ಇತ್ತೀಚೆಗೆ ಹಿಂಸಾಚಾರ ನಡೆದಿದ್ದ ಬರೇಲಿಗೆ ಹೊರಟಿದ್ದ ಸಮಾಜವಾದಿ ಪಕ್ಷದ(ಎಸ್‌ಪಿ) ನಿಯೋಗಕ್ಕೆ ಶನಿವಾರ (ಅ.4) ಉತ್ತರ ಪ್ರದೇಶ ಪೊಲೀಸರು ತಡೆ ಒಡ್ಡಿದ್ದಾರೆ ಎಂದು ವರದಿಯಾಗಿದೆ.
ಈದ್ ಮೀಲಾದ್ ಪ್ರಯುಕ್ತ ಉತ್ತರ ಪ್ರದೇಶದ ಕಾನ್ಪುರದಲ್ಲಿ ‘ಐ ಲವ್ ಮುಹಮ್ಮದ್’ ಬರಹವಿದ್ದ ಬ್ಯಾನರ್ ಹಾಕಿದ್ದ ಯುವಕರನ್ನು ಸೆಪ್ಟೆಂಬರ್ 4ರಂದು ಪೊಲೀಸರು ಬಂಧಿಸಿದ್ದರು. ಇದನ್ನು ಖಂಡಿಸಿ ದೇಶದ ಹಲವೆಡೆ ಪ್ರತಿಭಟನೆಗಳು ನಡೆದಿತ್ತು. ಅದರಂತೆ ಸೆಪ್ಟೆಂಬರ್ 26ರಂದು ಬರೇಲಿಯಲ್ಲೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಆದರೆ, ಈ ಪ್ರತಿಭಟನೆ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿತ್ತು. ಪರಿಣಾಮ ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ (ಐಎಂಸಿ) ಮುಖ್ಯಸ್ಥ ಮೌಲಾನಾ ತೌಕೀರ್ ರಝಾ ಖಾನ್ ಸೇರಿದಂತೆ ಸುಮಾರು 35 ಮುಸ್ಲಿಮರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಪೊಲೀಸರು ಅಮಾಯಕರನ್ನೂ ಬಂಧಿಸಿದ್ದಾರೆ ಎಂಬ ಆರೋಪವಿದೆ. ಈ ಹಿನ್ನೆಲೆ, ಉತ್ತರ ಪ್ರದೇಶದ ಪ್ರತಿಪಕ್ಷವಾದ ಸಮಾಜವಾದಿಯ ಮುಖ್ಯಸ್ಥ ಅಖಿಲೇಶ್ ಯಾದವ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮಾತಾ ಪ್ರಸಾದ್ ಪಾಂಡೆ ನೇತೃತ್ವದ 14 ಸದಸ್ಯರ ನಿಯೋಗಕ್ಕೆ ಬರೇಲಿಗೆ ಭೇಟಿ ನೀಡುವಂತೆ ನಿರ್ದೇಶಿಸಿದ್ದರು.
ಪೊಲೀಸರು ಮಾರ್ಗ ಮಧ್ಯೆ ತಡೆದಿರುವುದನ್ನು ‘ಪ್ರಜಾಪ್ರಭುತ್ವ ವಿರೋಧಿ’ ಮತ್ತು ‘ಸಂವಿಧಾನದ ಉಲ್ಲಂಘನೆ’ ಎಂದು ಮಾತಾ ಪ್ರಸಾದ್ ಪಾಂಡೆ ಟೀಕಿಸಿದ್ದಾರೆ.
“ಆರಂಭದಲ್ಲಿ ಮನೆಯಲ್ಲಿಯೇ ಇರಲು ನನಗೆ ಸೂಚಿಸಲಾಗಿತ್ತು. ಆದರೆ, ನಂತರ ಅದನ್ನು ಸರಿಪಡಿಸಲಾಯಿತು. ನಮ್ಮ ಭೇಟಿಯ ಬಗ್ಗೆ ಸರ್ಕಾರಕ್ಕೆ ಮಾಹಿತಿ ತಿಳಿದ ತಕ್ಷಣ, ಬರೇಲಿಗೆ ಹೋಗದಂತೆ ತಡೆಯಲು ಲಕ್ನೋದಲ್ಲಿರುವ ನಮ್ಮ ಖಾಸಗಿ ನಿವಾಸದಲ್ಲಿ ದೊಡ್ಡ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಇದು ದುರದೃಷ್ಟಕರ ಮತ್ತು ಪ್ರಜಾಪ್ರಭುತ್ವ ವಿರೋಧಿ. ಇದು ಸಂವಿಧಾನವು ನೀಡಿರುವ ಹಕ್ಕುಗಳನ್ನು ಉಲ್ಲಂಘಿಸುತ್ತದೆ” ಎಂದು ಮಾತಾ ಪ್ರಸಾದ್ ಪಾಂಡೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
समाजवादी पार्टी के माननीय राष्ट्रीय अध्यक्ष श्री अखिलेश यादव जी के निर्देशानुसार हमारी अध्यक्षता में समाजवादी पार्टी का प्रतिनिधि मण्डल आज बरेली जाने हेतु निर्देशित किया गया था , इसकी जानकारी सरकार को मिलते ही सरकारिया तंत्र ने हमारे लखनऊ स्थित निजी आवास पर भारी मात्रा में पुलिस… pic.twitter.com/1LJk8gFq8R
— Mata Prasad Pandey (@pmataprasadsp) October 4, 2025
ಈ ನಡುವೆ, ಬರೇಲಿಗೆ ಭೇಟಿ ನೀಡದಂತೆ ತಡೆಯಲು ಸಮಾಜವಾದಿ ಪಕ್ಷದ ಸಂಸದ ಝಿಯಾವುರ್ ರೆಹಮಾನ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ. ಸಂಭಾಲ್‌ನಲ್ಲಿರುವ ಅವರ ಮನೆಯ ಹೊರಗೆ ಪೊಲೀಸರನ್ನು ನಿಯೋಜಿಸಿರುವ ಫೋಟೋ, ವಿಡಿಯೋಗಳನ್ನು ಮಾಧ್ಯಮಗಳು ಪ್ರಕಟಿಸಿವೆ.
VIDEO | Samajwadi Party MP Ziaur Rahman reportedly under house arrest. Visuals from outside his residence in Sambhal, Uttar Pradesh.
A delegation of 14 Samajwadi Party MPs and MLAs is scheduled to visit Bareilly, under the leadership of LoP Mata Prasad Pandey.
(Full video… pic.twitter.com/Vulz9EdRmY
— Press Trust of India (@PTI_News) October 4, 2025
ಬರೇಲಿಗೆ ಭೇಟಿ ನೀಡಲು ಮುಂದಾಗಿರುವ ಎಸ್‌ಪಿ ನಾಯಕರದ್ದು ‘ಬಾಲಿಶ ನಡೆ’ ಎಂದು ಬಿಜೆಪಿ ಕರೆದಿದೆ.
“ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಬರೇಲಿಗೆ ನಿಯೋಗ ಕಳುಹಿಸಿರುವುದು ಬಾಲಿಶ ನಡೆ. ಎಸ್‌ಪಿ ಮುಸ್ಲಿಂ ಓಲೈಕೆಯ ಕೊಳಕು ರಾಜಕೀಯಕ್ಕೆ ಹೆಸರುವಾಸಿಯಾಗಿದೆ. 2027ರ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಪಿಯ ಪತನ ಮತ್ತು ಸರ್ವನಾಶ ಖಚಿತ. ಗಲಭೆ ಮುಕ್ತ ಯುಪಿ, ಉತ್ತಮ ಆಡಳಿತ ಮತ್ತು ಕಾನೂನು ಸುವ್ಯವಸ್ಥೆ ನಮ್ಮ ಗುರುತು ಮತ್ತು ಸಾಧನೆ. ಎಸ್‌ಪಿ ಬೆಂಬಲಿಗರಿಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ” ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಸೆಪ್ಟೆಂಬರ್ 26ರಂದು ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿ, ಗುಂಡು ಹಾರಿಸಿದ್ದಾರೆ ಎಂದು ಬರೇಲಿಯ ಸ್ಥಳೀಯರು ಆರೋಪಿಸಿದ್ದಾರೆ.
ಘರ್ಷಣೆಗೆ ಸಂಬಂಧಿಸಿದ ಎಫ್‌ಐಆರ್‌ನಲ್ಲಿ ಸೆಪ್ಟೆಂಬರ್ 26ರಂದು ನಡೆದ ಘಟನೆಯ ಹಿಂದೆ ‘ಯೋಜಿತ ಪಿತೂರಿ’ ಇದೆ. ಐಎಂಸಿ ಸದಸ್ಯರು ಕೇವಲ ಮನವಿ ಪತ್ರ ಸಲ್ಲಿಸುವ ಬದಲು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
‘ಐ ಲವ್ ಮುಹಮ್ಮದ್’ ಪ್ರತಿಭಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಕೊತ್ವಾಲಿಯಲ್ಲಿ ಐದು, ಬರಾದರಿಯಲ್ಲಿ ಎರಡು ಮತ್ತು ಕಿಲಾ, ಕ್ಯಾಂಟ್ ಮತ್ತು ಪ್ರೇಮ್ ನಗರ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಎಫ್‌ಐಆರ್ ದಾಖಲಾಗಿದ್ದು, 125 ಜನರು ಮತ್ತು 3,000 ಗುರುತಿಸಲಾಗದ ವ್ಯಕ್ತಿಗಳನ್ನು ಆರೋಪಿಗಳೆಂದು ಹೆಸರಿಸಲಾಗಿದೆ ಎಂದು ವರದಿಗಳು ಹೇಳಿವೆ.
ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಹೆಸರಿಸಲಾದ ಧಾರ್ಮಿಕ ನಾಯಕನೊಂದಿಗೆ ಸಂಪರ್ಕ ಹೊಂದಿದವರ ಆಸ್ತಿಗಳನ್ನು ಆಡಳಿತವು ಗುರಿಯಾಗಿಸಿಕೊಂಡಿದೆ. ಬರೇಲಿ ಅಭಿವೃದ್ಧಿ ಪ್ರಾಧಿಕಾರವು ಧರ್ಮಗುರುವಿಗೆ ಆಶ್ರಯ ನೀಡಿದ್ದ ಫಹಾಮ್ ಒಡೆತನದ ಹೋಟೆಲ್ ಸ್ಕೈಲಾರ್ಕ್ ಅನ್ನು ಸೀಲ್ ಮಾಡಿದೆ. ಮತ್ತೊಬ್ಬ ಆರೋಪಿಗೆ ಆಶ್ರಯ ನೀಡಿದ್ದ ಮೊಹಮ್ಮದ್ ಆರಿಫ್ ಒಡೆತನದ ಫಹಾಮ್ ಲಾನ್, ಫ್ಲೋರಾ ಗಾರ್ಡನ್ ಎಂಬ ಹೋಟೆಲ್‌ಗಳು, ಜಲ್ಸಾ ಗ್ರೀನ್ ಮ್ಯಾರೇಜ್ ಹಾಲ್ ಅನ್ನು ಅಧಿಕಾರಿಗಳು ಸೀಲ್ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ.
ಭಾರತವು ಸಂವಿಧಾನದ ಮೂಲಕ ಆಳಲ್ಪಡುತ್ತದೆ, ಬುಲ್ಡೋಜರ್ ನಿಯಮದಿಂದಲ್ಲ: ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ


