ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆಯಿಂದ ಹೊರಹಾಕಲ್ಪಟ್ಟ ನಾಯಕ ಓ ಪನ್ನೀರ್‌ಸೆಲ್ವಂ (ಒಪಿಎಸ್) ಅವರ ಬಣ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದಿಂದ ಹೊರ ಬಂದಿರುವುದಾಗಿ ತಿಳಿಸಿದೆ.
ಗುರುವಾರ (ಜು.31) ಬೆಳಿಗ್ಗೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಜೊತೆಗೆ ಒಪಿಎಸ್ ಬೆಳಗ್ಗಿನ ನಡಿಗೆಗೆ (ಮಾರ್ನಿಂಗ್ ವಾಕ್) ಹೋಗಿದ್ದರು. ಈ ಬೆನ್ನಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ.
ಇತ್ತೀಚೆಗೆ ತಮಿಳುನಾಡಿನ ಗಂಗೈಕೊಂಡ ಚೋಳಪುರಂಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಒಪಿಎಸ್, ಮೋದಿಯವರನ್ನು ಭೇಟಿಯಾಗುವುದು ತನಗೆ ‘ಅದ್ವಿತೀಯ ಗೌರವ’ ಎಂದು ಹೇಳಿದ್ದರು ಮತ್ತು ಔಪಚಾರಿಕವಾಗಿ ಅಪಾಯಿಂಟ್ಮೆಂಟ್ ಕೋರಿದ್ದರು.
ಆದರೆ, ಒಪಿಎಸ್ ಅವರಿಗೆ ಮೋದಿ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಆ ಬಳಿಕ ಒಪಿಎಸ್ ಅವರು ಸರ್ವ ಶಿಕ್ಷಣ ಅಭಿಯಾನ (ಎಸ್‌ಎಸ್‌ಎ) ನಿಧಿಗಳನ್ನು ವಿತರಿಸುವಲ್ಲಿನ ವಿಳಂಬದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು. ಪ್ರಧಾನಿ ಮೋದಿ ಮತ್ತು ಬಿಜೆಪಿ ಜೊತೆಗಿನ ಅಸಮಾಧಾನದ ಮುಂದುವರಿದ ಭಾಗವಾಗಿ ಅವರು ಈಗ ಎನ್‌ಡಿಎ ಒಕ್ಕೂಟದಿಂದ ಹೊರಬಂದಿದ್ದಾರೆ ಎಂದು ಹೇಳಲಾಗ್ತಿದೆ.
ಮಾಜಿ ಸಚಿವ ಮತ್ತು ಒಪಿಎಸ್ ಅವರ ದೀರ್ಘಕಾಲದ ಆಪ್ತ ಮಿತ್ರ ಪನ್ರುತಿ ಎಸ್. ರಾಮಚಂದ್ರನ್ ಅವರು ತಮ್ಮ ಬಣ ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆಗಿನ ಮೈತ್ರಿಯನ್ನು ಕೊನೆಗೊಳಿಸುತ್ತಿರುವುದಾಗಿ ಘೋಷಿಸಿದ್ದಾರೆ.
“ನಾವು ಎನ್‌ಡಿಎ ಜೊತೆಗಿನ ಮೈತ್ರಿಯನ್ನು ಕೊನೆಗೊಳಿಸುತ್ತಿದ್ದೇವೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಓಪಿಎಸ್ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದಾರೆ. ಪ್ರಸ್ತುತ ನಾವು ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಭವಿಷ್ಯದಲ್ಲಿ, ಚುನಾವಣೆ ಸಂದರ್ಭದಲ್ಲಿ ಮೈತ್ರಿ ಬಗ್ಗೆ ನಿರ್ಧರಿಸುತ್ತೇವೆ” ಎಂದು ರಾಮಚಂದ್ರನ್ ಹೇಳಿದ್ದಾರೆ.
“பாஜக எங்களுக்கு என்ன செய்தது என்பதை நாடே அறியும், நாங்கள் அந்தக் கூட்டணியில் இருந்து விலகுகிறோம். தற்போதைக்கு எந்தக் கூட்டணியிலும் நாங்கள் இல்லை” – ஆதரவாளர்களுடன் நடந்த ஆலோசனைக்குப் பின் முன்னாள் முதல்வர் ஓ பன்னீர்செல்வம் சார்பாக பண்ருட்டி ராமச்சந்திரன் பேட்டி#OPS |… pic.twitter.com/Kx73yyOz4s
— PttvOnlinenews (@PttvNewsX) July 31, 2025
ಎನ್‌ಡಿಎ ತೊರೆಯುವ ಘೋಷಣೆ ಮಾಡಿದಾಗ ಸ್ಥಳದಲ್ಲಿ ಹಾಜರಿದ್ದ ಒಪಿಎಸ್, ನಟ ವಿಜಯ್ ಅವರ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಜೊತೆ ಕೈಜೋಡಿಸುವ ಸಾಧ್ಯತೆಯನ್ನು ತಳ್ಳಿ ಹಾಕಿಲ್ಲ. ಸಂಭಾವ್ಯ ಮೈತ್ರಿಯ ಬಗ್ಗೆ ಕೇಳಿದಾಗ, “ಕಾಲವೇ ಉತ್ತರ ನೀಡಲಿದೆ. ಚುನಾವಣೆಗೆ ಇನ್ನೂ ಸಮಯವಿದೆ” ಎಂದಿದ್ದಾರೆ.
ಒಂದು ಕಾಲದಲ್ಲಿ ಎನ್‌ಡಿಎ ಒಕ್ಕೂಟದಲ್ಲಿ ಬಿಜೆಪಿಯ ಮಿತ್ರ ಪಕ್ಷವಾಗಿದ್ದ ಎಐಎಡಿಎಂಕೆಯ ಪ್ರಮುಖ ವ್ಯಕ್ತಿಯಾಗಿದ್ದರು ಒಪಿಎಸ್. ಎಐಎಡಿಎಂಕೆಯೊಳಗಿನ ನಾಯಕತ್ವದ ನಡುವಿನ ಸಂಘರ್ಷದ ನಂತರ ತಮ್ಮದೇ ಆದ ಬಣವನ್ನು ರಚಿಸಿಕೊಂಡಿದ್ದ ಅವರು, ಇದೀಗ ಎನ್‌ಡಿಎ ಜೊತೆಗಿನ ಸಂಬಂಧ ಕಡಿದುಕೊಂಡಿರುವುದು. 2026ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ರಾಜ್ಯದಲ್ಲಿ ಸಂಭಾವ್ಯ ಹೊಸ ಮೈತ್ರಿಗಳ ಚರ್ಚೆಯನ್ನು ಹುಟ್ಟು ಹಾಕಿದೆ.
2008ರ ಮಾಲೆಗಾಂವ್ ಸ್ಫೋಟ ಪ್ರಕರಣ: ಪ್ರಜ್ಞಾ ಠಾಕೂರ್ ಸೇರಿದಂತೆ ಎಲ್ಲಾ 7 ಆರೋಪಿಗಳ ಖುಲಾಸೆ


