ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ನಂತರ ನರೇಂದ್ರ ಮೋದಿ ಸರ್ಕಾರ ರಾಷ್ಟ್ರೀಯ ಭದ್ರತಾ ವ್ಯವಹಾರಗಳನ್ನು ನಿರ್ವಹಿಸಿದ ರೀತಿ ಕುರಿತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಗೆ ಭಾರತೀಯ ಜನತಾ ಪಕ್ಷ ಮತ್ತು ಅದರ ನಾಯಕತ್ವದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಪಹಲ್ಗಾಮ್ ದಾಳಿ ನಡೆದು ಒಂದು ತಿಂಗಳಿಗೂ ಹೆಚ್ಚು ಸಮಯದ ನಂತರ, ರಾಹುಲ್ ಗಾಂಧಿಯವರು ತಮ್ಮ ಭಾಷಣದ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಅದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಡದ ಮೇರೆಗೆ ಮೋದಿ ಸರ್ಕಾರ ಪಾಕಿಸ್ತಾನದೊಂದಿಗೆ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ ಎಂಬ ತಮ್ಮ ಆರೋಪವನ್ನು ಅವರು ಮತ್ತಷ್ಟು ದ್ವಿಗುಣಗೊಳಿಸಿದ್ದರು. “ಈಗ, ನನಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಜನರ ಬಗ್ಗೆ ಚೆನ್ನಾಗಿ ತಿಳಿದಿದೆ. ಅಮೆರಿಕದಂತಹ ದೇಶದವರು ಅಥವಾ ಬೇರೆ ಯಾರದರೂ ಈ ಆರೆಸ್ಸೆಸ್ ಮತ್ತು ಬಿಜೆಪಿಯವರ ಮೇಲೆ ಒತ್ತಡ ಹೇರಿದರೆ ಆಗ ಅವರು ಭಯಭೀತರಾಗಿ ಓಡಿಹೋಗುತ್ತಾರೆ. ಉದಾಹರಣೆಗೆ : ಟ್ರಂಪ್ ಮೋದಿಗೆ ಕರೆ ಮಾಡಿ, ‘ನರೇಂದ್ರ, ಶರಣಾಗು’ ಎಂದು ಹೇಳಿದಾಗ ಮೋದಿಯು ತಕ್ಷಣ ಅದನ್ನು ಪಾಲಿಸಿದರು ಎಂದು ರಾಹುಲ್ ಈ ವೀಡಿಯೊದಲ್ಲಿ ಹೇಳಿದ್ದರು.
“ಅವರು [ಅಮೆರಿಕನ್ನರು] ಇಂದಿರಾ ಗಾಂಧಿಗೆ ಈ ರೀತಿ ಮಾಡಲು ಆಗಲಿಲ್ಲ; ಬದಲಾಗಿ, ಅವರ ವಿರುದ್ಧ 7ನೇ ನೌಕಾಪಡೆಯನ್ನು ಕಳುಹಿಸಿದ್ದರು. ಇಂದಿರಾ ಗಾಂಧಿಯವರು ತಾವು ಏನೂ ಮಾಡಬೇಕಿತ್ತೊ ಅದನ್ನೇ ಮಾಡಿದರು” ಎಂದಿದ್ದರು.
“ರಾಹುಲ್ ಪಾಕಿಸ್ತಾನದ ಕಾರ್ಯಸೂಚಿಯ ನಾಯಕ” ಎಂದು ಬಿಜೆಪಿ ಪ್ರತಿಕ್ರಿಯಿಸಿತು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಹುಲ್ ಹೇಳಿಕೆಗಳು “ದೇಶದ್ರೋಹಕ್ಕಿಂತ ಕಡಿಮೆಯಿಲ್ಲ” ಎಂದು ಹೇಳಿದರೆ, ರಾಜ್ಯಸಭಾ ಸಂಸದ ಮತ್ತು ಬಿಜೆಪಿಯ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ, “ಪಾಕಿಸ್ತಾನ ಮತ್ತು ಮಸೂದ್ ಅಜರ್ ಕೂಡ ಈ ಭಾಷೆಯನ್ನು ಬಳಸಿಲ್ಲ” ಎಂದು ಹೇಳಿದರು.
ಮೋದಿ ಮೇಲಿನ ದಾಳಿ ಭಾರತ ಅಥವಾ ಸಶಸ್ತ್ರ ಪಡೆಗಳ ವಿರುದ್ಧದ ದಾಳಿಯಲ್ಲ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿತು ಮತ್ತು ರಾಹುಲ್ ಅವರ ಈ ದಾಳಿಯು ಮೋದಿ ಜೊತೆ ಮಾಧ್ಯಮದ ಒಂದು ವಿಭಾಗವನ್ನೂ ಒಳಗೊಂಡಿತ್ತು ಎಂದು ಕಾಂಗ್ರೆಸ್ ಹೇಳಿದೆ.
ಹಿಂದೂ ಗ್ರೂಪ್‌ನ ನಿರ್ದೇಶಕಿ ಮಾಲಿನಿ ಪಾರ್ಥಸಾರಥಿ, “ಈ ದೇಶವು ಭಾರತವನ್ನು ಒಂದು ಕ್ಷಣದಲ್ಲಿಯೇ ಕುಗ್ಗಿಸುವಂತಹ ಈ ಸ್ವ-ದ್ವೇಷಿ ರಾಜಕಾರಣಿಯ ಬಾಲಾಪರಾಧಿ ಹೇಳಿಕೆಗಳನ್ನು ಎಷ್ಟು ದಿನ ಕೇಳಬೇಕು? ಅವರು ಮೋದಿಯನ್ನು ಮಾತ್ರವಲ್ಲ, ಭಾರತವನ್ನು ಕೀಳಾಗಿ ಕಾಣುತ್ತಿದ್ದಾರೆ” ಎಂದು ಹೇಳಿದರು.
ರಾಹುಲ್ ಗಾಂಧಿಯವರ ಹೇಳಿಕೆಗಳು ತುಂಬಾ ಬೇಜವಾಬ್ದಾರಿಯಿಂದ ಕೂಡಿದ್ದು, ‘ಶಾಲಾ ಅಂಗಳದಲ್ಲಿ ನಡೆದ ಜಗಳ’ದಂತಿವೆ ಎಂದು ಅಂಕಣಕಾರ ತವ್ಲೀನ್ ಸಿಂಗ್ ಬರೆದಿದ್ದಾರೆ.
ಸರ್ಕಾರಿ ಸಂಸ್ಥೆಗಳ ಬಳಕೆಯ ಭಯ ಮತ್ತು ಇತರ ಕಾರಣಗಳಿಂದ ವಿರೋಧ ಪಕ್ಷದ ನಾಯಕರು ಸರ್ಕಾರದ ಮಾರ್ಗವನ್ನು ಅನುಸರಿಸಬೇಕಾದ ಸಮಯದಲ್ಲಿ, ರಾಹುಲ್ ಗಾಂಧಿಯವರ ಹೇಳಿಕೆಗಳು ಆಮೂಲಾಗ್ರವಾಗಿ ಕಾಣಿಸಬಹುದು. ಈ ಹಿಂದೆ ರಾಷ್ಟ್ರೀಯ ಭದ್ರತಾ ವಿಷಯಗಳಲ್ಲಿ ಸರ್ಕಾರವನ್ನು ಪ್ರಶ್ನಿಸುವುದನ್ನು ವಿರೋಧ ಪಕ್ಷದ ನಾಯಕನೊಬ್ಬ ದೇಶದ್ರೋಹವೆಂದು ಭಾವಿಸಿರಲಿಲ್ಲ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ದೇಶವನ್ನು ಆಳುತ್ತಿದ್ದಾಗ, ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಹಲವು ಬಾರಿ ರಾಷ್ಟ್ರೀಯ ಭದ್ರತಾ ವಿಷಯದಲ್ಲಿ ಟೀಕೆ ಮಾಡಿದ್ದರು.
ಆ ಕೆಲವು ಟೀಕೆಗಳು ಈ ಕೆಳಗಿನಂತೆ ಇವೆ
ಮೋದಿಯವರು ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಚೀನಾಕ್ಕೆ “ಲಾಲ್ ಆಂಖ್ (ಕೆಂಪು ಕಣ್ಣುಗಳು)” ತೋರಿಸುವಂತೆ ಕೇಳಿದ್ದರು. ಈ ಸಾಲನ್ನು ಕಾಂಗ್ರೆಸ್ ಮತ್ತು ಹಲವಾರು ವಿಮರ್ಶಕರು ಮೋದಿಯ ಮೇಲೆ ತಿರುಗಿಸಿದ್ದಾರೆ.
ರಾಷ್ಟ್ರೀಯ ಭದ್ರತಾ ವಿಷಯಗಳ ಕುರಿತು ಮೋದಿ ಯುಪಿಎ ಸರ್ಕಾರದ ಮೇಲೆ ದಾಳಿ ಮಾಡಿದ ಇತರ ಸಂದರ್ಭಗಳು ಈ ಕೆಳಗಿನಂತಿವೆ.
2008ರಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಮೋದಿಯವರು, “ನಾವು ಪ್ರತಿದಿನ ಭಯೋತ್ಪಾದನೆಯಿಂದಾಗಿ ಹಲವಾರು ನಮ್ಮ ಸೈನಿಕರನ್ನು ಕಳೆದುಕೊಂಡಾಗ ಪ್ರಧಾನಿ ಸಿಂಗ್ ಅವರಿಗೆ ನಿದ್ರೆ ಬರುವುದು ಹೇಗೆ?” ಎಂದು ಪ್ರಶ್ನಿಸಿದ್ದರು.
ಆಗಸ್ಟ್ 2012ರಲ್ಲಿ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಮೋದಿಯವರು, ಭಯೋತ್ಪಾದನೆಯನ್ನು ಎದುರಿಸಲು ಸಿಂಗ್ ಅವರ “ದುರ್ಬಲ ವಿಧಾನ”ದ ಮೇಲೆ ದಾಳಿ ಮಾಡಿದ್ದರು. ಕೇಂದ್ರ ಸರ್ಕಾರದ ನೀತಿಯು ಭಯೋತ್ಪಾದಕರಿಗೆ ಶಿಕ್ಷೆಯಿಂದ ಮುಕ್ತಿ ನೀಡುತ್ತಿದೆ ಎಂದು ಅವರು ಹೇಳಿದ್ದರು.
ಚೀನಾದ ಒಳನುಸುಳುವಿಕೆ, ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ದಾಳಿ ಮತ್ತು ಬಾಂಗ್ಲಾದೇಶದ ಒಳನುಸುಳುವಿಕೆಯಿಂದ ಭಾರತದ ಗಡಿಗಳನ್ನು ರಕ್ಷಿಸುವಲ್ಲಿ ಸಿಂಗ್ ಸರ್ಕಾರದ ವಿಫಲತೆಯನ್ನು ಪ್ರಶ್ನಿಸಿ 2013ರಲ್ಲಿ ಮಾಡಿದ ಭಾಷಣದಲ್ಲಿ ಮೋದಿಯವರು, “ನನ್ನ ದೇಶದ ಸರ್ಕಾರವನ್ನು ನಡೆಸುತ್ತಿರುವವರಿಗೆ ನಾಚಿಕೆಯಾಗಬೇಕು; ನೀವು ನಾಚಿಕೆಪಡಬೇಕು. ನೀವು ಗಾಯಗಳ ಮೇಲೆ ಉಪ್ಪು ಉಜ್ಜುತ್ತಿದ್ದೀರಿ, 1.25 ಬಿಲಿಯನ್ ಭಾರತೀಯರ ನೋವಿನ ಮೇಲೆ ಆಮ್ಲ ಸುರಿಯುತ್ತಿದ್ದೀರಿ” ಎಂದು ವಾಗ್ದಾಳಿ ನಡೆಸಿದ್ದರು.
“‘ದೆಹಲಿ ಸುಲ್ತಾನರು ಮತ ಬ್ಯಾಂಕ್’ ರಾಜಕೀಯದಲ್ಲಿ ಮುಳುಗಿರುವುದರಿಂದ ಭಾರತದ ಭದ್ರತೆಯನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬುದನ್ನು ದೇಶದ ಜನತೆ ತಿಳಿದರೆ ಆಘಾತಕ್ಕೊಳಗಾಗುತ್ತೀರಿ” ಎಂದು ಅವರು ಹೇಳಿದ್ದರು. ರಾಷ್ಟ್ರೀಯ ಭದ್ರತೆಯ ಬಗ್ಗೆ ಸಿಂಗ್ ಮತ್ತು ಕಾಂಗ್ರೆಸ್ ಅನ್ನು ಟೀಕಿಸುವ ಮೋದಿಯವರ ಭಾಷಣದ ಇಂತಹ ಅನೇಕ ವೀಡಿಯೊಗಳು ಇವೆ.
ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಮತಾ ಬ್ಯಾನರ್ಜಿಯವರ ಮೇಲೆ ವಾಗ್ದಾಳಿ ನಡೆಸುವಾಗ, “ದೀದಿ ತಮ್ಮ ಮುಸ್ಲಿಂ ಮತದಾರರನ್ನು ಮೆಚ್ಚಿಸಲು ಆಪರೇಷನ್ ಸಿಂಧೂರ್ ಅನ್ನು ವಿರೋಧಿಸಿದರು” ಎಂದಿದ್ದರು.
ಅದೇ ಭಾಷಣದಲ್ಲಿ ಬಾಂಗ್ಲಾದೇಶ ಗಡಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿರ್ವಹಣೆಯನ್ನು ಟೀಕಿಸಿದ್ದಾರೆ. “ನಮ್ಮ ಸೈನಿಕರು ಬಾಂಗ್ಲಾದೇಶದ ಗಡಿಯಲ್ಲಿ ಬಾಂಗ್ಲಾದೇಶದ ನುಸುಳುಕೋರರನ್ನು ತಡೆಯಲು ಪ್ರಯತ್ನಿಸಿದರೆ, ಭಾರತೀಯ ಸೇನೆ ಮತ್ತು ಬಿಎಸ್ಎಫ್ ಸಿಬ್ಬಂದಿ ಯಾವುದೇ ಶಸ್ತ್ರಾಸ್ತ್ರಗಳನ್ನು ಬಳಸದಂತೆ ಸಿಂಗ್ ಸರಕಾರದಿಂದ ತಡೆಯಲಾಗಿತ್ತು” ಎಂದು ಹೇಳಿದ್ದರು.
ಚೀನಾ ನುಸುಳುಕೋರರು ತಮ್ಮ ಸ್ವಂತ ಭೂಮಿಗೆ ಮರಳಬೇಕಾಗಿತ್ತು. ಆದರೆ ದೆಹಲಿಯ ಸಿಂಗ್ ಸರ್ಕಾರವು ಭಾರತೀಯ ಸೈನ್ಯವನ್ನು ತನ್ನ ಸ್ವಂತ ಭೂಮಿಯಿಂದ ಹಿಮ್ಮೆಟ್ಟುವಂತೆ ಒತ್ತಾಯಿಸುವ ಒಪ್ಪಂದವನ್ನು ಮಾಡಿಕೊಂಡಿರುವುದು ನನಗೆ ಆಘಾತವನ್ನುಂಟು ಮಾಡಿದೆ. ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದ್ದು ನಮ್ಮ ದೇಶದ ದುರದೃಷ್ಟ…” ಎಂದು ಮೋದಿ ಹೇಳಿದ್ದರು.
ಸಿಂಗ್ ಅವರನ್ನು ಮತ್ತೊಮ್ಮೆ ಉಲ್ಲೇಖಿಸುತ್ತಾ ಅವರು, “ಸಹೋದರ ಸಹೋದರಿಯರೇ, 1.25 ಶತಕೋಟಿ ಜನರ ಸರ್ಕಾರವಾದ ಸಾರ್ವಭೌಮ ರಾಷ್ಟ್ರದ ನಾಯಕ, ಭಾರತದ ಸಾಮಾನ್ಯ ನಾಗರಿಕರಿಗೆ ಇಂತಹ ನಿರ್ಧಾರಗಳೊಂದಿಗೆ ಹೇಗೆ ಭದ್ರತೆಯನ್ನು ಒದಗಿಸಬಲ್ಲರು?” ಎಂದು ಪ್ರಶ್ನಿಸಿದ್ದರು.
2013ರ ಮೋದಿ ಸಾರ್ವಜನಿಕ ಭಾಷಣದ ಮತ್ತೊಂದು ವೀಡಿಯೋ ಕ್ಲಿಪ್‌ನಲ್ಲಿ, “ನನ್ನ ದೇಶದ ಸರ್ಕಾರವನ್ನು ನಡೆಸುವ ಜನರೇ, ಮುಳುಗಿ, ಮುಳುಗಿ ಸಾಯಿರಿ” ಎಂದು ಹೇಳುವುದನ್ನು ಕೇಳಬಹುದು. “ನಮ್ಮ ಸೈನಿಕರ ತಲೆಗಳನ್ನು ಕತ್ತರಿಸಿದಾಗ, ಸರ್ಕಾರವು ಶಿಷ್ಟಾಚಾರದ ಹೆಸರಿನಲ್ಲಿ ಪಾಕಿಸ್ತಾನಿ ಅತಿಥಿಗಳಿಗೆ “ಬಿರಿಯಾನಿ ಬಡಿಸುತ್ತಿದೆ” ಎಂದು ಮೋದಿ ಹೇಳಿದ್ದರು.
ಡಿಸೆಂಬರ್ 2013ರಲ್ಲಿ ಕಾಶ್ಮೀರದಲ್ಲಿ ನಡೆದ ಮತ್ತೊಂದು ರ್ಯಾಲಿಯಲ್ಲಿ, ಪಾಕಿಸ್ತಾನವು ಭಾರತೀಯರನ್ನು ಕೊಲ್ಲುವುದನ್ನು ಮುಂದುವರಿಸುತ್ತಿರುವಾಗ ಸರ್ಕಾರ ನಿದ್ರಿಸುತ್ತಿದೆ ಎಂದು ಮೋದಿ ಹೇಳಿದ್ದರು. ಅದೇ ರ್ಯಾಲಿಯಲ್ಲಿ, ರಾಜನಾಥ್ ಸಿಂಗ್ ಅವರು ಮನಮೋಹನ್ ಸಿಂಗ್ ಅವರನ್ನು ದುರ್ಬಲ ಪ್ರಧಾನಿ ಎಂದು ಕರೆದಿದ್ದರು ಮತ್ತು ಅವರು ಚೀನಿಯರೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.
ಸರ್ ಕ್ರೀಕ್ ಅಥವಾ ಬಾನ್ ಗಂಗಾ ಕುರಿತ ಪತ್ರಗಳು
2012ರ ಗುಜರಾತ್ ರಾಜ್ಯ ಚುನಾವಣೆಯ ಸಮಯದಲ್ಲಿ ಮೋದಿಯವರು ತಮ್ಮ ಮೂರನೇ ಅವಧಿಗೆ ಮುಖ್ಯಮಂತ್ರಿಯಾಗುವುದಕ್ಕಾಗಿ ಉತ್ತರ ಗುಜರಾತ್ ಮತ್ತು ಕಚ್‌ನಲ್ಲಿ ಸರ್ ಕ್ರೀಕ್ ಅಥವಾ ಬಾನ್ ಗಂಗಾ ವಿಷಯವನ್ನು ಎತ್ತಿದ್ದರು ಮತ್ತು ಮನಮೋಹನ್ ಸಿಂಗ್ ಪಾಕಿಸ್ತಾನಕ್ಕೆ ಸರ್ ಕ್ರೀಕ್ ಅನ್ನು ನೀಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದರು.
ಸರ್ ಕ್ರೀಕ್ ಅಥವಾ ಬಾನ್ ಗಂಗಾ ಭಾರತದ ಕಚ್ ಮತ್ತು ಪಾಕಿಸ್ತಾನದ ಸಿಂಧ್ ನಡುವಿನ 96 ಕಿಲೋಮೀಟರ್ ಉದ್ದದ ನದಿ ಮುಖವಾಗಿದೆ. ಇದು ಏಷ್ಯಾದ ಅತಿದೊಡ್ಡ ಮೀನುಗಾರಿಕೆ ಮೂಲಗಳಲ್ಲಿ ಒಂದಾಗಿದೆ. ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ಆರಂಭಿಕ ಗಡಿ ವಿವಾದಗಳಲ್ಲಿ ಒಂದಾಗಿದೆ.
ಸಿಂಗ್‌ಗೆ ‘ಗುಜರಾತ್ ಪ್ರಜೆ’ ಎಂದು ಬರೆಯುತ್ತಾ, ಸಿಂಗ್ ಪಾಕಿಸ್ತಾನಕ್ಕೆ ಸರ್ ಕ್ರೀಕ್ ಅನ್ನು ನೀಡುವ ಕ್ರಮವು ಪ್ರಮುಖ ರಾಷ್ಟ್ರೀಯ ಭದ್ರತಾ ಸಮಸ್ಯೆಗಳನ್ನು ಉಂಟುಮಾಡುತ್ತವೆ ಎಂದಿದ್ದರು. ಆದರೆ ಸಿಂಗ್ ಅವರು ಅದನ್ನು ಜಾರಿಮಾಡಲು ಬಿಡಲಿಲ್ಲ ಮತ್ತು ದೃಢವಾದ ಪತ್ರದೊಂದಿಗೆ ಪ್ರತಿಕ್ರಿಯಿಸಿದರು ಮಾತ್ರವಲ್ಲದೆ, ಆಗ ಅದನ್ನು ಸಾರ್ವಜನಿಕವಾಗಿ ಪ್ರಕಟಿಸಿದರು.
ಮೋದಿಯವರ ಆರೋಪಗಳು ಸುಳ್ಳಿನಿಂದ ಕೂಡಿವೆ ಮತ್ತು ಸ್ಪಷ್ಟೀಕರಣಗಳಿಗಾಗಿ ಮೋದಿಯವರು ಭಾರತ ಸರ್ಕಾರವನ್ನು ಖಾಸಗಿಯಾಗಿ ಸಂಪರ್ಕಿಸಲು ಸಹ ಚಿಂತನೆ ನಡೆಸಲಿಲ್ಲ ಎಂದು ಸಿಂಗ್ ಬರೆದಿದ್ದಾರೆ. “ಮೋದಿಯವರ ಪತ್ರದ ವಿಷಯಗಳು ಮತ್ತು ಅದನ್ನು ಈ ಕಚೇರಿಯಲ್ಲಿ ಔಪಚಾರಿಕವಾಗಿ ಸ್ವೀಕರಿಸುವ ಮೊದಲೇ ಸಾರ್ವಜನಿಕರಿಗೆ ಬಿಡುಗಡೆ ಮಾಡಿದ ಸಮಯವು ಅದರ ಸಮಸ್ಯೆಯ ಹಿಂದಿನ ಉದ್ದೇಶಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ” ಎಂದು ಸಿಂಗ್ ಬರೆದಿದ್ದರು.
“ಗುಜರಾತ್ ಮುಖ್ಯಮಂತ್ರಿ ರಾಜ್ಯದಲ್ಲಿ ಚುನಾವಣೆಗೆ ಒಂದು ದಿನ ಮೊದಲು ಈ ಆಧಾರರಹಿತ ಪತ್ರವನ್ನು ಬರೆದು ಬಿಡುಗಡೆ ಮಾಡಿರುವುದು ದುರುದ್ದೇಶಪೂರಿತವಾಗಿದೆ” ಎಂದು ಅವರು ಬರೆದಿದ್ದರು.
ಭಯೋತ್ಪಾದನಾ ವಿರೋಧಿ ಕಾನೂನಿನ ‘ಪರಿಣಾಮಗಳು’
ಮಾರ್ಚ್ 5, 2012ರಂದು ಇಂದೋರ್‌ನಲ್ಲಿ ಮಾಡಿದ 51 ನಿಮಿಷಗಳ ಭಾಷಣದಲ್ಲಿ ಮೋದಿ ಅವರು, ಭಾರತೀಯ ಒಕ್ಕೂಟ ವ್ಯವಸ್ಥೆಯನ್ನು ತೊಂದರೆಗೊಳಿಸದಂತೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಒಕ್ಕೂಟ ವ್ಯವಸ್ಥೆಯನ್ನು ಅವರು ಭಾರತೀಯ ಸಂವಿಧಾನದ “ಆತ್ಮ” ಎಂದು ಬಣ್ಣಿಸಿದ್ದರು.
ಭಯೋತ್ಪಾದನಾ ವಿರೋಧಿ ಕಾನೂನು ಕುರಿತ ಚರ್ಚೆಯು ತರ್ಕ ಮತ್ತು ಪ್ರಶ್ನೆಗಳನ್ನು ಮುಚ್ಚುವ ಸಾಧನವಾಗುತ್ತದೆ ಎಂದು ಮೋದಿ ಹೇಳಿದ್ದರು. ಭಯೋತ್ಪಾದನೆಯ ವಿರೋಧಿ ಕಾನೂನನ್ನು ತಂದಾಗ ಎಲ್ಲರೂ ಅದನ್ನು ಪುಷ್ಪಗುಚ್ಛದಂತೆ ಸ್ವೀಕರಿಸಬೇಕು. ಯಾರದರೂ ಅದನ್ನು ಸ್ವೀಕರಿಸದಿದ್ದರೆ ಅವರನ್ನು “ನೀವು ಭಯೋತ್ಪಾದನೆಯ ವಿರುದ್ಧ ಹೋರಾಡಲು ಬಯಸುವುದಿಲ್ಲವೇ?” ಎಂದು ಪ್ರಶ್ನಿಸಬೇಕಾಗುತ್ತದೆ ಎಂದಿದ್ದರು.
“ಕಾನೂನು ಮತ್ತು ಸುವ್ಯವಸ್ಥೆ ರಾಜ್ಯಗಳ ವಿಷಯ. ಇದನ್ನು ನಿರಾಕರಿಸಲಾಗದು. ರಾಜ್ಯಗಳು ಅದಕ್ಕೆ ಜವಾಬ್ದಾರಿಯಾಗಿವೆ ಮತ್ತು ಜನರು ಹೊಣೆಗಾರಿಕೆಯನ್ನು ಪ್ರಶ್ನಿಸಬಹುದಾಗಿದೆ. ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ಮೂಲಕ ಯಾವುದೇ ಗುಪ್ತಚರ ಬ್ಯೂರೋದ ವ್ಯಕ್ತಿ ರಾಜ್ಯ ಸರ್ಕಾರಕ್ಕೆ ತಿಳಿದಿರಲಿ ಅಥವಾ ತಿಳಿದಿಲ್ಲದಿದ್ದರೂ, ಎಲ್ಲಿ ಬೇಕಾದರೂ ಯಾರನ್ನಾದರೂ ಹುಡುಕಬಹುದು ಮತ್ತು ಯಾರನ್ನಾದರೂ ಬಂಧಿಸಬಹುದು ಮತ್ತು ಅವರು ದೆಹಲಿಯಿಂದ ಇಡೀ ಜಗತ್ತನ್ನು ನಡೆಸಬಹುದು”ಎಂದು ಅವರು ತಿಳಿಸಿದ್ದರು.
“ಕಾನೂನು ಮತ್ತು ಸುವ್ಯವಸ್ಥೆಯು ರಾಜ್ಯಗಳ ವಿಷಯ ಎಂಬುದರ ಪರಿಣಾಮಗಳನ್ನು ನೀವು ಊಹಿಸಬಲ್ಲಿರಾ? ಮತ್ತು ಹಿಂಬಾಗಿಲಿನ ಮುಖಾಂತರ ತರಲಾಗುತ್ತಿರುವ ಇಂತಹ ಕಾನೂನುಗಳನ್ನು ನೋಡಿ ಎಲ್ಲರೂ ಆಘಾತಕ್ಕೊಳಗಾಗಿದ್ದರು. ಗುಪ್ತಚರ ವಿಭಾಗವು ಸಂಸತ್ತಿಗೂ ಸಹ ಜವಾಬ್ದಾರಿಯಲ್ಲದ ಒಂದು ಸಂಸ್ಥೆಯಾಗಿದೆ! ಅದು ಗೌಪ್ಯತೆಯನ್ನು ಕಾಯ್ದುಕೊಳ್ಳುತ್ತದೆ. ಕೆಲವು ವಿಷಯಗಳು ರಾಷ್ಟ್ರೀಯ ಹಿತಾಸಕ್ತಿಗಾಗಿ ಮುಖ್ಯವಾಗಿವೆ. ಆದರೆ ಗುಪ್ತಚರ ಸಂಸ್ಥೆಗಳು ರಾಜ್ಯ ಸರಕಾರಗಳನ್ನು ಪ್ರವೇಶಿಸಿದಾಗ, ಅದು ರಾಜ್ಯ ಮತ್ತು ಕೇಂದ್ರದ ನಡುವೆ ದೊಡ್ಡ ಬಿರುಕನ್ನು ಉಂಟುಮಾಡಬಹುದು. ರಾಜ್ಯಗಳಿಗೆ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಿಸುವ ಹಕ್ಕನ್ನು ನೀಡುವುದು ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ” ಎಂದು ಮೋದಿ ಹೇಳಿದ್ದರು.
26/11ರ ಮುಂಬೈ ದಾಳಿ
26/11 ಭಯೋತ್ಪಾದಕ ದಾಳಿಯ ಎರಡು ದಿನಗಳ ನಂತರ ಮುಂಬೈ ನಗರಕ್ಕೆ ನರೇಂದ್ರ ಮೋದಿ ಆಗಮಿಸಿದ್ದರು. ನಡೆಯುತ್ತಿರುವ ಕಾರ್ಯಾಚರಣೆಯನ್ನು ವರದಿ ಮಾಡಲು ಹೊರಗೆ ಕಾಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಲು ಆ ದಿನ ಅವರು ಒಬೆರಾಯ್ ಟ್ರೈಡೆಂಟ್ ಹೋಟೆಲ್‌ಗೆ ತಲುಪಿದ್ದರು ಎಂದು ದಿ ವೈರ್‌ನ ಸಂಗೀತಾ ಬರೂವಾ ಪಿಶಾರೋಟಿ ಇತ್ತೀಚಿನ ವರದಿಯಲ್ಲಿ ವಿವರಿಸಿದ್ದಾರೆ.
ಈ ದಾಳಿಯ ಸಮಯದಲ್ಲಿ ಮನಮೋಹನ್ ಸಿಂಗ್ ಅವರು ಮಾಡಿದ ಭಾಷಣವು ನಿರಾಶಾದಾಯಕವಾಗಿತ್ತೆಂದು ಮೋದಿ ಹೇಳುವುದನ್ನು ಕೇಳಬಹುದು. ಅದು ಪ್ರಧಾನಿಯಾಗಿ ಸಿಂಗ್ ತಮ್ಮ ನಿರೀಕ್ಷೆಗಳನ್ನು ಪೂರೈಸಲು ವಿಫಲವಾಗಿದ್ದಾರೆ ಎಂದು ಮೋದಿ ಹೇಳಿದ್ದರು ಎಂದು ಪಿಶಾರೋಟಿ ಬರೆದಿದ್ದಾರೆ.
ಭದ್ರತಾ ಕಾರ್ಯಾಚರಣೆಗಳು ಮುಗಿಯುವ ಮೊದಲೇ ಮತ್ತು ಸರ್ಕಾರಕ್ಕೆ ಬಿಜೆಪಿಯ ಬೇಷರತ್ತಾದ ಬೆಂಬಲದ ಹೊರತಾಗಿಯೂ, ಮೋದಿ ಹೊಣೆಗಾರಿಕೆಯನ್ನು ಕೋರುವುದನ್ನು, ಸರ್ಕಾರವನ್ನು ಟೀಕಿಸುವುದನ್ನು ಮತ್ತು ಪ್ರಶ್ನೆಗಳನ್ನು ಕೇಳುವುದನ್ನು ಮುಂದುವರೆಸಿದ್ದರು. ಆಂತರಿಕ ಭದ್ರತೆಯ ಕುರಿತು ಚರ್ಚಿಸಲು ಅವರು ಪ್ರಧಾನಿಯೊಂದಿಗೆ ಎಲ್ಲಾ ಮುಖ್ಯಮಂತ್ರಿಗಳ ಸಭೆ ನಡೆಸಲು ಸಹ ಕೋರಿದರು ಎಂದು ಅವರು ಬರೆದಿದ್ದಾರೆ.
ನವೆಂಬರ್ 9 ಮತ್ತು 2008ರ ಡಿಸೆಂಬರ್ 4ರಂದು ರಾಜಸ್ಥಾನ ಮತ್ತು ದೆಹಲಿಯಲ್ಲಿ ನಡೆದ ರಾಜ್ಯ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಬಿಜೆಪಿ ರಾಷ್ಟ್ರೀಯ ಪತ್ರಿಕೆಗಳಲ್ಲಿ ರಕ್ತಸಿಕ್ತ ಕೆಂಪು ಬಣ್ಣದಲ್ಲಿ ಪೂರ್ಣ ಪುಟದ ಜಾಹೀರಾತುಗಳನ್ನು ಪ್ರಕಟಿಸಿತು. ಈ ಜಾಹೀರಾತಿನಲ್ಲಿ “ಇಚ್ಛೆಯಂತೆ ಕ್ರೂರ ಭಯೋತ್ಪಾದನೆ ದಾಳಿಗಳು, ದುರ್ಬಲ ಸರ್ಕಾರ, ಭಯೋತ್ಪಾದನೆಯ ವಿರುದ್ಧ ಹೋರಾಡಿ. ಬಿಜೆಪಿಗೆ ಮತ ಹಾಕಿ.” ಎಂದು ಪ್ರಕಟಿಸಲಾಗಿತ್ತು ಎಂದು ಪಿಶಾರೋಟಿ ಬರೆದಿದ್ದಾರೆ.
ನಿರಂತರ ಒತ್ತಡ
ಸಿಂಗ್ ಅಧಿಕಾರದಲ್ಲಿ ಇಲ್ಲದಿದ್ದರೂ ಸಹ, 2017ರ ಗುಜರಾತ್ ಚುನಾವಣೆಯಲ್ಲಿ ಪಾಕಿಸ್ತಾನಿ ಹಸ್ತಕ್ಷೇಪದ ಆರೋಪಗಳೊಂದಿಗೆ ಮೋದಿಯವರು ಸಿಂಗ್ ಅವರ ಮೇಲೆ ದಾಳಿ ಮಾಡುತ್ತಲೇ ಇದ್ದರು. ಇದು ಸಾಮಾನ್ಯ ಟೀಕೆಗಳನ್ನು ಮೀರಿ ಒಂದು ಹೆಜ್ಜೆ ಮುಂದೆ ಹೋಗಿತ್ತು.
ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರು ಭೋಜನಕೂಟವನ್ನು ಆಯೋಜಿಸಿದ್ದರು. ಅಲ್ಲಿ ಪಾಕಿಸ್ತಾನಿ ರಾಯಭಾರಿ, ಮಾಜಿ ಸಚಿವರು ಮತ್ತು ಸೇನಾ ಅಧಿಕಾರಿಗಳು, ಸಿಂಗ್, ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತು ಮಾಜಿ ಸೇನಾ ಮುಖ್ಯಸ್ಥ ದೀಪಕ್ ಕಪೂರ್ ಅವರನ್ನು ಭೇಟಿಯಾದರು ಎಂದು ಮೋದಿಯವರು ಹೇಳಿದ್ದರು ಎಂದು NDTV ವರದಿ ಮಾಡಿದೆ.
ಮಾಜಿ ಪ್ರಧಾನಿ ಸಿಂಗ್ ಅವರು ಗುಜರಾತ್ ಚುನಾವಣೆಯ ಬಗ್ಗೆ ಪಾಕಿಸ್ತಾನಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ಮೋದಿ ಹೇಗೋ ಆರೋಪಿಸಿದ್ದರು. ಮೋದಿ ಅವರ ಇಂತಹ ಆರೋಪಗಳನ್ನು “ಸುಳ್ಳಿನ ಸುದ್ದಿ” ಎಂದು ಕರೆದ ಮಾಜಿ ಪ್ರಧಾನಿ ಸಿಂಗ್ ಅವರು, “ಪ್ರಧಾನಿ ನರೇಂದ್ರ ಮೋದಿಯವರು ತಪ್ಪಾಗಿ ಕಲ್ಪಿಸಿಕೊಂಡ ವಿಷಯಗಳ ಮೇಲೆ ಮಾತ್ರ ಕೇಂದ್ರೀಕರಿಸಬಾರದು. ಇದರ ಬದಲು ಅವರು ಹೊಂದಿರುವ ಪ್ರಧಾನಿ ಹುದ್ದೆಯಿಂದ ನಿರೀಕ್ಷಿಸಲಾದ ಗಂಭೀರತೆಯನ್ನು ತೋರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರು ತಮ್ಮ ದುರುದ್ದೇಶಪೂರಿತ ಇಂತಹ ಹೇಳಿಕೆಗಾಗಿ ರಾಷ್ಟ್ರದ ಕ್ಷಮೆಯಾಚಿಸುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದ್ದರು.
“ದುಃಖಕರ ಮತ್ತು ವಿಷಾದಕರವೆಂದರೆ, ಮಾಜಿ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರ ಹುದ್ದೆ ಸೇರಿದಂತೆ ಪ್ರತಿಯೊಂದು ಸಾಂವಿಧಾನಿಕ ಹುದ್ದೆಯನ್ನು ಕಳಂಕಗೊಳಿಸುವ ತಮ್ಮ ಅತೃಪ್ತ ಬಯಕೆಯಿಂದ ಮೋದಿ ಅಪಾಯಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ” ಎಂದು ಸಿಂಗ್ ಹೇಳಿದ್ದರು.
ಇಂಗ್ಲಿಷ್ ಮೂಲ: ದಿ ವೈರ್
ಕನ್ನಡಕ್ಕೆ: ಪೃಥ್ವಿ ಕಣಸೋಗಿ
ಮಧ್ಯಪ್ರದೇಶದಲ್ಲಿ ‘ಲವ್ ಜಿಹಾದ್’ ವಿರೋಧಿ ದಳದ ರಚನೆ ಮತ್ತು ಪೊಲೀಸ್, ಬಜರಂಗದಳ