ನಿವೃತ್ತ ನ್ಯಾಯಮೂರ್ತಿ ಎ.ಕೆ ಸಿಕ್ರಿ ನೇತೃತ್ವದ ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ (ಎನ್‌ಬಿಡಿಎಸ್‌ಎ) ‘ಮೆಹಂದಿ ಜಿಹಾದ್’ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ ಝೀ ನ್ಯೂಸ್‌ಗೆ ಎಚ್ಚರಿಕೆ ನೀಡಿದ್ದು, ನೀತಿ ಸಂಹಿತೆಯ ಉಲ್ಲಂಘನೆ ಹಿನ್ನೆಲೆ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಅಂತಹ ಕಾರ್ಯಕ್ರಮಗಳ ವಿಡಿಯೋಗಳನ್ನು ತೆಗೆದುಹಾಕುವಂತೆ ನಿರ್ದೇಶಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.
ಪ್ರತ್ಯೇಕ ಆದೇಶದಲ್ಲಿ, ಕಾನೂನುಬಾಹಿರ ಮತಾಂತರ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪನ್ನು ವರದಿ ಮಾಡುವಾಗ ‘ಲವ್ ಜಿಹಾದ್’ ಕುರಿತು ಕೆಲವು ಪ್ರಚೋದನಕಾರಿ ತಲೆಬರಹಗಳನ್ನು ಬಳಸಿದ್ದಕ್ಕಾಗಿ ಎನ್‌ಬಿಡಿಎಸ್‌ಎ ‘ಟೈಮ್ಸ್ ನೌ ನವಭಾರತ್’ ವಾಹಿನಿಯನ್ನು ತರಾಟೆಗೆ ತೆಗೆದುಕೊಂಡಿದೆ. ವಾಹಿನಿಯು ತಲೆಬರಹಗಳಲ್ಲಿ ತೀರ್ಪಿನ ಭಾಗವಲ್ಲದ ಕೆಲವು ಅಂಶಗಳನ್ನು ಪರಿಚಯಿಸಿರುವ ಹಿನ್ನೆಲೆ ಅವುಗಳನ್ನು ತೆಗೆದುಹಾಕಲು ಆದೇಶಿಸಿದೆ ಎಂದು ವರದಿ ವಿವರಿಸಿದೆ.
ಚಾನೆಲ್‌ಗಳು ತಪ್ಪು ಮಾಹಿತಿಗಳನ್ನು ಹರಡುತ್ತಿವೆ ಮತ್ತು ಜನರನ್ನು ವಿಭಜಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಪ್ರಸಾರ ಮಾಡುತ್ತಿವೆ ಎಂದು ಆರೋಪಿಸಿ ಹೋರಾಟಗಾರ ಇಂದ್ರಜೀತ್ ಘೋರ್ಪಡೆ ಅವರು ಅಕ್ಟೋಬರ್ 2024ರಲ್ಲಿ ಸಲ್ಲಿಸಿದ್ದ ದೂರುಗಳ ಮೇರೆಗೆ ಎನ್‌ಬಿಡಿಎಸ್‌ಎ ಆದೇಶ ನೀಡಿದೆ.
ಝೀ ನ್ಯೂಸ್ – ‘ಮೆಹಂದಿ ಜಿಹಾದ್’ ಕಾರ್ಯಕ್ರಮಗಳು
‘ಮೆಹಂದಿ ಜಿಹಾದ್’ ಎಂಬ ಕಾಲ್ಪನಿಕ ವಿಷಯದ ಅಡಿ, ಮುಸ್ಲಿಂ ಮೆಹಂದಿ ಕಲಾವಿದರು ಹಿಂದೂ ಮಹಿಳೆಯರಿಗೆ ಮೆಹಂದಿ ಹಚ್ಚುವ ಮುನ್ನ ಅದಕ್ಕೆ ಉಗುಳುತ್ತಾರೆ. ಮುಸ್ಲಿಂ ಪುರುಷರು ಮೆಹಂದಿ ಕಲಾವಿದರಾಗಿ ಕೆಲಸ ಮಾಡಿ, ಹಿಂದೂ ಮಹಿಳೆಯರ ಫೋನ್ ನಂಬರ್‌ಗಳನ್ನು ತೆಗೆದುಕೊಳ್ಳುತ್ತಾರೆ. ಅದರ ಮೂಲಕ ಅವರನ್ನು ಬಲೆಗೆ ಬೀಳಿಸಿ ಮದುವೆಯಾಗುತ್ತಾರೆ. ಬಳಿಕ ಅವರ ಧರ್ಮ ಬದಲಾಯಿಸುವ ಗುಪ್ತ ಯೋಜನೆ ಇದೆ ಎಂಬ ಕಪೋಲಕಲ್ಪಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ್ದ ಆರೋಪಗಳನ್ನು ಝೀ ನ್ಯೂಸ್ ವಿರುದ್ದ ಮಾಡಲಾಗಿತ್ತು.
ಅಲ್ಲದೆ, ಈ ಕಾರ್ಯಕ್ರಮಗಳ ಪ್ರಸಾರದ ಬಳಿಕ, ಕೆಲವು ಗುಂಪುಗಳು ಮುಸ್ಲಿಂ ಮೆಹಂದಿ ಕಲಾವಿದರ ವಿರುದ್ಧ ಹಿಂಸಾತ್ಮಕ ಮಾತುಗಳನ್ನು ಆಡಿತ್ತು, ಅವರನ್ನು ಬಹಿಷ್ಕರಿಸಬೇಕು ಎಂದು ಕರೆ ಕೊಟ್ಟಿತ್ತು. ಇವುಗಳನ್ನು ಝೀ ನ್ಯೂಸ್ ಹೆಚ್ಚು ಹೆಚ್ಚು ಪ್ರಸಾರ ಮಾಡಿದೆ ಎಂದು ದೂರಲಾಗಿತ್ತು. ಝೀ ನ್ಯೂಸ್ ಮಾಡಿದ ಆರೋಪಗಳು ಮತ್ತು ಪ್ರಸಾರ ಮಾಡಿದ ಕಾರ್ಯಕ್ರಮಗಳು ಸತ್ಯವನ್ನು ತಿರುಚುವಂತಿದ್ದವು. ಜನರಲ್ಲಿ ತಪ್ಪು ಭಾವನೆಗಳನ್ನು ಹುಟ್ಟಿಸುವಂತಿದ್ದವು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
“1. ಮೆಹೆಂದಿ ಜಿಹಾದ್ ಪರ್ ದೇ ದನಾ-ದನ್, 2. ಆವೇದನ್ ನಿವೇದನ್ ನಹಿ ಮಾನೆ ತೋ ದೇ ದನಾ-ದನ್, 3. ಮೆಹಂದಿ ಜಿಹಾದ್ ಕೆ ಖಿಲಾಫ್ ಲಾಟ್ ಮಾಡೆಲ್ ಲಾಂಚ್, 4. ಲಾಠಿ ಸೆ ಲೈಸ್ ರಹೇಂಗೆ ಜಿಹಾದಿಯೋಂಕೊ ರೊಕೇಂಗೆ, 5. ಪಕಡೆ ಜಾನೆ ಪರ್ ಸಬಕ್ ಸಿಕಾಯ ಜಾಯೆಗ” ಈ ರೀತಿಯ ತಲೆಬರಹಗಳನ್ನು ಝೀ ನ್ಯೂಸ್ ತನ್ನ ಕಾರ್ಯಕ್ರಮಗಳಿಗೆ ಕೊಟ್ಟಿತ್ತು ಎಂದು ದೂರಿನಲ್ಲಿ ವಿವರಿಸಲಾಗಿತ್ತು.
ಝೀ ನ್ಯೂಸ್ ಮುಸ್ಲಿಂ ಮೆಹಂದಿ ಕಲಾವಿದರರ ವಿರುದ್ದದ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಿರಲಿಲ್ಲ. ಮುಸ್ಲಿಂ ಕಲಾವಿದರ ವಿರುದ್ಧದ ಬೆದರಿಕೆಗಳನ್ನು ಮತ್ತು ಅವಮಾನಗಳನ್ನು ಖಂಡಿಸಿರಲಿಲ್ಲ. ವಿರೋಧಿ ದೃಷ್ಟಿಕೋನಗಳನ್ನು ನಿರ್ಲಕ್ಷಿಸಿತ್ತು ಮತ್ತು ತನ್ನ ಥಂಬ್‌ನೇಲ್‌ಗಳು, ತಲೆ ಬರಹಗಳು ಮತ್ತು ಶೀರ್ಷಿಕೆಗಳ ಮೂಲಕ ಸಾಮುದಾಯಿಕ ಭಯ ಮತ್ತು ದ್ವೇಷವನ್ನು ಹರಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಝೀ ನ್ಯೂಸ್ ಎನ್‌ಬಿಡಿಎಸ್‌ಎ ಮುಂದೆ ತಾವು ಕೇವಲ ಕೆಲವು ಸಂಘಟನೆಗಳ ಹೇಳಿಕೆಗಳನ್ನು ವರದಿ ಮಾಡಿದ್ದೇವೆ ಎಂದು ವಾದಿಸಿತ್ತು. ಆದರೆ, ಎನ್‌ಬಿಡಿಎಸ್‌ಎ ತಲೆ ಬರಹಗಳು ಮತ್ತು ಕಾರ್ಯಕ್ರಮದ ಪ್ರಸ್ತುತಿಯ ರೀತಿಯಿಂದ ಚಾನೆಲ್ ಸ್ವತಃ ಈ ಆರೋಪಗಳನ್ನು ಬೆಂಬಲಿಸುತ್ತಿರುವಂತೆ ಭಾಸವಾಗಿದೆ ಎಂದಿದೆ. ಆದ್ದರಿಂದ, ಝೀ ನ್ಯೂಸ್‌ಗೆ ಆ ಕಾರ್ಯಕ್ರಮಗಳನ್ನು ತೆಗೆದುಹಾಕಲು ಆದೇಶಿಸಿದೆ. ಭವಿಷ್ಯದಲ್ಲಿ ಎಚ್ಚರಿಕೆಯಿಂದ ವಿರೋಧಿ ದೃಷ್ಟಿಕೋನಗಳನ್ನು ಸೇರಿಸಿಕೊಂಡು ವರದಿ ಮಾಡುವಂತೆ ಎಚ್ಚರಿಕೆ ನೀಡಿದೆ ಎಂದು ಲೈವ್ ಲಾ ವರದಿ ಹೇಳಿದೆ.
“ತಲೆಬರಹಗಳನ್ನು ಕೊಡುವಾಗ ಪ್ರಸಾರಕರು ಇವು ಮೂರನೇ ವ್ಯಕ್ತಿಗಳು ನೀಡಿದ ಹೇಳಿಕೆಗಳು ಎಂದು ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ ಅಥವಾ ಈ ತಲೆಬರಹಗಳು ಪ್ರಸಾರಕರ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ ಎಂಬುದಕ್ಕೆ ಯಾವುದೇ ಸ್ಪಷ್ಟನೆಯನ್ನೂ ನೀಡಿಲ್ಲ” ಎಂದು ಎನ್‌ಬಿಡಿಎಸ್‌ಎ ಹೇಳಿದೆ.
“ಸಂಪಾದಕೀಯ ವಿವೇಚನೆಯ ಭಾಗವಾಗಿರುವ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ರಕ್ಷಿಸಲ್ಪಟ್ಟಿರುವ ಪ್ರಸಾರದ ವಿಷಯದ ಬಗ್ಗೆ ತಾನು ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಎನ್‌ಬಿಡಿಎಸ್‌ಎ ಸ್ಪಷ್ಟಪಡಿಸಿದೆ. ಆದರೆ, ಈ ಹಂತದಲ್ಲಿ ಸಾರ್ವಜನಿಕ ಸಂವಾದವನ್ನು ರೂಪಿಸುವಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿ ಮಾಧ್ಯಮವು ವಹಿಸುವ ಪಾತ್ರವನ್ನು ನೆನಪಿಸುವುದು ಅಗತ್ಯವಾಗಿದೆ. ಸಂಭಾವ್ಯ ಸೂಕ್ಷ್ಮ ವಿಷಯಗಳೊಂದಿಗೆ ವ್ಯವಹರಿಸುವಾಗ, ಪ್ರಸಾರಕರು ತಾವು ಪ್ರಸಾರ ಮಾಡುವ ವಿಷಯವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಬೇಕು. ಅದು ನೀತಿ ಸಂಹಿತೆಯಲ್ಲಿ ವಿವರಿಸಿರುವ ಪತ್ರಿಕೋದ್ಯಮ ಮಾನದಂಡಗಳಿಗೆ ಹೊಂದಿಕೆಯಾಗುತ್ತದೆ ಎಂದು ಖಚಿತಪಡಿಸಿಕೊಳ್ಳಬೇಕು” ಎಂದು ಎನ್‌ಡಿಬಿಎಸ್‌ಎ ತಿಳಿಸಿದೆ.
ಟೈಮ್ಸ್ ನೌ ನವಭಾರತ್: ‘ಲವ್ ಜಿಹಾದ್’ ವರದಿ
ಟೈಮ್ಸ್ ನೌ ನವಭಾರತ್ ಚಾನೆಲ್ ವಿರುದ್ಧದ ದೂರು, ಹಿಂದೂ ಮಹಿಳೆಯನ್ನು ಧಾರ್ಮಿಕ ಮತಾಂತರದ ನಂತರ ಮದುವೆಗೆ ಒತ್ತಾಯಿಸಿದ್ದಕ್ಕಾಗಿ ಮುಸ್ಲಿಂ ಪುರುಷನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಬರೇಲಿ ಸೆಷನ್ಸ್ ನ್ಯಾಯಾಲಯದ ತೀರ್ಪಿನ ವರದಿಗೆ ಸಂಬಂಧಿಸಿದೆ.
ದೂರಿನ ಪ್ರಕಾರ, ಟೈಮ್ಸ್ ನೌ ನವಭಾರತ್ ಪತ್ರಿಕೋದ್ಯಮದ ಪರಿಶೀಲನೆಯಿಲ್ಲದೆ ನ್ಯಾಯಾಧೀಶರ ಮಾತುಗಳನ್ನು ಪ್ರಸಾರ ಮಾಡಿದೆ. ಮಹಿಳೆಯ ಸಾಕ್ಷ್ಯವನ್ನು ಬಿಟ್ಟುಬಿಟ್ಟಿದೆ ಮತ್ತು ‘ಲವ್ ಜಿಹಾದ್’ ನಿರೂಪಣೆಯನ್ನು ಬಲಪಡಿಸುವ ಬಿಜೆಪಿ ರಾಜಕಾರಣಿಗಳ ಹೇಳಿಕೆಗಳನ್ನು ಮತ್ತಷ್ಟು ಪ್ರಸಾರ ಮಾಡಿದೆ. “ಪ್ಯಾರ್ ಕೆ ಜಹಾಝ್ ಮೇ ಜಿಹಾದ್ ಕಾ ತೂಫಾನ್,” “ಲವ್ ಜಿಹಾದ್ ಪರ್ ಕೋರ್ಟ್ ಕಾ ಸಖ್ತ್ ಫೈಸ್ಲಾ,” “ಜಿಹಾದಿಯೋನ್ ಕಿ ಮೊಹಬ್ಬತ್ ಕಾ ಸಚ್,” ಮತ್ತು “ಜಿಹಾದಿಯೋಂ ಕೆ ಇರಾದಾನ್ ಪರ್ ಲಗೀ ಮೊಹರ್” ಮುಂತಾದ ತಲೆಬರಹಗಳನ್ನು ಪ್ರಸಾರ ಮಾಡಿದೆ.
ನ್ಯಾಯಾಲಯದ ತೀರ್ಪನ್ನು ವರದಿ ಮಾಡುವ ಮೊದಲು ಚಾನೆಲ್ ಸ್ವತಂತ್ರ ಸತ್ಯ ಪರಿಶೀಲನೆ ಮಾಡಬೇಕಿತ್ತು ಎಂಬ ದೂರುದಾರರ ವಾದದಿಂದ ಎನ್‌ಬಿಡಿಎಸ್‌ಎ ಪ್ರಭಾವಿತ ಆಗಿಲ್ಲ.
ನ್ಯಾಯಾಲಯದ ತೀರ್ಪಿನ ಕುರಿತು ಚಾನೆಲ್ ವರದಿ ಮಾಡಿದೆ ಅದು ಆಕ್ಷೇಪಾರ್ಹವಲ್ಲ ಎಂದು ಎನ್‌ಬಿಡಿಎಸ್‌ಎ ಹೇಳಿದೆ. ಆದರೆ, ಟೈಮ್ಸ್ ನೌ ನವಭಾರತ್ ತೀರ್ಪಿನ ನಿರೂಪಣೆಯನ್ನು ಮೀರಿ ಸಂವೇದನಾಶೀಲ ತಲೆಬರಹಗಳ ಮೂಲಕ ಹೆಚ್ಚುವರಿ ಅಂಶಗಳನ್ನು ಪರಿಚಯಿಸಿದೆ ಎಂದು ಅದು ಹೇಳಿದೆ. “ಯುಪಿ ಮೇ ಲವ್ ಜಿಹಾದ್… ಟೂಲ್‌ಕಿಟ್ ಪಾಕಿಸ್ತಾನಿ” ಮತ್ತು “ಝುತೇ ನಾಮ್ ಕಾ ಅಫ್ಸಾನಾ, ಮಕ್ಸದ್ ಮುಸಲ್ಮಾನ್ ಬನಾನ” ಮುಂತಾದ ಶೀರ್ಷಿಕೆಗಳ ಬಳಕೆಯನ್ನು ಎಮ್‌ಡಿಬಿಎಸ್‌ಎ ನಿರ್ದಿಷ್ಟವಾಗಿ ಸೂಚಿಸಿದೆ. ಇದು ವರದಿಯ ಉದ್ದೇಶಿತ ವಿಷಯಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿದೆ.
ಕಾರ್ಯಕ್ರಮ ಪ್ರಸಾರ ಮಾಡುವಾಗ, ಪ್ರಸಾರಕರು ನ್ಯಾಯಾಲಯದ ತೀರ್ಪಿನ ನಿರೂಪಣೆಯನ್ನು ಮೀರಿ, ತೀರ್ಪಿನ ಭಾಗವಲ್ಲದ ಕೆಲವು ಅಂಶಗಳನ್ನು ಪರಿಚಯಿಸಿದ್ದಾರೆ. ಅವುಗಳಿಗೆ ವರದಿಯ ಉದ್ದೇಶಿತ ವಿಷಯಕ್ಕೆ ಹೊಂದಿಕೆಯಾಗದ ತಲೆಬರಹಗಳನ್ನು ಬಳಸಲಾಗಿದೆ. ಆದ್ದರಿಂದ ಆಕ್ಷೇಪಾರ್ಹ ತಲೆಬರಹಗಳನ್ನು ತೆಗೆದುಹಾಕುವಂತೆ ಎನ್‌ಡಿಬಿಎಸ್‌ಎ ಚಾನೆಲ್‌ಗೆ ನಿರ್ದೇಶಿಸಿದೆ. ಇದೇ ವೇಳೆ, ಈ ಶೀರ್ಷಿಕೆಗಳನ್ನು ಹೊರತುಪಡಿಸಿ, ತೀರ್ಪಿನ ನಿರೂಪಣೆಯು ನೀತಿಸಂಹಿತೆ ಮತ್ತು ಪ್ರಸಾರ ಸಂಹಿತೆಯನ್ನು ಉಲ್ಲಂಘಿಸಿಲ್ಲ ಎಂದು ಎನ್‌ಡಿಬಿಎಸ್‌ಎ ತಿಳಿಸಿದೆ.
Courtesy : livelaw.in


