ಸ್ಥಳೀಯ ಸಂಸ್ಥೆಗಳಲ್ಲಿ ಜಾತಿ ಆಧಾರಿತ ಮೀಸಲಾತಿ ಮೇಲಿನ ಶೇಕಡ 50 ಮಿತಿಯನ್ನು ತೆಗೆದುಹಾಕಲು ತೆಲಂಗಾಣ ಸರ್ಕಾರ ಭಾನುವಾರ (ಆ.31) ಎರಡು ಮಸೂದೆಗಳನ್ನು ಅಂಗೀಕರಿಸಿದೆ. ಈ ಕ್ರಮವು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಶೇ.42ರಷ್ಟು ಮೀಸಲಾತಿಗೆ ದಾರಿ ಮಾಡಿಕೊಟ್ಟಿದೆ ಎಂದು ವರದಿಗಳು ಹೇಳಿವೆ.
ವಿರೋಧ ಪಕ್ಷಗಳಾದ ಬಿಆರ್‌ಎಸ್ ಮತ್ತು ಬಿಜೆಪಿಯ ಗದ್ದಲದ ನಡುವೆಯೇ, ‘ತೆಲಂಗಾಣ ಪುರಸಭೆಗಳ ಮೂರನೇ ತಿದ್ದುಪಡಿ ಮಸೂದೆ, 2025’ ಮತ್ತು ‘ತೆಲಂಗಾಣ ಪಂಚಾಯತ್ ರಾಜ್ ಮೂರನೇ ತಿದ್ದುಪಡಿ ಮಸೂದೆ, 2025’ ಅನ್ನು ವಿಧಾನಸಭೆ ಅಂಗೀಕರಿಸಿದೆ.
ಇದು 1992ರಲ್ಲಿ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮೀಸಲಾತಿ ಮೇಲಿನ ಶೇಕಡ 50 ಮಿತಿಯನ್ನು ತೆಗೆದು ಹಾಕಲಿದೆ. ತೆಲಂಗಾಣದಲ್ಲಿ ಪರಿಶಿಷ್ಟ ಜಾತಿಗಳು (ಎಸ್‌ಸಿ) ಪರಿಶಿಷ್ಟ ಪಂಗಡಗಳು (ಎಸ್‌ಟಿ) ಮತ್ತು ಹಿಂದುಳಿದ ವರ್ಗಗಳ (ಬಿಸಿ) ಒಟ್ಟು ಮೀಸಲಾತಿಯನ್ನು ಶೇ. 67ಕ್ಕೆ ಏರಿಸಲಿದೆ.
ಶಿಕ್ಷಣ, ಸರ್ಕಾರಿ ಉದ್ಯೋಗಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಹೆಚ್ಚಿಸುವ ಕುರಿತು ಮಾರ್ಚ್‌ನಲ್ಲಿ ಅಂಗೀಕರಿಸಲಾದ ಇತರ ಎರಡು ಮಸೂದೆಗಳು ರಾಷ್ಟ್ರಪತಿಯ ಒಪ್ಪಿಗೆಗಾಗಿ ಕಾಯುತ್ತಿರುವ ಸಮಯದಲ್ಲಿ ಭಾನುವಾರದ ಎರಡು ಮಸೂದೆಗಳನ್ನು ಅಂಗೀಕರಿಸಲಾಗಿದೆ.
ಸೆಪ್ಟೆಂಬರ್ 30ರ ಮೊದಲು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕೆಂದು ತೆಲಂಗಾಣ ಹೈಕೋರ್ಟ್ ನಿರ್ದೇಶನ ನೀಡಿದೆ. ಹಾಗಾಗಿ, ಹಿಂದುಳಿದ ವರ್ಗಗಳಿಗೆ ಶೇ. 42ರಷ್ಟು ಮೀಸಲಾತಿ ಕಲ್ಪಿಸಿದ ನಂತರವೇ ಚುನಾವಣೆಗೆ ಹೋಗಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ರೇವಂತ್ ರೆಡ್ಡಿ ಹೇಳಿದ್ದಾರೆ.
ಹಿಂದುಳಿದ ವರ್ಗಗಳ ಮೀಸಲಾತಿಯನ್ನು ‘ಕಡಿತಗೊಳಿಸಿ’ ಒಟ್ಟು ಮೀಸಲಾತಿಯನ್ನು ಶೇ. 50ರ ಮಿತಿಯೊಳಗೆ ತಂದಿದ್ದಕ್ಕಾಗಿ ಹಿಂದಿನ ಬಿಆರ್‌ಎಸ್ ಸರ್ಕಾರವನ್ನು ರೆಡ್ಡಿ ಟೀಕಿಸಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ರಾಷ್ಟ್ರಪತಿಗಳ ಮುಂದೆ ಬಾಕಿ ಇರುವ ಇತರ ಎರಡು ಹಿಂದುಳಿದ ವರ್ಗಗಳ ಮೀಸಲಾತಿ ಮಸೂದೆಗಳನ್ನು ಕೇಂದ್ರ ಸರ್ಕಾರ ಅನುಮೋದಿಸಬೇಕೆಂದು ಒತ್ತಾಯಿಸಿ ಆಗಸ್ಟ್‌ನಲ್ಲಿ ನವದೆಹಲಿಯಲ್ಲಿ ರಾಜ್ಯ ಸರ್ಕಾರ ನಡೆಸಿದ ಧರಣಿ ಪ್ರತಿಭಟನೆಯನ್ನು ಬೆಂಬಲಿಸದ ವಿರೋಧ ಪಕ್ಷವನ್ನು ಅವರು ಟೀಕಿಸಿದ್ದಾರೆ.
ಮತ್ತೊಂದೆಡೆ, ಹಿಂದುಳಿದ ವರ್ಗಗಳ ಮೀಸಲಾತಿಯ ವಿಚಾರದಲ್ಲಿ ರಾಜ್ಯ ಸರ್ಕಾರ ಪ್ರಾಮಾಣಿಕವಾಗಿಲ್ಲ ಎಂದು ಬಿಆರ್‌ಎಸ್‌ನ ಗಂಗುಲ ಕಮಲಾಕರ್ ಆರೋಪಿಸಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಹೇಳಿದೆ.
ಮಾರ್ಚ್‌ನಲ್ಲಿ ಅಂಗೀಕರಿಸಲಾದ ಎರಡು ಮಸೂದೆಗಳಿಗೆ ರಾಷ್ಟ್ರಪತಿಗಳ ಅನುಮೋದನೆ ನೀಡುವಂತೆ ಒತ್ತಾಯಿಸಲು ರಾಜ್ಯ ಸರ್ಕಾರವು ನವದೆಹಲಿಗೆ ಸರ್ವಪಕ್ಷ ನಿಯೋಗವನ್ನು ಏಕೆ ಕರೆದೊಯ್ಯಲಿಲ್ಲ ಎಂದು ಕಮಲಾಕರ್ ಕೇಳಿದ್ದಾರೆ.
ಫೆಬ್ರವರಿಯಲ್ಲಿ ತೆಲಂಗಾಣ ಸರ್ಕಾರ ಪ್ರಕಟಿಸಿದ ಜಾತಿ ಸಮೀಕ್ಷೆಯ ಪ್ರಕಾರ, ರಾಜ್ಯದ ಜನಸಂಖ್ಯೆಯಲ್ಲಿ ಹಿಂದುಳಿದ ವರ್ಗಗಳು ಶೇ. 56.3ರಷ್ಟಿದ್ದಾರೆ. ಇದರಲ್ಲಿ ಮುಸ್ಲಿಂ ಜಾತಿ ಗುಂಪುಗಳು ಸೇರಿವೆ. ಹಿಂದುಳಿದ ವರ್ಗಗಳ ಒಟ್ಟು ಜನಸಂಖ್ಯೆ ಸುಮಾರು 1.9 ಕೋಟಿ ಎಂದು ಹೇಳಲಾಗ್ತಿದೆ.
ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ನಡೆಸಿದ ಮನೆ-ಮನೆ ಸಮೀಕ್ಷೆಯ ಪ್ರಕಾರ, ಪರಿಶಿಷ್ಟ ಜಾತಿಗಳ ಜನಸಂಖ್ಯೆ ಶೇ. 17.4 ಅಥವಾ 61.8 ಲಕ್ಷದಷ್ಟಿದ್ದರೆ, ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಶೇ. 10.4 ಅಥವಾ 37 ಲಕ್ಷದಷ್ಟಿದ್ದಾರೆ. ಇತರ ಜಾತಿಗಳ ಜನಸಂಖ್ಯೆ ಶೇ. 15.7 ರಷ್ಟಿವೆ.
ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರು ಸುಮಾರು 12.5% ಅಥವಾ 44.5 ಲಕ್ಷ ಇದ್ದಾರೆ. ಇದರಲ್ಲಿ ಹಿಂದುಳಿದ ವರ್ಗಗಳ ಮುಸ್ಲಿಮರು 10% ಅಥವಾ 35.7 ಲಕ್ಷ ಜನರಿದ್ದರೆ, ಇತರ ವರ್ಗಗಳ ಮುಸ್ಲಿಮರು 2.4% ಅಥವಾ 8.8 ಲಕ್ಷ ಜನರಿದ್ದಾರೆ.
ಫೆಬ್ರವರಿ 2024ರಲ್ಲಿ, ಜಾತಿ ಸಮೀಕ್ಷೆಯ ಕುರಿತು ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿತ್ತು. ನಂತರ ರಾಜ್ಯ ಯೋಜನಾ ಇಲಾಖೆಯು ಅದನ್ನು ಕೈಗೆತ್ತಿಕೊಂಡಿತ್ತು.
2023ರ ವಿಧಾನಸಭಾ ಚುನಾವಣೆಗೆ ಮುನ್ನ ತೆಲಂಗಾಣದಲ್ಲಿ ಕಾಂಗ್ರೆಸ್ ನೀಡಿದ ಭರವಸೆಗಳಲ್ಲಿ ಜಾತಿ ಸಮೀಕ್ಷೆಯೂ ಒಂದಾಗಿತ್ತು. ಬಿಆರ್‌ಎಸ್ ಸೋಲಿಸುವ ಮೂಲಕ ಪಕ್ಷ ರಾಜ್ಯದಲ್ಲಿ ಅಧಿಕಾರ ಹಿಡಿದಿದೆ.
ಜಾತಿ ಸಮೀಕ್ಷೆಯ ವರದಿ ಬಿಡುಗಡೆಯೊಂದಿಗೆ, ಬಿಹಾರ ಮತ್ತು ಆಂಧ್ರ ಪ್ರದೇಶದ ನಂತರ ತೆಲಂಗಾಣ ಇಂತಹ ಸಮೀಕ್ಷೆಯನ್ನು ನಡೆಸಿದ ಮೂರನೇ ರಾಜ್ಯ ಎನಿಸಿಕೊಂಡಿದೆ.


