2024ರಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರು ಭಾರತದ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಶುಕ್ರವಾರ (ಆ.8) ಲೋಕಸಭೆಗೆ ತಿಳಿಸಿದೆ.
ಈ ಕುರಿತು ಕಾಂಗ್ರೆಸ್ ಸಂಸದ ಕೆ.ಸಿ ವೇಣುಗೋಪಾಲ್ ಅವರು ಕೇಳಿದ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಲಿಖಿತ ಉತ್ತರ ನೀಡಿದ್ದಾರೆ.
ಸಚಿವಾಲಯದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 2020ರಲ್ಲಿ 85,256, 2021ರಲ್ಲಿ 1,63,370, 2022ರಲ್ಲಿ 2,25,620, 2023ರಲ್ಲಿ 2,16,219 ಮತ್ತು 2024ರಲ್ಲಿ 2,06,378 ಜನರು ಭಾರತದ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಸಚಿವ ಸಿಂಗ್ ಹೇಳಿದ್ದಾರೆ.
ಮುಂದುವರಿದು, 2011ರಲ್ಲಿ 1,22,819, 2012ರಲ್ಲಿ 1,20,923, 2013ರಲ್ಲಿ 1,31,405 ಮತ್ತು 2014ರಲ್ಲಿ 1,29,328 ಜನರು ಪೌರತ್ವ ತ್ಯಜಿಸಿದ್ದರು ಎಂದು ತಿಳಿಸಿದ್ದಾರೆ.
ಭಾರತೀಯ ಪೌರತ್ವ ತ್ಯಜಿಸಲು ಅಥವಾ ವಿದೇಶಿ ಪೌರತ್ವ ಪಡೆಯಲು ಕಾರಣ ಏನು ಎಂಬುವುದು ವೈಯಕ್ತಿಕ. ಅದು ಆ ವ್ಯಕ್ತಿಗೆ ಮಾತ್ರ ಗೊತ್ತು ಎಂದು ಸಚಿವ ಸಿಂಗ್ ತನ್ನ ಉತ್ತರದಲ್ಲಿ ಹೇಳಿದ್ದಾರೆ.
ಮತ್ತೊಂದು ಪ್ರಶ್ನೆಗೆ ಉತ್ತರಿಸಿರುವ ಸರ್ಕಾರ, ಲಭ್ಯವಿರುವ ಮಾಹಿತಿಯ ಪ್ರಕಾರ ವಿದೇಶಿದಲ್ಲಿ ನೆಲೆಸಿರುವ ಭಾರತೀಯರ ಜನಸಂಖ್ಯೆ 3,43,56,193 ಇದೆ. ಇದರಲ್ಲಿ 1,71,81,071 ಜನರು ಭಾರತೀಯ ಮೂಲದವರಿದ್ದಾರೆ ಮತ್ತು 1,71,75,122 ಜನರು ಅನಿವಾಸಿ ಭಾರತೀಯರು ಎಂದು ತಿಳಿಸಿದೆ.
2020ರ ದೆಹಲಿ ಗಲಭೆ ಪ್ರಕರಣ: ಸಿಎಎ ವಿರೋಧಿ ಹೋರಾಟಗಾರ ಖಾಲಿದ್ ಸೈಫಿಗೆ 10 ದಿನಗಳ ಮಧ್ಯಂತರ ಜಾಮೀನು


