ದಿವಾಳಿತನ ಪ್ರಕರಣದಲ್ಲಿ ಅನುಕೂಲಕರ ಆದೇಶವನ್ನು ಪಡೆಯಲು ಉನ್ನತ ನ್ಯಾಯಾಂಗದ ಸದಸ್ಯರೊಬ್ಬರು ಚೆನ್ನೈನಲ್ಲಿರುವ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (ಎನ್‌ಸಿಎಲ್‌ಎಟಿ) ನ್ಯಾಯಮೂರ್ತಿ ಶರದ್ ಕುಮಾರ್ ಶರ್ಮಾ ಅವರನ್ನು ಸಂಪರ್ಕಿಸಿದ್ದಾರೆ ಎಂಬ ಆರೋಪದ ಕುರಿತು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ ಎಂದು ಬಾರ್ & ಬೆಂಚ್ ಬುಧವಾರ (ಆ.27) ವರದಿ ಮಾಡಿದೆ.
ತನಿಖೆಯನ್ನು ಸುಪ್ರೀಂ ಕೋರ್ಟ್‌ನ ಪ್ರಧಾನ ಕಾರ್ಯದರ್ಶಿ ನಡೆಸಲಿದ್ದು, ಆ ಕರೆಯನ್ನು ನಿಜವಾಗಿಯೂ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮಾಡಿದ್ದಾರೆಯೇ. ಮಾಡಿದ್ದರೆ, ಕರೆ ಮಾಡಿದವರು ಯಾರು ಎಂದು ಪರಿಶೀಲನೆ ನಡೆಸಲಿದ್ದಾರೆ ಎಂದು ವರದಿ ಹೇಳಿದೆ.
ಈ ದೇಶದ ಉನ್ನತ ನ್ಯಾಯಾಂಗದ ಅತ್ಯಂತ ಗೌರವಾನ್ವಿತ ಸದಸ್ಯರಲ್ಲಿ ಒಬ್ಬರು” ನಮ್ಮ ತೀರ್ಪಿನ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ನ್ಯಾ. ಶರ್ಮಾ ಅವರು ಈ ತಿಂಗಳ ಆರಂಭದಲ್ಲಿ ಪ್ರಕರಣದಿಂದ ಹಿಂದೆ ಸರಿದಿದ್ದರು.
“ನಮ್ಮಲ್ಲಿ ಒಬ್ಬರಾದ (ನ್ಯಾಯಾಂಗ) ಸದಸ್ಯರನ್ನು, ಈ ದೇಶದ ಉನ್ನತ ನ್ಯಾಯಾಂಗದ ಅತ್ಯಂತ ಗೌರವಾನ್ವಿತ ಸದಸ್ಯರಲ್ಲಿ ಒಬ್ಬರು, ನಿರ್ದಿಷ್ಟ ಪಕ್ಷದ ಪರವಾಗಿ ಆದೇಶ ನೀಡಲು ಕೋರಿ ಸಂಪರ್ಕಿಸಿರುವುದು ತಿಳಿದು ನ್ಯಾಯಮಂಡಳಿಗೆ ಬೇಸರವಾಗಿದೆ” ಎಂದು ಆಗಸ್ಟ್ 13ರಂದು ನ್ಯಾ. ಶರ್ಮಾ ಹೇಳಿದ್ದರು. ಆದ್ದರಿಂದ, ನಾನು ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುತ್ತೇನೆ ಎಂದಿದ್ದರು.
ನ್ಯಾ. ಶರ್ಮಾ ಅವರು ವಿಚಾರಣೆಯಿಂದ ಹಿಂದೆ ಸರಿದ ಪ್ರಕರಣ ಹೈದರಾಬಾದ್ ಮೂಲದ ರಿಯಲ್ ಎಸ್ಟೇಟ್ ಕಂಪನಿಯಾದ ಕೆಎಲ್‌ಎಸ್‌ಆರ್ ಇನ್ಫ್ರಾಟೆಕ್ ಲಿಮಿಟೆಡ್ ವಿರುದ್ಧದ ದಿವಾಳಿತನ ಪ್ರಕ್ರಿಯೆಗೆ ಸಂಬಂಧಿಸಿದೆ.
ಕಂಪನಿಯು 2023ರಲ್ಲಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ(ಎನ್‌ಸಿಎಲ್‌ಟಿ) ಹೈದರಾಬಾದ್ ಪೀಠದ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿತ್ತು. ಹೈದರಾಬಾದ್ ಪೀಠದ ಆದೇಶ ಸಾಲದಾತ ಎಎಸ್ ಮೆಟ್ ಕಾರ್ಪ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಕೆಎಲ್‌ಎಸ್‌ಆರ್ ಇನ್ಫ್ರಾಟೆಕ್ ಲಿಮಿಟೆಡ್ ವಿರುದ್ದ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅವಕಾಶ ನೀಡಿತ್ತು.
ಈ ಅರ್ಜಿಯನ್ನು ಚೆನ್ನೈನಲ್ಲಿರುವ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯಲ್ಲಿ (ಎನ್‌ಸಿಎಲ್‌ಎಟಿ) ಇಬ್ಬರು ಸದಸ್ಯರ ಕೋರಂ ಮುಂದೆ ಪಟ್ಟಿ ಮಾಡಲಾಗಿತ್ತು. ಈ ನಡುವೆ ನ್ಯಾ. ಶರ್ಮಾ ಅವರು ವಿಚಾರಣೆಯಿಂದ ಹಿಂದೆ ಸರಿದ ಕಾರಣ, ಹೊಸ ಕೋರಂ ಸ್ಥಾಪನೆಗಾಗಿ ಪ್ರಕರಣವನ್ನು ನ್ಯಾಯಮಂಡಳಿಯ ಅಧ್ಯಕ್ಷರ ಮುಂದೆ ಇಡುವ ಸಾಧ್ಯತೆ ಇದೆ.
ತೀರ್ಪಿನ ಮೇಲೆ ಪ್ರಭಾವ ಬೀರುವ ಪ್ರಯತ್ನಗಳನ್ನು ಉಲ್ಲೇಖಿಸಿ ನ್ಯಾ. ಶರ್ಮಾ ಅವರು ಇತರ ಪ್ರಕರಣಗಳ ವಿಚಾರಣೆಯಿಂದಲೂ ಕೂಡ ಹಿಂದೆ ಸರಿದಿದ್ದಾರೆ ಎಂದು ವರದಿಗಳು ಹೇಳಿವೆ.
ಜೂನ್ 11ರಂದು, ಶ್ರೀ ರಾಮಲಿಂಗ ಮಿಲ್ಸ್ ಮತ್ತು ಸಂಬಂಧಿತ ಕಂಪನಿಗಳಿಗೆ ಸಂಬಂಧಿಸಿದ ಮೇಲ್ಮನವಿಗಳನ್ನು ವಿಚಾರಣೆ ನಡೆಸುತ್ತಿದ್ದಾಗ, ಪ್ರತಿವಾದಿಯೊಬ್ಬರು ತಮ್ಮ ಪರವಾಗಿ ತೀರ್ಪು ಪಡೆಯಲು ಪ್ರಯತ್ನಿಸಿದ್ದಾರೆ ಎಂದು ನ್ಯಾ. ಶರ್ಮಾ ಹೇಳಿಕೊಂಡಿದ್ದರು ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ನವೆಂಬರ್ 2024ರಲ್ಲಿ, ಜೆಪ್ಪಿಯಾರ್ ಸಿಮೆಂಟ್ಸ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಶರ್ಮಾ ಅವರು, ಪ್ರಕರಣದ ಆದೇಶವನ್ನು ಕಾಯ್ದಿರಿಸುವಂತೆ ಕೋರಿ ನನ್ನನ್ನು ಸಂಪರ್ಕಿಸಲಾಗಿದೆ ಎಂದು ಹೇಳಿದ್ದರು ಮತ್ತು ಪ್ರಕರಣದಿಂದ ಹಿಂದೆ ಸರಿದಿದ್ದರು.
ನ್ಯಾಯಮೂರ್ತಿಗಳಾದ ಅಲೋಕ್ ಆರಾಧೆ, ವಿಪುಲ್ ಪಂಚೋಲಿ ಸುಪ್ರೀಂ ಕೋರ್ಟ್ ಪದೋನ್ನತಿಗೆ ಕೇಂದ್ರ ಅನುಮೋದನೆ


