ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ 52, 30, 126 ಹೆಸರುಗಳನ್ನು ಕೈ ಬಿಡಲಾಗಿದೆ. ಈ ಮತದಾರರ ಪೈಕಿ ಹಲವರು ಸಾವನ್ನಪ್ಪಿದ್ದಾರೆ, ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಮತ್ತು ಇನ್ನೂ ಹಲವರ ಹೆಸರುಗಳು ಬಹು ಸ್ಥಳಗಳಲ್ಲಿ ದಾಖಲಾಗಿತ್ತು ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ತಿಳಿಸಿದೆ.
ಮಂಗಳವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಆಯೋಗ, “ಪ್ರಾಥಮಿಕ ಪರಿಷ್ಕರಣೆ ಪ್ರಕ್ರಿಯೆ ವೇಳೆ 18.66 ಲಕ್ಷ ಮತದಾರರು ಮೃತಪಟ್ಟಿರುವುದು, 26.01 ಲಕ್ಷ ಮತದಾರರು ಶಾಶ್ವತವಾಗಿ ಕ್ಷೇತ್ರಗಳನ್ನು ಬದಲಾಯಿಸಿರುವುದು ಮತ್ತು 7.5 ಲಕ್ಷ ಮತದಾರ ಹೆಸರುಗಳು ಬಹು ಸ್ಥಳಗಳಲ್ಲಿ ದಾಖಲಾಗಿರುವುದು ಕಂಡು ಬಂದಿದೆ ಎಂದು ತಿಳಿಸಿದೆ.
ಇದಲ್ಲದೆ, 11,484 ಮತದಾರರನ್ನು ಪತ್ತೆ ಹಚ್ಚಲಾಗದವರು ಎಂದು ಗುರುತಿಸಲಾಗಿದೆ. ಇದು ಬಿಹಾರದ ಒಟ್ಟು ಮತದಾರ ಪೈಕಿ ಶೇಕಡ 6.62ರಷ್ಟು ಎಂದು ಚುನಾವಣಾ ಆಯೋಗ ಹೇಳಿದೆ.
ಜೂನ್ 24ರ ಹೊತ್ತಿಗೆ ಬಿಹಾರದಲ್ಲಿ ಒಟ್ಟು 7.89 ಕೋಟಿ ನೋಂದಾಯಿತ ಮತದಾರರಿದ್ದರು. ಪ್ರಸ್ತುತ 7.16 ಕೋಟಿ (ಶೇ. 90.67) ಮತದಾರರು ಗಣತಿ ನಮೂನೆಗಳನ್ನು (ಇಎಫ್) ಸಲ್ಲಿಸಿದ್ದಾರೆ. ಈ ಪೈಕಿ 7.13 ಕೋಟಿ (ಶೇ. 90.37) ಮತದಾರರ ನಮೂನೆಗಳು ಡಿಜಿಟಲೀಕರಣಗೊಂಡಿವೆ ಎಂದು ಆಯೋಗ ಮಾಹಿತಿ ನೀಡಿದೆ.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗಾಗಿ ಸುಮಾರು 1 ಲಕ್ಷ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು), 4 ಲಕ್ಷ ಸ್ವಯಂಸೇವಕರು ಮತ್ತು 12 ಪ್ರಮುಖ ರಾಜಕೀಯ ಪಕ್ಷಗಳಿಂದ ನಾಮನಿರ್ದೇಶನಗೊಂಡ 1.5 ಲಕ್ಷ ಬೂತ್ ಮಟ್ಟದ ಏಜೆಂಟ್‌ಗಳನ್ನು (ಬಿಎಲ್‌ಎಗಳು) ಬಳಸಿಕೊಳ್ಳಲಾಗಿದೆ. ಈ ತಂಡಗಳಿಗೆ ಗಣತಿ ನಮೂನೆಗಳು ಅಥವಾ ಇಎಫ್‌ಗಳನ್ನು ಸಲ್ಲಿಸದ ಅಥವಾ ಕ್ಷೇತ್ರ ಪರಿಶೀಲನೆಯ ಸಮಯದಲ್ಲಿ ಕಾಣೆಯಾದ ಮತದಾರರನ್ನು ತಲುಪುವ ಕಾರ್ಯವನ್ನು ವಹಿಸಲಾಗಿತ್ತು ಎಂದಿದೆ.
ಇಲ್ಲಿಯವರೆಗೆ, 7.68 ಕೋಟಿ (ಶೇ. 97.30) ಮತದಾರರು ಗಣತಿ ನಮೂನೆ ಸಲ್ಲಿಕೆ ಅಥವಾ ಆನ್-ಗ್ರೌಂಡ್ ಪರಿಶೀಲನೆಯ ಮೂಲಕ ಮತ ಚಲಾಯಿಸಿದ್ದಾರೆ. ಉಳಿದ ಸುಮಾರು 21.35 ಲಕ್ಷ (ಶೇ. 2.70) ಮತದಾರರನ್ನು ಇನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿಲ್ಲ, ಅವರ ಇಎಫ್‌ಗಳು ಇನ್ನೂ ಬಾಕಿ ಉಳಿದಿವೆ ಎಂದು ಆಯೋಗ ತಿಳಿಸಿದೆ.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಪಟ್ಟಿಯಿಂದ ಕೈ ಬಿಡಲಾದ 52.30 ಲಕ್ಷ ಮತದಾರರ ವಿವರಗಳನ್ನು ರಾಜ್ಯದ ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಆಗಸ್ಟ್ 1ರಂದು ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ಯಾವುದೇ ಸೇರ್ಪಡೆ, ಅಳಿಸುವಿಕೆ ಅಥವಾ ತಿದ್ದುಪಡಿಗಳ ಕುರಿತು ಸಾರ್ವಜನಿಕರು ಆಕ್ಷೇಪಣೆಗಳನ್ನು ಸಲ್ಲಿಸಲು ಆಗಸ್ಟ್ 1 ರಿಂದ ಸೆಪ್ಟೆಂಬರ್ 1 ರವರೆಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗುವುದು ಎಂದಿದೆ.
ಬಿಹಾರ: ಗುರುತಿಗಾಗಿ ಆಧಾರ್, ವೋಟರ್ ಐಡಿ, ಪಡಿತರ ಚೀಟಿ ಮಾತ್ರ ಪರಿಗಣನೆ- ಚುನಾವಣಾ ಆಯೋಗ ಸಮರ್ಥನೆ


