ಜೆಡಿಎಸ್ ಕೇರಳ ಘಟಕವು ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಅಧಿಕೃತವಾಗಿ ಘೋಷಿಸಿದೆ.
ಕೊಚ್ಚಿಯಲ್ಲಿ ನಡೆದ ಜೆಡಿಎಸ್‌ನ ಕೇರಳ ಘಟಕದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ 2024ರ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪಕ್ಷದ ವರಿಷ್ಠರ ನಿರ್ಧಾರದ ವಿರುದ್ಧ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಗಿದೆ.
ಸಭೆಯ ಬಳಿಕ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ, ಶಾಸಕ ಮ್ಯಾಥ್ಯೂ ಟಿ.ಥಾಮಸ್, ರಾಷ್ಟ್ರೀಯ ನಾಯಕತ್ವದ ಎನ್‌ಡಿಎ ಸೇರುವ ನಿರ್ಧಾರವನ್ನು ವಿರೋಧಿಸುತ್ತೇವೆ. ಜೆಡಿಎಸ್‌ನ ಕೇರಳ ಘಟಕ ಆಡಳಿತರೂಢ ಎಡರಂಗದೊಂದಿಗಿನ ತನ್ನ ನಾಲ್ಕೂವರೆ ದಶಕಗಳ ಮೈತ್ರಿಯನ್ನು ಮುಂದುವರಿಸಲಿದೆ ಎಂದು ಹೇಳಿದ್ದಾರೆ.
ಜಾತ್ಯತೀತತೆ, ಸಮಾಜವಾದ ಹಾಗೂ ಪ್ರಜಾಪ್ರಭುತ್ವದ ನಿಲುವುಗಳಿಗೆ ಪಕ್ಷ ಬದ್ದವಾಗಿರುವುದರಿಂದ ಜೆಡಿಎಸ್‌ನ ಕೇರಳ ಘಟಕ ಎಡರಂಗದೊಂದಿಗಿನ ಮೈತ್ರಿ ಮುಂದುವರಿಸಲಿದೆ. ಬಿಜೆಪಿ ಸೇರಲು ದೇವೆಗೌಡ ಅವರು ನೀಡಿದ ಕಾರಣ ನಮಗೆ ತೃಪ್ತಿ ನೀಡಿಲ್ಲಎಂದು ಶಾಸಕ ಮ್ಯಾಥ್ಯೂ ಟಿ. ಥಾಮಸ್ ಹೇಳಿದ್ದಾರೆ.
ಪಕ್ಷದ ಯಾವುದೇ ವೇದಿಕೆಯಲ್ಲಿ ಚರ್ಚೆ ನಡೆಸದೆ ರಾಷ್ಟ್ರೀಯ ನಾಯಕತ್ವ ಮೈತ್ರಿ ಘೋಷಣೆ ಮಾಡಿದೆ. ಬಿಜೆಪಿ ಜೊತೆ ಕೈಜೋಡಿಸಿ ಎಂಬ ಘೋಷಣೆ ಸಂಘಟನಾ ನೀತಿಗೆ ವಿರುದ್ಧವಾಗಿದೆ. ಜೆಡಿಎಸ್‌ನ ಕೇರಳ ಘಟಕವು ಮೈತ್ರಿಗೆ ವಿರದ್ಧವಾಗಿದೆ ಎಂದು ಹೇಳಿದ್ದಾರೆ.
ಜೆಡಿಎಸ್‌ನ ರಾಷ್ಟ್ರೀಯ ನಾಯಕತ್ವವು ಬಿಜೆಪಿಯೊಂದಿಗೆ ಸಂಬಂಧವನ್ನು ಘೋಷಿಸಿದ ನಂತರವೂ ಸಹ ತನ್ನ ಮಿತ್ರಪಕ್ಷವಾಗಿ ಜೆಡಿಎಸ್‌ನ್ನು ಉಳಿಸಿಕೊಳ್ಳಲು ಕೇರಳದ ಆಡಳಿತಾರೂಢ ಸಿಪಿಎಂ ಇಚ್ಚಿಸಿದೆ ಎಂದು ಕಾಂಗ್ರೆಸ್ ಟೀಕಿಸಿದ ಬೆನ್ನಲ್ಲೇ ಜೆಡಿಎಸ್ ಕೇರಳ ಘಟಕ ಈ ಸ್ಪಷ್ಟನೆಯನ್ನು ನೀಡಿದೆ.
ಇದನ್ನು ಓದಿ: ದ್ವೇಷ ಭಾಷಣ: ಸಿದ್ದಲಿಂಗ ಸ್ವಾಮಿ ವಿರುದ್ಧ ಪ್ರಕರಣ ದಾಖಲು