ನಾನು ರೈತರ ಜೊತೆ ಇಲ್ಲಿಯೇ ಮಲಗುತ್ತೇನೆ, ಜೈಲಿಗೆ ಹಾಕುವುದಾದರೆ ಹಾಕಿ. ಜಾಮೀನು ಕೂಡ ತೆಗೆದುಕೊಳ್ಳುವುದಿಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದರು.
ರೈತರ ಭೂ ಸ್ವಾಧೀನ ವಿರೋಧಿಸಿ ದೇವನಹಳ್ಳಿಯಲ್ಲಿ ನಡೆಯುತ್ತಿರುವ ‘ದೇವನಹಳ್ಳಿ ಚಲೋ’ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.
ಮುಖ್ಯಮಂತ್ರಿ ಅವರೇ, ಸಚಿವ ಎಂ.ಬಿ ಪಾಟೀಲರೇ ನೀವು ಏನು ಮಾಡುತ್ತಿದ್ದೀರಿ? ರೈತರು ಭೂಮಿ ಬಿಟ್ಟು ಕೊಡುವುದಿಲ್ಲ ಎಂದರೆ ಅರ್ಥವಾಗುತ್ತಿಲ್ವಾ? ಒಬ್ಬ ಮನುಷ್ಯನಿಗೆ ಒಂದು ಒಂದೆರಡು ಬಾರಿ ಹೇಳಬಹುದು. ನಾವು ನಿಮ್ಮ ವಿರುದ್ಧ ಮೂರು ವರ್ಷಗಳಿಂದ ಬಾಯಿ ಬಡ್ಕೊಬೇಕಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹದಿಮೂರು ಹಳ್ಳಿಗಳ ಹೆಣ್ಣು ಮಕ್ಕಳು ಅವರ ಜಮೀನಿನ ಮಣ್ಣನ್ನು ತಂದು ಗಿಡಕ್ಕೆ ಹಾಕಿ, ನಾವು ಮಣ್ಣನ್ನು ಮಾರುವುದಿಲ್ಲ ಎಂದು ಹೇಳುತ್ತಿದ್ದಾರೆ. ನಿಮಗೆ ಧಿಕ್ಕಾರ ಕೂಗುವ ಸಮಯ ದೂರವಿಲ್ಲ. ರೈತರ ಬಾಯಿಯಿಂದ ಧಿಕ್ಕಾರ ಕೂಗಿಸಿಕೊಳ್ಳುವ ಪರಿಸ್ಥಿತಿ ನಿಮಗೆ ಬೇಕಾ? ನಿಮಗೆ ಮನಸಾಕ್ಷಿ ಇಲ್ವಾ? ಅಹಿಂದ, ಜನಪರ, ರೈತರಪರ ಅನ್ನುತ್ತೀರಿ. ವಿರೋಧ ಪಕ್ಷದ ನಾಯಕರಾಗಿದ್ದಾಗ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದೀರಿ. ಮಾತು ಕೊಟ್ಟಿದ್ದೀರಿ ತಾನೇ? ಈಗ ಮಾತಿಗೆ ನಿಲ್ಲುತ್ತೀರಾ? ಮಾತು ತಪ್ಪುತ್ತೀರಾ? ಎಂದು ಪ್ರಶ್ನಿಸಿದರು.
ಎಂ.ಬಿ ಪಾಟೀಲರೇ ಏನಂತ ತುರ್ತು ಪರಿಸ್ಥಿತಿ ಇತ್ತು ನಿಮಗೆ. ಅಷ್ಟೊಂದು ತರಾತುರಿಯಲ್ಲಿ ಸುದ್ದಿಗೋಷ್ಠಿ ಏಕೆ ಕರೆದ್ರಿ? ಒಂದು ದಿನ ಕಾಯಲು ಆಗಲಿಲ್ವಾ? ಮುಖ್ಯಮಂತ್ರಿಗಳು ಏನಾದರು ಬದಲಾಗುತ್ತಿದ್ದರಾ? ಒಳಗಡೆ ಏನಾದರೂ ಮಸಲತ್ತು ನಡೆಯುತ್ತಿದಿಯಾ? ಎಂದು ಪ್ರಕಾಶ್ ರಾಜ್ ಕೇಳಿದರು.
ಮನುಷ್ಯರಿಗೆ ಬೆಲೆ ಕೊಡಿ. ಭೂಮಿ ಬೆಲೆ ಹೆಚ್ಚಾದರೆ ನಿಮ್ಮ ಬೊಕ್ಕಸ ತುಂಬುತ್ತದೆ, ಸಮಾಜ ಬೆಳೆಯುವುದಿಲ್ಲ. ಈ ಹೋರಾಟ ನಿಲ್ಲುವುದಿಲ್ಲ. ಇದು ಅಂತಃಕರಣದ ಹೋರಾಟ. ಹಾಗಾಗಿ, ನೀವು ಬುದ್ದಿವಂತರ ತರ ಉತ್ತರ ಕೊಡಬೇಡಿ. ನಾವು ನಿಮಗೆ ಪ್ರಶ್ನೆಯೇ ಕೇಳುತ್ತಿಲ್ಲ. ನಮ್ಮ ನೋವನ್ನು ಹೇಳುತ್ತಿದ್ದೇವೆ. ನಮ್ಮನ್ನು ಬದುಕಲು ಬಿಡಿ ಎಂದರು.
ನಾವು ಮಣ್ಣನ್ನು ಮಾರುವುದಿಲ್ಲ. ಏನು ಮಾಡುತ್ತೀರಾ ಮಾಡಿ. ಕಾರ್ಖಾನೆ ಎಷ್ಟು ಜನರ ಬದುಕನ್ನು ಕಿತ್ತುಕೊಳ್ಳುತ್ತದೆ ಎನ್ನುವುದು ನಿಮಗೆ ಗೊತ್ತಿಲ್ಲವೇ? 6ಸಾವಿರ ಎಕರೆ ಭೂ ಸೆಟಲ್‌ಮೆಂಟ್ ಮಾಡಿದಿರಿ. ರೈತರು ಈಗ ಬೀದಿಗೆ ಬಂದಿದಾರೆ. ಕಾರ್ಖಾನೆಗಳನ್ನು ಮಾಡಿ ನಮ್ಮ ರೈತರನ್ನು ಏನು ಮಾಡುತ್ತೀರಾ? ಅವರನ್ನು ಕಾರ್ಖಾನೆಯ ಸೆಕ್ಯೂರಿಟಿ ಗಾರ್ಡ್‌ಗಳಾಗಿ ಮಾಡುತ್ತೀರಾ? ನಿಮಗೆ ಮರ್ಯಾದೆ ಇದೆಯಾ? ಎಂದು ಕಿಡಿಕಾರಿದರು.
ಸಿದ್ದರಾಮಯ್ಯನವರೇ ಇನ್ನೊಂದು ಹೋರಾಟ ಆಗುವುದು, ನಿಮ್ಮನ್ನು ಇಳಿಸುವುದಕ್ಕೆ ಕಾರಣ ಆಗುವುದು ಬೇಡ. ಮನಸಾಕ್ಷಿಯಿಂದ ಜನರ ನೋವನ್ನು ಅರ್ಥ ಮಾಡಿಕೊಳ್ಳಿ. ರೈತರನ್ನು ಅರ್ಥ ಮಾಡಿಕೊಳ್ಳಿ. ನಾವು ಭೂಮಿ ಮಾರುವುದಿಲ್ಲ ಎಂದರೆ ಮಾರುವುದಿಲ್ಲ. ನಮ್ಮನ್ನು ಬದುಕಲು ಬಿಡಿ ಎಂದು ಮನವಿ ಮಾಡಿದರು.



Uoodod bit bittu barsod togonda ivnu. Ivan munda mochtu.