ಸ್ಟಾಂಡ್-ಅಪ್ ಕಾಮಿಡಿಯನ್ ಮುನವ್ವರ್ ಫಾರೂಕಿ ಕೊಲೆಗೆ ಸಂಚು ರೂಪಿಸಿದ್ದ ಗೋಲ್ಡಿ ಬ್ರಾರ್ ಗುಂಪಿನ ಇಬ್ಬರು ಸದಸ್ಯರನ್ನು ಗುರುವಾರ (ಅ.2) ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನವದೆಹಲಿಯ ಜೈತ್ಪುರ-ಕಾಳಿಂದಿ ಕುಂಜ್ ರಸ್ತೆಯಲ್ಲಿ ನಡೆದ ಗುಂಡಿನ ಚಕಮಕಿಯ ಬಳಿಕ, ಹರಿಯಾಣದ ಪಾಣಿಪತ್ ನಿವಾಸಿ ರಾಹುಲ್ ಮತ್ತು ಭಿವಾನಿಯ ಸಾಹಿಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಅವರ ಕಾಲುಗಳಿಗೆ ಗುಂಡಿಕ್ಕಿ ವಶಕ್ಕೆ ಪಡೆದಿದ್ದಾರೆ. ನಂತರ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಸಂಚರಿಸುತ್ತಿದ್ದ ಬೈಕ್ ಮತ್ತು ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ.
ಅಧಿಕಾರಿಗಳ ಪ್ರಕಾರ, ಇಬ್ಬರೂ ಕೆನಡಾ ಮೂಲದ ಗೋಲ್ಡಿ ಬ್ರಾರ್ ಮತ್ತು ತಲೆಮರೆಸಿಕೊಂಡಿರುವ ಕ್ರಿಮಿನಲ್ ವೀರೇಂದ್ರ ಚರಣ್ ಜೊತೆ ಸಂಬಂಧ ಹೊಂದಿರುವ ವಿದೇಶಿ ಮೂಲದ ಗ್ಯಾಂಗ್‌ಸ್ಟರ್ ರೋಹಿತ್ ಗೋದಾರನಿಂದ ಸೂಚನೆಗಳನ್ನು ಪಡೆಯುತ್ತಿದ್ದರು.
ದೆಹಲಿ-ಎನ್‌ಸಿಆರ್‌ನಲ್ಲಿ ಉದ್ದೇಶಿತ ಹತ್ಯೆಗಳನ್ನು ನಡೆಸಲು ಬಂಧಿತ ಇಬ್ಬರನ್ನು ಸಜ್ಜುಗೊಳಿಸಲಾಗಿತ್ತು. ಫಾರೂಕಿಯ ಚಲನವಲನಗಳನ್ನು ಪತ್ತೆಹಚ್ಚಲು ಮುಂಬೈ ಮತ್ತು ಬೆಂಗಳೂರಿನಲ್ಲಿ ಕಣ್ಣಿಡಲಾಗಿತ್ತು.
“ಸೆಲೆಬ್ರಿಟಿ ವಲಯದಲ್ಲಿ ತಮ್ಮ ಪ್ರಭಾವವನ್ನು ವಿಸ್ತರಿಸಲು ಬಂಧಿತರ ಗ್ಯಾಂಗ್ ಪ್ರಯತ್ನಿಸುತ್ತಿದೆ. ಮುನವ್ವರ್ ಫಾರೂಕಿ ಅವರ ದೀರ್ಘಕಾಲದ ಗುರಿಗಳಲ್ಲಿ ಒಬ್ಬರು. ನಟಿ ದಿಶಾ ಪಟಾನಿ ಅವರ ಬರೇಲಿ ನಿವಾಸದ ಹೊರಗೆ ಇತ್ತೀಚೆಗೆ ನಡೆದ ಗುಂಡಿನ ದಾಳಿ ಸೇರಿದಂತೆ ಇತರ ಸೆಲೆಬ್ರಿಟಿಗಳ ಮೇಲೆ ದಾಳಿ ಮಾಡಲು ಈ ಗ್ಯಾಂಗ್ ಈ ಹಿಂದೆ ಸಂಚು ರೂಪಿಸಿತ್ತು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
2024ರ ಡಿಸೆಂಬರ್‌ನಲ್ಲಿ ಹರಿಯಾಣದ ಯಮುನಾನಗರದಲ್ಲಿ ನಡೆದ ಸಂಚಲನ ಮೂಡಿಸಿದ್ದ ತ್ರಿವಳಿ ಕೊಲೆ ಪ್ರಕರಣದಲ್ಲಿ ಇಂದು ಗುಂಡೇಟಿನಿಂದ ಗಾಯಗೊಂಡಿರುವ ರಾಹುಲ್ ಬೇಕಾಗಿದ್ದ. ಪ್ರಾಥಮಿಕ ವಿಚಾರಣೆಯಲ್ಲಿ ಆ ಕೊಲೆ ಅಪರಾಧದಲ್ಲಿ ಭಾಗಿಯಾಗಿರುವ ಗುರುತಿಸಲಾಗದ ದಾಳಿಕೋರಲ್ಲಿ ಆತನೂ ಒಬ್ಬನೆಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ರಾಜಸ್ಥಾನದ ಬಿಕನೇರ್‌ನಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿತ್ತು, ಅಲ್ಲಿಯೂ ಈತನನ್ನು ಇದೇ ರೀತಿಯ ಅಪಾಯಕಾರಿ ಕೆಲಸಕ್ಕೆ ಕಳುಹಿಸಲಾಗಿತ್ತು.
ಸಾಹಿಲ್ ವಿರುದ್ಧ ಭಿವಾನಿ ಮತ್ತು ಸಿರ್ಸಾ ನ್ಯಾಯಾಲಯಗಳಲ್ಲಿ ಹಲವಾರು ಆರ್ಥಿಕ ದುರುಪಯೋಗ ಪ್ರಕರಣಗಳು ಬಾಕಿ ಇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈ ಮತ್ತು ಬೆಂಗಳೂರಿನಲ್ಲಿರುವ ಪ್ರಮುಖ ಸಾಮಾಜಿಕ ಮಾಧ್ಯಮ ಪ್ರಭಾವಿಗಳನ್ನು ಗುರಿಯಾಗಿಸಿಕೊಳ್ಳುವ ಅವರ ಹಿಂದಿನ ಯೋಜನೆ ವಿದೇಶದಲ್ಲಿರುವ ಹ್ಯಾಂಡ್ಲರ್‌ಗಳೊಂದಿಗಿನ ಸಂವಹನ ಅಂತರದಿಂದಾಗಿ ಕಾರ್ಯರೂಪಕ್ಕೆ ಬರದ ಕಾರಣ, ಇಬ್ಬರನ್ನೂ ಇತ್ತೀಚೆಗೆ ದೆಹಲಿಗೆ ಕಳುಹಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗ್ಯಾಂಗ್‌ನ ಇತರ ಸದಸ್ಯರು ಮತ್ತು ಅವರ ಗುರಿಗಳನ್ನು ಗುರುತಿಸಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
2024ರಲ್ಲಿ ‘ಬಿಗ್ ಬಾಸ್’ ರಿಯಾಲಿಟಿ ಶೋ ಗೆದ್ದ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 14 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿರುವ ಮುನವ್ವರ್ ಫಾರೂಕಿ ಮೇಲೆ ಹಲವಾರು ಗ್ಯಾಂಗ್‌ಗಳು ನಿಗಾ ಇಟ್ಟಿವೆ ಎಂದು ಪೊಲೀಸರು ವಿವರಿಸಿದ್ದಾರೆ.
2023ರಲ್ಲಿ ದೇಶದಾದ್ಯಂತ 24,678 ರೈಲ್ವೆ ಅಪಘಾತಗಳು, 21,803 ಜನರು ಸಾವು: ಎನ್‌ಸಿಆರ್‌ಬಿ ವರದಿ


