Homeಕರ್ನಾಟಕಅರಸು ಸರ್ಕಾರದಲ್ಲಿ ಸಾಮಾಜಿಕ ನ್ಯಾಯದ ಆಡಳಿತಾತ್ಮಕ ಮುಖಗಳು; ಭಾಗ-2

ಅರಸು ಸರ್ಕಾರದಲ್ಲಿ ಸಾಮಾಜಿಕ ನ್ಯಾಯದ ಆಡಳಿತಾತ್ಮಕ ಮುಖಗಳು; ಭಾಗ-2

- Advertisement -
- Advertisement -

ಅರಸು ಸರಕಾರದ “ಕೂಲಿಗಾಗಿ ಕಾಳು” ಅಥವಾ “ಉದ್ಯೋಗ ಭದ್ರತೆಯ ಯೋಜನೆ” ಒಂದು ರಾಷ್ಟ್ರೀಯ ರೂಪ ಪಡೆಯಿತು. 1980ರಲ್ಲಿ ರಾಷ್ಟ್ರಮಟ್ಟದಲ್ಲಿ ನ್ಯಾಷನಲ್ ರೂರಲ್ ಎಂಪ್ಲಾಯ್ಮೆಂಟ್ ಪ್ರೋಗ್ರಾಮ್- (NREP) ಎಂಬ ಹೆಸರಿನಿಂದ ಪ್ರಾರಂಭವಾಗಿ, ಕಾಲಕಾಲಕ್ಕೆ ಹಲವು ಮಾರ್ಪಾಟುಗಳನ್ನು ಹೊಂದಿ ಕೊನೆಗೆ 2005ರ ವೇಳೆಗೆ ರಾಷ್ಟ್ರೀಯ ಉದ್ಯೋಗ ಹಕ್ಕಿನ ಕಾಯ್ದೆಯಾಗಿ ಇಡೀ ವಿಶ್ವದ ಗಮನ ಸೆಳೆಯುವಂತಹ ಒಂದು ಬಡತನ ನಿರ್ಮೂಲನಾ ಯೋಜನೆಯಾಯಿತು. ಈಗ ಬಡತನ ನಿರ್ಮೂಲನಾ ಕಾರ್ಯತಂತ್ರದಲ್ಲಿ ವೇಜ್ ಎಂಪ್ಲಾಯ್ಮೆಂಟ್ ಅಥವಾ ಕೂಲಿ ದುಡಿಮೆ ಎನ್ನುವುದು ಒಂದು ಪ್ರತ್ಯೇಕ ಘಟಕ. ಇದಕ್ಕೆಲ್ಲ ಮೂಲದ್ರವ್ಯ ಅರೆಯುವ ಕೆಲಸ ಅರಸು ಕಾಲದಲ್ಲಿ ಕರ್ನಾಟಕದಲ್ಲಿ ಪ್ರಾರಂಭವಾಯಿತು ಎನ್ನುವುದು ಚರಿತ್ರೆಯಲ್ಲಿ ದಾಖಲಾಗದ ಅಂಶ. 2005ರ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಹಕ್ಕು ಕಾಯ್ದೆ ಅಥವಾ ನ್ಯಾಷನಲ್ ರೂರಲ್ ಎಂಪ್ಲಾಯ್ಮೆಂಟ್ ಗ್ಯಾರಂಟೀ ಆಕ್ಟ್ ರೂಪುಗೊಳ್ಳುವ ಸಂದರ್ಭದಲ್ಲಿ ನಡೆದ ಬಹುತೇಕ ಚರ್ಚೆಗಳು ಮಹಾರಾಷ್ಟ್ರದ ಉದ್ಯೋಗ ಖಾತರಿ ಯೋಜನೆಯನ್ನು ಮತ್ತೆಮತ್ತೆ ಪ್ರಸ್ತಾಪಿಸಿದವು. ಆದರೆ ಕರ್ನಾಟಕದಲ್ಲಿ ಮಹಾರಾಷ್ಟ್ರಕ್ಕಿಂತ ಒಂದು ಹೆಜ್ಜೆ ಮುಂದೆ ಯೋಚಿಸಿ ಬಡತನ ನಿರ್ಮೂಲನವನ್ನೇ ಕೇಂದ್ರವಾಗಿರಿಸಿಕೊಂಡು ರೂಪಿಸಿದ ಅರಸು ಸರಕಾರದ ಯೋಜನೆ ಕೇವಲ ಸರಕಾರೀ ಕಡತದ ದಾಖಲೆಯಾಗಿ ಅಷ್ಟೇ ಉಳಿಯಿತು. ಇದಕ್ಕೆ ಕಾರಣ ಕೂಡಾ ಇದೆ. ಮಹಾರಾಷ್ಟ್ರದಲ್ಲಿ ಆರಂಭದ ಏಳು ಬೀಳುಗಳ ನಂತರ ಈ ಯೋಜನೆಯನ್ನು ಹೆಚ್ಚಿನ ಆಸಕ್ತಿಯಿಂದ ಜಾರಿಗೊಳಿಸಲಾಯಿತು. ಆದರೆ ಕರ್ನಾಟಕದಲ್ಲಿ ಆರಂಭದಲ್ಲಿ ಅತ್ಯಂತ ಭರವಸೆಯಿಂದ ಜಾರಿಗೊಂಡ ಈ ಯೋಜನೆ ಅರಸು ಅವರ ನಂತರ ವಿವಿಧ ರೀತಿಯಲ್ಲಿ ಹಿನ್ನಡೆ ಅನುಭವಿಸಿತು.

ಇದರ ಕುರಿತು ಕೊನೆಯವರೆಗೆ ಸ್ಪಷ್ಟವಾಗಿ ಮಾತನಾಡುತ್ತಿದ್ದದು ಯೋಜನೆಯ ಹಿಂದೆ ಸದ್ದಿಲ್ಲದೇ ಕೆಲಸ ಮಾಡಿದ ಅರಸು ಅವರ ಆರ್ಥಿಕ ಸಲಹೆಗಾರ ಡಿ.ಎಂ. ನಂಜುಂಡಪ್ಪ ಅವರು ಮಾತ್ರ: “ನಾವು ಈಗ ಏನು ಮಾಡ್ತಾ ಇದ್ದೆವೋ ಅದೆಲ್ಲಾ ಆಗ ಆದದ್ದೇ. 1973ರಲ್ಲಿ ನಾವು ಮಾಡಿದ್ದನ್ನು ಪ್ಲಾನಿಂಗ್ ಕಮಿಷನ್‌ನವರು ನ್ಯಾಷನಲ್ ರೂರಲ್ ಎಂಪ್ಲಾಯ್ಮೆಂಟ್ ಸ್ಕೀಮ್ ಅಂತ ಕಾಪಿ ಮಾಡಿಕೊಂಡ್ರು (1) ಅಂತ ಅವರದ್ದೇ ಶೈಲಿಯಲ್ಲಿ ಅರಸು ಆಡಳಿತದ ಬಗ್ಗೆ ಮಾತನಾಡುವ ಸಂದರ್ಭ ಬಂದಾಗಲೆಲ್ಲ ಅವರು ಹೇಳುತ್ತಿದ್ದರು.

ಉದ್ಯೋಗ ಭರವಸೆ ಯೋಜನೆಯಷ್ಟೇ ಆಸ್ಥೆಯಿಂದ ಸರಕಾರ ಕೈಗೊಂಡ ಇನ್ನೊಂದು ಯೋಜನೆ ಜನತಾ ಮನೆ ನಿರ್ಮಾಣ. ಅದು ಅರಸು ಸರಕಾರದ ಮೊದಲ ವರ್ಷ. ಅರಸು ಅವರಿಗೆ ಅಪಾರ ಕೀರ್ತಿ ತಂದು ಕೊಟ್ಟ ಪರಿಷ್ಕೃತ ಭೂಸುಧಾರಣಾ ಕಾಯ್ದೆ ಇನ್ನೂ ಕಾಲಗರ್ಭದಲ್ಲಿತ್ತು. ಆದರೆ ಭೂಮಿಯ ಮರುಹಂಚಿಕೆಗೆ ಸಂಬಂಧಿಸಿದ ಅರಸು ಸರಕಾರದ ಆಶಯವನ್ನು ಸಾಕಾರಗೊಳಿಸುವ ಕಾರ್ಯಕ್ರಮಗಳು ಆರಂಭಗೊಂಡಿದ್ದವು. 1972-73ನೇ ಸಾಲಿನಲ್ಲಿ ಸರಕಾರ ಸುಮಾರು ಎರಡು ಲಕ್ಷ ಮನೆ ನಿವೇಶನಗಳನ್ನು, ’ಕಾಲಡಿಯಲ್ಲಿ ಸ್ವಂತ ನೆಲ, ತಲೆಯ ಮೇಲೆ ಸ್ವಂತ ಸೂರು’ ಎಂಬುದಿಲ್ಲದ ಬಡ ಕುಟುಂಬಗಳಿಗೆ ನೀಡಿತ್ತು. 1973-74ರ ಬಜೆಟ್‌ನಲ್ಲಿ ಇನ್ನೂ ಒಂದು ಹೆಜ್ಜೆ ಮುಂದುವರಿದು ಹೀಗೆ ಸೈಟು ಪಡೆದ ಬಡವರಿಗೆ ಮನೆಕಟ್ಟಲು ನೆರವಾಗುವ ಯೋಜನೆಯೊಂದನ್ನು ಸರಕಾರ ಪ್ರಕಟಿಸುತ್ತದೆ. ಮುಂದೆ ಅದು ಸೈಟು ಸಹಿತ ಮನೆ ನೀಡುವ ಜನತಾ ಮನೆ ಯೋಜನೆಯಾಗಿ (People’s Housing Scheme) ದೇಶಪ್ರಸಿದ್ಧಿ ಪಡೆಯುತ್ತದೆ.

ಈ ಯೋಜನೆಯ ಮಹತ್ವವನ್ನು ತಿಳಿಯುವುದಕ್ಕೆ ಕೂಡಾ ನಾವು ಆ ಕಾಲದಲ್ಲಿ ನಿಂತು ಯೋಚಿಸಬೇಕು. ಯಾಕೆಂದರೆ ನಂತರದ ವರ್ಷಗಳಲ್ಲಿ ಬಡವರಿಗೆ ಮನೆ ನೀಡುವ ಬೇರೆಬೇರೆ ಯೋಜನೆಗಳು ಜಾರಿಗೆ ಬಂದವು. ಆದರೆ ಸ್ವಂತ ಮನೆ ಎನ್ನುವುದು ಬಡವರ ಬದುಕಿನಲ್ಲಿ ಎಂತಹ ಮಹತ್ವದ ಅಂಶ ಎನ್ನುವುದನ್ನು ಮೊಟ್ಟಮೊದಲಿಗೆ ಅರ್ಥಮಾಡಿಕೊಂಡು ಅದಕ್ಕೋಸ್ಕರ ಆ ಕಾಲದಲ್ಲಿ ಎಷ್ಟು ಸಮರ್ಥವಾದ ಒಂದು ಯೋಜನೆಯನ್ನು ರೂಪುಗೊಳಿಸಲು ಸಾಧ್ಯವಿತ್ತೋ ಅಷ್ಟನ್ನೂ ಮಾಡಿ ದೇಶದ ಗಮನ ಸೆಳೆಯುವ ಕೆಲಸವನ್ನು ಅರಸು ಸರಕಾರ ಮಾಡಿತು. 1984ರಲ್ಲಿ ಮುಂಬಯಿಯಿಂದ ಪ್ರಕಟವಾಗುವ ಪ್ರತಿಷ್ಠಿತ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ಈ ಯೋಜನೆಯ ಕುರಿತು ಎರಡು ಕಂತಿನಲ್ಲಿ ಸಂಶೋಧನಾ ಪ್ರಬಂಧವೊಂದನ್ನು ಪ್ರಕಟಿಸುತ್ತದೆ. (2) ಈ ಪ್ರಬಂಧ ಸಿದ್ಧಪಡಿಸಿದ ಸಂಶೋಧಕಿ ಮೀರಾ ಬಾಖ್ರು ಹೇಳುವಂತೆ ಬಡವರಿಗೆ ಮನೆ ನೀಡುವ ಕೆಲ ಅಸ್ಪಷ್ಟ ಯೋಜನೆಗಳು ದೇಶದಲ್ಲಿ ಅಲ್ಲಲ್ಲಿ ಆ ಮೊದಲೂ ಇದ್ದವಾದರೂ ಅರಸು ಸರಕಾರ ಈ ಯೋಜನೆಯ ಬಗ್ಗೆ ಯೋಚಿಸಿದ ರೀತಿಯೇ ವಿಶಿಷ್ಟವಾಗಿತ್ತು. ಬಡವರಿಗೆ ಮನೆ ನೀಡುವುದನ್ನು ಕೇವಲ ಒಂದು ನೆರವು ಎಂಬ ಸೀಮಿತ ದೃಷ್ಟಿಯಲ್ಲಷ್ಟೇ ನೋಡದೆ ಅದನ್ನು ಸರಕಾರ ಅಗತ್ಯವಾಗಿ ಅಳವಡಿಸಿಕೊಳ್ಳಬೇಕಾದ ಸಮಗ್ರ ಸ್ವಾಸ್ಥ್ಯ ನೀತಿ (welfare policy)ಯ ಭಾಗವಾಗಿ ಮೊಟ್ಟಮೊದಲಿಗೆ ಕಂಡ ಕೀರ್ತಿ ಅರಸು ಸರಕಾರಕ್ಕೆ ಸಲ್ಲಬೇಕು ಎನ್ನುವ ವಿಷಯವನ್ನು ಬಾಖ್ರು ದಾಖಲಿಸುತ್ತಾರೆ. ಇಡೀ ಪ್ರಬಂಧ ಯೋಜನೆಯ ಅನುಷ್ಠಾನ ಲೋಪಗಳ ಕುರಿತಾದ ಟೀಕೆಯ ರೂಪದಲ್ಲೇ ಇದ್ದರೂ ಅದು ಈ ಯೋಜನೆಯನ್ನು ಆ ಕಾಲಕ್ಕೆ ಸರಕಾರವೊಂದು ಜಾರಿಗೆ ತಂದ ಅತ್ಯಂತ ಮೇಲ್ಮಟ್ಟದ ವಿಶಿಷ್ಟ ಕಲ್ಯಾಣ ಯೋಜನೆ ಎನ್ನುವುದಾಗಿ ಕಂಡುಕೊಂಡಿದೆ ಎನ್ನುವುದು ಇಲ್ಲಿ ಗಮನಾರ್ಹ.

ಅನುಷ್ಠಾನದ ಕೆಲ ವೈಫಲ್ಯಗಳು ಏನೇ ಇರಲಿ ಅರಸು ಸರಕಾರಕ್ಕೆ ಇದು ಕೇವಲ ಓಟಿಗಾಗಿ ಬಡವರನ್ನು ಸಂಪ್ರೀತಿಗೊಳಿಸುವ ಇನ್ನೊಂದು ಯೋಜನೆ ಎಂಬ ದೃಷ್ಟಿ ಇರಲಿಲ್ಲ. ಬದಲಿಗೆ ಈ ಯೋಜನೆಯ ಬಗ್ಗೆ ಸರಕಾರ ಅತ್ಯಂತ ಸೂಕ್ಷ್ಮವಾಗಿ ಮತ್ತು ಸಮಯೋಚಿತವಾಗಿ ಯೋಚಿಸಿತ್ತು ಎನ್ನುವುದಕ್ಕೆ ನಮಗೆ ಬೇರೆಬೇರೆ ಪುರಾವೆಗಳು ಸಿಗುತ್ತವೆ. ಮನೆ 300 ಚದರ ಅಡಿ ಇರಬೇಕು, ಒಂದೇ ಬಾಗಿಲಿನ ಮನೆಗೆ ಎರಡು ಕಿಟಕಿಗಳಿರಬೇಕು, ಅಡುಗೆ ಮನೆ ಪ್ರತ್ಯೇಕವಾಗಿರಬೇಕು ಮತ್ತು ಮನೆಯನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ (economy) ನಿರ್ಮಿಸಬೇಕು ಎಂದು ನಿಯಮಗಳನ್ನು ರೂಪಿಸಲಾಗಿತ್ತು. ಕಡಿಮೆ ಖರ್ಚು ಎಂದರೆ ಅಗ್ಗದ ಸಾಮಗ್ರಿಗಳ ಬಳಕೆಯಲ್ಲ, ಆ ಕಾಲದಲ್ಲಿ ಲಭ್ಯವಿದ್ದ ಕಡಿಮೆ ವೆಚ್ಚದ ಮನೆ ನಿರ್ಮಾಣ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಬೇಕು ಎಂಬ ನಿರ್ಣಯವಾಯಿತು. ಎಂದಿನಂತೆ ಅರಸು ಅವರು ಇದು ತನ್ನದೇ ಮನೆಯ ಯೋಜನೆ ಎಂಬಂತೆ ಉತ್ಸಾಹದಿಂದ ಅಧಿಕಾರಿಗಳನ್ನು ಹುರಿದುಂಬಿಸುತ್ತಿದ್ದರು. ಆ ಉತ್ಸಾಹದಲ್ಲಿ ಅವರ ಮತ್ತು ಅವರ ಆಪ್ತ ಅಧಿಕಾರಿಗಳ ತಂಡದ ಯೋಚನೆ ಹೇಗಿತ್ತು ಎಂದರೆ ಸರಕಾರದ ಇನ್ನೊಂದು ಯೋಜನೆಯಾದ ಗ್ರಾಮೀಣ ಉದ್ಯೋಗ ಸೃಷ್ಟಿಗೆ ಈ ಜನತಾ ಮನೆಯ ಯೋಜನೆಯನ್ನು ಪೂರಕವಾಗಿ ರೂಪಿಸಿದರೆ ಆಗ ಸರಕಾರ ವೆಚ್ಚ ಮಾಡಿದ ಹಣ ಗರಿಷ್ಠ ಫಲಿತಾಂಶ ನೀಡುತ್ತದೆ ಎಂದಾಗಿತ್ತು. ಆದರೆ ತಮ್ಮ ಯೋಚನೆಯಂತೆ ವಾಸ್ತವ ಸ್ಥಿತಿ ಇರುವುದಿಲ್ಲ- ಮೇಲಿನಿಂದ ಯೋಚಿಸಿದ್ದನ್ನೆಲ್ಲಾ ತಳಮಟ್ಟದಲ್ಲಿ ಇದ್ದಕ್ಕಿದ್ದ ಹಾಗೆ ಜಾರಿಗೊಳಿಸಲಾಗುವುದಿಲ್ಲ ಎನ್ನುವ ಸತ್ಯ ಅವರಿಗೆ ಮನವರಿಕೆಯಾದದ್ದರ ಬಗ್ಗೆ ಡಿ.ಎಂ. ನಂಜುಂಡಪ್ಪ ಅವರು ಒಂದು ಕಡೆ ಹೀಗೆ ವಿವರಿಸುತ್ತಾರೆ:

“ಹೌಸಿಂಗ್ ಸ್ಕೀಮ್ ಮಾಡಿದಾಗ ನನಗೆ ಗೊತ್ತಾಯ್ತು ಅರಸು ಅವರಿಗೆ ಹಳ್ಳಿಗಳ ಬಗ್ಗೆ ಇದ್ದ ಕಾಳಜಿ. ಆಗ ನಾನು ಕುಂಬಾರ ಹಂಚ್ ಮಾಡ್ತಾನೆ. ಅವನ ಹಂಚ್‌ಗಳನ್ನ ಕೊಂಡ್‌ಕೊಂಡ್ರೆ ಅವನಿಗೆ ದುಡ್ಡು ಬರ್ತದೆ. ಸರ್ಕಾರ ಕಟ್ಟೊ ಮನೆಗಳಿಗೆ ಕುಂಬಾರ ಮಾಡಿದ ಹಂಚ್ ಹಾಕಿದ್ರೆ ಅವನಿಗೆ ಉದ್ಯೋಗ ಆಗ್ತದೆ. ನಾವೆಲ್ಲಾ ಅಂತ ಮನೆಗಳಲ್ಲಿ ಹುಟ್ಟಿದೋರು ಅಂತ ಚನ್ನಪಟ್ಟಣದಲ್ಲಿ ಒಂದೈದಾರು ಸ್ಯಾಂಪಲ್ ಮನೆ ಮಾಡಿದ್ವಿ. ಅರಸು ಅವರಿಗೆ ತೋರಿಸಿದ್ವಿ. ಫಸ್ಟ್ ಕ್ಲಾಸ್ ಇದೆ ಅಂದ್ರು. ಆದ್ರೆ ನನಗೆ ಮತ್ತು ಅವರಿಗೆ ಹೊಳಿದೇ ಇರೋ ವಿಷಯ ಏನಂದ್ರೆ- ಈ ಮನೆಗಳನ್ನು ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಕೊಡೋದು. ಅವ್ರ ಈ ಮನೆಗಳ ಬಗ್ಗೆ ಏನು ಯೋಚನೆ ಮಾಡ್ತಾರೆ ಅಂತ ನಮ್ಮ ಗಮನಕ್ಕೆ ಬರಲಿಲ್ಲ. ಅಂದ್ರೆ ದಲಿತರು, ಇಷ್ಟು ದಿನ ನಾವು ದರಿದ್ರದೊಳಗೆ ಇದ್ದೋರು; ಈಗ್ಲೂ ಕರೆ ಹಂಚಿನ ಮನೇಲಿರಬೇಕಾ ಅಂದ್ರು. ಆಗ ನಾನು ಕುಂಬಾರನಿಂದ ಕೆಂಪ್ ಹಂಚ್ ಮಾಡ್ಲಿಕ್ಕೂ ಬರ್ತದೇ ಅಂದೆ. ಆದ್ರೆ ಅವರಿಗೆ ಮಂಗಳೂರು ಹಂಚಿನ ಮನೆ ತಲೆಗೆ ಹೊಕ್ಕಿತ್ತು. ಆಗ ನಾವಿಬ್ರೂ ಇಮ್ಮಿಡಿಯೇಟ್ ಆಗಿ ಒಪ್ಪಿಕೊಂಡ್ವಿ. ಅದನ್ನ ಅರಸು ಅವರು ಒಪ್ಪಿಕೊಂಡ್ರು. ಅವರು ಯಾವುದು ಸರಿ ಅದನ್ನು ಮಾಡೋರು. ಅಡ್ಡಗೋಡೆ ಮೇಲೆ ದೀಪ ಇಟ್ಟಂಗೆ ಅಲ್ಲ. (3)

ಹೀಗೆ ಪಾಠ ಕಲಿತನಂತರ ಇಡೀ ರಾಜ್ಯಕ್ಕೆ ಒಂದೇ ಮಾದರಿಯ ಮನೆ ಎಂಬ ನಿಲುವು ಬದಲಾಗಿ ಆಯಾ ಪ್ರದೇಶದ ಹವಾಮಾನ ಮತ್ತು ಕಟ್ಟಡ ಸಾಮಗ್ರಿಗಳ ಲಭ್ಯತೆಗನುಸಾರವಾಗಿ ಒಂಬತ್ತು ವಿವಿಧ ಮಾದರಿಗಳನ್ನು ಅಂತಿಮಗೊಳಿಸಲಾಗುತ್ತದೆ. ಒಂದು ಮನೆಗಾಗಿ ರೂ. 2500 ವೆಚ್ಚ ಮಾಡುವುದು ಎಂದು ನಿಗದಿಯಾಗುತ್ತದೆ. ಅದರಲ್ಲಿ ಸರಕಾರ 1000 ನೀಡುವುದು; ಫಲಾನುಭವಿ ರೂ. 500 ಬರಿಸುವುದು ಅಥವಾ ತತ್ಸಮಾನವಾಗಿ ನಿರ್ಮಾಣ ಕೆಲಸಕ್ಕೆ ಶ್ರಮ ಒದಗಿಸುವುದು. ಉಳಿದ ರೂ. 1000 ಲೋನ್. ಈ ಲೋನ್‌ಗೆ ಬಡ್ಡಿ ಇಲ್ಲ. ಮನೆ ನಿರ್ಮಾಣ ಪೂರ್ತಿಯಾಗಿ ಒಂದು ವರ್ಷದ ನಂತರ ಮರುಪಾವತಿ ಕಂತು ಶುರು. ಬರೋಬ್ಬರಿ ಇಪ್ಪತ್ತು ವರ್ಷಗಳ ಅವಧಿ. ಇದು ಜನತಾ ಮನೆಯ ಹಣಕಾಸು ಲೆಕ್ಕಾಚಾರ. ಮುಂದೆ 1979ರಲ್ಲಿ ಸರಕಾರ ತನ್ನ ಪಾಲಿನ ನೆರವನ್ನು ರೂ. 1500ಕ್ಕೆ ಏರಿಸಿ ಮನೆಯ ವೆಚ್ಚವನ್ನು ರೂ. 3000ಕ್ಕೆ ನಿಗದಿಪಡಿಸುತ್ತದೆ. 1972-73ರಲ್ಲಿ 85ಲಕ್ಷ ರೂಪಾಯಿಗಳನ್ನು ಬಜೆಟ್‌ನಲ್ಲಿ ಮೀಸಲಿಡುವ ಮೂಲಕ ಪ್ರಾರಂಭವಾದ ಜನತಾ ಮನೆಗಳ ಪ್ರಯೋಗಕ್ಕೆ 1978-79ರ ವೇಳೆಗೆ ಸರಕಾರದ ಬೊಕ್ಕಸದಿಂದ ಹತ್ತು ಕೋಟಿ ರೂಪಾಯಿಗಳ ಮೊತ್ತ ಹರಿದು ಬರಲಾರಂಭಿಸಿತು. ನಂತರ ಈ ಯೋಜನೆಗೆ ಕೇಂದ್ರ ಸ್ವಾಮ್ಯದ ಹುಡ್ಕೋ (Housing and Urban Development Corporation) ನೆರವು ಬೇರೆ ಬಂತು. ಹೀಗೆ ಸಾಗಿತು ಜನತಾ ಮನೆ ನಿರ್ಮಾಣದ ಓಘ. ಈಗ ಲಭ್ಯ ಇರುವ ಅಧಿಕೃತ ಅಂಕಿಅಂಶಗಳ ಪ್ರಕಾರ 1971-1981 ರ ನಡುವೆ ಕರ್ನಾಟಕದಲ್ಲಿ ಎದ್ದು ನಿಂತ ಮನೆಗಳ ಸಂಖ್ಯೆ ಬರೋಬ್ಬರಿ ಮೂವತ್ತೊಂದು ಲಕ್ಷದ ನಾಲ್ಕು ಸಾವಿರದ ಎಪ್ಪತ್ತ ಮೂರು. ಅಂದರೆ ರಾಜ್ಯದ ಉದ್ದಗಲ ಅಷ್ಟು ಕುಟುಂಬಗಳಿಗೆ ಅರಸು ಹೆಸರಲ್ಲಿ ತಲೆಯ ಮೇಲೊಂದು ಸ್ವಂತ ಸೂರು. ಈ ಯೋಜನೆಯ ಬಗ್ಗೆ ವಡ್ಡರ್ಸೆ ರಘುರಾಮ ಶೆಟ್ಟಿ ಹೀಗೆ ಬರೆಯುತ್ತಾರೆ: (4)

ಡಿ.ಎಂ. ನಂಜುಂಡಪ್ಪ

“ಮೂಲಭೂತವಾಗಿ ಇದೊಂದು ಸಮಾಜವಾದಿ ಕಲ್ಪನೆ. ಸಹಸ್ರಾರು ವರ್ಷಗಳಿಂದ ಬದುಕಿನ ಯಾವ ಭಾಗದಲ್ಲೂ ಸ್ವಂತಿಕೆ ಎಂಬುದಿಲ್ಲದೆ, ದನಿಗಳ ಆಳುಗಳಾಗಿ ಅವರ ಇಚ್ಛೆಗೆ ತಲೆಬಾಗಿ-ನಡುಬಗ್ಗಿ ಸಾಯಲಾಗದೆ ಬದುಕಿ ಬಂದಿರುವ ಗಾಮೀಣ ದುರ್ಬಲರಿಗೆ ಸ್ವಂತಿಕೆಯ ನೆಲೆ ಒದಗಿಸುವ ಯೋಜನೆ ಇದಾಗಿತ್ತು. ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ದುರ್ಬಲರಾದ ಕೃಷಿ ಕಾರ್ಮಿಕರು ಮತ್ತು ಕುಶಲಕರ್ಮಿಗಳಿಗೆ ಉಚಿತ ನಿವೇಶನದ ಹಂಚಿಕೆ ಎಂಬುದು ಭಾರತೀಯ ಸ್ಥಿತಿ-ಗತಿಯಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆ. ಉತ್ತಮ ಬದುಕಿನ ಆಸೆ ಚಿಗುರೊಡೆಯದಷ್ಟು ಬರಡಾಗಿರುವ ಈ ದುರ್ಬಲರಿಗೆ ಸ್ವಂತ ನಿವೇಶನ ಎಂಬುದು ಒಂದು ಅತ್ಯಂತ ಸುಂದರವಾದ ಕಲ್ಪನೆ.”

ಇತರ ಎಲ್ಲಾ ಯೋಜನೆಗಳಂತೆ ಈ ಯೋಜನೆಗಳ ಬಗ್ಗೆ ಕೂಡ ಟೀಕೆಗಳಿದ್ದವು. ಮುಖ್ಯವಾಗಿ ಮನೆ ಹಂಚುವ ಅಧಿಕಾರದಲ್ಲಿ ಆಗಿನ ತಾಲೂಕ್ ಅಭಿವೃದ್ಧಿ ಮಂಡಳಿ ಅಧ್ಯಕ್ಷರುಗಳಿಗೆ ಅಪಾರವಾದ ಅಧಿಕಾರ ಇದ್ದ ಕಾರಣ ಫಲಾನುಭವಿಗಳ ಆಯ್ಕೆ ವಸ್ತುನಿಷ್ಠವಾಗಿಲ್ಲ ಎನ್ನುವುದು ಒಂದು ಟೀಕೆ. ಇದು ಈ ಯೋಜನೆ ಮಾತ್ರವಲ್ಲ, ಸರಕಾರದ ಎಲ್ಲಾ ಕಲ್ಯಾಣ ಯೋಜನೆಗಳ ವಿಚಾರದಲ್ಲಿ ಆಗಲೂ, ಈಗಲೂ ಇರುವ ಸಮಸ್ಯೆ. ಇನ್ನೊಂದು ಟೀಕೆ ಸ್ವಲ್ಪ ಸಂಕೀರ್ಣವಾದದ್ದು. ಹೇಳಿಕೇಳಿ ಈ ವಸತಿ ಯೋಜನೆ ಆ ತನಕ ಅಸ್ತಿತ್ವದಲ್ಲಿದ್ದ ಎಲ್ಲಾ ಜನಪ್ರಿಯ ಯೋಜನೆಗಳಿಗಿಂತ ರಾಜಕೀಯ ನೆಲೆಯಲ್ಲಿ ಬಹಳ ಭಿನ್ನವಾಗಿ ನಿಲ್ಲುವ ಯೋಜನೆ. ಯಾಕೆಂದರೆ, ಸರಕಾರವೊಂದು ಬಡವರಿಗೆ ಅಲ್ಪ ಸ್ವಲ್ಪ ಧನ ಸಹಾಯವನ್ನೂ, ಕಡಿಮೆ ದರದ ಅಕ್ಕಿಯನ್ನೋ, ಯಾವುದೋ ಉದ್ದೇಶಕ್ಕೆ ಸಾಲವನ್ನೂ ಕೊಟ್ಟಾಗ ಅದು ಕೊಟ್ಟ ಸರಕಾರಕ್ಕೆ ಮತ್ತು ಪಡೆದ ಫಲಾನುಭವಿಗಳಿಗೆ ಮಾತ್ರ ಗೊತ್ತಾಗುವ ವ್ಯವಹಾರ. ಆದರೆ ಜನತಾ ಮನೆಯ ವಿಚಾರದಲ್ಲಿ ಹಾಗಲ್ಲ. ಉಚಿತವಾಗಿ ಕಟ್ಟಿಕೊಟ್ಟ ಸಾಲುಸಾಲು ಮನೆಗಳು ಸರಕಾರವೊಂದರ ಜನಪರತೆಗೆ ಅಥವಾ ಉದಾರತೆಗೆ ಸಾಕ್ಷಿಯಾಗಿ ಎಲ್ಲರಿಗೂ ಕಾಣಿಸುವ ಕುರುಹುಗಳು. “ಇದು ಸರಕಾರದ ಕೊಡುಗೆ” ಎಂದು ಒಬ್ಬ ಖಾಸಗಿ ವ್ಯಕ್ತಿಯ ಬದುಕಿನಲ್ಲಿ ಜನತಾ ಮನೆಯಷ್ಟು ಎದ್ದು ಕಾಣುವ ಇನ್ನೊಂದು ವಸ್ತು ಇರಲಾರದು. ಹಾಗೆ ನೋಡಿದರೆ ಸರಕಾರ ನೀಡಿದ ಭೂಮಿಯೂ ಸ್ವಲ್ಪ ಸಮಯದ ನಂತರ ಸರಕಾರದ ನೀಡಿಕೆ ಎಂದು ಎದ್ದು ಕಾಣಿಸುವುದಿಲ್ಲ. ಆದರೆ ಸರಕಾರ ನೀಡಿದ ಮನೆ ಹಾಗಲ್ಲ. ಅದನ್ನು ಕಟ್ಟಿದ ಜಾಗ, ಅದರ ವಿನ್ಯಾಸ, ಅದರ ನೋಟ ಎಲ್ಲವೂ ಅದನ್ನು ಸರಕಾರದ ಕೊಡುಗೆ ಎಂದು ಸಾರಿ ಹೇಳುತ್ತಿರುತ್ತವೆ. ಜನತಾ ಮನೆಗಳ ಈ ವಿಶೇಷ ಗುಣದಿಂದಾಗಿ ಸ್ಥಳೀಯ ರಾಜಕಾರಣಿಗಳಿಗೆ ತಮ್ಮತಮ್ಮ ಕ್ಷೇತ್ರಗಳಲ್ಲಿ ಇದನ್ನು ಹೆಚ್ಚುಹೆಚ್ಚು ಕಟ್ಟಿಸಿಕೊಡಬೇಕೆಂಬ ಇರಾದೆ ಇತ್ತೆಂದೂ, ಆದ ಕಾರಣ ತೀರಾ ಅಗತ್ಯ ಇಲ್ಲದೇಹೋದರೂ ಕೆಲವೊಮ್ಮೆ ಇಂತಹ ಮನೆಗಳನ್ನು ಕಟ್ಟಲಾಗುತಿತ್ತು ಎನ್ನುವ ಆಕ್ಷೇಪ ವಸತಿ ಯೋಜನೆಗಳ ಬಗ್ಗೆ ಆಗಲೂ, ಈಗಲೂ ಇದೆ. ಮಾತ್ರವಲ್ಲ ಹೀಗೆ ಕಟ್ಟಿದ ಎಷ್ಟೋ ಮನೆಗಳು ಊರ ಹೊರಗಿದ್ದು ಅವುಗಳಲ್ಲಿ ಬಡವರು ವಾಸ್ತವ್ಯ ಹೂಡುತ್ತಿರಲಿಲ್ಲ ಎಂಬ ಆಕ್ಷೇಪ ಕೇಳಿಬರುತ್ತಿತ್ತು. ಸರಕಾರ ಇಂತಹ ಜನತಾ ಕಾಲೋನಿಗಳಿಗೆ ರಸ್ತೆ, ವಿದ್ಯುತ್ ಒದಗಿಸಿದರೂ ಅವುಗಳು ದೂರದ ಸ್ಥಳದಲ್ಲಿದ್ದಾಗ ಅಲ್ಲಿ ವಾಸ್ತವ್ಯ ಹೂಡಿದರೆ ಉದ್ಯೋಗ-ಕಾರ್ಯಗಳಿಗೆ ಓಡಾಡುವುದು ಕಷ್ಟ ಎಂದು ಜನ ಸುಮ್ಮನೆ ಸರಕಾರದ ಸೌಲಭ್ಯಗಳ ದುರುಪಯೋಗ ಪಡಿಸಿಕೊಳ್ಳುತಿದ್ದರು ಎಂಬ ದೂರು ಕೂಡಾ ಇದೆ.

ಇದನ್ನೂ ಓದಿ: ಆಗಸ್ಟ್ 20: ದೇವರಾಜ ಅರಸು ಜನ್ಮದಿನ; ಅರಸು ಸರ್ಕಾರದಲ್ಲಿ ಸಾಮಾಜಿಕ ನ್ಯಾಯದ ಆಡಳಿತಾತ್ಮಕ ಮುಖಗಳು

ಇಂತಹ ಯಾವ ಟೀಕೆಗಳನ್ನು ಕಡೆಗಣಿಸುವಂತಿಲ್ಲ. ಅವುಗಳಲ್ಲಿ ಸತ್ಯಾಂಶ ಖಂಡಿತಾ ಇದೆ. ಅವುಗಳ ವಿಚಾರದಲ್ಲಿ ಇಷ್ಟೇ ಹೇಳಬಹುದು. ಇಲ್ಲಿ ಅರಸು ಸರಕಾರ ನಮಗೆ ಭಿನ್ನವಾಗಿ ಕಾಣುವುದು ಅದು ಜನಪರ ಅಥವಾ ಜನಪ್ರಿಯ ಯೋಜನೆಗಳನ್ನು ಲೋಪರಹಿತವಾಗಿ ಜಾರಿಗೊಳಿಸುವ ಒಂದು ಸೂತ್ರವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಯಿತು ಎನ್ನುವ ಕಾರಣಕ್ಕಲ್ಲ. ಅರಸು ಸರಕಾರ ಈ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸಿದ ನಂತರ ಕೇಂದ್ರ ಸರಕಾರ 1980ರ ಹೊತ್ತಿಗೆ ಇಂದಿರಾ ಆವಾಸ್ ಯೋಜನೆ ಎಂಬ ದೇಶವ್ಯಾಪಿ ವಸತಿ ಯೋಜನೆಯನ್ನು ಹಾಕಿಕೊಂಡಿತು. ಈಗ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನಕಲ್ಯಾಣ ಕಾರ್ಯಕ್ರಮಗಳಲ್ಲಿ ಉಚಿತ ವಸತಿ ಯೋಜನೆಗಳಿಗೆ ದೊಡ್ಡ ಪ್ರಾಶಸ್ತ್ಯವಿದೆ. ಮೇಲೆ ಹೇಳಿದ ಎಲ್ಲಾ ಲೋಪಗಳೂ ಈಗಲೂ ಈ ಯೋಜನೆಗಳ ಅನುಷ್ಠಾನದಲ್ಲಿ ಕಂಡುಬರುತ್ತವೆ. ಆದುದರಿಂದ ಮೊಟ್ಟಮೊದಲ ಬಾರಿಗೆ ನಡೆದ ಪ್ರಯೋಗದಲ್ಲಿ ಇಂತಹ ಲೋಪಗಳೆಲ್ಲ ಇದ್ದದ್ದು ಅಸಹಜವೇನೂ ಅಲ್ಲ. ಇಲ್ಲಿ ಮುಖ್ಯವಾದ ವಿಚಾರ ಏನೆಂದರೆ ಅರಸು ಸರಕಾರ ಬಡವರ ವಿಚಾರದಲ್ಲಿ ಭಿನ್ನವಾಗಿ ಯೋಚಿಸಲಾರಂಭಿಸಿತು ಎಂಬುದು. ಯಾವುದೇ ರೀತಿಯಲ್ಲಿ ತಮ್ಮದೆಂಬ ಒಂದಂಗುಲ ನೆಲವನ್ನು ತಮ್ಮದೆಂಬ ಒಂದು ಸೂರನ್ನು ಜೀವನ ಪೂರ್ತಿ ಪಡೆಯಲು ಅಶಕ್ತರಾದವರಿಗೆ ಇಂತಹ ಒಂದು ಯೋಜನೆ ಒದಗಿಸುವ ನೆಮ್ಮದಿ ಮತ್ತು ಭದ್ರತೆಯನ್ನು ಮೊಟ್ಟಮೊದಲ ಬಾರಿಗೆ ಅರ್ಥ ಮಾಡಿಕೊಂಡ ಸರಕಾರ ಎನ್ನುವ ಕೀರ್ತಿಯನ್ನು ಎಲ್ಲ ಟೀಕೆಗಳನ್ನು ಒಪ್ಪಿಕೊಳ್ಳುತ್ತಲೇ ಅರಸು ಸರಕಾರಕ್ಕೆ ನೀಡಬೇಕಾಗುತ್ತದೆ. ಫಲಾನುಭವಿಗಳಲ್ಲಿ ಅರ್ಧದಷ್ಟು ಜನ ಮಾತ್ರ ನೀಡಿದ ಮನೆಯಲ್ಲಿ ವಾಸ್ತವ್ಯ ಹೂಡಿದರು ಎಂದಿಟ್ಟುಕೊಂಡರೂ ಈ ಯೋಜನೆಯಿಂದ ನೆಮ್ಮದಿ ಕಂಡುಕೊಂಡವರ ಸಂಖ್ಯೆ ಕಡಿಮೆಯೇನಲ್ಲ.

ಮೇಲಿನ ಎರಡು ಮಹತ್ವದ ಮತ್ತು ರಾಷ್ಟ್ರ ಗಮನವನ್ನು ಸೆಳೆದ ಯೋಜನೆಗಳಲ್ಲದೆ ಅರಸು ಕಾಲದಲ್ಲಿ ಕರ್ನಾಟಕದಲ್ಲಿ ಜಾರಿಯಾದ ಕಲ್ಯಾಣ ಕಾರ್ಯಕ್ರಮಗಳ ದೊಡ್ಡ ಪಟ್ಟಿಯೇ ಇದೆ. ಇದರಲ್ಲಿ ಮಹತ್ವಪೂರ್ಣವಾದುವುಗಳು ಎಂದರೆ 1976ರಲ್ಲಿ ಅರಸು ಸರಕಾರ ಜಾರಿಗೆ ತಂದ ಗ್ರಾಮೀಣ ಋಣ ವಿಮುಕ್ತಿ ಕಾಯ್ದೆ, ಗ್ರಾಮೀಣ ಸಹಕಾರ ಸಂಘಗಳನ್ನು ಬಡವರಿಗೆ ಮತ್ತು ಹಿಂದುಳಿದ ವರ್ಗಗಳಿಗೆ ಅನುಕೂಲವಾಗುವಂತೆ ಪುನರ್‌ರಚಿಸಿದ್ದು, 1976ರ ಕೇಂದ್ರ ಜೀತ ಪದ್ಧತಿ ನಿರ್ಮೂಲಕ ಕಾಯ್ದೆಯ ಪ್ರಕಾರ ಜೀತ ಪದ್ಧತಿಯನ್ನು ತೊಡೆದುಹಾಕಲು ವ್ಯಾಪಕ ಕ್ರಮ ಕೈಗೊಂಡದ್ದು, ಮಲಹೊರುವ ಪದ್ಧತಿಯನ್ನು ನಿಲ್ಲಿಸಲು ಸ್ಥಳೀಯ ಸರಕಾರಗಳ ಮೂಲಕ ಯೋಜನೆ ಹಮ್ಮಿಕೊಂಡದ್ದು, 1965ರಿಂದ ಜಾರಿಯಲ್ಲಿದ್ದ ವೃದ್ಧಾಪ್ಯ ಪೆನ್ಷನ್ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದು, 1977ರಲ್ಲಿ ಅಂಗವಿಕಲರಿಗಾಗಿ ಹೊಸ ಪೆನ್ಷನ್ ಯೋಜನೆ ಜಾರಿಗೆ ತಂದದ್ದು, 1973ರಲ್ಲಿ ನಗರ ಕೊಳಚೆ ಪ್ರದೇಶ ನಿರ್ಮೂಲನೆ ಮತ್ತು ಅಭಿವೃದ್ಧಿ ಕಾಯ್ದೆ ಜಾರಿಗೊಳಿಸಿ 1975ರಲ್ಲಿ ಕೊಳಚೆ ನಿರ್ಮೂಲನ ಮಂಡಳಿ ಸ್ಥಾಪಿಸಿದ್ದು, ಬಡವರಿಗೆ ಮತ್ತು ಬೇರೆಬೇರೆ ವೃತ್ತಿ ಸಮುದಾಯಗಳಿಗೆ ಅಗ್ಗದ ಬಡ್ಡಿ ದರದಲ್ಲಿ ಸಾಲ ಒದಗಿಸಿದ್ದು, ರಸ್ತೆ ಬದಿಯಲ್ಲಿ ಚಮ್ಮಾರಿಕೆ ಮಾಡುವವರಿಗೆ ಗೂಡಂಗಡಿ ತೆರೆದು ತಮ್ಮ ವೃತ್ತಿ ಮುಂದುವರಿಸಲು ನೆರವಾಗುವಂತೆ ಹೊಸದಾಗಿ ಸ್ಥಾಪಿಸಿದ ಲಿಡ್ಕರ್ (Leather Industries Development Corporation) ಸಂಸ್ಥೆಯ ಮೂಲಕ ನೆರವಾದದ್ದು, ಭಿಕ್ಷಾಟನೆಯ ನಿರ್ಮೂಲನಕ್ಕೆ ಕ್ರಮ ಕೈಗೊಂಡು ಭಿಕ್ಷುಕರ ಪುನರ್ವಸತಿ ಕೇಂದ್ರ ಸ್ಥಾಪಿಸಿದ್ದು, ಮಹಿಳೆಯರ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸಿದ್ದು, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವಸತಿ ನಿಲಯಗಳನ್ನು ರಾಜ್ಯಾದ್ಯಂತ ಸ್ಥಾಪಿಸಿದ್ದು, ಕೃಷಿ ಮತ್ತು ಕೈಗಾರಿಕಾ ಕಾರ್ಮಿಕರಿಗಾಗಿ ಕನಿಷ್ಠ ಕೂಲಿ ಪರಿಷ್ಕರಿಸಿ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕ್ರಮ ಕೈಗೊಂಡದ್ದು.. ಹೀಗೆ ಅರಸು ಕಾಲದ ಯೋಜನೆಗಳ ಪಟ್ಟಿ ಅನಂತವಾಗಿ ಬೆಳೆಯುತ್ತಾ ಹೋಗುತ್ತದೆ. ಇವೆಲ್ಲವಕ್ಕೂ ಕಲಶಪ್ರಾಯವಾಗಿ ಭೂಸುಧಾರಣೆ ಮತ್ತು ಹಿಂದುಳಿದ ವರ್ಗಗಳಿಗೆ ನೀಡಲಾದ ಪರಿಷ್ಕೃತ ಮೀಸಲಾತಿ.

ಈ ಎಲ್ಲಾ ಯೋಜನೆಗಳ ಪರಿಣಾಮವಾಗಿ ಕರ್ನಾಟಕದ ಆಡಳಿತ ಜನಪ್ರಿಯತೆಯತ್ತ ವಾಲಿತು; ಇವೆಲ್ಲ ರಾಜಕೀಯಪ್ರೇರಿತ ಯೋಜನೆಗಳು ಎಂದು ಆಗಿನ ಪತ್ರಿಕೆಗಳು ಟೀಕಿಸಿದ್ದವಂತೆ. ಆದರೆ ಭಾರತದ ರಾಜಕೀಯಾರ್ಥಿಕತೆಯ ಚರಿತ್ರೆಯಲ್ಲಿ ಜನಪ್ರಿಯತೆ ಮತ್ತು ಜನಪರತೆಯ ವ್ಯಾಖ್ಯಾನ ಕಾಲಕಾಲಕ್ಕೆ ಬದಲಾದದ್ದನ್ನು ಕಾಣುತ್ತೇವೆ. ಒಂದು ಕಾಲಕ್ಕೆ ಜನಪ್ರಿಯ ಅಂತ ಕಡೆಗಣಿಸಲ್ಪಟ್ಟ ಅವೆಷ್ಟೋ ಯೋಜನೆಗಳು ಆ ನಂತರ ರಾಷ್ಟ್ರೀಯ, ಅಂತಾರಾಷ್ಟ್ರೀಯ ಜನಪರ ಅಭಿವೃದ್ಧಿ ಮಾದರಿಯ ಭಾಗಗಳಾಗಿದ್ದನ್ನು ಕಾಣುತ್ತೇವೆ. ಅರಸು ಅವರ ಕಾಲಘಟ್ಟಕ್ಕೆ ಸಂಬಂಧಿಸಿ ಹೇಳುವುದಾದರೆ ಆ ತನಕ ರಾಷ್ಟ್ರದಲ್ಲಿ ಮತ್ತು ರಾಜ್ಯದಲ್ಲಿ ಆರ್ಥಿಕ ಚಿಂತನೆ ಬಹುಮಟ್ಟಿಗೆ ಹೇಗಿತ್ತು ಎಂದರೆ ಸಾರ್ವಜನಿಕ ಹೂಡಿಕೆ (public investment) ದೊಡ್ಡದೊಡ್ಡ ಯೋಜನೆಗಳಲ್ಲಿ ಇರಬೇಕು ಮತ್ತು ಆ ಮೂಲಕ ಸಾಧ್ಯವಾದಷ್ಟು ಮಟ್ಟಿಗೆ ಬೆಳವಣಿಗೆಯ ದರಗಳನ್ನು ಹೆಚ್ಚಿಸಬೇಕು, ಹಾಗಾದಾಗ ಸಹಜವಾಗಿಯೇ ಸಂಪತ್ತು ಮೇಲಿನಿಂದ ಕೆಳಗೆ ಹರಿಯುತ್ತದೆ ಎನ್ನುವ ರೀತಿಯಲ್ಲೇ ಇತ್ತು. ಇದನ್ನು ಅರ್ಥಶಾಸ್ತ್ರದಲ್ಲಿ ಕೆಳರಿವಿನ ಸಿದ್ಧಾಂತ (trickle down theory) ಎನ್ನುತ್ತಾರೆ. ಎಪ್ಪತ್ತರ ದಶಕದ ಹೊತ್ತಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಿದ್ಧಾಂತದ ಪ್ರಕಾರ, ಅಂದರೆ ಸಂಪತ್ತು ನೀರಿನಂತೆ ಮೇಲಿಂದ ಕೆಳಗೆ ಹರಿಯಲೇಬೇಕು ಎನ್ನುವ ನಂಬಿಕೆಯನ್ನು ನೆಚ್ಚಿಕೊಳ್ಳುವ ಮೂಲಕ, ಬಡತನ ನಿರ್ಮೂಲನ ಅಸಾಧ್ಯ ಎಂಬ ಚಿಂತನೆ ಪ್ರಾರಂಭವಾಗಿತ್ತು. ಈ ಚಿಂತನೆಗಳನ್ನು ಗ್ರಹಿಸಿ ವ್ಯಾಪಕವಾಗಿ ಆಡಳಿತದಲ್ಲಿ ಅಳವಡಿಸಿದ ಭಾರತದ ಮೊದಲ ಮುಖ್ಯಮಂತ್ರಿಯಾಗಿ ಅರಸು ಚರಿತ್ರೆಯಲ್ಲಿ ಉಳಿಯುತ್ತಾರೆ. ಮುಂದೆ ಐದನೆಯ ಪಂಚವಾರ್ಷಿಕ ಯೋಜನೆಯ ಸಂದರ್ಭ ಇದು ರಾಷ್ಟ್ರೀಯ ಆರ್ಥಿಕ ಚಿಂತನೆಯ ಭಾಗವಾಗಿದ್ದು ಇತಿಹಾಸ.

ಅಡಿ ಟಿಪ್ಪಣಿಗಳು

(1) ನಂಜುಂಡಪ್ಪ ಡಿ.ಎಂ. (2006), ಅವಿಸ್ಮರಣೀಯ ಕ್ಷಣ- ಡಿ.ಎಂ. ನಂಜುಂಡಪ್ಪ ಅವರ ಸಂದರ್ಶನ, “ದೇವರಾಜ ಅರಸು ಒಂದು ಅವಲೋಕನ”ದಲ್ಲಿ, ಶೂದ್ರ ಶ್ರೀನಿವಾಸ (ಸಂಪಾದಕರು) ಸುವರ್ಣ ಕರ್ನಾಟಕ ಪ್ರಕಟಣೆಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಪುಟ 122-123.

(2) ಬಾಖ್ರು ಮೀರಾ (1984), ಡಿಸ್ಟ್ರಿಬ್ಯುಶನ್ ಆಫ್ ವೆಲ್ಫೇರ್- ಪೀಪಲ್ಸ್ ಹೌಸಿಂಗ್ ಸ್ಕೀಮ್ ಇನ್ ಕರ್ನಾಟಕ, ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ, ಸಂಪುಟ 19, ಸಂಖ್ಯೆ 10 (ಮಾರ್ಚ್ 10) ಪುಟ 427-436.

(3) ನಂಜುಂಡಪ್ಪ ಡಿ.ಎಂ. (2006), ಅವಿಸ್ಮರಣೀಯ ಕ್ಷಣ- ಡಿ.ಎಂ.ನಂಜುಂಡಪ್ಪ ಅವರ ಸಂದರ್ಶನ, “ದೇವರಾಜ ಅರಸು ಒಂದು ಅವಲೋಕನ”ದಲ್ಲಿ, ಶೂದ್ರ ಶ್ರೀನಿವಾಸ (ಸಂಪಾದಕರು) ಸುವರ್ಣ ಕರ್ನಾಟಕ ಪ್ರಕಟಣೆಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಪುಟ 124.

(4) ವಡ್ಡರ್ಸೆ ರಘುರಾಮ ಶೆಟ್ಟಿ (2000), ಬಹುರೂಪಿ ಅರಸು, ಸಪ್ನ ಬುಕ್ ಹೌಸ್, ಬೆಂಗಳೂರು. ಪುಟ 103.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...