ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ಸುಪ್ರೀಂ ಕೋರ್ಟ್‌ನಲ್ಲೇ ವಕೀಲರೊಬ್ಬರು ಶೂ ಎಸೆಯಲು ಯತ್ನಿಸಿರುವುದನ್ನು ಹಲವು ಕ್ಷೇತ್ರಗಳ ಪ್ರಮುಖರು ತೀವ್ರವಾಗಿ ಖಂಡಿಸಿದ್ದಾರೆ.
“ಸನಾತನ ಧರ್ಮದ ಹೆಸರಲ್ಲಿ ಸಂವಿಧಾನಾತ್ಮಕವಾಗಿ ಉನ್ನತ ಹುದ್ದೆಯಲ್ಲಿರುವ ಮುಖ್ಯ ನ್ಯಾಯಾಧೀಶರಾದ ಶ್ರೀ ಬಿ ಆರ್ ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆಯಲು ಯತ್ನಿಸಿರುವುದು ಖಂಡನೀಯ ಬೆಳವಣಿಗೆ” ಎಂದು ಸಚಿವ ಎಚ್.ಸಿ ಮಹದೇವಪ್ಪ ಹೇಳಿದ್ದಾರೆ.
“ಸಂವಿಧಾನದ ಮೇಲೆ ಮಾಡಲು ಹೊರಟಿರುವ ಈ ಧಾರ್ಮಿಕ ಅಂಧತ್ವದ ಸವಾರಿಯನ್ನು ಜವಾಬ್ದಾರಿಯುತವಾದ ಪ್ರಜೆಗಳಾದ ಎಲ್ಲರೂ ಖಂಡಿಸಬೇಕು” ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
“ಇಂದು ಸುಪ್ರೀಂ ಕೋರ್ಟ್‌ನಲ್ಲಿ ಭಾರತದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿರುವುದು ನಾಚಿಕೆಗೇಡು ಮತ್ತು ಅಸಹ್ಯಕರವಾಗಿದೆ. ಇದು ನಮ್ಮ ನ್ಯಾಯಾಂಗದ ಘನತೆ ಮತ್ತು ಕಾನೂನಿನ ಆಡಳಿತದ ಮೇಲಿನ ದಾಳಿಯಾಗಿದೆ” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಂಡಿಸಿದ್ದಾರೆ.
“ಅರ್ಹತೆ, ಸಮಗ್ರತೆ ಮತ್ತು ಪರಿಶ್ರಮದ ಮೂಲಕ ದೇಶದ ಅತ್ಯುನ್ನತ ನ್ಯಾಯಾಂಗ ಹುದ್ದೆಗೆ ಏರಿದ ಹಾಲಿ ಮುಖ್ಯ ನ್ಯಾಯಮೂರ್ತಿಯೊಬ್ಬರನ್ನು ಈ ರೀತಿ ಗುರಿಯಾಗಿಸಿಕೊಂಡಾಗ, ಅದು ತೀವ್ರ ಆತಂಕಕಾರಿ ಸಂದೇಶವನ್ನು ರವಾನಿಸುತ್ತದೆ. ಸಂವಿಧಾನವನ್ನು ಎತ್ತಿಹಿಡಿಯಲು ಸಾಮಾಜಿಕ ಅಡೆತಡೆಗಳನ್ನು ಮುರಿದ ವ್ಯಕ್ತಿಯನ್ನು ಬೆದರಿಸುವ ಮತ್ತು ಅವಮಾನಿಸುವ ಪ್ರಯತ್ನವನ್ನು ಇದು ಪ್ರತಿಬಿಂಬಿಸುತ್ತದೆ” ಎಂದಿದ್ದಾರೆ.
“ಇಂತಹ ಬುದ್ದಿಹೀನ ಕೃತ್ಯವು ಕಳೆದ ದಶಕದಲ್ಲಿ ನಮ್ಮ ಸಮಾಜವನ್ನು ದ್ವೇಷ, ಮತಾಂಧತೆ ಮತ್ತು ಧರ್ಮಾಂಧತೆ ಹೇಗೆ ಆವರಿಸಿದೆ ಎಂಬುದನ್ನು ತೋರಿಸುತ್ತದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪರವಾಗಿ, ನಾನು ಈ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ನಮ್ಮ ನ್ಯಾಯಾಂಗದ ಸುರಕ್ಷತೆ ಮತ್ತು ಭದ್ರತೆ ಅತ್ಯಂತ ಮುಖ್ಯ. ಬೆದರಿಕೆಯಲ್ಲ, ನ್ಯಾಯ ಮತ್ತು ತರ್ಕ ಮೇಲುಗೈ ಸಾಧಿಸಲಿ” ಎಂದು ಖರ್ಗೆ ಹೇಳಿದ್ದಾರೆ.
“ಇದು ಸಿಜೆಐ ಅವರನ್ನು ಬೆದರಿಸಲು ಬ್ರಾಹ್ಮಣ ಮನಸ್ಥಿತಿಯ ವಕೀಲರೊಬ್ಬರು ಮಾಡಿರುವ ಹೇಯ ಪ್ರಯತ್ನ. ಇದು ಕ್ರಿಮಿನಲ್ ನ್ಯಾಯಾಂಗ ನಿಂದನೆಯಾಗಿದೆ. ವಕೀಲರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಆಗ್ರಹಿಸಿದ್ದಾರೆ.
“ಸನಾತನ ವಿರೋಧಿ’ ಹೇಳಿಕೆಗಳನ್ನು ಸಹಿಸುವುದಿಲ್ಲ ಎಂದು ವಕೀಲರೊಬ್ಬರು ನ್ಯಾಯಾಲಯದಲ್ಲಿ ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಘಟನೆ ಯಾವುದೇ ಕಾರಣಕ್ಕೂ ಒಪ್ಪುವಂತದ್ದಲ್ಲ. ಸಿಜೆಐ ವಿಚಾರಣೆ ವೇಳೆ ವಿಷ್ಣುವಿನ ವಿಗ್ರಹದ ಬಗ್ಗೆ ಮಾಡಿದ ಟೀಕೆಗಳು ಈ ರೀತಿಯ ಹಿಂಸಾತ್ಮಕ ಕೃತ್ಯಕ್ಕೆ ಕಾರಣವಾಗುತ್ತಿದ್ದರೆ, ಇದು ಅತ್ಯಂತ ಆತಂಕದ ವಿಷಯವಾಗಿದೆ” ಎಂದು ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಹೇಳಿದ್ದಾರೆ.
“ದುರದೃಷ್ಟವಶಾತ್, ಜಾತಿ ದ್ವೇಷ ಮತ್ತು ಧಾರ್ಮಿಕ ಅಸಹಿಷ್ಣುತೆಯ ಸಂಸ್ಕೃತಿಯು ‘ಸಾಮಾನ್ಯವಾಗುತ್ತಿದೆ. ಸಾಮಾಜಿಕ ಮಾಧ್ಯಮದ ಗುಂಪುಗಳು ಹಾಗೂ ವಿಷಮಯ ಟಿವಿ ‘ವಾದ-ವಿವಾದ’ಗಳಿಂದ ಇಂತಹ ಹಿಂಸೆಯನ್ನು ಉತ್ತೇಜಿಸಲಾಗುತ್ತಿದೆ” ಎಂದಿದ್ದಾರೆ.
‘ಈ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ’: ವಕೀಲ ಶೂ ಎಸೆಯಲು ಯತ್ನಿಸಿದ ಬಗ್ಗೆ ಸಿಜೆಐ ಪ್ರತಿಕ್ರಿಯೆ


