ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಕುರಿತು ಕಾಂಗ್ರೆಸ್ ಹೈಕಮಾಂಡ್‌ನಿಂದ ಖಚಿತ ಭರವಸೆ ಸಿಗುವವರೆಗೂ ದೆಹಲಿಯಲ್ಲೇ ಹೋರಾಟ ಮುಂದುವರಿಸಲಾಗುವುದು ಎಂದು ಕರ್ನಾಟಕದ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ’ ತೀರ್ಮಾನ ಮಾಡಿದೆ.
ಕರ್ನಾಟಕದ ಅಲೆಮಾರಿ ಸಮುದಾಯಗಳಿಂದ ‘ದೆಹಲಿ ಚಲೋ’ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಇಂದು ನಡೆದ ಸುದೀರ್ಘ ಮಾತುಕತೆಯಲ್ಲಿ, ಸಮಸ್ಯೆ ಬಗೆಹರಿಸುವ ಪ್ರಕ್ರಿಯೆ ಕುರಿತು ಕೈ ನಾಯಕರು ಸಮಯ ಕೇಳಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಕಡೆಯಿಂದ ಖಚಿತ ಅಭಿಪ್ರಾಯ ಹೊರಬೀಳುವ ತನಕ ದೆಹಲಿ ಬಿಡದಿರಲು ಸಮಿತಿ ನಿರ್ಧರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಒಳಮೀಸಲಾತಿ ಹಂಚಿಕೆಯಲ್ಲಿ ಕರ್ನಾಟಕದ ಅಲೆಮಾರಿ ಸಮುದಾಯಕ್ಕೆ ಆಗಿರುವ ಘೋರ ಅನ್ಯಾಯವನ್ನು ಪ್ರತಿಭಟಿಸಿ ಹಾಗೂ ಹೈಕಮಾಂಡ್ ಮಧ್ಯಪ್ರವೇಶ ಮಾಡಿ ಆಗಿರುವ ತಪ್ಪನ್ನು ಸರಿಪಡಿಸಬೇಕು ಎಂದು ಒತ್ತಾಯಿಸಲು ಕರ್ನಾಟಕದಿಂದ ಬಂದ ನೂರಾರು ಜನ ಅಲೆಮಾರಿ ಬಂಧುಗಳು, ಕಲಾವಿದರು ಇಂದು ದೆಹಲಿಯ ಜಂತರ್ ಮಂತರಿನಲ್ಲಿ ಆಕರ್ಶಕ ಮತ್ತು ಆಕ್ರೋಶಭರಿತ ಪ್ರತಿಭಟನೆ ನಡೆಸಿದರು. ರಾಮ, ಲಕ್ಷ್ಮಣ, ರಾವಣ, ದುರ್ಗ, ಆಂಜನೇಯ ಮುಂತಾದ ವೇಷ ತೊಟ್ಟ ಕಲಾವಿದರು ತಮ್ಮ ಕಲಾ ರೂಪಗಳಲ್ಲೇ ತಮ್ಮ ನೋವನ್ನು ಹೊರಹಾಕಿದರು. ತಮಗೆ ತಾವೇ ಚಾಟಿಯಲ್ಲಿ ಬಿಗಿದುಕೊಳ್ಳುತ್ತಿದ್ದರೂ, ಇಡೀ ಸಮಾಜಕ್ಕೆ ಆ ಏಟು ಬೀಳುವಂತೆ ಗೋಚರಿಸುತ್ತಿತ್ತ.
ಬೆಳಿಗ್ಗೆ 10 ರಿಂದ 12.30 ರ ತನಕ ಪ್ರತಿಭಟನೆ ನಡೆಸಿ ನಂತರ ಕಾಂಗ್ರೆಸ್ ಮುಖಂಡರನ್ನು ಕಾಣಲು ಕಾಂಗ್ರೆಸ್ ಕಚೇರಿಯ ಕಡೆ ಪ್ರತಿಭಟನಾಕಾರರು ಹೆಜ್ಜೆಹಾಕಿದರು. ಮಧ್ಯಪ್ರವೇಶಿಸಿದ ದೆಹಲಿ ಪೋಲೀಸರು, ಬಿಗಿಬಂದೋಬಸ್ತಿನ ಕಾರಣ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಹೋಗಲು ಅವಕಾಶವಿಲ್ಲ, ನಾವೇ ವಾಹನಗಳಲ್ಲಿ ಕರೆದೊಯ್ಯುತ್ತೇವೆ ಎಂದು ಬಸ್ಸುಗಳ ವ್ಯವಸ್ಥೆ ಮಾಡಿದರು. ಕಾಂಗ್ರೆಸ್ ಕಚೇರಿಯ ಮುಂದೆ ಅಲೆಮಾರಿ ಸಮುದಾಯದ ಆಕ್ರೋಶ ವ್ಯಕ್ತಗೊಳ್ಳುತ್ತಿತ್ತು. ಎಐಸಿಸಿ ಮುಖಂಡರು ಎಲ್ಲರನ್ನೂ ಒಳಗೆ ಬಿಡಿ ಎಂದು ಹೇಳಿದರೂ ದೆಹಲಿ ಪೋಲೀಸರು ಅವಕಾಶ ಕೊಡಲಿಲ್ಲ. ಏನಾದರೂ ಅಚಾತುರ್ಯ ನಡೆದರೆ ನಾವು ಹೊಣೆಯಾಗಬೇಕಾಗುತ್ತದೆ ಪ್ರತಿನಿಧಿಗಳನ್ನು ಮಾತ್ರ ಬಿಡಲು ಸಾಧ್ಯ ಎಂದು ಕಡ್ಡಿತುಂಡಾದಂತೆ ಹೇಳಿದರು. ಆದ್ದರಿಂದ, ನಿಯೋಗ ಮಾತ್ರವೇ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಮಾತನಾಡಲು ಸಾಧ್ಯವಾಯಿತು.

ಕಾಂಗ್ರೆಸ್ ಹೈಕಮಾಂಡ್ ಪರವಾಗಿ ಮಾತುಕತೆಗೆ ಬಂದಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ದತ್ ಅವರು ನಿಯೋಗದ ಮಾತುಗಳನ್ನು ವ್ಯವಧಾನದಿಂದ ಕೇಳಿಸಿಕೊಂಡರು. ಕೊನೆಗೆ ಮಾತನಾಡಿದ ಅವರು, “ಕರ್ನಾಟಕದಿಂದ ತಾವುಗಳು ಇಷ್ಟು ದೂರ ಬರುವುದಕ್ಕೆ ಬಹಳ ಕಷ್ಟಗಳನ್ನು ತೆಗೆದುಕೊಳ್ಳಬೇಕಾಯಿತು; ಅದಕ್ಕಾಗಿ ನಾನು ವಿಷಾದಿಸುತ್ತೇನೆ. ಇಂದು ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಆಸ್ಪತ್ರೆಯಲ್ಲಿದ್ದಾರೆ. ರಾಹುಲ್ ಗಾಂಧಿಯವರು ದೇಶದ ಹೊರಗಿದ್ದಾರೆ. ದುರ್ಗ ಪೂಜೆ ಇರುವುದರಿಂದ ಎಲ್ಲ ಮುಖಂಡರುಗಳು ಅವರವರ ಕ್ಷೇತ್ರಗಳಲ್ಲಿದ್ದಾರೆ. ಆದ್ದರಿಂದ ನಮ್ಮ ಕಡೆಯಿಂದ ಇಂದೇ ಖಚಿತ ತೀರ್ಮಾನ ಹೇಳಲು ಕಷ್ಟವಾಗುತ್ತಿದೆ. ಆದರೆ ನಿಮ್ಮ ಜೊತೆ ನಾವಿದ್ದೇವೆ, ಈ ಸಮಸ್ಯೆಗೆ ಸೂಕ್ತ ಪರಿಹಾರ ಖಂಡಿತ ಹುಡುಕೋಣ’ ಎಂದು ಭರವಸೆ ನೀಡಿದರು.
”ಇದನ್ನು ಬಗೆಹರಿಸಲು ಏನು ಪ್ರಕ್ರಿಯೆ ಅಳವಡಿಸಬಹುದು ಎಂದು ತೀರ್ಮಾನಿಸಲು ನಮಗೆ ಸ್ವಲ್ಪ ಸಮಯಾವಕಾಶಬೇಕು. ರಾಹುಲ್ ಗಾಂಧಿಯವರು ಬಂದೊಡನೆ ಅವರೊಡನೆ ತಮಗೆ ನೇರ ಭೇಟಿಯ ವ್ಯವಸ್ಥೆ ಮಾಡುತ್ತೇವೆ” ಎಂದರು.
ಸಭೆ ಎಂದು ಸಾಧ್ಯವಾಗಬಹುದು ಎಂಬುದರ ಬಗ್ಗೆ ಖಚಿತ ದಿನಾಂಕ ತಿಳಿಸಿ ಎಂದು ಕೇಳಿದಾಗ, “ಅದನ್ನು ತಿಳಿಸಬೇಕಾದರೂ ನಾನು ಹಿರಿಯ ಮುಖಂಡರುಗಳ ಜೊತೆ ಮಾತನಾಡಬೇಕಾಗುತ್ತದೆ; ಹೆಚ್ಚಲ್ಲ, ಆದರೆ ಸ್ವಲ್ಪ ಸಮಯವಕಾಶದ ಅಗತ್ಯವಿದೆ” ಎಂದು ಅವರು ಉತ್ತರಿಸಿದರು.
ಕಾಂಗ್ರೆಸ್‌ನೊಂದಿಗಿನ ಮಾತುಕತೆಯ ನಂತರ ಅಂಬೇಡ್ಕರ್ ಭವನದಲ್ಲಿ ಎಲ್ಲ ಅಲೆಮಾರಿ ಮುಖಂಡರ ಮತ್ತು ಸದಸ್ಯರ ಸುದೀರ್ಘ ಸಭೆ ನಡೆಯಿತು. “ಮೊಟ್ಟ ಮೊದಲ ಬಾರಿಗೆ ಎಚ್ಚೆತ್ತಿರುವ ಅಲೆಮಾರಿ ಸಮುದಾಯದ 59 ಜಾತಿಗಳು ಇಂದು ಒಂದು ಕುಟುಂಬವಾಗಿ ಒಂದಾಗಿದ್ದೇವೆ. ದೆಹಲಿಗೂ ಬಂದು ನಮ್ಮ ಕೂಗನ್ನು ಪ್ರಬಲವಾಗಿ ದಾಖಲಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈ ಒಗ್ಗಟ್ಟನ್ನು ಮತ್ತು ನ್ಯಾಯಕ್ಕಾಗಿನ ನಮ್ಮ ಹೋರಾಟವನ್ನು ಕೊನೆ ಮುಟ್ಟುವ ತನಕ ಮುಂದುವರೆಸುತ್ತೇವೆ” ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
“ಅಲೆಮಾರಿ ಸಮುದಾಯಗಳ ನಿಯೋಗವನ್ನು ಬರಮಾಡಿಕೊಂಡು ಸುದೀರ್ಘ ಮಾತುಕತೆ ನಡೆಸಿದ ಕಾಂಗ್ರೆಸ್ ಪ್ರತಿನಿಧಿಯಾದ ಅಭಿಷೇಕ್ ದತ್ ಅವರಿಗೆ ಈ ಸಮಿತಿ ಧನ್ಯವಾದಗಳನ್ನು ತಿಳಿಸುತ್ತದೆ. ಕಾಂಗ್ರೆಸ್ ಪ್ರತಿನಿಧಿಗಳು ಭರವಸೆಯ ಮಾತುಗಳನ್ನಾಡಿದ್ದರೂ ಮುಂದಿನ ಪ್ರಕ್ರಿಯೆ ಕುರಿತು ಖಚಿತವಾದ ಉತ್ತರ ನೀಡಲು ಒಂದಷ್ಟು ಸಮಯಬೇಕು ಎಂದು ಹೇಳಿದ್ದಾರೆ. ಅವರ ಇಕ್ಕಟ್ಟನ್ನೂ ನಾವು ಅರ್ಥಮಾಡಿಕೊಳ್ಳುತ್ತೇವೆ. ಆದರೆ ಖಚಿತ ತೀರ್ಮಾನ ಆಗುವ ತನಕ ನಾವು ದೆಹಲಿಯನ್ನು ತೊರೆಯುವ ಮಾತೇ ಇಲ್ಲ. ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶ ಮಾಡಿ ಈ ಸಮಸ್ಯೆಗೆ ಪರಿಹಾರ ಮಾರ್ಗ” ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
“ತೀರ್ಮಾನ ತೆಗೆದುಕೊಳ್ಳುವ ತನಕ ದೆಹಲಿಯಲ್ಲೇ ಉಳಿಯುತ್ತೇವೆ. ಎಷ್ಟೇ ದಿನ ಆದರೂ ಸಹ ಕಾಯುತ್ತೇವೆ. ಪರಿಹಾರ ಪಡೆದೇ ಹಿಂತಿರುಗುತ್ತೇವೆ. ಈ ಅವಕಾಶ ಕಳೆದುಕೊಂಡರೆ ನಮಗೆ ಮತ್ತೆ ನ್ಯಾಯ ಸಿಗಲು ಸಾಧ್ಯವಿಲ್ಲ. ಹಾಗಾಗಿ ಕರ್ನಾಟಕದಿಂದಲೂ ನಿತ್ಯ ಒಂದೆರಡು ಅಲೆಮಾರಿ ತಂಡಗಳು ದೆಹಲಿಗೆ ಬಂದು ಸೇರಿಕೊಳ್ಳಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ. ನಮ್ಮಂಥ ಅನಾಥ ಜೀವಿಗಳಿಗೆ ದೆಹಲಿಯಲ್ಲಿ ನೆಲೆ, ನೀರು, ಊಟ ಕಲ್ಪಿಸಲು ಶ್ರಮಿಸುತ್ತಿರುವ ದೆಹಲಿಯ ಮಾನವೀಯ ಮನಸ್ಸುಗಳಿಗೆ ಈ ಸಂದರ್ಭದಲ್ಲಿ ಮನದಾಳದ ನಮನಗಳನ್ನು ಅಲೆಮಾರಿ ಸಮುದಾಯ ಸಲ್ಲಿಸುತ್ತದೆ” ಹೋರಾಟಗಾರರು ತಿಳಿಸಿದರು.
“ಕಾಂಗ್ರೆಸ್ ಆಫೀಸಿನ ಮುಂದಿನ ಪ್ರದರ್ಶನದ ಸಂದರ್ಭದಲ್ಲಿ ಒಂದಿಬ್ಬರು ಬಿಜೆಪಿಯ ಕಿಡಿಗೇಡಿಗಳು ಹೋರಾಟನ್ನು ಕೆಡಿಸಲು ಪ್ರಯತ್ನಿಸುತ್ತಾರೆ. ಯಾವುದೇ ಕಾರಣಕ್ಕೂ ಒಪ್ಪಲಾಗದ ಘೋಷಣೆಗಳನ್ನು ಹಾಕಿದ್ದಾರೆ. ಇದನ್ನು ಬಿಜೆಪಿ ವರ್ಸಸ್ ಕಾಂಗ್ರೆಸ್ ಹೋರಾಟವಾಗಿ ತಿರುಗಿಸುವ ದುಷ್ಠ ಪ್ರಯತ್ನ ನಡೆಸಿದ್ದಾರೆ. ಇದಕ್ಕಾಗಿ ಸಮಿತಿ ವಿಷಾದ ವ್ಯಕ್ತಪಡಿಸುತ್ತದೆ, ಇಂತಹ ಸ್ವಾರ್ಥಿಗಳನ್ನು ಮುಂದಿನ ಹೋರಾಟಗಳಿಂದ ಹೊರಗಿಡುವ ಒಕ್ಕೊರಲ ತೀರ್ಮಾನವನ್ನು ಅಲೆಮಾರಿಗಳ ಮಾಹಾ ಒಕ್ಕೂಟ ತೆಗೆದುಕೊಳ್ಳುತ್ತಿದೆ” ಎಂದು ಸಭೆಯಲ್ಲಿ ತಿಳಿಸಿದರು.
ಪ್ರತ್ಯೇಕ ಮೀಸಲಾತಿಗೆ ಆಗ್ರಹಿಸಿ ದೆಹಲಿಯಲ್ಲಿ ಹೋರಾಟ; ಕಾಂಗ್ರೆಸ್ ಹೈಕಮಾಂಡ್ ಗಮನ ಸೆಳೆದ ಅಲೆಮಾರಿಗಳು


