ಬಿಹಾರದಂತೆ ದೇಶದಾದ್ಯಂತ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸಲು ಚುನಾವಣಾ ಆಯೋಗ ಮುಂದಾಗಿದೆ. ಈ ಕುರಿತ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆ ಇದೆ. ಒಟ್ಟಾರೆ, ಈ ವರ್ಷಾಂತ್ಯದ ಮೊದಲು ಮತದಾರರ ಪಟ್ಟಿಯ ಪರಿಷ್ಕರಣೆ ನಡೆಯಬಹುದು ಎಂದು ವರದಿಗಳು ಹೇಳಿವೆ.
ಬುಧವಾರ ನವದೆಹಲಿಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳ (ಸಿಇಒ) ಸುದೀರ್ಘ ಸಭೆ ನಡೆದಿದೆ. ಈ ಸಭೆಯಲ್ಲಿ ಮುಂದಿನ ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯಲಿರುವ ಹಿನ್ನೆಲೆ, 2025ರ ಅಂತ್ಯದೊಳಗೆ ಎಸ್‌ಐಆರ್ ನಡೆಸಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಸಭೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಮತ್ತು ಅನರ್ಹರು ಪಟ್ಟಿಯಲ್ಲಿ ಸೇರದಂತೆ ಎಚ್ಚರಿಕೆ ವಹಿಸಲು ದಾಖಲೆಗಳ ಸೂಕ್ತ ಪರಿಶೀಲನೆಯ ಕುರಿತು ಸಿಇಒಗಳು ಪ್ರಸ್ತಾಪಿಸಿದ್ದಾರೆ. ಅರ್ಹ ಮತದಾರರಿಗೆ ಸಲ್ಲಿಸಲು ಸುಲಭವಾಗುವಂತೆ ಚುನಾವಣಾ ಹೇಗೆ ಮತ್ತು ಯಾವೆಲ್ಲ ದಾಖಲೆಗಳನ್ನು ಕೇಳಬಹುದು ಎಂದು ಚರ್ಚಿಸಿದ್ದಾರೆ ಎನ್ನಲಾಗಿದೆ.
ಬಿಹಾರದಲ್ಲಿ 11 ದಾಖಲೆಗಳನ್ನು ಮತದಾರರ ಗುರುತಿನ ಪುರಾವೆಯಾಗಿ ಚುನಾವಣಾ ಆಯೋಗ ಪರಿಗಣಿಸಿತ್ತು. ಮತದಾರರು ಕಾನೂನು ಸಮರ ನಡೆಸಿದ ಬಳಿಕ, ಆಧಾರ್ ಕಾರ್ಡ್‌ನ್ನೂ ದಾಖಲೆಯಾಗಿ ಪರಿಗಣಿಸಲು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಅದರಂತೆ 12ನೇ ದಾಖಲೆಯಾಗಿ ಆಧಾರ್ ಕಾರ್ಡ್ ಅನ್ನು ಚುನಾವಣಾ ಆಯೋಗ ಪರಿಗಣಿಸಿದೆ. ಈ ಬೆಳವಣಿಗೆಯೂ ಮುಂದೆ ದೇಶದಾದ್ಯಂತ ಎಸ್‌ಐಆರ್ ನಡೆಸುವಾಗ ದಾಖಲೆಗಳನ್ನು ಸಲ್ಲಿಸುವ ವಿಚಾರದಲ್ಲಿ ಮಹತ್ವದ್ದಾಗಿದೆ.
ಕಳೆದ ಮತದಾರರ ಪಟ್ಟಿಯ ಪರಿಷ್ಕರಣೆಯ ನಂತರ ಪ್ರಕಟವಾದ ತಮ್ಮ ರಾಜ್ಯಗಳ ಮತದಾರರ ಪಟ್ಟಿಯನ್ನು ಸಿದ್ಧವಾಗಿಟ್ಟುಕೊಳ್ಳಲು ಸಿಇಒಗಳಿಗೆ ತಿಳಿಸಲಾಗಿದೆ. ಕೆಲವು ರಾಜ್ಯಗಳ ಇಸಿಒಗಳು ಈಗಾಗಲೇ ಕೊನೆಯ ಎಸ್‌ಐಆರ್ ನಂತರ ಪ್ರಕಟವಾದ ಮತದಾರರ ಪಟ್ಟಿಯನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ಹಾಕಿದ್ದಾರೆ.
ಬಿಹಾರದ ನಂತರ, ಇಡೀ ದೇಶದಲ್ಲಿ ಎಸ್‌ಐಆರ್ ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗ ಈ ಹಿಂದೆಯೇ ಹೇಳಿತ್ತು.
2026ರಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.
ಇತರ ಸಿಇಒಗಳು ತಮ್ಮ ಅನುಭವಗಳಿಂದ ಕಲಿಯಲು ಸಾಧ್ಯವಾಗುವಂತೆ ಬಿಹಾರದ ಸಿಇಒ ಅವರು ಅಳವಡಿಸಿಕೊಂಡ ತಂತ್ರಗಳು, ನಿರ್ಬಂಧಗಳು ಮತ್ತು ಉತ್ತಮ ಅಭ್ಯಾಸಗಳ ಕುರಿತು ಪ್ರಸ್ತುತಿಯನ್ನು ಮಾಡಿದ್ದಾರೆ ಎಂದು ಚುನಾವಣಾ ಆಯೋಗವು ಹೇಳಿಕೆಯಲ್ಲಿ ತಿಳಿಸಿದೆ.
ಕೊನೆಯ ಪೂರ್ಣಗೊಂಡ ಎಸ್‌ಐಆರ್ ಪ್ರಕಾರ ಮತದಾರರ ಸಂಖ್ಯೆ, ಕೊನೆಯ ಎಸ್‌ಐಆರ್‌ನ ಅರ್ಹತಾ ದಿನಾಂಕ ಮತ್ತು ತಮ್ಮ ರಾಜ್ಯದಲ್ಲಿನ ಮತದಾರರ ಪಟ್ಟಿಯ ಕುರಿತು ಸಿಇಒಗಳು ವಿವರವಾದ ಪ್ರಸ್ತುತಿಗಳನ್ನು ನೀಡಿದ್ದಾರೆ.
ಹಿಂದಿನ ಎಸ್‌ಐಆರ್ ನಂತರ ಡಿಜಿಟಲೀಕರಣ ಮತ್ತು ಮತದಾರರ ಪಟ್ಟಿಯನ್ನು ಅಪ್‌ಲೋಡ್ ಮಾಡುವ ಸ್ಥಿತಿಯನ್ನು ಸಿಇಒಗಳು ರಾಜ್ಯ ಸಿಇಒ ವೆಬ್‌ಸೈಟ್‌ನಲ್ಲಿ ಪ್ರಸ್ತುತಪಡಿಸಿದ್ದಾರೆ.
ತಮ್ಮ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿನ ಕೊನೆಯ ಎಸ್‌ಐಆರ್ ಪ್ರಕಾರ ಮತದಾರರೊಂದಿಗೆ ಪ್ರಸ್ತುತ ಮತದಾರರ ಮ್ಯಾಪಿಂಗ್ ಸ್ಥಿತಿಯನ್ನು ಸಹ ಅವರು ನೀಡಿದ್ದಾರೆ.
ಯಾವುದೇ ಮತಗಟ್ಟೆಯು 1,200ಕ್ಕಿಂತ ಹೆಚ್ಚು ಮತದಾರರನ್ನು ಹೊಂದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಆಯೋಗದ ಉಪಕ್ರಮದ ಏಕರೂಪದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಮತ್ತು ಮತದಾನ ಕೇಂದ್ರಗಳ ತರ್ಕಬದ್ಧಗೊಳಿಸುವಿಕೆಯ ಸ್ಥಿತಿಯನ್ನು ಸಹ ಪರಿಶೀಲಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಮತದಾರರ ಪಟ್ಟಿಯ ತೀವ್ರವಾದ ಪರಿಷ್ಕರಣೆಯ ಪ್ರಾಥಮಿಕ ಉದ್ದೇಶವೆಂದರೆ ವಿದೇಶಿ ಅಕ್ರಮ ವಲಸಿಗರನ್ನು ಅವರ ಜನ್ಮಸ್ಥಳವನ್ನು ಪರಿಶೀಲಿಸುವ ಮೂಲಕ ಹೊರಹಾಕುವುದು.
ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಸೇರಿದಂತೆ ಅಕ್ರಮ ವಿದೇಶಿ ವಲಸಿಗರ ಮೇಲೆ ವಿವಿಧ ರಾಜ್ಯಗಳಲ್ಲಿ ಕಠಿಣ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಈ ಕ್ರಮವು ಮಹತ್ವದ್ದಾಗಿದೆ.
ಬಿಹಾರದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಹಲವು ಗೊಂದಲ, ಆರೋಪಗಳಿಗೆ ಕಾರಣವಾಗಿದೆ. ಚುನಾವಣಾ ಆಯೋಗ ಎಸ್‌ಐಆರ್ ಬಳಿಕ ಸುಮಾರು 65 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿದೆ. ಈ ಜನರು ಸಾವನ್ನಪ್ಪಿರಬಹುದು ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡಿರಬಹುದು, ಇಲ್ಲಾ ಅವರ ಹೆಸರು ಒಂದಕ್ಕಿಂತ ಹೆಚ್ಚು ಬಾರಿ ನೋಂದಾವಣೆಗೊಂಡಿರಬಹುದು ಎಂದು ಚುನಾವಣಾ ಆಯೋಗ ಹೇಳಿದೆ.
ಆದರೆ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಚುನಾವಣಾ ಆಯೋಗದ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ. ಲಕ್ಷಾಂತರ ಮತದಾರರನ್ನು ಸುಖಾ ಸುಮ್ಮನೆ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಆರೋಪಿಸಿದೆ. ಈ ಆರೋಪಕ್ಕೆ ಪುಷ್ಠಿ ನೀಡುವಂತೆ ಚುನಾವಣಾ ಆಯೋಗ ಸತ್ತೋಗಿದ್ದಾರೆ ಎನ್ನಲಾದ ವ್ಯಕ್ತಿಗಳ ಜೊತೆ ರಾಹುಲ್ ಗಾಂಧಿ ಟೀಕುಡಿದು ಗಮನಸೆಳೆದಿದ್ದಾರೆ.
ಮಸೂದೆಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ‘ವೀಟೋ ಅಧಿಕಾರ’ ಇಲ್ಲ: ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ, ಕೇರಳ ವಾದ


