ಆಂಧ್ರ ಪ್ರದೇಶದ ಶ್ರೀ ವೆಂಕಟೇಶ್ವರ ಪಶುವೈದ್ಯಕೀಯ ವಿಶ್ವವಿದ್ಯಾಲಯದ (ಎಸ್‌ವಿವಿಯು) ಡೈರಿ ತಂತ್ರಜ್ಞಾನ ಕಾಲೇಜಿನಲ್ಲಿ ದಲಿತ ಪ್ರಾಧ್ಯಾಪಕನಿಂದ ಕುರ್ಚಿ ಕಿತ್ತುಕೊಂಡು ನೆಲದಲ್ಲಿ ಕೂರಿಸಲಾಗಿದೆ ಎಂದು ಕಳೆದ ಜೂನ್ 20ರಂದು ಫೋಟೋ ಒಂದು ವೈರಲ್ ಆಗಿತ್ತು.
ದಲಿತ ಸಮುದಾಯದ ಸಹಾಯಕ ಪ್ರಾಧ್ಯಾಪಕ ಡಾ. ರವಿ ವರ್ಮಾ ಅವರ ಕುರ್ಚಿಯನ್ನು ಕಿತ್ತುಕೊಂಡ ಅಸೋಸಿಯೇಟ್ ಡೀನ್ ರವೀಂದ್ರ ರೆಡ್ಡಿ ಅವರು ಜಾತಿ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿತ್ತು.
ಆದರೆ, ಡಾ. ರವಿ ಮೇಲಿನ ಜಾತಿ ತಾರಮ್ಯ ಕೇವಲ ಕುರ್ಚಿ ತೆಗೆಸಿದ್ದಕ್ಕೆ ಸೀಮಿತವಾಗಿಲ್ಲ. ಅವರ ಮೇಲೆ ಕಳೆದ 20 ವರ್ಷಗಳಿಂದ ಜಾತಿ ಆಧಾರಿತ ದೌರ್ಜನ್ಯ ನಡೆಯುತ್ತಿದೆ ಎಂದು themooknayak.com ವರದಿ ಮಾಡಿದೆ.
ಗುತ್ತಿಗೆ ಪ್ರಾಧ್ಯಾಪಕಾರ ಡಾ. ರವಿ ಅವರ ಕುರ್ಚಿ ಕಿತ್ತುಕೊಂಡಿದ್ದು ಇತ್ತೀಚಿನ ದೌರ್ಜನ್ಯವಾದರೆ, ನ್ಯಾಯಾಲಯದ ಆದೇಶಗಳು, ಯುಜಿಸಿ ನಿಯಮಗಳು ಮತ್ತು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ ಹೊರತಾಗಿಯೂ, ಅವರ ಹಕ್ಕುಗಳನ್ನು ಪದೇ ಪದೇ ನಿರಾಕರಿಸಲಾಗುತ್ತಿದೆ. ಘನತೆ, ಸಮಾನ ವೇತನ ಮತ್ತು ನ್ಯಾಯಯುತವಾಗಿ ನಡೆಸಿಕೊಳ್ಳುವಂತೆ ರವಿ ಅವರು ಕಳೆದ 20 ವರ್ಷಗಳಿಂದ ಹೋರಾಡುತ್ತಿದ್ದಾರೆ.
ಡಾ. ರವಿ ಮೇಲಿನ ಜಾತಿ ದೌರ್ಜನ್ಯ 2005ರಲ್ಲಿ ಅವರು ಮೊದಲ ಬಾರಿಗೆ ಡೈರಿ ತಂತ್ರಜ್ಞಾನ ವಿಭಾಗದಲ್ಲಿ ಗುತ್ತಿಗೆ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡಾಗ ಪ್ರಾರಂಭಗೊಂಡಿತು. ಅವರು ಖಾಯಂ ಉದ್ಯೋಗಿಗಳಂತೆ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರೂ, ಸಂಬಳದ ಒಂದು ಭಾಗವನ್ನು ಮಾತ್ರ ನೀಡಲಾಗುತ್ತಿತ್ತು. ಅಲ್ಲದೆ, ಗುತ್ತಿಗೆ ಒಪ್ಪಂದವನ್ನು ಪ್ರತಿ ಆರು ತಿಂಗಳಿಗೊಮ್ಮೆ ಎರಡರಿಂದ ಮೂರು ದಿನಗಳ ವಿರಾಮದೊಂದಿಗೆ ನವೀಕರಿಸಲಾಗುತ್ತಿತ್ತು. ಇದು ಸಾಮಾನ್ಯವಾಗಿ ಗುತ್ತಿಗೆ ಕಾರ್ಮಿಕರ ಕೆಲಸದ ಭದ್ರತೆಯನ್ನು ನಿರಾಕರಿಸಲು ಬಳಸುವ ತಂತ್ರವಾಗಿದೆ.
2010ರಲ್ಲಿ, ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಗುತ್ತಿಗೆ ಪ್ರಾಧ್ಯಾಪಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆದೇಶಿಸಿತ್ತು. ಎಸ್‌ವಿವಿಯು ಇದನ್ನು ನಿರ್ಲಕ್ಷಿಸಿದಾಗ, ಡಾ. ರವಿ ಆಂಧ್ರ ಪ್ರದೇಶ ಹೈಕೋರ್ಟ್ ಮೊರೆ ಹೋಗಿದ್ದರು. 2014ರಲ್ಲಿ, ನ್ಯಾಯಾಲಯವು ರವಿ ಪರ ತೀರ್ಪು ನೀಡಿತ್ತು. ವಿಶ್ವವಿದ್ಯಾನಿಲಯವು ಅವರಿಗೆ ಶಾಶ್ವತ ಸಹಾಯಕ ಪ್ರಾಧ್ಯಾಪಕರಂತೆ ಸಮಾನವಾದ ವೇತನವನ್ನು ನೀಡಬೇಕೆಂದು ಆದೇಶಿಸಿತ್ತು. ಆದರೆ, ವಿವಿಯು ನ್ಯಾಯಾಲಯದ ಆದೇಶವನ್ನು ಪಾಲಿಸಿರಲಿಲ್ಲ. ರವಿ ಅವರಿಗೆ ನೆಟ್ (NET) ಅರ್ಹತೆ ಇಲ್ಲ ಎಂದು ಸುಳ್ಳು ಹೇಳಿತ್ತು. ಆದರೆ, ಇದು AICTE ಆಡಳಿತದ ಇಂಜಿನಿಯರಿಂಗ್ ವಿಭಾಗಕ್ಕೂ ಅನ್ವಯಿಸದ ಅವಶ್ಯಕತೆಯಾಗಿದೆ.
ಆಂಧ್ರ ಪ್ರದೇಶ ಹೈಕೋರ್ಟ್‌ನ ನಿರ್ದೇಶನಗಳಿಗೆ ಪ್ರತಿಕ್ರಿಯೆ ನೀಡಿದ್ದ ವಿವಿ, ರವಿ ಅವರ ನೇಮಕವು ಆಯ್ಕೆ ಸಮಿತಿಯ ಮೂಲಕ ನಡೆಯದ ಕಾರಣ ಮತ್ತು ಯುಜಿಸಿ ಸೂಚಿಸಿದಂತೆ ಅವರು ನೆಟ್ ಅರ್ಹತೆಯನ್ನು ಹೊಂದಿಲ್ಲದ ಕಾರಣ ಯುಜಿಸಿ ಸೂಚಿಸಿದ ವೇತನಗಳಿಗೆ ಅರ್ಹರಲ್ಲ ಎಂದು ಹೇಳಿತ್ತು.
ಆದರೆ, ಈ ಹೇಳಿಕೆಯು 2012 ಮತ್ತು 2013 ರಲ್ಲಿ ವಿಶ್ವವಿದ್ಯಾನಿಲಯವು ಮಾಡಿದ ನೇಮಕಾತಿಗಳಿಗೆ ವಿರುದ್ಧವಾಗಿತ್ತು. ಏಕೆಂದರೆ, ಆಗ ಹಲವರಿಗೆ ನೆಟ್ ಅರ್ಹತೆಯನ್ನು ನಿರ್ಲಕ್ಷಿಸಿ ಆಯ್ಕೆ ಸಡಿಲಗೊಳಿಸಲಾಗಿತ್ತು ಮತ್ತು ಯುಜಿಸಿ ಸೂಚಿಸಿದ ವೇತನ ನೀಡಲಾಗಿತ್ತು. ಇಂದಿಗೂ ಸಹ ವಿವಿಯ ಐವರು ಸಹಾಯಕ ಪ್ರಾಧ್ಯಾಪಕರು ನೆಟ್ ಅರ್ಹತೆಯನ್ನು ಹೊಂದಿಲ್ಲ. ಆದರೆ, ಅವರು ವೇತನದ ಜೊತೆಗೆ ಎಲ್ಲಾ ಭತ್ಯೆಗಳನ್ನು ಪಡೆಯುತ್ತಿದ್ದಾರೆ.
2012–2013ರ ನಡುವೆ ವಿವಿಯು 150ಕ್ಕೂ ಹೆಚ್ಚು ಅಧ್ಯಾಪಕರನ್ನು ನೆಟ್ ಅರ್ಹತೆಗಳಿಲ್ಲದೆ ನೇಮಿಸಿಕೊಂಡಿದೆ ಎಂಬುವುದು ಆರ್‌ಟಿಐ ದಾಖಲೆಗಳಿಂದ ಬಹಿರಂಗೊಂಡಿದೆ. ಅವರೆಲ್ಲರೂ ಪೂರ್ಣ ಸಂಬಳ ಮತ್ತು ಬಡ್ತಿಗಳನ್ನು ಪಡೆದಿದ್ದಾರೆ. ‘ಸಮಾನ ಕೆಲಸಕ್ಕೆ ಸಮಾನ ವೇತನ’ವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್‌ನ ತೀರ್ಪು ಮತ್ತು ಆಂಧ್ರ ಪ್ರದೇಶ ಎಸ್‌ಸಿ/ಎಸ್‌ಟಿ ಆಯೋಗದ ಪುನರಾವರ್ತಿತ ಆದೇಶಗಳ ಹೊರತಾಗಿಯೂ, ಡಾ. ರವಿ ಅವರಿಗೆ ಸಮಾನ ವೇತನ ದೊರೆತಿಲ್ಲ ಎಂದು themooknayak.com ಹೇಳಿದೆ.
ಅಕ್ಟೋಬರ್ 2024ರಲ್ಲಿ, ಡಾ. ರವಿ ಅವರು ತಿರುಪತಿಯ ಎಸ್‌ವಿಯು ಉಪಕುಲಪತಿಗಳನ್ನು ಸಂಪರ್ಕಿಸಿ ವಿಷಯಗಳನ್ನು ಅವರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಮೇಲ್ವಿಚಾರಣೆ ಮಾಡುವುದಾಗಿ ಕುಲಪತಿ ಭರವಸೆ ನೀಡಿದ್ದರು. ಆದಾಗ್ಯೂ, ಈ ವಿಷಯದಲ್ಲಿ ಯಾವುದೇ ಬೆಳವಣಿಗೆ ಆಗಿಲ್ಲ.
ಇತ್ತೀಚೆಗೆ ಡಾ. ರವಿ ‘ಪ್ರತಿಭಟನೆ ವ್ಯಕ್ತಪಡಿಸಿ’ದ ನೆಲದ ಮೇಲೆ ಕುಳಿತ ಘಟನೆಯು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಜಾತಿ ಆಧಾರಿತ ತಾರತಮ್ಯಕ್ಕೆ ಉದಾಹರಣೆಯಾಗಿದೆ. ರವಿ ದಲಿತ ಸಮುದಾಯದವರು ಎಂಬ ಕಾರಣಕ್ಕೆ ಅವರಿಗೆ ವೇತನ ಸೇರಿದಂತೆ ಎಲ್ಲದರಲ್ಲೂ ತಾರತಮ್ಯ ಎಸಗಿಕೊಂಡು ಬರಲಾಗಿದೆ.
ವಿಶ್ವವಿದ್ಯಾನಿಲಯದ ಮೂಲಗಳ ಪ್ರಕಾರ, ವಿಭಾಗೀಯ ವೈದ್ಯಾಧಿಕಾರಿ ಹೊಸ ಕುರ್ಚಿಗಳನ್ನು ಪಡೆದುಕೊಂಡು ಡಾ. ರವಿ ಅವರಿಗೆ ಒಂದನ್ನು ನೀಡಿದ್ದರು. ಆದರೆ, ಜೂನ್ 19 ರಂದು ಅವರು ಒಂದು ದಿನದ ರಜೆ ತೆಗೆದುಕೊಂಡಾಗ, ಅಸೋಸಿಯೇಟ್ ಡೀನ್ ಡಾ. ರೆಡ್ಡಿ ರವಿ ಅವರ ಕುರ್ಚಿಯನ್ನು ಬೇರೆ ವಿಭಾಗಕ್ಕೆ ಮೀಸಲಿಟ್ಟಿರುವುದಾಗಿ ಹೇಳಿ ಅದನ್ನು ತೆಗೆದು ಹಾಕಿದ್ದರು. ಮರುದಿನ, ರವಿ ಅವರು ಕುರ್ಚಿ ಕಾಣೆಯಾರುವುದಾಗಿ ಹೇಳಿದ್ದರು. ಆಗ ವಿಭಾಗೀಯ ವೈದ್ಯಾಧಿಕಾರಿ ತಾತ್ಕಾಲಿಕವಾಗಿ ತಮ್ಮ ಕಚೇರಿಯ ಸಂದರ್ಶಕರ ಕುರ್ಚಿಯನ್ನು ರವಿ ಅವರಿಗೆ ನೀಡಿದ್ದರು. ಆದರೆ, ತನ್ನ ಶಾಶ್ವತ ಕುರ್ಚಿಯನ್ನು ಕಿತ್ತುಕೊಂಡಿದ್ದಕ್ಕೆ ರವಿ ಅವರು ನೆಲದ ಮೇಲೆ ಕುಳಿತು ಕೆಲಸ ಮಾಡುವ ಮೂಲಕ ತಾರತಮ್ಯವನ್ನು ಪ್ರತಿಭಟಿಸಿದ್ದಾರೆ.
ನಂತರ, ವಿವಿಯ ಉಪಕುಲಪತಿ ಮತ್ತು ಪ್ರಾಂಶುಪಾಲರು ಮಧ್ಯಪ್ರವೇಶಿಸಿ ಡಾ.ರವಿ ಮತ್ತು ಅಸೋಸಿಯೇಟ್ ಡೀನ್ ರೆಡ್ಡಿ ನಡುವೆ ಮಧ್ಯಸ್ಥಿಕೆ ಮಾಡಿದ್ದರು. ನಂತರ ಡಾ. ರೆಡ್ಡಿ ರವಿ ಅವರಿಗೆ ಕ್ಷಮೆಯಾಚಿಸಿದ್ದಾರೆ ಎಂದು themooknayak.com ಹೇಳಿದೆ. ಈ ಮಾಹಿತಿ ಖಚಿತಪಡಿಸಿಲ್ಲ ಎಂದಿದೆ.
ಡಾ. ರವಿ ಅವರ ಕುರ್ಚಿಯು ಬೇರೆ ವಿಭಾಗಕ್ಕೆ ಸೇರಿರುವುದರಿಂದ ಅದನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ ಎಂದು ಅಸೋಸಿಯೇಟ್ ಡೀನ್ ರವೀಂದ್ರ ರೆಡ್ಡಿ ಹೇಳಿಕೊಂಡಿದ್ದಾರೆ. ಆದರೆ, ಇದು ಕ್ಷುಲ್ಲಕ ನೆಪ, ಬೇರೆ ಯಾವುದೇ ಪ್ರಾಧ್ಯಾಪಕರು ಇಂತಹ ಕಿರುಕುಳವನ್ನು ಎದುರಿಸಿಲ್ಲ ಎಂದು ರವಿ ತಿಳಿಸಿದ್ದಾರೆ.
ವೇತನ ಸಮಾನತೆಗಾಗಿ ಡಾ. ರವಿ ಅವರ 20 ವರ್ಷಗಳ ಹೋರಾಟ ಮತ್ತು ನ್ಯಾಯಾಂಗದ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ವಿಶ್ವವಿದ್ಯಾಲಯದ ವಿರುದ್ಧ ಬಾಕಿ ಇರುವ ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ಗಮನಿಸಿದರೆ, ಡಾ. ರವಿ ಅವರ ಕುರ್ಚಿಯನ್ನು ಮಾತ್ರ ತೆಗೆದು ಹಾಕಿರುವುದು ಉದ್ದೇಶಪೂರ್ವಕ ಎನ್ನುವುದು ಕೆಲವು ಪ್ರಾಧ್ಯಾಪಕರ ಅಭಿಪ್ರಾಯ ಎಂದು ವರದಿ ತಿಳಿಸಿದೆ.
ಈ ವಿಚಾರದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಮೌನವನ್ನು ಪ್ರತಿಪಕ್ಷ ವೈಎಸ್ಆರ್ ಕಾಂಗ್ರೆಸ್ ಟೀಕಿಸಿದೆ. “ನಿಮ್ಮ ಆಡಳಿತದಲ್ಲಿ ದಲಿತ ಪ್ರಾಧ್ಯಾಪಕರನ್ನು ಏಕೆ ಈ ರೀತಿ ನಡೆಸಿಕೊಳ್ಳಲಾಗುತ್ತಿದೆ?” ಎಂದು ಪ್ರಶ್ನಿಸಿದೆ. ಆದರೆ, ಡಾ. ರವಿ ಮೇಲೆ ಜಾತಿ ದೌರ್ಜನ್ಯ ವೈಎಸ್‌ಆರ್ ಕಾಂಗ್ರೆಸ್ ಆಡಳಿತದಲ್ಲೂ ನಡೆಯುತ್ತಿತ್ತು ಎನ್ನುವುದು ಸತ್ಯ.
ಸಾಂಸ್ಥಿಕ ನಿರಾಸಕ್ತಿಯಿಂದ ಬೇಸತ್ತ ಡಾ. ರವಿ, ಮೇ 23, 2025ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು, ತಮ್ಮ ಎರಡು ದಶಕಗಳ ನೋವನ್ನು ವಿವರಿಸಿದ್ದಾರೆ. ನ್ಯಾಯಾಲಯದ ಆದೇಶದ ಪ್ರಕಾರ, 2014 ರಿಂದ ಬಾಕಿ ವೇತನವನ್ನು ಪಾವತಿಸಲು ವಿಶ್ವವಿದ್ಯಾಲಯದ ನಿಯಂತ್ರಣಾಧಿಕಾರಿ 2020ರಲ್ಲಿ ಹೇಗೆ ಶಿಫಾರಸು ಮಾಡಿದ್ದರು ಎಂಬುದನ್ನು ಅವರು ತಿಳಿಸಿದ್ದಾರೆ ಮತ್ತು ಈ ವಿಚಾರದಲ್ಲಿ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.
2024ರ ಸಭೆಯಲ್ಲಿ ಉಪಕುಲಪತಿಗಳು ನ್ಯಾಯದ ಭರವಸೆ ನೀಡಿದ್ದರು. ಆದರೆ, ಏನೂ ಮಾಡಿಲ್ಲ. ನನ್ನ ಅರ್ಹತೆಗಳು ಮತ್ತು 20 ವರ್ಷಗಳ ಸೇವೆಯ ಹೊರತಾಗಿಯೂ, ಹೊಸದಾಗಿ ನೇಮಕಗೊಂಡ ಖಾಯಂ ಅಧ್ಯಾಪಕರಿಗಿಂತ ಕಡಿಮೆ ವೇತನ ಪಡೆಯುತ್ತಿದ್ದೇನೆ ಎಂದು ರವಿ ಹೇಳಿಕೊಂಡಿದ್ದಾರೆ.
“ನಾನು ಹೋರಾಟ ಮುಂದುವರಿಸುವಷ್ಟು ಆರ್ಥಿಕವಾಗಿ ಸದೃಢನಲ್ಲ” ಎಂದು ರವಿ ಹೇಳಿದ್ದಾರೆ. ಈ ವ್ಯವಸ್ಥೆಯು ತಳ ವರ್ಗದ ಜನರನ್ನು ಸಂಪನ್ಮೂಲಗಳು ಖಾಲಿಯಾಗುವವರೆಗೆ ಹೇಗೆ ಕಾನೂನು ಹೋರಾಟಗಳಿಗೆ ಎಳೆಯುವ ಮೂಲಕ ಶೋಷಿಸುತ್ತದೆ ಎಂಬುದನ್ನು ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಅವರು ವಿವರಿಸಿದ್ದಾರೆ.
Courtesy : themooknayak.com
ಆಂಧ್ರ: ದಲಿತ ಪ್ರಾಧ್ಯಾಪಕನ ಕುರ್ಚಿ ತೆಗೆದು ನೆಲದ ಮೇಲೆ ಕೂರಿಸಿದ ಪ್ರಿನ್ಸಿಪಾಲ್; ವ್ಯಾಪಕ ಆಕ್ರೋಶ


