇಕಾದ ಅನಿಷ್ಟ ಆಚರಣೆ ಎಂದು ಯಾವ ಸಮಾಜ ಸುಧಾರಕನಿಗೂ ಮನಗಾಣಲಿಲ್ಲ. ಕರ್ನಾಟಕದಲ್ಲಿ ಅರಸು ಆರಂಭಿಸಿದ ಸಾಮಾಜಿಕ ಪರಿವರ್ತನೆಯ ವಾತಾವರಣದಲ್ಲಿ ಈ ವಿಚಾರದಲ್ಲಿ ಚಿಂತನೆ ಚಿಗುರೊಡೆಯಿತು. ಅರಸು ಸಂಪುಟದಲ್ಲಿ ಪೌರಾಡಳಿತ ಸಚಿವರಾಗಿದ್ದ ಬಸವಲಿಂಗಪ್ಪನವರು ಈ ಪದ್ಧತಿಯ ಉಚ್ಚಾಟನೆಗೆ ದೃಢಸಂಕಲ್ಪ ಮಾಡಿದರು. ಪ್ರತಿ ಮನೆಯ ಲೆಟ್ರೀನ್‌ಗೆ ಹೊಂದಿಕೊಂಡಂತೆ ವೈಜ್ಞಾನಿಕವಾದ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಿ ಸ್ವಾಸ್ಥ್ಯ ರಕ್ಷಣೆ ಸಾಧ್ಯವೆಂಬ ಯೋಜನೆ ಯಾರಿಗೂ ಹೊಳೆಯಲಿಲ್ಲ. ಸರಕಾರವೇ ಇಂತಹ ಒಂದು ಬದಲಿ ವ್ಯವಸ್ಥೆಯ ಸೂತ್ರವನ್ನು ಮುಂದಿಟ್ಟಿತು. ಇಂತಹ ಸೆಪ್ಟಿಕ್ ಟ್ಯಾಂಕ್‌ಗಳನ್ನೂ ಜೋಡಿಸುವ ಆರ್ಥಿಕ ಶಕ್ತಿ ತಮಗಿಲ್ಲವೆಂದು ಜನ ಗೊಣಗಲಾರಂಭಿಸಿದರು. ಸರಕಾರ ಇದಕ್ಕೂ ಒಂದು ಪರಿಹಾರ ಸೂಚಿಸಿತು. (ಸರಕಾರ) ಆರ್ಥಿಕ ನೆರವು ನೀಡಲು ಉದ್ಯುಕ್ತವಾಯಿತು, ಮಲ ಹೊರುವ ಪದ್ಧತಿ ನಿಷೇಧ ಕಾನೂನನ್ನು ಪಾಲಿಸಲು ಆರು ತಿಂಗಳ ಕಾಲಾವಕಾಶ ಕೊಟ್ಟಿತು. ಕುಂಟು ನೆಪಹೇಳಿ ಜಾರಿಕೊಳ್ಳಲಾಗದ ಕಾನೂನು ಇದೆ ಎಂದು ಗೊತ್ತಾದಾಗ ಜನ ಲೆಟ್ರೀನ್‌ಗಳನ್ನೂ ಕಟ್ಟಿಕೊಂಡರು. ಕೇವಲ ಆರು ತಿಂಗಳ ಅವಧಿಯಲ್ಲಿ ನಿಷೇಧ ಕಾನೂನು ಅರ್ಥವತ್ತಾಗಿ ಜಾರಿಗೆ ಬಂತು. ಈ ದೇಶದಲ್ಲಿ ಮೊತ್ತಮೊದಲ ಬಾರಿಗೆ ಕರ್ನಾಟಕವು ಮಲ ಹೊರುವ ಪದ್ಧತಿಯನ್ನು ನಿಷೇಧ ಮಾಡಿತು.”

ಹೀಗೆ ಮಾಡಬೇಕೆಂದು ಸರಕಾರವನ್ನು ಯಾರೂ ಕೇಳಿಕೊಂಡಿರಲಿಲ್ಲ. ಕೆಳಗಿನಿಂದಾಗಲೀ, ಮೇಲಿನಿಂದಾಗಲೀ ಒತ್ತಡ ಇರಲಿಲ್ಲ. ಅರಸು ಸರಕಾರ ತನ್ನ ಒಳಗಿನ ಪ್ರೇರಣೆಯಿಂದಲೇ ಕೈಗೊಂಡ ಕಾರ್ಯ ಇದು. ಹೀಗೆ ಯಾರೂ ಮುಂದಾಗದ ಕೆಲ ಕ್ರಾಂತಿಕಾರಿ ಹೆಜ್ಜೆ ಇಡುವ ಅಭೂತಪೂರ್ವ ಇಚ್ಛಾಶಕ್ತಿ ಅರಸು ಸರಕಾರಕ್ಕೆ ಇತ್ತು ಮತ್ತು ಆ ಇಚ್ಛಾಶಕ್ತಿಯನ್ನು ಅದು ಸಮಾಜದ ಕಟ್ಟಕಡೆಯ ಜನಗಳ ಹಿತರಕ್ಷಣೆಗಾಗಿ ಬಳಸಿತು ಎನ್ನುವುದನ್ನು ಅರಸು ಸರಕಾರದ ಈ ಕ್ರಮ ಎತ್ತಿ ತೋರಿಸುತ್ತದೆ. ಅರಸು ಸರಕಾರ ಮಾಡಿದ್ದನ್ನು ಕೇಂದ್ರ ಸರಕಾರ ಮಾಡಲು ಮುಂದಿನ ಹದಿನೈದು ವರ್ಷಗಳು ಬೇಕಾದವು. ನರಸಿಂಹರಾವ್ ಪ್ರಧಾನಮಂತ್ರಿಯಾದ ನಂತರ 1992ರಲ್ಲಿ ಇಂತಹ ಒಂದು ಕಾನೂನನ್ನು ಕೇಂದ್ರ ಸರಕಾರ ರೂಪಿಸಿ ಜಾರಿಗೆ ತಂದಿತು.

ಅರಸು ಕಾಲದಲ್ಲಿ ಜಾರಿಯಾದ ಬಡತನ ನಿವಾರಣಾ ಯೋಜನೆಗಳಲ್ಲಿ ಹಲವು ಯೋಜನೆಗಳು ಕೇಂದ್ರ ಸರಕಾರದ ಯೋಜನೆಗಳೇ ಆಗಿದ್ದವು ಎಂಬುದು ನಿಜ. ಅವುಗಳ ಪೈಕಿ ಪ್ರಮುಖವಾದವುಗಳೆಂದರೆ ಸಣ್ಣ ರೈತರ ಅಭಿವೃದ್ಧಿ ಮಂಡಳಿ (ಸ್ಮಾಲ್ ಫಾರ್ಮರ್ಸ್ ಡೆವಲಪ್‌ಮೆಂಟ್ ಏಜನ್ಸಿ ಅಥವಾ ಎಸ್.ಎಫ್.ಡಿ.ಎ.), ಅತಿಸಣ್ಣ ರೈತರು ಮತ್ತು ಕೃಷಿ ಕಾರ್ಮಿಕರ ಯೋಜನೆ (ಮಾರ್ಜಿನಲ್ ಫಾರ್ಮರ್ಸ್ ಅಂಡ್ ಅಗ್ರಿಕಲ್ಚರಲ್ ಲೇಬರೆರ್ಸ್ ಪ್ರೋಗ್ರಾಮ್), ಬರ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮ (ಡ್ರಾಟ್ ಪ್ರೋನ್ ಏರಿಯಾಸ್ ಡೆವಲಪ್‌ಮೆಂಟ್ ಪ್ರೋಗ್ರಾಮ್), ಸಮಗ್ರ ಗ್ರಾಮೀಣಾಭಿವೃದ್ಧಿ ಯೋಜನೆ (ಇಂಟಿಗ್ರೇಟೆಡ್ ರೂರಲ್ ಡೆವಲಪ್‌ಮೆಂಟ್ ಪ್ರೋಗ್ರಾಮ್ ಅಥವಾ ಐ.ಆರ್.ಡಿ.ಪಿ.) ಮುಂತಾದವುಗಳು. ಹಾಗೆಯೇ ಕಡುಬಡ ರೈತರ ಸಾಲಮನ್ನಾ ಮಾಡಿದ್ದು, ಜೀತ ವಿಮೋಚನೆ, ಕನಿಷ್ಠ ವೇತನ ಏರಿಕೆ, ಬಡ ವಿದ್ಯಾರ್ಥಿಗಳಿಗೆ ನೆರವು ಇತ್ಯಾದಿಗಳೆಲ್ಲ 20 ಅಂಶ ಕಾರ್ಯಕ್ರಮಗಳ ಕರ್ನಾಟಕದ ಅವತರಣಿಕೆ ಎನ್ನುವುದು ಸತ್ಯ. ಆದರೂ ಕೇಂದ್ರ ಸರಕಾರ ರೂಪಿಸಿದ ಈ ಎಲ್ಲಾ ಯೋಜನೆಗಳನ್ನು ಇತರ ರಾಜ್ಯಗಳಿಗಿಂತ ಹೆಚ್ಚಿನ ಬದ್ಧತೆಯಿಂದ ಮತ್ತು ಕ್ಷಮತೆಯಿಂದ ಜಾರಿಗೊಳಿಸಿದ್ದು ಅರಸು ಆಡಳಿತ ಮಾತ್ರ ಎಂಬ ಅಂಶವನ್ನು ಶ್ರೀನಿವಾಸ್ ಮತ್ತು ಪಾಣಿ ತಮ್ಮ ಅಧ್ಯಯನದಲ್ಲಿ ಒತ್ತಿ ಹೇಳುತ್ತಾರೆ. ಅಷ್ಟೇ ಅಲ್ಲ, ಇಂತಹ ಕೆಲವು ಯೋಜನೆಗಳನ್ನು ಕೇಂದ್ರ ಸರಕಾರ ಆಯ್ದ ಕೆಲವೇ ಕೆಲವು ಜಿಲ್ಲೆಗಳಿಗಷ್ಟೇ ಸೀಮಿತಗೊಳಿಸಿದ್ದರೂ ಅರಸು ಸರಕಾರ ತನ್ನ ಸ್ವಂತ ಸಂಪನ್ಮೂಲಗಳನ್ನು ಬಳಸಿ ಕೇಂದ್ರ ಅಪೇಕ್ಷಿಸಿದ್ದಕ್ಕಿಂತ ಹೆಚ್ಚಿನ ಜಿಲ್ಲೆಗಳಲ್ಲಿ ಅವುಗಳನ್ನು ಜಾರಿಗೊಳಿಸಿತ್ತು ಎಂಬ ಅಂಶವನ್ನು ಕೂಡಾ ಈ ಎರಡು ಸುಪ್ರಸಿದ್ಧ ವಿದ್ವಾಂಸರು ಗುರುತಿಸುತ್ತಾರೆ. (6)

ಮಾಜಿ ಮುಖ್ಯಮಂತ್ರಿ ಮತ್ತು ಸೂಕ್ಷ್ಮಮತಿ ರಾಜಕಾರಣಿಯಾಗಿದ್ದ ಜೆ.ಹೆಚ್. ಪಟೇಲ್ ಅವರು ಈ ವಿಷಯವನ್ನು ಇನ್ನೂ ಮನೋಜ್ಞವಾಗಿ ವಿವರಿಸುತ್ತಾರೆ: (7)

“ರಾಜಕಾರಣದಲ್ಲಿ ದುಡ್ಡಿನ ಬಳಕೆಯ ಬಗ್ಗೆ ಇಂದಿರಾ ಗಾಂಧಿಯವರ ನೀತಿಗೂ ಅರಸರ ನೀತಿಗೂ ಹೆಚ್ಚಿನ ವ್ಯತ್ಯಾಸ ಇರಲಿಲ್ಲ. ದುರ್ಬಲ ವರ್ಗಗಳ ಏಳಿಗೆಗಾಗಿ ಅವಶ್ಯಕವಾದ ವೈಜ್ಞಾನಿಕ ಶಕ್ತಿಯನ್ನು ಸಂಘಟಿಸಲು ಇವರು ಎಲ್ಲಾ ಮಾರ್ಗಗಳನ್ನು ಅನುಸರಿಸುತ್ತಿದ್ದರು… ಇಂದಿರಾ ಗಾಂಧಿಯವರ ಕಳಕಳಿ ಬಡವರ ಓಟಿನ ಬಗ್ಗೆ ಇದ್ದಷ್ಟು ಅವರ ಹಸಿವಿನ ಬಗ್ಗೆ ಇರಲಿಲ್ಲ. ಆದರೆ ಅರಸು ಅವರ ಕಳಕಳಿ ಬಡವರ ಹಸಿವಿನ ಬಗ್ಗೆಯೂ ಇತ್ತು, ಅವರ ಓಟಿನ ಬಗ್ಗೆಯೂ ಇತ್ತು.”

ಎಲ್ಲದ್ದಕ್ಕಿಂತಲೂ ಮುಖ್ಯವಾಗಿ ಭೂಸುಧಾರಣೆ, ಹಿಂದುಳಿದ ವರ್ಗಗಳ ಮೀಸಲಾತಿ ಸಂಬಂಧ ಹಾವನೂರು ಆಯೋಗದ ನೇಮಕ, ಜನತಾ ಮನೆ ಮತ್ತು ಉದ್ಯೋಗ ಭರವಸೆಯ ಯೋಜನೆ ಇತ್ಯಾದಿಗಳನ್ನೆಲ್ಲ ಅರಸು ಸರಕಾರ 20 ಅಂಶಗಳ ಕಾರ್ಯಕ್ರಮ ಘೋಷಣೆಯಾಗುವುದಕ್ಕಿಂತ ಮೊದಲೇ ಜಾರಿಗೊಳಿಸಿತ್ತು ಎನ್ನುವುದನ್ನು ಕೂಡಾ ಗಮನಿಸಬೇಕು. ಬಡತನ ನಿರ್ಮೂಲನಾ ಯೋಜನೆಯ ಕುರಿತು ತಮಗೆ ಎಷ್ಟು ಬದ್ಧತೆ ಇತ್ತು ಮತ್ತು ಇಂದಿರಾ ಗಾಂಧಿಯವರಿಗೆ ಎಷ್ಟು ಬದ್ಧತೆ ಇತ್ತು ಎನ್ನುವ ವಿಷಯದಲ್ಲಿ ಸ್ವತಃ ಅರಸರೇ ಹೇಳಿದ ಮಾತುಗಳನ್ನು ಗಮನಿಸಿ: “ನಾನು ಅವರನ್ನು (ಇಂದಿರಾ ಗಾಂಧಿಯವರನ್ನು) ಲೆಕ್ಕವಿಲ್ಲದಷ್ಟು ಬಾರಿ ಭೇಟಿ ಮಾಡಿ ಮಾತನಾಡಿದ್ದೇನೆ. ಒಂದೇ ಒಂದು ಬಾರಿ ಕೂಡಾ ಅವರು ನಾನು ಜಾರಿಗೊಳಿಸುತ್ತಿದ್ದ ಒಂದೇ ಒಂದು ಯೋಜನೆಯ ಬಗ್ಗೆ ವಿಚಾರಿಸಿದ್ದಿಲ್ಲ. ಯಾವತ್ತೂ ಅವರ ಪ್ರಶ್ನೆಗಳು ಪಕ್ಷಕ್ಕೆ ಯಾರಿಂದ ಏನು ಸವಾಲು ಎದುರಾಗಬಹುದು ಮತ್ತು ಅವುಗಳನ್ನು ಹೇಗೆ ನಿಭಾಯಿಸಬಹುದು ಎನ್ನುವಷ್ಟಕ್ಕೆ ಮಾತ್ರ ಸೀಮಿತವಾಗಿರುತ್ತಿದ್ದವು… ಅರಸು ಇದ್ದ ಕಾರಣ ಕರ್ನಾಟಕದಲ್ಲಿ ಏನೇನಾಗಿವೆಯೋ ಅವಲ್ಲೆ ಆಗಿವೆ.” (8)

ಹೌದು… ಅರಸು ಕಾಲದಲ್ಲಿ ಕರ್ನಾಟಕದಲ್ಲಿ ಏನೇನಾಗಿವೆಯೋ ಅವೆಲ್ಲದಕ್ಕೂ ಅರಸು ಕಾರಣ… ಅರಸು ಹೇಳದೆ ಇದ್ದರೂ ಇಷ್ಟನ್ನು ಚರಿತ್ರೆ ಒಪ್ಪಿಕೊಳ್ಳಲೇಬೇಕು. ಅರಸು ಅವರ ಸಾಮಾಜಿಕ ನ್ಯಾಯದ ಕಾರ್ಯಸೂಚಿಯ ಕ್ರಾಂತಿಕಾರಿ ಗುಣ ಇರುವುದು ಅದರ ಪರಿಣಾಮದಲ್ಲಿ ಅಲ್ಲ. ಅದರ ಹಿಂದಿರುವ ಯೋಚನೆಯಲ್ಲಿ.

ಜೆ.ಹೆಚ್. ಪಟೇಲ್

ರಾಜ್ಯದಲ್ಲಾಗಲೀ, ರಾಷ್ಟ್ರದಲ್ಲಾಗಲೀ ಇಂದಿಗೂ ಅರಸು ಯೋಚಿಸದೆ ಇದ್ದ ಒಂದೇ ಒಂದು ಹೊಸ ಕಲ್ಯಾಣ ಯೋಜನೆಯನ್ನು ಹುಡುಕುವುದು ಕಷ್ಟ. ಸಾಮಾಜಿಕ ಸಮಾನತೆಯ ತಳಹದಿಯ ಮೇಲೆ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯನ್ನು ಪುನರ್ ರೂಪಿಸಲು ಒಂದು ಸರಕಾರ ಏನೇನು ಮಾಡಬಹುದೋ ಅದನ್ನೆಲ್ಲಾ ಅರಸು ಸರಕಾರ ಒಂದಲ್ಲ ಒಂದು ರೀತಿಯಲ್ಲಿ ಮಾಡಿತ್ತು. ಆ ನಂತರ ಆಗಿದ್ದು ಏನಿದ್ದರೂ ಅರಸು ಕಾಲದ ಯೋಜನೆಗಳ ಪರಿಷ್ಕರಣೆ ಅಥವಾ ವಿಸ್ತರಣೆ. 1991ರ ಆರ್ಥಿಕ ಸುಧಾರಣೆ ಆರಂಭವಾದ ನಂತರ ದೇಶದಲ್ಲಿ ಕಲ್ಯಾಣ ಯೋಜನೆಗಳಿಗೆ ಒಂದು ಹೊಸ ಅರ್ಥ ನೀಡುವ ಪ್ರಯತ್ನ ನಡೆಯಿತು. ಆ ತನಕ ಕಲ್ಯಾಣ ಯೋಜನೆಗಳಡಿ ಬಡವರಿಗೆ ಸರಕಾರಗಳು ವಿವಿಧ ಯೋಜನೆಗಳ ಮೂಲಕ ಬೇರೆಬೇರೆ ರೀತಿಯ ನೆರವನ್ನು ಒಂದು “ಕೊಡುಗೆ”ಯಂತೆ ನೀಡುತ್ತಿದ್ದವು. 2004ರಲ್ಲಿ ಯುಪಿಎ ಸರಕಾರ ಕೇಂದ್ರದಲ್ಲಿ ಆಡಳಿತ ವಹಿಸಿಕೊಂಡ ನಂತರ “ಸರಕಾರದ ಕೊಡುಗೆ”ಯಾಗಿದ್ದ ಈ ಯೋಜನೆಗಳನ್ನು “ಜನರ ಹಕ್ಕುಗಳು”ಎನ್ನುವ ರೀತಿಯಲ್ಲಿ ಬದಲಿಸಲಾಯಿತು. ಯೋಜನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ಮತ್ತು ಅವುಗಳ ಅನುಷ್ಠಾನದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲಾಯಿತು. ಕಲ್ಯಾಣ ಕಾರ್ಯಕ್ರಮಗಳ ಚರಿತ್ರೆಯಲ್ಲಿ ಹೊಸತು ಎನ್ನಲಾದ ಈ ಬೆಳವಣಿಗೆಗಳ ಆಶಯಗಳು ಕರ್ನಾಟಕದಲ್ಲಿ ಅರಸು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಬೀಜಾಂಕುರಗೊಂಡಿದ್ದವು ಎನ್ನುವುದು ನಿಜಕ್ಕೂ ವಿಶೇಷ. ಗ್ರಾಮೀಣ ಪ್ರದೇಶದಲ್ಲಿ ಜನರು ಉದ್ಯೋಗವನ್ನು ಕೇಳಿ ಪಡೆಯಲು ಅವಕಾಶ ಮಾಡಿಕೊಟ್ಟ ಅರಸು ಸರಕಾರದ ಉದ್ಯೋಗ ಭರವಸೆ ಯೋಜನೆ ಮತ್ತು ಪಂಚಾಯತುಗಳ/ಸ್ಥಳೀಯ ಸಂಸ್ಥೆಗಳ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಜನತಾ ಮನೆ ಯೋಜನೆ, ಮಾತ್ರವಲ್ಲ ಇಂದು ಸಾಮಾಜಿಕ ಭದ್ರತಾ ಯೋಜನೆಗಳ ಬೀಜಮಂತ್ರಗಳಾಗಿರುವ ಸೂಕ್ಷ್ಮ ಸಾಲ (microfinance), ಹಣಕಾಸು ಭದ್ರತೆ (financial secutiry) ಇತ್ಯಾದಿಗಳ ಚಿಂತನೆಯನ್ನು ಅರಸು ಸರಕಾರ ಮಾಡಿತ್ತು ಎನ್ನುವುದು ಅದು ತನ್ನ ಕಾಲದಲ್ಲಿ ಹೇಗೆ ವಿಭಿನ್ನವಾಗಿಯೂ, ವಿಶಿಷ್ಟವಾಗಿಯೂ ಸಾಮಾಜಿಕ ನ್ಯಾಯದ ಬಗ್ಗೆ ಯೋಚಿಸಿತ್ತು ಎನ್ನುವುದರ ಕುರುಹಾಗಿ ನಮ್ಮ ಮುಂದಿದೆ.

ಇದನ್ನೂ ಓದಿ: ಅರಸು ಸರ್ಕಾರದಲ್ಲಿ ಸಾಮಾಜಿಕ ನ್ಯಾಯದ ಆಡಳಿತಾತ್ಮಕ ಮುಖಗಳು; ಭಾಗ-2

ಅರಸು ಅವರು ಭೂಸುಧಾರಣೆ ಮತ್ತು ಮೀಸಲಾತಿಗಳ ಮೂಲಕ ಸಾಮಾಜಿಕ ನ್ಯಾಯವನ್ನು ವಿಸ್ತರಿಸಲು ಶ್ರಮಿಸಿದರು ಎನ್ನುವುದಕ್ಕಿಂತಲೂ ಮುಖ್ಯವಾಗಿ ಅವರು ಭೂಸುಧಾರಣೆ ಆದ ನಂತರವೂ ಭೂರಹಿತರಾಗಿಯೇ ಉಳಿಯುವವರ ಬಗ್ಗೆ ಮೀಸಲಾತಿ ಬಂದ ನಂತರವೂ ಸರಕಾರಿ ಉದ್ಯೋಗ ಪಡೆಯಲಾಗದವರ ಬಗ್ಗೆ ಕೂಡಾ ಯೋಚಿಸಿದ್ದರು, ಮಾತ್ರವಲ್ಲ, ಇಂತಹ ವರ್ಗಗಳಿಗಾಗಿ ಆ ಕಾಲಕ್ಕೆ ಮೀರಿದ ಯೋಜನೆಗಳನ್ನು ಹಾಕಿಕೊಂಡಿದ್ದರು ಎನ್ನುವುದು ಅವರ ಸಾಮಾಜಿಕ ನ್ಯಾಯ ಮಾದರಿಯ ಅನನ್ಯತೆ.

ಅಡಿ ಟಿಪ್ಪಣಿಗಳು

(1) ಪಾಣಿ, ನರೇಂದರ್ (1991) ಪೊಲಿಟಿಕಲ್ ಎಕಾನಮಿ ಆಪ್ಹ್ ಕರ್ನಾಟಕ 1950-1995, ಆನ್ ಓವರ್ ವ್ಯೂ, ಜರ್ನಲ್ ಆಫ್ ಸೋಶಿಯಲ್ ಅಂಡ್ ಎಕನಾಮಿಕ್ ಡೆವಲಪ್ಮೆಂಟ್, ಸಂಪುಟ 1, ಸಂಚಿಕೆ 1, ಜನವರಿ-ಜೂನ್, ಇನ್‌ಸ್ಟ್ಟಿಟ್ಯೂಟ್ ಆಫ್ ಸೋಶಿಯಲ್ ಅಂಡ್ ಎಕನಾಮಿಕ್ ಚೇಂಜ್ (ಐಸೆಕ್), ಬೆಂಗಳೂರು ಪುಟ 64-84.

(2) ಪಾಣಿ (1991) ಹಿಂದಿನ ಉಲ್ಲೇಖ.

(3) ಮೇನರ್, ಜೇಮ್ಸ್ (1980) ಪ್ರಾಗ್ಮಾಟಿಕ್ ಪ್ರೋಗ್ರೆಸ್ಸಿವ್ಸ್ ಇನ್ ರೀಜನಲ್ ಪಾಲಿಟಿಕ್ಸ್: ದ ಕೇಸ್ ಆಫ್ ದೇವರಾಜ್ ಅರಸ್, ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ, ವಾರ್ಷಿಕ ಸಂಚಿಕೆ, ಫೆಬ್ರವರಿ, ಪುಟ 201-203.

(4) ಶ್ರೀನಿವಾಸ್ ಎಂ.ಎನ್. ಮತ್ತು ಪಾಣಿನಿ ಎಂ.ಎನ್. (1984) ಪಾಲಿಟಿಕ್ಸ್ ಅಂಡ್ ಸೊಸೈಟಿ ಇನ್ ಕರ್ನಾಟಕ, ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ, ಸಂಪುಟ 19, ಸಂಖ್ಯೆ 2, ಪುಟ 69-74.

(5) ವಡ್ಡರ್ಸೆ ರಘುರಾಮ ಶೆಟ್ಟಿ (2000) ಬಹುರೂಪಿ ಅರಸು, ಸಪ್ನ ಬುಕ್ ಹೌಸ್, ಬೆಂಗಳೂರು. ಪುಟ 60-61.

(6) ಶ್ರೀನಿವಾಸ್ ಎಂ.ಎನ್. ಮತ್ತು ಪಾಣಿನಿ ಎಂ.ಎನ್ (1984) ಪಾಲಿಟಿಕ್ಸ್ ಅಂಡ್ ಸೊಸೈಟಿ ಇನ್ ಕರ್ನಾಟಕ, ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ, ಸಂಪುಟ 11, ಸಂಖ್ಯೆ 2, (ಜನವರಿ 14) ಪುಟ 69-75.

(7) ಸದಾನಂದ ಜೆ.ಎಸ್. (ಸಂ) (2000) ಡಿ. ದೇವರಾಜ ಅರಸು, ಪ್ರತಿಭಾವಂತ ಸಂಸದೀಯ ಪಟುಗಳ ಬದುಕು ಬರಹ ಮಾಲಿಕೆ, ಸಂಶೋಧನಾ ಮತ್ತು ಉಲ್ಲೇಖನಾ ಶಾಖೆ, ಕರ್ನಾಟಕ ವಿಧಾನ ಸಭೆಯ ಸಚಿವಾಲಯ, ಬೆಂಗಳೂರು. ಪುಟ 35.

(8) ಸೇನ್ ಗುಪ್ತ ಬಬಾನಿ (1983) ಕರ್ನಾಟಕ-ವಿಂಡ್ಸ್ ಆಫ್ ಚೇಂಜ್, http://indiatoday.intoday.in/ story/a-survey-of-karnataka-the-state-has-undergone-a-political-awakening-in-recentyears/1/402382.html.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...