ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ತಮ್ಮ ‘ಮತಗಳ್ಳತನ’ ಆರೋಪಕ್ಕೆ ಸಂಬಂಧಿಸಿದಂತೆ ವಾರದೊಳಗೆ ಪ್ರಮಾಣಪತ್ರ ಸಲ್ಲಿಸಬೇಕು ಎಂದಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ದ ಪದಚ್ಯುತಿ ನಿರ್ಣಯ ಮಂಡಿಸಲು ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟ ಮುಂದಾಗಿದೆ ಎಂದು ವರದಿಯಾಗಿದೆ.
ಇಂದು (ಆ.18 ಸೋಮವಾರ) ಬೆಳಿಗ್ಗೆ ನಡೆದ ಸಭೆಯಲ್ಲಿ ಪದಚ್ಯುತಿ ನಿರ್ಣಯ ಮಂಡನೆ ಕುರಿತು ಇಂಡಿಯಾ ಒಕ್ಕೂಟದ ನಾಯಕರು ಚರ್ಚೆ ನಡೆಸಿದ್ದಾರೆ ಎಂದು newindianexpress.com ವರದಿ ಮಾಡಿದೆ.
ಭಾನುವಾರ (ಆ.16) ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, “ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರು ವಾರದೊಳಗೆ ಪ್ರಮಾಣಪತ್ರ ಸಲ್ಲಿಸಬೇಕು. ಇಲ್ಲದಿದ್ದರೆ ಅವರ ಆರೋಪಗಳನ್ನು ಆಧಾರರಹಿತ ಎಂಬುವುದಾಗಿ ಪರಿಗಣಿಸಲಾಗುವುದು” ಎಂದಿದ್ದರು. ಅಲ್ಲದೆ, “ಪ್ರಮಾಣಪತ್ರ ಸಲ್ಲಿಸಿ. ಇಲ್ಲವೇ, ಕ್ಷಮೆಯಾಚಿಸಿ” ಎಂದು ರಾಹುಲ್ ಗಾಂಧಿಗೆ ತಾಕೀತು ಮಾಡಿದ್ದರು.
“ಇಂಡಿಯಾ ಒಕ್ಕೂಟದ ಎಲ್ಲಾ ನಾಯಕರು ಪದಚ್ಯುತಿ ನಿರ್ಣಯ ಮಂಡನೆ ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಕಾನೂನು ವಿಧಾನಗಳ ಕುರಿತು ಶೀಘ್ರದಲ್ಲೇ ಚರ್ಚಿಸಲಾಗುವುದು. ಪದಚ್ಯುತಿ ನಿರ್ಣಯ ಮಂಡನೆ ಪ್ರಕ್ರಿಯೆ ನ್ಯಾಯಾಧೀಶರದ್ದು (ನ್ಯಾ.ವರ್ಮಾ) ಆದಂತೆ ನಡೆಯಲಿದೆ ಎಂದು ವಿರೋಧ ಪಕ್ಷದ ನಾಯಕರೊಬ್ಬರು ಹೇಳಿದ್ದಾಗಿ newindianexpress.com ವರದಿ ವಿವರಿಸಿದೆ.
ಈ ನಡುವೆ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಬಾಹ್ಯಾಕಾಶ ಯಾನದ ಕುರಿತ ವಿಶೇಷ ಚರ್ಚೆಯಲ್ಲಿ ಸರ್ಕಾರದೊಂದಿಗೆ ಸಹಕರಿಸದಿರಲು ವಿರೋಧ ಪಕ್ಷಗಳು ನಿರ್ಧರಿಸಿವೆ. ಲೋಕಸಭೆಯಲ್ಲಿ ಈ ಕುರಿತು ಎರಡು ದಿನಗಳ ವಿಶೇಷ ಚರ್ಚೆ ನಡೆಯಲಿದೆ.
“ನಾವು ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾತ್ರೆ ಕುರಿತ ಚರ್ಚೆಯಲ್ಲಿ ಭಾಗವಹಿಸದಿರಲು ಮತ್ತು ನಮ್ಮ ಪ್ರತಿಭಟನೆಗಳನ್ನು ಮುಂದುವರಿಸಲು ನಿರ್ಧರಿಸಿದ್ದೇವೆ” ಎಂದು ವಿರೋಧ ಪಕ್ಷದ ನಾಯಕ ಹೇಳಿದ್ದಾರೆ ಎಂದು newindianexpress.com ತಿಳಿಸಿದೆ.
ಚುನಾವಣಾ ಆಯುಕ್ತರ ಸುದ್ದಿಗೋಷ್ಠಿಯ ನಡುವೆಯೂ, ತನ್ನ ಆರೋಪಗಳಿಗೆ ಉತ್ತರ ನೀಡುವಂತೆ ಚುನಾವಣಾ ಆಯೋಗವನ್ನು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಚುನಾವಣಾ ಆಯೋಗ ಕೇಂದ್ರದಲ್ಲಿರುವ ‘ಅಪಾಯಕಾರಿ’ ನರೇಂದ್ರ ಮೋದಿ ಸರ್ಕಾರದ ‘ಏಜೆಂಟ್’ನಂತೆ ವರ್ತಿಸುತ್ತಿದೆ. ಈ ಮೂಲಕ ಸಂವಿಧಾನ ಮತ್ತು ಜನರ ಮತದಾನದ ಹಕ್ಕಿಗೆ ‘ಬೆದರಿಕೆ’ ಒಡ್ಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಉಪರಾಷ್ಟ್ರಪತಿ ಚುನಾವಣೆ: ಎನ್‌ಡಿಎ ಅಭ್ಯರ್ಥಿಯಾಗಿ ಬಿಜೆಪಿ ನಾಯಕ ಸಿ.ಪಿ ರಾಧಾಕೃಷ್ಣನ್ ಆಯ್ಕೆ


