ಟೆಕ್ ಕಂಪನಿಗಳು ನೇಮಕಾತಿಗಳಲ್ಲಿ ಅಮೆರಿಕದ ಜನರಿಗೆ ಆದ್ಯತೆ ಕೊಡಬೇಕು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ವಾಷಿಂಗ್ಟನ್‌ನಲ್ಲಿ ನಡೆದ ಎಐ ಶೃಂಗಸಭೆಯಲ್ಲಿ ಮಾತನಾಡಿದ ಅವರು, ತಮ್ಮ ನೇಮಕಾತಿ ವಿಧಾನವನ್ನು ಬದಲಿಸಿಕೊಳ್ಳುವಂತೆ ಪ್ರಮುಖ ಟೆಕ್ ಕಂಪನಿಗಳಿಗೆ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.
ಟ್ರಂಪ್ ಅವರು ನಿರ್ದಿಷ್ಟವಾಗಿ ಭಾರತ ಮತ್ತು ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ ಹೆಚ್ಚಾಗಿ ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿರುವ ಗೂಗಲ್ ಮತ್ತು ಮೈಕ್ರೋಸಾಫ್ಟ್‌ನಂತಹ ಕಂಪನಿಗಳನ್ನು ಗುರಿಯಾಗಿಸಿ ಹೇಳಿಕೆ ನೀಡಿದ್ದಾರೆ ಎಂದು ವರದಿಗಳು ಅಂದಾಜಿಸಿವೆ.
ತಂತ್ರಜ್ಞಾನ ಕ್ಷೇತ್ರದ ನೇಮಕಾತಿ ವ್ಯವಸ್ಥೆಯನ್ನು ‘ಜಾಗತಿಕವಾದಿ ಮನಸ್ಥಿತಿ’ ಎಂದು ಸಂಭೋಧಿಸಿದ ಟ್ರಂಪ್, ಅಮೆರಿಕನ್ನರನ್ನು ಕಡೆಗಣಿಸಿ ಹೊರಗುತ್ತಿಗೆ ಮೂಲಕ ವಿದೇಶಿ ಉದ್ಯೋಗಿಗಳನ್ನು ವ್ಯಾಪಕವಾಗಿ ನೇಮಿಸಿಕೊಳ್ಳಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಮೆರಿಕದ ಅವಕಾಶ ಮತ್ತು ಸ್ವಾತಂತ್ರ್ಯವನ್ನು ಬಳಸಿಕೊಂಡು ಬೇರೆಡೆ ವ್ಯವಹಾರ ನಡೆಸುತ್ತಿರುವ ಕಂಪನಿಗಳ ವಿರುದ್ದ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಅಮೆರಿಕದ ಅವಕಾಶಗಳನ್ನು ಬಳಸಿಕೊಂಡ ಅನೇಕ ದೊಡ್ಡ ಟೆಕ್ ಕಂಪನಿಗಳು ಚೀನಾದಲ್ಲಿ ತಮ್ಮ ಘಟಕಗಳನ್ನು ಸ್ಥಾಪಿಸುತ್ತಿವೆ, ಭಾರತದಲ್ಲಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿವೆ, ಐರ್ಲೆಂಡ್‌ನಲ್ಲಿ ಲಾಭ ಮಾಡುತ್ತಿವೆ” ಎಂದು ಹೇಳಿದ್ದಾರೆ.
ಇದೊಂದು ಅನ್ಯಾಯದ ವ್ಯವಸ್ಥೆ. ಅಮೆರಿಕದ ಕಂಪನಿಗಳು ಅಮೆರಿಕದ ಅವಕಾಶ ಮತ್ತು ಸ್ವಾತಂತ್ರ್ಯವನ್ನು ಬಳಸಿಕೊಂಡು ತಮ್ಮ ವ್ಯವಹಾರವನ್ನು ವಿಸ್ತರಿಸಿಕೊಳ್ಳುತ್ತದೆ. ಆದರೆ, ಉದ್ಯೋಗಿಗಳನ್ನು ಬೇರೆ ದೇಶಗಳಿಂದ ನೇಮಿಸಿಕೊಳ್ಳುತ್ತದೆ. ಅಮೆರಿಕದ ಜನರಿಗೆ ಅವಕಾಶ ನಿರಾಕರಿಸುತ್ತಿವೆ ಎಂದು ಟ್ರಂಪ್ ಕಿಡಿಕಾರಿದ್ದಾರೆ.
ತಂತ್ರಜ್ಞಾನ ಉದ್ಯಮಕ್ಕೆ ನೇರ ಸಂದೇಶ ನೀಡಿದ ಟ್ರಂಪ್, “ನಮಗೆ ಅಮೆರಿಕದ ತಂತ್ರಜ್ಞಾನ ಕಂಪನಿಗಳು ಅಮೆರಿಕಕ್ಕೆ ಬೆಂಬಲ ನೀಡಬೇಕು. ಅಮೆರಿಕಕ್ಕೆ ಮೊದಲ ಆದ್ಯತೆ ಕೊಡಬೇಕು” ಎಂದಿದ್ದಾರೆ.
ಅಮೆರಿಕದ ಸಂಪನ್ಮೂಲಗಳು ಮತ್ತು ಸ್ವಾತಂತ್ರ್ಯಗಳನ್ನು ಬಳಸಿಕೊಂಡು ಕಂಪನಿಗಳು ಶ್ರೀಮಂತವಾಗಿ ಬೆಳೆದಿದ್ದರೂ, ಅವುಗಳ ವ್ಯವಹಾರ ನಿರ್ಧಾರಗಳು ಸ್ಥಳೀಯ ಉದ್ಯೋಗ ಮಾರುಕಟ್ಟೆಗಳಿಗೆ ಏಕಕಾಲದಲ್ಲಿ ಹಾನಿ ಮಾಡಿವೆ ಎಂದು ಟ್ರಂಪ್ ಹೇಳಿದ್ದು, ನೀತಿ ಬದಲಾವಣೆ ಮತ್ತು ಪ್ರಮುಖ ಕ್ಷೇತ್ರಗಳ ಮೇಲೆ ನೇರ ಒತ್ತಡ ಹೇರುವ ಮೂಲಕ ಈ ಪ್ರವೃತ್ತಿಯನ್ನು ಹಿಮ್ಮೆಟ್ಟಿಸಲು ಟ್ರಂಪ್ ಆಡಳಿತ ನಿರ್ಧರಿಸಿದಂತೆ ತೋರುತ್ತದೆ.
ಟ್ರಂಪ್ ಆಡಳಿತ ಟೆಕ್ ಕಂಪನಿಗಳಿಗೆ ಲಗಾಮು ಹಾಕಲು ನೀತಿ ಬದಲಾವಣೆ ಮಾಡಿದರೆ, ಹೊರಗುತ್ತಿಗೆ ಮತ್ತು ಅಂತಾರಾಷ್ಟ್ರೀಯ ನೇಮಕಾತಿ ವ್ಯವಸ್ಥೆ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. ದೀರ್ಘಕಾಲದಿಂದ ಅಮೆರಿಕನ್ ತಂತ್ರಜ್ಞಾನ ಕಂಪನಿಗಳೊಂದಿಗೆ ಒಪ್ಪಂದ ಹೊಂದಿರುವ ಭಾರತೀಯ ಐಟಿ ವೃತ್ತಿಪರರು ಮತ್ತು ಹೊರಗುತ್ತಿಗೆ ಸಂಸ್ಥೆಗಳು ಅಡೆತಡೆಗಳನ್ನು ಎದುರಿಸಬಹುದು.
ಟ್ರಂಪ್ ಆಡಳಿತ ಕಠಿಣ ನೀತಿಗಳನ್ನು ಜಾರಿಗೆ ತಂದರೆ ಅಮೆರಿಕದ ಕಂಪನಿಗಳು ಭಾರತದಂತಹ ದೇಶಗಳಿಂದ ಕಾರ್ಮಿಕರನ್ನು ನೇಮಿಸಿಕೊಳ್ಳುವ ತಮ್ಮ ಪ್ರಸ್ತುತ ಪದ್ಧತಿಯನ್ನು ಮುಂದುವರಿಸುವುದು ಕಷ್ಟವಾಗಬಹುದು ಅಥವಾ ದುಬಾರಿಯಾಗಬಹುದು. ಟ್ರಂಪ್ ನೀತಿಯನ್ನು ಅನುಸರಿಸಿ ಟೆಕ್ ಕಂಪನಿಗಳು ತಮ್ಮ ಕಾರ್ಯಚರಣೆ ಮತ್ತು ನೇಮಕಾತಿ ನೀತಿಯನ್ನು ಹೇಗೆ ರೂಪಿಸಿಕೊಳ್ಳಲಿದೆ ಎಂಬುವುದರ ಮೇಲೆ ಇದು ಅವಲಂಬಿತವಾಗಿದೆ.
ಏಕೆಂದರೆ, ಟೆಕ್ ಕಂಪನಿಗಳಿಗೆ ಟ್ರಂಪ್ ನೀತಿಯನ್ನೂ ಅನುಸರಿಸಬೇಕಿದೆ ಜೊತೆಗೆ ತಮ್ಮ ಸಾಗರೋತ್ತರ ವ್ಯವಹಾರಗಳನ್ನು ಉಳಿಸಿಕೊಳ್ಳಬೇಕಿದೆ. ಟೆಕ್ ದೈತ್ಯಗಳು ಜಾಗತಿಕವಾಗಿ ಬಹುತೇಕ ಪ್ರದೇಶಗಳಲ್ಲಿ ತಮ್ಮ ಶಾಖೆಯನ್ನು ಹೊಂದಿವೆ. ಕಂಪನಿಗಳ ಕಾರ್ಯಾಚರಣೆಗಳ್ಳೂ ಈ ಶಾಖೆಗಳು ಸಂಕೋಲೆಯಾಗಿ ಕಾರ್ಯ ನಿರ್ವಹಿಸುತ್ತವೆ. ಆದ್ದರಿಂದ ಹಠಾತ್ ಬದಲಾವಣೆ ಟೆಕ್ ಕ್ಷೇತ್ರದಲ್ಲಿ ಬಿರುಗಾಳಿಗೆ ಕಾರಣವಾಗಬಹುದು.
ಟ್ರಂಪ್ ಈಗಾಗಲೇ ಸಹಿ ಹಾಕಿರುವ ಕಾರ್ಯಕಾರಿ ಆದೇಶಗಳು ತಂತ್ರಜ್ಞಾನ ವಲಯ ದೇಶೀಯ ಆದ್ಯತೆಗಳ ಮೇಲೆ ಕೇಂದ್ರೀಕರಿಸುವ ಸ್ಪಷ್ಟ ಉದ್ದೇಶವನ್ನು ಸೂಚಿಸುತ್ತವೆ. ವಿಶಾಲ ಆರ್ಥಿಕ ರಾಷ್ಟ್ರೀಯತೆಯ ಕಾರ್ಯಸೂಚಿಯ ಭಾಗವಾಗಿ ಟ್ರಂಪ್ ಅವರು ಉದ್ಯೋಗ ಸೃಷ್ಟಿ ಮತ್ತು ನಾವೀನ್ಯತೆಗೆ ಎಐ ಅಭಿವೃದ್ಧಿಯನ್ನು ನಿರ್ಣಾಯಕ ಕ್ಷೇತ್ರವೆಂದು ಪರಿಗಣಿಸುತ್ತಿದ್ದಾರೆ. ಕಂಪನಿಗಳು ಜಾಗತಿಕ ಕಾರ್ಯಪಡೆಯ ತಂತ್ರಗಳನ್ನು ಅನುಸರಿಸುವ ಬದಲು ರಾಷ್ಟ್ರೀಯ ಉದ್ದೇಶಗಳಿಗೆ ಕೊಡುಗೆ ನೀಡಬೇಕೆಂದು ಅವರು ನಿರೀಕ್ಷಿಸುತ್ತಿದ್ದಾರೆ.
ಭಾರತ-ಪಾಕ್ ಯುದ್ದ ತಾನೇ ನಿಲ್ಲಿಸಿದ್ದು, ಈ ಸಂದರ್ಭ 5 ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ: ಪುನರುಚ್ಚರಿಸಿದ ಟ್ರಂಪ್


