ಪ್ಯಾಲೆಸ್ತೀನ್ ಮೇಲಿನ ಇಸ್ರೇಲ್ ದಿಗ್ಬಂಧನವನ್ನು ಪ್ರತಿಭಟಿಸಿ ಮತ್ತು ಪ್ಯಾಲೆಸ್ತೀನಿ ಜನರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಉತ್ತರ ಆಫ್ರಿಕಾದ ದೇಶಗಳ ಸುಮಾರು 2,000 ಹೋರಾಟಗಾರರ ”ಸುಮುದ್ ಕ್ಯಾನ್ವಾಯ್” ಎಂದು ಕರೆಯಲ್ಪಡುವ ರ‍್ಯಾಲಿಯನ್ನು ಈಜಿಫ್ಟ್ ಅಧಿಕಾರಿಗಳು ತಡೆದಿದ್ದಾರೆ ಎಂದು ಗುರುವಾರ ವರದಿಯಾಗಿದೆ. ರ‍್ಯಾಲಿಯಲ್ಲಿ ಭಾಗವಹಿಸಲು ಆಗಮಿಸಿದ ಹಲವಾರು ವ್ಯಕ್ತಿಗಳನ್ನು ಈಜಿಪ್ಟ್ ಅಧಿಕಾರಿಗಳು ತಡೆದು ಕೈರೋ ವಿಮಾನ ನಿಲ್ದಾಣದಿಂದ ಅವರನ್ನು ಹಿಂದಿರುಗಿಸಿದ್ದು, ಆದರೆ ಈಗಾಗಲೇ ಈಜಿಪ್ಟ್ ಪ್ರದೇಶವನ್ನು ಪ್ರವೇಶಿಸಿದ್ದ ಇತರರನ್ನು ಗಡೀಪಾರು ಮಾಡಲಾಯಿತು ಎಂದು ಸ್ವತಂತ್ರ ಮಾಧ್ಯಮವಾದ ಮಾಡಾ ಮಸ್ರ್ ಹೇಳಿದೆ. ಗಾಝಾ ನೆರವಿಗೆ ಉತ್ತರ
ಪ್ಯಾಲೆಸ್ತೀನ್ ಮೇಲಿನ ಇಸ್ರೇಲ್ ದಿಗ್ಬಂಧನವನ್ನು ಪ್ರತಿಭಟಿಸಿ ಮತ್ತು ಪ್ಯಾಲೆಸ್ತೀನಿ ಜನರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವ ಸಾಂಕೇತಿಕ ಪ್ರಯತ್ನದ ಭಾಗವಾಗಿ ಉತ್ತರ ಆಫ್ರಿಕಾದ ದೇಶಗಳಾದ ಟುನೀಶಿಯಾ, ಅಲ್ಜೀರಿಯಾ, ಮೊರಾಕೊ, ಮಾರಿಟಾನಿಯಾ ಮತ್ತು ಲಿಬಿಯಾದ ಸುಮಾರು 2,000 ಹೋರಾಟಗಾರರನ್ನು ಹೊತ್ತ ಬಸ್‌ಗಳು ಮತ್ತು ಕಾರುಗಳ ”ಸುಮುದ್ ಕ್ಯಾನ್ವಾಯ್” ಸೋಮವಾರದಂದು ಹೊರಟಿತ್ತು.
ಇಸ್ರೇಲ್ ಆಕ್ರಮಿತ ಫ್ಯಾಲೆಸ್ತೀನ್‌ನ ರಫಾ ಮತ್ತು ಗಾಝಾಗೆ ನೆರವು ತಲುಪಿಸುವಲ್ಲಿ ವಿಫಲವಾಗಿರುವುದನ್ನು ಪ್ರತಿಭಟಿಸುವ ಉದ್ದೇಶವನ್ನು ಹೊಂದಿರುವ ಉತ್ತರ ಆಫ್ರಿಕಾದ ದೇಶಗಳ ಸ್ವಯಂಸೇವಕರ ಈ ರ‍್ಯಾಲಿಗೆ ವಿಶ್ವದಾದ್ಯಂತ ಜನರ ಬೆಂಬಲ ವ್ಯಕ್ತವಾಗಿದೆ. ಇಸ್ರೇಲ್ ವಿರೋಧದ ಹೊರತಾಗಿಯೂ ರ‍್ಯಾಲಿಯು ಬುಧವಾರ ಲಿಬಿಯಾ ಪ್ರದೇಶವನ್ನು ಪ್ರವೇಶಿಸಿತು.
ಈ ಬಗ್ಗೆ ಬುಧವಾರ ಪ್ರತಿಕ್ರಿಯಿಸಿದ್ದ ಪ್ಯಾಲೆಸ್ತೀನ್ ಆಕ್ರಮಿತ ಇಸ್ರೇಲ್‌ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ರ‍್ಯಾಲಿಯು ಗಾಝಾ ತಲುಪುವುದನ್ನು ತಡೆಯುವಂತೆ ಈಜಿಪ್ಟ್ ಅಧಿಕಾರಿಗಳನ್ನು ಒತ್ತಾಯಿಸಿದ್ದು, “ಈ ಹೆಜ್ಜೆಯನ್ನು ಅನುಮತಿಸಲಾಗುವುದಿಲ್ಲ” ಎಂದು ಒತ್ತಿ ಹೇಳಿದ್ದಾರೆ.
View this post on Instagram
ರ‍್ಯಾಲಿಯು ಜೂನ್ 12 ರೊಳಗೆ ಈಜಿಫ್ಟ್‌ನ ಕೈರೋ ತಲುಪಿ, ನಂತರ ಮರುದಿನ ಬಸ್ ಮೂಲಕ ಅಲ್-ಅರಿಶ್‌ಗೆ ಪ್ರತ್ಯೇಕ ಗುಂಪುಗಳಲ್ಲಿ ಪ್ರಯಾಣಿಸುವುದಾಗಿ ರ‍್ಯಾಲಿಯನ್ನು ಆಯೋಜಿಸಿದ್ದ ”ಗ್ಲೋಬಲ್ ಮಾರ್ಚ್ ಟು ಗಾಝಾ” ಹೇಳಿತ್ತು. ಅಲ್ಲಿಂದ ಭಾಗವಹಿಸುವವರು ರಫಾಗೆ 48 ಕಿಲೋಮೀಟರ್ ಮೆರವಣಿಗೆಯನ್ನು ಪ್ರಾರಂಭಿಸುತ್ತಾರೆ ಎಂದು ಅದು ಸೂಚಿಸಿದೆ. ಹೋರಾಟಗಾರರು ಜೂನ್ 15 ರಿಂದ 19 ರವರೆಗೆ ಸ್ವಲ್ಪ ಸಮಯ ಗಾಝಾದ ರಫಾದಲ್ಲಿ ಉಳಿದು ನಂತರ ಕೈರೋಗೆ ಹಿಂತಿರುಗಲು ಉದ್ದೇಶಿಸಿದ್ದು, ಅದಕ್ಕಾಗಿ ಈಜಿಪ್ಟ್ ಸರ್ಕಾರದಿಂದ ಅನುಮೋದನೆಗಾಗಿ ಕಾಯುತ್ತಿದ್ದಾರೆ ಎಂದು ತುರ್ಕಿಟುಡೆ ಹೇಳಿದೆ.
ಜೂನ್ 11 ರಂದು ಈಜಿಪ್ಟ್ ವಿದೇಶಾಂಗ ಸಚಿವಾಲಯವು, ಪ್ಯಾಲೆಸ್ತೀನಿ ಹಕ್ಕುಗಳನ್ನು ಬೆಂಬಲಿಸುವ ಮತ್ತು ಗಾಝಾದಲ್ಲಿ ಇಸ್ರೇಲಿ ಆಕ್ರಮಣವನ್ನು ಖಂಡಿಸುವ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ನಿಲುವುಗಳನ್ನು ಸ್ವಾಗತಿಸುವ ಅಧಿಕೃತ ಹೇಳಿಕೆಯನ್ನು ನೀಡಿತು. ಅದಾಗ್ಯೂ, ಈಜಿಪ್ಟ್ ಸಾರ್ವಭೌಮತ್ವವನ್ನು ಗೌರವಿಸುವ ಮತ್ತು ಭದ್ರತಾ ಅವಶ್ಯಕತೆಗಳನ್ನು ಪರಿಗಣಿಸುವ ಸಂದರ್ಭದಲ್ಲಿ, ವಿಶೇಷವಾಗಿ ವಿದೇಶಿ ಸಂದರ್ಶಕರಿಗೆ, ರಫಾ ಕ್ರಾಸಿಂಗ್ ಮತ್ತು ಗಡಿ ಪ್ರದೇಶಕ್ಕೆ ಭೇಟಿ ನೀಡಲು ಪೂರ್ವಾನುಮೋದನೆಗಳನ್ನು ಪಡೆಯುವುದು ಮೂಲಭೂತ ಷರತ್ತು ಎಂದು ಹೇಳಿಕೆ ಒತ್ತಿಹೇಳಿತ್ತು.
ಹೇಳಿಕೆ ಬಿಡುಗಡೆಯಾದ ಸ್ವಲ್ಪ ಸಮಯದ ನಂತರ, ಈಜಿಪ್ಟ್ ಅಧಿಕಾರಿಗಳು ”ಸುಮುದ್ ಕ್ಯಾನ್ವಾಯ್”ನಲ್ಲಿ ಭಾಗವಹಿಸುವ ಹಲವಾರು ಹೋರಾಟಗಾರರನ್ನು ಗಡೀಪಾರು ಮಾಡಲು ಪ್ರಾರಂಭಿಸಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ದೇಶವನ್ನು ಪ್ರವೇಶಿಸಲು ಅಗತ್ಯ ದಾಖಲೆಗಳು ಮತ್ತು ಅಧಿಕೃತ ಪರವಾನಗಿಗಳ ಕೊರತೆಯ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಈಜಿಫ್ಟ್ ಸರ್ಕಾರ ತನ್ನನ್ನು ಸಮರ್ಥಿಸಿಕೊಂಡಿದೆ.
ರ‍್ಯಾಲಿಯಲ್ಲಿ ಭಾಗವಹಿಸುವವರು ಈಜಿಪ್ಟ್‌ಗೆ ಬರದಂತೆ ತಡೆಯಲು ಸಂಬಂಧಪಟ್ಟ ದೇಶಗಳಲ್ಲಿನ ಸಂಬಂಧಿತ ಅಧಿಕಾರಿಗಳೊಂದಿಗೆ ಸಂವಹನ ನಡೆಸಲು ಸರ್ಕಾರ ಪ್ರಯತ್ನಿಸಿದೆ ಎಂದು ಸರ್ಕಾರಿ ಮೂಲವೊಂದನ್ನು ಉಲ್ಲೇಖಿಸಿ ಮಡಾ ಮಾಸ್ರ್ ವರದಿ ಮಾಡಿದೆ. ಸಾರ್ವಭೌಮತ್ವ ಮತ್ತು ಭದ್ರತಾ ಕಾರಣಗಳಿಂದಾಗಿ ಅವರಲ್ಲಿ ಯಾರಿಗೂ ರಫಾಗೆ ಹೋಗಲು ಅವಕಾಶವಿರುವುದಿಲ್ಲ ಎಂದು ಮೂಲವು ಹೇಳಿದೆ. ಈಜಿಫ್ಟ್ ವಿದೇಶಾಂಗ ಸಚಿವಾಲಯದ ಹೇಳಿಕೆಗೆ ಮುಂಚೆಯೇ, ಕೈರೋ ವಿಮಾನ ನಿಲ್ದಾಣದ ಅಧಿಕಾರಿಗಳು ಸಂಭಾವ್ಯ ಭಾಗವಹಿಸುವವರಲ್ಲಿ ಕೆಲವರನ್ನು ಬಂಧಿಸಿ ಹಿಂದಿರುಗಿಸಲು ಪ್ರಾರಂಭಿಸಿದ್ದರು, ಆದರೆ ಈಗಾಗಲೇ ದೇಶದೊಳಗೆ ಇದ್ದ ಇತರರನ್ನು ಗಡೀಪಾರು ಮಾಡಲಾಯಿತು ಎಂದು ವರದಿ ಹೇಳಿದೆ.
View this post on Instagram
ಈಜಿಪ್ಟ್ ಭದ್ರತಾ ಪಡೆಗಳು ಗುರುವಾರ ಬೆಳಿಗ್ಗೆಯಿಂದ ಕೈರೋ ವಿಮಾನ ನಿಲ್ದಾಣದಲ್ಲಿ ಮೂವರು ವಕೀಲರು ಸೇರಿದಂತೆ 40 ಅಲ್ಜೀರಿಯಾದ ನಾಗರಿಕರನ್ನು ಬಂಧಿಸಿವೆ ಎಂದು ಅಲ್ಜೀರಿಯಾದ ವಕೀಲರಾದ ಫಾತಿಹಾ ರೂಯಿಬಿ ಆರೋಪಿಸಿದ್ದಾರೆ. ಅದೇ ರೀತಿ, ಮೊರೊಕ್ಕೊದ ಹತ್ತುಕ್ಕೂ ಹೆಚ್ಚು ಹೋರಾಟಗಾರರನ್ನು ಗಡೀಪಾರು ಮಾಡಿದ್ದಾರೆ ಎಂದು ವರದಿಯಾಗಿದ್ದು, ಜೊತೆಗೆ ಹಲವಾರು ಟರ್ಕಿಶ್ ನಾಗರಿಕರನ್ನು ಗಡೀಪಾರು ಮಾಡಲಾಗಿದೆ ಎಂದು ಅದು ತಿಳಿಸಿದೆ.
ಈಜಿಪ್ಟ್ ಸಾರ್ವಭೌಮತ್ವಕ್ಕೆ ಗೌರವ: ಪುನರುಚ್ಚರಿಸಿದ ಸಂಘಟಕರು
ಈ ನಡುವೆ ಗುರುವಾರದ ಪತ್ರಿಕಾಗೋಷ್ಠಿಯಲ್ಲಿ, 35 ಕ್ಕೂ ಹೆಚ್ಚು ದೇಶಗಳಿಂದ ಸುಮಾರು 4,000 ಹೋರಾಟಗಾರರನ್ನು ಕಾಲ್ನಡಿಗೆಯಲ್ಲಿ ರಫಾ ಕ್ರಾಸಿಂಗ್‌ಗೆ ಕರೆತರುವುದು, ಗಾಝಾದ ಮೇಲಿನ ಯುದ್ಧವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸುವುದು ಮತ್ತು ಸಾವಿರಾರು ನೆರವು ಟ್ರಕ್‌ಗಳಿಗೆ ಪ್ರವೇಶವನ್ನು ಅನುಮತಿಸುವುದು ತಮ್ಮ ಗುರಿಯಾಗಿದೆ ಎಂದು ಪುನರುಚ್ಚರಿಸಿದ್ದಾರೆ. ಇಸ್ರೇಲ್ ಮೇಲೆ ನಿರ್ಬಂಧಗಳನ್ನು ವಿಧಿಸಲು ತಮ್ಮ ಸರ್ಕಾರಗಳ ಮೇಲೆ ಒತ್ತಡ ಹೇರುವ ಗುರಿಯನ್ನು ಸಹ ಅವರು ಹೊಂದಿದ್ದಾರೆ.
ಸಂಘಟಕರು ಈಜಿಪ್ಟ್‌ನ ಭದ್ರತಾ ಆತಂಕಗಳನ್ನ ಗೌರವಿಸುವುದಾಗಿ ಹೇಳಿದ್ದು, ತಮ್ಮ ಮೆರವಣಿಗೆಯು ಈಜಿಪ್ಟ್‌ಗೆ ಯಾವುದೇ ಬೆದರಿಕೆಯನ್ನುಂಟುಮಾಡುವುದಿಲ್ಲ ಮತ್ತು ಕದನ ವಿರಾಮಕ್ಕಾಗಿ ಈಜಿಫ್ಟ್‌ನ ನಿಲುವಿಗೆ ತಮ್ಮ ಪ್ರಯತ್ನಗಳು ಹೊಂದಿಕೆಯಾಗುತ್ತದೆ ಎಂದು ಸ್ಪಷ್ಟಪಡಿಸುವ ಅಧಿಕೃತ ಪತ್ರಗಳನ್ನು ಈಜಿಪ್ಟ್ ಸರ್ಕಾರಕ್ಕೆ ಕಳುಹಿಸಿದ್ದೇವೆ ಎಂದು ಒತ್ತಿ ಹೇಳಿದ್ದಾರೆ. ಈಜಿಪ್ಟ್‌ನ ಆಂತರಿಕ ವಿಷಯಗಳಿಗೆ ಸಂಬಂಧಿಸಿ ಪ್ರತಿಕ್ರಿಯಿಸಿ, ಈಜಿಪ್ಟ್ ನಿಯೋಗಗಳನ್ನು ಮೆರವಣಿಗೆಯಿಂದ ಹೊರಗಿಡುವ ತಮ್ಮ ಬದ್ಧತೆಯನ್ನು ಅವರು ಒತ್ತಿ ಹೇಳಿದ್ದಾರೆ.
ಪಶ್ಚಿಮ ದೇಶಗಳ ಈ ಸುಮುದ್ ಕ್ಯಾನ್ವಾಯ್ ಸೋಮವಾರ ಟುನೀಶಿಯಾದ ರಾಜಧಾನಿಯಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿತು ಮತ್ತು ಮಂಗಳವಾರದ ವೇಳೆಗೆ ಲಿಬಿಯಾದ ನಗರವಾದ ಜಾವಿಯಾವನ್ನು ತಲುಪಿದೆ. ಈಜಿಫ್ಟ್ ಮತ್ತು ಇಸ್ರೇಲ್ ಆಕ್ರಮಿತ ಪ್ಯಾಲೆಸ್ತೀನ್‌ನ ರಫಾ ಗಡಿಯ ಮೂಲಕ ಗಾಝಾ ತಲುಪುವ ಉದ್ದೇಶದಿಂದ ಹೊರಟಿರುವ ಈ ರ‍್ಯಾಲಿ ಲಿಬಿಯಾ ಮತ್ತು ಈಜಿಪ್ಟ್ ಮೂಲಕ ಮುಂದುವರಿಯುತ್ತದೆ ಎಂದು ಸಂಘಟಕರು ಹೇಳಿದ್ದರು.
View this post on Instagram
ಜೂನ್ ಒಂದರಂದು ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ ಎಂಬ ಅಂತಾರಾಷ್ಟ್ರೀಯ ಹೋರಾಟಗಾರರ ಗುಂಪೊಂದು ಇಟಲಿಯ ಸಿಸಿಲಿಯ ಬಂದರಿನಿಂದ ಮೆಡಿಟರೇನಿಯನ್ ಸಮುದ್ರದಲ್ಲಿ ಗಾಝಾಕ್ಕೆ ಹಡಗಿನ ಮೂಲಕ ಹೊರಟಿತ್ತು. ಸುಮಾರು ಎಂಟು ದಿನಗಳ ಪ್ರಯಾಣದಲ್ಲಿ ಗಾಝಾ ತೀರಕ್ಕೆ 150 ಕಿ.ಮಿ. ದೂರದಲ್ಲಿ ಅಂತಾರಾಷ್ಟ್ರೀಯ ಜಲ ಪ್ರದೇಶದಲ್ಲಿ ಇರುವಾಗ ಇಸ್ರೇಲ್ ಹಡಗು ಮತ್ತು ಅದರಲ್ಲಿದ್ದ ಹೋರಾಟಗಾರರನ್ನು ಅಪಹರಣ ಮಾಡಿ, ಇಸ್ರೇಲ್‌ಗೆ ಕೊಂಡೊಯ್ದು ಗಡಿಪಾರು ಮಾಡಿತ್ತು.
ಗಾಝಾದ ಆರೋಗ್ಯ ಸಚಿವಾಲಯದ ಪ್ರಕಾರ, ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಹತ್ಯಾಕಾಂಡದಲ್ಲಿ ಕನಿಷ್ಠ 54,927 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಮತ್ತು 126,615 ಜನರು ಗಾಯಗೊಂಡಿದ್ದಾರೆ. ಅಕ್ಟೋಬರ್ 7, 2023 ರಂದು ಹಮಾಸ್ ನೇತೃತ್ವದ ದಾಳಿಯ ಸಮಯದಲ್ಲಿ ಇಸ್ರೇಲ್‌ನಲ್ಲಿ ಅಂದಾಜು 1,139 ಜನರು ಸಾವನ್ನಪ್ಪಿದ್ದಾರೆ ಮತ್ತು 200 ಕ್ಕೂ ಹೆಚ್ಚು ಜನರನ್ನು ಸೆರೆಹಿಡಿಯಲಾಗಿದೆ. ಜೊತೆಗೆ ಗಾಝಾದ ಮೇಲೆ ದಿಗ್ಬಂಧನ ಹೇರಿರುವ ಇಸ್ರೇಲ್ ಕಳೆದ ಎರಡು ತಿಂಗಳಿನಿಂದ ಅಲ್ಲಿನ ಜನರಿಗೆ ಆಹಾರ, ವೈದ್ಯಕೀಯ ನೆರವುಗಳನ್ನು ನಿರಾಕರಿಸುತ್ತಿವೆ. ಸುಮಾರು 20 ಲಕ್ಷ ಜನರಿರುವ ಪ್ರದೇಶದಲ್ಲಿ ಲಕ್ಷಾಂತರ ಜನರು ಹಸಿವನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ಸಂಘಟನೆಗಳು ಎಚ್ಚರಿಸಿವೆ. ಗಾಝಾ ನೆರವಿಗೆ ಉತ್ತರ


