ಪೂಂಚ್: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಯೋತ್ಪಾದಕರು ಅಥವಾ ಅವರ ಸಹಚರರ ಉಪಸ್ಥಿತಿ ಅಥವಾ ಚಲನವಲನದ ಬಗ್ಗೆ ಯಾವುದೇ ವಿಶ್ವಾಸಾರ್ಹ ಮತ್ತು ಖಚಿತ ಮಾಹಿತಿ ನೀಡಿದವರಿಗೆ ₹5 ಲಕ್ಷ ಬಹುಮಾನ ನೀಡುವುದಾಗಿ ಪೊಲೀಸರು ಸೋಮವಾರ ಘೋಷಿಸಿದ್ದಾರೆ.
ಮಾಹಿತಿದಾರರ ಗುರುತನ್ನು ಕಟ್ಟುನಿಟ್ಟಾಗಿ ಗೌಪ್ಯವಾಗಿಡಲಾಗುವುದು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಸಾರ್ವಜನಿಕರಿಗೆ ಜಾಗರೂಕರಾಗಿರಿ ಎಂದು ಹೇಳುವ ಜೊತೆಗೆ ಭಯೋತ್ಪಾದಕರಿಗೆ ಆಹಾರ, ಆಶ್ರಯ, ಸಾರಿಗೆ ಸೇರಿದಂತೆ ಯಾವುದೇ ರೀತಿಯ ಬೆಂಬಲ ನೀಡುವ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.
ಸಾರ್ವಜನಿಕರು ಪೊಲೀಸ್ ನಿಯಂತ್ರಣ ಕೊಠಡಿ ಮತ್ತು ಉಪವಿಭಾಗೀಯ ಅಧಿಕಾರಿಗಳ ಮೀಸಲಾದ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಸಂಖ್ಯೆಗಳ ಮೂಲಕ ಅಥವಾ ಹತ್ತಿರದ ಪೊಲೀಸ್ ಠಾಣೆ ಅಥವಾ ಪೋಸ್ಟ್ ಅನ್ನು ನೇರವಾಗಿ ಸಂಪರ್ಕಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಕಾರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಹಲವು ವೈದ್ಯರನ್ನು ಬಂಧಿಸಿದ ಬಳಿಕ ‘ವೈಟ್ ಕಾಲರ್ ಭಯೋತ್ಪಾದನೆ’ ಬಗ್ಗೆ ಚರ್ಚೆ ಆರಂಭವಾಗಿದೆ. ಈ ಹಿನ್ನೆಲೆ ಜಮ್ಮು ರೈಲು ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅಲ್ಲದೇ ರೈಲು ನಿಲ್ದಾಣದಲ್ಲಿ ಒಳಬರುವ ಮತ್ತು ಹೊರಹೋಗುವ ಎಲ್ಲಾ ಪ್ರಯಾಣಿಕರ ಲಗೇಜ್‌ಗಳನ್ನು ತಪಾಸಣೆ ನಡೆಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಪೂಂಚ್ ಜಿಲ್ಲೆಯಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದ್ದು, ಭಯೋತ್ಪಾದಕ ಜಾಲಗಳನ್ನು ನಾಶಮಾಡಲು ಮತ್ತು ನಾಗರಿಕರ ಜೀವಗಳನ್ನು ರಕ್ಷಿಸಲು ಸಮುದಾಯದ ಸಹಕಾರ ಅತ್ಯಗತ್ಯ ಎಂದು ಅಧಿಕಾರಿಗಳು ಒತ್ತಿ ಹೇಳುತ್ತಿದ್ದಾರೆ.
ಭದ್ರತಾ ದೃಷ್ಟಿಯಿಂದ ಪೊಲೀಸರು ಮತ್ತು ಅರೆಸೈನಿಕ ಸಿಬ್ಬಂದಿ ಪ್ರಯಾಣಿಕರ ಲಗೇಜ್‌ಗಳನ್ನು ತಪಾಸಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


