Homeಕರ್ನಾಟಕಬಿಜೆಪಿ-ಜೆಡಿಎಸ್ ಮೈತ್ರಿ; ದೇವೇಗೌಡರು ಕಳೆದುಕೊಂಡದ್ದೇನು?

ಬಿಜೆಪಿ-ಜೆಡಿಎಸ್ ಮೈತ್ರಿ; ದೇವೇಗೌಡರು ಕಳೆದುಕೊಂಡದ್ದೇನು?

- Advertisement -
- Advertisement -

ಕರ್ನಾಟಕದ ಜನತಾದಳ (ಸೆಕ್ಯುಲರ್) ಅರ್ಥಾತ್ ಜೆಡಿಎಸ್ ಪಕ್ಷ ಬಿಜೆಪಿಯ ಜತೆ ಮೈತ್ರಿ ಮಾಡಿಕೊಂಡದ್ದು ಈಗ ಅಧಿಕೃತವಾಗಿದೆ. ಎರಡು ರೀತಿಯಲ್ಲಿ ಅಧಿಕೃತ- ಒಂದು ದೆಹಲಿಯಲ್ಲಿ ಎರಡೂ ಪಕ್ಷಗಳ ನಾಯಕರ ಸಮ್ಮುಖದಲ್ಲಿ ಮೈತ್ರಿ ಘೋಷಣೆ ಆಗಿದೆ. ಎರಡನೆಯದಾಗಿ ಮತ್ತು ಅದಕ್ಕಿಂತಲೂ ಮುಖ್ಯವಾಗಿ ಪಕ್ಷದ ಪಿತಾಮಹ ಹೆಚ್.ಡಿ. ದೇವೇಗೌಡರಿಂದ ಕೂಡಾ ಈ ಮೈತ್ರಿಗೆ ಕಾಯ ವಾಚಾ ಮನಸಾ ಒಪ್ಪಿಗೆ ಸಿಕ್ಕಿದೆ. ಹಿಂದೊಮ್ಮೆ ಅಂದರೆ 2006ರಲ್ಲಿ ದೇವೇಗೌಡರ ಮಗ ಮತ್ತು ಈಗ ಜೆಡಿಎಸ್ ಪಕ್ಷದ ಎಲ್ಲವೂ ಆಗಿರುವ ಕುಮಾರಸ್ವಾಮಿ ಅವರು ಬಿಜೆಪಿಯ ಜತೆ ಮೈತ್ರಿ ಮಾಡಿಕೊಂಡದ್ದು ಅಧಿಕೃತವಾಗಿದ್ದರೂ, ಆಗ ದೇವೇಗೌಡರು ಅದಕ್ಕೆ ಬಹಿರಂಗವಾಗಿ ಮತ್ತು ಅಧಿಕೃತವಾಗಿ ಒಪ್ಪಿಗೆ ನೀಡಿರಲಿಲ್ಲ. ಮಾತ್ರವಲ್ಲ, ಆ ಮೈತ್ರಿಯ ಕಾರಣದಿಂದಾಗಿ ಅವರು ಮಾನಸಿಕವಾಗಿ ಭಾರೀ ಕುಸಿದುಹೋಗಿದ್ದರು ಅಂತ ಕರ್ನಾಟಕದಲ್ಲೊಂದು ಜಾನಪದ ಕತೆ ಕೂಡಾ ಹುಟ್ಟಿಕೊಂಡಿತ್ತು.

ಅಷ್ಟಕ್ಕೂ ಜೆಡಿಎಸ್ ಬಿಜೆಪಿಯೊಂದಿಗೆ ಸಂಸಾರ ಹೂಡಲು ನಿರ್ಧರಿಸಿರುವ ಬಗ್ಗೆ ಅಷ್ಟೊಂದು ಆಶ್ಚರ್ಯ, ಅಷ್ಟೊಂದು ಆತಂಕ ಯಾಕೆ ವ್ಯಕ್ತವಾಯಿತು ಎನ್ನುವುದೇ ಒಂದು ಪ್ರಶ್ನೆ. ಜನತಾ ದಳ (ಎಸ್) ಪಕ್ಷದಲ್ಲಿರುವ ’ಎಸ್’ ಎನ್ನುವ ಅಕ್ಷರದ ವಿಸ್ತೃತ ರೂಪ ’ಸೆಕ್ಯುಲರ್’ ಎನ್ನುವ ಕಾರಣಕ್ಕಾಗಿ ಮತ್ತು ಅದರ ಅರ್ಥ ಧರ್ಮ ನಿರಪೇಕ್ಷತೆ ಎನ್ನುವ ಸಾಂವಿಧಾನಿಕ ಮೌಲ್ಯ ಎನ್ನುವ ಕಾರಣಕ್ಕಾಗಿ, ಆ ಮೌಲ್ಯವನ್ನು ಶತಾಯಗತಾಯ ವಿರೋಧಿಸುತ್ತಾ ಬಂದಿರುವ ಬಿಜೆಪಿಯ ಜತೆ ಜೆಡಿಎಸ್ ಈಗ ಕೂಡಿಕೆ ಮಾಡಿಕೊಂಡಿತು ಎನ್ನುವುದು ಈ ಆಶ್ಚರ್ಯಕ್ಕೆ ಕಾರಣವಾಗಿರುವ ಅಂಶವೇ? ಹಾಗೇನಿಲ್ಲ, ಯಾಕೆಂದರೆ, ಜೆಡಿಎಸ್‌ಗೆ ಸೆಕ್ಯುಲರ್ ಎನ್ನುವುದು ಯಾವತ್ತೂ ಮುಸ್ಲಿಮರ ಮತ ಬಂದಷ್ಟು ಬರಲಿ ಎನ್ನುವ ಕಾರಣಕ್ಕೆ ಇಟ್ಟುಕೊಂಡ ಒಂದು ತಂತ್ರದ ಪದವಾಗಿತ್ತು ಅಷ್ಟೇ. ಸೆಕ್ಯುಲರ್ ಮೌಲ್ಯದ ಕುರಿತಾಗಿ ಆ ಪಕ್ಷಕ್ಕಾಗಲೀ, ಅದರ ನಾಯಕರಿಗಾಗಲಿ ದೊಡ್ಡ ಬದ್ಧತೆ ಇತ್ತು ಎನ್ನುವ ಭ್ರಮೆ ಯಾರಿಗೂ ಇರಲಿಲ್ಲ. ಅಷ್ಟೇಅಲ್ಲ, ಬಿಜೆಪಿ ಏನನ್ನು ಪ್ರತಿನಿಧಿಸುತ್ತದೆಯೋ ಅದನ್ನು ಆಪಾದಮಸ್ತಕ ವಿರೋಧಿಸುತ್ತಾ ಬಂದಿರುವ ನೆರೆಯ ತಮಿಳುನಾಡಿನ ಡಿಎಂಕೆ ಪಕ್ಷವೇ ಒಂದು ಕಾಲಕ್ಕೆ ಬಿಜೆಪಿ ನೇತೃತ್ವದ ಎನ್.ಡಿ.ಎ. ಕೂಟದ ಭಾಗವಿರಲಿಲ್ಲವೇ? ಮಹಾರಾಷ್ಟ್ರದಲ್ಲಿ ಬಿಜೆಪಿಗಿಂತ ವಿಶೇಷವೇನೂ ಭಿನ್ನವಲ್ಲದ ಶಿವಸೇನೆಯ ಜತೆ ಸಾಕ್ಷಾತ್ ಕಾಂಗ್ರೆಸ್ ಪಕ್ಷವೇ ಮೈತ್ರಿಕೂಟ ರಚಿಸಿಕೊಂಡಿಲ್ಲವೇ? ಹಾಗಿರುವಾಗ ನೆಪಕ್ಕೆ ಮಾತ್ರ ಸೆಕ್ಯುಲರಿಸಂ ಎಂದು ಹೆಸರಲ್ಲಿ ಸೇರಿಸಿಕೊಂಡಿದ್ದ ಜನತಾ ದಳ ಬಿಜೆಪಿಯ ಜತೆ ಸಖ್ಯ ಬೆಳೆಸಿಕೊಳ್ಳಬಾರದು ಎಂದಾಗಲೀ, ಬೆಳೆಸಿಕೊಳ್ಳುವುದಿಲ್ಲ ಅಂತಾಗಲೀ ಯಾರಾದರೂ ಅಂದುಕೊಳ್ಳುವುದರಲ್ಲಿ ಯಾವ ಅರ್ಥವೂ ಇರಲಿಲ್ಲ. ವಾಸ್ತವ ಹೀಗಿದ್ದರೂ ಜನತಾ ದಳ ಮತ್ತು ಬಿಜೆಪಿಯ ಮೈತ್ರಿಯ ವಿಚಾರದಲ್ಲಿ ಕರ್ನಾಟಕ ರಾಜಕೀಯವನ್ನು ನೋಡುತ್ತಾ ಬಂದವರಿಗೆ ಮತ್ತು ಸಾಮಾನ್ಯ ಜನರಿಗೆ ಕೂಡಾ ಒಂದು ರೀತಿಯ ಆಶ್ಚರ್ಯ ಹುಟ್ಟಲು ಕಾರಣವಾದರೂ ಏನಿರಬಹುದು ಎನ್ನುವ ಪ್ರಶ್ನೆ ಕೇಳುತ್ತಾ ಹೋದಾಗ ಹಲಾವಾರು ಸೂಕ್ಷ್ಮಗಳು ಗೋಚರಿಸುತ್ತವೆ.

ಮೊದಲನೆಯದಾಗಿ ಡಿಎಂಕೆಯವರು ಸಖ್ಯಮಾಡಿಕೊಂಡ ಕಾಲದ ಬಿಜೆಪಿಗೂ, ಈಗಿನ ಬಿಜೆಪಿಗೂ ಬಹಳಷ್ಟು ವ್ಯತ್ಯಾಸವಿದೆ. ಅಂದಿನದು ವಾಜಪೇಯಿ-ಅಡ್ವಾನಿ ಅವರ ನಾಯಕತ್ವದ ಬಿಜೆಪಿ. ಆಗ ಪಕ್ಷಕ್ಕೆ ಸಂವಿಧಾನದ ಬಗ್ಗೆ, ಪ್ರಜಾತಂತ್ರದ ಬಗ್ಗೆ ಮತ್ತು ಸಾರ್ವಜನಿಕ ಜೀವನದಲ್ಲಿ ಅನುಸರಿಸಬೇಕಾದ ಕನಿಷ್ಠ ಮಾನವೀಯ ಸೌಜನ್ಯದ ಬಗ್ಗೆ ಒಲ್ಲದ ಮನಸ್ಸಿನಿಂದಾದರೂ ಒಂದಷ್ಟು ಕಾಳಜಿ ಇತ್ತು. ಆ ಕಾಲದಲ್ಲಿ ಸಂವಿಧಾನಕ್ಕೆ, ಪ್ರಜಾತಂತ್ರಕ್ಕೆ ಮತ್ತು ಕನಿಷ್ಠ ಮಾನವೀಯ ಮೌಲ್ಯಗಳ ವಿರುದ್ಧವಾಗಿ ನೇರವಾಗಿ ನಡೆದುಕೊಳ್ಳುವುದಕ್ಕೆ ಒಂದು ಮಟ್ಟದ ತಡೆಯನ್ನು ತಾನೇ ಸೃಷ್ಟಿಸಿಕೊಂಡಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಸಂವಿಧಾನದ ಕುರಿತಾಗಿ ಆ ಪಕ್ಷಕ್ಕಿರುವ ಉಪೇಕ್ಷೆ ಮತ್ತು ವಿರೋಧ ಈಗ ಗುಟ್ಟಾಗಿ ಉಳಿದಿಲ್ಲ. ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ ಅದು ಸಂವಿಧಾನವನ್ನು ಇರಗೊಡುವುದಿಲ್ಲ ಎನ್ನುವ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮುಸ್ಲಿಂ ವಿರೋಧಿ ಧೋರಣೆಯನ್ನು ತನ್ನ ಪ್ರಮುಖ ನೀತಿ ಅಂತ ಬಿಜೆಪಿ ಅಧಿಕೃತವಾಗಿ ಘೋಷಿಸುವುದು ಮಾತ್ರ ಬಾಕಿ. ಅಷ್ಟರಮಟ್ಟಿಗೆ ಮುಸ್ಲಿಮರ ವಿರುದ್ಧ ಅದರ ವಿವಿಧ ಹಂತದ ಬಿಜೆಪಿ ನಾಯಕರುಗಳು ಪ್ರತ್ಯಕ್ಷ ಮತ್ತು ಪರೋಕ್ಷ ದಾಳಿ ನಡೆಸುತ್ತಿದ್ದಾರೆ. ಸಾರ್ವಜನಿಕ ಬದುಕಿನ ಕನಿಷ್ಠ ರೀತಿರಿವಾಜುಗಳ ಬಗ್ಗೆ ಕೂಡಾ ಆ ಪಕ್ಷದ ಹಲವಾರು ನಾಯಕರುಗಳಿಗೆ ಯಾವುದೇ ಗಣನೆ, ಗೊಡವೆ ಇಲ್ಲ. ಮೊನ್ನೆಮೊನ್ನೆ ಓರ್ವ ಬಿಜೆಪಿ ಸಂಸದ ಬಹುಜನ ಸಮಾಜ ಪಕ್ಷದ ಮುಸ್ಲಿಂ ಸಂಸದರೊಬ್ಬರನ್ನು ಸಂಸತ್ತಿನೊಳಗೆ ಯಾವಯಾವ ಪದಗಳನ್ನು ಬಳಸಿ ನಿಂದಿಸಿದರು ಮತ್ತು ಅವರು ಹಾಗೆ ಮಾಡುವಾಗ ಪಕ್ಷದ ಹಿರಿಯ ನಾಯಕರೀರ್ವರು ಮುಗುಳುನಗೆ ಸೂಸುತ್ತಾ ’ಮೆಚ್ಚಿ ಅಹುದಹುದು’ ಎನ್ನುವ ಭಾವ ಪ್ರಕಟಿಸಿದರು ಮತ್ತು ಇಂದಿಗೂ ಆ ಪಕ್ಷ ಅದನ್ನು ಸಮರ್ಥಿಸಿಕೊಳ್ಳುತ್ತಿದೆಯೇ ಹೊರತು ಖಂಡಿಸುತ್ತಿಲ್ಲ ಎನ್ನುವುದು ಏನನ್ನು ಸೂಚಿಸುತ್ತದೆ. ಅಷ್ಟೇಅಲ್ಲ ಕೆಲವು ಬಿಜೆಪಿ ನಾಯಕರು ಗುಂಪು ಕೊಲೆ ಮಾಡಿ ಜೈಲು ಸೇರಿದ ವ್ಯಕ್ತಿಗಳಿಗೆ ಜಾಮೀನು ಕೊಡಿಸಿ ಮಾಲೆ ಹಾಕಿ ಸನ್ಮಾನ ಮಾಡುತ್ತಿರುವುದು ಆಗಾಗ ವರದಿಯಾಗುತ್ತಿದೆ. ಹೌದು ಇವ್ಯಾವೂ ಕೂಡಾ ಬಿಜೆಪಿಯ ಅಧಿಕೃತ ಕೃತ್ಯಗಳಲ್ಲ. ಆದರೆ ಈ ಎಲ್ಲಾ ಕೃತ್ಯಗಳಿಗೂ ಆ ಪಕ್ಷದ ಪರೋಕ್ಷ ಸಮ್ಮತಿ ಇದೆ ಎನ್ನುವುದು ಎಲ್ಲರಿಗೂ ಗೊತ್ತು. ಇಂತಹ ಸಮಯದಲ್ಲಿ ಜೆಡಿಎಸ್ ಬಿಜೆಪಿಯ ಜತೆ ಸಖ್ಯ ಮಾಡಿಕೊಂಡಿದೆ ಎನ್ನುವುದು ಒಂದು.

ಇದನ್ನೂ ಓದಿ: ಬಿಜೆಪಿ-ಜೆಡಿಎಸ್‌ ಮೈತ್ರಿ: ರಾಷ್ಟ್ರೀಯ ನಾಯಕರ ನಿರ್ಧಾರವನ್ನು ತಿರಸ್ಕರಿಸಿದ ಕೇರಳ ಜೆಡಿಎಸ್‌ ಘಟಕ

ಇನ್ನೊಂದು, ಈ ತನಕ ಜೆಡಿಎಸ್ ಹೇಳಿಕೊಂಡದ್ದು ತಾನು ಕರ್ನಾಟಕದ ಹಿತರಕ್ಷಣೆ ಮಾಡುವ ಪಕ್ಷ ಅಂತ. ತಾನೊಂದು ಪ್ರಾದೇಶಿಕ ಪಕ್ಷ ಅಂತ. ಕರ್ನಾಟಕಕ್ಕೆ ಒಂದು ಕರ್ನಾಟಕದ್ದೇ ಆದ ಪಕ್ಷ ಬೇಕೆಂತಲೂ, ಸದ್ಯಕ್ಕೆ ತಮ್ಮ ಪಕ್ಷವೇ ಕರ್ನಾಟಕದ ಪಕ್ಷವೆಂದೂ, ಇತರ ಪಕ್ಷಗಳೆಲ್ಲಾ ರಾಷ್ಟ್ರೀಯ ಪಕ್ಷಗಳೆಂದೂ ಕುಮಾರಸ್ವಾಮಿಯವರಾದಿಯಾಗಿ ಜನತಾದಳದ ಎಲ್ಲಾ ನಾಯಕರುಗಳು ಹೇಳಿಕೊಳ್ಳುತ್ತಿದ್ದರು. ಎಲ್ಲಾ ರಾಷ್ಟ್ರೀಯ ಪಕ್ಷಗಳನ್ನೂ ವಿರೋಧಿಸುತ್ತಾ ಬಂದಿರುವ ಜನತಾದಳ ಈಗ ಕೈಜೋಡಿಸಿರುವುದು ಕೇವಲ ಒಂದು ರಾಷ್ಟ್ರೀಯ ಪಕ್ಷದ ಜತೆಗೆ ಅಷ್ಟೇಅಲ್ಲ; ರಾಜ್ಯಗಳ ಅಸ್ತಿತ್ವದಲ್ಲೇ ನಂಬಿಕೆ ಇಲ್ಲದ ಒಂದು ಸಿದ್ಧಾಂತಕ್ಕೆ ಮೂಲಭೂತವಾಗಿ ಬದ್ಧವಾಗಿರುವ ಪಕ್ಷದೊಂದಿಗೆ! ರಾಜ್ಯಗಳೆಂದರೆ ಅದು ನಂಬಿರುವ ಮೂಲ ಸಿದ್ಧಾಂತಕ್ಕೆ ಅಲರ್ಜಿ. ಹಾಗಂತ ಬಿಜೆಪಿ ನೇರವಾಗಿ ಹೇಳದೆ ಇರಬಹುದು. ಆದರೆ ಅದು ಈತನಕ ನಡೆದುಕೊಂಡ ರೀತಿಯಿಂದ, ಅದು ದೇಶದ ಒಕ್ಕೂಟ ವ್ಯವಸ್ಥೆಗೆ ಅರ್ಥಾತ್ ರಾಜ್ಯಗಳ ಸ್ವಾಯತ್ತ ಅಸ್ತಿತ್ವಕ್ಕೆ ಕೊಡಲಿ ಏಟು ನೀಡುತ್ತಾ ಬಂದಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ದಕ್ಷಿಣ ರಾಜ್ಯಗಳು, ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕ ವಿಶೇಷವಾಗಿ ಬಿಜೆಪಿಯ ಒಕ್ಕೂಟ ವಿರೋಧಿ ನಿಲುವಿನಿಂದಾಗಿ ಪರಿಪರಿಯ ಸಂಕಷ್ಟಗಳನ್ನು ಅನುಭವಿಸಿದೆ. ಹಿಂದಿ ಹೇರಿಕೆಯಿಂದ ಹಿಡಿದು, ಡಬಲ್ ಎಂಜಿನ್ ಸರಕಾರ ಬಂದರೆ (ಅಂದರೆ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದರೆ) ಮಾತ್ರ ರಾಜ್ಯಕ್ಕೆ ನೆರವು ನೀಡುತ್ತೇವೆ ಇಲ್ಲವಾದರೆ ನೀವುಂಟು, ನೀವು ಆರಿಸಿದ ಪಕ್ಷವುಂಟು ಅಂತ ಯಾವ ಮುಲಾಜು ಇಲ್ಲದೆ ಹೇಳಿದ ಬಿಜೆಪಿಯ ಜತೆ ಪ್ರಾದೇಶಿಕ ಪಕ್ಷ ಅಂತ ಹೇಳಿಕೊಳ್ಳುತಿದ್ದ ಜೆಡಿಎಸ್ ಈ ಹೊತ್ತು ಮೈತ್ರಿ ಮಾಡಿಕೊಂಡಿದೆ.

ರಾಮಕೃಷ್ಣ ಹೆಗಡೆ

ಇನ್ನೂ ಒಂದಿದೆ. ಜೆಡಿಎಸ್ ಈತನಕ ಹೇಳಿಕೊಂಡು ಬಂದಿರುವುದು ತಾನು ರೈತರ ಪಕ್ಷ ಅಂತ. ಅದರಲ್ಲೂ ತಾನು ಸಾಮಾನ್ಯ ರೈತರ ಪಕ್ಷ ಅಂತ. ಅದಕ್ಕಾಗಿಯೇ ಮೊದಲಿಗೆ ತನಗೆ ಒದಗಿಸಿದ್ದ ಟ್ರ್ಯಾಕ್ಟರ್ ಚಿಹ್ನೆಯನ್ನು ತ್ಯಜಿಸಿ ತೆನೆ ಹೊತ್ತ ಮಹಿಳೆಯ ಚಿಹ್ನೆಯನ್ನು ಅದು ಆಯ್ದುಕೊಂಡದ್ದು. ಈಗ ಅದು ಮೈತ್ರಿ ಮಾಡಿಕೊಂಡಿರುವುದು ದೇಶದ ಚರಿತ್ರೆಯಲ್ಲೇ ಯಾರೂ ಎದುರಿಸಿರದ ರೀತಿಯ ರೈತರ ಆಕ್ರೋಶಕ್ಕೆ ತುತ್ತಾಗಿರುವ ಸರಕಾರವನ್ನು ಮುನ್ನಡೆಸುತ್ತಿರುವ ಭಾರತೀಯ ಜನತಾ ಪಕ್ಷವನ್ನು.

ಹೀಗೆ ಕೋಮುವಾದಿ, ಒಕ್ಕೂಟ ವಿರೋಧಿ, ಮತ್ತು ರೈತರ ಕೆಂಗಣ್ಣಿಗೆ ಗುರಿಯಾಗಿರುವ ಪಕ್ಷವೇ ಆಗಿದ್ದರೂ, ಕುಮಾರಸ್ವಾಮಿಯವರ ನೇತೃತ್ವದಲ್ಲಿ ಬಿಜೆಪಿಯ ಜತೆಗೆ ಜನತಾದಳ ಮೈತ್ರಿ ಮಾಡಿಕೊಂಡಿದ್ದರೆ ಯಾರಿಗೂ ಆಶ್ಚರ್ಯ ಆಗುತ್ತಿರಲಿಲ್ಲ. ಇಡೀ ಬೆಳವಣಿಗೆಯ ಬಗ್ಗೆ ಅರೆ ಹೀಗಾಯಿತಲ್ಲಾ ಅಂತ ಜನ ಒಂದು ರೀತಿಯಲ್ಲಿ ಬೆರಗಾಗಿದ್ದು ದೇವೇಗೌಡರು ಬಿಜೆಪಿಯೊಂದಿಗಿನ ಮೈತ್ರಿಗೆ ಆಶೀರ್ವಾದ ನೀಡಿದರಲ್ಲಾ ಎನ್ನುವ ಕಾರಣಕ್ಕೆ. ಮೈತ್ರಿಯ ಕುರಿತ ಸಾರ್ವಜನಿಕರ ಆಶ್ಚರ್ಯದ ಪ್ರತಿಕ್ರಿಯೆಯ ಹಿಂದೆ ಇರುವುದು ದೇವೇಗೌಡರ ಬಗ್ಗೆ ಜನಮನದಲ್ಲಿ ಇದ್ದಿದ್ದ ಯಾವುದೋ ಒಂದು ಕಲ್ಪನೆ. ಏನೇ ಆದರೂ, ’ವಿಶಾಲ ಅರ್ಥದ ಹಿಂದೂ’ ಆಗಿರುವ ದೈವಭಕ್ತ ದೇವೇಗೌಡರು ಹಿಂದೂ ಧರ್ಮವನ್ನು ಸಂಕುಚಿತ ರೀತಿಯಲ್ಲಿ ಅರ್ಥೈಸಿಕೊಂಡು ಮುಸ್ಲಿಮರ ವಿಚಾರದಲ್ಲಿ ಅಮಾನವೀಯವಾಗಿ ನಡೆದುಕೊಳ್ಳುತ್ತಿರುವ ರಾಜಕೀಯದ ಜತೆ ಕೈಜೋಡಿಸಲಾರರು ಎನ್ನುವ ಭರವಸೆ ಇತ್ತು. ಕರ್ನಾಟಕದಿಂದ ಆಗಿಹೋದ ಮೊದಲ ಪ್ರಧಾನಿ ಕರ್ನಾಟಕದ ಹಿತವನ್ನು ಬಲಿಗೊಟ್ಟು ರಾಜಕೀಯ ಮಾಡಲಾರರು ಎನ್ನುವ ಭರವಸೆ ಅವರ ಮೇಲಿತ್ತು. ಜೀವನಪೂರ್ತಿ ರೈತರ ಹಿತದ ಮಂತ್ರ ಜಪಿಸುತ್ತಾ ರಾಜಕೀಯ ಮಾಡಿದ ದೇವೇಗೌಡರು ಎಂದೆಂದಿಗೂ ರೈತರ ಆಕ್ರೋಶಕ್ಕೆ ಗುರಿಯಾಗಿರುವ ಸರಕಾರವನ್ನು ನಡೆಸುವ ಪಕ್ಷದ ಜತೆ ಕೈಜೋಡಿಸಲಾರರು ಎನ್ನುವ ಭರವಸೆ ಇತ್ತು. ಈ ಮೈತ್ರಿಯಿಂದ ಜನತಾ ದಳಕ್ಕೆ ಏನಾಗುತ್ತದೋ, ಕುಮಾರಸ್ವಾಮಿಯವರಿಗೆ ಏನಾಗುತ್ತದೋ ಎನ್ನುವ ಪ್ರಶ್ನೆಗಳಿಗೆಲ್ಲಾ ಭವಿಷ್ಯ ಉತ್ತರಿಸಬಹುದು. ಆದರೆ, ಈ ಮೈತ್ರಿಯಿಂದಾಗಿ ದೇವೇಗೌಡರ ಬಗ್ಗೆ ದೊಡ್ಡ ಸಂಖ್ಯೆಯ ಜನ ಇಟ್ಟಿದ್ದ ದೊಡ್ಡ ಭರವಸೆ ಅಕ್ಷರಶಃ ನಾಶವಾಗಿದೆ. ಇಷ್ಟುಕಾಲ ದೇವೇಗೌಡರು ಕಾಯ್ದುಕೊಂಡು ಬಂದಿದ್ದ ಒಂದು ಮಟ್ಟದ ವಿಶ್ವಾಸಾರ್ಹತೆ ನಾಶವಾಗಿದೆ. ಹಾಗೆ ನೋಡಿದರೆ, ಕರ್ನಾಟಕದಲ್ಲಿ ಬಿಜೆಪಿ ಈ ಹಂತಕ್ಕೆ ಬೆಳೆದು ನಿಲ್ಲುವಲ್ಲಿ ಜನತಾ ಪರಿವಾರದ ದೊಡ್ಡ ಪಾಲಿದೆ. ಹಿಂದೆ 1983ರಲ್ಲಿ ಜನತಾ ಪಕ್ಷದ ರಾಮಕೃಷ್ಣ ಹೆಗಡೆ ಮೊದಲಿಗೆ ಬಿಜೆಪಿಯವರ ಸಹಕಾರದಿಂದ ಸರಕಾರ ರಚಿಸಿ ನೆಲೆಯೇ ಇಲ್ಲದಿದ್ದ ಆ ಪಕ್ಷಕ್ಕೆ ಮೊಟ್ಟಮೊದಲ ಬಾರಿಗೆ ನೆಲೆ ಕಾಣಿಸಿದರು. ಮತ್ತೆ 1999ರಲ್ಲಿ ಜನತಾ ದಳ ಇಬ್ಭಾಗವಾದ ನಂತರ ಜೆಡಿ(ಯು) ಬಿಜೆಪಿಯೊಂದಿಗೆ ಹೋಗಿ ಪ್ರಬಲ ಲಿಂಗಾಯತ ನಾಯಕರೆಲ್ಲಾ ಬಿಜೆಪಿಗೆ ಹೋಗುವಂತಾಗಿತ್ತು. ಆ ನಂತರ 2006ರಲ್ಲಿ ಕುಮಾರಸ್ವಾಮಿ ಬಿಜೆಪಿಯ ಜತೆ ಮೈತ್ರಿ ಸರಕಾರ ಮಾಡಿಕೊಂಡದ್ದೂ ಬಿಜೆಪಿಗೆ ನೆರವಾಗಿತ್ತು, ಆ ನಂತರ ಮೈತ್ರಿ ಒಪ್ಪಂದ ಮುರಿದದ್ದೂ ಬಿಜೆಪಿಗೆ ವರದಾನ ಆಗಿತ್ತು. ಈ ಮೂರು ಹಂತದಲ್ಲೂ ಬಿಜೆಪಿಗೆ ನೆರವಾಗದೆ ಬಿಜೆಪಿಯಿಂದ ಅಂತರ ಕಾಯ್ದುಕೊಂಡದ್ದು ಎಂದರೆ ದೇವೇಗೌಡರು ಮಾತ್ರ ಎಂಬ ಮಾತಿತ್ತು. ಈ ಕಾರಣಕ್ಕಾಗಿ ಈ ಮೈತ್ರಿಯಿಂದಾಗಿ ಯಾರೇನು ಪಡೆದುಕೊಳ್ಳುತ್ತಾರೋ, ಯಾರೇನು ಕಳೆದುಕೊಳ್ಳುತ್ತಾರೋ, ದೇವೇಗೌಡರಂತೂ ಕಳೆದುಕೊಳ್ಳಬಾರದ ಏನನ್ನೋ ಕಳೆದುಕೊಂಡಿದ್ದಾರೆ ಅಂತ ಅನ್ನಿಸುವುದು. ಬಿಜೆಪಿ ಜತೆ ಜೆಡಿಎಸ್ ಮಾಡಿಕೊಂಡಿರುವ ಮೈತ್ರಿ ಅವೆರಡು ಪಕ್ಷಗಳ ಆಂತರಿಕ ವಿಚಾರವೇ ಆಗಿರಬಹುದು. ಅವರು ಎಲ್ಲಾ ಲಾಭನಷ್ಟಗಳನ್ನು ಲೆಕ್ಕ ಹಾಕಿಯೇ ಹೆಜ್ಜೆಯಟ್ಟಿರಬಹುದು. ಅದನ್ನು ಸರಿ ಅಥವಾ ತಪ್ಪು ಅಂತ ಹೇಳುವುದಕ್ಕೆ ಯಾರಿಗೂ ಅಧಿಕಾರ ಇಲ್ಲದೆ ಇರಬಹುದು. ಆದರೆ, ಮುಂದೆಂದಿಗೂ ಕರ್ನಾಟಕದ ರಾಜಕೀಯ ದೇವೇಗೌಡರನ್ನು ಈತನಕ ಗುರುತಿಸಿದ ಹಾಗೆ ಇನ್ನು ಮುಂದೆ ಗುರುತಿಸಲು ಸಾಧ್ಯವಿಲ್ಲ.

ಎ ನಾರಾಯಣ

ಎ ನಾರಾಯಣ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಥುರಾ ಭೂ ವಿವಾದ: ಫೆಬ್ರವರಿ 29ರಂದು ಅಲಹಾಬಾದ್ ಹೈಕೋರ್ಟಿನಲ್ಲಿ ವಿಚಾರಣೆ

0
ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ ಹೂಡಿರುವ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಮುಂದಿನ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಫೆಬ್ರವರಿ 29ಕ್ಕೆ ನಿಗದಿಪಡಿಸಿದೆ. ಶಾಹಿ ಈದ್ಗಾ ಇಂತೇಜಾಮಿಯಾ ಸಮಿತಿಯು ಕತ್ರ...