Homeಕರ್ನಾಟಕಧರ್ಮಸ್ಥಳ ಪ್ರಕರಣ: ತನಿಖೆ ಅಬಾಧಿತವಾಗಿ ಮುಂದುವರೆಯಲಿ ಎಂದು 'ನಾವೆದ್ದು ನಿಲ್ಲದಿದ್ದರೆ -ಕರ್ನಾಟಕ' ಆಗ್ರಹ

ಧರ್ಮಸ್ಥಳ ಪ್ರಕರಣ: ತನಿಖೆ ಅಬಾಧಿತವಾಗಿ ಮುಂದುವರೆಯಲಿ ಎಂದು ‘ನಾವೆದ್ದು ನಿಲ್ಲದಿದ್ದರೆ -ಕರ್ನಾಟಕ’ ಆಗ್ರಹ

- Advertisement -
- Advertisement -

ಮಹಿಳೆಯರ ಸುರಕ್ಷತೆ, ಲಿಂಗ ನ್ಯಾಯ ಮತ್ತು ನ್ಯಾಯಯುತ ತನಿಖೆ ಆದ್ಯತೆಯಾಗಬೇಕು

ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿರುವ ಮಹಿಳೆಯರ ನಾಪತ್ತೆ, ಅತ್ಯಾಚಾರ ಮತ್ತು ಬರ್ಬರ ಕೊಲೆಗಳ ಪ್ರಕರಣಗಳ ಸಮಗ್ರ ತನಿಖೆ ಅಬಾಧಿತವಾಗಿ ಮುಂದುವರೆಯಬೇಕು ಎಂದು ‘ನಾವೆದ್ದು ನಿಲ್ಲದಿದ್ದರೆ -ಕರ್ನಾಟಕ’ ವೇದಿಕೆಯು ಆಗ್ರಹಿಸಿದೆ. ಮಹಿಳೆಯರ ಸುರಕ್ಷತೆ, ಲಿಂಗ ನ್ಯಾಯ ಮತ್ತು ನ್ಯಾಯಯುತ ತನಿಖೆ ಆದ್ಯತೆಯಾಗಬೇಕು ಎಂದು ವೇದಿಕೆಯು ತಿಳಿಸಿದೆ.

ಇಂದು (ಆ.21) ಬೆಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದ ವೇದಿಕೆಯು, ಎಸ್.ಐ.ಟಿ ತನಿಖೆ ತಾರ್ಕಿಕ ಅಂತ್ಯ ಮುಟ್ಟುವತನಕ ಒತ್ತಡ ಸೃಷ್ಟಿಸಿ ತನಿಖೆಗೆ ಅಡ್ಡಿಪಡಿಸುವಂತಹ ಹೇಳಿಕೆಗಳನ್ನು ನೀಡುವುದನ್ನು ಸರ್ಕಾರ ಮತ್ತು ವಿರೋಧ ಪಕ್ಷಗಳ ಜನಪ್ರತಿನಿಧಿಗಳು ಕೂಡಲೇ ನಿಲ್ಲಿಸಬೇಕು ಎಂದು ಹೇಳಿದೆ.

‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಎಂಬುದು ಮಹಿಳೆಯರು, ಲಿಂಗ ಅಲ್ಪಸಂಖ್ಯಾತರು, ಮಹಿಳಾ ಕಾರ್ಮಿಕರು ಮತ್ತು ಅಂಚಿನಲ್ಲಿರುವ ಮಹಿಳೆಯರು, ಮಾನವ ಹಕ್ಕುಗಳ ಸಂಸ್ಥೆಗಳು ಮತ್ತು ಕಾಳಜಿಯುಳ್ಳ ನಾಗರಿಕರ ಹಲವು ಸಂಘಟನೆಗಳು ಮತ್ತು ಸಂಸ್ಥೆಗಳ ಜಂಟಿ ವೇದಿಕೆಯಾಗಿದ್ದು, ಈ ಸಮುದಾಯಗಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಮತ್ತು ಅವರ ಹಕ್ಕುಗಳನ್ನು ರಕ್ಷಿಸಲು ಕೆಲಸ ಮಾಡುತ್ತಿದೆ ಎಂದು ವೇದಿಕೆಯು ತಿಳಿಸಿದೆ.

ಧರ್ಮಸ್ಥಳದಲ್ಲಿ ನಡೆದಿರುವ ದೌರ್ಜನ್ಯಗಳ ಸುತ್ತ ನಡೆಯುತ್ತಿರುವ ವಿವಾದಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಸತ್ಯದ ಅನ್ವೇಷಣೆಗೆ ಅಡ್ಡಿಯಾಗುವ ಮತ್ತು ವಿಶೇಷ ತನಿಖಾ ತಂಡದ (SIT) ತನಿಖೆಯನ್ನು ದುರ್ಬಲಗೊಳಿಸುವ ಜನಪ್ರತಿನಿಧಿಗಳ ಹೇಳಿಕೆಗಳನ್ನು ತಕ್ಷಣವೇ ಹಿಂಪಡೆಯುವಂತೆ ನಾವು ಒತ್ತಾಯಿಸುತ್ತೇವೆ. ಮಹಿಳಾ ಹಕ್ಕುಗಳ ಪ್ರತಿಪಾದಕರಾಗಿ, ಧರ್ಮಸ್ಥಳಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಾಗಿರಲಿ ಅಥವಾ ಹತ್ತಿರದ ಗ್ರಾಮಗಳ ನಿವಾಸಿಗಳಾಗಿರಲಿ, ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಯು ಪ್ರಮುಖ ಕಾಳಜಿಯಾಗಿರಬೇಕು ಎಂದು ನಾವು ಒತ್ತಿಹೇಳುತ್ತೇವೆ. ತನಿಖೆ ಇನ್ನೂ ತಾರ್ಕಿಕ ಅಂತ್ಯ ತಲುಪುವ ಮೊದಲೇ ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲು ನಡೆಯುವ ಯಾವುದೇ ಪ್ರಯತ್ನವು ಸಾರ್ವಜನಿಕರ ನಂಬಿಕೆಯನ್ನು ಹಾಳುಮಾಡುತ್ತದೆ ಮತ್ತು ಮಹಿಳೆಯರ ವಿರುದ್ಧದ ಹಿಂಸೆಯನ್ನು ಶಾಶ್ವತಗೊಳಿಸುತ್ತದೆ ಎಂದು ವೇದಿಕೆಯು ಕಳವಳ ವ್ಯಕ್ತಪಡಿಸಿದೆ.

ಪುಣ್ಯಕ್ಷೇತ್ರವೆಂದು ಪೂಜಿಸಲ್ಪಡುವ ಧರ್ಮಸ್ಥಳವು ದುರದೃಷ್ಟವಶಾತ್, ವ್ಯಾಪಕ ಅತ್ಯಾಚಾರಗಳು, ಕೊಲೆಗಳು, ಅಪಹರಣಗಳು ಮತ್ತು ಅಮಾಯಕ ಜನರ, ವಿಶೇಷವಾಗಿ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಕೊಲೆಗಳು ಸೇರಿದಂತೆ ಹೇಯ ಅಪರಾಧಗಳ ಆರೋಪಗಳಿಂದ ಕುಖ್ಯಾತವಾಗಿದೆ ಎಂದು ವೇದಿಕೆಯು ತಿಳಿಸಿದೆ.

2012ರಲ್ಲಿ ಸೌಜನ್ಯ ಅವರ ಅಪಹರಣ ಮತ್ತು ಕೊಲೆ, 1986ರಲ್ಲಿ ಪದ್ಮಲತಾ ಅವರ ಅಪಹರಣ, ಹಲವು ದಿನಗಳ ಕಾಲ ಬಂಧನದಲ್ಲಿರಿಸಿ ಅತ್ಯಾಚಾರ ಮತ್ತು ಕ್ರೂರ ಕೊಲೆ ಮತ್ತು 1979ರಲ್ಲಿ ಟೀಚರ್ ವೇದವಲ್ಲಿ ಅವರ ಮೇಲಿನ ದಾಳಿ, ಅತ್ಯಾಚಾರ ಮತ್ತು ಸುಟ್ಟು ಕೊಲೆ ಮಾಡಿದ ಘಟನೆಗಳೂ ಸೇರಿದಂತೆ ಇದುವರೆಗೂ ಬಗೆಹರಿಯದ ಮಹಿಳೆಯರು ನಾಪತ್ತೆಯಾದ ಅಥವಾ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾದ ಇತರ ಹಲವಾರು ನಿಗೂಢ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ವೇದಿಕೆ ಹೇಳಿದೆ.

SIT ಮುಂದೆ ತಮ್ಮ ಸಾಕ್ಷ್ಯಗಳನ್ನು ನೀಡಲು ಮುಂದೆ ಬಂದ ಶ್ರೀಕ್ಷೇತ್ರದ ಮಾಜಿ ನೌಕರನೂ ಸೇರಿದಂತೆ ಅನೇಕರು ಬಹಿರಂಗಪಡಿಸಿದ ಈ ಆರೋಪಗಳು, ದಶಕಗಳ ಕಾಲ ನಡೆದಿರುವ ಅಧಿಕಾರದ ವ್ಯವಸ್ಥಿತ ದುರುಪಯೋಗ ಮತ್ತು ಸತ್ಯವನ್ನು ಮುಚ್ಚಿಹಾಕುವ ಕೆಟ್ಟ ಮಾದರಿಯನ್ನು ಸೂಚಿಸುತ್ತವೆ. SIT ಯಿಂದ ಮಾನವ ಅವಶೇಷಗಳ ಇತ್ತೀಚಿನ ಉತ್ಖನನವು ಈ ಎಲ್ಲ ಘಟನೆಗಳ ಪಾರದರ್ಶಕ ತನಿಖೆಯ ಅಗತ್ಯದ ಗಂಭೀರತೆಯನ್ನು ಮತ್ತಷ್ಟು ಒತ್ತಿಹೇಳುತ್ತದೆ ಎಂದು ವೇದಿಕೆಯು ತಿಳಿಸಿದೆ.

‘ಹೂತುಹೋದ ಸತ್ಯ’ಗಳ ತನಿಖೆಗೆ ಎಸ್.ಐ.ಟಿ

ಈ ‘ಹೂತುಹೋದ ರಹಸ್ಯ’ಗಳನ್ನು ಸಮಗ್ರವಾಗಿ ತನಿಖೆ ಮಾಡಲು 2025ರ ಜುಲೈನಲ್ಲಿ SIT ಅನ್ನು ರಚಿಸಿದ್ದಕ್ಕಾಗಿ ಕರ್ನಾಟಕ ಸರ್ಕಾರವನ್ನು ನಾವು ಅಭಿನಂದಿಸುತ್ತೇವೆ. ಆದರೆ ಅದೇ ಸಂದರ್ಭದಲ್ಲಿ ಇತ್ತೀಚಿನ ವಿಧಾನಸಭಾ ಅಧಿವೇಶನದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡರ ಜನಪ್ರತಿನಿಧಿಗಳ ವಿವಾದಾತ್ಮಕ ಹೇಳಿಕೆಗಳಿಂದ ನಾವು ತೀವ್ರವಾಗಿ ಆತಂಕಗೊಂಡಿದ್ದೇವೆ. ಇದರಲ್ಲಿ ರಾಜ್ಯದ ಉಪಮುಖ್ಯಮಂತ್ರಿಗಳ ಮತ್ತು ಗೃಹ ಸಚಿವರ ವಿಧಾನಸಭೆಯಲ್ಲಿನ ಹೇಳಿಕೆಗಳು ಸೇರಿವೆ ಎಂದು ವೇದಿಕೆ ಹೇಳಿದೆ.

ಗೃಹಸಚಿವರ SIT ಅನ್ನು ಪ್ರಾಥಮಿಕವಾಗಿ “ಧರ್ಮಸ್ಥಳದ ಮೇಲಿನ ಕಳಂಕವನ್ನು ನಿವಾರಿಸಲು” ಸ್ಥಾಪಿಸಲಾಗಿದೆ ಎಂಬ ಹೇಳಿಕೆಯು ಕಾಲಮುನ್ನವಾದುದು ಮಾತ್ರವಲ್ಲದೆ ಪಕ್ಷಪಾತದಿಂದ ಕೂಡಿದೆ. ಇದೇ ಅಭಿಪ್ರಾಯಕ್ಕೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಚಿವರೂ ಸಹಮತವಿದೆ ಎಂದು ಹೇಳಿರುವುದು ಇನ್ನಷ್ಟು ಆಘಾತಕಾರಿಯಾಗಿದೆ. ಇಂತಹ ಹೇಳಿಕೆಗಳು ವಿಧಿವಿಜ್ಞಾನ ಸಾಕ್ಷ್ಯ ಅಥವಾ ಸಾಕ್ಷಿಗಳ ಹೇಳಿಕೆಗಳಿಗಾಗಿ ಕಾಯದೆ ಅಧಿಕಾರಸ್ಥಾನದಲ್ಲಿರುವವರು ಪ್ರಭಾವಿ ವ್ಯಕ್ತಿಗಳನ್ನು ಆರೋಪದಿಂದ ಪಾರುಮಾಡುವ ಆತುರದಲ್ಲಿದ್ದಾರೆಂಬುದನ್ನು ತೋರಿಸುತ್ತದೆ ಎಂದು ವೇದಿಕೆಯು ಆಕ್ರೋಶ ವ್ಯಕ್ತಪಡಿಸಿದೆ.

ಇಂತಹ ಮಾತುಗಳು, ನಿಧಾನವಾಗಿ ಧೈರ್ಯಮಾಡಿ ಎಸ್.ಐ.ಟಿ ಮುಂದೆ ಹೇಳಿಕೆ ನೀಡಲು ಹೊರಬರುತ್ತಿರುವ ಸಾಕ್ಷಿಗಳಿಗೆ ನೇರ ಬೆದರಿಕೆಯನ್ನು ಒಡ್ಡುತ್ತವೆ. ಸರ್ಕಾರವೇ ಈಗಾಗಲೇ ಬಲಾಢ್ಯರ ಪಕ್ಷ ವಹಿಸುತ್ತಿರುವ ಸಂದೇಶ ನೀಡಿದರೆ, ಸಾಕ್ಷಿಗಳಾಗಲು ಮುಂಬರುತ್ತಿರುವವರು ಪ್ರತೀಕಾರಕ್ಕೆ ಹೆದರಬಹುದು ಮತ್ತು ಇದರಿಂದಾಗಿ ತನಿಖೆಯೇ ಪರಿಪೂರ್ಣಗೊಳ್ಳದೆ ಹೋಗಬಹುದು ಎಂದು ವೇದಿಕೆಯು ತಿಳಿಸಿದೆ.

ನ್ಯಾಯಯುತ, ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯವಾಗಿದೆ ಮಾತ್ರವಲ್ಲ, ಈ ಹಿಂದೆ ದೌರ್ಜನ್ಯಕ್ಕೊಳಗಾದ ಅಮಾಯಕರ ಕುಟುಂಬಗಳಿಗೆ ಭರವಸೆ ನೀಡುವುದು, ಮುಂದೆ ಇಂತಹವು ಮರುಕಳಿಸದಂತಹ ಸುರಕ್ಷಿತ ವಾತಾವರಣವನ್ನು ನಿರ್ಮಿಸುವುದು ಕೂಡ ಇದರಲ್ಲಿ ಸೇರಿದೆ ಎಂದು ವೇದಿಕೆಯು ಹೇಳಿದೆ.

ಅಮಾಯಕರ ಮೇಲಿನ ಹಿಂಸೆ-ಅಧರ್ಮದ ಪರಮಾವಧಿ ಯಾವುದೇ ಧರ್ಮ ಅಥವಾ ಧಾರ್ಮಿಕ ನೀತಿಯು ಮಹಿಳೆಯರ ವಿರುದ್ಧದ ಹಿಂಸೆಯನ್ನು ಸಮರ್ಥಿಸುವುದಿಲ್ಲ ಎಂದು ನಾವು ನಂಬಿದ್ದೇವೆ. ಜನರ ನಂಬಿಕೆಯ ಸ್ಥಳದಲ್ಲಿ ಅಂತಹ ಕೃತ್ಯಗಳು ತಡೆಯಿಲ್ಲದೆ ನಡೆಯಲು ಅವಕಾಶ ನೀಡುವುದು ಪರಮ ಅಧರ್ಮವಾಗಿದೆ ಮತ್ತು ಅದನ್ನು ಕಠಿಣವಾಗಿ ಟೀಕಿಸಬೇಕು ಎಂದು ವೇದಿಕೆಯು ಹೇಳಿದೆ.

ದೇಶಾದ್ಯಂತದ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಧರ್ಮಸ್ಥಳಕ್ಕೆ ಸಾಂತ್ವನ ಮತ್ತು ನೆಮ್ಮದಿಯನ್ನರಸಿ ಶ್ರದ್ಧೆಯಿಂದ ಭೇಟಿ ನೀಡುತ್ತಾರೆ, ಆದರೆ ಅವರ ನಂಬಿಕೆ ಮತ್ತು ಶ್ರದ್ಧೆಗಳೇ ಅವರನ್ನು ಅಪಾಯಕ್ಕೆ ತಳ್ಳುವಂತಹವಾಗುವುದಾದರೆ ಅದರಂತಹ ವಿಪರ್ಯಾಸ ಮತ್ತೇನಿರಲು ಸಾಧ್ಯ ಎಂದು ವೇದಿಕೆಯು ಪ್ರಶ್ನಿಸಿದೆ.

ಪ್ರಭಾವಿಗಳನ್ನು ರಕ್ಷಿಸುವ ಹೆಸರಿನಲ್ಲಿ ಮಹಿಳೆಯರ ಸುರಕ್ಷತೆಯನ್ನು ರಾಜಿ ಮಾಡಿಕೊಳ್ಳಲಾಗುವುದಿಲ್ಲ ಮತ್ತು SITಯ ತನಿಖೆಯು ಸಂಪೂರ್ಣ ಸತ್ಯವನ್ನು ಹೊರತರುವ ಪ್ರಕ್ರಿಯೆಯನ್ನು ದುರ್ಬಲಗೊಳಿಸುವುದಿಲ್ಲ ಎಂಬ ಸ್ಪಷ್ಟವಾದ ಸಂದೇಶವನ್ನು ಸರ್ಕಾರ ನೀಡಬೇಕಿದೆ. ಇದಕ್ಕೆ ವಿರುದ್ಧವಿರುವ ಯಾವುದೇ ಹೇಳಿಕೆಗಳನ್ನು ತಕ್ಷಣವೇ ಹಿಂಪಡೆಯಬೇಕೆಂದು ವೇದಿಕೆ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಸಂತ್ರಸ್ತರ ಕುಟುಂಬಗಳೊಂದಿಗೆ ನಾವು ನಿಲ್ಲುತ್ತೇವೆ, ಇದು ನಮ್ಮ ಸಾಮಾಜಿಕ ಜವಾಬ್ದಾರಿ ಎಂದು ನಂಬಿದ್ದೇವೆ. ಮತ್ತು ನಮ್ಮ ಪ್ರಜಾತಾಂತ್ರಿಕ ಸಂಸ್ಥೆಗಳಲ್ಲಿ ನಂಬಿಕೆಯನ್ನು ಮರುಸ್ಥಾಪಿಸುವಂತಹ ನ್ಯಾಯವನ್ನು ನಿರೀಕ್ಷಿಸುತ್ತೇವೆ ಎಂದು ವೇದಿಕೆಯು ಹೇಳಿದೆ.

ತನಿಖೆ ಮಹಿಳೆಯರ ಘನತೆ-ಸುರಕ್ಷತೆಯನ್ನು ಕೇಂದ್ರೀಕರಿಸಬೇಕು; ರಾಜಕೀಯ-ಧಾರ್ಮಿಕ ವಿಚಾರಗಳನ್ನಲ್ಲ. ಈ ಇಡೀ ವಿಚಾರಣೆಯು ಸಂಪೂರ್ಣವಾಗಿ ಮಹಿಳೆಯರು ಮತ್ತಿತರ ಅಮಾಯಕ ನೊಂದವರಿಗೆ ನ್ಯಾಯ ದೊರಕಿಸುವುದರ ಸುತ್ತ ಕೇಂದ್ರಿತವಾಗಿರಬೇಕೇ ಹೊರತು ಇನ್ನಾವುದೇ ಧಾರ್ಮಿಕ ಅಥವಾ ರಾಜಕೀಯ ವಿಚಾರಗಳ ಸುತ್ತ ಅಲ್ಲ ಎಂದು ನಾವು ಗಟ್ಟಿದನಿಯಲ್ಲಿ ಪ್ರತಿಪಾದಿಸಲು ಬಯಸುತ್ತೇವೆ ಎಂದು ವೇದಿಕೆಯು ತಿಳಿಸಿದೆ.

ನಮ್ಮ ಹಕ್ಕೊತ್ತಾಯಗಳು:

SIT ತನಿಖೆಯ ಅಬಾಧಿತ ಮುಂದುವರಿಕೆ: ತನಿಖೆಯು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಬೇಕು, ಉತ್ಖನನಗಳು, ವಿಧಿವಿಜ್ಞಾನ ವಿಶ್ಲೇಷಣೆ ಮತ್ತು ಸಾಕ್ಷಿಗಳ ರಕ್ಷಣೆಗಾಗಿ ಸಂಪೂರ್ಣ ಎಲ್ಲ ರೀತಿಯಲ್ಲಿಯೂ ಸಂಪನ್ಮೂಲಗಳನ್ನು ಹಂಚಿಕೆ ಮಾಡಬೇಕು. ಸೌಜನ್ಯ, ಪದ್ಮಲತಾ ಮತ್ತು ವೇದವಲ್ಲಿ ಅವರ ಪ್ರಕರಣಗಳು ಸೇರಿದಂತೆ ಎಲ್ಲಾ ಸಂಬಂಧಿತ ಪ್ರಕರಣಗಳನ್ನು ಸಮಗ್ರವಾಗಿ ಮರು-ತನಿಖೆ ಮಾಡಬೇಕು ಎಂದು ವೇದಿಕೆಯು ಆಗ್ರಹಿಸಿದೆ.

ಪೂರ್ವನಿರ್ಧಾರಿತ ಹೇಳಿಕೆಗಳ ನಿಯಂತ್ರಣ: ಗೃಹ ಸಚಿವರು ತಮ್ಮ ವಿಧಾನಸಭಾ ಹೇಳಿಕೆಯನ್ನು ಸಾರ್ವಜನಿಕವಾಗಿ ಹಿಂಪಡೆಯಬೇಕು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಿಗೆ ಮಹಿಳೆಯರ ಸುರಕ್ಷೆ ಆದ್ಯತೆಯಾಗಬೇಕು. ಮತ್ತು ತನಿಖೆಯ ಮೇಲೆ ಪ್ರಭಾವ ಬೀರುವ ಯಾವುದೇ ಹೇಳಿಕೆಗಳನ್ನು ನೀಡುವುದನ್ನು ಸರ್ಕಾರದ ಕ್ಯಾಬಿನೆಟ್ ಸದಸ್ಯರು ಮತ್ತು ಇನ್ನಿತರ ಜನಪ್ರತಿನಿಧಿಗಳು ನಿಲ್ಲಿಸಬೇಕು. ಸಾಕ್ಷಿಗಳು ಅಥವಾ ಸಂತ್ರಸ್ತರ ಕುಟುಂಬಗಳನ್ನು ಬೆದರಿಸುವುದನ್ನು ತಪ್ಪಿಸಲು ಸಂಪೂರ್ಣ ನಿಷ್ಪಕ್ಷಪಾತಿ ನಡವಳಿಕೆ ಮತ್ತು ತಟಸ್ಥತೆಯನ್ನು ಎತ್ತಿಹಿಡಿಯಬೇಕು ಎಂದು ವೇದಿಕೆಯು ಹೇಳಿದೆ.

ಸಾಕ್ಷಿ ರಕ್ಷಣೆ ಮತ್ತು ಬೆಂಬಲ: ಮಾಹಿತಿ ನೀಡುವವರು ಮತ್ತು ಸಾಕ್ಷಿಗಳನ್ನು ರಕ್ಷಿಸಲು ತಕ್ಷಣದ ಕ್ರಮಗಳು, ಪೊಲೀಸ್ ರಕ್ಷಣೆ ಮತ್ತು ಸಾಕ್ಷ್ಯಗಳಿಗಾಗಿ ಗೌಪ್ಯ ಚಾನೆಲ್‌ಗಳು ಸೇರಿದಂತೆ. ಪಕ್ಷಪಾತದ ಹೇಳಿಕೆಗಳಿಂದ ಉಂಟಾಗುವ ಯಾವುದೇ ಬೆದರಿಕೆಗಳನ್ನು ಸರ್ಕಾರವು ಪರಿಹರಿಸಬೇಕು ಎಂದು ವೇದಿಕೆಯು ತಿಳಿಸಿದೆ.

ಧಾರ್ಮಿಕ ಸ್ಥಳಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯ ಮೇಲೆ ಗಮನ: ಎಲ್ಲಾ ಯಾತ್ರಾ ಕೇಂದ್ರಗಳಲ್ಲಿ ಕಟ್ಟುನಿಟ್ಟಾದ ಭದ್ರತಾ ಪ್ರೋಟೋಕಾಲ್‌ಗಳನ್ನು ಜಾರಿಗೊಳಿಸಿ, CCTV ಕಣ್ಗಾವಲು, ಮಹಿಳೆಯರಿಗಾಗಿ ಸಹಾಯ ಕೇಂದ್ರಗಳು ಮತ್ತು ಲಿಂಗಾಧಾರಿತ ಹಿಂಸಾಚಾರದ ಬಗ್ಗೆ ಜಾಗೃತಿ ಅಭಿಯಾನಗಳು ಜಾರಿಯಾಗಬೇಕು ಎಂದು ವೇದಿಕೆಯು ಒತ್ತಾಯಿಸಿದೆ.

ಲಿಂಗ ನ್ಯಾಯ ಮತ್ತು ಹೊಣೆಗಾರಿಕೆ: SIT ಯ ಪ್ರಗತಿಯನ್ನು ಬೆಂಬಲಿಸಲು ಮತ್ತು ಸಹಾಯ ಮಾಡಲು ಮಹಿಳಾ ಹಕ್ಕುಗಳ ತಜ್ಞರನ್ನು ಒಳಗೊಂಡ ಸ್ವತಂತ್ರ ಸಹಾಯಕ ಸಮಿತಿಯನ್ನು ಸ್ಥಾಪಿಸಬೇಕು. ಬಾಧಿತ ಕುಟುಂಬಗಳಿಗೆ ರಕ್ಷಣೆ, ಪರಿಹಾರ ಮತ್ತು ಪುನರ್ವಸತಿ ಖಚಿತಪಡಿಸಬೇಕು. ತನಿಖೆಯನ್ನು ಪ್ರಭಾವಿಸುವ ರೀತಿಯಲ್ಲಿ ಹೇಳಿಕೆ ನೀಡುವ, ಪತ್ರ ಬರೆಯುವ ಮತ್ತು ಒತ್ತಡ ಹೇರುವ ಮೂಲಕ ಸತ್ಯವನ್ನು ಮುಚ್ಚಿಹಾಕುವುದರಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿಗಳು ಅಥವಾ ಸಂಸ್ಥೆಗಳನ್ನು- ರಾಜಕೀಯ ನಾಯಕರು ಮತ್ತು ಅವರ ಸಂಘಟನೆಗಳನ್ನೂ ಸೇರಿದಂತೆ- ಹೊಣೆಗಾರರನ್ನಾಗಿ ಮಾಡಿ, ಕ್ರಮ ಕೈಗೊಳ್ಳಬೇಕು ಎಂದು ವೇದಿಕೆಯು ಆಗ್ರಹಿಸಿದೆ.

ಸಾರ್ವಜನಿಕ ಜಾಗೃತಿ ಮತ್ತು ಸಂವೇದನೆ: ಮಹಿಳೆಯರ ವಿರುದ್ಧದ ಹಿಂಸಾಚಾರವು ಯಾವುದೇ ಧಾರ್ಮಿಕ ಅಥವಾ ಸಾಂಸ್ಕೃತಿಕ ಮೌಲ್ಯಕ್ಕೆ ವಿರುದ್ಧವಾಗಿದೆ ಎಂದು ಒತ್ತಿಹೇಳುವ ರಾಜ್ಯವ್ಯಾಪಿ ಅಭಿಯಾನಗಳನ್ನು ಪ್ರಾರಂಭಿಸಬೇಕು ಎಂದು ವೇದಿಕೆಯು ಹೇಳಿದೆ.

ಧರ್ಮಸ್ಥಳದ ದೇವತೆಯಲ್ಲಿ ನಂಬಿಕೆ ಇಟ್ಟಿರುವ ಭಕ್ತರು ಮತ್ತು ಸಾಮಾನ್ಯ ಜನರಿಗೆ ನಾವು ಮನವಿ ಮಾಡುತ್ತೇವೆ; ನಿಜವಾದ ಭಕ್ತಿಯು ಸತ್ಯ ಮತ್ತು ನ್ಯಾಯದ ಮೂಲಕ ಧರ್ಮವನ್ನು ಎತ್ತಿಹಿಡಿಯುವುದರಲ್ಲಿ ಅಡಗಿದೆ. ಮಹಿಳೆಯರ ವಿರುದ್ಧದ ಹಿಂಸಾಚಾರವನ್ನು ಅನುಮತಿಸುವುದು ಅಥವಾ ನಿರ್ಲಕ್ಷಿಸುವುದು ದೇವಾಲಯವು ಒಳಗೊಂಡಿರುವ ಸಹಾನುಭೂತಿ ಮತ್ತು ರಕ್ಷಣೆಯ ತತ್ವಗಳಿಗೆ ವಿರುದ್ಧವಾಗಿದೆ ಎಂದು ವೇದಿಕೆಯು ಹೇಳಿದೆ. ಈ ಮೂಲಭೂತ ಸಂಗತಿಗಳನ್ನು ಮನೆಮನೆಗೆ ಮುಟ್ಟಿಸೋಣ, ಧಾರ್ಮಿಕ ಸ್ಥಳಗಳನ್ನು ಎಲ್ಲರಿಗೂ, ವಿಶೇಷವಾಗಿ ಅಂಚಿನಲ್ಲಿರುವವರಿಗೆ ಸುರಕ್ಷತೆಯ ತಾಣಗಳನ್ನಾಗಿ ಮಾಡೋಣ ಎಂದು ವೇದಿಕೆಯು ಕರೆ ನೀಡಿದೆ.

ಈ ಹಕ್ಕೊತ್ತಾಯಗಳು ಕಾರ್ಯಗತಗೊಳ್ಳುವಂತಾಗಲು ಮಾಧ್ಯಮ, ನಾಗರಿಕ ಸಮಾಜ ಮತ್ತು ಕಾಳಜಿಯುಳ್ಳ ಸಾರ್ವಜನಿಕರು ನಮ್ಮೊಂದಿಗೆ ಸೇರಿಕೊಳ್ಳುವಂತೆ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಕರೆ ನೀಡುತ್ತದೆ.

ಸಮಕಾಲೀನ ಸಂದರ್ಭದ ಈ ಪ್ರಮುಖ ವಿಷಯದ ಬಗ್ಗೆ ಗಂಭೀರ ಸಾರ್ವಜನಿಕ ಚರ್ಚೆ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಾದ್ಯಂತ ಜಾಗೃತಿ ಅಭಿಯಾನಗಳನ್ನು ಆಯೋಜಿಸಲು ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಬದ್ಧವಾಗಿದೆ ಎಂದು ವೇದಿಕೆಯು ತಿಳಿಸಿದೆ.

ಇಂತಹ ಗಂಭೀರ ಪ್ರಕರಣಗಳು ನಡೆಯುವುದನ್ನೇ ನಿಯಂತ್ರಿಸುವ ನಿಟ್ಟಿನಲ್ಲಿ, ಲಿಂಗ-ಸೂಕ್ಷ್ಮ ಪೊಲೀಸ್ ಮತ್ತು ತನಿಖಾ ಪ್ರೋಟೋಕಾಲ್‌ಗಳನ್ನು ರಾಜ್ಯಾದ್ಯಂತ ಬಲಪಡಿಸಲು ನಾಗರಿಕ ಸಮಾಜದೊಂದಿಗೆ ಸಂವಾದದಲ್ಲಿ ತೊಡಗಿಸಿಕೊಳ್ಳುವಂತೆ ನಾವು ಕರ್ನಾಟಕ ಸರ್ಕಾರವನ್ನು ಒತ್ತಾಯಿಸುತ್ತೇವೆ. ಇಂತಹ ಮುನ್ನೆಚ್ಚರಿಕೆಯ ಹೆಜ್ಜೆಗಳಿಂದ ಮಾತ್ರವೇ ಲಿಂಗಾಧಾರಿತ ಹಿಂಸಾಚಾರದ ಹೆಚ್ಚುತ್ತಿರುವ ಪ್ರಕರಣಗಳನ್ನು ತಡೆಗಟ್ಟುವ ಪರಿಣಾಮಕಾರಿ ಕಾರ್ಯವಿಧಾನವನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ ಎಂದು ವೇದಿಕೆಯು ಹೇಳಿದೆ.

ಪತ್ರಿಕಾಗೋಷ್ಠಿಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್. ವಿಮಲ, ಸಾಮಾಜಿಕ ಕಾರ್ಯಕರ್ತೆ ಮಮತಾ ಯಜಮಾನ್, ಲಿಂಗತ್ವ ಅಲ್ಪಸಂಖ್ಯಾತರ ಹೋರಾಟಗಾರರಾದ ಸನಾ, ವಕೀಲರಾದ ಪೂರ್ಣಾ ರವಿಶಂಕರ್ ಮತ್ತು ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆಯ ಗಾಂಧಿಮದಿ ಉಪಸ್ಥಿತರಿದ್ದರು.

ನಕ್ಸಲ್ ಸಂಘರ್ಷದ ಬರಹಗಾರ್ತಿ ಬೆಲಾ ಭಾಟಿಯಾರೊಂದಿಗೆ ಸಂದರ್ಶನ: ಆಪರೇಷನ್ ಖಗಾರ್; ಕಾರ್ಪೊರೇಟ್ ಲೂಟಿಗಾಗಿ ಆದಿವಾಸಿಗಳ ದಮನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೈಂಗಿಕ ದೌರ್ಜನ್ಯ: ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ದೂರು ದಾಖಲು

ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಎಸಗಿ ಗರ್ಭಪಾತ ಮಾಡಿಸಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ ನಂತರ ಕೇರಳ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ...

ಉತ್ತರ ಪ್ರದೇಶ-ಮಹಾರಾಷ್ಟ್ರದಲ್ಲಿ ಜನನ ಪ್ರಮಾಣಪತ್ರಕ್ಕೆ ಆಧಾರ್ ಮಾನ್ಯವಲ್ಲ: ಹೊಸ ಮಾರ್ಗಸೂಚಿ

ಜನನ ಪ್ರಮಾಣಪತ್ರಗಳನ್ನು ನೀಡಲು ಆಧಾರ್ ಕಾರ್ಡ್‌ಗಳನ್ನು ಇನ್ನು ಮುಂದೆ ಮಾನ್ಯ ಪುರಾವೆಯಾಗಿ ಅಥವಾ ಜನ್ಮ ದಿನಾಂಕದ ಪುರಾವೆಯಾಗಿ ಸ್ವೀಕರಿಸಲಾಗುವುದಿಲ್ಲ ಎಂದು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಘೋಷಿಸಿವೆ. ಈ ಉದ್ದೇಶಕ್ಕಾಗಿ ಆಧಾರ್ ಬಳಸುವುದನ್ನು...

ಉತ್ತರಾಖಂಡ| 150 ವರ್ಷಗಳ ಜಾತಿ ತಡೆಗೋಡೆ ಮುರಿದು ತಮ್ಮದೇ ಮುಖ್ಯಸ್ಥರ ಆಯ್ಕೆ ಮಾಡಿಕೊಂಡ ದಲಿತರು

ಉತ್ತರಾಖಂಡದ ದೂರದ ಜೌನ್ಸರ್-ಬವಾರ್ ಪ್ರದೇಶದ ಬಿಜ್ನು ಬಿಜ್ನಾಡ್ ಗ್ರಾಮದ ದಲಿತ ಸಮುದಾಯವು ಸುಮಾರು 150 ವರ್ಷಗಳಲ್ಲಿ ಮೊದಲ ಬಾರಿಗೆ ತನ್ನದೇ ಆದ 'ಸೈನಾ' (ಗ್ರಾಮದ ಮುಖ್ಯಸ್ಥ) ಆಯ್ಕೆ ಮಾಡುವ ಮೂಲಕ ಐತಿಹಾಸಿಕ ಹೆಜ್ಜೆ...

ರಿಲಯನ್ಸ್ ಇಂಡಸ್ಟ್ರೀಸ್‌ಗೆ ರೂ. 56.44 ಕೋಟಿ ಸಿಜಿಎಸ್‌ಟಿ ದಂಡ

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಅಹಮದಾಬಾದ್‌ನ ಸಿಜಿಎಸ್‌ಟಿ ಜಂಟಿ ಆಯುಕ್ತರಿಂದ 56.44 ಕೋಟಿ ರೂ. ದಂಡದ ಆದೇಶವನ್ನು ಸ್ವೀಕರಿಸಿದೆ ಎಂದು ಶುಕ್ರವಾರ ತಿಳಿಸಿದೆ. ನವೆಂಬರ್ 25 ರಂದು ಹೊರಡಿಸಲಾದ ಆದೇಶದಲ್ಲಿ, ಕಂಪನಿಯ ಇನ್‌ಪುಟ್...

ತಮಿಳುನಾಡು| ರಸ್ತೆ ಅಪಘಾತದಲ್ಲಿ ಇಬ್ಬರು ದಲಿತ ಯುವಕರು ಸಾವು; ಜಾತಿ ವೈಷಮ್ಯ ಆರೋಪ

ತಮಿಳುನಾಡಿನ ಧರ್ಮಪುರಿಯಲ್ಲಿ ಬುಧವಾರ ರಾತ್ರಿ ಚಿನ್ನಾರ್ಥಳ್ಳಿ ಕೂಟ್ ರಸ್ತೆಯ ಬಳಿ ಅಪರಿಚಿತ ವಾಹನವೊಂದು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸೊನ್ನಂಪಟ್ಟಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ ಎಂದು...

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....