ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನರು ಸಾವಿಗೀಡಾದ ಮೂರು ದಿನಗಳ ನಂತರ, ವಿಧಾನಸೌಧ ಮುಂಭಾಗ ಆರ್‌ಸಿಬಿ ಆಟಗಾರರ ಸನ್ಮಾನ ಕಾರ್ಯಕ್ರಮ ಆಯೋಜಿಸಿದರೆ ಭದ್ರತೆ ಒದಗಿಸುವುದು ಸವಾಲಾಗಬಹುದು ಎಂದು ವಿಧಾನಸೌಧದ ಭದ್ರತಾ ಮುಖ್ಯಸ್ಥರು ಪತ್ರ ಬರೆದಿದ್ದರು ಎಂದು ವರದಿಯಾಗಿದೆ.
ರಾಜ್ಯ ಸರ್ಕಾರವನ್ನು ಉದ್ದೇಶಿಸಿ ಬರೆದಿರುವ ಪತ್ರದಲ್ಲಿ, ಸನ್ಮಾನ ಕಾರ್ಯಕ್ರಮವು ಗಂಭೀರ ಭದ್ರತಾ ಸವಾಲುಗಳನ್ನು ಒಡ್ಡುತ್ತದೆ ಮತ್ತು ಸಾರ್ವಜನಿಕರನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಎಚ್ಚರಿಸಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳ ವಿರೋಧದ ಹೊರತಾಗಿಯೂ, ಕಾರ್ಯಕ್ರಮವನ್ನು ನಡೆಸಲಾಯಿತು ಎಂದು ವರದಿಗಳು ಹೇಳಿವೆ.
ಜೂನ್ 4ರಂದು ಬರೆದ ಪತ್ರದಲ್ಲಿ, ಉಪ ಪೊಲೀಸ್ ಆಯುಕ್ತ (ವಿಧಾನಸೌಧ ಭದ್ರತೆ) ಎಂ.ಎನ್ ಕರಿಬಸವನ ಗೌಡ ಅವರು ಸಿಬ್ಬಂದಿ ಕೊರತೆ ಮತ್ತು ಜನಸಂದಣಿಯನ್ನು ನಿರ್ವಹಿಸುವಲ್ಲಿನ ಸವಾಲುಗಳ ಬಗ್ಗೆ ಎಚ್ಚರಿಸಿದ್ದರು ಎನ್ನಲಾಗಿದೆ.
“ಆರ್‌ಸಿಬಿಗೆ ದೇಶದಾದ್ಯಂತ ಅಭಿಮಾನಿಗಳಿದ್ದಾರೆ. ನಾವು ಗ್ರ್ಯಾಂಡ್ ಸ್ಟೆಪ್‌ಗಳ ಮೇಲೆ ಕಾರ್ಯಕ್ರಮವನ್ನು ಆಯೋಜಿಸಿದರೆ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳು ವಿಧಾನಸೌಧದಲ್ಲಿ ಸೇರಬಹುದು. ಭದ್ರತಾ ಸಿಬ್ಬಂದಿ ಕೊರತೆಯಿರುವುದರಿಂದ, ಸರಿಯಾದ ಬಂದೋಬಸ್ತ್ ವ್ಯವಸ್ಥೆ ಮಾಡುವುದು ಸವಾಲಿನ ಕೆಲಸವಾಗಿರುತ್ತದೆ” ಎಂದು ಕರಿಬಸವನ ಗೌಡ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಜಿ. ಸತ್ಯವತಿ ಮತ್ತು ಇತರ ಉನ್ನತ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು ಎಂದು ವರದಿಗಳು ವಿವರಿಸಿವೆ.
ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಜೂನ್ 3ರಂದು ಬೆಳಿಗ್ಗೆ 4 ಗಂಟೆಯವರೆಗೆ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿದ್ದರು. ಆ ಬಳಿಕ ಕಡಿಮೆ ಅವಧಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸುವುದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ.
ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಬಿ. ದಯಾನಂದ, ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ) ವಿಕಾಸ್ ಕುಮಾರ್, ಉಪ ಪೊಲೀಸ್ ಆಯುಕ್ತ (ಕೇಂದ್ರ) ಶೇಖರ್ ಎಚ್.ಟಿ ಮತ್ತು ಇತರ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಕಾರ್ಯದರ್ಶಿ ಮತ್ತು ಖಜಾಂಚಿ ನೈತಿಕ ಹೊಣೆ ಹೊತ್ತು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ಕಾಲ್ತುಳಿತ ದುರಂತ ನಡೆದ ದಿನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಸರ್ಕಾರದ ವತಿಯಿಂದ ವಿಧಾನಸೌಧದ ಮುಂಭಾಗದಲ್ಲಿ ಕಾರ್ಯಕ್ರಮ ಆಯೋಜಿಸಿದ್ದೆವು. ಅಲ್ಲಿ 1 ಲಕ್ಷದಷ್ಟು ಜನರು ಸೇರಿದ್ದರು. ಆದರೂ, ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಕಾಲ್ತುಳಿತ ಅವಘಡ ನಡೆದಿರುವುದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ, ಅಲ್ಲಿ ಸರ್ಕಾರ ಕಾರ್ಯಕ್ರಮ ಆಯೋಜಿಸಿರಲಿಲ್ಲ ಎಂದಿದ್ದರು.
ವಿಧಾನಸೌಧದ ಮುಂಭಾಗದ ಕಾರ್ಯಕ್ರಮದ ವೇಳೆ ಆರ್‌ಸಿಬಿ ಅಭಿಮಾನಿಗಳು ಭದ್ರತಾ ಬೇಲಿಯನ್ನು ದಾಟಿ ಒಳ ಹೋಗಿದ್ದರು. ಮುಂಭಾಗದ ಗಣ್ಯರ ಪ್ರತಿಮೆ, ಮೆಟ್ರೋ ಸ್ಟೇಷನ್ ಛಾವಣಿ, ದಾರಿದೀಪ, ಮರ, ರಸ್ತೆಯಲ್ಲಿ ತೆರಳುತ್ತಿದ್ದ ವಾಹನಗಳು, ವಿಶೇಷವಾಗಿ ಹೈಕೋರ್ಟ್ ಕಟ್ಟಡದ ಮೇಲೇರಿದ್ದರು. ಪರಿಣಾಮ, ವಿಧಾನಸೌಧದ ಮುಂಭಾಗದ ಭದ್ರತಾ ಬೇಲಿ, ಆಲಂಕಾರಿಕ ಹೂವಿನಗಿಡಗಳಿಗೆ ಹಾನಿಯಾಗಿದೆ. ಹೈಕೋರ್ಟ್‌ನ ಭದ್ರತೆ ಉಲ್ಲಂಘನೆಯಾಗಿರುವ ಬಗ್ಗೆ ಆರೋಪ ಕೇಳಿ ಬಂದಿದೆ.
ಜಾಮೀನು ರದ್ದು: ಮತ್ತೆ ಜೈಲು ಸೇರುವ ಭೀತಿಯಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ