ಗಾಝಾ ಜನತೆಗೆ ಮಾನವೀಯ ನೆರವು ಹೊತ್ತು ತೆರಳಿದ್ದ ‘ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ (FFC)’ದ ನೆರವು ಹಡಗು ‘ಮದ್ಲೀನ್’ ಅನ್ನು ಇಸ್ರೇಲ್ ವಶಕ್ಕೆ ಪಡೆದಿದೆ ಎಂದು ವರದಿಯಾಗಿದೆ.
ಗಾಝಾ ಕಡಲ ತೀರಕ್ಕೆ ತಲುಪಲು ಕೇವಲ 100 ಮೈಲಿ (161 ಕಿ.ಮೀ) ದೂರ ಇರುವಾಗ, ಅಂತಾರಾಷ್ಟ್ರೀಯ ಜಲ ಪ್ರದೇಶದಲ್ಲಿ ಇಸ್ರೇಲಿ ಕಮಾಂಡೋಗಳು ಮದ್ಲೀನ್ ಹಡಗನ್ನು ವಶಕ್ಕೆ ಪಡೆದಿದ್ದು, ಸಿಬ್ಬಂದಿ ಸಹಿತ ಹಡಗನ್ನು ಇಸ್ರೇಲ್‌ನತ್ತ ಕರೆದೊಯ್ಯಲಾಗಿದೆ ಎಂದು ಸುದ್ದಿ ಸಂಸ್ಥೆ aljazeera.com ಸೋಮವಾರ (ಜೂ.9) ವರದಿ ಮಾಡಿದೆ.
ಗಾಝಾಗೆ ಅಗತ್ಯ ಸಾಮಗ್ರಿಗಳನ್ನು ಹೊತ್ತ ಟ್ರಕ್‌ಗಳು ಪ್ರವೇಶಿಸದಂತೆ ಇಸ್ರೇಲ್ ತಡೆಯೊಡ್ಡಿದೆ. ಇದರಿಂದ ಅಲ್ಲಿನ ಜನರು ಆಹಾರ, ನೀರು ಸಿಗದೆ ಪರದಾಡುತ್ತಿದ್ದಾರೆ. ಹಾಗಾಗಿ, ಸಮುದ್ರ ಮಾರ್ಗದ ಮೂಲಕ ಆಹಾರ, ನೀರು, ವೈದ್ಯಕೀಯ ಸಾಮಗ್ರಿಗಳು ಸೇರಿದಂತೆ ಅಗತ್ಯ ಮಾನವೀಯ ನೆರವು ಹೊತ್ತು ಮದ್ಲೀನ್ ಹಡಗು ಜೂನ್ 1ರಂದು ಇಟಲಿಯ ಸಿಸಿಲಿಯಿಂದ ಹೊರಟಿತ್ತು.
ಅಂತಾರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್, ಫ್ರೆಂಚ್ ಸಂಸದೆ ರಿಮಾ ಹಸನ್ ಸೇರಿದಂತೆ ಇತರರು ಹಡಗಿನಲ್ಲಿ ಇದ್ದರು.
ಮದ್ಲೀನ್ ಹಡಗನ್ನು ಇಸ್ರೇಲಿ ಪಡೆ ಅಪಹರಣ ಮಾಡಿದೆ ಎಂದು ಫ್ರೀಡಂ ಫ್ಲೋಟಿಲ್ಲಾ ಆರೋಪಿಸಿದೆ. ಫೇಸ್‌ಬುಕ್‌ನಲ್ಲಿ ಗ್ರೆಟಾ ಥನ್‌ಬರ್ಗ್, ರಿಮಾ ಹಸನ್ ಸೇರಿದಂತೆ ಹಡಗಿನಲ್ಲಿದ್ದವರ ಹೇಳಿಕೆಗಳ ವಿಡಿಯೋಗಳನ್ನು ಸರಣಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಪ್ರತಿಯೊಬ್ಬರ ವಿಡಿಯೋದಲ್ಲಿಯೂ ಅವರ ದೇಶವನ್ನು ಉಲ್ಲೇಖಿಸಿ, ಆಯಾ ದೇಶದ ವಿದೇಶಾಂಗ ಇಲಾಖೆ ಮೂಲಕ ನಮಗೆ ಸಹಾಯ ಮಾಡಿ ಎಂದು ಕೋರಿದೆ.
ವಿಡಿಯೋಗಳಲ್ಲಿ ಮಾತನಾಡಿದವರೂ ಕೂಡ “ನಾನು ನಿರ್ದಿಷ್ಟ ದೇಶದ ಪ್ರಜೆ, ನನ್ನನ್ನು ಇಸ್ರೇಲಿ ಪಡೆ ಅಪಹರಣ ಮಾಡಿದೆ. ಇಸ್ರೇಲ್ ಸರ್ಕಾರದ ಮೇಲೆ ಒತ್ತಡ ಹಾಕಿ ನನ್ನನ್ನು ಬಿಡುಗಡೆ ಮಾಡಿಸಲು ನಮ್ಮ ಸರ್ಕಾರಕ್ಕೆ ಹೇಳಿ ಎಂದು ಕೋರಿದ್ದಾರೆ.
ಬಿಬಿಸಿ, ಅಲ್-ಜಝೀರಾ ಸೇರಿದಂತೆ ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಗಳಲ್ಲಿ, ಲೈಫ್ ಜಾಕೆಟ್ ತೊಟ್ಟ ಹಲವು ಜನರು ತಮ್ಮ ಕೈಗಳನ್ನು ಮೇಲೆತ್ತಿ ಕುಳಿತಿರುವ ಫೋಟೋ ಇದೆ. ಇದು ಇಸ್ರೇಲಿ ಪಡೆ ಮದ್ಲೀನ್ ಹಡಗಿನಲ್ಲಿದ್ದವರನ್ನು ವಶಕ್ಕೆ ಪಡೆದ ಫೋಟೋ ಎಂದು ಹೇಳಲಾಗ್ತಿದೆ.
ಮದ್ಲೀನ್ ಹಡಗನ್ನು ಇಸ್ರೇಲಿ ಪಡೆ ವಶಕ್ಕೆ ಪಡೆದಿದೆ ಎಂದು ಆರೋಪಿಸಿದ್ದ ಫ್ರೀಡಂ ಫ್ಲೋಟಿಲ್ಲಾ ಭಾನುವಾರ ಟೆಲಿಗ್ರಾಂನಲ್ಲಿ ಈ ಫೋಟೋ ಹಂಚಿಕೊಂಡಿತ್ತು ಎಂದು ವರದಿಯಾಗಿದೆ.
ಎಲ್ಲರೂ ಸುರಕ್ಷಿತ ಎಂದ ಇಸ್ರೇಲ್
ಹಡಗಿನಲ್ಲಿದ್ದ ಎಲ್ಲ ಯಾತ್ರಿಕರು ಸುರಕ್ಷಿತರಾಗಿದ್ದಾರೆ. ಯಾವುದೇ ಹಾನಿಗೊಳಗಾಗಿಲ್ಲ. ಅವರಿಗೆ ಸ್ಯಾಂಡ್‌ವಿಚ್ ಮತ್ತು ನೀರು ಕೊಡಲಾಗಿದೆ ಎಂದು ಸೋಮವಾರ ಮುಂಜಾನೆ (ಭಾರತೀಯ ಕಾಲಮಾನ) ಇಸ್ರೇಲ್ ವಿದೇಶಾಂಗ ಇಲಾಖೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿದೆ.
All the passengers of the ‘selfie yacht’ are safe and unharmed. They were provided with sandwiches and water. The show is over. pic.twitter.com/tLZZYcspJO
— Israel Foreign Ministry (@IsraelMFA) June 9, 2025
ಗ್ರೆಟಾ ಥನ್‌ಬರ್ಗ್ ಅವರ ಫೋಟೋ ಹಂಚಿಕೊಂಡಿರುವ ವಿದೇಶಾಂಗ ಇಲಾಖೆ, ಗ್ರೆಟಾ ಇಸ್ರೇಲ್ ಕಡೆ ಪ್ರಯಾಣಿಸುತ್ತಿದ್ದಾರೆ. ಅವರು ಸುರಕ್ಷಿತರಾಗಿದ್ದಾರೆ ಮತ್ತು ಉತ್ಸಾಹದಲ್ಲಿದ್ದಾರೆ ಎಂದು ಬರೆದುಕೊಂಡಿದೆ.
Greta Thunberg is currently on her way to Israel, safe and in good spirits. pic.twitter.com/pjWSr0lOsE
— Israel Foreign Ministry (@IsraelMFA) June 9, 2025
ಅಕ್ರಮ ವಲಸಿಗರೆಂದು ಭಾರತೀಯರ ಗಡಿಪಾರು?..ಅಸ್ಸಾಂನಲ್ಲಿ ಆಗುತ್ತಿರುವುದೇನು?