ಚುನಾವಣೆ ಸಮೀಪಿಸುವಾಗ ಮತ ಕೇಳಲು ತನ್ನ ಕ್ಷೇತ್ರದ ಗ್ರಾಮವೊಂದಕ್ಕೆ ಭೇಟಿ ನೀಡಿದ ಬಿಜೆಪಿ ಶಾಸಕಿಯನ್ನು ಜನರು ಹಾಗೆಯೇ ವಾಪಾಸ್ ಕಳುಹಿಸಿದ ಘಟನೆ ಬಿಹಾರದ ಕೈಮುರ್ ಜಿಲ್ಲೆಯಲ್ಲಿ ಭಾನುವಾರ (ಅ.26) ನಡೆದಿದೆ.
ವರದಿಗಳ ಪ್ರಕಾರ, ಮೊಹಾನಿಯಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಸಂಗೀತಾ ಕುಮಾರಿ ಭಾನುವಾರ ಸಂಜೆ ಮೋಹನಪುರ ಗ್ರಾಮದ ಗೋವರ್ಧನಪುರ ಮತ್ತು ರಾಂಪುರ ಟೋಲಾಗೆ ಮತ ಕೇಳಲು ಹೋಗಿದ್ದರು. ಈ ವೇಳೆ ಶಾಸಕಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಆಕೆಯನ್ನು ವಾಪಸ್ ಕಳುಹಿಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಶಾಸಕಿ ಕಾರಿನೊಳಗೆ ಕುಳಿತಿದ್ದ ಮತ್ತು ಜನರು ಕಾರನ್ನು ಸುತ್ತುವರಿದು ಆಕ್ರೋಶ ವ್ಯಕ್ತಪಡಿಸಿದ ದೃಶ್ಯಗಳು ವೈರಲ್ ವಿಡಿಯೋದಲ್ಲಿ ಇವೆ. ಜನರ ಆಕ್ರೋಶ ಹೆಚ್ಚಾದಾಗ ಪ್ರಚಾರಕ್ಕೆ ಬಂದ ಶಾಸಕಿ ಕಾಲ್ಕಿತ್ತಿದ್ದಾರೆ ಎಂದು ವರದಿಗಳು ಹೇಳಿವೆ.
ರೋಹ್ತಾಸ್ ಜಿಲ್ಲೆಯ ಗಡಿಯಲ್ಲಿರುವ ಕುದ್ರಾ ಬ್ಲಾಕ್ ಬಳಿ ಶಾಸಕಿಗೆ ಜನರು ತಡೆಯೊಡ್ಡಿದ್ದಾರೆ. ಈ ಪ್ರದೇಶ ಮೊಹಾನಿಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.
ಹಲವು ಮನವಿಗಳ ಹೊರತಾಗಿಯೂ ರಸ್ತೆ, ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಗ್ರಾಮಕ್ಕೆ ಕಲ್ಪಿಸಿಕೊಟ್ಟಿಲ್ಲ. ಅಲ್ಲದೆ, ಉದ್ಯೋಗದ ಭರವಸೆಯನ್ನೂ ಈಡೇರಿಸಿಲ್ಲ ಎಂದು ಗ್ರಾಮಸ್ಥರು ಶಾಸಕಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಗೀತಾ ಕುಮಾರಿ 2020ರ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. 2024ರ ಲೋಕಸಭೆ ಚುನಾವಣೆಗೆ ಮುನ್ನ ಅವರು ಬಿಜೆಪಿ ಸೇರಿದರು.


