ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ದೆಹಲಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಿಂದ ಮಹಿಳೆಯರನ್ನು ದೂರ ಇಟ್ಟಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ, “ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ..ತಾಲಿಬಾನ್ ಪ್ರತಿನಿಧಿಯ ಭಾರತ ಭೇಟಿಯ ಪತ್ರಿಕಾಗೋಷ್ಠಿಯಿಂದ ಮಹಿಳಾ ಪತ್ರಕರ್ತರನ್ನು ಹೊರಗಿಟ್ಟಿರುವ ಬಗ್ಗೆ ನಿಮ್ಮ ನಿಲುವನ್ನು ದಯವಿಟ್ಟು ಸ್ಪಷ್ಟಪಡಿಸಿ” ಎಂದಿದ್ದಾರೆ.
ಮುಂದುವರಿದು, “ನೀವು ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡುವುದು ಕೇವಲ ಚುನಾವಣೆಗಾಗಿ ಜನರ ಮನಗೆಲ್ಲಲು ಮಾಡುವ ತೋರಿಕೆಯಲ್ಲದಿದ್ದರೆ, ಭಾರತದ ತುಂಬಾ ಗೌರವಾನ್ವಿತ ಮತ್ತು ಶಕ್ತಿಶಾಲಿ ಮಹಿಳೆಯರಿಗೆ ಈ ಅವಮಾನ ಏಕೆ ಆಗುತ್ತಿದೆ? ಭಾರತವು ತನ್ನ ಮಹಿಳೆಯರನ್ನು ದೇಶದ ಬೆನ್ನೆಲುಬು ಮತ್ತು ಹೆಮ್ಮೆ ಎಂದು ಹೇಳಿಕೊಳ್ಳುತ್ತದೆ, ಆದರೆ ಈ ಅವಮಾನಗಳು ಏಕೆ ನಡೆಯುತ್ತಿವೆ?” ಎಂದು ಪ್ರಶ್ನಿಸಿದ್ದಾರೆ.
“ಮೋದಿಯವರೇ ಸಾರ್ವಜನಿಕ ವೇದಿಕೆಯಿಂದ ಮಹಿಳಾ ಪತ್ರಕರ್ತರನ್ನು ಹೊರಗಿಡಲು ಅನುಮತಿಸುವ ಮೂಲಕ, ಭಾರತದ ಮಹಿಳೆಯರ ಪರ ನಿಲ್ಲುವ ವಿಷಯದಲ್ಲಿ ದುರ್ಬಲ ಎಂಬುವುದನ್ನು ನೀವು ತೋರಿಸಿದ್ದೀರಿ” ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟೀಕಿಸಿದ್ದಾರೆ.
“ನಮ್ಮ ದೇಶದಲ್ಲಿ, ಮಹಿಳೆಯರಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ಸಮಾನ ಭಾಗವಹಿಸುವಿಕೆಯ ಹಕ್ಕಿದೆ. ಇಂತಹ ತಾರತಮ್ಯದ ವಿರುದ್ಧ ನಿಮ್ಮ ಮೌನವು ನಾರಿ ಶಕ್ತಿಯ ಕುರಿತ ನಿಮ್ಮ ಘೋಷಣೆಗಳ ಶೂನ್ಯತೆಯನ್ನು ಬಹಿರಂಗಪಡಿಸುತ್ತದೆ” ಎಂದು ಕುಟುಕಿದ್ದಾರೆ.
ಇನ್ನು ವಿಡಿಯೋ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ “ಭಾರತದ ಮಣ್ಣಿನಲ್ಲಿ ನಡೆದ ತಾಲಿಬಾನ್ ಸಚಿವ ಆಮೀರ್ ಖಾನ್ ಮುತ್ತಕಿಯ ಪತ್ರಿಕಾಗೋಷ್ಠಿಯಿಂದ ಮಹಿಳೆಯರನ್ನು ಹೊರಗಿಡಲಾಗಿದೆ. ಭಾರತ ಸರ್ಕಾರ ಈ ವ್ಯಕ್ತಿಗೆ ಕೆಂಪು ಹಾಸಿನ ಸ್ವಾಗತ ಕೋರಿ ಬರಮಾಡಿಕೊಂಡಿದೆ. ತಾಲಿಬಾನ್ ನಿಯೋಗದ ಭೇಟಿಯನ್ನು ಸರ್ಕಾರ ಅಧಿಕೃತವಾಗಿ ಪರಿಗಣಿಸಿದೆ, ಶಿಷ್ಟಾಚಾರದ ಗೌರವ ಕೊಟ್ಟಿದೆ. ಮುತ್ತಕಿಯ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಪುರುಷ ಪತ್ರಕರ್ತರು, ಮಹಿಳೆಯನ್ನು ಹೊರಗಿಟ್ಟಿರುವುದನ್ನು ಪ್ರತಿಭಟಿಸಿಲ್ಲ. ಹಾಗಾದರೆ, ನೀವು ಅಷ್ಟೊಂದು ದುರ್ಬಲರಾ..? ಬೆನ್ನು ಮೂಳೆ ಇಲ್ಲದವರಾ? ಇದು ಭಾರತದ ಮಹಿಳೆಯರಿಗೆ ಮಾಡಿದ ಅವಮಾನ” ಎಂದಿದ್ದಾರೆ.
ಕೇಂದ್ರ ಸರ್ಕಾರವನ್ನು ಟೀಕಿಸಿದ ಮಹುವಾ, “ಜನರ ತೆರಿಗೆ ದುಡ್ಡಿನ್ನು ತಾಲಿಬಾನ್ ನಿಯೋಗಕ್ಕೆ ನೀವು ವೆಚ್ಚ ಮಾಡಿದ್ದೀರಿ. ಭೇಟಿ ಬಚಾವೋ ಎಂದು ಹೆಣ್ಣು ಮಕ್ಕಳ ರಕ್ಷಣೆ ಬಗ್ಗೆ ಮಾತನಾಡುವ ನೀವು, ಭಾರತದ ಹೆಣ್ಣು ಮಕ್ಕಳು, ತಾಯಿ, ಸಹೋದರಿಯರ ಬಗ್ಗೆ ಮಾತನಾಡುವ ನೀವು ಹೆಣ್ಣು ಮಕ್ಕಳಿಗೆ ಅವಮಾನವಾದಾಗ ಸೊಲ್ಲೆತ್ತಿಲ್ಲ. ಇದು ನನ್ನೊಬ್ಬಳ ಆಕ್ರೋಶವಲ್ಲ, ಪ್ರತಿಯೊಬ್ಬ ಭಾರತೀಯ ಮಹಿಳೆಯ ಆಕ್ರೋಶ ಎಂದಿದ್ದಾರೆ.
“ತಾಲಿಬಾನ್ ವಿದೇಶಾಂಗ ಸಚಿವರ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗೆ ಅವಕಾಶ ನೀಡದಿರುವ ಮೂಲಕ ಭಾರತ ತನ್ನದೇ ಆದ ನೈತಿಕ ಮತ್ತು ರಾಜತಾಂತ್ರಿಕ ನಿಲುವನ್ನು ರಾಜಿ ಮಾಡಿಕೊಂಡಿದೆ. ಇದು ಕೇವಲ ಕಾರ್ಯವಿಧಾನದ ಲೋಪವಲ್ಲ, ಬದಲಾಗಿ ಸಮಾನತೆ, ಪತ್ರಿಕಾ ಸ್ವಾತಂತ್ರ್ಯ ಮತ್ತು ಲಿಂಗ ನ್ಯಾಯಕ್ಕೆ ಭಾರತದ ದೀರ್ಘಕಾಲದಿಂದ ಪಾಲಿಸಿಕೊಂಡು ಬಂದ ಬದ್ಧತೆಯ ಸಾಂಕೇತಿಕ ಶರಣಾಗತಿಯಾಗಿದೆ” ಎಂದು ಆರ್‌ಜೆಡಿ ಸಂಸದ ಮನೋಜ್ ಕುಮಾರ್ ಝಾ ಹೇಳಿದ್ದಾರೆ.
“ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೆಮ್ಮೆಪಡುವ ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಭಾಗವಹಿಸುವಿಕೆಯ ಪ್ರತಿಪಾದಕರಾಗಿರುವ ದೇಶಕ್ಕೆ, ಈ ಘಟನೆ ತೀವ್ರ ನಿರಾಶಾದಾಯಕ ಮತ್ತು ರಾಜಕೀಯವಾಗಿ ದೂರದೃಷ್ಟಿಯಿಲ್ಲದ ಸಂಗತಿಯಾಗಿದೆ. ಇದು ಭಾರತೀಯ ಮಹಿಳೆಯರು ಮತ್ತು ಜಾಗತಿಕ ಸಮುದಾಯಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತದೆ” ಎಂದಿದ್ದಾರೆ.
“ಮುತ್ತಕಿಯವರ ಪತ್ರಿಕಾಗೋಷ್ಠಿಗೆ ಯಾವುದೇ ಮಹಿಳಾ ಪತ್ರಕರ್ತೆಯರನ್ನು ಆಹ್ವಾನಿಸಿಲ್ಲ. ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರ ಆರಂಭಿಕ ಹೇಳಿಕೆಗಳಲ್ಲಿ ಅಥವಾ ಮುತ್ತಕಿ ಅವರೊಂದಿಗಿನ ಮಾತುಕತೆಯ ನಂತರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ತಾಲಿಬಾನ್ ಆಡಳಿತದಲ್ಲಿ ಅಫ್ಘಾನ್ ಹುಡುಗಿಯರು ಮತ್ತು ಮಹಿಳೆಯರ ಭೀಕರ ದುಃಸ್ಥಿತಿಯ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ನಮ್ಮ ಭದ್ರತಾ ಕಾಳಜಿಯಿಂದಾಗಿ ಮಹಿಳಾ ಸಾಧಕರು ಮತ್ತು ನಾಯಕಿಯರ ಬಗ್ಗೆ ನಾವು ಹೆಮ್ಮೆಪಡುವ ದೇಶದಲ್ಲಿ ಮುತ್ತಕಿ ಅವರಿಗೆ ರೆಡ್ ಕಾರ್ಪೆಟ್ ಸ್ವಾಗತ ದೊರೆಯುತ್ತಿದೆ. ಇದು ಇಂದಿನ ವಿಶ್ವ ರಾಜಕೀಯ” ಎಂದು ಪತ್ರಕರ್ತೆ ಸ್ಮೀತಾ ಶರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸ್ಮೀತಾ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ದಿ ಹಿಂದೂ ಪತ್ರಿಕೆಯ ಸುಹಾಸಿನಿ ಹೈದರ್, “ಇನ್ನೂ ಹಾಸ್ಯಾಸ್ಪದ ಸಂಗತಿಯೆಂದರೆ, ತಾಲಿಬಾನ್ ಸಚಿವನ ಮಹಿಳೆಯರ ವಿರುದ್ಧದ ಅಸಹ್ಯಕರ ಮತ್ತು ಕಾನೂನುಬಾಹಿರ ತಾರತಮ್ಯವನ್ನು ಭಾರತಕ್ಕೆ ತರಲು ಅನುಮತಿಸಲಾಗಿದೆ, ಏಕೆಂದರೆ ಭಾರತ ಸರ್ಕಾರವು ತಾಲಿಬಾನ್ ನಿಯೋಗವನ್ನು ಪೂರ್ಣ ಅಧಿಕೃತ ಶಿಷ್ಟಾಚಾರದೊಂದಿಗೆ ಸ್ವಾಗತಿಸಿದೆ. ಇದನ್ನು ‘ವಾಸ್ತವಿಕ’ ನಿರ್ಧಾರ ಎಂದು ಕರೆಯಲಾಗದು, ಬದಲಿಗೆ ಇದು ತಾಲಿಬಾನ್‌ಗೆ ಗುಲಾಮಗಿರಿಯಂತೆ ಇದೆ” ಎಂದು ಟೀಕಿಸಿದ್ದಾರೆ.
ತಾಲಿಬಾನ್ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತೆಯರಿಗೆ ನಿರ್ಬಂಧ; ಕೇಂದ್ರ ಸರ್ಕಾರ ಹೆಳಿದ್ದೇನು?


