ಚೆನ್ನೈ: ಗ್ರೇಟರ್ ಚೆನ್ನೈ ಕಾರ್ಪೊರೇಶನ್ ಕಚೇರಿ ಮುಂದೆ ಕಳೆದ 13 ದಿನಗಳಿಂದ ನಡೆಯುತ್ತಿದ್ದ ನೈರ್ಮಲ್ಯ ಕಾರ್ಮಿಕರ ಪ್ರತಿಭಟನೆಯನ್ನು ಬುಧವಾರ ಮಧ್ಯರಾತ್ರಿ ಪೊಲೀಸರು ಹತ್ತಿಕ್ಕಿದ್ದಾರೆ. ಮದ್ರಾಸ್ ಹೈಕೋರ್ಟ್ ಆದೇಶದ ಮೇರೆಗೆ, ಸುಮಾರು 2,000 ಕಾರ್ಮಿಕರನ್ನು ಬಲವಂತವಾಗಿ ಬಂಧಿಸಿ, ನಗರದ 16 ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ಯಲಾಗಿದೆ.
ಖಾಸಗೀಕರಣದ ವಿರುದ್ಧ ಈ ಪ್ರತಿಭಟನೆ ನಡೆಯುತ್ತಿತ್ತು. ಖಾಸಗಿ ಗುತ್ತಿಗೆದಾರ ರಾಮ್ಕಿ ಎನ್ವಿರೋ ಇಂಜಿನಿಯರ್ಸ್ ಜುಲೈ 30ರಂದು ಕೆಲಸ ಆರಂಭಿಸಿದ ನಂತರ, ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು.
ಬುಧವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇರೆಗೆ ನ್ಯಾಯಾಲಯ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಸೂಚಿಸಿತು. ನಂತರ ರಾತ್ರಿ 11:30ರ ಸುಮಾರಿಗೆ, ಪೊಲೀಸರು ಯಾವುದೇ ಸಾರ್ವಜನಿಕರ ಉಪಸ್ಥಿತಿಯಿಲ್ಲದ ಸಮಯದಲ್ಲಿ ಮಹಿಳಾ ಕಾರ್ಮಿಕರನ್ನು ಪುರುಷ ಪೊಲೀಸರು ನಿಭಾಯಿಸುವ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕಿದರು. ಹಲ್ಲೆ ನಡೆದಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಈ ಘಟನೆಯು ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ತೋರಿಸುತ್ತದೆ ಎಂದು ಕಾರ್ಮಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಇದು ಕಾನೂನುಬಾಹಿರ ಬಂಧನ ಎಂದು ಕಾರ್ಮಿಕರ ವಕೀಲರು ತಿಳಿಸಿದ್ದು, ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ.
ದೇಶವು 79ನೇ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧವಾಗುತ್ತಿರುವಾಗಲೇ, ತಮಿಳುನಾಡು ಸರ್ಕಾರವು ನೂರಾರು ನೈರ್ಮಲ್ಯ ಕಾರ್ಮಿಕರು ನಡೆಸುತ್ತಿದ್ದ ಶಾಂತಿಯುತ ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ಹತ್ತಿಕ್ಕಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು 2021ರ ಚುನಾವಣೆಯಲ್ಲಿ ನೀಡಿದ್ದ ಭರವಸೆಯನ್ನು ಉಲ್ಲಂಘಿಸಿ, ಘನತ್ಯಾಜ್ಯ ನಿರ್ವಹಣೆಯನ್ನು ಖಾಸಗೀಕರಣಗೊಳಿಸುತ್ತಿರುವ ಸರ್ಕಾರದ ಕ್ರಮದ ವಿರುದ್ಧ ಈ ಪ್ರತಿಭಟನೆ ನಡೆದಿತ್ತು.
“ಪ್ರತಿ ಸ್ವಾತಂತ್ರ್ಯ ದಿನದಂದು ನೀವು ಧ್ವಜಾರೋಹಣ ಮಾಡಿ, ರಜೆ ಆನಂದಿಸಿ, ಸ್ವಾತಂತ್ರ್ಯವನ್ನು ಆಚರಿಸುತ್ತೀರಿ. ಆದರೆ ಇಷ್ಟು ವರ್ಷಗಳಲ್ಲಿ ಒಮ್ಮೆಯೂ ನಾವು ರಸ್ತೆಗಳನ್ನು ಸ್ವಚ್ಛಗೊಳಿಸುವ ಮತ್ತು ಕಸ ತೆಗೆಯುವ ಕೆಲಸದಿಂದ ಮುಕ್ತವಾಗಿಲ್ಲ. ಭಾರತ ಸ್ವಾತಂತ್ರ್ಯ ಗಳಿಸಿರಬಹುದು, ಆದರೆ ನಾವು ಎಂದಿಗೂ ಸ್ವಾತಂತ್ರ್ಯ ಪಡೆದಿಲ್ಲ,” ಎಂದು ಚೆನ್ನೈಯ ರಿಪ್ಪನ್ ಕಟ್ಟಡದ ಹೊರಗೆ ಪ್ರತಿಭಟಿಸುತ್ತಿದ್ದ ನೈರ್ಮಲ್ಯ ಕಾರ್ಯಕರ್ತೆ ಲಕ್ಷ್ಮಿ ಅವರು ಕಣ್ಣೀರಾದರು. ಇದನ್ನು ಹೇಳಿ ಕೆಲವು ಗಂಟೆಗಳಲ್ಲೇ ಪೊಲೀಸರು ಅವರನ್ನು ಬಲವಂತವಾಗಿ ಬಸ್‌ಗೆ ತುಂಬಿ ಅಲ್ಲಿಂದ ಹೊರಹಾಕಿದರು.

ಪ್ರತಿಭಟನೆ ಮತ್ತು ಸರ್ಕಾರದ ನಿರ್ಲಕ್ಷ್ಯ
ಆಗಸ್ಟ್ 1, 2025ರಂದು, ಚೆನ್ನೈಯ ವಲಯ 5 ಮತ್ತು 6ರ ನೈರ್ಮಲ್ಯ ಕಾರ್ಮಿಕರು ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದರು. ಆದರೆ ಅವರಿಗೆ ಮನೆಗೆ ಮರಳುವಂತೆ ಸೂಚಿಸಲಾಯಿತು. ಏಕೆಂದರೆ ಗ್ರೇಟರ್ ಚೆನ್ನೈ ಕಾರ್ಪೊರೇಶನ್ (GCC) ಅವರ ಕೆಲಸವನ್ನು ರಾಮ್ಕಿ ಎನ್ವಿರೋ ಇಂಜಿನಿಯರ್ಸ್ ಎಂಬ ಖಾಸಗಿ ಗುತ್ತಿಗೆದಾರರಿಗೆ ವಹಿಸಿತ್ತು.
ಜುಲೈ ಅಂತ್ಯದಲ್ಲಿ ಇದೇ ವಿಷಯವನ್ನು ವಿರೋಧಿಸಿ ಅಂಬತ್ತೂರಿನಲ್ಲಿ ಐವರು ಮಹಿಳಾ ನೈರ್ಮಲ್ಯ ಕಾರ್ಮಿಕರು ಐದು ದಿನಗಳ ಕಾಲ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಇದರ ನಂತರ, ನ್ಯಾಯಾಲಯವು ಕಾರ್ಮಿಕ ನ್ಯಾಯಮಂಡಳಿಗೆ ಈ ವಿಷಯದ ಬಗ್ಗೆ ಮಧ್ಯಪ್ರವೇಶಿಸುವಂತೆ ನಿರ್ದೇಶಿಸಿತ್ತು. ನ್ಯಾಯಾಲಯದ ಆದೇಶದ ಹೊರತಾಗಿಯೂ, ಸರ್ಕಾರವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದೆ ಯಥಾಸ್ಥಿತಿ ಕಾಪಾಡಬೇಕಾಗಿತ್ತು. ಆದರೆ, ರಾಜ್ಯ ಸರ್ಕಾರವು ನ್ಯಾಯಾಲಯದ ಆದೇಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಕಾರ್ಮಿಕರನ್ನು ಹೊರಗುತ್ತಿಗೆ ನೀಡುವ ತನ್ನ ನಿರ್ಧಾರವನ್ನು ಮುಂದುವರಿಸಿದೆ ಎಂದು ವಕೀಲ ಶರತ್‌ಕುಮಾರ್ ತಿಳಿಸಿದ್ದಾರೆ.
ಸರ್ಕಾರದ ಈ ವರ್ತನೆ ಮತ್ತು ತಮ್ಮದೇ ಚುನಾವಣಾ ಭರವಸೆಯನ್ನು ನಿರ್ಲಕ್ಷಿಸಿದ್ದರಿಂದಾಗಿ GCCಯ ವಲಯ 5 ಮತ್ತು 6ರ ನೈರ್ಮಲ್ಯ ಕಾರ್ಮಿಕರು LTUC ಮತ್ತು AICCTU ಒಕ್ಕೂಟಗಳ ಜೊತೆ ಸೇರಿ ಪ್ರತಿಭಟನೆ ನಡೆಸುತ್ತಿದ್ದರು. ಹಲವಾರು ಸುತ್ತಿನ ಮಾತುಕತೆಗಳು ವಿಫಲವಾದ ನಂತರ, ಬುಧವಾರ ಮಧ್ಯರಾತ್ರಿ ಪೊಲೀಸರು ಈ ಪ್ರತಿಭಟನೆಯನ್ನು ಭಂಗಗೊಳಿಸಿದರು.

ತಮಿಳುನಾಡಿನ ನೈರ್ಮಲ್ಯ ಕಾರ್ಮಿಕರ ಸಾಮಾಜಿಕ ವಾಸ್ತವ
ತಮಿಳುನಾಡಿನಲ್ಲಿ ನೈರ್ಮಲ್ಯ ಕಾರ್ಮಿಕರ ಕೆಲಸವು ಜಾತಿಯೊಂದಿಗೆ ಆಳವಾಗಿ ಬೆರೆತು ಹೋಗಿದೆ. ಪೀಳಿಗೆಯಿಂದ ಪೀಳಿಗೆಗೆ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳು ಮಾನವ ಮಲ ಮತ್ತು ಕಸ ನಿರ್ವಹಣೆ, ಒಣ ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಖಾಲಿ ಮಾಡುವಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿವೆ. ಅಧಿಕೃತವಾಗಿ ಮಲ ಹೊರುವ ಪದ್ಧತಿ ನಿವಾರಣೆಯಾಗಿದೆ ಎಂದು ಘೋಷಿಸಿದರೂ, ಬೇರೆ ಬೇರೆ ಹೆಸರಿನಲ್ಲಿ ಈ ಕೆಲಸ ಮುಂದುವರಿದಿದೆ.
ರಾಜ್ಯದ ನೈರ್ಮಲ್ಯ ಕಾರ್ಮಿಕರಲ್ಲಿ 64.6% ಪರಿಶಿಷ್ಟ ಜಾತಿಗಳಿಗೆ ಮತ್ತು 21.6% ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿದ್ದಾರೆ. ಇನ್ನು ಕೇವಲ 9.2% ಮಾತ್ರ ಹಿಂದುಳಿದ ವರ್ಗದವರು. ಈ ಕಾರ್ಮಿಕರು ಅರುಂಧತಿಯರ್, ಪರೈಯರ್, ಪಳ್ಳುರ್, ಕಾಟ್ಟು ನಾಯ್ಕರ್, ಕುರವರ್ ಮತ್ತು ಪನ್ನಿಯಾಂಡಿ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಅನೇಕ ವಲಯಗಳಲ್ಲಿ, ವಿವಾಹಿತ, ವಿಧವೆ ಮತ್ತು ವಿಚ್ಛೇದಿತ ಮಹಿಳೆಯರು ತಮ್ಮ ಕುಟುಂಬಗಳನ್ನು ಒಂಟಿಯಾಗಿ ನಿರ್ವಹಿಸುತ್ತಿದ್ದಾರೆ.
ಹತ್ತು ವರ್ಷಗಳಿಂದ, ಈ ಕಾರ್ಮಿಕರು ರಾಜ್ಯ ಸರ್ಕಾರದ NULM ಯೋಜನೆಯಡಿ ಅನೌಪಚಾರಿಕ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಯೋಜನೆಯನ್ನು “ಅತ್ಯಂತ ಬಡವರನ್ನು” ಉನ್ನತೀಕರಿಸಲು ಜಾರಿಗೊಳಿಸಲಾಗಿದ್ದರೂ, ಇದು ಅವರನ್ನು ನಿರಂತರವಾಗಿ ಶೋಷಣೆ ಮಾಡಿದೆ. ಆರಂಭದಲ್ಲಿ ಕೇವಲ ರೂ. 6,000 ಮಾಸಿಕ ವೇತನ ಪಡೆಯುತ್ತಿದ್ದ ಇವರು, ವರ್ಷಗಳ ಪ್ರತಿಭಟನೆಗಳ ನಂತರ ಕಳೆದ ವರ್ಷದಿಂದ ಮಾತ್ರ ರೂ. 23,000ಕ್ಕೆ ವೇತನ ಹೆಚ್ಚಳ ಪಡೆದಿದ್ದಾರೆ. ಅವರಿಗೆ ವೇತನ ಸಹಿತ ರಜೆ, ವೈದ್ಯಕೀಯ ರಜೆ, ಅಥವಾ ಸಾರ್ವಜನಿಕ ರಜೆ ಇಲ್ಲ. ಒಂದು ದಿನ ರಜೆ ತೆಗೆದುಕೊಂಡರೂ ವೇತನ ಕಡಿತವಾಗುತ್ತದೆ.
ಅಪಾಯಕಾರಿ ಕೆಲಸ
ಸುರಕ್ಷತಾ ಸಲಕರಣೆಗಳಾದ ಕೈಗವಸು, ಮಾಸ್ಕ್, ಬೂಟುಗಳನ್ನು ಕಾರ್ಮಿಕರಿಗೆ ಎಂದಿಗೂ ನೀಡುವುದಿಲ್ಲ. 15 ವರ್ಷಗಳಿಂದ ವಲಯ 5ರಲ್ಲಿ ಸೇವೆ ಸಲ್ಲಿಸುತ್ತಿರುವ 50 ವರ್ಷದ ರತ್ನಂ, “ನಾವು ಬಳಸಿದ ಕಾಂಡೋಮ್‌ಗಳು ಮತ್ತು ಸ್ಯಾನಿಟರಿ ಪ್ಯಾಡ್‌ಗಳನ್ನು ಬರಿಗೈಗಳಿಂದ ಎತ್ತುತ್ತೇವೆ. ಕೈಗವಸು, ಬೂಟುಗಳಿಗೆ ಅಳತೆ ತೆಗೆದುಕೊಳ್ಳುತ್ತಾರೆ, ಆದರೆ ಅವು ಎಂದಿಗೂ ನಮಗೆ ಸಿಕ್ಕಿಲ್ಲ. ಪೊರಕೆ, ಬಕೆಟ್‌ಗಳನ್ನೂ ನಾವೇ ನಮ್ಮ ಹಣದಿಂದ ಖರೀದಿಸಬೇಕು” ಎಂದು ಹೇಳಿದ್ದಾರೆ.
10 ವರ್ಷಗಳ ಸೇವೆ ಸಲ್ಲಿಸಿದ ಮತ್ತೊಬ್ಬ ಕಾರ್ಮಿಕರು, ನಾಲ್ಕು ವರ್ಷಗಳ ಹಿಂದೆ ಕಸದ ಟ್ರಕ್ ನಿರ್ವಹಿಸುವಾಗ ತಮ್ಮ ಬೆರಳನ್ನು ಕಳೆದುಕೊಂಡ ಘಟನೆಯನ್ನು ನೆನಪಿಸಿಕೊಂಡರು. “ನನ್ನ ಮೇಲ್ವಿಚಾರಕರು ನನ್ನ ಗಾಯವನ್ನು ನೋಡಿ, ಕಾರ್ಪೊರೇಷನ್‌ಗೆ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿ, ದೂರು ದಾಖಲಿಸದೆ ಆಸ್ಪತ್ರೆಗೆ ಹೋಗಲು ಹೇಳಿದರು. ಚಿಕಿತ್ಸೆಗೆ ಹಣ ಕೊಡಲಿಲ್ಲ ಮತ್ತು ರಜೆಯನ್ನೂ ನೀಡಲಿಲ್ಲ. ವೇತನ ಕಡಿತವನ್ನು ತಪ್ಪಿಸಲು ಮರುದಿನವೇ ನಾನು ಅದೇ ಗಾಯಗೊಂಡ ಕೈಯಿಂದ ಕೆಲಸಕ್ಕೆ ಮರಳಿದೆ.” ಪ್ರತಿಭಟನೆಯ ಸ್ಥಳದಲ್ಲಿ, ಇಂತಹ ಅಪಘಾತಗಳಿಂದ ಬೆರಳು ಕಳೆದುಕೊಂಡ ಕನಿಷ್ಠ 10 ಕಾರ್ಮಿಕರನ್ನು ನೋಡಲು ಸಿಕ್ಕರು.
ಯುವಕರ ಸಾಮಾಜಿಕ ಜಾಗೃತಿ ಸೊಸೈಟಿ (SASY) 2023ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, 2022ರಿಂದ ತಮಿಳುನಾಡಿನಲ್ಲಿ 43 ಮಲಹೊರುವ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ವರ್ಷ ಜೂನ್ 8ರಂದು ಮ್ಯಾನ್‌ಹೋಲ್‌ಗೆ ಬಿದ್ದು ದಲಿತ ಗುತ್ತಿಗೆ ಕಾರ್ಮಿಕನೊಬ್ಬ ಸಾವನ್ನಪ್ಪಿದ ನಂತರ, ಮ್ಯಾನ್‌ಹೋಲ್ ಸಾವುಗಳಲ್ಲಿ ತಮಿಳುನಾಡು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕೋವಿಡ್-19 ಸಾಂಕ್ರಾಮಿಕ, ಚೆನ್ನೈಯ ಚಂಡಮಾರುತ ಮತ್ತು ಪ್ರವಾಹಗಳಂತಹ ಸಂದರ್ಭಗಳಲ್ಲಿ ಈ ಕಾರ್ಮಿಕರನ್ನು ಮುಂಚೂಣಿ ಯೋಧರು ಎಂದು ಹೊಗಳಿ ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸಲಾಗಿದೆ. “ನಾವು ಕೋವಿಡ್ ಸಮಯದಲ್ಲಿ ನಮ್ಮ ಪ್ರಾಣವನ್ನು ಪಣಕ್ಕಿಟ್ಟೆವು. ಆದರೆ ನಮಗೆ ಯಾವುದೇ ಆರ್ಥಿಕ ಅಥವಾ ಆರೋಗ್ಯ ಸೌಲಭ್ಯ ಸಿಗಲಿಲ್ಲ. ನಮಗೆ ನೀಡಿದ ಊಟಕ್ಕಾಗಿ ರೂ. 5,000 ಸಂಬಳ ಕಡಿತ ಮಾಡಿದ್ದರು. ಸರ್ಕಾರ ನಮಗೆ ಏನನ್ನೂ ಕೊಟ್ಟಿಲ್ಲ; ನಾವೇ ಅವರಿಗೆ ವರ್ಷಗಳಿಂದ ಕೊಡುತ್ತಿದ್ದೇವೆ,” ಎಂದು ಕಸ್ತೂರಿ ಮತ್ತು ಸಂಪೂರ್ಣ ಹೇಳಿದರು.
ಖಾಸಗೀಕರಣ
ಹಿಂದಿನ AIADMK ಸರ್ಕಾರವು GCCಯ 15 ವಲಯಗಳಲ್ಲಿ 10ನ್ನು ಖಾಸಗೀಕರಣಗೊಳಿಸಿತ್ತು. ಇದನ್ನು ತೀವ್ರವಾಗಿ ವಿರೋಧಿಸಿದ್ದ ಹಾಲಿ DMK ಸರ್ಕಾರ, ಈಗ ವಲಯ 5 ಮತ್ತು 6ನ್ನು ಖಾಸಗೀಕರಣಗೊಳಿಸುತ್ತಿದೆ. ಖಾಸಗೀಕರಣದಿಂದಾಗಿ NULM ಕಾರ್ಮಿಕರ ವೇತನ ರೂ. 22,590 ರಿಂದ ರೂ. 15,000ಕ್ಕೆ ಇಳಿಯಲಿದೆ ಎಂದು ಕಾರ್ಮಿಕರು ಹೇಳುತ್ತಾರೆ. ಈಗಾಗಲೇ ಖಾಸಗೀಕರಣಗೊಂಡ ವಲಯ 9 ಮತ್ತು 13ರಲ್ಲಿ ಮಾತನಾಡಿದಾಗ, ಬಹುತೇಕ ಹತ್ತು ಕಾರ್ಮಿಕರು ಕೆಲವೇ ತಿಂಗಳುಗಳಿಂದ ಕೆಲಸದಲ್ಲಿದ್ದರು ಮತ್ತು ಯಾರನ್ನೂ ಹಿಂದಿನ ಸ್ಥಾನದಿಂದ ಉಳಿಸಿಕೊಂಡಿರಲಿಲ್ಲ. ಖಾಸಗಿ ಗುತ್ತಿಗೆದಾರರು ಹಳೆಯ ನುರಿತ ಕಾರ್ಮಿಕರನ್ನು ತೆಗೆದುಹಾಕಿ ಹೊಸ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಾರೆ, ಇದು ಅವರಿಗೆ ತಮ್ಮ ನಿಯಮಗಳನ್ನು ಸುಲಭವಾಗಿ ಜಾರಿಗೆ ತರಲು ಅನುವು ಮಾಡಿಕೊಡುತ್ತದೆ ಎಂದು ತಿಳಿದುಬಂದಿದೆ.
ವಲಯ 9ರ ಒಬ್ಬ 46 ವರ್ಷದ ಗುತ್ತಿಗೆ ಕಾರ್ಮಿಕರು, “ತಿಂಗಳಿಗೆ ರೂ.15,000 ಭರವಸೆ ನೀಡಿದ್ದರು. ಆದರೆ PF ಮತ್ತು ESI ಕಡಿತದ ನಂತರ ಕೇವಲ ರೂ.13,500 ಮಾತ್ರ ಸಿಗುತ್ತದೆ. ರಜೆ ತೆಗೆದುಕೊಂಡರೆ ಸಂಬಳ ಮತ್ತು ಬೋನಸ್ ಕಡಿತ ಮಾಡುತ್ತಾರೆ” ಎಂದರು. ESI ಸೌಲಭ್ಯಗಳು ಕೇವಲ ಕೆಲವು ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿದ್ದು, ಅವು ಮನೆಗಳಿಂದ ದೂರವಿವೆ.
“ಇಂದು ನಮ್ಮ ಮೂವರಿಗೆ ಎರಡು ಪ್ರದೇಶಗಳನ್ನು ಸ್ವಚ್ಛಗೊಳಿಸಲು ಹೇಳಿದ್ದಾರೆ. ಎರಡನ್ನೂ ಮುಗಿಸಿದ ನಂತರವೇ ನಾವು ಮನೆಗೆ ಹೋಗಬಹುದು” ಎಂದು ಇನ್ನೊಬ್ಬ ಮಹಿಳಾ ಕಾರ್ಮಿಕರು ಹೇಳಿದರು. ಕಡಿಮೆ ವೇತನ ಮತ್ತು ಕೆಲಸದ ಭಾರದಿಂದಾಗಿ ಸಿಬ್ಬಂದಿ ಕೊರತೆ ನಿರಂತರವಾಗಿದೆ. ಹೆಚ್ಚುವರಿ ಕೆಲಸ ನಿರಾಕರಿಸಿದರೆ ತಕ್ಷಣವೇ ಕೆಲಸದಿಂದ ತೆಗೆದುಹಾಕಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಕೇಳಿದಾಗ, “ಗುತ್ತಿಗೆ ಇರಲಿ ಇಲ್ಲದಿರಲಿ, ನಾವೆಲ್ಲರೂ ನಮ್ಮ ಬದುಕಿಗಾಗಿ ಹೋರಾಡುತ್ತಿದ್ದೇವೆ. ಈ ಕೆಲಸವನ್ನು ಕಳೆದುಕೊಳ್ಳುವ ಕಲ್ಪನೆಯೂ ನಮಗೆ ಸಹಿಸಲಾಗದು. ಅವರಿಗೆ ಅವರ ಕೆಲಸ ವಾಪಸ್ ಸಿಗಲಿ ಎಂದು ನಾವು ಹಾರೈಸುತ್ತೇವೆ” ಎಂದು ಹೇಳಿದರು.
DMKಯ ಸಾಮಾಜಿಕ ನ್ಯಾಯದ ಭ್ರಮೆ
ಒಂದು ಕಾಲದಲ್ಲಿ ದ್ರಾವಿಡ ಚಳುವಳಿಯ ಭಾಗವಾಗಿ, ಕ್ರಾಂತಿಕಾರಿ ಪ್ರತಿಭಟನೆಗಳ ಹೆಮ್ಮೆಯ ಪರಂಪರೆಯನ್ನು ಹೊಂದಿರುವ DMK, ಇಂದು ಅಂಚಿನಲ್ಲಿರುವ ನೈರ್ಮಲ್ಯ ಕಾರ್ಮಿಕರ ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ಹತ್ತಿಕ್ಕಿದೆ. 2021ರಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದಾಗ, ಎಂ.ಕೆ. ಸ್ಟಾಲಿನ್ ಅವರು ನೈರ್ಮಲ್ಯ ಕಾರ್ಮಿಕರನ್ನು ಹೊರಗುತ್ತಿಗೆ ನೀಡುವುದನ್ನು ವಿರೋಧಿಸಿ, ಅವರ ಕೆಲಸಗಳನ್ನು ನಿಯಮಿತಗೊಳಿಸಲು ಆಗ್ರಹಿಸಿ ಪತ್ರ ಬರೆದಿದ್ದರು. ಆದರೆ ಐದು ವರ್ಷಗಳ ನಂತರ, ಅವರ ಸರ್ಕಾರವು ಅದೇ ವಿರುದ್ಧವಾದ ಆದೇಶವನ್ನು ಹೊರಡಿಸಿದೆ. ಪೊಲೀಸರು ಪ್ರತಿಭಟನಾಕಾರರನ್ನು ಬಸ್‌ಗೆ ತಳ್ಳಿದಾಗ, ಅವರು “ಎಂ.ಕೆ. ಸ್ಟಾಲಿನ್ ಹೇಳಿದ ‘ವಿದಿಯಾಲ್ ಅರಸು’ (ಹೊಸ ಉದಯದ ಸರ್ಕಾರ) ಇದೇನಾ? ಅವರು ನಮ್ಮನ್ನು ಕತ್ತಲೆಗೆ ತಳ್ಳಿದ್ದಾರೆ,” ಎಂದು ಕೂಗಿದರು.
ಸರ್ಕಾರವು ಖಾಸಗೀಕರಣಕ್ಕೆ ಹಣದ ಕೊರತೆಯನ್ನು ಕಾರಣವಾಗಿ ನೀಡಿದೆ. ಆದರೆ ಖಾಸಗಿ ಗುತ್ತಿಗೆದಾರರಾದ ಅರ್ಬೇಸರ್ ಸುಮೀತ್ ಮತ್ತು ರಾಮ್ಕಿ ಎನ್ವಿರೋ ಇಂಜಿನಿಯರ್ಸ್‌ಗೆ 10 ವರ್ಷಗಳ ಯೋಜನೆಗಾಗಿ ಬಜೆಟ್‌ನಿಂದ ರೂ.263.7 ಕೋಟಿ ಮೀಸಲಿರಿಸಿದೆ. ಈ ಕಂಪನಿಗಳು ಈಗಾಗಲೇ ನಗರದ 40% ತ್ಯಾಜ್ಯ ನಿರ್ವಹಣೆಯ ದೂರುಗಳಿಗೆ ಕಾರಣವಾಗಿವೆ.
ಪ್ರತಿಭಟನಾಕಾರರ ನೋವಿನ ಕೂಗು ಇನ್ನೂ ಕಿವಿಯಲ್ಲಿ ಪ್ರತಿಧ್ವನಿಸುತ್ತಿದೆ, “ನಿಮಗೆ ನಿಮ್ಮ ಕೊಳೆ ಸ್ವಚ್ಛಗೊಳಿಸಲು ನಾವು ಬೇಕಾಗಿದ್ದೆವು. ಇಂದು ನಮ್ಮನ್ನು ಕಸದಂತೆ ಎಸೆದಿದ್ದೀರಿ. ನಮ್ಮ ಇಡೀ ಜೀವನವನ್ನು ಈ ನಗರವನ್ನು ಸ್ವಚ್ಛಗೊಳಿಸಲು ಕಳೆದಿದ್ದೇವೆ. ನಾವು ಖಾಸಗಿ ಕಂಪನಿಗೆ ನಮ್ಮನ್ನು ಹಸ್ತಾಂತರಿಸಲು ಬಿಡುವುದಿಲ್ಲ. ನಾವು ನಾಯಿಗಳಿಗೆ ಮೂಳೆಗಳಲ್ಲ; ನಾವು ಈ ನಗರದ ಬೆನ್ನೆಲುಬು” ಎಂದು ನೈರ್ಮಲ್ಯ ಕಾರ್ಮಿಕರು ಗುಡುಗಿದ್ದಾರೆ.
‘ಜೀನ್ಸ್ ಜಿಹಾದ್’ ಸುಳ್ಳು ವದಂತಿ: ಮುಸ್ಲಿಂ ಕಾರ್ಮಿಕರ ಬದುಕು ಬರ್ಬಾದ್


