ಕೇರಳದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು (ಎಸ್‌ಐಆರ್) ತಕ್ಷಣವೇ ನಿಲ್ಲಿಸುವಂತೆ ಕೋರಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಮತ್ತು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಭಾರತೀಯ ಚುನಾವಣಾ ಆಯೋಗವು (ಇಸಿಐ) ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಜೊತೆಗೆ ಏಕಕಾಲದಲ್ಲಿ ಎಸ್‌ಐಆರ್ ನಡೆಸಲು ಸಾಧ್ಯವಿಲ್ಲ ಎಂದು ವಾದಿಸಿದೆ.
ಕಣ್ಣೂರಿನಲ್ಲಿ ಬೂತ್ ಮಟ್ಟದ ಅಧಿಕಾರಿಯೊಬ್ಬರು ಎಸ್‌ಐಆರ್‌ಗೆ ಸಂಬಂಧಿಸಿದ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆಯ ನಂತರ, ಕೇರಳದಾದ್ಯಂತ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ತೀವ್ರಗೊಳ್ಳುತ್ತಿದೆ. ಈ ಘಟನೆಯು ರಾಜ್ಯವ್ಯಾಪಿ ಪ್ರತಿಭಟನೆಗೆ ಕಾರಣವಾಗಿದ್ದು, ಬಿಎಲ್‌ಒಗಳು ಸೋಮವಾರ ಕೆಲಸ ಬಹಿಷ್ಕಾರ ಘೋಷಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಕೋರ್ಟ್ ಮೆಟ್ಟಿಲೇರಿದೆ.
ಮುಸ್ಲಿಂ ಲೀಗ್ ಪಕ್ಷ, ಅದರ ಪ್ರಧಾನ ಕಾರ್ಯದರ್ಶಿ ಪಿ.ಕೆ. ಕುಂಞಾಲಿಕುಟ್ಟಿ ಅವರ ಮೂಲಕ ಸಲ್ಲಿಸಲಾದ ರಿಟ್ ಅರ್ಜಿಯಲ್ಲಿ, ಚುನಾವಣಾ ಆಯೋಗ ಅಕ್ಟೋಬರ್ 27 ರಂದು ಎಸ್‌ಐಆರ್ ಕುರಿತು ಹೊರಡಿಸಿರುವ ಅಧಿಸೂಚನೆಯನ್ನು ಪ್ರಶ್ನಿಸಿದೆ. ಎಸ್‌ಐಆರ್ ಅನಿರೀಕ್ಷಿತ ಮತ್ತು ಅದಕ್ಕೆ ನಿಗದಿಪಡಿಸಲಾದ ಸಮಯ ಸರಿಯಾಗಿಲ್ಲ ಎಂದು ಹೇಳಿದೆ.
ಎಸ್‌ಐಆರ್ ಪ್ರಕ್ರಿಯ ಸರಿಯಾಗಿಲ್ಲ. ಪ್ರಜಾಪ್ರಭುತ್ವದಲ್ಲಿ, ಅಧಿಕಾರದಲ್ಲಿರುವವರು ನ್ಯಾಯ ಒದಗಿಸಲು ವಿಫಲರಾದಾಗ ನ್ಯಾಯಾಲಯದ ಮೊರೆ ಹೋಗುವುದು ಒಂದೇ ಮಾರ್ಗ ಎಂದು ಕುಂಞಾಲಿಕುಟ್ಟಿ ಹೇಳಿದ್ದಾರೆ.
ನಿಷ್ಪಕ್ಷಪಾತವಾಗಿ ಯೋಚಿಸುವ ಯಾರಿಗಾದರೂ, ಬಿಹಾರದ ಚುನಾವಣೆಯನ್ನು ವಂಚನೆಯ ಮೂಲಕ ನಡೆಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಈಗ ಕೇರಳದಲ್ಲಿ ಪರಿಸ್ಥಿತಿ ಹೇಗಿದೆಯೆಂದರೆ, ಎಸ್‌ಐಆರ್‌ಗೆ ದಾಖಲೆಗಳನ್ನು ಸಲ್ಲಿಸಲು ಕೂಡ ಸಾಕಷ್ಟು ಸಮಯವಿಲ್ಲ” ಎಂದು ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷ ಸೈಯದ್ ಸಾದಿಕಲೀ ತಂಙಳ್ ತಿಳಿಸಿದ್ದಾರೆ.
ಮುಸ್ಲಿಂ ಲೀಗ್ ಸಂಸದ ಹಾಗೂ ವಕೀಲ ಹ್ಯಾರಿಸ್ ಬೀರನ್ ಅವರು ರಿಟ್ ಅರ್ಜಿಯನ್ನು ಸಿದ್ಧಪಡಿಸಿದ್ದು, ವಕೀಲ ಆರ್.ಎಸ್. ಜೆನಾ ಮೂಲಕ ಸಲ್ಲಿಸಿದ್ದಾರೆ.
ಡಿಸೆಂಬರ್ 9 ಮತ್ತು 11ರಂದು ಎರಡು ಹಂತಗಳಲ್ಲಿ ನಡೆಯಲಿರುವ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಆದರೆ, ಕರಡು ಮತದಾರರ ಪಟ್ಟಿಯನ್ನು ಎಸ್‌ಐಆರ್ ನಂತರ ಡಿಸೆಂಬರ್ 4 ರಂದು ಪ್ರಕಟಿಸಲಾಗುವುದು ಎಂದು ಹೇಳಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಸಕ್ರಿಯ ಚುನಾವಣಾ ಪ್ರಕ್ರಿಯೆಯ ಜೊತೆಗೆ ಮತದಾರರ ಪಟ್ಟಿಯ ವ್ಯಾಪಕ ಪರಿಷ್ಕರಣೆ ನಡೆಸುವುದು ಚುನಾವಣಾ ವ್ಯವಸ್ಥೆಯ ಸ್ಥಿರತೆ ಮತ್ತು ಸಮಗ್ರತೆಯನ್ನು ಹಾಳು ಮಾಡುತ್ತದೆ ಎಂದು ಮುಸ್ಲಿಂ ಲೀಗ್ ವಾದಿಸಿದೆ.
ಕೇರಳದ ಮತದಾರರ ಪಟ್ಟಿಯಲ್ಲಿ ಯಾವುದೇ ವಂಚನೆ, ನಕಲು ಅಥವಾ ವ್ಯವಸ್ಥಿತ ಭ್ರಷ್ಟಾಚಾರ ಕಂಡುಬಂದಿಲ್ಲ, ಆದರೂ ಎಸ್‌ಐಆರ್‌ಗೆ ಆದೇಶಿಸಲಾಗಿದೆ. ಮಾನ್ಯವಾದ, ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯನ್ನು ತಿದ್ದಿ ಬರೆಯುವ ಮತ್ತು ವ್ಯಾಪಕವಾದ ಮರು-ಪರಿಶೀಲನಾ ಅವಶ್ಯಕತೆಗಳನ್ನು ವಿಧಿಸುವ ಚುನಾವಣಾ ಆಯೋಗದ ಪ್ರಯತ್ನ ಅಸಮಂಜಸ ಮತ್ತು ಅಸಮಾನವಾಗಿದೆ ಎಂದಿದೆ.
ಅರ್ಜಿಯ ಪ್ರಕಾರ, 1950ರ ಜನತಾ ಪ್ರಾತಿನಿಧ್ಯ ಕಾಯ್ದೆಯಲ್ಲಿ ದೋಷಗಳು ಅಥವಾ ಅನರ್ಹತೆಯ ಬಗ್ಗೆ ನಿರ್ದಿಷ್ಟ, ವೈಯಕ್ತಿಕ ದೂರುಗಳಿಲ್ಲದೆ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಅಳಿಸಲು ಅಥವಾ ತಟಸ್ಥಗೊಳಿಸಲು ಅಧಿಕಾರ ನೀಡುವ ಯಾವುದೇ ಅಂಶವಿಲ್ಲ ಎಂದು ಹೇಳಿದೆ.
ಅರ್ಜಿಯಲ್ಲಿ ಭಾನುವಾರ ಕಣ್ಣೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಅನೀಶ್ ಜಾರ್ಜ್ ಅವರ ದುರಂತ ಸಾವನ್ನು ಉಲ್ಲೇಖಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯಿಂದ ಉಂಟಾದ ಅತಿಯಾದ ಕೆಲಸದ ಒತ್ತಡವೇ ಜಾರ್ಜ್ ಅವರ ಆತ್ಮಹತ್ಯೆಗೆ ಕಾರಣ ಎಂದು ಮುಸ್ಲಿಂ ಲೀಗ್ ಆರೋಪಿಸಿದೆ.
ಹಲವಾರು ಬಿಎಲ್‌ಒಗಳು ಅಸಾಧ್ಯವಾದ ಕೆಲಸದ ಹೊರೆಯ ಬಗ್ಗೆ ದೂರು ನೀಡಿದ್ದಾರೆ. ಅನೇಕರು ವಾರಾಂತ್ಯಗಳು ಸೇರಿದಂತೆ ಬೆಳಿಗ್ಗೆ 7 ರಿಂದ ರಾತ್ರಿ 8 ರವರೆಗೆ ಕೆಲಸ ಮಾಡುತ್ತಿದ್ದಾರೆ. ಇನ್ನೂ ಗಣತಿ ನಮೂನೆಗಳ ವಿತರಣೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿರುವಾಗ ಪರಿಷ್ಕರಣೆಗೆ ನೀಡಲಾದ ಒಂದು ತಿಂಗಳ ಅವಧಿಯು ಸಾಕಾಗುವುದಿಲ್ಲ. ಬಿಎಲ್‌ಒಗಳು ಮತ್ತು ಮತದಾರರು, ವಿಶೇಷವಾಗಿ ಎನ್‌ಆರ್‌ಐಗಳು ಇಬ್ಬರಿಗೂ ಅಪಾಯವನ್ನುಂಟುಮಾಡುತ್ತದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.
ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಪಿಸುತ್ತಿದೆ. ಅಧಿಕಾರಿಗಳು ಒತ್ತಡಕ್ಕೆ ಸಿಲುಕಿದ್ದಾರೆ. ಈ ನಡುವೆ ಎಸ್‌ಐಆರ್‌ಗೆ 30 ದಿನಗಳ ಸಮಯ ನಿಗದಿಪಡಿಸಲಾಗಿದೆ. ಇದರ ಹಿಂದಿನ ಏಕೈಕ ಉದ್ದೇಶವೆಂದರೆ ಸಾಧ್ಯವಾದಷ್ಟು ಮತದಾರರನ್ನು ಕರಡು ಪಟ್ಟಿಯಿಂದ ಹೊರಗಿಡುವುದು ಎಂದು ಮುಸ್ಲಿಂ ಲೀಗ್ ಹೇಳಿದೆ.
ಈ ಪ್ರಕ್ರಿಯೆಯು ನಾಗರಿಕರ ಮೂಲಭೂತ ಮತದಾನದ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಸಂವಿಧಾನ ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆಯ ನಿಬಂಧನೆಗಳಿಗೆ ಅನುಗುಣವಾಗಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಯುವವರೆಗೆ ಎಸ್‌ಐಆರ್ ಅನ್ನು ಮುಂದೂಡಬೇಕೆಂದು ಕೋರಿ ಕೇರಳ ಸರ್ಕಾರ ಕಳೆದ ವಾರ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆದರೆ, ಹೈಕೋರ್ಟ್ ಎಸ್‌ಐಆರ್‌ನಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ. ರಾಜ್ಯ ಸರ್ಕಾರ ಈಗಾಗಲೇ ಎಸ್‌ಐಆರ್‌ಗೆ ಸಂಬಂಧಿಸಿದ ವಿಷಯಗಳನ್ನು ಆಲಿಸುತ್ತಿರುವ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸುವಂತೆ ಸೂಚಿಸಿದೆ.
ಇದಕ್ಕೂ ಮೊದಲು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳದಲ್ಲಿ ಎಸ್‌ಐಆರ್ ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದರು. ಎಸ್‌ಐಆರ್ ನಮ್ಮ ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಅವಮಾನ ಎಂದಿದ್ದರು.
ಹಳೆಯ ಮತದಾರರ ಪಟ್ಟಿಯನ್ನು ಬಳಸಿಕೊಂಡು ಎಸ್‌ಐಆರ್ ನಡೆಸುವುದು ಮತ್ತು ನಿರ್ಣಾಯಕ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಮುಂಚಿತವಾಗಿ ಅದನ್ನು ಮುಗಿಸಲು ಮುಂದಾಗಿರುವುದು ಗಂಭೀರ ಕಳವಳಗಳನ್ನು ಉಂಟುಮಾಡಿದೆ ಎಂದು ಎಂದು ಪಿಣರಾಯಿ ವಿಜಯನ್ ಹೇಳಿದ್ದರು.
ಕಳೆದ ಸೆಪ್ಟೆಂಬರ್‌ನಲ್ಲಿ, ಎಸ್‌ಐಆರ್ ಅನ್ನು ಮರುಪರಿಶೀಲಿಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸುವ ನಿರ್ಣಯವನ್ನು ಕೇರಳ ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿದೆ. ಈ ಪ್ರಕ್ರಿಯೆ ಜನರ ಹಕ್ಕುಗಳಿಗೆ ಗಂಭೀರ ಹಾನಿಯನ್ನುಂಟುಮಾಡಬಹುದು ಎಂದು ಎಚ್ಚರಿಸಿದೆ.
ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಕೂಡ ರಾಜ್ಯದಲ್ಲಿ ಎಸ್‌ಐಆರ್ ನಡೆಸುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಇದು ಸಾಂವಿಧಾನಿಕ ಅತಿಕ್ರಮಣ ಎಂದು ಕರೆದಿದೆ. ಇದು ದೊಡ್ಡ ಪ್ರಮಾಣದ ಹಕ್ಕು ನಿರಾಕರಣೆಗೆ ಕಾರಣವಾಗಬಹುದು ಎಂದು ಹೇಳಿದೆ.


