ನ್ಯೂಯಾರ್ಕ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನದ ನಡುವಿನ ಇತ್ತೀಚಿನ ಯುದ್ಧವನ್ನು ತಾನು ನಿಲ್ಲಿಸಿದ್ದೇನೆ ಮತ್ತು ಈ ಸಂದರ್ಭದಲ್ಲಿ ಐದು ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂಬ ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಬಹುಶಃ ಪರಮಾಣು ಯುದ್ಧದಲ್ಲಿ ಕೊನೆಗೊಳ್ಳಬಹುದಾಗಿದ್ದ ಈ ಸಂಘರ್ಷವನ್ನು ತಡೆಯಲು ತಾನು ಮಧ್ಯಪ್ರವೇಶಿಸಿದೆ ಎಂದು ಟ್ರಂಪ್ ಮಂಗಳವಾರ ಹೇಳಿಕೊಂಡಿದ್ದಾರೆ.
ವೈಟ್‌ಹೌಸ್‌ನಲ್ಲಿ ನಡೆದ ಕಾಂಗ್ರೆಸ್ ಸದಸ್ಯರ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಟ್ರಂಪ್, ಭಾರತ ಮತ್ತು ಪಾಕಿಸ್ತಾನ ಯುದ್ದವನ್ನು ಮಾತ್ರವಲ್ಲದೇ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ರುವಾಂಡಾ ನಡುವಿನ ಯುದ್ಧವನ್ನು ತಾನು ನಿಲ್ಲಿಸಿರುವುದಾಗಿ ಹೇಳಿದ್ದಾರೆ. ಅವರು ಪರಿಸ್ಥಿತಿಯನ್ನು ವಿವರಿಸುತ್ತಾ, “ಭಾರತ-ಪಾಕಿಸ್ತಾನದವರು ಐದು ವಿಮಾನಗಳನ್ನು ಹೊಡೆದುರುಳಿಸಿದರು, ಅದು ಹಿಂದಕ್ಕೆ-ಮುಂದಕ್ಕೆ ನಡೆಯುತ್ತಿತ್ತು. ನಾನು ಅವರಿಗೆ ಕರೆ ಮಾಡಿ, ‘ಕೇಳಿ, ಇನ್ನು ಮುಂದೆ ನಿಮ್ಮೊಂದಿಗೆ ನಾವು ವ್ಯಾಪಾರ ನಡೆಸುವುದಿಲ್ಲ. ನೀವು ಯುದ್ಧವನ್ನು ಮುಂದುವರಿಸಿದರೆ ಅದು ಒಳ್ಳೆಯದಾಗಿರುವುದಿಲ್ಲ… ಅವೆರಡೂ ಪ್ರಬಲ ಪರಮಾಣು ರಾಷ್ಟ್ರಗಳು ಮತ್ತು ಈ ಪರಮಾಣು ಯುದ್ಧ ಸಂಭವಿಸುತ್ತಿತ್ತು ಮತ್ತು ಅದು ಎಲ್ಲಿಗೆ ತಲುಪುತ್ತಿತ್ತು ಎಂದು ಯಾರಿಗೂ ಗೊತ್ತಿರಲಿಲ್ಲ ಮತ್ತು ನಾನು ಅದನ್ನು ನಿಲ್ಲಿಸಿದೆ’ ಎಂದು ಹೇಳಿದರು.
ಟ್ರಂಪ್ ತಮ್ಮ ಆಡಳಿತದ ಇತರ ವಿದೇಶಾಂಗ ನೀತಿ ಯಶಸ್ಸುಗಳನ್ನು ಸಹ ಉಲ್ಲೇಖಿಸಿದರು. ಅಮೆರಿಕವು ಇರಾನ್‌ನ ಸಂಪೂರ್ಣ ಪರಮಾಣು ಸಾಮರ್ಥ್ಯವನ್ನು ತೆಗೆದುಹಾಕಿದೆ ಮತ್ತು ಕೊಸೊವೊ ಮತ್ತು ಸೆರ್ಬಿಯಾ ನಡುವಿನ ಸಂಘರ್ಷವನ್ನು ನಿಲ್ಲಿಸಿದೆ ಎಂದೂ ಅವರು ಹೇಳಿಕೊಂಡಿದ್ದಾರೆ. ಮಾಜಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅದನ್ನು ಮಾಡುತ್ತಿದ್ದರು ಎಂದು ನೀವು ಭಾವಿಸುತ್ತೀರಾ? ನಾನು ಹಾಗೆ ಅಂದುಕೊಳ್ಳುವುದಿಲ್ಲ. ಅವರು ಆ ದೇಶಗಳ ಬಗ್ಗೆ ಎಂದಾದರೂ ಕೇಳಿದ್ದಾರೆಯೆಂದು ನೀವು ಭಾವಿಸುತ್ತೀರಾ? ನಾನು ಹಾಗೆ ಅಂದುಕೊಳ್ಳುವುದಿಲ್ಲ” ಎಂದು ಟ್ರಂಪ್ ಹೇಳಿದರು.
ಟ್ರಂಪ್ ಈ ಹಿಂದೆ ಕೂಡ ಭಾರತ-ಪಾಕ್ ಸಂಘರ್ಷವನ್ನು ನಿಲ್ಲಿಸಿದ್ದಾಗಿ ಪದೇ ಪದೇ ಹೇಳಿದ್ದರು. ಕಳೆದ ಶುಕ್ರವಾರದಂದು ಯುದ್ಧದ ಸಮಯದಲ್ಲಿ “ಐದು ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ” ಎಂದು ಅವರು ಮೊದಲ ಬಾರಿಗೆ ಉಲ್ಲೇಖಿಸಿದರು. ಭಾರತ, ಪಾಕಿಸ್ತಾನ ಯುದ್ದದಲ್ಲಿ ನಾಲ್ಕು ಅಥವಾ ಐದು ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ಈ ಎರಡು ಪರಮಾಣು ದೇಶಗಳಾಗಿವೆ ಎಂದು ಅವರು ರಿಪಬ್ಲಿಕನ್ ಸೆನೆಟರ್‌ಗಳಿಗಾಗಿ ಆಯೋಜಿಸಿದ್ದ ಔತಣಕೂಟದಲ್ಲಿ ವೈಟ್‌ಹೌಸ್‌ನಲ್ಲಿ ಮಾಡಿದ ಭಾಷಣದಲ್ಲಿ ಹೇಳಿದರು.
ಮಂಗಳವಾರದಂದು ನಡೆದ ‘ಬಹುಪಕ್ಷೀಯತೆ ಮತ್ತು ವಿವಾದಗಳ ಶಾಂತಿಯುತ ಇತ್ಯರ್ಥ’ ಕುರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಕ್ತ ಚರ್ಚೆಯಲ್ಲಿ ಅಮೆರಿಕದ ಕಾರ್ಯಕಾರಿ ರಾಯಭಾರಿ ಡೊರೊಥಿ ಶಿಯಾ ಅವರು, ದೇಶ ದೇಶಗಳ ನಡುವಿನ ವಿವಾದಗಳಿಗೆ ಶಾಂತಿಯುತ ಪರಿಹಾರಗಳನ್ನು ಕಂಡುಕೊಳ್ಳಲು ಅಮೆರಿಕವು ವಿಶ್ವಾದ್ಯಂತ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು. ಕಳೆದ ಮೂರು ತಿಂಗಳಲ್ಲಿ “ಇಸ್ರೇಲ್ ಮತ್ತು ಇರಾನ್ ನಡುವೆ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ರುವಾಂಡಾ ನಡುವೆ, ಮತ್ತು ಭಾರತ ಮತ್ತು ಪಾಕಿಸ್ತಾನ ನಡುವೆ ಅಮೆರಿಕದ ನಾಯಕತ್ವವು ಉದ್ವಿಗ್ನತೆಯನ್ನು ಕಡಿಮೆ ಮಾಡಿದೆ” ಎಂದು ಶಿಯಾ ಉಲ್ಲೇಖಿಸಿದರು.
ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ರಾಯಭಾರಿ ಪರ್ವತನೇನಿ ಹರೀಶ್ ಅವರು ಈ ಭದ್ರತಾ ಮಂಡಳಿಯ ಸಭೆಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಮಾತನಾಡಿದರು. ಈ ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಮುಖವಾಡವಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಹೊತ್ತುಕೊಂಡಿತ್ತು. ಇಂತಹ ಭಯೋತ್ಪಾದನೆ ಚಟುವಟಿಕೆಯನ್ನು ಹತ್ತಿಕ್ಕಲು ಸೂಕ್ತ ಕ್ರಮಗಳನ್ನು ತಗೆದುಕೊಳ್ಳಲೇಬೇಕು ಎಂದು ಹರೀಶ್ ಒತ್ತಿ ಹೇಳಿದರು.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಘೋರ ಭಯೋತ್ಪಾದಕ ದಾಳಿಯ ಪರಿಣಾಮವಾಗಿ 26 ಅಮಾಯಕ ಪ್ರವಾಸಿಗರನ್ನು ಕೊಂದಿದ್ದರಿಂದ ಮತ್ತು ಏಪ್ರಿಲ್ 25ರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೇಳಿಕೆಯ ಆಧಾರದ ಮೇಲೆ ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು ಎಂದು ಅವರು ಹೇಳಿದರು.
ಭದ್ರತಾ ಮಂಡಳಿಯ ಸದಸ್ಯರು ಈ ಭಯೋತ್ಪಾದಕ ಕೃತ್ಯದ ಅಪರಾಧಿಗಳು, ಸಂಘಟಕರು, ಹಣಕಾಸುದಾರರು ಮತ್ತು ಪ್ರಾಯೋಜಕರನ್ನು ಹೊಣೆಗಾರರನ್ನಾಗಿ ಮಾಡಲು ಮತ್ತು ಅವರನ್ನು ನ್ಯಾಯದ ಕಟಕಟೆಗೆ ತರಲು ಒತ್ತು ನೀಡಿದರು ಎಂದು ಹರೀಶ್ ಒತ್ತಿ ಹೇಳಿದರು. ಭಾರತವು ತನ್ನ ಪ್ರಾಥಮಿಕ ಉದ್ದೇಶಗಳನ್ನು ಸಾಧಿಸಿದ ನಂತರ, ಪಾಕಿಸ್ತಾನದ ಕೋರಿಕೆಯ ಮೇರೆಗೆ ಯುದ್ಧವನ್ನು ನೇರವಾಗಿ ನಿಲ್ಲಿಸಲಾಯಿತು ಎಂದು ಅವರು ಹೇಳಿದರು.
ಮೇ 10ರಂದು ವಾಷಿಂಗ್ಟನ್ ಮಧ್ಯಸ್ಥಿಕೆಯಲ್ಲಿ ಸುದೀರ್ಘ ಮಾತುಕತೆಗಳ ನಂತರ ಭಾರತ ಮತ್ತು ಪಾಕಿಸ್ತಾನಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದರು. ಯುದ್ಧ ಪ್ರಾರಂಭವಾದಗಿನಿಂದ ಪರಿಸ್ಥಿತಿಯನ್ನು ನಿವಾರಿಸಲು ಸಹಾಯ ಮಾಡಿದ್ದೇನೆ ಮತ್ತು ಸಂಘರ್ಷವನ್ನು ನಿಲ್ಲಿಸಿದರೆ ಅಮೆರಿಕವು ಭಾರತ ಪಾಕಿಸ್ತಾನದೊಂದಿಗೆ “ಹೆಚ್ಚು ಹೆಚ್ಚು ವ್ಯಾಪಾರ” ಮಾಡಲಿದೆ ಎಂದು ಹೇಳಿದ್ದೇನೆ ಎಂದು ಅನೇಕ ಸಂದರ್ಭಗಳಲ್ಲಿ ತಮ್ಮ ಹೇಳಿಕೆಯನ್ನು ಪುನರಾವರ್ತಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಟ್ರಂಪ್ ಜೂನ್‌ನಲ್ಲಿ ಕೆನಡಾದ ಕಾನಾನ್‌ಸ್ಕಿಸ್‌ನಲ್ಲಿ ನಡೆದ ಜಿ7 ನಾಯಕರ ಶೃಂಗಸಭೆಯಲ್ಲಿ ಭೇಟಿಯಾಗಲು ನಿಗದಿಯಾಗಿತ್ತು. ಆದರೆ ಅಮೆರಿಕ ಅಧ್ಯಕ್ಷರು ಬೇಗನೆ ವಾಷಿಂಗ್ಟನ್‌ಗೆ ಮರಳಿದರು. ಕಾನಾನ್‌ಸ್ಕಿಸ್‌ನಿಂದ ನಿರ್ಗಮಿಸುವ ಮೊದಲು ಮೋದಿ ಟ್ರಂಪ್‌ರೊಂದಿಗೆ 35 ನಿಮಿಷಗಳ ದೂರವಾಣಿ ಸಂಭಾಷಣೆ ನಡೆಸಿದರು.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಕಾನಾನ್‌ಸ್ಕಿಸ್‌ನಿಂದ ನೀಡಿದ ವಿಡಿಯೋ ಸಂದೇಶದಲ್ಲಿ, ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆಯಾಗಲಿ ಅಥವಾ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದದ ಕುರಿತು ಅಮೆರಿಕದ ಮಧ್ಯಸ್ಥಿಕೆಯ ಯಾವುದೇ ಪ್ರಸ್ತಾಪದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಮೋದಿ ಟ್ರಂಪ್‌ಗೆ ಸ್ಪಷ್ಟವಾಗಿ ತಿಳಿಸಿದರು ಎಂದು ಹೇಳಿದರು. ಭಾರತವು ಯಾವುದೇ ದೇಶದ ಮಧ್ಯಸ್ಥಿಕೆಯನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಪ್ರಧಾನಿ ಮೋದಿಯವರು ಟ್ರಂಪ್ ಅವರಿಗೆ ದೃಢವಾಗಿ ಹೇಳಿದ್ದಾರೆ ಎಂದು ಮಿಸ್ರಿ ಹೇಳಿದರು. ಯುದ್ದವನ್ನು ನಿಲ್ಲಿಸುವ ಚರ್ಚೆಯು ಭಾರತ ಮತ್ತು ಪಾಕಿಸ್ತಾನದ ನಡುವೆಯೇ ನೇರವಾಗಿ ನಡೆಯಿತು ಮತ್ತು ಇದು ಪಾಕಿಸ್ತಾನದ ಕೋರಿಕೆಯ ಮೇರೆಗೆ ಯುದ್ಧ ನಿಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಯಿತು ಎಂದು ಸ್ಪಷ್ಟಪಡಿಸಿದರು.
ಮೋದಿ ಮೌನ: ಜೈರಾಮ್ ರಮೇಶ್ ತರಾಟೆ
ಕಳೆದ 73 ದಿನಗಳಲ್ಲಿ ಟ್ರಂಪ್ ಅವರು 25 ಬಾರಿ ತಾನೇ ಭಾರತ ಪಾಕಿಸ್ತಾನಗಳ ನಡುವಿನ ಯುದ್ಧವನ್ನು ನಿಲ್ಲಿಸಿರುವುದಾಗಿ ಹೇಳಿದ್ದಾರೆ. ಆದರೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಈ ಕುರಿತು ಸಂಪೂರ್ಣವಾಗಿ ಮೌನವಾಗಿದ್ದಾರೆ. ಮೋದಿಯವರು ವಿದೇಶ ಪ್ರವಾಸ ಮಾಡಲು ಮತ್ತು ಸ್ವದೇಶದಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಅಸ್ಥಿರಗೊಳಿಸಲು ಮಾತ್ರ ಸಮಯವನ್ನು ವ್ಯರ್ಥಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ “X” ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರತಿಪಕ್ಷಗಳಿಂದ ತೀವ್ರ ಪ್ರತಿಭಟನೆ: ಮೂರನೇ ದಿನವೂ ಸಂಸತ್ ಕಲಾಪ ಮುಂದೂಡಿಕೆ


