Homeಕರ್ನಾಟಕಧರ್ಮಸ್ಥಳ: 20 ವರ್ಷಗಳ ಅಸಹಜ ಸಾವು ಪ್ರಕರಣಗಳ ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಬಲವಾದ ಆಗ್ರಹ

ಧರ್ಮಸ್ಥಳ: 20 ವರ್ಷಗಳ ಅಸಹಜ ಸಾವು ಪ್ರಕರಣಗಳ ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಬಲವಾದ ಆಗ್ರಹ

- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದ ಎರಡು ದಶಕಗಳಲ್ಲಿ ನಡೆದ ಹಲವು ಅಸಹಜ ಸಾವು, ಅತ್ಯಾಚಾರ, ಕೊಲೆ ಮತ್ತು ಭೂಕಬಳಿಕೆ ಪ್ರಕರಣಗಳ ಬಗ್ಗೆ ರಾಜ್ಯ ಸರ್ಕಾರವು ರಚಿಸಿರುವ ವಿಶೇಷ ತನಿಖಾ ತಂಡ (SIT) ತನಿಖೆಯನ್ನು ತೀವ್ರಗೊಳಿಸಬೇಕು ಎಂದು ಬೆಂಗಳೂರಿನ ವಿವಿಧ ಸಮಾನ ಮನಸ್ಕ ಸಂಘಟನೆಗಳು ಬಲವಾದ ಆಗ್ರಹ ಮಂಡಿಸಿವೆ.

ಗುರುವಾರ ನಗರದಲ್ಲಿ ನಡೆದ ಮಹತ್ವದ ಸಭೆಯಲ್ಲಿ ರಾಜ್ಯದ ಪ್ರಮುಖ ಸಾಹಿತಿಗಳು, ಚಿಂತಕರು, ವಕೀಲರು, ಪತ್ರಕರ್ತರು ಮತ್ತು ಹೋರಾಟಗಾರರು ಭಾಗವಹಿಸಿದ್ದು, ಈ ಪ್ರಕರಣಗಳ ಕುರಿತು ಗಂಭೀರ ಚರ್ಚೆ ನಡೆಸಿ ಸರ್ಕಾರಕ್ಕೆ ತಲುಪಿಸಬೇಕಾದ ನಿರ್ಣಯಗಳನ್ನು ಕೈಗೊಂಡಿದ್ದಾರೆ.

ಸಭೆಯಲ್ಲಿ ಮಾಡಿಕೊಂಡ ಪ್ರಮುಖ ನಿರ್ಣಯಗಳಲ್ಲಿ, 2005 ರಿಂದ 2025 ರ ಅವಧಿಯಲ್ಲಿ ದಾಖಲಾದ ಅಸಹಜ ಸಾವು, ಅತ್ಯಾಚಾರ, ಹಲ್ಲೆ, ಕೊಲೆ ಮತ್ತು ನೂರಾರು ಹುಡುಗಿಯರ ನಾಪತ್ತೆ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿರುವುದನ್ನು ಈ ಸಂಘಟನೆಗಳು ಸ್ವಾಗತಿಸಿವೆ.

ಈ ಎಸ್‌ಐಟಿ ರಚನೆಯ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿರುವಂತೆಯೇ, ಕಳೆದ 20 ವರ್ಷಗಳಲ್ಲಿ ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ ಸಾವು, ಕೊಲೆ, ನಾಪತ್ತೆ ಪ್ರಕರಣಗಳ ಜೊತೆಗೆ ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದಾಖಲಾದ ಪ್ರಕರಣಗಳ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ ಎಂದು ಪ್ರಜ್ಞಾವಂತ ಸಮಾಜ ನಂಬಿಕೆ ಇಟ್ಟುಕೊಂಡಿದೆ. ಎಸ್‌ಐಟಿಯಲ್ಲಿರುವ ಅಧಿಕಾರಿಗಳ ಮೇಲೆ ಜನತೆಗೆ ವಿಶ್ವಾಸವಿದ್ದು, ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.

ತನಿಖೆ ಸ್ಥಗಿತಗೊಳಿಸಲು ವಿಫಲ ಯತ್ನಗಳ ಆರೋಪ

ಆದರೆ, ಕೆಲವು ರಾಜಕೀಯ ಪಕ್ಷಗಳು ಮತ್ತು ಪ್ರಭಾವಿ ವ್ಯಕ್ತಿಗಳು ಎಸ್‌ಐಟಿ ತನಿಖೆಯನ್ನು ನಿಲ್ಲಿಸಲು ಹಗಲು ರಾತ್ರಿ ಪ್ರಯತ್ನಿಸುತ್ತಿವೆ ಎಂದು ಸಭೆಯಲ್ಲಿ ತೀವ್ರವಾಗಿ ಆರೋಪಿಸಲಾಗಿದೆ. “ಎಸ್ಐಟಿಯನ್ನು ಒತ್ತಡಕ್ಕೆ ಒಳಪಡಿಸಲು, ದೂರುದಾರರು, ಸಾಕ್ಷಿದಾರರನ್ನು ಬೆದರಿಸುವ, ತೇಜೋವಧೆ ನಡೆಸಿ ಹಿಮ್ಮೆಟ್ಟಿಸುವ ಯತ್ನವೂ ಆಗುತ್ತಿದೆ. ಸರ್ಕಾರ ಇಂತಹ ಪಿತೂರಿ, ಒತ್ತಡಕ್ಕೆ ಒಳಗಾಗದೆ SIT ಅದರ ವ್ಯಾಪ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆಸಲು ಅನುವು ಮಾಡಿಕೊಡಬೇಕು” ಎಂದು ಸಭೆಯಲ್ಲಿ ನಿರ್ಣಯಿಸಲಾಗಿದೆ.

ದೂರುದಾರರ ಆರೋಪಗಳು ಪ್ರತ್ಯೇಕ ಪ್ರಕರಣಗಳಾಗಿದ್ದು, ಅವುಗಳ ಬಗ್ಗೆ ಪ್ರಾಮಾಣಿಕ ತನಿಖೆ ಆಗಬೇಕು. ಈ ವಿಚಾರದಲ್ಲಿ ಜಾತ್ಯತೀತ ಮತ್ತು ಜನಪರ ಸಂಘಟನೆಗಳ ನೈತಿಕ ಬೆಂಬಲ ದೂರುದಾರರಿಗೆ ಸಂಪೂರ್ಣವಾಗಿ ಇರುತ್ತದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಜೊತೆಗೆ, ಈ ಹಿಂದಿನಿಂದಲೂ ಹೋರಾಟಗಾರರು ಇಡುತ್ತಾ ಬಂದಿರುವ ಬೇಡಿಕೆಗಳ ಬಗ್ಗೆಯೂ ಸರ್ಕಾರ ತಕ್ಷಣ ಗಮನ ಹರಿಸಬೇಕು ಎಂದು ಆಗ್ರಹಿಸಲಾಯಿತು.

ಹಳೆಯ ಪ್ರಕರಣಗಳ ಮರು ತನಿಖೆಗೆ ಆಗ್ರಹ

ಹಳೆಯ ಆದರೆ, ಇಂದಿಗೂ ನ್ಯಾಯ ಸಿಗದ ಕೆಲವು ಮಹತ್ವದ ಪ್ರಕರಣಗಳನ್ನು ಎಸ್‌ಐಟಿ ತನಿಖೆಯ ವ್ಯಾಪ್ತಿಗೆ ತರಬೇಕು ಎಂದು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು. ಅವುಗಳಲ್ಲಿ ಕೆಲವು ಪ್ರಮುಖ ಪ್ರಕರಣಗಳ ವಿವರಗಳು ಇಲ್ಲಿವೆ:

ಪದ್ಮಲತಾ ಪ್ರಕರಣ (1986): ಧರ್ಮಸ್ಥಳ ಗ್ರಾಮದ ಸಿಪಿಐಎಂ ಶಾಖಾ ಕಾರ್ಯದರ್ಶಿ ಎಂ.ಕೆ. ದೇವಾನಂದರ ಮಗಳು ಪದ್ಮಲತಾ ಅವರನ್ನು ಅಪಹರಿಸಿ ಕೊಲೆ ಮಾಡಲಾಗಿತ್ತು. ನಂತರ ಮೃತದೇಹವನ್ನು ನದಿಗೆ ಎಸೆಯಲಾಗಿತ್ತು. ಆ ಸಂದರ್ಭದಲ್ಲಿ ದೊಡ್ಡ ಹೋರಾಟಗಳು ನಡೆದು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ್ದರೂ, ಪ್ರಭಾವಿಗಳಿಗೆ ಮಣಿದು ಅದನ್ನು ‘ಪತ್ತೆಹಚ್ಚಲಾಗದ ಪ್ರಕರಣ’ ಎಂದು ಮುಕ್ತಾಯಗೊಳಿಸಲಾಗಿತ್ತು. ದೇವಾನಂದರು ಹಲವರ ಹೆಸರು ಉಲ್ಲೇಖಿಸಿ ದೂರು ನೀಡಿದ್ದರೂ, ಆ ನಿಟ್ಟಿನಲ್ಲಿ ತನಿಖೆ ನಡೆದಿಲ್ಲ ಎಂಬುದು ಪದ್ಮಲತಾ ಕುಟುಂಬದವರ ಆರೋಪ. ಸ್ಥಳೀಯ ಭೂಮಾಲೀಕರ ಅಲಿಖಿತ ನಿಯಮವನ್ನು ಮುರಿದು ಮಂಡಲ ಪಂಚಾಯತ್‌ಗೆ ಚುನಾವಣೆಗೆ ಸ್ಪರ್ಧಿಸಿದ್ದಕ್ಕೆ ಮತ್ತು ಮಲೆಕುಡಿಯರ ಒಕ್ಕಲೆಬ್ಬಿಸುವಿಕೆಯ ವಿರುದ್ಧ ಹೋರಾಡಿದ್ದಕ್ಕೆ ದೇವಾನಂದರ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಸ್ವತಃ ದಿವಂಗತ ದೇವಾನಂದರು ಕೊನೆಯವರೆಗೂ ಹೇಳುತ್ತಾ ಬಂದಿರುತ್ತಾರೆ. ಈ ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.

ವೇದವಲ್ಲಿ ಪ್ರಕರಣ (1979): ಧರ್ಮಸ್ಥಳದ ಎಸ್‌ಡಿಎಂ ಅನುದಾನಿತ ಪ್ರೌಢಶಾಲೆಯಲ್ಲಿ ಅಧ್ಯಾಪಕಿಯಾಗಿದ್ದ ವೇದವಲ್ಲಿ ಅವರ ಅನುಮಾನಾಸ್ಪದ ಸಾವಿನ ಪ್ರಕರಣವಿದು. ನ್ಯಾಯಯುತವಾಗಿ ದೊರಕಬೇಕಾದ ಮುಖ್ಯೋಪಾಧ್ಯಾಯಿನಿ ಹುದ್ದೆಗೆ ಹಕ್ಕು ಮಂಡಿಸಿದ್ದಕ್ಕಾಗಿ ಊರಿನ ಫ್ಯೂಡಲ್ ಶಕ್ತಿಗಳು ವೇದವಲ್ಲಿಯವರನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂಬುದಾಗಿ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ, ಬಲಾಢ್ಯ ಶಕ್ತಿಗಳ ಪ್ರಭಾವದಿಂದಾಗಿ ವೇದವಲ್ಲಿಯವರ ಪತಿ ಡಾ. ಹರಳೆಯರ ಮೇಲೆ ಸುಳ್ಳು ಆರೋಪ ಹೊರಿಸಿ ಜೈಲಿಗೆ ಹಾಕುವ ವಿಫಲ ಸಂಚು ನಡೆಸಲಾಗಿತ್ತು. ಆ ಮೂಲಕ ವೇದವಲ್ಲಿ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲಾಯಿತು. ಈ ಪ್ರಕರಣದ ಮರುತನಿಖೆ ಆಗಬೇಕು ಎಂದು ಸಭೆ ಆಗ್ರಹಿಸಿದೆ.

ಮಾವುತ ನಾರಾಯಣ ಮತ್ತು ಯಮುನಾ ಕೊಲೆ (2012): 2012 ಸೆಪ್ಟೆಂಬರ್‌ನಲ್ಲಿ ಧರ್ಮಸ್ಥಳದಲ್ಲಿ ಆನೆ ಮಾವುತನಾಗಿದ್ದ ನಾರಾಯಣ ಮತ್ತು ಅವರ ಸಹೋದರಿ ಯಮುನಾ ಅವರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಯಿತು. ಈ ಪ್ರಕರಣವನ್ನು ಪೊಲೀಸ್ ಇಲಾಖೆ ಪತ್ತೆಯಾಗದ ಪ್ರಕರಣ ಎಂದು ವರದಿ ನೀಡಿ ಮುಚ್ಚಿಹಾಕುತ್ತದೆ. ಆನೆ ಮಾವುತ ನಾರಾಯಣ ವಾಸವಿದ್ದ ಜಮೀನಿನ ಮೇಲೆ ಊರಿನ ಪ್ರಭಾವಿಗಳಿಗೆ ಆಸಕ್ತಿ ಇತ್ತು. ಪ್ರಭಾವಿಗಳ ಒತ್ತಡಕ್ಕೆ ಮಣಿಯದ ಕಾರಣ ಈ ಜೋಡಿ ಕೊಲೆ ನಡೆದಿದೆ ಎಂದು ನಾರಾಯಣ ಕುಟುಂಬ ಅಂದಿನಿಂದಲೂ ಆರೋಪಿಸುತ್ತಾ ಬಂದಿದೆ. ನಾರಾಯಣ ವಾಸವಿದ್ದ ಜಮೀನಿನಲ್ಲಿ ಈಗ ಪ್ರಭಾವಿಗಳ ಭವ್ಯ ಕಟ್ಟಡ ತಲೆ ಎತ್ತಿರುವುದು ಆ ಆರೋಪವನ್ನು ಪುಷ್ಟೀಕರಿಸುತ್ತದೆ.

ಸೌಜನ್ಯ ಕೊಲೆ ಪ್ರಕರಣ (2012): ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ವಿದ್ಯಾರ್ಥಿನಿ ಸೌಜನ್ಯ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ಅವರನ್ನು ನ್ಯಾಯಾಲಯ ನಿರಪರಾಧಿ ಎಂದು ಬಿಡುಗಡೆಗೊಳಿಸಿದೆ. ಆ ಮೂಲಕ ಸೌಜನ್ಯ ಕುಟುಂಬ ಮತ್ತು ಜನಾಭಿಪ್ರಾಯಕ್ಕೆ ನ್ಯಾಯಾಲಯದಲ್ಲಿ ಮನ್ನಣೆ ದೊರಕಿದೆ. ಅಂದಿನಿಂದ ಸೌಜನ್ಯ ಕುಟುಂಬ ಮತ್ತು ಜನ ಚಳವಳಿಗಳು, ನಾಗರಿಕ ಸಮಾಜ ಸೌಜನ್ಯ ಪ್ರಕರಣದ ಮರು ತನಿಖೆಗೆ ಬಲವಾದ ಆಗ್ರಹ ಮಾಡುತ್ತಲೇ ಬಂದಿವೆ.

ಈ ಎಲ್ಲಾ ಹಳೆಯ ಪ್ರಕರಣಗಳನ್ನು ಎಸ್‌ಐಟಿ ತನಿಖೆಯ ವ್ಯಾಪ್ತಿಗೆ ತರಬೇಕು. ಇಲ್ಲವಾದರೆ, ಈ ಪ್ರಕರಣಗಳ ತನಿಖೆಗೆ ಪ್ರತ್ಯೇಕ ತಂಡ ರಚಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ದಲಿತರ ಭೂಮಿ ಮತ್ತು ಕಾರ್ಮಿಕರ ಹಕ್ಕುಗಳ ಬಗ್ಗೆ ಪ್ರಮುಖ ನಿರ್ಣಯಗಳು

ಧರ್ಮಸ್ಥಳದಲ್ಲಿನ ದಲಿತ ಸಮುದಾಯದವರ ಭೂಮಿ ಹಕ್ಕುಗಳು ಮತ್ತು ಕಾರ್ಮಿಕರ ಸಮಸ್ಯೆಗಳ ಬಗ್ಗೆಯೂ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಈ ಸಂಬಂಧ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು:

ದಲಿತ ಕಾರ್ಮಿಕರ ಮನೆ ಹಕ್ಕು: ಧರ್ಮಸ್ಥಳದಲ್ಲಿ ನೂರಾರು ದಲಿತರು ಸ್ವಚ್ಛತಾ ಕಾರ್ಮಿಕರಾಗಿ ತಲೆತಲಾಂತರಗಳಿಂದ ದುಡಿಯುತ್ತಿದ್ದಾರೆ. ಈ ರೀತಿ ದುಡಿಯುವ ಸ್ವಚ್ಛತಾ ಕಾರ್ಮಿಕರಿಗೆಂದೇ ಧರ್ಮಸ್ಥಳದಲ್ಲಿ ಅಶೋಕ ನಗರ ದಲಿತ ಕಾಲನಿಯನ್ನು ನಿರ್ಮಿಸಲಾಗಿದೆ. ರಾಜ್ಯಸಭಾ ಸಂಸದರೂ ಆಗಿರುವ ವೀರೇಂದ್ರ ಹೆಗ್ಗಡೆಯವರ ಬೀಡು ಮನೆಯ ಸನಿಹವೇ ಇರುವ ಈ ದಲಿತ ಕಾಲನಿಯ ನಿವಾಸಿಗಳ ಸಂಕಷ್ಟ ಹೇಳತೀರದು. ತಲೆತಲಾಂತರಗಳಿಂದ ಅಶೋಕನಗರದಲ್ಲೇ ವಾಸಿಸುತ್ತಿದ್ದರೂ, ಇನ್ನೂ ಮನೆಯ ಅಡಿಸ್ಥಳವನ್ನು ದಲಿತರ ಹೆಸರಿಗೆ ಹಕ್ಕು ಪತ್ರ ನೀಡಲಾಗಿಲ್ಲ. ಸ್ವಚ್ಛತಾ ಕಾರ್ಮಿಕರು ಕುಸಿದಿರುವ, ತೂತು ಬಿದ್ದಿರುವ ಮನೆಗಳಲ್ಲಿ ಹೀನಾಯ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ಹಾಗಾಗಿ, ಧರ್ಮಸ್ಥಳ ಅಶೋಕನಗರದ 128 ದಲಿತ ಕುಟುಂಬಗಳು, ಮುಂಡ್ರುಪಾಡಿಯ 42 ದಲಿತ ಕುಟುಂಬಗಳು ಮತ್ತು ಗ್ರಾಮದ ಇತರ ದಲಿತ ಕುಟುಂಬಗಳಿಗೆ ತಲಾ ಒಂದು ಎಕ್ರೆ ಸರಕಾರಿ ಭೂಮಿಯನ್ನು ಸರ್ಕಾರ ಕೊಡಿಸಬೇಕು. ದಲಿತರ ಮೀಸಲು ಭೂಮಿಯೂ ಸೇರಿದಂತೆ ನೂರಾರು ಎಕ್ರೆ ಸರಕಾರಿ ಭೂಮಿಯನ್ನು ಟ್ರಸ್ಟ್ ಅತಿಕ್ರಮಿಸಿದ್ದು, ಇದನ್ನು ತೆರವುಗೊಳಿಸಿ ಭೂಮಂಜೂರಾತಿ ಕಾಯ್ದೆ ಪ್ರಕಾರವೇ ದಲಿತರಿಗೆ ಕೊಡಬೇಕು. ಈ ಬಗ್ಗೆ ನಿರಂತರ ಹೋರಾಟ ನಡೆಸುತ್ತಿರುವ ‘ದಲಿತರ ಭೂಹಕ್ಕೊತ್ತಾಯ ಸಮಿತಿ’ಯ ಜೊತೆ ನಾವಿದ್ದೇವೆ.

ಕಾರ್ಮಿಕ ಕಾಯ್ದೆ ಅನುಷ್ಠಾನ: ತಮ್ಮ ಸಂಸ್ಥೆಯಲ್ಲಿ 75 ಸಾವಿರ ನೌಕರರು ಇದ್ದಾರೆ ಎಂದು ನ್ಯಾಯಾಲಯಗಳಲ್ಲಿ ಘೋಷಿಸಿಕೊಂಡಿರುವ ಟ್ರಸ್ಟ್, ಸ್ವಚ್ಛತಾ ಕಾರ್ಯ ಮಾಡುವ ದಲಿತರಿಗೆ ಮಾತ್ರ ಕಾರ್ಮಿಕ ಕಾಯ್ದೆಯ ಪ್ರಕಾರ ಕನಿಷ್ಠ ಸಂಬಳವನ್ನೂ ನೀಡುತ್ತಿಲ್ಲ. ಟ್ರಸ್ಟ್ ನ್ಯಾಯಾಲಯದಲ್ಲಿ ಘೋಷಿಸಿರುವ 75 ಸಾವಿರ ಕಾರ್ಮಿಕರಿಗೆ ಕಾರ್ಮಿಕ ಕಾಯ್ದೆಯಂತೆ ಸಂಬಳ ನೀಡಲಾಗುತ್ತಿದೆಯೇ ಎಂಬುದನ್ನು ಖಾತರಿಪಡಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.

ಭೂಕಬಳಿಕೆ ತನಿಖೆ: ಧರ್ಮಸ್ಥಳ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆದಿರುವ ವ್ಯಾಪಕ ಭೂಕಬಳಿಕೆ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ವಿಶೇಷವಾಗಿ ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಜಮೀನುಗಳನ್ನು ಬಲವಂತವಾಗಿ ಕಬಳಿಸಿರುವ ಆರೋಪಗಳ ಬಗ್ಗೆ ತನಿಖೆ ಆಗಬೇಕು. ದಲಿತರಿಗೆ ಮೀಸಲಾಗಿರುವ ‘ಡಿ.ಸಿ. ಮನ್ನಾ’ (DEPRESSED CLASS RESERVE) ಜಮೀನನ್ನು ಸರ್ಕಾರ ಲಾಭದಾಯಕ ಶಿಕ್ಷಣ ಸಂಸ್ಥೆಗಳಿಗೆ ನೀಡಿದೆ. ಉಜಿರೆ ಗ್ರಾಮದಲ್ಲಿ ವಿವಿಧ ಸರ್ವೆ ನಂಬರ್‌ಗಳಲ್ಲಿ 43.90 ಎಕ್ರೆ ಡಿ.ಸಿ ಮನ್ನಾ ಭೂಮಿಯನ್ನು ಧರ್ಮಸ್ಥಳ ಎಜುಕೇಷನಲ್ ಟ್ರಸ್ಟ್ ಮತ್ತು ಸಿದ್ಧವನ ಗುರುಕುಲಕ್ಕೆ ನೀಡಲಾಗಿದೆ. ಆ ಭೂಮಿಯನ್ನು ತಕ್ಷಣ ದಲಿತ ಸಮುದಾಯಕ್ಕೆ ನೀಡಬೇಕು. ಒಂದು ವೇಳೆ ಅದೇ ಭೂಮಿಯನ್ನು ನೀಡಲು ಅಸಾಧ್ಯವಾದರೆ ಬದಲಿ ಯೋಗ್ಯ ಭೂಮಿಯನ್ನು ಸರ್ಕಾರವು ಸಂಸ್ಥೆಯಿಂದ ವಶಕ್ಕೆ ಪಡೆದು ದಲಿತ ಸಮುದಾಯಕ್ಕೆ ಹಂಚುವ ವ್ಯವಸ್ಥೆ ಮಾಡಬೇಕು.

ಮೈಕ್ರೊ ಫೈನಾನ್ಸ್ ಮತ್ತು ಆರ್ಥಿಕ ಅಪರಾಧಗಳ ತನಿಖೆಗೆ ಆಗ್ರಹ

ಗ್ರಾಮೀಣಾಭಿವೃದ್ದಿ ಯೋಜನೆಯ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಅಪರಾಧ ನಡೆದಿರುವುದು, ಮೈಕ್ರೊ ಫೈನಾನ್ಸ್ ನಡೆಸಿರುವ ಆರೋಪಗಳು ವ್ಯಾಪಕವಾಗಿದೆ. ಸಾಲ ನೀಡಿಕೆ, ವಸೂಲಾತಿ ವಿಧಾನದಲ್ಲಿ ಕಾನೂನು, ನಿಯಮಗಳನ್ನು ಉಲ್ಲಂಘಿಸುವುದು, ತೀರಾ ಅವಮಾನಕಾರಿಯಾಗಿ, ಅಮಾನವೀಯವಾಗಿ ವಸೂಲಾತಿ ನಡೆಸುವ ದೂರುಗಳು ರಾಜ್ಯದ ಹಲವು ಭಾಗಗಳಲ್ಲಿ ಕೇಳಿಬಂದಿವೆ. ವಸೂಲಾತಿಯ ಸಂದರ್ಭದ ಅಪಮಾನ, ಹಿಂಸೆ ಭರಿಸಲಾಗದೆ ಆತ್ಮಹತ್ಯೆಗಳು ಘಟಿಸಿರುವುದು, ಮರ ಮಟ್ಟು ಸಹಿತ ಅವರ ಸ್ವತ್ತುಗಳನ್ನು ಬಲವಂತವಾಗಿ ಸ್ವಾಧೀನಪಡಿಸಿರುವ ಪ್ರಕರಣಗಳು ಹತ್ತಾರು ಸಂಖ್ಯೆಯಲ್ಲಿ ನಡೆದಿದೆ. ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇವು ಗಂಭೀರವಾದ ಆರ್ಥಿಕ ಅಪರಾಧಗಳಾಗಿವೆ. ಗ್ರಾಮೀಣ ಭಾಗದಲ್ಲಿ ಶ್ರಮಿಕ ಜನರ, ಕೂಲಿಕಾರರ, ಸಣ್ಣ ರೈತರು ಸೇರಿದಂತೆ ಜನ ಸಾಮಾನ್ಯರ ನೆಮ್ಮದಿಗೆ ಭಂಗ ತಂದಿದೆ. ಈ ಕುರಿತು ಸರಿಯಾದ ತನಿಖೆ ಅಗತ್ಯ ಇದೆ ಎಂದು ಸಭೆ ಒತ್ತಾಯಿಸಿತು.

ಅಕ್ರಮ ದಫನ ಮತ್ತು ಸಾಕ್ಷ್ಯ ನಾಶದ ಬಗ್ಗೆ ತನಿಖೆ

ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಲ್ಲಿ ನೂರಾರು ಅಸಹಜ ಸಾವುಗಳು, ಆತ್ಮಹತ್ಯೆಗಳು, ಕೊಲೆಗಳು ನಡೆದಿವೆ ಎಂದು ಚರ್ಚೆಗಳು ನಡೆಯುತ್ತಿದ್ದಂತೆ, ಧರ್ಮಸ್ಥಳ ಗ್ರಾಮ ಪಂಚಾಯತ್ ನೀಡಿರುವ ಮಾಹಿತಿ ಹಕ್ಕು ದಾಖಲೆಗಳು ನಮ್ಮ ಆತಂಕವನ್ನು ಇಮ್ಮಡಿಗೊಳಿಸಿದೆ. 15 ವರ್ಷದ ಹೆಣ್ಣು ಮಗುವಿನ ಶವ ದೇವಸ್ಥಾನದ ಸ್ನಾನಘಟ್ಟದಲ್ಲಿ ಪತ್ತೆಯಾದ ದಿನವೇ ಪೋಸ್ಟ್ ಮಾರ್ಟಂ ನಡೆಸಿ ದಫನ ಮಾಡಲು ಗ್ರಾಮ ಪಂಚಾಯತ್‌ಗೆ ಪೊಲೀಸರು ಸೂಚಿಸಿದ್ದಾರೆ. ಮೃತ ಹೆಣ್ಣು ಮಗುವಿನ ಪೊಷಕರ ಪತ್ತೆಗೆ ಪೊಲೀಸರು ಕಾನೂನಿನ ಯಾವ ಕ್ರಮವನ್ನೂ ಕೈಗೊಳ್ಳದೇ, ಕನಿಷ್ಠ ಒಂದೆರಡು ದಿನ ಕಾಯುವ ವ್ಯವಧಾನವೂ ಇಲ್ಲದೇ ಶವ ಪತ್ತೆಯಾದ ದಿನವೇ ತರಾತುರಿಯಲ್ಲಿ ಕಾನೂನು ಮೀರಿ ದಫನ ಮಾಡಿರುವ ದಾಖಲೆ ಹಲವು ಅನುಮಾನಗಳನ್ನೂ, ಅಮಾನವೀಯತೆಯ ಬಗೆಗಿನ ಆಕ್ರೋಶವನ್ನೂ ತರಿಸುತ್ತದೆ. ಇನ್ನೊಂದು ದಾಖಲೆ ಹೇಳುವ ಪ್ರಕಾರ, ಸುಮಾರು 45 ವರ್ಷದ ಮಹಿಳೆಯನ್ನು ಧರ್ಮಸ್ಥಳ ದೇವಸ್ಥಾನದ ಶರಾವತಿ ಲಾಡ್ಜ್‌ನಲ್ಲಿ ಕೊಲೆ ಮಾಡಲಾಗಿದ್ದು, ಪೊಲೀಸರು ಆ ಮಹಿಳೆಯನ್ನು ಅಪರಿಚಿತೆ ಎಂದು ಘೋಷಿಸಿದ್ದಾರೆ. ವಸತಿಗೃಹದಲ್ಲಿ ಪತ್ತೆಯಾದ ಮಹಿಳೆ ಅಪರಿಚಿತೆ ಆಗಲು ಹೇಗೆ ಸಾಧ್ಯ? ಅದಲ್ಲದೇ, ಪತ್ತೆಯಾದ ಬಹುತೇಕ ಎಲ್ಲಾ ಶವಗಳನ್ನು ಹೂಳಲು ಸೂಚಿಸಿರುವ ಪೊಲೀಸರು, ಹೂಳಲೇಬೇಕಾದ ಕೊಲೆಯಾದ ಮಹಿಳೆಯ ಶವವನ್ನು ದಹನ ಮಾಡಲು ಸೂಚಿಸುತ್ತಾರೆ. ಗ್ರಾಮ ಪಂಚಾಯತ್‌ನವರು ಸಹಜವೆಂಬಂತೆ ಹೂತು ಹಾಕಬಹುದು ಎಂಬ ಕಾರಣಕ್ಕಾಗಿ ಪೊಲೀಸರು ದಫನ ಎಂದು ಬರೆದು ಆವರಣದಲ್ಲಿ ಸ್ಪಷ್ಟವಾಗಿ ದಹನ ಎಂದು ಬರೆಯುವ ಮೂಲಕ ಶವದ ಸಾಕ್ಷ್ಯ ನಾಶಮಾಡಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇಂತಹ ಹಲವು ದಾಖಲೆಗಳು ಆರ್‌ಟಿಐ ಮೂಲಕ ಅಧಿಕೃತವಾಗಿ ಲಭ್ಯವಾಗಿದ್ದು, ಎಸ್‌ಐಟಿ ರಚನೆಯ ಸಂಬಂಧ ಹೊರಡಿಸಲಾದ ಆದೇಶದಲ್ಲಿರುವ ನಿಯಮಗಳಂತೆ ಇವೆಲ್ಲವೂ ತನಿಖೆಯಾಗಬೇಕಿದೆ.

ಸಭೆಯ ಕೊನೆಯಲ್ಲಿ, ಸರ್ಕಾರ ಯಾವುದೇ ಪ್ರಭಾವಿಗಳ ಒತ್ತಡಕ್ಕೆ ಮಣಿಯಬಾರದು ಎಂದು ನಿರ್ಣಯಿಸಲಾಯಿತು. ವಿರೋಧ ಪಕ್ಷವಾಗಿರುವ ಬಿಜೆಪಿಯು ಬಹಿರಂಗವಾಗಿ ಎಸ್ಐಟಿ ತನಿಖೆ ಮತ್ತು ಸಾಕ್ಷಿ/ದೂರುದಾರರಿಗೆ ಬೆದರಿಕೆ ಒಡ್ಡುತ್ತಿದ್ದು, ಅದನ್ನು ನಿಲ್ಲಿಸಲು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸಂತ್ರಸ್ತರ ಪರವಾಗಿ ಕೆಲಸ ಮಾಡುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯವಾಗಿದೆ. ಸರ್ಕಾರ ಮಾಡಬೇಕಿರುವ ಕೆಲಸವನ್ನು ಜನಪರ ಹೋರಾಟಗಾರರು ಮಾಡುತ್ತಿದ್ದಾರೆ. ಆದರೆ ಸರ್ಕಾರದ ಕೆಲ ಪ್ರಭಾವಿಗಳು ಮತ್ತು ಪೊಲೀಸರು ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡುವ ಮೂಲಕ ದೂರುದಾರರ, ಸಂತ್ರಸ್ತರ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿದ್ದಾರೆ. ಇವೆಲ್ಲವನ್ನೂ ನಿಯಂತ್ರಿಸಿ, ಎಸ್ಐಟಿ ತನಿಖೆ ಪ್ರಾಮಾಣಿಕ, ಪಾರದರ್ಶಕವಾಗಿ ನಡೆಯುವಂತೆ ಕ್ರಮ ವಹಿಸಬೇಕು. ದೂರುದಾರನ ಹೇಳಿಕೆಯಷ್ಟು ಅಸ್ತಿಪಂಜರ ಸಿಕ್ಕಿಲ್ಲ ಎನ್ನುವ ಕಾರಣಕ್ಕಾಗಿ ಎಸ್ಐಟಿ ತನಿಖೆಯನ್ನು ನಿಧಾನಿಸಕೂಡದು. 20 ವರ್ಷಗಳ ಅಸಹಜ ಸಾವು ಪ್ರಕರಣಗಳನ್ನು ಠಾಣೆ, ಗ್ರಾಮ ಪಂಚಾಯತ್ ದಾಖಲೆಗಳ ಆಧಾರದಲ್ಲಿ ತನಿಖೆಯನ್ನು ತೀವ್ರಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

ಹೀಗಾಗಿ, ಕಳೆದ 20 ವರ್ಷಗಳ ಅತ್ಯಾಚಾರ, ಅಸಹಜ ಸಾವು, ಕೊಲೆ ಪ್ರಕರಣಗಳನ್ನು ಎಸ್ಐಟಿ ರಚನೆಯ ಸಂಬಂಧ ಹೊರಡಿಸಲಾದ ಆದೇಶದಲ್ಲಿ ಇರುವಂತೆಯೇ ಪರಿಪೂರ್ಣವಾದ ತನಿಖೆಗೆ ಒಳಪಡಿಸಬೇಕು. ಪದ್ಮಲತಾ, ವೇದವಲ್ಲಿ, ಮಾವುತ ನಾರಾಯಣ, ಯಮುನ, ಸೌಜನ್ಯ ಕೊಲೆ ಪ್ರಕರಣಗಳು, ಭೂಕಬಳಿಕೆ, ಮೈಕ್ರೊ ಫೈನಾನ್ಸ್ ದೌರ್ಜನ್ಯಗಳು, ದಲಿತರ ಮೀಸಲು ಭೂಮಿ ಕಬಳಿಕೆ, ಆರ್ಥಿಕ ಅಪರಾಧದ ಆರೋಪದ ಪ್ರಕರಣಗಳನ್ನು ಈಗ ರಚಿಸಲಾಗಿರುವ SIT ವಹಿಸಲು ಸಮಸ್ಯೆಗಳಿದ್ದಲ್ಲಿ ಪ್ರತ್ಯೇಕವಾದ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಗೆ ಒಳಪಡಿಸಬೇಕು ಎಂದು ಸಭೆ ಆಗ್ರಹಪಡಿಸಿದೆ.

ಧರ್ಮಸ್ಥಳ ಪ್ರಕರಣ: ತನಿಖೆ ಅಬಾಧಿತವಾಗಿ ಮುಂದುವರೆಯಲಿ ಎಂದು ‘ನಾವೆದ್ದು ನಿಲ್ಲದಿದ್ದರೆ -ಕರ್ನಾಟಕ’ ಆಗ್ರಹ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

ರಾಜ್ಯಸಭಾ ಚುನಾವಣೆಗೆ ಮಧ್ಯಪ್ರದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದು ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಬುಧವಾರ (ಜೂ. 10)...

ಒಳಮೀಸಲಾತಿ ನಾಡು ಕಂಡ ಸುದೀರ್ಘ ಹೋರಾಟದ ಕಥೆ

ಇದು ಬೆವರು ನಿಟ್ಟುಸಿರುಗಳ ಚಳವಳಿ. ತಮ್ಮ ಅನ್ನದ ಬಟ್ಟಲಿಗಾಗಿ ದಶಕಗಳ ಕಾಲ ಹಸಿವು, ಬಾಯಾರಿಕೆ, ನಿದ್ರೆ ಎಲ್ಲವನ್ನೂ ಬಿಟ್ಟು ನಡೆಸಿದ ಅಭೂತಪೂರ್ವ ಚಳವಳಿ. ರಾಜಕೀಯ ಚಕ್ರವ್ಯೂಹಗಳನ್ನು ಬೇಧಿಸಿ, ಸಾಂವಿಧಾನಿಕ ಹಕ್ಕನ್ನು ತಮ್ಮದಾಗಿಸಿಕೊಂಡ ಚಳವಳಿ....

‘ಗೋಮಾಂಸ’ ತಂದ ನೆಪ: ಅಸ್ಸಾಂನಲ್ಲಿ ಐವರು ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಕ್ರಮ; ಸುಳ್ಳು ಪ್ರಕರಣದಡಿ ಒಂಟಿ ತಾಯಿ ಮತ್ತು ಅಪ್ರಾಪ್ತ ಮಗನ ಬಂಧನ

ಧಾರ್ಮಿಕ ಭಾವನೆಗೆ ಧಕ್ಕೆ ಎಂಬ ಹೆಸರಿನಲ್ಲಿ ಶಾಲಾ ಆವರಣಗಳೂ ಸಹ ಕೋಮು ರಾಜಕಾರಣದ ಪ್ರಯೋಗಶಾಲೆಗಳಾಗುತ್ತಿರುವುದಕ್ಕೆ ಅಸ್ಸಾಂನಿಂದ ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ. ಅಸ್ಸಾಂನ ಗೋಲ್‌ಪಾರ ಜಿಲ್ಲೆಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯೊಂದರಲ್ಲಿ ಮುಸ್ಲಿಂ...