ಹರಿಯಾಣದಲ್ಲಿ ಮತಗಳ್ಳತನ ಮಾಡಿದಂತೆ ಬಿಹಾರದಲ್ಲೂ ಮಾಡಲು ಎನ್‌ಡಿಎ ತಯಾರಿ ನಡೆಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂಸದೆ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.
ಸೀತಮ್ ಹಾರಿ ಹಾಗೂ ಚಂಪಾರಣ್ಯ ಜಿಲ್ಲೆಯಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ‘ಸಂವಿಧಾನ ಹಾಗೂ ಪ್ರಜಾಸತಾತ್ಮಕ ಹಕ್ಕುಗಳನ್ನು ದುರ್ಬಲಗೊಳಿಸಲು ಚುನಾವಣಾ ಆಯೋಗವು ಕೇಂದ್ರ ಸರ್ಕಾರದೊಂದಿಗೆ ಸೇರಿಕೊಂಡಿದೆ ಎಂದು ಹೇಳಿದ್ದಾರೆ.
‘ಹರಿಯಾಣದಲ್ಲಿ ಇಡೀ ಚುನಾವಣೆಯನ್ನು ಕಳ್ಳತನ ಮಾಡಿದಂತೆ, 65 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಮೂಲಕ ಬಿಹಾರದಲ್ಲೂ ಆ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ಮಹಾತ್ಮ ಗಾಂಧಿಯಂತೆ ರಾಹುಲ್ ಗಾಂಧಿ ಕೂಡ ನಿಮ್ಮ ಹಾಗೂ ಸತ್ಯದ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ದೇಶಕ್ಕೆ ದ್ರೋಹ ಮಾಡಿದವರನ್ನು ಜನರು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತರಾದ ವಿವೇಕ್ ಜೋಶಿ ಜಾಗೂ ಎಸ್.ಎಸ್ ಸಂಧು ಅವರು ಭಾರತದ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಅಣಕಿಸುತ್ತಿದ್ದಾರೆ. ನಿವೃತ್ತಿ ಬಳಿಕ ನೆಮ್ಮದಿಯ ಜೀವನ ಸಾಗಿಸುತ್ತೇವೆ ಎಂದು ನೀವು ಅಂದುಕೊಂಡಿದ್ದರೆ ಅದು ನಡೆಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.


