ಬೆಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ (SIT) ಮುಖ್ಯಸ್ಥ, ಡಿಜಿಪಿ ಪ್ರಣವ್ ಮೊಹಾಂತಿ ಅವರನ್ನು ಕೇಂದ್ರ ಸೇವೆಗೆ ಕಳುಹಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರದ ನಿಯೋಜಿತ ಪಟ್ಟಿಯಲ್ಲಿ ಅವರ ಹೆಸರಿದ್ದರೂ, ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಡಿಜಿ ಹಂತದ ಅಧಿಕಾರಿಯನ್ನು ಎಸ್‌ಐಟಿ ಮುಖ್ಯಸ್ಥರನ್ನಾಗಿ ನೇಮಿಸಬೇಕೆಂದು ಸರ್ಕಾರ ತೀರ್ಮಾನಿಸಿತ್ತು. ಅದರಂತೆ ಪ್ರಣವ್ ಮೊಹಾಂತಿಯವರನ್ನು ನೇಮಿಸಲಾಯಿತು. ಆದರೆ, ಅವರನ್ನು ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ಈ ವಿಚಾರದಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ತಪ್ಪುಕಲ್ಪನೆಗಳನ್ನು ಹರಡಲಾಗುತ್ತಿದೆ, ಇದು ಸರಿಯಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಧರ್ಮಸ್ಥಳ ಪ್ರಕರಣ: ರಾಜಕೀಯ ಹಸ್ತಕ್ಷೇಪ ಇಲ್ಲ
ಧರ್ಮಸ್ಥಳ ಪ್ರಕರಣದಲ್ಲಿ ಸತ್ಯಾಂಶ ಹೊರಬರುವುದಷ್ಟೇ ಸರ್ಕಾರದ ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿಯೇ ಎಸ್‌ಐಟಿ ರಚಿಸಲಾಗಿದೆ. ತನಿಖೆ ಪಾರದರ್ಶಕವಾಗಿ ನಡೆಯಬೇಕು ಮತ್ತು ವರದಿ ಸಲ್ಲಿಸಿದ ನಂತರ ಸತ್ಯಾಸತ್ಯತೆ ಹೊರಬರಬೇಕು ಎನ್ನುವುದು ಸರ್ಕಾರದ ನಿಲುವಾಗಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ, ಯಾರನ್ನೂ ರಕ್ಷಿಸುವ ಅಥವಾ ಸಿಕ್ಕಿಹಾಕಿಸುವ ಅಜೆಂಡಾ ಸರ್ಕಾರಕ್ಕೆ ಖಂಡಿತ ಇಲ್ಲ ಎಂದು ಸಚಿವರು ಖಚಿತಪಡಿಸಿದರು. ಯಾರು ಕೂಡ ಈ ವಿಷಯವನ್ನು ತಪ್ಪು ಭಾವನೆಯಿಂದ ನೋಡಬಾರದು ಎಂದು ಅವರು ಮನವಿ ಮಾಡಿದರು.
ಒಳ ಮೀಸಲಾತಿ ಮತ್ತು ಇತರ ವಿಷಯಗಳು
ಒಳ ಮೀಸಲಾತಿ ಕುರಿತಂತೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಸರ್ಕಾರಕ್ಕೆ ವರದಿ ಸಲ್ಲಿಸುವ ಮೊದಲು ಒಳಪಂಗಡಗಳೊಂದಿಗೆ ಚರ್ಚೆ ನಡೆಸಲು ಸಭೆ ಕರೆದಿರುವುದಾಗಿ ಗೃಹ ಸಚಿವರು ತಿಳಿಸಿದರು. ಈ ವಿಚಾರದಲ್ಲಿ ಯಾರಿಗೂ ಬೇಸರವಾಗುವುದು ಬೇಡ, ನಮ್ಮಲ್ಲಿರುವ ಅಭಿಪ್ರಾಯಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು. ವರದಿ ಇನ್ನೂ ಸಲ್ಲಿಸಿಲ್ಲ, ಶೀಘ್ರದಲ್ಲೇ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಶಾಸಕರು ಒಳ ಮೀಸಲಾತಿ ಬಗ್ಗೆ ಚರ್ಚೆ ಮಾಡಿಕೊಳ್ಳುವುದಕ್ಕೆ ಯಾರು ಬ್ರೇಕ್ ಹಾಕುವುದಿಲ್ಲ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಟೋಯಿಂಗ್ ಪುನರಾರಂಭ: ಬೆಂಗಳೂರು ನಗರದಲ್ಲಿ ಇಲಾಖೆ ವತಿಯಿಂದಲೇ ಟೋಯಿಂಗ್ ಸೇವೆ ಪುನರಾರಂಭಿಸುವುದಾಗಿ ಸಚಿವರು ಘೋಷಿಸಿದರು. ಈ ಹಿಂದೆ ಗುತ್ತಿಗೆ ಕಂಪನಿಗಳಿಗೆ ನೀಡಲಾಗಿದ್ದ ಟೋಯಿಂಗ್ ಅನ್ನು ಇನ್ನು ಮುಂದೆ ಪೊಲೀಸರೇ ನಿರ್ವಹಿಸಲಿದ್ದಾರೆ. ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ರಸ್ತೆಗಳು ಜನರ ಓಡಾಟಕ್ಕೆ ಇವೆ, ಪಾರ್ಕಿಂಗ್‌ಗೆ ಅಲ್ಲ. ಪೊಲೀಸರು ಮಾನವೀಯತೆಯಿಂದ ವರ್ತಿಸುವಂತೆ ಸೂಚಿಸುವುದಾಗಿ ತಿಳಿಸಿದರು. ಜಟಾಪಟಿ ಉಂಟಾದರೆ ಕಾನೂನು ಬಳಸಲು ಹಿಂಜರಿಯುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಇತರೆ ಸುರಕ್ಷತಾ ಕ್ರಮಗಳು: ರಾಹುಲ್ ಗಾಂಧಿಯವರ ಭೇಟಿಗಾಗಿ ಪೊಲೀಸರು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರಿಗೆ ‘Z+’ ಭದ್ರತೆ ಒದಗಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು. ಬೆಂಗಳೂರಿನಲ್ಲಿ ಸ್ಲೀಪರ್ ಸೆಲ್‌ಗಳ ಬಗ್ಗೆ ತನಿಖಾ ಏಜೆನ್ಸಿಗಳು ಪತ್ತೆಹಚ್ಚಿವೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ, ಅಲ್-ಖೈದಾ ಸಂಪರ್ಕ ಹೊಂದಿದ್ದ ಮಹಿಳೆ ಕರ್ನಾಟಕದವರಲ್ಲ ಮತ್ತು ತನಿಖಾ ಸಂಸ್ಥೆಗಳು ಈ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಮೈಸೂರಿನಲ್ಲಿ MDMA ತಯಾರಿಸುತ್ತಿದ್ದ ಆರೋಪಿಗಳು 20 ದಿನದ ಹಿಂದೆ ಮುಂಬೈಯಿಂದ ಬಂದಿದ್ದರು, ಅಲ್ಲಿನ ಸುಳಿವಿನ ಮೇರೆಗೆ ನಮ್ಮ ಪೊಲೀಸರು ಅವರನ್ನು ಹಿಡಿದಿದ್ದಾರೆ ಎಂದು ತಿಳಿಸಿದರು. ಇದು ದೇಶಾದ್ಯಂತ ನಡೆಯುವ ಪ್ರಕ್ರಿಯೆ ಎಂದು ಅವರು ಸ್ಪಷ್ಟಪಡಿಸಿದರು.
2008ರ ಮಾಲೆಗಾಂವ್ ಸ್ಫೋಟ ಪ್ರಕರಣ: ಪ್ರಜ್ಞಾ ಠಾಕೂರ್ ಸೇರಿದಂತೆ ಎಲ್ಲಾ 7 ಆರೋಪಿಗಳ ಖುಲಾಸೆ


