Homeಕರ್ನಾಟಕಜಾಮೀನು ರದ್ದು: ಮತ್ತೆ ಜೈಲು ಸೇರುವ ಭೀತಿಯಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ

ಜಾಮೀನು ರದ್ದು: ಮತ್ತೆ ಜೈಲು ಸೇರುವ ಭೀತಿಯಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ

- Advertisement -
- Advertisement -

ಬಿಜೆಪಿ ಮುಖಂಡ, ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ್‌ಗೌಡ ಗೌಡ ಅವರ ಕೊಲೆ ಪ್ರಕರಣದ ಆರೋಪಿ ಧಾರವಾಡ ಕ್ಷೇತ್ರದ ಕಾಂಗ್ರೆಸ್‌ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ (ಜೂ.6) ರದ್ದುಪಡಿಸಿದೆ. ಇದರಿಂದ ವಿನಯ್ ಕುಲಕರ್ಣಿಗೆ ಮತ್ತೆ ಜೈಲು ಸೇರುವ ಭೀತಿ ಶುರುವಾಗಿದೆ.

ಪ್ರಕರಣದ ಸಾಕ್ಷಿಗಳನ್ನು ಸಂಪರ್ಕಿಸಲು ಹಾಗೂ ಅವರ ಮೇಲೆ ಪ್ರಭಾವ ಬೀರಲು ವಿನಯ್ ಕುಲಕರ್ಣಿ ಹಾಗೂ ಮತ್ತೊಬ್ಬ ಆರೋಪಿ ಪ್ರಯತ್ನಿಸಿದ್ದಾರೆ. ವಿಶ್ವಾಸಾರ್ಹ ಪುರಾವೆಗಳಿಂದ ಇದು ದೃಢಪಟ್ಟಿದೆ. ಷರತ್ತುಗಳ ಉಲ್ಲಂಘನೆಯಾಗಿರುವ ಕಾರಣ ಜಾಮೀನನ್ನು ರದ್ದುಪಡಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್‌ ಹಾಗೂ ಸತೀಶ್ಚಂದ್ರ ಶರ್ಮಾ ಅವರಿದ್ದ ಪೀಠ, ಒಂದು ವಾರದ ಒಳಗಾಗಿ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗುವಂತೆ ವಿನಯ್ ಕುಲಕರ್ಣಿ ಅವರಿಗೆ ನಿರ್ದೇಶನ ನೀಡಿದೆ.

ವಿನಯ್ ಕುಲಕರ್ಣಿ ತಮ್ಮ ಪತ್ನಿ, ಚಾಲಕ ಮತ್ತು ಗನ್‌ಮ್ಯಾನ್ ಮೊಬೈಲ್ ಫೋನ್ ಬಳಸಿ ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ಸಂಪರ್ಕಿಸಿದ್ದಾರೆ ಎಂದು ಸರ್ಕಾರ ಮತ್ತು ಸಿಬಿಐ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌.ವಿ ರಾಜು ವಾದಿಸಿದ್ದಾರೆ. ಆರೋಪಿಗಳು ಮತ್ತು ಪ್ರಕರಣದ ಪ್ರಮುಖ ವ್ಯಕ್ತಿಗಳ ನಂಟನ್ನು ಬಿಂಬಿಸುವ ಛಾಯಾಚಿತ್ರಗಳನ್ನು ಅವರು ಪೀಠಕ್ಕೆ ತೋರಿಸಿದ್ದಾರೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.

ವಿನಯ್ ಕುಲಕರ್ಣಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮಣಿಂದರ್ ಸಿಂಗ್ , ಪ್ರತಿಕ್ರಿಯೆ ಸಲ್ಲಿಸಲು ಸೋಮವಾರದವರೆಗೆ ಸಮಯಾವಕಾಶ ಕೋರಿದ್ದರು. ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಯಾವುದೇ ಪ್ರಯತ್ನ ನಡೆಸಿರುವ ಬಗ್ಗೆ ಪುರಾವೆಗಳಿಲ್ಲ ಎಂದು ಅವರು ವಾದಿಸಿದ್ದರು. ಅಲ್ಲದೆ ತಮ್ಮ ಕಕ್ಷಿದಾರರು ಪ್ರಾಸಿಕ್ಯೂಷನ್‌ಗೆ ಸಂಪೂರ್ಣವಾಗಿ ಸಹಕರಿಸಿದ್ದಾರೆ ಹೇಳಿದ್ದರು.

ತಮ್ಮ ಕಕ್ಷಿದಾರ ವಿನಯ್‌ ಅವರ ರಾಜಕೀಯ ಜೀವನ ಮುಗಿದುಹೋಗಿದೆ. ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವಂತಹ ಕೃತ್ಯ ಎಸಗಿದ್ದರೆ ಕಾನೂನು ಅವರಿಗೆ ಶಿಕ್ಷಿಸಲಿ ಎಂದ ಸಿಂಗ್‌, ಜಾಮೀನು ಷರತ್ತುಗಳನ್ನು ವಿನಯ್‌ ಉಲ್ಲಂಘಿಸಿಲ್ಲ ಎಂಬುದಾಗಿ ಸಮರ್ಥಿಸಿಕೊಂಡಿದ್ದರು. ಆದರೆ, ಈ ವಾದಗಳನ್ನು ನ್ಯಾಯಾಲಯ ಒಪ್ಪಿಲ್ಲ ಎಂದು ವರದಿಯಾಗಿದೆ.

ಡಿಕೆಶಿ ಭೇಟಿಯಾದ ವಿನಯ್ ಕುಲಕರ್ಣಿ

ಜಾಮೀನು ರದ್ದುಗೊಂಡಿರುವ ಹಿನ್ನೆಲೆ, ವಿನಯ್ ಕುಲಕರ್ಣಿ ಬಂಧನ ಭೀತಿಯಲ್ಲಿದ್ದಾರೆ. ಹಾಗಾಗಿ, ಶನಿವಾರ ಬೆಂಗಳೂರಿನ ಸದಾಶಿವನಗರದ ಮನೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಕುಟುಂಬ ಸಮೇತ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಡಿ.ಕೆ ಶಿವಕುಮಾರ್ ಅವರ ಮನೆಯಿಂದಲೇ ಹಿರಿಯ ವಕೀಲ ಕಪಿಲ್ ಸಿಬಲ್ ಅವರ ಜೊತೆ ಜಾಮೀನು ರದ್ದಾಗಿರುವ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದು ವರದಿಯಾಗಿದೆ.

ನ್ಯಾಯಾಲಯದ ನಿರ್ಧಾರಕ್ಕೆ ತಲೆ ಬಾಗುತ್ತೇನೆ : ವಿನಯ್ ಕುಲಕರ್ಣಿ

ಡಿಕೆಶಿ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿನಯ್ ಕುಲಕರ್ಣಿ, “ಜಾಮೀನು ರದ್ದು ಮಾಡಿಸಿರುವುದರ ಹಿಂದೆ ಹಲವಾರು ಜನ ಕೈವಾಡ ಇದೆ. ನ್ಯಾಯಾಲಯದ ನಿರ್ಧಾರಕ್ಕೆ ನಾನು ತಲೆಬಾಗುತ್ತೇನೆ. ಇನ್ನೆರಡು ವಾರ ಬಿಟ್ಟು ಮುಂದಿನ ಕಾನೂನು ಹೋರಾಟದ ಬಗ್ಗೆ ನಿರ್ಧರಿಸುತ್ತೇವೆ. ಜಾಮೀನು ರದ್ದಾಗಿರುವ ಬಗ್ಗೆ ಡಿ.ಕೆ ಶಿವಕುಮಾರ್ ಅವರಿಗೆ ಮಾಹಿತಿ ನೀಡಲು ಆಗಮಿಸಿದ್ದೆ ಎಂದು ಹೇಳಿದ್ದಾರೆ.

2016ರ ಮೇ ತಿಂಗಳಲ್ಲಿ ಯೋಗೇಶ್‌ ಗೌಡ ಅವರ ಕೊಲೆ ನಡೆದಿತ್ತು. ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ ಆರೋಪದಲ್ಲಿ ಪ್ರಕರಣ ಆರೋಪಿ ಚಂದ್ರಶೇಖರ ಇಂಡಿ  ಅಲಿಯಾಸ್ ಚಂದು ಮಾಮಾ ಅವರಿಗೆ ನೀಡಿದ್ದ ಜಾಮೀನನ್ನು ವಿಚಾರಣಾ ನ್ಯಾಯಾಲಯ ರದ್ದುಗೊಳಿಸಿತ್ತು. ಆದರೆ ವಿನಯ್ ಕುಲಕರ್ಣಿ ಅವರಿಗೆ ನೀಡಿದ್ದ ಜಾಮೀನನ್ನು ರದ್ದುಗೊಳಿಸಲು ನಿರಾಕರಿಸಿತ್ತು. ವಿನಯ್ 2021ರ ಆಗಸ್ಟ್‌ 11ರಿಂದ ಜಾಮೀನಿನ ಮೇಲೆ ಹೊರಗಿದ್ದಾರೆ.

ಧಾರವಾಡ ತಾಲೂಕಿನ ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶಗೌಡರನ್ನು 2016ರ ಜೂ. 15ರಂದು ಅವರದ್ದೇ ಮಾಲೀಕತ್ವದ ಜಿಮ್​ನಲ್ಲಿ ಭೀಕರವಾಗಿ ಹತ್ಯೆಗೈಯ್ಯಲಾಗಿತ್ತು.

ಪ್ರಕರಣ ಸಂಬಂಧ ಆರಂಭದಲ್ಲಿ ಆರೋಪಿ ಬಸವರಾಜ್ ಮುತ್ತಗಿ ಹಾಗೂ ಆತನ ತಂಡವನ್ನು ಪೊಲೀಸರು ಬಂಧಿಸಿದ್ದರು. ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಪ್ರಕರಣವನ್ನು ಸಿಬಿಐಗೆ ನೀಡಿದರು. ತನಿಖೆ ಕೈಗೆತ್ತಿಕೊಂಡ ಸಿಬಿಐ 2020 ನವೆಂಬರ್ 5ರಂದು ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿತ್ತು.

9 ತಿಂಗಳು ಜೈಲಿನಲ್ಲಿದ್ದ ವಿನಯ್ ಕುಲಕರ್ಣಿಗೆ ಆಗಸ್ಟ್ 11, 2021ರಂದು ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಆಗಸ್ಟ್​ 13ರಂದು ಅವರು ಜೈಲಿನಿಂದ ಹೊರಗೆ ಬಂದಿದ್ದರು.  ಜಾಮೀನು ನೀಡುವ ವೇಳೆ ಸುಪ್ರೀಂ ಕೋರ್ಟ್ ಅನೇಕ ಷರತ್ತುಗಳನ್ನು ವಿಧಿಸಿತ್ತು. ಅದರಲ್ಲಿ ವಿನಯ್ ಕುಲಕರ್ಣಿ ಧಾರವಾಡ ಜಿಲ್ಲೆ ಪ್ರವೇಶ ಮಾಡುವಂತಿಲ್ಲ ಅನ್ನೋದು ಪ್ರಮುಖ ಷರತ್ತು. ಆದರೂ, ಈ ನಡುವೆಯೇ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ವಿನಯ್ ಕುಲಕರ್ಣಿ ಭರ್ಜರಿ ಗೆಲುವು ಸಾಧಿಸಿ ಶಾಸಕರಾಗಿದ್ದಾರೆ.

ಬೆಂಗಳೂರು ಕಾಲ್ತುಳಿತ ಪ್ರಕರಣ: ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಮತ್ತು ಖಜಾಂಚಿ ‘ನೈತಿಕ ಹೊಣೆ’ ಹೊತ್ತು ರಾಜೀನಾಮೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -