Homeಕರ್ನಾಟಕಆಗಸ್ಟ್ 20: ದೇವರಾಜ ಅರಸು ಜನ್ಮದಿನ; ಅರಸು ಸರ್ಕಾರದಲ್ಲಿ ಸಾಮಾಜಿಕ ನ್ಯಾಯದ ಆಡಳಿತಾತ್ಮಕ ಮುಖಗಳು

ಆಗಸ್ಟ್ 20: ದೇವರಾಜ ಅರಸು ಜನ್ಮದಿನ; ಅರಸು ಸರ್ಕಾರದಲ್ಲಿ ಸಾಮಾಜಿಕ ನ್ಯಾಯದ ಆಡಳಿತಾತ್ಮಕ ಮುಖಗಳು

- Advertisement -
- Advertisement -

(2017ರಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಕಟಿಸಿದ, ಎ ನಾರಾಯಣ ಅವರು ರಚಿಸಿರುವ ’ದೇವರಾಜ ಅರಸು ಆಡಳಿತದ ಅಜ್ಞಾತ ಆಯಾಮಗಳು’ ಪುಸ್ತಕದ ಅಧ್ಯಾಯವಿದು. ಇದು ಅರಸು ಅವರು 108ನೆ ಜಯಂತಿಯ ಸಂದರ್ಭದಲ್ಲಿ ಮೂರು ಭಾಗಗಳಲ್ಲಿ ಪ್ರಕಟಗೊಳ್ಳಲಿದೆ.)

ದೇವರಾಜ ಅರಸು ಎಂದರೆ ಸಾಮಾಜಿಕ ನ್ಯಾಯಕ್ಕೆ ಒಂದು ಪರ್ಯಾಯ ಹೆಸರು ಎಂಬಂತೆ ಈ ಪರಿಕಲ್ಪನೆಯ ಜತೆ ಅವರ ಹೆಸರು ಬೆಸೆದುಕೊಂಡಿದೆ. ಈ ದೇಶದಲ್ಲಿ ಇನ್ನೊಬ್ಬ ನಾಯಕನ ಹೆಸರು ಸಾಂವಿಧಾನಿಕ ಹೆಗ್ಗುರಿಯಾಗಿರುವ ಸಾಮಾಜಿಕ ನ್ಯಾಯದ ಜತೆ ಹೀಗೆ ತಳುಕು ಹಾಕಿಕೊಂಡಿರುವ ಉದಾಹರಣೆ ಸಿಗಲಾರದು. ದೇವರಾಜ ಅರಸು ಅವರಿಗೆ ಕಮ್ಯುನಿಸ್ಟ್ ಹಿನ್ನೆಲೆ ಏನೂ ಇರಲಿಲ್ಲ. ಅವರು ತಮ್ಮ ಜೀವನದ ಕೊನೆಯ ಮೂರು ವರ್ಷಗಳನ್ನು ಹೊರತುಪಡಿಸಿದರೆ ಕಾಂಗೆಸ್ ಪಕ್ಷ ಒಂದರಲ್ಲೇ ಇದ್ದವರು. ವಿಜ್ಞಾನ ಪದವೀಧರರಾಗಿದ್ದ ಅರಸು ಅವರಿಗೆ ಸಾಹಿತ್ಯ-ಸಾಹಿತ್ಯೇತರ ಪುಸ್ತಕಗಳನ್ನು ಓದುವ ಹವ್ಯಾಸ ಕರ್ನಾಟಕ ಕಂಡ ಇನ್ಯಾವುದೇ ಮುಖ್ಯಮಂತಿಗಳಿಗಿಂತ ಸ್ವಲ್ಪ ಹೆಚ್ಚೇ ಇತ್ತು ಎನ್ನುವುದನ್ನು ಅವರ ಒಡನಾಡಿಗಳು ದಾಖಲಿಸಿದ್ದಾರೆ. ಆದರೆ ಅವರು ಮಾರ್ಕ್ಸಿಸ್ಟ್ ಅಥವಾ ಸಮಾಜವಾದೀ ಚಿಂತನೆಗಳಲ್ಲಿ ಆಳವಾಗಿ ಮುಳುಗೆದ್ದವರಲ್ಲ. ಅರಸು ತಳವರ್ಗದ ಬಡಕುಟುಂಬದ ಹಿನ್ನೆಲೆಯಿಂದ ಬಂದವರಲ್ಲ, ಅವರು ರಾಜಮನೆತನಕ್ಕೆ ಸೇರಿದ ಭೂಮಾಲಿಕ ಕುಟುಂಬಕ್ಕೆ ಸೇರಿದವರು. ಆದರೂ ಅರಸು ಈ ದೇಶದ ಯಾವ ಕಮ್ಯುನಿಸ್ಟ್ ನಾಯಕನಿಗೂ ಕಡಿಮೆ ಇಲ್ಲ ಎಂಬಷ್ಟು ಬಡವರ ಬಗ್ಗೆ ಯೋಚಿಸಿದ್ದರು, ಯಾವ ಸಮಾಜವಾದಿ ನಾಯಕನಿಗೂ ಕಡಿಮೆ ಇಲ್ಲ ಎಂಬಂತೆ ಸಮಾನತೆಯ ಬಗ್ಗೆ ಕಳಕಳಿ ಹೊಂದಿದ್ದರು ಮತ್ತು ಯಾವ ಹಿಂದುಳಿದ ನಾಯಕನೂ ಯೋಚಿಸದಷ್ಟು ತಳವರ್ಗದವರ ಸ್ಥಿತಿ ಗತಿಗಳ ಬಗ್ಗೆ ಚಿಂತಿಸಿದ್ದರು ಎನ್ನುವುದನ್ನು ಅರಸು ಮುಖ್ಯಮಂತ್ರಿಯಾಗಿ ಕೈಗೊಂಡ ಕಾರ್ಯಗಳು ಸಾರುತ್ತವೆ. ಹಾಗಾದರೆ ಏನದು ಕರ್ನಾಟಕದಲ್ಲಿ ಅರಸು ಜಾರಿಗೊಳಿಸಿದ ಸಾಮಾಜಿಕ ನ್ಯಾಯ? ಅದರ ಸ್ವರೂಪ, ಇತಿ ಮತ್ತು ಮಿತಿ?

ಅರಸು ಬಗ್ಗೆ ನಡೆಯುವ ಚರ್ಚೆಗಳಿಂದ ಮತ್ತು ಅವರ ಬಗ್ಗೆ ಬಂದಿರುವ ಅಕಾಡೆಮಿಕ್ ಮತ್ತು ಅಕಾಡೆಮಿಕೇತರ ಬರಹಗಳಿಂದ ದೊರಕುವ ಅರಸು ಅವರ ಸಾಮಾಜಿಕ ನ್ಯಾಯದ ಸಂಕಥನ ಹೆಚ್ಚೇನೂ ವಿಸ್ತಾರವಾಗಿಲ್ಲ. ಪ್ರಮುಖವಾಗಿ ಅದು ಅರಸು ಕಾಲದ ಮೂರು ಬೆಳವಣಿಗೆಗಳ ಸುತ್ತ ಆವರಿಸಿಕೊಂಡಿದೆ. ಇದರಲ್ಲಿ ಮೊದಲನೆಯದ್ದು ತಳ ಸಮುದಾಯಗಳ ಅಧಿಕಾರ-ರಾಜಕೀಯ (Power politics) ಪ್ರವೇಶಕ್ಕೆ ಅರಸು ರಾಜಕಾರಣ ನಾಂದಿ ಹಾಡಿದ್ದು ಮತ್ತು ಆ ಮೂಲಕ ಚಾರಿತ್ರಿಕವಾಗಿ ಅಧಿಕಾರವಂಚಿತ ತಳಸಮುದಾಯದ ಮಂದಿ ಕರ್ನಾಟಕದ ರಾಜಕೀಯ ಅಧಿಕಾರದಲ್ಲಿ ಪಾಲು ಪಡೆದದ್ದು. ಎರಡನೆಯದ್ದು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹೆಚ್ಚಿಸುವುದರ ಮೂಲಕ ಸರಕಾರೀ ಹುದ್ದೆಗಳಲ್ಲಿ ಈ ವರ್ಗಗಳ ಜನರ ಪ್ರಾತಿನಿಧ್ಯ ಹೆಚ್ಚಿಸಿದ್ದು. ಮೂರನೆಯದ್ದು ಅರಸು 1961ರ ಕರ್ನಾಟಕ ಭೂಸುಧಾರಣಾ ಕಾಯ್ದೆಗೆ 1974ರಲ್ಲಿ ತಿದ್ದುಪಡಿ ತರುವುದರ ಮೂಲಕ ಭೂಮಿಯ ಮರುಹಂಚಿಕೆಗೆ ಅವಕಾಶ ಕಲ್ಪಿಸಿದ್ದು. ಉಳಿದಂತೆ ಅರಸು ಸರಕಾರ ಜಾರಿಗೆ ತಂದ ಒಂದಷ್ಟು ಯೋಜನೆಗಳನ್ನು ಅವರ ಸಾಮಾಜಿಕ ನ್ಯಾಯದ ಪರಿಧಿಯೊಳಗೆ ಸೇರಿಸಲಾಗಿದೆ. ಇದರಲ್ಲಿ ಜೀತವಿಮುಕ್ತಿ, ಮಲಹೊರುವ ಪದ್ಧತಿಯ ನಿಷೇಧ, ಗ್ರಾಮೀಣ ಬಡವರ ಸಾಲಮನ್ನಾ ಯೋಜನೆ ಇತ್ಯಾದಿಗಳು ಪ್ರಮುಖವಾಗಿ ಸೇರಿವೆ. ಕರ್ನಾಟಕದ ರಾಜಕೀಯ, ಆಡಳಿತ ಮತ್ತು ಭೂ ಸಂಬಂಧಗಳ ಸಾಮಾಜಿಕ ಚಹರೆಯಲ್ಲಿ ಇವಿಷ್ಟು ಮಹತ್ವದ ಬದಲಾವಣೆಗಳನ್ನು ತಂದದ್ದಕ್ಕಾಗಿ ಅರಸು ಅವರನ್ನು ಹೊಗಳುತ್ತಾ ಸಾಗುವ ಈ ಸಂಕಥನ ಒಂದು ರೀತಿಯ ಹತಾಶೆ ಮತ್ತು ಅಸಹಾಯಕತೆಯಿಂದ ಅವಸಾನವಾಗುತ್ತದೆ. ಈ ಹತಾಶೆ ಮತ್ತು ಅಸಹಾಯಕತೆಗಳ ಹಿನ್ನೆಲೆ ಹೀಗಿದೆ.

ಅರಸು ಅವರು ಜಾರಿಗೆ ತಂದ ಪರಿಷ್ಕೃತ ಭೂಸುಧಾರಣಾ ಕಾಯ್ದೆ ಎಷ್ಟರಮಟ್ಟಿಗೆ ಭೂಮಿಯ ಮರುಹಂಚಿಕೆಗೆ ಕಾರಣವಾಯಿತು ಮತ್ತು ಭೂಸಂಬಂಧಗಳಲ್ಲಿ ಸಮಾನತೆಯನ್ನು ತಂದಿತು ಎನ್ನುವುದರ ಬಗ್ಗೆ ಬೇರೆ ಬೇರೆ ರೀತಿಯ ವ್ಯಾಖ್ಯಾನಗಳಿವೆ. (1) ಏನಿದ್ದರೂ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಒಂದು ಹೆಜ್ಜೆ ಮುಂದಿತ್ತು ಎನ್ನುವ ಸಮಾಧಾನ ಕೂಡ ಈಗ ಉಳಿದಿಲ್ಲ. ಯಾಕೆಂದರೆ ಅರಸು ಅವರ ಕಾಲಾನಂತರ ಕರ್ನಾಟಕ ಭೂಸುಧಾರಣಾ ಕಾಯ್ದೆಯಲ್ಲಿ ಆದ ಬದಲಾವಣೆಗಳು ಅರಸು ಸರಕಾರ ಜಾರಿಗೊಳಿಸಿದ ಭೂಸುಧಾರಣೆಯ ಆಶಯಗಳನ್ನು ಬುಡಮೇಲು ಮಾಡಿವೆ ಎನ್ನುವ ಆತಂಕ ಹಲವರದ್ದು. ಹಾಗೆಯೇ ಅರಸು ಕರೆತಂದು ರಾಜಕೀಯ ಅಧಿಕಾರ ಕೊಡಿಸಿದ ಹಿಂದುಳಿದ ವರ್ಗದ ನಾಯಕರು ಅರಸು ಅವರನ್ನು ಅರ್ಥ ಮಾಡಿಕೊಳ್ಳಲಿಲ್ಲ. ಅರಸು ಕಷ್ಟಪಟ್ಟು ಕಟ್ಟಿದ ಸಾಮಾಜಿಕ ನ್ಯಾಯದ ತಳಹದಿ ಬೇರೆಬೇರೆ ರೀತಿಯಲ್ಲಿ ಶಿಥಿಲಗೊಂಡಾಗ ಇವರಲ್ಲಿ ಒಬ್ಬರೂ ಧ್ವನಿ ಎತ್ತಲಿಲ್ಲ ಎನ್ನುವುದು ಇನ್ನೊಂದು ನಿರಾಶೆ. ಮೂರನೆಯದಾಗಿ ಸರಕಾರೀ ನೇಮಕಾತಿಯಲ್ಲಿ ಅರಸು ಜಾರಿಗೆ ತಂದ ಮೀಸಲಾತಿ ವ್ಯವಸ್ಥೆಯ ಲಾಭ ಬಹುಪಾಲು ಹಿಂದುಳಿದ ವರ್ಗಗಳ ಸಮೂಹದಲ್ಲಿರುವ ಪ್ರಬಲ ಜಾತಿಗಳೇ ಆಕ್ರಮಿಸಿಕೊಳ್ಳುವುದರ ಮೂಲಕ ಧ್ವನಿ ಇಲ್ಲದ ಸಣ್ಣಸಣ್ಣ ಸಮುದಾಯಗಳ ಜನರನ್ನು ಸಬಲೀಕರಣಗೊಳಿಸಬೇಕೆಂಬ ಅರಸು ಕನಸು ಹೆಚ್ಚುಕಡಿಮೆ ನುಚ್ಚುನೂರಾಗಿದೆ ಎನ್ನುವ ಅಭಿಪ್ರಾಯವೂ ಈ ಹತಾಶೆಯನ್ನು ಹೆಚ್ಚಿಸಿದೆ. ಹೀಗೆ ಅರಸು ನೀಡಿದ ಸಾಮಾಜಿಕ ನ್ಯಾಯ ಅರಸು ಅವರ ನಂತರ ಹಾದಿ ತಪ್ಪಿತು, ಅರಸು ಅವರ ಕನಸು ಸಾಕಾರವಾಗಲಿಲ್ಲ ಎಂಬಂತೆ ಈ ಸಂಕಥನ ಕೊನೆಗೊಳ್ಳುತ್ತದೆ.

ಈ ಸಂಕಥನದ ಮಿತಿ ಏನೆಂದರೆ ಅದು ಅರಸು ಅವರ ಸಾಮಾಜಿಕ ನ್ಯಾಯದ ಕಾರ್ಯಸೂಚಿಯಿಂದಾಗಿ ಭವಿಷ್ಯದಲ್ಲಿ ಯಾವ ಬದಲಾವಣೆಗಳಾದವು ಎನ್ನುವ ಬಗ್ಗೆ ತೀರ್ಪು ನೀಡುವ ಅವಸರದಲ್ಲಿ ಆ ಕಾರ್ಯಸೂಚಿ ಏನಾಗಿತ್ತು ಎನ್ನುವ ಕತೆಯನ್ನು ಅಪೂರ್ಣವಾಗಿರಿಸುತ್ತದೆ. ಉದಾರೀಕೃತ ಅರ್ಥ ನೀತಿಯನ್ನು ಭಾರತ ಒಪ್ಪಿಕೊಂಡ ನಂತರ ಅರಸು ಜಾರಿಗೆ ತಂದ ಭೂಸುಧಾರಣೆ ಹಲವು ಬದಲಾವಣೆಗಳನ್ನು ಕಂಡಿತು ಎನ್ನುವುದಾಗಲೀ, ಅವರ ಅನುಯಾಯಿಗಳು ಅವರಂತೆ ಬದಲಾವಣೆಯ ಹರಿಕಾರರಾಗದೆ ಸ್ವಾರ್ಥಿಗಳಾದರು ಎನ್ನುವುದಾಗಲೀ ಅರಸು ನೀತಿಯ ಮಿತಿಯೂ ಅಲ್ಲ, ಅದಕ್ಕಾದ ಹಿನ್ನೆಡೆಯೂ ಅಲ್ಲ. ಸಾಮಾಜಿಕ ಬದಲಾವಣೆಯ ಯಾವ ಸೂತ್ರವೂ ಎಲ್ಲ ಕಾಲದಲ್ಲೂ ಅಬಾಧಿತವಾಗಿ ಉಳಿಯುವುದಿಲ್ಲ. ಅರಸು ಮತ್ತು ಅವರ ಸಾಮಾಜಿಕ ನ್ಯಾಯದ ಪರಿಕಲ್ಪನೆ ಮತ್ತು ಕಾರ್ಯಸೂಚಿಯನ್ನು ಅವರ ಕಾಲದಲ್ಲಿ ನಿಂತು ಅರ್ಥ ಮಾಡಿಕೊಳ್ಳಬೇಕು. ಈ ರೀತಿ ಅರ್ಥಮಾಡಿಕೊಳ್ಳುವ ಪಕ್ರಿಯೆ ಇನ್ನೂ ಅಪೂರ್ಣವಾಗಿಯೇ ಉಳಿದಿದೆ ಎನ್ನುವ ಹಿನ್ನೆಲೆಯಲ್ಲಿ ಆ ಅರ್ಥೈಸುವಿಕೆಯನ್ನು ಮತ್ತು ಸ್ವಲ್ಪ ವಿಸ್ತರಿಸುವ ಕೆಲಸವನ್ನು ಈ ಅಧ್ಯಾಯ ಮಾಡುತ್ತದೆ. ಹಾಗೆಯೇ ಅರಸು ಅವರ ಸಾಮಾಜಿಕ ನ್ಯಾಯದ ಕಲ್ಪನೆ ಅವರದ್ದೇ ಆದ ಯೋಚನೆಯಲ್ಲಿ ಹೇಗಿತ್ತು ಮತ್ತು ಆಡಳಿತಾತ್ಮಕವಾಗಿ ಅವರು ಅದನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದರು, ಎಷ್ಟು ಕಳಕಳಿಯಿಂದ ಅನುಷ್ಠಾನಗೊಳಿಸಿದ್ದರು ಎನ್ನುವ ಕತೆಯನ್ನು ಹೇಳುವ ಪಯತ್ನ ಈ ಅಧ್ಯಾಯ.

ಸ್ಥೂಲವಾಗಿ ಹೇಳುವುದಾದರೆ ಅರಸು ಅವರು ಜಾರಿಗೊಳಿಸಿದ ಸಾಮಾಜಿಕ ನ್ಯಾಯದ ಕಾರ್ಯಸೂಚಿಯಲ್ಲಿ ಎರಡು ಆಯಾಮಗಳಿವೆ. ಮೊದಲನೆಯದ್ದು ಸಾಮಾಜಿಕ-ರಾಜಕೀಯ ಆಯಾಮ (socio-political dimension), ಎರಡನೆಯದ್ದು ಸಾಮಾಜಿಕ ಆರ್ಥಿಕ ಆಯಾಮ (socio-political dimension). ಸಾಮಾಜಿಕ ರಾಜಕೀಯ ಆಯಾಮದಲ್ಲಿ ಅರಸು ಹಿಂದುಳಿದ ವರ್ಗಗಳನ್ನು ರಾಜಕೀಯಕ್ಕೆ ಕರೆತಂದು ಅಧಿಕಾರ ನೀಡಿದ್ದು, ಹಾವನೂರು ಆಯೋಗ ರಚಿಸಿ ಹಿಂದುಳಿದ ವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಿದ್ದು, ಜೀತ ವಿಮುಕ್ತಿ ಜಾರಿಗೊಳಿಸಿದ್ದು, ಮಲಹೊರುವ ಪದ್ಧತಿಯನ್ನು ನಿಷೇಧಿಸಿದ್ದು, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿದ್ದು, ವಿವಿಧ ರೀತಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದ್ದು, ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಉನ್ನತ ಶಿಕ್ಷಣವನ್ನು ಉಚಿತವಾಗಿ ನೀಡಲು ಕ್ರಮ ಕೈಗೊಂಡದ್ದು ಇತ್ಯಾದಿ ಅಂಶಗಳನ್ನು ಹೆಸರಿಸಬಹುದು. ಹಾಗೆಯೇ ಅರಸು ಸಾಮಾಜಿಕ ನ್ಯಾಯದ ಕಾರ್ಯಸೂಚಿಯ ಸಾಮಾಜಿಕ ಆರ್ಥಿಕ ಆಯಾಮದಡಿ ಭೂಸುಧಾರಣೆ, ಉದ್ಯೋಗ ಭರವಸೆಯ ಯೋಜನೆ, ಜನತಾ ಮನೆ ಯೋಜನೆ, ಬಡವರನ್ನು ಋಣ ಮುಕ್ತಗೊಳಿಸಲು ಕಾಯ್ದೆ ಜಾರಿಗೊಳಿಸಿದ್ದು, ಸಹಕಾರ ಸಂಘಗಳನ್ನು ಪುನರ್-ರಚಿಸಿದ್ದು ಇತ್ಯಾದಿಗಳನ್ನು ಹೆಸರಿಸಬಹುದು. ಸಾಮಾಜಿಕ ರಾಜಕೀಯ ಆಯಾಮದಲ್ಲಿ, ಅರಸು ಕಾಲದ ಹಿಂದುಳಿದ ವರ್ಗಗಳ ರಾಜಕೀಯ ಸಬಲೀಕರಣ ಮತ್ತು ಮೀಸಲಾತಿ ಈಗಾಗಲೇ ವಿಸ್ತೃತವಾದ ಚರ್ಚೆಯಾಗಿದೆ. ಅದೇರೀತಿ ಸಾಮಾಜಿಕ ಆರ್ಥಿಕ ಆಯಾಮದಲ್ಲಿ ಭೂಸುಧಾರಣೆಯ ಬಗ್ಗೆ ವ್ಯಾಪಕ ಅಧ್ಯಯನಗಳು ನಡೆದಿವೆ ಮತ್ತು ಚರ್ಚೆಗೆ ಒಳಪಟ್ಟಿವೆ. ಈ ಎರಡು ವಿಚಾರಗಳಾಚೆಗೆ ಅರಸು ಅವರ ಸಾಮಾಜಿಕ ನ್ಯಾಯದ ಅಜೆಂಡಾ ಏನು ಮತ್ತು ಹೇಗೆ ಎನ್ನುವುದು ಅರಸು ಅವರ ಬಗ್ಗೆ ಹೇಳದೆ ಉಳಿದ ಕತೆಯ ಪ್ರಮುಖ ಭಾಗ. ಅದು ಏನು ಎಂದು ಈಗ ನೋಡೋಣ.

ದೇವರಾಜ ಅರಸು ಕರ್ನಾಟಕದ ಅರ್ಥವ್ಯವಸ್ಥೆಯನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದವರಲ್ಲ. ಅವರನ್ನು ಹತ್ತಿರದಿಂದ ಬಲ್ಲವರು ಹೇಳುವಂತೆ ಸೈದ್ಧಾಂತಿಕವಾಗಿ ಅವರ ತಿಳುವಳಿಕೆಯ ಆಳ ಅಷ್ಟೇನೂ ಹೆಚ್ಚಿನದಾಗಿರಲಿಲ್ಲ. (2) ಆದರೆ ಅವರೊಳಗೊಬ್ಬ ನಿರಂತರ ಅಧ್ಯಯನಶೀಲ ವಿದ್ಯಾರ್ಥಿ ಇದ್ದ. ಅವರೊಳಗೊಬ್ಬ ಅಪಾರ ಸಂವೇದನಾಶೀಲ ನೋಟಕನಿದ್ದ. ಕರ್ನಾಟಕದಲ್ಲಿ ಆಗಿಹೋದ ಬೇರೆ ಯಾವ ಮುಖ್ಯಮಂತ್ರಿಯೂ ಅರಸು ಅವರಷ್ಟು ಆಳವಾಗಿಯೂ ವ್ಯಾಪಕವಾಗಿಯೂ ಓದುತ್ತಿದ್ದರು ಎನ್ನುವ ಬಗ್ಗೆ ನಮಗೆ ಪುರಾವೆಗಳು ಸಿಗುತ್ತಿಲ್ಲ. ತಮ್ಮ ವ್ಯಾಪಕ ಓದಿನ ಬಲದಿಂದ ಮತ್ತು ತಮಗೆ ಸಹಜವಾಗಿ ಒಲಿದಿರುವ ಸಂವೇದನಾಶೀಲತೆಯಿಂದ ಅರಸು ಅವರು ಜನತೆಯ ಸಮಸ್ಯೆಗಳನ್ನು ಆಳವಾಗಿ ತಿಳಿದುಕೊಳ್ಳುತ್ತಾ ತಳಮಟ್ಟದಿಂದ ಮೇಲೇರಿದ ರಾಜಕೀಯ ನಾಯಕ ಎಂಬ ಕೀರ್ತಿ ಅವರಿಗೆ ಮುಖ್ಯಮಂತಿಯಾಗುವುದಕ್ಕೆ ಮೊದಲೇ ಇತ್ತು. (3,4)

ಹೀಗಾಗಿ ಅಧಿಕಾರಕ್ಕೆ ಬರುವ ಹೊತ್ತಿಗೆ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಆಗುಹೋಗುಗಳ ಬಗ್ಗೆ ಅರಸು ಅವರಿಗೆ ಒಂದು ಸ್ಪಷ್ಟವಾದ ಒಳನೋಟ ಇತ್ತು. ಅದು ಏನೆಂದರೆ ರಾಜ್ಯದಲ್ಲಿ ಆ ತನಕದ ಆರ್ಥಿಕ ನೀತಿಗಳ ಪ್ರಯೋಜನ ಬಹುತೇಕ ಪಡೆಯುತ್ತಿದ್ದದ್ದು ಭೂಮಾಲೀಕರು ಮಾತ್ರ ಎಂಬುದು. ಅದು ತೆರಿಗೆ, ಸಾರ್ವಜನಿಕ ವೆಚ್ಚ, ಸಬ್ಸಿಡಿ ಅಥವಾ ಆ ತನಕದ ಭೂಸುಧಾರಣೆ ಇತ್ಯಾದಿ ಏನೇ ಇರಬಹುದು. ಅವೆಲ್ಲವೂ ಇತರ ಎಲ್ಲಾ ವರ್ಗಗಳಿಗಿಂತ ಹೆಚ್ಚಾಗಿ ಭೂಮಾಲಿಕರ ಹಿತವನ್ನೇ ಕಾಯುತ್ತಿದ್ದವು ಎಂಬ ಅವರ ತಿಳಿವು ಮತ್ತು ನಿಲುವು ಅವರ ಆಡಳಿತದ ಅವಧಿಯಲ್ಲಿ ಜಾರಿಗೊಂಡ ಎಲ್ಲಾ ರಾಜಕೀಯಾರ್ಥಿಕ ನೀತಿಗಳ ಅಡಿಪಾಯವಾಗಿತ್ತು. ಸಂಪತ್ತು ಉಳ್ಳವರಿಂದ ಇಲ್ಲದವರತ್ತ ಪ್ರವಹಿಸಬೇಕು ಮತ್ತು ಸಾರ್ವಜನಿಕ ನೀತಿಗಳು (public policy) ಅದಕ್ಕೆ ಅನುವು ಮಾಡಿಕೊಡಬೇಕು ಎನ್ನುವುದು ಅರಸು ಅವರ ಆಡಳಿತ ನೀತಿಗಳ ಹಿಂದಿನ ಮೂಲ ಆಶಯ ಮತ್ತು ಉದ್ದೇಶ. ಅದನ್ನು ಸಾಧಿಸುವ ಅಸ್ತ್ರವಾಗಿ ರಾಜಕೀಯ ಅಧಿಕಾರ ಕೂಡಾ ಸಮಾಜದಲ್ಲಿ ಕೆಳಮುಖವಾಗಿ ಹರಿಯುವುದು ಅವರಿಗೆ ತುಂಬಾ ಅಗತ್ಯವಾಗಿ ಕಂಡಿತು.

ಸರಕಾರ ಖರ್ಚು ಮಾಡುವ ಅಪಾರ ಹಣದಿಂದಾಗಿ ಉಳ್ಳವರಿಗೆ ಅದರಲ್ಲೂ ಮುಖ್ಯವಾಗಿ ಭೂಮಾಲೀಕರಿಗೆ ಹೆಚ್ಚು ಅನುಕೂಲವಾಗುತ್ತಿದೆ ಎನ್ನುವ ಅರಸು ಅವರ ಆರ್ಥಿಕ ಒಳನೋಟ ಅವರನ್ನು ಎರಡು ಸ್ಪಷ್ಟವಾದ ನಿರ್ಧಾರಗಳನ್ನು ಕೈಗೊಳ್ಳುವಂತೆ ಮಾಡುತ್ತದೆ. ಒಂದು ಹೆಚ್ಚು ಜನ ಭೂಮಾಲೀಕರಾಗಬೇಕು. ಅದಕ್ಕಾಗಿ ಭೂಮಿಯ ಮರುಹಂಚಿಕೆ ಆಗಬೇಕು. ಆಗ ಸರಕಾರ ಖರ್ಚು ಮಾಡುವ ಹಣದಿಂದ ಹೆಚ್ಚು ಜನರಿಗೆ ಸಹಜವಾಗಿಯೇ ಅನುಕೂಲವಾಗುತ್ತದೆ. ಆದರೆ ಭೂಮಿಯ ಮರುಹಂಚಿಕೆ ಒಂದು ಹಂತದವರೆಗೆ ಮಾತ್ರ ಸಾಧ್ಯ. ಆದುದರಿಂದ ಸರಕಾರ ವೆಚ್ಚ ಮಾಡುವ ಹಣ ಹೆಚ್ಚುಹೆಚ್ಚು ಜನರನ್ನು ತಲುಪಬೇಕೆಂದಾದರೆ ಸರಕಾರ ಯಾವ ಉದ್ದೇಶಗಳಿಗೆ ಹಣ ವೆಚ್ಚ ಮಾಡುತ್ತದೆಯೋ ಆ ಉದ್ದೇಶಗಳ ಪುನರ್ವಿಮರ್ಶೆ ಅಗತ್ಯ ಎನ್ನುವುದನ್ನು ಅವರು ಕಂಡುಕೊಳ್ಳುತ್ತಾರೆ. ಸರಕಾರ ದೊಡ್ಡ ಯೋಜನೆಗಳಿಗೆ ಹಣ ಹೂಡುವುದರ ಮೂಲಕ ಮಾತ್ರ ಅಭಿವೃದ್ಧಿ ಸಾಧಿಸಬೇಕು ಎಂದಿದ್ದ ಆ ತನಕದ ಅಲಿಖಿತ ನೀತಿಯನ್ನು ಅರಸು ಬದಲಿಸುತ್ತಾರೆ. ಸಾರ್ವಜನಿಕ ವೆಚ್ಚದ ಲಾಭ ಬಡವರಿಗೆ ನೇರವಾಗಿ ಆಗಬೇಕು ಮತ್ತು ಶೀಘ್ರವಾಗಿ ಆಗಬೇಕು. ಅದು ಆಗಬೇಕಾದರೆ ದೊಡ್ಡ ಯೋಜನೆಗಳ ಮೂಲಕ ಮಾತ್ರ ಸಾಧ್ಯವಿಲ್ಲ. ಹಲವಾರು ಸಣ್ಣಸಣ್ಣ ಯೋಜನೆಗಳನ್ನು ಹಾಕಿಕೊಳ್ಳಬೇಕು. ಈ ಯೋಜನೆಗಳು ಬಡ ಜನರಿಗೆ ಸ್ವಲ್ಪ ಪ್ರಮಾಣದಲ್ಲಾದರೂ ನೇರವಾಗಿ ನೆರವಾಗಬೇಕು ಎನ್ನುವ ನಿಲುವಿಗೆ ಅರಸು ಬರುತ್ತಾರೆ. ಅದರ ಪರಿಣಾಮ “ದೊಡ್ಡ ದೊಡ್ಡ ಯೋಜನಗಳಲ್ಲಿಯೇ ಕೇಂದ್ರೀಕೃತವಾಗಿದ್ದ ಆಡಳಿತದ ಗಮನ ಅರಸು ಕಾಲದಲ್ಲಿ ಕಲ್ಯಾಣ ಕಾರ್ಯಕ್ರಮಗಳತ್ತ ಹರಿಯಲಾರಂಭಿಸಿತು. ಇದು ಈ ಅವಧಿಯಲ್ಲಿ ಕರ್ನಾಟಕದ ಅಭಿವೃದ್ಧಿ ನೀತಿ (Development policy) ಪಡೆದುಕೊಂಡ ಸ್ಪಷ್ಟ ತಿರುವು” ಎಂಬುದಾಗಿ ಕರ್ನಾಟಕದ ರಾಜಕೀಯ-ಅರ್ಥಶಾಸ್ತ್ರವನ್ನು (Political economy) ಗಂಭೀರವಾಗಿ ಅಧ್ಯಯನ ನಡೆಸಿರುವ ನರೇಂದರ್ ಪಾಣಿ ದಾಖಲಿಸುತ್ತಾರೆ. (5)

ಇದನ್ನೂ ಓದಿ: ಹಳತು-ವಿವೇಕ; ದೇವರಾಜ ಅರಸು ಭಾಷಣದಿಂದ ಆಯ್ದ ಭಾಗ; ಗೇಣಿದಾರರ ಹಿತಸಾಧನೆ

ಈ ವಿಚಾರದಲ್ಲಿ ಅರಸು ಯೋಚಿಸಿದ ರೀತಿ, ಯೋಚನೆಯನ್ನು ಅವರು ಕಾರ್ಯಗೊಳಿಸಿದ ಬಗೆ, ಅದಕ್ಕಾಗಿ ಇಡೀ ಆಡಳಿತ ಯಂತ್ರವನ್ನು ಸಜ್ಜುಗೊಳಿಸಿದ ಅವರ ಕಾರ್ಯವೈಖರಿ ಇತ್ಯಾದಿಗಳನ್ನು ಅರಿತುಕೊಳ್ಳಲು ಅವರ ಸರಕಾರದ ಕೆಲ ಯೋಜನೆಗಳ ಬಗ್ಗೆ ಸ್ವಲ್ಪ ವಿಶದವಾಗಿ ವಿವರಿಸುವ ಅಗತ್ಯವಿದೆ.

ಮೊದಲಿಗೆ ಉದ್ಯೋಗ ಭರವಸೆಯ ಯೋಜನೆ. ಅರಸು ಸರಕಾರ ಜಾರಿಗೆ ತಂದ ಮೊದಲ ಸಾಲಿನ ಬಡತನ ನಿರ್ಮೂಲನ ಯೋಜನೆಗಳಲ್ಲಿ ಇದೂ ಒಂದು. ಈಗ ಉದ್ಯೋಗ ಭರವಸೆ ಯೋಜನೆಗಳು ಸರ್ವೇಸಾಮಾನ್ಯ. 2005ರಲ್ಲಿ ಯುಪಿಎ ಸರಕಾರ ರಾಷ್ಟ್ರೀಯ ಉದ್ಯೋಗ ಭರವಸೆಯ ಕಾಯ್ದೆ ಜಾರಿಗೊಳಿಸಿ ಗ್ರಾಮೀಣ ಜನರಿಗೆ ಉದ್ಯೋಗದ ಹಕ್ಕನ್ನು ನೀಡಿದೆ. ಅದಕ್ಕಿಂತ ಸುಮಾರು ಮೂರು ದಶಕಗಳ ಹಿಂದೆಯೇ ಅರಸು ಸರಕಾರ ಇಂತಹದ್ದೊಂದು ಯೋಜನೆಯನ್ನು ಜಾರಿಗೊಳಿಸಿತ್ತು. ಇದಕ್ಕೊಂದು ಹಿನ್ನೆಲೆ ಇದೆ.

ಅರಸು ಅವರು 1972ರಲ್ಲಿ ಅಧಿಕಾರ ಪಡೆದು ವರುಷ ಪೂರ್ತಿಯಾಗುವುದರೊಳಗೆ ರಾಜ್ಯದಲ್ಲಿ ಹಿಂದೆಂದೂ ಕಂಡುಕೇಳರಿಯದಂತಹ ಭೀಕರವಾದ ಬರಗಾಲ ಬರುತ್ತದೆ. ಇದರಿಂದ ಸರಕಾರ ಎಷ್ಟೊಂದು ವಿಚಲಿತವಾಗಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿ ಅರಸು ಸರಕಾರದ ವಿತ್ತ ಸಚಿವ ಘೋರ್ಪಡೆಯವರು 1973ರ ಮಾರ್ಚ್ 7ರಂದು ಮಂಡಿಸಿದ ಆ ವರ್ಷದ ಬಜೆಟ್ ಭಾಷಣವನ್ನೊಮ್ಮೆ ನೋಡಬೇಕು. ಒಟ್ಟು ನಲವತ್ತು ಪುಟಗಳ ಆ ವರ್ಷದ ಬಜೆಟ್ ಭಾಷಣದಲ್ಲಿ ಹತ್ತು ಪುಟಗಳಷ್ಟು (ನಾಲ್ಕನೇ ಒಂದಂಶ) ಬರಗಾಲದ ಭೀಕರತೆಯನ್ನು ವರ್ಣಿಸುವುದಕ್ಕೆ ಮತ್ತು ಸರಕಾರ ಕೈಗೊಂಡ ಮತ್ತು ಕೈಗೊಳ್ಳಬೇಕಾಗಿರುವ ಕ್ರಮಗಳ ವಿವರಣೆ ನೀಡುವುದಕ್ಕೆ ಮೀಸಲಿಡಲಾಗಿತ್ತು. (6)

ಘೋರ್ಪಡೆ

“ಈ ಬಜೆಟ್‌ಅನ್ನು ಕರ್ನಾಟಕ ಕಂಡುಕೇಳರಿಯದ ಬರಗಾಲವೊಂದನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ನಿಮ್ಮ ಮುಂದೆ ಮಂಡಿಸುತ್ತಿದ್ದೇನೆ” ಎಂದೇ ಘೋರ್ಪಡೆ ಬಜೆಟ್ ಭಾಷಣ ಪ್ರಾರಂಭಿಸುತ್ತಾರೆ. ಬಜೆಟ್‌ನಲ್ಲಿ ಬರ ಪರಿಹಾರಕ್ಕಾಗಿ ಹಿಂದೆಂದಿಗಿಂತಲೂ ಹೆಚ್ಚಿನ ವೆಚ್ಚವನ್ನು ನೀಡಲಾಗುತ್ತದೆ. ಆ ವರ್ಷ ರಾಜ್ಯದ ಒಟ್ಟು ವರಮಾನ (Revenue receipts) ಇದ್ದದ್ದು ರೂ. 331 ಕೋಟಿ. (7) ಅದರಲ್ಲಿ ರೂ. 54 ಕೋಟಿ ಬರ ಪರಿಹಾರ ಕಾರ್ಯವೊಂದಕ್ಕೆ ಮೀಸಲಿಡಲಾಗುತ್ತದೆ. ಅಂದರೆ ಒಟ್ಟು ವರಮಾನದಲ್ಲಿ ಶೇಕಡಾ 20 ರಷ್ಟು ಬರೀ ಬರ ಪರಿಹಾರಕ್ಕಾಗಿ ಖರ್ಚುಮಾಡಬೇಕಾದ ಪರಿಸ್ಥಿತಿ! ಇದಕ್ಕಿಂತಲೂ ಮುಖ್ಯವಾಗಿ ಗಮನಿಸಬೇಕಾದ ಇನ್ನೊಂದು ಅಂಶವಿದೆ. ರಾಜ್ಯ ಸದಾ ಒಂದಲ್ಲ ಒಂದು ರೀತಿಯಲ್ಲಿ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ 1965ರವರೆಗೆ ಬರ ಪರಿಹಾರಕ್ಕೆ ಮೀಸಲಿರಿಸಿದ ಮೊತ್ತ ವಾರ್ಷಿಕ ರೂ. 1 ಕೋಟಿ ದಾಟಿರಲಿಲ್ಲ. ಆ ನಂತರದ ವರ್ಷಗಳಲ್ಲಿ ಈ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಬೇಕಾಗಿ ಬಂದಿದ್ದರೂ 1971-72 ರ ಸಾಲಿನಲ್ಲಿ ಅದು ರೂ. 6.71 ಕೋಟಿಯಷ್ಟೇ ಇತ್ತು. 1972-74 ರಲ್ಲಿ ಒಮ್ಮಿಂದೊಮ್ಮೆಲೆ ಅದನ್ನು ಸುಮಾರು ಹತ್ತು ಪಟ್ಟು ಹೆಚ್ಚಿಸಬೇಕಾಗಿ ಬಂದದ್ದು ಬರದ ಭೀಕರತೆಗೆ ಮತ್ತು ಸರಕಾರಕ್ಕೆ ಎದುರಾದ ದೊಡ್ಡ ಆರ್ಥಿಕ ಸವಾಲಿಗೆ ಸಾಕ್ಷಿಯಾಗುತ್ತದೆ. (8)

ಅರಸು ಅವರ ಸಾಮಾಜಿಕ ನ್ಯಾಯದ ಸಾಮಾಜಿಕ-ರಾಜಕೀಯ ಆಯಾಮ 1972ರ ಚುನಾವಣೆಯಲ್ಲಿ ಅವರು ಹೆಣೆದ ತಂತ್ರದಿಂದಲೇ ಪ್ರಾರಂಭವಾಗಿದ್ದರೆ, ಅದರ ಸಾಮಾಜಿಕ-ಆರ್ಥಿಕ ಆಯಾಮ ಆರಂಭವಾಗುವುದು ಅರಸು ಸರಕಾರ ಈ ಭೀಕರ ಬರಗಾಲವನ್ನು ಎದುರಿಸಲು ಹಾಕಿಕೊಂಡ ಕಾರ್ಯಕ್ರಮಗಳ ಮೂಲಕ. ಆ ಕಾಲಕ್ಕೆ ಬರವೇನೂ ಕರ್ನಾಟಕಕ್ಕೆ ಹೊಸತಾಗಿರಲಿಲ್ಲ. ಬರ ಪರಿಹಾರ ಕಾರ್ಯಗಳು ಯಥೇಚ್ಛವಾಗಿ ನಡೆಯುತ್ತಲೂ ಇದ್ದವು. ಆದರೆ ಅರಸು ಮಾತ್ರ ಈ ಮಾಮೂಲಿ ಕಾರ್ಯಕ್ರಮಗಳನ್ನೂ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ನೋಡುವ ಅಗತ್ಯ ಮನಗಂಡರು. ಕಷ್ಟದಲ್ಲಿರುವವರಿಗಾಗಿ ಸರಕಾರ ಹಾಕಿಕೊಳ್ಳುವ ಈ ಕಾರ್ಯಕ್ರಮಗಳ ಆಳಕ್ಕಿಳಿದು ಅಲ್ಲಿಯೂ ಸಾಮಾಜಿಕ ನ್ಯಾಯದ ವಿಸ್ತರಣೆಗೆ ಒಂದು ಅವಕಾಶವನ್ನು ಕಾಣುವುದು ಅರಸು ಚಿಂತನೆಯ ಅನನ್ಯತೆ. ಬರಗಾಲದಲ್ಲಿ ಎದುರಾಗುವ ಕಷ್ಟಗಳನ್ನು ಬೇರೆಬೇರೆ ಜನ ಬೇರೆಬೇರೆ ರೀತಿಯಲ್ಲಿ ಅನುಭವಿಸುತ್ತಾರೆ. ಆದುದರಿಂದ ಅವರವರ ಕಷ್ಟಗಳಿಗೆ ಅನುಗುಣವಾಗಿ ನೆರವಾಗುವ ಪರಿಹಾರ ಯೋಜನೆಯೊಂದು ಬೇಕು ಎನ್ನುವ ಅರಸು ಅವರ ಸಾಮಾಜಿಕ ಚಿಂತನೆಗೆ ಅವರ ಯೋಜನಾ ಸಲಹೆಗಾರ ಡಿ.ಎಂ. ನಂಜುಂಡಪ್ಪ ಆರ್ಥಿಕ ಚಿಂತನೆಯ ಕವಚ ತೊಡಿಸುತ್ತಾರೆ. ದಿನ ರಾತ್ರಿ ಕುಳಿತು ಅಂಕಿ-ಅಂಶಗಳನ್ನು ಮತ್ತು ಸಮಸ್ಯೆಯ ಆಳವನ್ನು ವಿಶ್ಲೇಷಿಸಿದ ನಂಜುಂಡಪ್ಪ ಉದ್ಯೋಗ ಭರವಸೆ ಯೋಜನೆಯ ಯೋಚನೆಯನ್ನು ಮುಂದಿಡುತ್ತಾರೆ. ಇದಕ್ಕೆ ಅಧಿಕಾರಿ ವರ್ಗದಿಂದ ಬಂದ ವ್ಯಾಪಕ ಪ್ರತಿರೋಧವನ್ನು ಲೆಕ್ಕಿಸದೆ ಅರಸು-ನಂಜುಂಡಪ್ಪ ಜೋಡಿ ಅರ್ಥ ಸಚಿವ ಘೋರ್ಪಡೆಯವರ ಮೂಲಕ ಈ ಕಾರ್ಯಕ್ರಮವನ್ನು ಘೋಷಿಸಿಯೇಬಿಡುತ್ತದೆ.

ಈ ಯೋಜನೆಯಡಿ ಬರಗಾಲ ಬಂದು ಕೃಷಿ ಚಟುವಟಿಕೆಗಳು ಸ್ತಬ್ಧವಾದರೆ ಗ್ರಾಮೀಣ ಜನರಿಗೆ ವರ್ಷದಲ್ಲಿ ಕನಿಷ್ಠ 100 ದಿನ ಖಾತರಿ ಉದ್ಯೋಗ ನೀಡುವ ಹೊಣೆ ಸರಕಾರದ್ದು. ಬರಗಾಲದ ಕಾಲದಲ್ಲಿ ಇದರ ಲಾಭವನ್ನು ಭೂಮಿ ಇರುವ ರೈತರೂ ಪಡೆದುಕೊಳ್ಳಬಹುದಾದರೂ, ಇದು ಭೂರಹಿತ ಗ್ರಾಮೀಣ ಬಡ ಜನರಿಗಾಗಿ ರಾಜ್ಯ ಸರಕಾರ ಕೈಗೊಂಡ ಮೊತ್ತ ಮೊದಲ ಬೃಹತ್ ಯೋಜನೆ. ಅರಸು ಅವರ ಕಾಲದಲ್ಲಿ ಅಂದರೆ ಎಪ್ಪತ್ತರ ದಶಕದಲ್ಲಿ ಕರ್ನಾಟಕದ ಗ್ರಾಮೀಣವಾಸಿಗಳಲ್ಲಿ ಸುಮಾರು ಶೇಕಡಾ 25 ರಷ್ಟು ಜನ ಭೂರಹಿತರಾಗಿದ್ದರು. ಗ್ರಾಮೀಣ ಬಡವರನ್ನು ಮಾತ್ರ ಪರಿಗಣಿಸಿದರೆ ಇವರ ಪೈಕಿ ಅರ್ಧದಷ್ಟು ಜನರಿಗೆ ಯಾವುದೇ ರೀತಿಯ ಭೂ ಒಡೆತನ ಇರಲಿಲ್ಲ. ಆದುದರಿಂದ ಈ ಯೋಜನೆ ಒಂದು ದೊಡ್ಡ ಸಂಖ್ಯೆಯ ಬಡವರನ್ನು ಗುರಿಯಾಗಿರಿಸಿಕೊಂಡು ಕೈಗೊಂಡದ್ದಾಗಿತ್ತು.

ಮಹಾರಾಷ್ಟ್ರದಲ್ಲಿ (9) ಇಂತಹ ಒಂದು ಯೋಜನೆ 1972ರಲ್ಲೇ ಆರಂಭವಾಗಿದ್ದರೂ ಅಲ್ಲಿ ಅದು ಅಸ್ತಿತ್ವಕ್ಕೆ ಬಂದ ಪರಿಸ್ಥಿತಿ ಮತ್ತು ಪರಿಸರಕ್ಕೂ ಕರ್ನಾಟಕದಲ್ಲಿ ಅದನ್ನು ಆರಂಭಿಸುವುದಕ್ಕೆ ಕಾರಣವಾದ ವಿಚಾರಗಳಿಗೂ ಕೆಲವು ಮೂಲಭೂತವಾದ ವ್ಯತ್ಯಾಸಗಳಿವೆ. ಅರಸು ಆಡಳಿತಕ್ಕಿದ್ದ ಸಾಮಾಜಿಕ ನ್ಯಾಯದ ಬದ್ಧತೆಯ ಕುರುಹಾಗಿ ಈ ಯೋಜನೆಯನ್ನು ಅವಲೋಕಿಸುವಾಗ ಈ ವ್ಯತ್ಯಾಸಗಳನ್ನು ಗಮನಿಸುವುದು ಅಗತ್ಯ.

2006ರಲ್ಲಿ ಇಂಗ್ಲೆಂಡಿನ ಸಸೆಕ್ಸ್ ವಿಶ್ವವಿದ್ಯಾನಿಲಯದ ಅಭಿವೃದ್ಧಿ ಅಧ್ಯಯನ (Development Studies) ವಿದ್ವಾಂಸ ಮಿಕ್ ಮೂರ್ ಅವರು ಮಹಾರಾಷ್ಟ್ರದ ವಿಶಾಲ್ ಜಾಧವ್ ಎನ್ನುವವರ ಜತೆ ನಡೆಸಿದ ಒಂದು ಅಧ್ಯಯನದ ಪಕಾರ (10) ಮಹಾರಾಷ್ಟ್ರದಲ್ಲಿ ಉದ್ಯೋಗ ಭರವಸೆ ಯೋಜನೆಯ ಯೋಚನೆ ಬಂದದ್ದು ಸರಕಾರದ ಒಳಗಿನಿಂದ ಅಲ್ಲ. ಅಲ್ಲಿ ವಿ.ಎಸ್. ಪಾಗೆ ಎನ್ನುವ ಸಾಮಾಜಿಕ ಕಾರ್ಯಕರ್ತರೊಬ್ಬರು ಹಲವಾರು ವರ್ಷಗಳಿಂದ ಬರಗಾಲ ಸಮಯದಲ್ಲಿ ಪರಿಸ್ಥಿತಿಯನ್ನು ಎದುರಿಸಲು ಅನುಕೂಲವಾಗುವಂತಹ ಕೆಲ ಕಾಮಗಾರಿಗಳನ್ನು ಸ್ಥಳೀಯವಾಗಿ ಮಾಡಿಸುತ್ತಿದ್ದರು. 1973-74ರಲ್ಲಿ ಭೀಕರ ಬರಗಾಲ ಬಂದಾಗ ಅಲ್ಲಿನ ಸರಕಾರ, ಪಾಗೆ ಅವರು ಸಣ್ಣ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳುತಿದ್ದ ಯೋಜನೆಗಳನ್ನು ಬೃಹತ್ ಬರ ಪರಿಹಾರ ಯೋಜನೆಯಾಗಿ ಮಾರ್ಪಡಿಸುತ್ತದೆ. ಹೀಗೆ ಖಾಸಗಿಯಾಗಿ ನಡೆಯುತ್ತಿದ್ದ ಯೋಜನೆಯೊಂದನ್ನು ಮಹಾರಾಷ್ಟ್ರ ಸರಕಾರ ಕೈಗೆತ್ತಿಕೊಂಡು ವಿಸ್ತರಿಸಲು ಮುಂದಾದಕ್ಕೆ ಮೂಲಕಾರಣ ಏನು ಎಂದರೆ 1972-73ರ ಬರಗಾಲದಿಂದಾಗಿ ಆ ರಾಜ್ಯದಲ್ಲಿ ಸಂಕಷ್ಟಕ್ಕೀಡಾದವರಲ್ಲಿ ಬಹುಮಂದಿ ರಾಜಕೀಯವಾಗಿ ಪ್ರಬಲರಾದ ಮರಾಠ ಜನಾಂಗದವರಿದ್ದರು ಎನ್ನುವುದು. ಸರಕಾರದ ಇತರ ಯೋಜನೆಗಳ ಫಲಾನುಭವಿಗಳಾಗಲು ಈ ಪ್ರಬಲ ಸಮುದಾಯಗಳಿಗೆ ಬೇರೆಬೇರೆ ಅಡ್ಡಿಗಳಿದ್ದ ಕಾರಣ ಬರಗಾಲದ ಸಮಯದಲ್ಲಿ ಅವರಿಗೆ ನೆರವಾಗಲು ಈ ಯೋಜನೆ ಸೂಕ್ತವೆಂದು ಕಂಡುಕೊಂಡ ಅಲ್ಲಿನ ಕಾಂಗ್ರ್ರೆಸ್ ನಾಯಕರು, ಪಾಗೆ ಅವರು ಆರಂಭಿಸಿದ ಆಂದೋಲನವನ್ನು ಸರಕಾರದ ಯೋಜನೆಯಾಗಿ ಮರು ರೂಪಿಸಿದರು. ಅಂದರೆ, ಅರಸು ಸರಕಾರ ಈ ಯೋಜನೆ ಪ್ರಾರಂಭಿಸಿದ್ದು ಭೂಹೀನ ದುರ್ಬಲ ವರ್ಗದವರಿಗೆ, ಮಹಾರಾಷ್ಟ್ರ ಸರಕಾರ ಅದನ್ನು ಕೈಗೆತ್ತಿಕೊಂಡದ್ದು ಪ್ರಬಲ ವರ್ಗದವರಿಗೆ ಬಂದೊದಗಿದ ಅಲ್ಪಕಾಲದ ಸಂಕಷ್ಟಕ್ಕೆ ನೆರವಾಗುವುದಕ್ಕೆ ಎನ್ನುವುದು ಇಲ್ಲಿ ಗಮನಿಸಬೇಕಾದ ವಿಚಾರ. ಅದೇ ರೀತಿ ಮಹಾರಾಷ್ಟ್ರದ ಉದ್ಯೋಗ ಖಾತ್ರಿ ಯೋಜನೆಯ ಕುರಿತು ಮೊದಲು ಯೋಚಿಸಿದ್ದು ಒಬ್ಬ ಸಾಮಾಜಿಕ ಕಾರ್ಯಕರ್ತ, ಕರ್ನಾಟಕದಲ್ಲಿ ಅದರ ಬಗ್ಗೆ ಯೋಚಿಸಿದ್ದು ಸ್ವತಃ ಮುಖ್ಯಮಂತ್ರಿ ಅರಸು.

ಅರಸು ಈ ಯೋಜನೆಯನ್ನು ಅದೆಷ್ಟು ಗಂಭೀರವಾಗಿ ಪರಿಗಣಿಸಿದ್ದರು ಎನ್ನುವುದನ್ನು ಘೋರ್ಪಡೆ ತಮ್ಮ ಆತ್ಮಚರಿತ್ರೆಯಲ್ಲಿ ದಾಖಲಿಸುತ್ತಾರೆ.

ಡಿ.ಎಂ. ನಂಜುಂಡಪ್ಪ

“ಅದೊಂದು ಸಂದರ್ಭವನ್ನು ನಾನೆಂದಿಗೂ ಮರೆಯಲಾರೆ. ಆ ದಿನ ಬೆಳಗ್ಗಿನ ವಾಯುವಿಹಾರಕ್ಕೆ ತಮ್ಮೊಂದಿಗೆ ಅರಸು ನನ್ನನ್ನು ಕರೆದೊಯ್ದರು. ಅವರಿಗೆ ಬೇರೇನೂ ಹೇಳುವುದಿರಲಿಲ್ಲ. ನಾನು ತತ್‌ಕ್ಷಣ ಗುಲ್ಬರ್ಗಕ್ಕೆ ಹೋಗಬೇಕೆಂದೂ ಅಲ್ಲಿ ನಡೆಯುತ್ತಿರುವ ಬರಪರಿಹಾರ ಕಾರ್ಯಕ್ರಮಗಳು ತೃಪ್ತಿಕರವಾಗಿದೆಯೇ ಎನ್ನುವುದನ್ನು ನಾನೇ ಸ್ವತಃ ಕಂಡುಕೊಂಡುಬಂದು ತಿಳಿಸಬೇಕಾಗಿಯೂ ಅವರು ಹೇಳಿದರು. ಮಾತ್ರವಲ್ಲ, ಯಾವುದೇ ಲೋಪ ಕಂಡುಬಂದಲ್ಲಿ ಸರಿಪಡಿಸಲು ನನಗೆ ಸಂಪೂರ್ಣ ಅಧಿಕಾರ ಇದೆ ಎಂದೂ ತಿಳಿಸಿದರು. ನಾನು ಗುಲ್ಬರ್ಗಗೆ ಹೋದೆ. ಹಳ್ಳಿಹಳ್ಳಿಗಳಲ್ಲಿ ಜನ ನನ್ನ ಕಾರು ಸುತ್ತುವರಿದರು. ಕೆಲಸ ಕೇಳಿದರು. ಯಾರು ಬೇಕಾದರೂ ಕೆಲಸದಲ್ಲಿ ತೊಡಗಿಕೊಳ್ಳಬಹುದು ಎಂದು ನಾನವರಿಗೆ ಭರವಸೆ ನೀಡಿದೆ. ಹೆಣ್ಣಾಳಿಗೆ ರೂ. 2 ಮತ್ತು ಗಂಡಾಳಿಗೆ ರೂ. 2.50 ಎಂದು ಕೂಲಿ ನಿಗದಿಯಾಗಿತ್ತು. ಮಣ್ಣು ಸಂರಕ್ಷಣಾ ಕಾಮಗಾರಿಗಳಲ್ಲಿ ಜನರನ್ನು ತೊಡಗಿಸಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದೆ. ಕೇಳಿದಾಕ್ಷಣ ಕೂಲಿ ದೊರೆಯುವ ಕೆಲಸ ಸಿಗುತ್ತದೆ ಎಂದು ಆ ಜನ ಸಂತಸಪಟ್ಟರು. ಆ ಸುಡುಬಿಸಿಲಲ್ಲಿ ತನ್ಮಯತೆಯಿಂದ ದುಡಿದರು. ಅವರಿಗೆ ತಮ್ಮ ಹೊಟ್ಟೆ ಹೊರೆಯುವುದು ಮುಖ್ಯವಾಗಿತ್ತು. ತಮ್ಮ ಮಕ್ಕಳು ಉಪವಾಸ ಬೀಳದಂತೆ ನೋಡಿಕೊಳ್ಳುವುದು ಮುಖ್ಯವಾಗಿತ್ತು. ಜನರನ್ನು ಈ ಪರಿ ಬಳಲಿಸಿದ ಇನ್ನೊಂದು ಬರಗಾಲವನ್ನು ನಾನು ಕಂಡದ್ದಿಲ್ಲ.” (11)

ಅಡಿ ಟಿಪ್ಪಣಿ

(1) ದಾಮ್ಲೆ, ಚಂದ್ರಶೇಖರ್ (1989) ಲ್ಯಾಂಡ್ ರಿಫಾರ್ಮ್ಸ್ ಲೆಜಿಸ್ಲೇಶನ್ ಇನ್ ಕರ್ನಾಟಕ, ಮಿತ್ ಆಫ್ ಸಕ್ಸಸ್, ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ, ಸಂಪುಟ 24, ಸಂಖ್ಯೆ 33 ಪುಟ 1896-1906; ಮತ್ತು ಮೇನರ್, ಜೇಮ್ಸ್ (1980) ಪ್ರಾಗ್ಮಾಟಿಕ್ ಪ್ರೋಗ್ರೆಸ್ಸಿವ್ಸ್ ಇನ್ ರೀಜನಲ್ ಪಾಲಿಟಿಕ್ಸ್, ದ ಕೇಸ್ ಆಫ್ ದೇವರಾಜ ಅರಸ್, ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ, ವಾರ್ಷಿಕ ಸಂಚಿಕೆ, ಫೆಬ್ರವರಿ, ಪುಟ 201-13.

(2) ಹೀಗೆ ಹೇಳಿದ್ದು ಅರಸನ್ನು ರಾಜಕೀಯವಾಗಿ ಹತ್ತಿರದಿಂದ ಬಲ್ಲ ಕರ್ನಾಟಕದ ಇನ್ನೊಬ್ಬ ಓದುಗ ರಾಜಕಾರಣಿ ಮತ್ತು ಮಾಜಿ ಮುಖ್ಯಮಂತ್ರಿ ಜೆ.ಹೆಚ್. ಪಟೇಲ್. ನೋಡಿ ಸದಾನಂದ ಜೆ.ಎಸ್. (ಸಂ) (2000) ಡಿ. ದೇವರಾಜ ಅರಸು, ಪ್ರತಿಭಾವಂತ ಸಂಸದೀಯ ಪಟುಗಳ ಬದುಕು ಬರಹ ಮಾಲಿಕೆ, ಸಂಶೋಧನಾ ಮತ್ತು ಉಲ್ಲೇಖನಾ ಶಾಖೆ, ಕರ್ನಾಟಕ ವಿಧಾನ ಸಭೆಯ ಸಚಿವಾಲಯ, ಬೆಂಗಳೂರು. ಪುಟ 35.

(3) 1947ರ ಸುಮಾರಿಗೆ ಅಂದರೆ ಮುಖ್ಯಮಂತ್ರಿಯಾಗುವುದಕ್ಕೆ ಸುಮಾರು 25 ವರ್ಷಗಳ ಹಿಂದೆಯೇ ಅರಸು ಅವರು ಮಾಡಿದ ಒಂದು ಭಾಷಣ ಕೇಳಿದ ಪ್ರಸಿದ್ಧ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಬರೆಯುತ್ತಾರೆ: “ನೆಲ, ಜಲ, ವ್ಯವಸಾಯ, ಮಣ್ಣು, ಪೈರು ಇವುಗಳ ನಿಕಟ ಸಂಪರ್ಕದಿಂದ ದೊರೆತ ನೈಜ ಅನುಭವದಿಂದ ಸುಲಭವಾದ ಶೈಲಿಯಲ್ಲಿ ಸುಮಾರು ಒಂದು ಗಂಟೆ (ಅರಸು) ಮಾತನಾಡಿದರು. ಅದು ಜನತೆಯ ನಡುವೆ ವಾಸಿಸಿ, ಅವರ ಸಮಸ್ಯೆಗಳನ್ನು ಅವರ ಮಾರ್ಗದಲ್ಲಿಯೇ ಪರಿಹರಿಸುವ ದಾರಿಯನ್ನು ಭಾರತದ ಸಮಸ್ಯೆಗಳ ಪರಿಹಾರಕ್ಕೆ ಭಾರತೀಯವಾದ ಮಾರ್ಗ ಸ್ವಾನುಭವದಿಂದ ಬೋಧಿಸುವ ಹಿತನುಡಿಯಾಗಿತ್ತು. ಆ ಭಾಷಣ ನನ್ನ ಮೇಲೆ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ ಆ ಭಾಷಣದ ಸೊಗಸನ್ನು ಇನ್ನೂ ಮರೆತಿಲ್ಲ.” ನೋಡಿ ಸದಾನಂದ ಜೆ.ಎಸ್. (ಸಂ) (2000) ಡಿ. ದೇವರಾಜ ಅರಸು, ಪ್ರತಿಭಾವಂತ ಸಂಸದೀಯ ಪಟುಗಳ ಬದುಕು ಬರಹ ಮಾಲಿಕೆ, ಸಂಶೋಧನಾ ಮತ್ತು ಉಲ್ಲೇಖನಾ ಶಾಖೆ, ಕರ್ನಾಟಕ ವಿಧಾನ ಸಭೆಯ ಸಚಿವಾಲಯ, ಬೆಂಗಳೂರು. ಪುಟ 36.

(4) ಅರಸು ಕುರಿತು ಬರೆದ ತಮ್ಮ ಪುಸ್ತಕದಲ್ಲಿ ಪತ್ರಕರ್ತರಾಗಿದ್ದ ವಡ್ಡರ್ಸೆ ರಘುರಾಮ ಶೆಟ್ಟಿ (1928- 2001) ಅರಸು ಅವರ ಈ ಗುಣಗಳ ಬಗ್ಗೆ ಹೀಗೆ ಬರೆಯುತ್ತಾರೆ: 1970ರ ಆಗಸ್ಟ್ ತಿಂಗಳಲ್ಲಿ ದೇವರಾಜ ಅರಸು ಕರ್ನಾಟಕ ಪ್ರದೇಶ ಕಾಂಗ್ರೆಸ್(ಆರ್)ನ ಕಾರ್ಯಕರ್ತರ ಶಿಬಿರವೊಂದನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಅಂದಿನವರೆಗೆ ನಾನು ಅರಸು ಭಾಷಣಗಳನ್ನು ಹಲವಾರು ಬಾರಿ ಕೇಳಿದ್ದೆ. ಅವರೊಬ್ಬ ಬೋರ್ ಮಾಸ್ಟರ್ ಎಂದು ಕರೆಯುವುದು ನಮ್ಮೆಲ್ಲರ ಅಭ್ಯಾಸವಾಗಿತ್ತು…. (ಆದರೆ) ಅಂದವರು ಮಾಡಿದ ಭಾಷಣ ಅಪೂರ್ವದ್ದಾಗಿತ್ತು. ಭಾಷಣ ಮುಗಿಸಿದಾಗ ಒಂದೂವರೆ ಗಂಟೆಯಾಗಿತ್ತೆಂಬುದರ ಅರಿವೇ ನಮಗಾಗಿರಲಿಲ್ಲ. ವಿಷಯಕ್ಕೆ ಪೀಠಿಕೆಯಾಗಿ ಅಂದವರು ಮಾಡಿದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ವಿಶ್ಲೇಷಣೆಯಲ್ಲಿ ಒಬ್ಬ ಸಮಾಜ ವಿಜ್ಞಾನಿಯ ಪಾಂಡಿತ್ಯ, ಒಬ್ಬ ಅರ್ಥಶಾಸ್ತ್ರಜ್ಞನ ಆಳ ಅನುಭವ ಹಾಗೂ ರಾಜಕೀಯ ಕನಸುಗಾರನೊಬ್ಬನ ಗುಣವಿರುವುದನ್ನು ನಾನು ಗುರುತಿಸಿದೆ. ನೋಡಿ ವಡ್ಡರ್ಸೆ ರಘುರಾಮ ಶೆಟ್ಟಿ (2000) ಬಹುರೂಪಿ ಅರಸು, ಸಪ್ನ ಬುಕ್ ಹೌಸ್, ಬೆಂಗಳೂರು. ಪುಟ 60-61.

(5) ಪಾಣಿ, ನರೇಂದರ್ (1991) ಪೊಲಿಟಿಕಲ್ ಎಕಾನಮಿ ಆಪ್ಹ್ ಕರ್ನಾಟಕ 1950-1995, ಆನ್ ಓವರ್ ವ್ಯೂ, ಜರ್ನಲ್ ಆಫ್ ಸೋಶಿಯಲ್ ಅಂಡ್ ಎಕನಾಮಿಕ್ ಡೆವಲಪ್ಮೆಂಟ್, ಸಂಪುಟ 1, ಸಂಚಿಕೆ 1, ಜನವರಿ-ಜೂನ್, ಇನ್‌ಸ್ಟ್ಟಿಟ್ಯೂಟ್ ಆಫ್ ಸೋಶಿಯಲ್ ಅಂಡ್ ಎಕನಾಮಿಕ್ ಚೇಂಜ್ (ಐಸೆಕ್), ಬೆಂಗಳೂರು ಪುಟ 64-84.

(6) ಹಣಕಾಸು ಇಲಾಖೆ, ಕರ್ನಾಟಕ ಸರಕಾರ (1973) ವಿತ್ತ ಸಚಿವ ಎಂ.ವೈ. ಘೋರ್ಪಡೆಯವರು ಮಂಡಿಸಿದ 1973-74 ನೇ ಸಾಲಿನ ಆಯವ್ಯಯ ಭಾಷಣ, ಪುಟ 1-11.

(7) ಹೋಲಿಕೆಗಾಗಿ ನೋಡುವುದಾದರೆ 40 ವರ್ಷಗಳ ನಂತರ, ಅಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 12, 2013 ರಂದು ಮಂಡಿಸಿದ ಆಯವ್ಯಯ(2013-14)ದಲ್ಲಿ ಅಂದಾಜಿಸಲಾದ ರಾಜ್ಯದ ಒಟ್ಟು ವರಮಾನ (Revenue receipts) ರೂ. 97986 ಕೋಟಿ. ನೋಡಿ: ಹಣಕಾಸು ಇಲಾಖೆ, ಕರ್ನಾಟಕ ಸರಕಾರ (2013) ರಾಜ್ಯ ಆಯವ್ಯಯ ಭಾಷಣ- 2013-14, ಪುಟ 120.

(8) ಹಣಕಾಸು ಇಲಾಖೆ, ಕರ್ನಾಟಕ ಸರಕಾರ (1973) ವಿತ್ತ ಸಚಿವ ಎಂ.ವೈ. ಘೋರ್ಪಡೆಯವರು ಮಂಡಿಸಿದ 1973-74 ನೇ ಸಾಲಿನ ಆಯವ್ಯಯ ಭಾಷಣ, ಪುಟ 5.

(9) ನಾಡಕರ್ಣಿ ಎಂ.ವಿ. ಮತ್ತು ಅಜೀಜ್ ಅಬ್ದುಲ್ (1992) ಡಿ.ಎಂ. ನಂಜುಂಡಪ್ಪ: ಹಿಸ್ ಲೈಫ್ ಆಂಡ್ ವರ್ಕ್, ಭಾರದ್ವಾಜ್ ಆರ್. ಮತ್ತು ನಾಡಕರ್ಣಿ ಎಂ.ವಿ. (ಸಂ) ಪ್ಲಾನಿಂಗ್ ಫಾರ್ ಸೋಶಿಯಲ್ ಅಂಡ್ ಎಕನಾಮಿಕ್ ಡೆವಲಪ್ಮೆಂಟ್, ಸೇಜ್ ಪಬ್ಲಿಕೇಷನ್ಸ್, ಡೆಲ್ಲಿ, ಪುಟ 21-31.

(10) ಮೂರ್ ಮಿಕ್ ಮತ್ತು ವಿಶಾಲ್ ಜಾಧವ್ (2005) ದ ಪಾಲಿಟಿಕ್ಸ್ ಅಂಡ್ ಬುರೋಕ್ರಟಿಕ್ಸ್ ಆಫ್ ಪಬ್ಲಿಕ್ ವರ್ಕ್ಸ್: ಮಹಾರಾಷ್ಟ್ರಸ್ ಎಂಪ್ಲಾಯ್ಮೆಂಟ್ ಗ್ಯಾರಂಟೀಡ್ ಸ್ಕೀಮ್, ಜರ್ನಲ್ ಆಫ್ ಡೆವಲಪ್ಮೆಂಟ್ ಸ್ಟಡೀಸ್, ಸಂಪುಟ 42, ಸಂಖ್ಯೆ 8, 1271-1300.

(11) ಘೋರ್ಪಡೆ ಎಂ.ವೈ. (2004) ಡೌನ್ ಮೆಮೊರಿ ಲೇನ್ ಅ ಮೆಮೋಯರ್, ಪೆಂಗ್ವಿನ್ ನ್ಯೂ ಡೆಲ್ಲಿ, ಪುಟ 108

(ಮುಂದುವರಿಯುತ್ತದೆ..)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಕ್ಷೌರ ಮಾಡಲು ತಡವಾಗಿ ಬಂದ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿದ ಪೊಲೀಸ್‌ ಅಧಿಕಾರಿ

0
ಕ್ಷೌರಕ್ಕಾಗಿ ಮನೆಗೆ ಕ್ಷೌರಿಕ ತಡವಾಗಿ ಬಂದ ಎಂದು ಪೊಲೀಸ್‌ ಅಧಿಕಾರಿಯೋರ್ವ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿರುವ ಅಮಾನವೀಯ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಬುದೌನ್‌ನ ಪೊಲೀಸ್ ಠಾಣೆಯೊಂದರಲ್ಲಿ ನಡೆದಿದೆ. ಸರ್ಕಲ್ ಆಫೀಸರ್(ಸಿಒ) ಸುನೀಲ್ ಕುಮಾರ್...