ದಲಿತ ಮಹಿಳೆ ಬಿಸಿಯೂಟ ತಯಾರಿಸುತ್ತಾರೆ ಎಂಬ ಕಾರಣಕ್ಕೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸದಿರುವುದು ಚಾಮರಾಜನಗರ ತಾಲೂಕಿನ ಹೊಮ್ಮ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ದಲಿತ ಮಹಿಳೆ ಅಡುವೆ ಮಾಡುತ್ತಾರೆ ಎನ್ನುವ ಕಾರಣಕ್ಕೆ ಪೋಷಕರು ತಮ್ಮ ಮಕ್ಕಳ ವರ್ಗಾವಣೆ ಪತ್ರ ಪಡೆದು ಬೇರೆ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇದರಿಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾಖಲಾತಿ ಒಂದಕ್ಕೆ ಕುಸಿದಿದೆ. ಶಾಲೆ ಮುಚ್ಚುವ ಹಂತಕ್ಕೆ ತಲುಪಿದೆ ಎಂದು ಈದಿನ.ಕಾಂ ವರದಿ ಮಾಡಿದೆ.
ಶಾಲೆಯಲ್ಲಿ 21 ವಿದ್ಯಾರ್ಥಿಗಳಿದ್ದರು. ಈ ಪೈಕಿ 12 ಮಂದಿಯ ಪೋಷಕರು ವರ್ಗಾವಣೆ ಪತ್ರ ಪಡೆದಿದ್ದಾರೆ. ಐವರು ಮಕ್ಕಳ ಪೋಷಕರು ವರ್ಗಾವಣೆ ಪತ್ರ ಕೋರಿದ್ದಾರೆ. ಇದರಿಂದ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಉಳಿದುಕೊಂಡಿದ್ದಾನೆ ಎಂದು ವರದಿ ಹೇಳಿದೆ.
ರೋಸ್ಟರ್ ಪದ್ಧತಿ ಅನುಸಾರ ದಲಿತ ಮಹಿಳೆಯನ್ನು ಅಡುಗೆ ಸಿಬ್ಬಂದಿಯಾಗಿ ನೇಮಿಸಲಾಗಿದೆ. ಇದರಿಂದಾಗಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ದಿಢೀರ್ ಕುಸಿತಗೊಂಡಿದೆ. ಮಕ್ಕಳನ್ನು ಪೋಷಕರು ಪಕ್ಕದೂರು ಆಲೂರಿನ ಶಾಲೆಗೆ ಸೇರಿಸುತ್ತಿರುವುದು ಗೊತ್ತಾಗಿದೆ. ದಲಿತ ಮಹಿಳೆಯನ್ನು ಅಡುವೆ ಸಿಬ್ಬಂದಿಯಾಗಿ ನೇಮಿಸಿರುವುದಕ್ಕೆ ಈ ರೀತಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ಮಾತನಾಡಿರುವ ಶಿಕ್ಷಕ ಚಿನ್ನಸ್ವಾಮಿ, “ಈ ಹಿಂದೆ ಶಾಲೆಯಲ್ಲಿ ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿಲ್ಲ ಎಂಬ ಆರೋಪವಿತ್ತು. ಗ್ರಾಮಸ್ಥರು ಈ ಸಂಬಂಧ ದೂರು ಕೊಟ್ಟಿದ್ದರು. ನಂತರದಲ್ಲಿ ಇಬ್ಬರು ಶಿಕ್ಷಕರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು. ಶಾಲೆಯಲ್ಲಿ ಮಕ್ಕಳಿರದ ಕಾರಣ ಇಬ್ಬರು ಅಡುಗೆ ಸಹಾಯಕಿಯರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಆದರೆ, ಈಗ ದಿಢೀರ್ ಅಂತ ಶಾಲೆಯ ಮಕ್ಕಳು ವರ್ಗಾವಣೆ ಪತ್ರ ಪಡೆದು ಹೋಗುತ್ತಿರುವುದಕ್ಕೆ ಕಾರಣ ಗೊತ್ತಾಗುತ್ತಿಲ್ಲ” ಎಂದು ಹೇಳಿರುವುದಾಗಿ ಈದಿ.ಕಾಂ ವರದಿ ತಿಳಿಸಿದೆ.
ಡಿಡಿಪಿಐ ರಾಮಚಂದ್ರ ರಾಜೆ ಅರಸ್ ಮಾತನಾಡಿ, ಬಿಇಒ, ಬಿಆರ್‌ಸಿ ಶಾಲೆಗೆ ಭೇಟಿ ನೀಡಿ ಪೋಷಕರು ಮತ್ತು ಶಿಕ್ಷಕರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಿದ್ದಾರೆ. ನಾನು ಕೂಡ ಶಾಲೆಗೆ ಭೇಟಿ ಕೊಟ್ಟು ಮನವೊಲಿಸುವೆ ಎಂದಿದ್ದಾರೆ. ಶಾಲೆಗೆ ಶಿಕ್ಷಣಾಧಿಕಾರಿ ಹನುಮಶೆಟ್ಟಿ ಸಂತೆಮರಹಳ್ಳಿ ಪೊಲೀಸ್ ಇನ್‌ಸ್ಪೆಕ್ಟರ್ ತಾಜುದ್ದೀನ್ ಭೇಟಿ ನೀಡಿ ಪೋಷಕರು ಜೊತೆ ಮಾತುಕತೆ ನಡೆಸಿದ್ದಾರೆ ಎಂದು ವರದಿ ವಿವರಿಸಿದೆ.


