Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ನವಲಗುಂದ: ರೈತ ಬಂಡಾಯದ ನೆಲದಲ್ಲಿ ಜಾತಿ ಪ್ರತಿಷ್ಠೆಯ ಪೈಪೋಟಿ!

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ನವಲಗುಂದ: ರೈತ ಬಂಡಾಯದ ನೆಲದಲ್ಲಿ ಜಾತಿ ಪ್ರತಿಷ್ಠೆಯ ಪೈಪೋಟಿ!

- Advertisement -
- Advertisement -

ಬೆಳವಲದ ಮಡಿಲಲ್ಲಿರುವ ನವಲಗುಂದ-ಅಣ್ಣಿಗೇರಿ ಅವಳಿ ತಾಲೂಕುಗಳು ರೈತ ಕ್ರಾಂತಿಯ ಸೀಮೆ! ನವಲಗುಂದದ 1980ರ ರೈತ ದಂಗೆ ಮತ್ತು ಇತ್ತೀಚಿನ ಕಳಸಾ-ಬಂಡೂರಿ (ಮಹದಾಯಿ) ಹೋರಾಟದ ಕೆಚ್ಚು ಇತಿಹಾಸದ ಪುಟದಲ್ಲಿ ಅಚ್ಚಳಿಯದಂತೆ ದಾಖಲಾಗಿದೆ! ಮಣ್ಣಿನ ಮಕ್ಕಳನ್ನು ದಮನಿಸುವ ಆಳುವವರ ಅತಿರೇಕದ ವಿರುದ್ಧ ಸಿಡಿದೇಳುವಂತೆ ಮಾಡುವ ಸರ್ವಕಾಲಿಕ ಸ್ಫೂರ್ತಿಯ ಸಂಘರ್ಷಗಳಿವು. ನವಲಗುಂದ ರೈತ ಬಂಡಾಯ ರಾಜ್ಯಾದ್ಯಂತ ರೈತ ಚಳವಳಿಗೆ ಪ್ರೇರಣೆಯಾಯಿತು. 1979-80ರಲ್ಲಿ ಬರಗಾಲದಿಂದ ತತ್ತರಿಸಿದ್ದ ನವಲಗುಂದ-ನರಗುಂದ-ಸವದತ್ತಿ ಭಾಗದ ರೈತರು ಸರಕಾರದ ಬೆಟರ್‌ಮೆಂಟ್ ಲೆವಿ, ನೀರಿನ ಕರ ನಿರಾಕರಣೆ ಮತ್ತು ತಮ್ಮ ಕೃಷಿ ಉತ್ಪನ್ನಕ್ಕೆ ಯೋಗ್ಯ ಬೆಲೆ ಬೇಡಿಕೆಯಿಟ್ಟು ಬೀದಿಗಿಳಿದಿದ್ದರು. 1980ರ ಜುಲೈನಲ್ಲಿ ಅಂದಿನ ಸರಕಾರ ರೈತರ ಪ್ರತಿಭಟನೆಯನ್ನು ಪೊಲೀಸ್ ಬಲದಿಂದ ಹತ್ತಿಕ್ಕಲು ಗೋಲಿಬಾರ್ ಮಾಡಿ ಇಬ್ಬರು ಅಮಾಯಕ ರೈತರ ಹೆಣ ಉರುಳಿಸಿತು! ಕೆರಳಿದ ಹೋರಾಟಗಾರರು ಗೋಲಿಬಾರ್ ನಡೆಸಿದ ಸಬ್ ಇನ್ಸ್‌ಪೆಕ್ಟರ್‌ನನ್ನು ಕೊಂದುಹಾಕಿದರು! ರೈತರ ಈ ರೊಚ್ಚು 1983ರಲ್ಲಿ ಗುಂಡೂರಾವ್ ಸರಕಾರದ ಪತನಕ್ಕೂ ಕಾರಣವಾಯಿತು.

2016ರಲ್ಲಿ ಮಹದಾಯಿ ನೀರಿಗಾಗಿ ಹೋರಾಟಕ್ಕಿಳಿದಿದ್ದ ರೈತರನ್ನು ಪೊಲೀಸರು ಹೊಡೆದು-ಬಡಿದು ಬಳ್ಳಾರಿ ಜೈಲಿಗೆ ತಂದು ತುಂಬಿದರು; ನೀರು ಕೇಳಿದ ರೈತರ ಮೇಲೆ ಕೊಲೆ ಯತ್ನ-ಗೂಂಡಾ ಕಾಯ್ದೆ ಕೇಸು ಹಾಕಲಾಯಿತು. ರೈತ ಪರಿವಾರದ ಅಮಾಯಕ ವೃದ್ಧರು-ಮಹಿಳೆಯರೆನ್ನದೆ ಸಿಕ್ಕಸಿಕ್ಕವರನ್ನು ಪೊಲೀಸರು ಬೂಟು-ಲಾಠಿ ಏಟಿನಿಂದ ಘಾಸಿಗೊಳಿಸಿದರು. ಅಂದಿನ ಸಿಎಂ ಸಿದ್ದರಾಮಯ್ಯ ಘಟನೆಗೆ ವಿಷಾದ ವ್ಯಕ್ತಪಡಿಸಿ ತಪ್ಪಿತಸ್ಥ ಪೊಲೀಸ್ ಅಧಿಕ್ಳಾರಿಗಳನ್ನು ಅಮಾನತುಗೊಳಿಸಿದರು; ನ್ಯಾಯಾಲಯ ಕೂಡ ಪೊಲೀಸರ ಸ್ವೇಚ್ಛಾಚಾರವನ್ನು ಕಟು ಶಬ್ದಗಳಿಂದ ಖಂಡಿಸಿತು. ಛಲದಂಕಮಲ್ಲರೆನಿಸಿಕೊಂಡ ರೈತರ ವಿವಿಧ ಹೋರಾಟಗಳಿಂದ ನವಲಗುಂದ-ಅಣ್ಣಿಗೇರಿ ರೈತ ಬಂಡಾಯದ ಭೂಮಿಯೆಂದೇ ಜನಜನಿತವಾಗಿದೆ. ಕಳಸಾ-ಬಂಡೂರಿ ನೀರಾವರಿ ಯೋಜನೆಗಾಗಿ ನವಲಗುಂದ ರೈತಭವನದ ಟೆಂಟ್‌ನಲ್ಲಿ ನಿರಂತರ ಚಳವಳಿ ನಡೆಯುತ್ತಲೇ ಇದೆ!

ಇತಿಹಾಸ-ಸಂಸ್ಕೃತಿ

ಜನಜೀವನ ಪಸರಿಸುವುದಕ್ಕೆ ಮೊದಲು ನವಲಗುಂದ ನವಿಲುಗಳ ಗುಡ್ಡವಾಗಿತ್ತೆಂದು ಸ್ಥಳನಾಮ ಪುರಾಣ ಹೇಳುತ್ತದೆ. ಗುಡ್ಡದ ಮೇಲೆ ತುಂಬಾ ನವಿಲುಗಳು ವಾಸಿಸುತ್ತಿದ್ದವಂತೆ; ಈಗಲೂ ಈ ಪ್ರದೇಶದಲ್ಲಿ ಸಾಕಷ್ಟು ನವಿಲುಗಳು ಕಣ್ಣಿಗೆ ಬೀಳುತ್ತವೆ. ನವಿಲುಗಳ ಇರುವಿಕೆಯಿಂದ ’ನವಿಲು ಗುಡ್ಡ’ ಎಂದು ಕರೆಯಲ್ಪಟ್ಟ ಊರು ಆ ನಂತರ ’ನವಿಲುಗುಂದ’ ಎಂದಾಯಿತು; ಕ್ರಮೇಣ ’ನವಲಗುಂದ’ ಎಂದು ಹೆಸರಾಯಿತೆಂಬ ಪ್ರತೀತಿಯಿದೆ. ನವಲಗುಂದ ಹಿಂದೆ ಲಿಂಗಾಯತ ಜಮೀನ್ದಾರಿ ಮನೆತನದ ಲಿಂಗರಾಜ ದೇಸಾಯಿ ಆಡಳಿತಕ್ಕೆ ಒಳಪಟ್ಟಿತ್ತು ಎಂಬ ತರ್ಕವಿದೆ; ಇಲ್ಲಿರುವ ದೇಸಾಯಿ ವಾಡೆ, ಸಂಕಮ್ಮ ತಾಯಿ ಬಾವಿ, ನೀಲಮ್ಮ ತಾಯಿ ಕೆರೆ ಮತ್ತು ಚನ್ನಮ್ಮ ತಾಯಿ ಕೆರೆ ದೇಸಾಯಿ ಖಾನ್‌ದಾನ್ ಆಳ್ವಿಕೆಯ ಕುರುಹುಗಳು ಎನ್ನಲಾಗುತ್ತಿದೆ.

ನವಲಗುಂದ ಯಮನೂರು ಸಕಲ ಧರ್ಮಗಳ ಭಾವೈಕ್ಯತೆ ತಾಣ! ಪ್ರತಿ ವರ್ಷ ಇಲ್ಲಿ ಎಲ್ಲ ಜಾತಿ-ಧರ್ಮದ ಭಕ್ತಾದಿಗಳನ್ನು ಒಳಗೊಂಡ ಜಾತ್ರೆ ಒಂದು ತಿಂಗಳ ತನಕ ವಿಜೃಂಭಣೆಯಿಂದ ನಡೆಯುತ್ತದೆ. ಚಾಂಗದೀವ್ (ಚಾಂಗದೇವರು) ಸಂದಲ್ ಮತ್ತು ರಾಜಬಾಗ ಸವಾರ ದರ್ಗಾ ಉರುಸ್ ಏಕಕಾಲದಲ್ಲಿ ಜರುಗುತ್ತದೆ. ಉತ್ತರ ಕರ್ನಾಟಕ ಮತ್ತದಕ್ಕೆ ಹೊಂದಿಕೊಂಡ ಹೊರರಾಜ್ಯದ ಲಕ್ಷಾಂತರ ಅನುಯಾಯಿಗಳು ಈ ಜಂಟಿ ಉತ್ಸವಕ್ಕೆ ಬರುತ್ತಾರೆ; ಪೂಜಾರಿಗಳಿಂದ ಮಂತ್ರ-ಪೂಜೆ ನಡೆಯುತ್ತಿರುವಾಗಲೆ, ಇತ್ತ ಪೀರಾಗಳಿಂದ ಪಾತೀಹಾ (ಓದುವಿಕೆ) ಆಗುವುದು ಈ ಸಹಿಷ್ಣು ಸಂಭ್ರಮದ ವಿಶೇಷ! ಇಲ್ಲಿ ವಿಶ್ವಪ್ರಸಿದ್ಧ ರಾಮಲಿಂಗ ಕಾಮಣ್ಣ ಹಾಗು ನಾಗಲಿಂಗ ಸ್ವಾಮಿ ದೇವಸ್ಥಾನಗಳಿವೆ.

ನವಲಗುಂದದ ಹೋಳಿ ಹಬ್ಬಕ್ಕೆ ಅದರದೆ ಆದ ವೈಶಿಷ್ಟ್ಯ-ಖ್ಯಾತಿಯಿದೆ. ಹುರಕಡ್ಲಿ ಶ್ರೀ ಅಜ್ಜನವರ ತಪೋಭೂಮಿಯಿರುವ ನವಲಗುಂದ ಕುಸುರಿ ನೇಯ್ಗೆಯ ಡ್ಯೂರಿಗಳಿಗೆ (ಜಮಖಾನ) ಹೆಸರುವಾಸಿಯಾಗಿದೆ. ಹತ್ತಿ ದಾರದಿಂದ ನೇಯ್ದ ನೆಲಹಾಸು ಮತ್ತು ಜಮಖಾನಗಳಿಗೆ ಭೌಗೋಳಿಕ ಸೂಚ್ಯಂಕದ (ಜಿಐ) ಜಾಗತಿಕ ಮನ್ನಣೆಯೂ ಸಿಕ್ಕಿದೆ. ಹುಬ್ಬಳ್ಳಿಯ ಸಿದ್ದಾರೂಢರ ಒಡನಾಡಿ ಅಜಾತ ನಾಗಲಿಂಗದೇವರು ನವಲಗುಂದದವರು; ಇದಕ್ಕೆ ಸಾಕ್ಷಿಯಾಗಿ ಹಲವು ಲಿಂಗವಂತರ ಮಠಗಳಿವೆ; ಗಣಪತಿ ದೇಗುಲದ ಸುಂದರ ಶಿಲ್ಪಕಲೆ ಜಕ್ಕರಾಯ ಶಿಲ್ಪಿಯದೆಂಬ ಪ್ರತೀತಿಯಿದೆ.

ಆದಿಕವಿ ಪಂಪ 902ರಲ್ಲಿ ಜನ್ಮವೆತ್ತಿದೆ ಅಣ್ಣಿಗೇರಿ ಹಿಂದೆ ರಾಜಕೀಯ-ಸಾಂಸ್ಕೃತಿಕ ಕೇಂದ್ರವಾಗಿತ್ತು; ಕಳಚೂರಿ ವಂಶದ ದೊರೆ ಬಿಜ್ಜಳ ಮತ್ತು ಚಾಲುಕ್ಯರ ನಾಲ್ಕನೆ ದೊರೆ ಸೋಮೇಶ್ವರನ ರಾಜಧಾನಿ ಆಗಿತ್ತು; ಚಾಲುಕ್ಯರ ಕೊನೆಯ ರಾಜಧಾನಿಯಾದ ಅಣ್ಣಿಗೇರಿ ಹೊಯ್ಸಳ ದೊರೆ ವೀರ ಬಲ್ಲಾಳನ ಉಪ ರಾಜಧಾನಿಯಾಗಿ ಪ್ರಸಿದ್ಧಿ ಪಡೆದಿತ್ತು. ಪ್ರಾಚೀನ ಶಾಸನಗಳಲ್ಲಿ ’ದಕ್ಷಿಣದ ವಾರಣಾಸಿ’ ಎಂದು ಉಲ್ಲೇಖಿಸಲ್ಪಟ್ಟಿರುವ ಅಣ್ಣಿಗೇರಿಯಲ್ಲಿ ಪ್ರಾಥಮಿಕ ಹಾಗು ವೈದಿಕ ವಿದ್ಯಾಭ್ಯಾಸಕ್ಕಾಗಿ 5 ಬ್ರಹ್ಮಪುರಿಗಳನ್ನು ನಿರ್ಮಿಸಲಾಗಿತ್ತು. 1050ರಲ್ಲಿ ಕಟ್ಟಲಾದ ಅಣ್ಣಿಗೇರಿಯ 76 ಕಂಬಗಳ ಮೇಲ್ಛಾವಣಿ ಮತ್ತು ಸುಂದರ ಕೆತ್ತನೆಯ ಗೋಡೆಗಳ ದೊಡ್ಡ-ಕಪ್ಪು ಕಲ್ಲಿನ ಅಮೃತೇಶ್ವರ ದೇವಾಲಯ ಕಲ್ಯಾಣಿ ಚಾಲುಕ್ಯ ವಾಸ್ತಶಿಲ್ಪ (ದ್ರಾವಿಡ) ಶೈಲಿಯಲ್ಲಿದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹುಬ್ಬಳ್ಳಿ-ಧಾರವಾಡ ಪೂರ್ವ: ಮುಸ್ಲಿಮರ ಕೈಯಿಂದ ಕ್ಷೇತ್ರ ತಪ್ಪಿಸಿದರೂ ಬಿಜೆಪಿಗೇಕೆ ಗೆಲ್ಲಲಾಗುತ್ತಿಲ್ಲ?!

ಇದು ಸೋಪ್‌ಸ್ಟೋನ್‌ನಿಂದ (ಮೆಟಾಮಾರ್ಫಿಕ್ ಬಂಡೆಯ ಒಂದು ವಿಧ) ನಿರ್ಮಿಸಿದ ಮೊಟ್ಟಮೊದಲ ದೇಗುಲ. ಅಣ್ಣಿಗೇರಿಯಲ್ಲಿ ಜೈನ ಧರ್ಮದ 23ನೇ ತೀರ್ಥಂಕರ ಪಾರ್ಶ್ವನಾಥರ ದೇರಸರ್ (ಬಸದಿ) ಇದೆ. 2010ರಲ್ಲಿ ಅಣ್ಣಿಗೇರಿಯಲ್ಲಿ ಚರಂಡಿ ಅಗೆಯುವಾಗ 100 ಮಾನವ ತಲೆ ಬುರುಡೆಗಳು ದೊರೆತಿದ್ದು ದೊಡ್ಡ ಸುದ್ದಿಯಾಗಿತ್ತು. ಆ ನಂತರ ಮಾಡಲಾದ ಉತ್ಖನನದಲ್ಲಿ 471 ತಲೆ ಬುರುಡೆಗಳು ಸಿಕ್ಕಿದವು. ಈ ತಲೆ ಬುರುಡೆಗಳು 638 ವರ್ಷಗಳ ಹಿಂದಿನದು ಎನ್ನಲಾಗಿದ್ದು ಸದ್ರಿ ಸ್ಥಳ ಸಾಮೂಹಿಕ ಸಮಾಧಿಯಾಗಿರಬೇಕು ಇಲ್ಲವೆ ಯುದ್ಧ ಭೂಮಿ ಆಗಿಬಹುದೆಂದು ಊಹಿಸಲಾಗಿದೆ.

ಕೃಷಿ ಕಾಯಕವೆ ಕೈಲಾಸ!

ನವಲಗುಂದ ಮತ್ತು ಅಣ್ಣಿಗೇರಿ ಕೃಷಿ ಪ್ರಧಾನ ತಾಲೂಕುಗಳು. ತುತ್ತಿನ ಚೀಲ ತುಂಬುವಷ್ಟರ ಮಟ್ಟಿಗೆ ಇಲ್ಲಿಯ ವಾಣಿಜ್ಯ-ವ್ಯಾಪಾರ ಬೆಳೆದಿಲ್ಲ. ನವಲಗುಂದಕ್ಕೆ ಹೋಲಿಸಿದರೆ ಅಣ್ಣಿಗೇರಿಯಲ್ಲಿ ವಹಿವಾಟು ಜಾಸ್ತಿ. ದುಡಿವ ಕೈಗಳಿಗೆ ಕೆಲಸ ಕೊಡುವ ಉದ್ಯಮ-ಕೈಗಾರಿಕೆ ಒಂದೂ ನವಲಗುಂದ-ಅಣ್ಣಿಗೇರಿಯಲ್ಲಿಲ್ಲ. ಬೆಳಗಾಗುತ್ತಲೆ ರೈತರು ಎತ್ತಿನ ಗಾಡಿ (ಚಕ್ಕಡಿ) ಹತ್ತಿ ಹೊಲಕ್ಕೆ ಹೋದರೆ ಯುವಕರು ಲಾರಿ-ಟಮ್‌ಟಮ್ ಏರಿ ಹುಬ್ಬಳ್ಳಿ-ಧಾರವಾಡದ ಕೈಗಾರಿಕೆಗಳಲ್ಲಿ ದುಡಿಯಲು ಧಾವಿಸುತ್ತಾರೆ. ಹುಬ್ಬಳ್ಳಿ-ಧಾರವಾಡಕ್ಕೆ ಹೋಗಿ ಸ್ವಲ್ಪ ಹೆಚ್ಚು ಕಲಿತವರು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಶಾಸಕರು-ಸಂಸದರು ನವಲಗುಂದ-ಅಣ್ಣಿಗೇರಿ ಅಭಿವೃದ್ಧಿಗೆ ಯೋಚನೆಯೆ ಮಾಡುವುದಿಲ್ಲ; ಕೃಷಿ ಉನ್ನತೀಕರಣಕ್ಕೂ ಪ್ರಯತ್ನಿಸುತ್ತಿಲ್ಲ; ಕೈಗಾರಿಕೆ ತರಲಿಕ್ಕೂ ಮುಂದಾಗುತ್ತಿಲ್ಲ. ಹೀಗಾಗಿ ಎರಡೂ ತಾಲುಕುಗಳು ಹಿಂದುಳಿದಿರುವಿಕೆಯ ದಾರಿಯಲ್ಲಿ ದಾಪುಗಾಲು ಹಾಕುತ್ತಿವೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಹುಬ್ಬಳ್ಳಿ-ಧಾರವಾಡ ಕಡೆಯಿಂದ ಹರಿದು ಬರುವ ಬೆಣ್ಣೆ ಹಳ್ಳ ಮತ್ತು ತುಪ್ಪರಿ ಹಳ್ಳ ಈ ಎರಡೂ ತಾಲೂಕುಗಳ ಜೀವನಾಡಿಯಾದರೂ ಆರ್ಥಿಕತೆ ಒಣ ಬೇಸಾಯದ ಮೇಲೆ ಅವಲಂಬಿತವಾಗಿದೆ. ಹೆಸರು ಕಾಳು, ಮೆಕ್ಕೆ ಜೋಳ, ಬ್ಯಾಡಗಿ ತಳಿಯ ಮೆಣಸಿನ ಕಾಯಿ, ಹತ್ತಿ, ಬಿಳಿ ಜೋಳ, ಶೇಂಗಾ ಮತ್ತಿತರ ಧವಸ-ಧಾನ್ಯ ಬೆಳೆದು ಹಳ್ಳಿಗರು ಬದುಕುಕಟ್ಟಿಕೊಂಡಿದ್ದಾರೆ. ರೈತರು ಇತ್ತೀಚೆಗೆ ದುಬಾರಿ ನಿರ್ವಹಣೆ ಹಾಗು ವರ್ಷಕ್ಕೆ ಒಂದೇ ಬೆಳೆ ಬರುವ ಮೆಣಸಿನ ಕಾಯಿ ಕೃಷಿ ಕಡಿಮೆಮಾಡಿದ್ದಾರೆ; ವರ್ಷಕ್ಕೆ ಎರಡು ಫಸಲು ತೆಗೆಯಬಹುದಾದ ಹೆಸರು ಕಾಳು ಹೆಚ್ಚು ಬೆಳೆಯುತ್ತಿದ್ದಾರೆ. ಕೃಷಿ ಉತ್ಪನ್ನಕ್ಕೆ ತಕ್ಕ ಬೆಲೆ ಸಿಗದೆ ಹಳ್ಳಿಗಳು ಬಡತನದ ಬೇಗೆಯಲ್ಲಿ ದಿನಕಳೆಯುತ್ತಿವೆ. ಮಹದಾಯಿ ನೀರು ಕಳಸಾ-ಬಂಡೂರಿ ನಾಲೆಗಳಲ್ಲಿ ಹರಿದರೆ ಹೊಲಗಳನ್ನು ಹಸಿರಾಗಿಸಿ, ಉಂಡುಟ್ಟು ಇರಬಹುದೆಂಬ ಆಸೆ ನವಲಗುಂದದ ರೈತಾಪಿ ವರ್ಗಕ್ಕೆ. ಈಗ ಮಲಪ್ರಭಾ ಎಡ ಹಾಗು ಬಲ ನಾಲೆಗಳಲ್ಲಿ ಹರಿದುಬರುತ್ತಿರುವ ನೀರಿಗೆ ನಲ್ಲಿ ನೀರಿನ ದಮ್ಮೂ ಇಲ್ಲದಾಗಿದೆ; ಮಹದಾಯಿ ನೀರು ತರುವ ವಿಷಯದಲ್ಲಿಯೂ ಶಾಸಕ-ಸಂಸದ ರೈತರ ಹಿತ ಕಡೆಗಣಿಸಿ ಪಾರ್ಟಿ ಹಿತದ ನಾಟಕವಾಡುತ್ತಿದ್ದಾರೆ ಎಂದು ರೈತರು ಬೇಸರಿಸುತ್ತಾರೆ.

ಕ್ಷೇತ್ರದ ಆಕಾರ

ನವಲಗುಂದ ವಿಧಾನಸಭಾ ಕ್ಷೇತ್ರದ ಚಹರೆ 2007ರ ಕ್ಷೇತ್ರಗಳ ಭೌಗೋಳಿಕ ಪರಿಧಿ ಪುನರ್‌ರಚನೆ ಪ್ರಕ್ರಿಯೆಯಲ್ಲಿ ಕೊಂಚ ಬದಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಎರಡು ಹೋಬಳಿಗಳನ್ನು ನವಲಗುಂದಕ್ಕೆ ಸೇರಿಸಲಾಗಿದೆ. ಹುಬ್ಬಳ್ಳಿ ಮತ್ತು ಧಾರವಾಡದ ಹಿಂದುತ್ವ ರಾಜಕಾರಣದ ಭರಾಟೆಗೆ ಹೋಲಿಸಿದರೆ ನವಲಗುಂದ ಕ್ಷೇತ್ರದಲ್ಲಿ ಕೇಸರಿ ಕೋಲಾಹಲವೇನಿಲ್ಲ. ಇಲ್ಲಿ ಏನಿದ್ದರೂ ಜಾತಿ ಮೇಲಾಟ! ಮೊದಲ 8 ಚುನಾವಣೆಯಲ್ಲಿ ನವಲಗುಂದ ’ಲಿಂಗಾಯತ ಮೀಸಲು ಕ್ಷೇತ್ರ’ದಂತಾಗಿತ್ತು. ಕಾಂಗ್ರೆಸ್ ಮತ್ತು ಅದರ ಪ್ರಬಲ ಎದುರಾಳಿ ಅಭ್ಯರ್ಥಿಗಳು ಲಿಂಗಾಯತ ಕೋಮಿನವರಾಗಿರುತ್ತಿದ್ದರು; ಯಾರೇ ಗೆದ್ದರು ಕ್ಷೇತ್ರ ಬಲಾಢ್ಯ ಲಿಂಗಾಯತರ ಕೈಲಿರುತಿತ್ತು. ಆ ಸಂಪ್ರದಾಯವನ್ನು 1994ರಲ್ಲಿ ಬಂಗಾರಪ್ಪನವರ ಕೆಸಿಪಿಯಿಂದ ಶಾಸಕರಾಗಿದ್ದ ಕುರುಬ ಜನಾಂಗದ ಕೆ.ಎನ್.ಗಡ್ಡಿ ಮುರಿದರು!

1994ರ ಬಳಿಕ ಕ್ಷೇತ್ರದ ಜಾತಿ ಸಮೀಕರಣ ಬದಲಾಗಿದ್ದು, ಪಂಚಮಸಾಲಿ ಲಿಂಗಾಯತ ಹಾಗು ಕುರುಬರ ಪ್ರತಿಷ್ಠೆಯ ಜಿದ್ದಾಜಿದ್ದಿ ಅಖಾಡವಾಗಿ ಮಾರ್‍ಪಟ್ಟಿದೆ! ನವಲಗುಂದ-ಅಣ್ಣಿಗೇರಿಯಲ್ಲಿ ಮತೀಯ ಸಂಘರ್ಷದ ನಂಜಿಲ್ಲದಿದ್ದರೂ 2007ರಲ್ಲಿ ಅಸೆಂಬ್ಲಿ ಕ್ಷೇತ್ರಕ್ಕೆ ಸೇರಿಸಲ್ಪಟ್ಟಿರುವ, ಕೋಮು ಧ್ರುವೀಕರಣಗೊಂಡಿರುವ ಹುಬ್ಬಳ್ಳಿಯ ಎರಡು ಹೋಬಳಿಗಳು ಚುನಾವಣಾ ಫಲಿತಾಂಶದ ಮೇಲೆ ಅಡ್ಡಪರಿಣಾಮ ಬೀರುತ್ತಿವೆಯೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಒಟ್ಟೂ 2,10,653 ಮತದಾರಿರುವ ಕ್ಷೇತ್ರದಲ್ಲಿ 50 ಸಾವಿರ ಪಂಚಮಸಾಲಿ ಲಿಂಗಾಯತರು, 15 ಸಾವಿರ ರೆಡ್ಡಿ ಲಿಂಗಾಯತರು, 40 ಸಾವಿರ ಕುರುಬರು, ತಲಾ 35 ಸಾವಿರ ಮುಸ್ಲಿಮ್ ಹಾಗು ಎಸ್ಸಿ-ಎಸ್ಟಿ ಹಾಗು ಸಣ್ಣ-ಪುಟ್ಟ ಸಂಖ್ಯೆಯಲ್ಲಿ ಒಬಿಸಿಗಳು, ಬಾಹ್ಮಣರು, ಕ್ರಿಶ್ಚಿಯನ್ನರು ಇರಬಹುದೆಂಬ ಲೆಕ್ಕಾಚಾರವಿದೆ.

ಚುನಾವಣಾ ಚರಿತ್ರೆ!

1957ರಲ್ಲಾದ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ 21,798 ಮತ ಪಡೆದ ಕಾಂಗ್ರೆಸ್ ಹುರಿಯಾಳು ಆರ್.ಎಂ.ಪಾಟೀಲ್ ಹತ್ತಿರದ ಪಕ್ಷೇತರ ಪ್ರತಿಸ್ಪರ್ಥಿ ಎಮ್.ಎನ್.ಕೊಯಪ್ಪನವರ್ ಅವರನ್ನು 12,220 ಮತದಿಂದ ಸೋಲಿಸಿ ಶಾಸಕನಾದರು. 1962ರಲ್ಲಿ ಶಾಸಕ ಪಾಟೀಲ್ ಮತ್ತೆ ಕಾಂಗ್ರೆಸ್ ಕ್ಯಾಂಡಿಡೇಟಾಗಿ ಅಖಾಡಕ್ಕೆ ಇಳಿದರು; ಇಂದಿನ ಧಾರವಾಡ ಜಿಲ್ಲೆಯ ಪ್ರಮುಖ ರಾಜಕೀಯ ಮುಂದಾಳಾಗಿ ಅವತರಿಸಿರುವ ಮಾಜಿಮಂತ್ರಿ ವಿನಯ್ ಕುಲಕರ್ಣಿ ಮುತ್ತಜ್ಜ (ತಾಯಿಯ ಅಜ್ಜ) ಎಂ.ಕೆ.ಕುಲಕರ್ಣಿ ಪಕ್ಷೇತರ ಅಭ್ಯರ್ಥಿಯಾಗಿ ಪ್ರಬಲ ಪೈಪೋಟಿ ಕೊಟ್ಟಿದ್ದರು. ಆದರೆ ಆರ್.ಎಂ.ಪಾಟೀಲ್ (20,618) ಕುಲಕರ್ಣಿಯವರನ್ನು 7,435 ಮತಗಳಿಂದ ಪರಾಭವಗೊಳಿಸಿ ಎರಡನೆ ಬಾರಿ ಶಾಸಕನಾದರು. 1967ರಲ್ಲಿ ಮತ್ತೆ ಆರ್.ಎಂ.ಪಾಟೀಲ್ (25,973) ಹಾಗು ಎಂ.ಕೆ.ಕುಲಕರ್ಣಿ (7,791) ಮುಖಾಮುಖಿಯಾದರು. ಕಾಂಗ್ರೆಸ್‌ನ ಪಾಟೀಲ್ 18,182 ಮತಗಳ ದೊಡ್ಡ ಅಂತರದಿಂದ ಚುನಾಯಿತರಾದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಧಾರವಾಡ: ಲಿಂಗಾಯತ ಏಕಸ್ವಾಮ್ಯದ ರಾಜಕಾರಣಕ್ಕೆ ಕೇಸರಿ ಖದರು!

ಸತತ ಮೂರು ಬಾರಿ ಎಮ್ಮೆಲ್ಲೆಯಾಗಿದ್ದ ಪಾಟೀಲರಿಗೆ 1972ರಲ್ಲಿ ಸಂಸ್ಥಾ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದ ಎಂ.ಕೆ.ಕುಲಕರ್ಣಿಯವರನ್ನು ಮಣಿಸಲು ಸಾಧ್ಯವಾಗಲಿಲ್ಲ. ನಿಕಟ ಸ್ಪರ್ಧೆಯಲ್ಲಿ ಕುಲಕರ್ಣಿ (21,716) ಕಾಂಗ್ರೆಸ್‌ನ ಪಾಟೀಲರನ್ನು 2,122 ಮತಗಳಿಂದ ಸೋಲಿಸಿ ಅಸೆಂಬ್ಲಿಗೆ ಪ್ರವೇಶ ಪಡೆದರು. 1978ರಲ್ಲಿ ಜನತಾ ಪಕ್ಷದ ಹುರಿಯಾಳಾಗಿದ್ದ ಶಾಸಕ ಕುಲಕರ್ಣಿ ಹಾಗು ಕಾಂಗೈನ ಹೊಸ ಮುಖ ಎಸ್.ವಿ.ಪಾಟೀಲ್ ಎಂಬ ಲಿಂಗಾಯತ ಎದುರಾಳಿಗಳ ನಡುವೆ ನಿಕಟ ಪೈಪೋಟಿ ನಡೆಯಿತು; ರೈತ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ತರುಣ ಬಿ.ಆರ್.ಯಾವಗಲ್ ಪಕ್ಷೇತರನಾಗಿ ಸೆಣಸಾಡಿ 9,014 ಓಟು ತೆಗೆದಿದ್ದು ಕಾಂಗ್ರೆಸ್ ವಿರೋಧಿ ಮತಗಳನ್ನು ವಿಭಜಿಸಿತು. ಹೀಗಾಗಿ ಜನತಾ ಪಕ್ಷದ ಕುಲಕರ್ಣಿ (20,205) ಕಾಂಗ್ರೆಸ್‌ನ ಪಾಟೀಲರಿಗೆ 2,620 ಮತಗಳಿಂದ ಮಣಿಯಬೇಕಾಗಿ ಬಂತು.

1983ರ ಚುನಾವಣೆಗೂ ಮೊದಲು ಜನತಾ ಪಾರ್ಟಿ ಬಿಟ್ಟು ಕಾಂಗ್ರೆಸ್ ಸೇರಿದ ಕುಲಕರ್ಣಿ ಆ ಪಕ್ಷದ ಟಿಕೆಟ್ ಪಡೆಯಲು ಯಶಸ್ವಿಯೂ ಆದರು. ಅಂದಿನ ಚುನವಣಾ ಕಾಳಗದಲ್ಲಿ ಜನತಾ ಪಕ್ಷದ ಎನ್.ಜೆ.ದೇಸಾಯಿ 13,857 ಮತಗಳನ್ನು ಪಡೆಯುವಷ್ಟರಲ್ಲೆ ಸುಸ್ತಾಗಿ ಹೋದರು. 254,524 ಓಟು ಗಳಿಸಿದ ಕುಲಕರ್ಣಿ 11,667 ಮತಗಳ ಭರ್ಜರಿ ಅಂತರದಿಂದ ಎರಡನೆ ಸಲ ಶಾಸಕ ಎನಿಸಿಕೊಂಡರು. 1985ರ ಜನತಾ ಗಾಳಿಯಲ್ಲಿ ಕುಲಕರ್ಣಿ ತತ್ತರಿಸಿಹೋದರು; ಜನತಾ ಕ್ಯಾಂಡಿಡೇಟ್ ಚಂದ್ರಕಾಂತ ಕಲ್ಲಣವರ್ (22,997) ಮತ್ತು ಕಾಂಗ್ರೆಸ್‌ನ ಕುಲಕರ್ಣಿ (23,469) ನಡುವೆ ಕತ್ತುಕತ್ತಿನ ಕಾದಾಟವೇ ನಡೆದುಹೋಯಿತು. ಲಿಂಗಾಯತರು ಜನತಾ ಪಕ್ಷದ ದಿಗ್ಗಜರಾದ ಎಸ್.ಆರ್.ಬೊಮ್ಮಾಯಿ-ಹೆಗಡೆ ಆಕರ್ಷಣೆಗೆ ಒಳಗಾಗಿದ್ದರಿಂದ ಕುಲಕರ್ಣಿಗೆ ಸ್ವಜಾತಿ ಮತ ಹೆಚ್ಚು ಸೆಳೆಯಲಾಗಲಿಲ್ಲ ಎನ್ನಲಾಗುತ್ತಿದೆ. ಅಂತೂ ಕೇವಲ 472 ಮತದಿಂದ ಬಚಾವಾದರು.

ಕೆ.ಎನ್.ಗಡ್ಡಿ

1989ರಲ್ಲಿ ಕಾಂಗ್ರೆಸ್ ಪಕ್ಷದ ಎಂ.ಕೆ.ಕುಲಕರ್ಣಿ (27,222), ರೈತ ಸಂಘದ ವಿ.ಎಲ್.ಮಂಕಣಿ (16,729) ಮತ್ತು ಜನತಾದಳದ ಚಂದ್ರಕಾಂತ ಕಲ್ಲಣ್ಣವರ್ (16,484) ನಡುವೆ ತ್ರಿಕೋನ ಕಾಳಗ ನಡೆಯಿತು. ಕಾಂಗ್ರೆಸ್ ವಿರೋಧಿ ಮತ ಬ್ಯಾಂಕ್ ರೈತ ಸಂಘ ಹಾಗು ಜನತಾ ದಳದಲ್ಲಿ ಹಂಚಿಹೋದರಿಂದ ಶಾಸಕ ಕುಲಕರ್ಣಿ 10,493 ಮತಗಳಿಂದ ನಿರಾಯಾಸವಾಗಿ ಗೆದ್ದುಬಂದರು. 1994ರಲ್ಲಿ ಬಂಗಾರಪ್ಪರ ಕೆಸಿಪಿಯಿಂದ ಕಣಕ್ಕಿಳಿದಿದ್ದ ಕುರುಬ ಸಮುದಾಯದ ಕೆ.ಎನ್.ಗಡ್ಡಿ 13,998, ಕಾಂಗ್ರೆಸ್ ಹುರಿಯಾಳು ಪಂಚಮಸಾಲಿ ಲಿಂಗಾಯತ ವರ್ಗದ ಎಂ.ಕೆ.ಕುಲಕರ್ಣಿ 10,650, ಜನತಾ ದಳದ ಬಿ.ಬಿ.ಗಾಣಿಗೇರ್ 10,537 ಮತ್ತು ರೈತ ಸಂಘದ ಈಶ್ವರ ಹೊಸಮನಿ 8,678 ಮತ ಪಡೆದರು. ಸಮಬಲದ ನಾಲ್ವರಲ್ಲಿ ಮತ ಹಂಚಿಕೆಯಾದರಿಂದ ಕೇವಲ 13,998 ಓಟು ಪಡೆದಿದ್ದ ಗಡ್ಡಿ 3,348 ಮತದಿಂದ ಶಾಸಕನಾಗಿದ್ದು ಅಚ್ಚರಿಮೂಡಿಸಿತ್ತು!

ಬಂಗಾರಪ್ಪ 1999ರ ಚುನಾವಣೆ ಹೊತ್ತಿಗೆ ತಮ್ಮ ಕೆಸಿಪಿಯನ್ನು ಕಾಂಗ್ರೆಸ್‌ನಲ್ಲಿ ವಿಲೀನ ಮಾಡಿದರು. ಹಾಗಾಗಿ ಮಾಜಿ ಶಾಸಕ ಕುಲಕರ್ಣಿಗೆ ಕಾಂಗ್ರೆಸ್ ಅಭ್ಯರ್ಥಿಯಾಗುವುದಕ್ಕೆ ಆಗಲಿಲ್ಲ; ಬಂಗಾರಪ್ಪ ತಮ್ಮ ಶಿಷ್ಯ ಗಡ್ಡಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದರು. ಸಮ ತೂಕದ ಐವರ ನಡುವೆ ರೋಚಕ ಜಿದ್ದಾಜಿದ್ದಿ ನಡೆಯಿತು. ಬಿಜೆಪಿ ಮೊದಲ ಬಾರಿ ಕ್ಷೇತ್ರದಲ್ಲಿ ಅಸ್ತಿತ್ವ ಪ್ರದರ್ಶಿಸಿತು. ಜನಪ್ರಿಯ ವೈದ್ಯರಾಗಿದ್ದ ಲಿಂಗಾಯತ ಜಾತಿಯ ಡಾ.ಆರ್.ಬಿ.ಶಿರಿಯಣ್ಣವರ್ ಕಮಲ ಚಿನ್ಹೆಗೆ 13,761 ಮತ ತಂದುಕೊಟ್ಟಿದ್ದರು. ಪಕ್ಷೇತರ ಅಭ್ಯರ್ಥಿಗಳಾದ ಎ.ಐ.ಕುಸಗಲ್ 13,036 ಓಟು ಪಡೆದರೆ ದೇಸಾಯಿಗೌಡ ಶಂಕರಗೌಡ ಪಾಟೀಲ್‌ಗೆ 10,021 ಓಟು ದಕ್ಕಿತು. ಜನತಾ ದಳದ ಬಿ.ಬಿ.ಗಂಗಾಧರಮಠ್‌ಗೆ 9,149 ಓಟುಬಂತು. ತನ್ನ ವಿರುದ್ಧ ಚಲಾವಣೆಯಾಗುತ್ತಿದ್ದ ಬಹುಸಂಖ್ಯಾತ ಲಿಂಗಾಯತರ ಮತಗಳು ನಾಲ್ವರು ಎದುರಾಳಿಗಳು ಹಂಚಿಕೊಂಡಿದ್ದರಿಂದ ಸ್ವಜಾತಿ ಕುರುಬ ಮತ್ತು ಮುಸ್ಲಿಮರ ಮತಗಳನ್ನು ಏಕಗಂಟಿನಲ್ಲಿ ಪಡೆದ ಕಾಂಗ್ರೆಸ್ ಕ್ಯಾಂಡಿಡೇಟ್ ಗಡ್ಡಿ (20,396), 6,365 ಮತಗಳ ಅಂತರದಿಂದ ಗೆದ್ದು ಎರಡನೆ ಸಲ ಶಾಸಕನಾಗಿ ಎಸ್.ಎಂ.ಕೃಷ್ಣ ಸರಕಾರದಲ್ಲಿ ಮಂತ್ರಿ ಭಾಗ್ಯವೂ ಕಂಡರೆಂದು ಅಂದಿನ ರಾಜಕೀಯ ಆಟ ಬಲ್ಲವರು ವಿವರಿಸುತ್ತಾರೆ.

ಲಿಂಗಾಯತ ಲೀಡರ್ ಯಡಿಯೂರಪ್ಪ

2004ರ ಚುನಾವಣೆ ಸಂದರ್ಭಲ್ಲಿ ಯಡಿಯೂರಪ್ಪ ಲಿಂಗಾಯತರ ರಾಜ್ಯ ನಾಯಕ ಮತ್ತು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅವತರಿಸಿದ್ದರು. ಶಾಸಕ ಗಡ್ಡಿಗೆ ಎಂಟಿ ಇನ್‌ಕಂಬೆನ್ಸ್ ಸುತ್ತಿಕೊಂಡಿತ್ತು. ರೈತ ಹೋರಾಟದ ಮುಂಚೂಣಿಯಲ್ಲಿದ್ದ ರೆಡ್ಡಿ ಲಿಂಗಾಯತ ಕೋಮಿನ ಎನ್.ಎಚ್.ಕೋನರಡ್ಡಿ ಜೆಡಿಎಸ್ ಉಮೇದುದಾರನಾಗಿದ್ದರು. ಮತ್ತದೆ ಬಹುಕೋನ ಜಿದ್ದಾಜಿದ್ದಿಗೆ ಆಖಾಡ ಹದಗೊಂಡಿತ್ತು. ಬಹುಸಂಖ್ಯಾತ ಲಿಂಗಾಯತ ಸಮೂಹ ಬಿಜೆಪಿ ಬೆನ್ನಿಗೆ ನಿಂತಿತ್ತು. ಈ ಕ್ಯಾಸ್ಟ್ ಕೆಮಿಸ್ಟ್ರಿಯಲ್ಲಿ ಬಿಜೆಪಿಯ ಡಾ.ಆರ್.ಬಿ.ಶಿರಿಯಣ್ಣವರ್ 30,195 ಮತಗಳಿಸಿ ಹತ್ತಿರದ ಎದುರಾಳಿ ಕಾಂಗ್ರೆಸ್‌ನ ಗಡ್ಡಿಯನ್ನು 3,839 ಮತಗಳಿಂದ ಮಣಿಸಿ ಆಯ್ಕೆಯಾದರು.

2008ರ ಅಸೆಂಬ್ಲಿ ಚುನಾವಣೆಗೆ ಪೂರ್ವದಲ್ಲಾದ ಕ್ಷೇತ್ರಗಳ ಡಿಲಿಮಿಟೇಶನ್‌ನಲ್ಲಿ ನವಲಗುಂದ ಕ್ಷೇತ್ರವನ್ನು ಬಿಜೆಪಿಗೆ ಅನುಕೂಲಕರವಾಗಿ ರಚಿಸಲಾಯಿತೆಂಬ ಮಾತು ಕೇಳಿಬರುತ್ತದೆ. ಗೆಲ್ಲುವ ಅವಕಾಶವಿದ್ದರೂ ಶಾಸಕ ಡಾ.ಶಿರಿಯಣ್ಣವರ್‌ಗೆ ಬಿಜೆಪಿಯ ಸ್ಥಳೀಯ ರಾಜಕಾರಣದ ಒಳಸುಳಿಯಿಂದಾಗಿ ಟಿಕೆಟ್ ಸಿಗಲಿಲ್ಲ. ಯಡಿಯೂರಪ್ಪರ ಕಟ್ಟಾ ಬೆಂಬಲಿಗರಾದ ಶಿರಿಯಣ್ಣವರ್‌ಅನ್ನು ಬದಿಗೆ ಸರಿಸಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಸಂಸದ ಪ್ರಹ್ಲಾದ್ ಜೋಶಿ ಹಿಂಬಾಲಕ ಶಂಕರ ಪಾಟೀಲ್ ಮುನೇನಕೊಪ್ಪ ಅಭ್ಯರ್ಥಿಯಾದರು. ಬಿಜೆಪಿಯ ಶಂಕರ ಪಾಟೀಲ್ (49,436), ಕಾಂಗ್ರೆಸ್‌ನ ಕೆ.ಎನ್.ಗಡ್ಡಿ (32,541) ಮತ್ತು ಜನತಾ ದಳದ ಕೋನರಡ್ಡಿ (30,263) ನಡುವೆ ತ್ರಿಕೋನ ಸಮರ ನಡೆಯಿತು. ಶಂಕರ್ ಪಾಟೀಲ್ 16,895 ಮತಗಳ ಅಂತರದಿಂದ ಗೆಲುವು ಸಾಧಿಸಿ ಶೆಟ್ಟರ್ ಮುಖ್ಯಮಂತ್ರಿಯಾದಾಗ ಸಂಸದೀಯ ಕಾರ್ಯದರ್ಶಿಯೂ ಆದರು.

ಎನ್.ಎಚ್.ಕೋನರಡ್ಡಿ

ಶಾಸಕ ಪಾಟೀಲ್ 2013ರಲ್ಲಿ ಜನತಾದಳದ ಕೋನರಡ್ಡಿಯವರಿಗೆ ಶರಣಾಗಬೇಕಾಯಿತು! ಜೆಡಿಎಸ್‌ನ ಕೋನರಡ್ಡಿ (44,448), ಬಿಜೆಪಿಯ ಪಾಟೀಲ್ (41,779) ಮತ್ತು ಕಾಂಗ್ರೆಸ್‌ನ ಗಡ್ಡಿ (30,780) ಸೆಣಸಾಟದಲ್ಲಿ ಯಡಿಯೂರಪ್ಪರ ಕೆಜೆಪಿಯ ಡಾ.ಶಿರಿಯಣ್ಣವರ್ ಅವರು 4,028 ಮತಗಳನ್ನು ಬಿಜೆಪಿ ಬುಟ್ಟಿಯಿಂದ ತೆಗೆದರು; ಹೀಗಾಗಿ ಬಿಜೆಪಿ ಹುರಿಯಾಳು 2,669 ಮತದಿಂದ ಸೋಲು ಅನುಭವಿಸಬೇಕಾಯಿತು ಎಂಬ ತರ್ಕ ನವಲಗುಂದದ ರಾಜಕೀಯ ಕಟ್ಟೆಯಲ್ಲಿದೆ. 2018ರ ಇಲೆಕ್ಷನ್ ಹೊತ್ತಿನಲ್ಲಿ ನವಲಗುಂದ ಕ್ಷೇತ್ರಕ್ಕೊಳಪಟ್ಟಿವರುವ ಹುಬ್ಬಳ್ಳಿ ತಾಲೂಕಿನ ಹೋಬಳಿಗಳಲ್ಲಾದ ಪ್ರಬಲ ಮತೀಯ ಧ್ರುವೀಕರಣದ ಜತೆಗೆ ಯಡಿಯೂರಪ್ಪ ಮತ್ತೆ ಸಿಎಂ ಆಗುತ್ತಾರೆಂದು ಸ್ಥಳೀಯ ಲಿಂಗಾಯತ ಮತಗಳು ಕ್ರೋಢೀಕರಣವಾಗಿದ್ದು ಬಿಜೆಪಿಯ ಶಂಕರ ಪಾಟೀಲರನ್ನು 20,521 ಮತಗಳ ಆಗಾಧ ಅಂತರದಲ್ಲಿ ಗೆಲ್ಲಿಸಿತು; ಜೆಡಿಎಸ್‌ನ ಕೋನರಡ್ಡಿ (45,197) ಮತ್ತು ಕಾಂಗ್ರೆಸ್ ಕ್ಯಾಂಡಿಡೇಟ್ ಕುರುಬ ಸಮುದಾಯದ ವಿನೋದ್ ಅಸೂಟಿ (38,906) ಪಡೆದ ಒಟ್ಟು ಮತಗಳು ಬಿಜೆಪಿ ಗಳಿಸಿದ ಮತಗಳಿಗಿಂತ ಜಾಸ್ತಿಯಿದೆಯಾದರೂ ಸೆಕ್ಯುಲರ್ ಮತಗಳು ಹರಿದು ಹಂಚಿಹೋದರಿಂದ ಬಿಜೆಪಿಗೆ ಲಾಭವಾಯಿತೆಂದು ವಿಶ್ಲೇಷಿಸಲಾಗುತ್ತಿದೆ.

ಕ್ಷೇತ್ರದ ಕತೆ-ವ್ಯಥೆ!

ನವಲಗುಂದ ಮತ್ತು ಅಣ್ಣಿಗೇರಿ ಅವಳಿ ತಾಲೂಕುಗಳು ಧಾರವಾಡ ಜಿಲ್ಲೆಯಲ್ಲಿ ತೀರ ಹಿಂದುಳಿದ ಪ್ರದೇಶ. ಉತ್ತರ ಕರ್ನಾಟಕದ ವಾಣಿಜ್ಯ ಕೇಂದ್ರ-ಸಾವಿರಾರು ಕೈಗಾರಿಕಾ ಮಹಾನಗರ ಹುಬ್ಬಳ್ಳಿಯಿಂದ 35 ಕಿ.ಮೀ.ದೂರದಲ್ಲಿರುವ ಈ ಎರಡೂ ತಾಲೂಕುಗಳಲ್ಲಿ ಕೃಷಿ ಕಾಯಕ ಬಿಟ್ಟರೆ ಬೇರೆ ಆರ್ಥಿಕ ಮೂಲವಿಲ್ಲ; ಶಿಕ್ಷಣ-ಆರೋಗ್ಯ-ಖರೀದಿ, ವಹಿವಾಟಿಗೆಲ್ಲ ಹುಬ್ಬಳ್ಳಿಗೆ ಓಡಬೇಕು. ವೃತ್ತಿಪರ ಅಥವಾ ಉನ್ನತ ಶಿಕ್ಷಣವಿರಲಿ ಸರಿಯಾದ ಪಿಯುಸಿ ಶಿಕ್ಷಣವೂ ಈ ತಾಲೂಕುಗಳಲ್ಲಿ ಸಿಗದಾಗಿದೆ. ಸೂರಿಲ್ಲದವರಿಗೆ ಮನೆ-ನಿವೇಶನ ಕೊಡಲಾಗುತ್ತಿಲ್ಲ; ರಸ್ತೆ, ಕುಡಿಯುವ ನೀರು, ಸಾರಿಗೆಯಂಥ ಮೂಲಭೂತ ಸೌಲಭ್ಯಗಳಿಗಾಗಿ ಹಾಹಾಕಾರವಿದೆ. ಬೋರ್‌ವೆಲ್ ಕೊರೆದರೆ ಸವಳು ನೀರು ಬರುತ್ತದೆ; ಮಲಪ್ರಭಾ ಕಾಲುವೆಗಳಲ್ಲಿ ಹರಿವ ನೀರು ದೈನಂದಿನ ಖರ್ಚಿಗೆ ಸಾಲುವುದಿಲ್ಲ; ಸ್ಥಳೀಯ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಮಂತ್ರಿಯೂ ಆಗಿದ್ದಾರೆ. ಶಾಸಕರು ಅಭಿವೃದ್ಧಿ ಆಗುತ್ತಿದ್ದಾರೆಯೆ ಹೊರತು ಕ್ಷೇತ್ರ ಮಾತ್ರ ನಿಂತಲ್ಲೇ ನಿಂತದೆ; ಶಾಸಕ-ಸಂಸದರ ಉದಾಸೀನದಿಂದ ಸಮಸ್ಯೆಗಳು ಹೆಚ್ಚುತ್ತಿವೆ ಎಂಬ ಆಕ್ರೋಶ ಕ್ಷೇತ್ರದಲ್ಲಿ ಸಾಮಾನ್ಯವಾಗಿದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶಿವಮೊಗ್ಗ: ಮತೋನ್ಮತ್ತ ರಣಕಣದಿಂದ ಈಶ್ವರಪ್ಪ ಕಡ್ಡಾಯ ನಿವೃತ್ತಿ?!

ಕೃಷಿಯೇ ಜೀವಾಳವಾಗಿರುವ ಈ ರೈತರ ಸೀಮೆಯ ದೊಡ್ಡ ಸಮಸ್ಯೆಯೆಂದರೆ, ವ್ಯವಸಾಯಕ್ಕೆ ಅನಿವಾರ್ಯವಾಗಿರುವ ಮಹದಾಯಿ ನೀರಿನ ದಶಕಗಳ ಬೇಡಿಕೆ ಈಡೇರದಿರುವುದು ಮತ್ತು ಹೊಲಕ್ಕೆ ಹೋಗಿಬರಲು ರಸ್ತೆ ಸಂಪರ್ಕ ಇಲ್ಲದಿರುವುದು. ಕಳಸಾ-ಬಂಡೂರಿಗಾಗಿ ರೈತರು ನಿರಂತರ ಹೋರಾಡುತ್ತಲೇ ಇದ್ದಾರೆ; ಹೊಲಗಳಿಗೆ ಹೋಗಿಬರಲು ರಸ್ತೆಯಿಲ್ಲದೆ ಕೃಷಿ ಕೆಲಸ-ಕಾರ್ಯ ಕಷ್ಟವಾಗಿದೆ; ಎತ್ತಿನ ಗಾಡಿ ಓಡಾಡುವಷ್ಟು ರಸ್ತೆ ನಿರ್ಮಿಸಿ ಎಂದು ರೈತರು ಅಧಿಕಾರಸ್ಥರಿಗೆ ದುಂಬಾಲು ಬೀಳತ್ತಲೇ ಇದ್ದಾರೆ. ಜನಪ್ರತಿನಿಧಿಗಳು ಬೇಡಿಕೆಗಳಿಗೆ ಕಿವಿ ಮುಚ್ಚಿ ಕುಳಿತಿದ್ದಾರೆಂಬ ಮಾತು ಕೇಳಿಬರುತ್ತಿದೆ. ಹುಬ್ಬಳ್ಳಿಯಲ್ಲಿ ಬೆಣ್ಣಹಳ್ಳ ಅಥವಾ ತುಪ್ಪರಿ ಹಳ್ಳಕ್ಕೆ ಪ್ರವಾಹ ಬಂದರೆ ಮುಳುಗುವುದು ನವಲಗುಂದ! ಈ ಬಾರಿಯ ಅತಿವೃಷ್ಟಿಯಲ್ಲಿ ಬಾಧಿತವಾದ ನವಲಗುಂದ-ಅಣ್ಣಿಗೇರಿಯ ಜನರಿಗಾದ ಹಾನಿಗೆ ಪರಿಹಾರ ಸಿಗದಾಗಿದೆ. ಪ್ರವಾಹದಲ್ಲಿ ಅಳಿದುಳಿದ ಹೆಸರು ಕಾಳಿನ ಖರೀದಿಗೆ ಸರಕಾರ ವ್ಯವಸ್ಥೆ ಮಾಡುತ್ತಿಲ್ಲ. ಹೆಸರು ಕಾಳು ಮಾರಾಟದಿಂದ ಬರುವ ಕಾಸನ್ನೇ ನಂಬಿಕೊಂಡಿದ್ದ ರೈತರೀಗ ಆಳುವವರ ಹೊಣೆಗೇಡಿತನದಿಂದ ಉಪವಾಸ-ವನವಾಸ ಅನುಭವಿಸುವಂತಾಗಿದೆ ಎಂದು ’ನ್ಯಾಯ ಪಥ’ಕ್ಕೆ ಅಸಾಯಕ ರೈತರೊಬ್ಬರು ಸಂಕಷ್ಟ ವಿವರಿಸಿದರು.

ವಿನೋದ್ ಅಸೂಟಿ

ನವಲಗುಂದದ ಹೋಬಳಿಯಾಗಿದ್ದ ಅಣ್ಣಿಗೇರಿ ಸ್ವತಂತ್ರ ತಾಲೂಕೆಂದು ಘೋಷಿಸಿ ವರ್ಷ ಐದು ಕಳೆಯುತ್ತ ಬಂದರೂ ತಾಲೂಕಾ ಕೇಂದ್ರಕ್ಕೆ ಬೇಕಾದ ಸೌಲಭ್ಯ-ಸೌಕರ್ಯ ಪ್ರಾಪ್ತವಾಗಿಲ್ಲ! ಜನರ ಪರದಾಟ ಶಾಸಕ-ಸಂಸದರ ಇಚ್ಛಾಶಕ್ತಿಯನ್ನು ಪ್ರತಿಬಿಂಬಿಸುತ್ತಿದೆ ಎಂದು ತಾಲೂಕು ರಚನೆಗೆ ಹೋರಾಟ ಮಾಡುತ್ತಿರುವವರೊಬ್ಬರು ಹೇಳುತ್ತಾರೆ. ಯುವಕರು ವಲಸೆ ಹೋಗುತ್ತಿದ್ದಾರೆ. ನಿರುದ್ಯೋಗಿಗಳು ಸ್ಥಳೀಯವಾಗಿ ಬದುಕು ಕಟ್ಟಿಕೊಳ್ಳಲು ನೆರವಾಗುವಂಥ ಉದ್ಯಮ-ಕೈಗಾರಿಕೆ ತರುವ ದೂರದರ್ಶಿತ್ವ ಜನಪ್ರತಿನಿಧಿಗಳಿಗೆ ಇಲ್ಲದಾಗಿದೆ. ನವಲಗುಂದದ ಸುಪ್ರಸಿದ್ಧ ನೆಲಹಾಸು, ಜಮಖಾನೆ ತಯಾರಿಕೆಯನ್ನು ಉದ್ಯಮವಾಗಿ ಬೆಳೆಸಿದರೆ ಒಂದಿಷ್ಟು ಕುಟುಂಬಗಳಿಗಾದರೂ ಆಧಾರ ಆಗುತಿತ್ತೆಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ.

ಟಿಕೆಟ್ ತಳಮಳ!

ನವಲಗುಂದ ಮತ್ತು ಅಣ್ಣಿಗೇರಿಯಲ್ಲಿ ಒಂದು ಸುತ್ತುಹೊಡೆದರೆ ಮಂತ್ರಿಯಾಗಿರುವ ಸ್ಥಳೀಯ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಜನರ ಬೇಸರ-ಅಸಮಧಾನಕ್ಕೆ ತುತ್ತಾಗಿರುವುದು ಗೊತ್ತಾಗುತ್ತದೆ. ಶಾಸಕ ಕ್ಷೇತ್ರವಾಸಿಗಳಿಗೆ ಸದಾ ನಾಟ್ ರೀಚೆಬಲ್; ತಮ್ಮ ಹುಬ್ಬಳ್ಳಿಯ ಬಿಸ್ನೆಸ್ ಹಾಗು ಅಧಿಕಾರದ ಐಭೋಗದಲ್ಲಿ ಮಗ್ನರಾಗಿದ್ದಾರೆ; ರೈತರಿಗೆ ಸ್ಪಂದಿಸುತ್ತಿಲ್ಲ; ಅಭಿವೃದ್ಧಿಯ ಐಡಿಯಾಗಳಿಲ್ಲ; ಜಾತಿವಾದಿ; ತನ್ನ ಗೆಲುವಿಗೆ ಕಾರಣರಾದ ದಲಿತರು ಮತ್ತು ಒಬಿಸಿಗಳನ್ನು ಕಡೆಗಣಿಸಿದ್ದಾರೆಂಬ ಆರೋಪ ಜೋರಾಗಿದೆ. ಆದರೆ ಪಾಟೀಲರಿಗೆ ಸೆಡ್ಡು ಹೊಡೆದು ಟಿಕೆಟ್ ಕೇಳುವ ಪ್ರಬಲ ಪ್ರತಿಸ್ಪರ್ಧಿ ಬಿಜೆಪಿಯಲ್ಲಿಲ್ಲ ಎನ್ನಲಾಗುತ್ತಿದೆ. ಜಿಲ್ಲಾ ಬಿಜೆಪಿ ಹೈಕಮಾಂಡ್ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿ ಮತ್ತು ಡೆಪ್ಯುಟಿ ಹೈಕಮಾಂಡ್ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೃಪಾಶ್ರಯದಲ್ಲಿರುವ ಪಾಟೀಲರಿಗೆ ಈ ಬಾರಿಯೂ ಕೇಸರಿ ಟಿಕೆಟ್ ಖಾತ್ರಿ ಎಂಬ ಸುದ್ದಿ ಸುಳಿದಾಡುತ್ತಿದೆ.

ಕಾಂಗ್ರೆಸ್ ಟಿಕೆಟ್‌ಗಾಗಿ ಐವರಲ್ಲಿ ಮುಸುಕಿನ ಗುದ್ದಾಟ ಶುರುವಾಗಿದೆ. ಕಾಂಗ್ರೆಸ್ ನವಲಗುಂದ ಟಿಕೆಟ್ ಕುರುಬರಿಗೆ ಕೊಡುವುದು ವಾಡಿಕೆಯಂತಾಗಿದೆ. ಆದರೆ ಸದ್ರಿ ನಿಯಮಕ್ಕೆ ಈ ಬಾರಿ ಬ್ರೇಕ್ ಬೀಳಲಿದೆ ಎಂಬ ಮಾತು ಕೇಳಿಬರುತ್ತಿದೆ. ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಅವಕಾಶ ಸಿಗುವ ಭರವಸೆ ಸಿದ್ದರಾಮಯ್ಯರಿಂದ ಪಡೆದೆ ಮಾಜಿ ಶಾಸಕ-ರಡ್ಡಿ ಲಿಂಗಾಯತ ವರ್ಗದ ಕೋನರಡ್ಡಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ; ಅವರ ಬೆನ್ನಿಗೆ ಕಾಂಗ್ರೆಸ್‌ನಲ್ಲಿ ಪ್ರಭಾವಿಯಾಗಿರುವ ಸ್ವಜಾತಿ ಬಂಧು ಎಚ್.ಕೆ.ಪಾಟೀಲರಿದ್ದಾರೆ ಎನ್ನಲಾಗುತ್ತಿದೆ.

ಕುರುಬ ಕೋಟಾದಲ್ಲಿ ಮಾಜಿ ಸಚಿವ ಕೆ.ಎನ್.ಗಡ್ಡಿ, ಕಳೆದ ಬಾರಿಯ ಪರಾಜಿತ ಅಭ್ಯರ್ಥಿ-ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ವಿನೋದ್ ಅಸೂಟಿ ಮತ್ತು ಕಾಂಗ್ರೆಸ್ ಟಿಕೆಟ್ ಸಿಗದಿದ್ದಾಗ ಬಂಡೆದ್ದು ಕಣಕ್ಕಿಳಿದು ಬಿಜೆಪಿಗೆ ನೆರವಾಗುತ್ತಾರೆ ಎಂಬ ಪ್ರತೀತಿಯ ಜಿಪಂ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ್ ಕ್ಯಾಂಡಿಡೇಟಾಗಲು ಪ್ರಯತ್ನ ನಡೆಸಿದ್ದಾರೆ; ಕುರುಬ ಸಮುದಾಯದ ಅಭ್ಯರ್ಥಿಗಳ ಕಚ್ಚಾಟದಲ್ಲಿ ತನಗೆ ಛಾನ್ಸ್ ಸಿಗಬಹುದೆಂಬ ನಿರೀಕ್ಷೆಯಲ್ಲಿ ಮಾಜಿಮಂತ್ರಿ ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿ ಇದ್ದಾರೆ. ಅಂತಿಮವಾಗಿ ಟಿಕೆಟ್ ಹಣಾಹಣಿ ಕೋನರಡ್ಡಿ ಮತ್ತು ವಿನೋದ್ ಅಸೂಟಿ ನಡುವೆ ನಡೆಯಲಿದ್ದು, ಯಾರೇ ಕಾಂಗ್ರೆಸ್ ಹುರಿಯಾಳಾದರೂ ಮಂತ್ರಿ ಶಂಕರ್ ಪಾಟೀಲ್‌ಗೆ ಕಷ್ಟವೆಂಬ ಚರ್ಚೆ ಕ್ಷೇತ್ರದಲ್ಲಿ ನಡೆಯುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಿಮಾಚಲ ಕಾಂಗ್ರೆಸ್​​ನಲ್ಲಿ ಎಲ್ಲವೂ ಸರಿಯಿದೆ: ಡಿಕೆ ಶಿವಕುಮಾರ್

0
ಬಣ ರಾಜಕೀಯದಿಂದ ಪತನವಾಗುವ ಹಂತ ತಲುಪಿದ್ದ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇದೆ ಎಂಬ ಸಂದೇಶವನ್ನು ಡಿ.ಕೆ ಶಿವಕುಮಾರ್ ರವಾನಿಸಿದ್ದಾರೆ. ಶಿಮ್ಲಾದಲ್ಲಿ ಗುರುವಾರ ಸಂಜೆ ವಿಕ್ರಮಾದಿತ್ಯ ಸಿಂಗ್ ಹಾಗೂ ಪ್ರತಿಭಾ ಸಿಂಗ್...